ಅಂಗವೆಂದಡೆ ಅಜ್ಞಾನ

ಧಾರ್ಮಿಕ - 0 Comment
Issue Date : 06.04.2015

 ಸಿದ್ಧರಾಮನ ವಚನವೊಂದರ ಪ್ರಕಾರ ‘ಅಂಗವೆಂದಡೆ ಅಜ್ಞಾನ, ಲಿಂಗವೆಂದಡೆ ಸುಜ್ಞಾನ.’ ಇದೊಂದು ಅರ್ಥಪೂರ್ಣವಾದ ನುಡಿ. ಅಂಗ ಮತ್ತು ಲಿಂಗ ಎಂಬ ಎರಡೇ ಶಬ್ದಗಳಲ್ಲಿ ವಚನಕಾರರು ಐಹಿಕ ಮತ್ತು ಪಾರಲೌಕಿಕ ಸಂಗತಿಗಳನ್ನು ಅಡಕವಾಗಿರಿಸಿರುವುದು ನಿಜಕ್ಕೂ ಸ್ಮರಣೀಯ.
 ಅಂಗವೆಂದರೆ ಮನುಷ್ಯ ಶರೀರ ಮತ್ತು ಅದಕ್ಕೆ ಸಂಬಂಧ ಪಟ್ಟ ವಿಷಯಗಳು. ನರಜನ್ಮ ಎನ್ನುವುದು ನಶ್ವರವಾದದ್ದು. ಆದ್ದರಿಂದ ಶಾರೀರಿಕವಾದ ಸೌಂದರ್ಯವಾಗಲಿ, ಸಾಮರ್ಥ್ಯ ವಾಗಲಿ ಯಾವುದೂ ಶಾಶ್ವತವಲ್ಲ. ಮಾನವನು ತನ್ನ ಕಾಮನೆಗಳನ್ನು ಈಡೇರಿಸಲು ಪ್ರಯತ್ನ ಪೂರ್ವಕವಾಗಿ ಸಂಪಾದಿಸುವ ಧನ – ಕನಕಗಳು, ವಸ್ತು ವಾಹನಗಳು, ಒಡವೆ ತೊಡುಗೆಗಳು ಕೂಡ ನಾಶವಾಗಿ ಹೋಗುವಂತಹವು.
 ಹಾಗಾದರೆ ಇವೆಲ್ಲವುಗಳ ಬಗೆಗೆ ಮನುಷ್ಯನು ವ್ಯಾಮೋಹ ತಾಳುವುದೇಕೆ? ಇದಕ್ಕೆ ಅವನ ಅಜ್ಞಾನವೇ ಕಾರಣ. ಅನಿತ್ಯವಾದ ಸಂಗತಿಗಳನ್ನು ನಿತ್ಯವೆಂದು ಭ್ರಮಿಸಿ ಅಂಗನಿಷ್ಠೆ ಹೊಂದುವುದೇ ಅಜ್ಞಾನದ ಸಂಕೇತ. ಇದರಿಂದ ಆತ ಪತನದ ಕಡೆಗೆ ಸಾಗುವುದು ನಿಶ್ಚಿತ.
 ಒಡಲು, ಕಾಯ, ತನು, ದೇಹ, ಶರೀರ ಎಂಬಿತ್ಯಾದಿಯಾಗಿ ಕರೆಯಲ್ಪಡುವ ಅಂಗದ ಬಗೆಗೆ ಅತಿಯಾದ ಮೋಹ ಇರುವವರು ಅದನ್ನು ಆಕರ್ಷಕವಾಗಿಡಲು ನಿರಂತರ ಶ್ರಮಿಸುತ್ತಾರೆ. ಕೃತಕವಾದ ಪ್ರಸಾಧನ ಸಾಮಗ್ರಿಗಳನ್ನು ಬಳಸಿ ಬೇರೆಯವರಿಗೆ ಚಂದವಾಗಿ ಕಾಣಿಸುವಂತೆ ಮಾಡಿಕೊಳ್ಳುತ್ತಾರೆ. ಆದರೆ ಈ ಕಾಯವು ನಶ್ವರವಾದುದೆಂಬುದನ್ನು ಮರೆಯುವುದು ತಿಳಿವಳಿಕೆಯ ಕೊರತೆಯಿಂದ ಎಂಬುದರಲ್ಲಿ ಅನುಮಾನವಿಲ್ಲ.
 ಲಿಂಗವೆಂದರೆ ಚಿಚ್ಛಕ್ತಿಯಾದ ಪರಶಿವನ (ಪರಮಾತ್ಮನ) ಪ್ರತೀಕ. ಎಲ್ಲವೂ ಯಾವುದರಿಂದ ಹುಟ್ಟಿ ಯಾವುದರಲ್ಲಿ ಲೀನವಾಗುವುದೋ ಅದೇ ಲಿಂಗ. ಲಿ ಕಾರವು ಶೂನ್ಯ, ಬಿಂದುವು ಲೀಲೆ ಮತ್ತು ಗ ಕಾರವೇ ಚಿತ್ತು. ಈ ತ್ರಿವಿಧಗಳು ಒಟ್ಟು ಸೇರಿ ಲಿಂಗವಾಗುತ್ತದೆ ಎಂದು ವಚನಕಾರರು ಹೇಳುತ್ತಾರೆ.
 ಇಂದು ಇದ್ದು ನಾಳೆ ಇಲ್ಲವಾಗುವ ಅಂಗದ ಬಗೆಗಿನ ಆಸಕ್ತಿಯನ್ನು ಮತ್ತು ಐಹಿಕ ಸುಖಭೋಗಗಳ ಕಾಮನೆಯನ್ನು ಮರೆತು ಬಿಡಬೇಕು. ಲಿಂಗರೂಪಿಯಾದ ಪರಮಾತ್ಮನ ಕಡೆಗೆ ಗಮನಹರಿಸಬೇಕು. ಲಿಂಗಕ್ಕೆ ಸಂಬಂಧಿಸಿದ ಅನೇಕ ತತ್ತ್ವಗಳಿದ್ದು ಅವುಗಳ ಕುರಿತಾದ ತಿಳಿವಳಿಕೆಯನ್ನು ಹೊಂದುವುದೇ ನಿಜವಾದ ಜ್ಞಾನ. ಏಕೆಂದರೆ ಇದರ ಮೂಲಕ ಮನುಷ್ಯನು ತಾನಾರೆಂಬುದನ್ನು ಅರಿತು ತನ್ನ ಅಂತಃಶಕ್ತಿಯನ್ನು ಬೆಳೆಸಿಕೊಂಡು ಸಾಮರಸ್ಯವನ್ನು ಹೊಂದುವನು.
 ಹೀಗಾಗಿ ಮನುಷ್ಯನಾದವನು ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನ ಕಡೆಗೆ ಸಾಗಬೇಕೆಂಬುದು ಸಿದ್ಧರಾಮನ ಸಲಹೆ. ‘ಅಂಗ ಗುಣಂಗಳ ಬಿಟ್ಟು ಲಿಂಗ ಗುಣಂಗಳಾದಡೆ ಅದೇ ಲಿಂಗಾಂಗ ಸಾಮರಸ್ಯ’ ಎಂದು ಕೂಡ ಅವನು ಹೇಳಿದ್ದಾನೆ. ಅಂಗ ಗುಣಗಳೆಂದರೆ ಶರೀರ ಸಂರಕ್ಷಣೆ ಮತ್ತು ಪೋಷಣೆಗೆ ಪೂರಕವಾಗಿರುವ ಗುಣಗಳು. ಲಿಂಗ ಗುಣಗಳೆಂದರೆ ಪ್ರಾಪಂಚಿಕವಾದ ಆಶೆ – ಲಾಲಸೆಗಳನ್ನು ಬಿಟ್ಟು  ಶಿವನನ್ನು ಅನನ್ಯ ಭಕ್ತಿಯಿಂದ ಆರಾಧಿಸಲು ಭಕ್ತನು ಮೈಗೂಡಿಸಿಕೊಳ್ಳುವ ಸದ್ಗುಣಗಳು.

 

   

Leave a Reply