ಅಂತರ್ಜಾಲ ತಾಣಗಳಲ್ಲಿನ ಪ್ರಚಾರಕ್ಕೂ ಲೆಕ್ಕದ ನಂಟು

ಚುನಾವಣೆಗಳು - 0 Comment
Issue Date : 26.10.2013

ಟ್ವಿಟ್ಟರ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟವಾಗುವ ವಿಷಯಗಳಿಗೂ ಚುನಾವಣೆ ನೀತಿ ಸಂಹಿತೆಯನ್ನು ಆಯೋಗ ವಿಸ್ತರಿಸಿದೆ.

ಛತ್ತೀಸ್‌ಗಢ, ದಿಲ್ಲಿ, ಮಧ್ಯಪ್ರದೇಶ, ಮಿಜೊರಾಂ ಹಾಗೂ ರಾಜಸ್ಥಾನ  ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಕಾರ್ಯ ಆರಂಭಿಸಿದ್ದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ.

”ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಜಾಹೀರಾತು, ಲೇಖನ ಮುಂತಾದವುಕ್ಕೂ ನೀತಿ ಸಂಹಿತೆ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳು ತಮ್ಮ ಇ-ಮೇಲ್ ಹಾಗೂ ಸಾಮಾಜಿಕ ಜಾಲತಾಣದ ಖಾತೆ ವಿವರಗಳನ್ನು ಆಯೋಗಕ್ಕೆ ಕಡ್ಡಾಯವಾಗಿ ನೀಡಬೇಕು,” ಎಂದು ಸಂಬಂಧಿಸಿದ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಚುನಾವಣೆ ಆಯೋಗ ಅ. 25ರಂದು ಆದೇಶಿಸಿದೆ. ಈ ಕುರಿತು ಆಯೋಗ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ್ದು, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬೆಳಕು ಕಾಣುವ ಪ್ರಚಾರ ಸಂಗತಿಗಳಿಗೂ ನೀತಿ ಸಂಹಿತೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

”ಎಲ್ಲ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು, ಲೇಖನ ಅಥವಾ ಇನ್ನಿತರ ಯಾವುದೇ ರೀತಿಯ ಪ್ರಕಟಣೆಗೂ ಮುಂಚೆ ಅನುಮತಿ ಪಡೆದುಕೊಳ್ಳಬೇಕು. ಪ್ರಕಟಣೆಗಳಿಗೆ ತಗುಲುವ ವೆಚ್ಚವನ್ನು ಆಯೋಗದ ಮುಂದಿಡಬೇಕು. ಸಾಮಾಜಿಕ ಜಾಲತಾಣಗಳಿಗೆ ನೀಡಿದ ಮೊಬಲಗಿನ ಜತೆ ಪ್ರಕಟಣೆಗಳನ್ನು ರೂಪಿಸಿದ, ಬರೆದ ವ್ಯಕ್ತಿಗಳಿಗೆ ಪಕ್ಷಗಳು ನೀಡಿದ ಸಂಭಾವನೆಯ ಮಾಹಿತಿಯನ್ನೂ ಕೊಡಬೇಕು. ಹಾಗೆಯೇ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಹಾಗೂ ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ತಾಣಗಳಲ್ಲಿ ಖಾತೆಗಳನ್ನು ನಿಭಾಯಿಸುವ ಸಲುವಾಗಿ ನಿಯೋಜಿತಗೊಂಡಿರುವ ಸಿಬ್ಬಂದಿಯ ಸಂಬಳದ ವಿವರವನ್ನೂ ನೀಡಬೇಕು. ಪ್ರತಿಯೊಂದು ರಾಜಕೀಯ ಪಕ್ಷ ಹಾಗೂ ಪ್ರತಿಯೊಬ್ಬ ಅಭ್ಯರ್ಥಿಯೂ ಸಾಮಾಜಿಕ ಮಾಧ್ಯಮಗಳ ಪ್ರಕಟಣೆಗೆ ಖರ್ಚು ಮಾಡಿದ ಹಾಗೂ ಮಾಡುತ್ತಿರುವ ಪ್ರತಿ ಪೈಸೆಯ ವಿವರವನ್ನೂ ಆಯೋಗದ ಗಮನಕ್ಕೆ ತರಬೇಕು,” ಎಂದು ಆಯೋಗ ತಿಳಿಸಿದೆ.

   

Leave a Reply