ಅಂಧರ ಬದುಕಿಗೆ ‘ಹೊಸಬೆಳಕು’ ನೀಡುವ ತೃಪ್ತಿ ನನ್ನದು

ಸಂದರ್ಶನಗಳು - 0 Comment
Issue Date :

-ರ. ಶಿವಶಂಕರ

ನಿಮ್ಮ ಚಿಕ್ಕಂದಿನ ಜೀವನ ಹೇಗಿತ್ತು ?
ನಾನೊಬ್ಬ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಸಾಧಾರಣ ಹುಡುಗನಾಗಿದ್ದೆ, ನಮ್ಮ ತಂದೆ ಒಬ್ಬ ಗೌಡರ ಮನೆಯಲ್ಲಿ ಟ್ರಾಕ್ಟರ್ ಚಾಲಕರಾಗಿದ್ದರು. ನಮಗೆ ಯಾವುದೇ ಕೃಷಿ ಭೂಮಿಯೂ ಇರಲಿಲ್ಲ ನಮ್ಮ ತಾಯಿಯೂ ಸಹ ಅದೇ ಗೌಡರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ನನ್ನ ಸಮಾಜಸೇವೆಗೆ ಮೂಲ ಸ್ಪೂರ್ತಿ ನನ್ನ ತಂದೆ ತಾಯಿಯೇ. ನಮ್ಮ ಊರು ಬನ್ನೇರುಘಟ್ಟಕ್ಕೆ ಹತ್ತಿರ ಇದೆ. ಆಗೆಲ್ಲಾ ಹೊಸೂರು ಜಾತ್ರೆ ಮುಗಿಸಿಕೊಂಡು ನಮ್ಮ ಮಾರ್ಗವಾಗೇ ನೂರಾರು ಅಂಗವಿಕಲರು-ಭಿಕ್ಷುಕರೂ ಬಡವರೂ ಭಕ್ತಿಯಿಂದ ಬನ್ನೇರುಘಟ್ಟ ಜಾತ್ರೆಗೆ ನಡೆದುಕೊಂಡು ಬರುತ್ತಿದ್ದರು. ಆ ಸಮಯದಲ್ಲಿ ನಮ್ಮ ತಂದೆ ಪ್ರತಿ ವರ್ಷ ಕಾಡಿನಿಂದ 100ಕ್ಕೂ ಹೆಚ್ಚು ಊರುಗೋಲುಗಳನ್ನು ತಂದಿಟ್ಟುಕೊಂಡು ಪ್ರತಿವರ್ಷ ಆ ಪಾದಚಾರಿಗಳಿಗೆ ಸಹಾಯವಾಗಲೆಂದು ಕೊಡುತ್ತಿದ್ದರು. ಅದು ನನ್ನನ್ನು ಚಿಕ್ಕಂದಿನಿಂದಲೇ ಭಾವನಾತ್ಮಕವಾಗಿ ನಮ್ಮ ತಂದೆಯ ಬಗ್ಗೆ ಗೌರವ ಮೂಡಿಸಿತ್ತು, ಸಮಾಜಕ್ಕೆ ನಾನೂ ಊರುಗೋಲಾಗಬೇಕು ಎನಿಸುತಿತ್ತು. ಅದೇ ರೀತಿ ನಾವೀಗ ಅಂಗವಿಕಲರಿಗೆ ಇಂದಿನ ಕಾಲಕ್ಕನುಗುಣವಾಗಿ ಕ್ಯಾಲಿಪರ್ಸ್‌, ಕ್ಲಚರ್ಸ್‌, ಆರ್ಟಿಫಿಷಿಯಲ್ ಲಿಂಬ್ಸ್ (ಹ್ಯಾಂಡ್ಸ್, ಲೆಗ್ಸ್) ಕೊಡ್ತಾ ಇದ್ದೇವೆ ಅಷ್ಟೇ.
ನಿಮ್ಮ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನದ ಬಗ್ಗೆ ಹೇಳಬಹುದೆ ?
ನಾನು ಜಿಗಣಿಯಲ್ಲೇ ಪಿ.ಯು.ಸಿ ವರೆಗೂ ಓದಿದೆ, ಎಸ್.ಎಲ್.ಎನ್. ಕಾಲೇಜಿನಲ್ಲಿ ಬಿ.ಕಾಂ ಪದವಿಕೋರ್ಸ್ ಸೇರಿದ್ದೆ. ಮೊದಲ ವರ್ಷ ಮುಗಿದು 2ನೇ ವರ್ಷದ ಹೊತ್ತಿಗೆ 60ಕ್ಕೂ ಹೆಚ್ಚು ವಯಸ್ಸಾಗಿದ್ದ ನನ್ನ ತಂದೆ ಮುಂದೆ ಯಾವುದೇ ಕೆಲಸ ಸಾಧ್ಯವೇ ಇಲ್ಲವೆಂದು ಮಲಗಿಬಿಟ್ಟರು. ಬಹಳ ಚಿಕ್ಕ ವಯಸ್ಸಿನಿಂದಲೇ ದುಡಿದು ಜರ್ಝರಿತವಾಗಿದ್ದ ದೇಹ ಕೆಮ್ಮು ದಮ್ಮುಗಳಿಗೂ ಚಿಕಿತ್ಸೆ ಪಡೆಯಲಾಗದ ದೀನಸ್ಥಿತಿಯಿಂದ ನಿಃಶಕ್ತಿ ಆವರಿಸಿತ್ತು. ಆಗ ಅನಿವಾರ್ಯವಾಗಿ ನಾನು ಮನೆಯ ಜವಾಬ್ದಾರಿ ಹೊರಬೇಕಾದ ಪರಿಸ್ಥಿತಿ. ನಮ್ಮ ತಂದೆಗೆ ಮಗ ಯಾವುದೇ ಕಾರಣಕ್ಕೂ ತನ್ನ ಕೆಲಸ ಮುಂದುವರೆಸುವುದು ಇಷ್ಟವಿರಲಿಲ್ಲ. ಆದರೆ ಪಡೆದಿದ್ದ ಸಾಲಕ್ಕೆ ಪ್ರತಿಯಾಗಿ ನಾನು ಒಂದೆರಡು ತಿಂಗಳು ಚಾಲಕ ವೃತ್ತಿ ಮಾಡಿ ನಂತರ ತಂದೆಯ ಇಚ್ಛೆಯಂತೆ ಜಿಗಣಿಯ ಬಳಿಯ 92ನೇ ಇಸವಿಯಲ್ಲಿ
ಪರ್ಲ್‌ಪಾಲಿಮರ್ಸ್‌ ಕಾರ್ಖಾನೆಗೆ ಕಾರ್ಮಿಕನಾಗಿ ಸೇರಿ ಇಂದಿಗೂ ಅಲ್ಲಿಯೆ ಸೇವೆ ಮುಂದುವರೆಸಿದ್ದೇನೆ. 25 ವರ್ಷ ಅನುಭವವಾಗಿರುವ ನನಗೆ ಈಗ ಅಲ್ಲಿ ಸುಮಾರು 20,000 ಮಾಸಿಕ ಸಂಬಳ ದೊರೆಯುತ್ತಿದೆ. ಜೊತೆಗೆ ಮಾಲೀಕರು ನನ್ನ ಸಾಮಾಜಿಕ ಸೇವೆಗೆ ಅವಕಾಶ ನೀಡಿದ್ದು ಮನೆಯೂ ಹತ್ತಿರದಲ್ಲೇ ಇರುವುದರಿಂದ ವೃತ್ತಿ ಮುಂದುವರೆಸಿದ್ದೇನೆ.
ಇಂಥ ವಿಷಮ ಆರ್ಥಿಕ ಪರಿಸ್ಥಿತಿಯಲ್ಲೂ ಸಮಾಜಸೇವೆ ಮಾಡುವ ಸಂಸ್ಥೆ ಏಕೆ ಮತ್ತು ಹೇಗೆ ಕಟ್ಟಿಕೊಂಡಿರಿ?
ನನ್ನ ಒಬ್ಬನೇ ಮಗ ಧನುಶ್‌ಗೆ ಇಲ್ಲಿಗೆ 20 ವರ್ಷದ ಹಿಂದೆ ತೀವ್ರವಾದ ಡಯಾಬಿಟಿಸ್ ಇರುವುದು ತಿಳಿಯಿತು. ಆಗಿನ ಕಾಲಕ್ಕೆ ಆ ಚಿಕಿತ್ಸೆಗೆ ಬಹಳ ವೆಚ್ಚವಾಗುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೆ ಅದು ಒಮ್ಮೆಲೆ ಸಂಪೂರ್ಣ ಗುಣಹೊಂದದ ಖಾಯಿಲೆಯೆಂದೂ ತಿಳಿದು ಬಂದಾಗ, ಜೀವನವೇ ಬೇಡ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಡಯಾಕಾನ್ ಆಸ್ಪತ್ರೆಯ ವೈದ್ಯ ಅರವಿಂದರಲ್ಲಿ ನಿಸ್ಸಹಾಯಕತೆಯನ್ನು ಹೇಳಿಕೊಂಡೆ. ಆಗ ಅವರು ಅಷ್ಟೊಂದು ನಿರಾಶರಾಗುವ ಅಗತ್ಯವಿಲ್ಲ , ಜಗತ್ತು ವಿಶಾಲವಾಗಿದೆ ನಾವೆಲ್ಲ ನಿಮ್ಮ ಜೊತೆ ಇದ್ದೇವೆ. ನಿಮ್ಮ ಮಗನನ್ನು ಓದಿಸಿ ವೈದ್ಯನಾಗಿ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳಿ ಅವನಿಗೆ ಉಚಿತ ಇನ್ಸುಲಿನ್ ಚಿಕಿತ್ಸೆ ಒದಗಿಸುತ್ತಾ ಬಂದರು, ಆದರೂ 6 ತಿಂಗಳಲ್ಲಿ ಅವನ ಕಣ್ಣುಗಳಿಗೆ ಪೊರೆ ಆವರಿಸಿಬಿಟ್ಟಿತು. ಕೇವಲ ಒಂದು ಮೀಟರ್‌ಗಿಂತ ದೂರ ಇರುವ ವಸ್ತುಗಳೂ ಕಾಣದಾದವು. ಮನೆಯಲ್ಲಿ ಆಸ್ತಮಾ ತಂದೆ, ವೃದ್ಧೆ ತಾಯಿ, ಒಬ್ಬನದೇ ದುಡಿತ. ಇದ್ದ ಒಬ್ಬನೇ ಮಗ ನೋಡಿದ್ರೆ ಹೀಗಾಗಿದ್ದ. ಇ.ಎಸ್.ಐ. ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳಿಗೆ ನಮ್ಮಲ್ಲಿ ಚಿಕಿತ್ಸಾ ವ್ಯವಸ್ಥೆ ಇಲ್ಲ, ಆದ್ದರಿಂದ ಮಿಂಟೋದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುತ್ತೇವೆ, ಅದಕ್ಕೆ ಆಂಶಿಕವಾಗಿ ನಾವು ವೆಚ್ಚ ಭರಿಸಬೇಕು, ಇಲ್ಲವಾದಲ್ಲಿ ಪ್ರತಿತಿಂಗಳೂ ಮಗುವನ್ನು ಚಿಕಿತ್ಸೆಗಾಗಿ ಸೇರಿಸಬೇಕಾಗುತ್ತದೆ ಎಂದರು. ನಮಗೋ ಎರಡೂ ಸಾಧ್ಯವಿಲ್ಲದ ಪರಿಸ್ಥಿತಿ. ಆಗ ಸ್ನೇಹಿತರೊಬ್ಬರು ಐ.ಎ.ಆರ್. ಇಂಡಿಯಾ ಸೇವಾ ಸಂಸ್ಥೆಯ ಬಗ್ಗೆ ಹೇಳಿದರು. ಆ ಸಂಸ್ಥೆಯವರು ಮಣಿಪಾಲ್‌ನ ದೊಡ್ಡ ಮತ್ತು ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ ಹೊಂದಿದ್ದು ಬಹಳ ಕಡಿಮೆ ಹಣದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ನಮಗೆ ಒದಗಿದ್ದ ಕಷ್ಟಕ್ಕೆ ಪರಿಹಾರ ಒದಗಿಸಿದರು. ಇಷ್ಟೆಲ್ಲಾ ಸ್ಪಂದಿಸುವ ಸಮಾಜಕ್ಕೆ ನಾನೂ ಏನನ್ನಾದರೂ ಸೇವೆ ಮಾಡಬೇಕೆಂಬ ಮನಸ್ಸಾಗಿ ಐ.ಎ.ಆರ್. ಸಂಸ್ಥೆಯಲ್ಲಿ ಬಿಡುವಿನ ಸಮಯದ ಸ್ವಯಂಸೇವಕನಾಗಿ ಸೇರಿ ಪಿ.ಆರ್.ಓ. ಆಗಿ ನೂರಾರು ಆರೋಗ್ಯ ಶಿಬಿರಗಳನ್ನು ಮಾಡಿ ಅನುಭವ ಗಳಿಸಿದೆ. ಸುಮಾರು 10-12 ವರ್ಷ ಅವರೊಂದಿಗೆ ಸೇವೆ ಸಲ್ಲಿಸಿದ ನಂತರ ನನ್ನದೇ ಕನಸಿನ ಅಂಧತ್ವದ ಕತ್ತಲಿಂದ ಬೆಳಕಿಗೆ ನಡೆಸುವ ಮಹದಾಸೆಯ ‘ಹೊಸಬೆಳಕು’ ಸಂಸ್ಥೆಯನ್ನು 2007-8ರಲ್ಲಿ ಸ್ಥಾಪಿಸಿ ನೋಂದಾಯಿಸಿದೆ.
ನಿಮ್ಮ ಸಂಸ್ಥೆಯಿಂದ ಯಾವ ರೀತಿಯ ಸಮಾಜಸೇವೆ ಮಾಡುತ್ತಿದ್ದೀರಿ ?
ನಾವು ಅಗತ್ಯಸೇವೆ ಯೋಜನಾ ಕಾರ್ಯಕ್ರಮದಡಿ ಪ್ರಮುಖವಾಗಿ ಕಣ್ಣಿನ ಸಮಸ್ಯೆ ಉಳ್ಳ ಬಡ ಬಗ್ಗರಿಗೆ ಅವರವರ ಹಳ್ಳಿಗಳಲ್ಲೇ ಶಿಬಿರಗಳನ್ನು ಏರ್ಪಡಿಸುತ್ತೇವೆ. ಉಚಿತ ನೇತ್ರ ಪರೀಕ್ಷೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ, ಕಣ್ಣು ಜೋಡಣೆ, ಕಣ್ಣುದಾನ ನೋಂದಣಿ, ಕಣ್ಣುದಾನ, ಆರೋಗ್ಯ ಶಿಬಿರ, ಮಧುಮೇಹ ತಪಾಸಣೆ – ಚಿಕಿತ್ಸೆ, ಹೃದ್ರೋಗ ತಪಾಸಣೆ – ಚಿಕಿತ್ಸೆ, ರಕ್ತದಾನ ಶಿಬಿರಗಳ ಆಯೋಜನೆ, ಅಂಗದಾನ, ದೇಹದಾನ ಮುಂತಾದ ಕಾರ್ಯಕ್ರಮಗಳನ್ನು ಐ.ಎ.ಆರ್. ಸೇವಾ ಸಂಸ್ಥೆಯೂ ಸೇರಿದಂತೆ ಹಲವು ಸೇವಾ ಸಂಸ್ಥೆಗಳ, ಸಮಾಜ ಸೇವಾ ಧುರೀಣರ ಸಹಕಾರದಲ್ಲಿ ನಿರಂತರವಾಗಿ ನಡೆಸುತ್ತಾ ಬರುತ್ತಿದ್ದೇವೆ.
ಇಲ್ಲಿಯವರೆಗಿನ ನಿಮ್ಮ ಸಾಧನೆಗಳೇನು ?
ಇದುವರೆಗೂ ನಾವು ಎರಡು ಸಂಪೂರ್ಣ ದೇಹದಾನ, 170 ನೇತ್ರದಾನ ಮಾಡಿಸಿದ್ದೇವೆ. 26000ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ, 2800ಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, 12500ಕ್ಕೂ ಹೆಚ್ಚು ಉಚಿತ ಕನ್ನಡಕಗಳ ವಿತರಣೆ, 7500 ಸಾವಿರಕ್ಕೂ ಹೆಚ್ಚು ಜನರಿಂದ ಕಣ್ಣುದಾನಕ್ಕೆ ನೋಂದಣಿ ಮಾಡಿಸಿದ್ದೇವೆ. 600ಕ್ಕೂ ಹೆಚ್ಚು ಜನರಿಗೆ ಹೃದಯ ತಪಾಸಣೆ ಮತ್ತು ರಿಯಾಯತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದೇವೆ. 11300ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿ ರಕ್ತನಿಧಿಗೆ ಅರ್ಪಿಸಿದ್ದೇವೆ. ಫೇಸ್ ಬುಕ್ಕಿನಲ್ಲಿ ರಕ್ತದಾನಿ ಜೀವದಾನಿ ಎಂಬ ಗುಂಪು ರಚಿಸಿದ್ದು ಅದರಲ್ಲಿ 72,000 ಜನರನ್ನು ಹೊಂದಿದ್ದು ಅಲ್ಲಿ ರಕ್ತದಾನಿಗಳು ಹಾಗೂ ರಕ್ತ ಆಕಾಂಕ್ಷಿಗಳ ನಡುವಿನ ಸಂವಹನಕ್ಕೆ ಅನುಕೂಲ ಉಂಟಾಗಿದೆ. ಅಲ್ಲಿ ನಮ್ಮ ಸಂಪರ್ಕವೂ ಇದ್ದು ದಿನದ ಯಾವುದೇ ಸಮಯದಲ್ಲಿ ನಮಗೆ ಕರೆ ಮಾಡಿದರೂ ಅಗತ್ಯವಿರುವ ರಕ್ತದ ವ್ಯವಸ್ಥೆ ಮಾಡುತ್ತಿದ್ದೇವೆ. ನಮ್ಮ ಬ್ಲಾಗ್‌ನಲ್ಲಿಯೂ ಸಹ ಆರೋಗ್ಯ ಸಂಬಂಧಿ ಹಲವಾರು ಮಾಹಿತಿಗಳು ಇವೆ.
ಯಾವ ವಯಸ್ಸಿನಿಂದ ಯಾವ ವಯಸ್ಸಿನವರೆಗೂ ನೇತ್ರದಾನ ಮಾಡಬಹುದು ?
ಮಗು ಹುಟ್ಟಿದ ಕೂಡಲೇ ತಾಯಿಯನ್ನು ನೋಡುತ್ತದೆ ಎಂದರೆ ಆಗಲೇ ಕಣ್ಣು ಕಾಣಿಸುತ್ತದೆ ಎಂದರ್ಥ. ಹಾಗಾಗಿ ಅಲ್ಲಿಂದ ಕಣ್ಣಿನ ದೃಷ್ಟಿ ಹೋಗುವವರೆಗೂ ನೇತ್ರದಾನ ಮಾಡಬಹುದು. ನಮ್ಮ ಪ್ರಯತ್ನದಿಂದ ಪಾಂಡಿಚೆರಿಯ ಜಿಪ್ಮರ್ ಆಸ್ಪತ್ರೆಯಲ್ಲಿ ಹುಟ್ಟಿದ ಕೇವಲ ಮೂರೇ ದಿನಗಳಲ್ಲಿ ಮರಣಿಸಿದ ಮಗುವಿನ ನೇತ್ರದಾನವನ್ನೂ ಮಾಡಿಸಿದ್ದೇವೆ. ನನ್ನ ತಾಯಿ ಸೊಣ್ಣಮ್ಮ ತಮ್ಮ 70ಕ್ಕೂ ಹೆಚ್ಚು ವಯಸ್ಸಾಗಿದ್ದರೂ ಅವರ ನೇತ್ರದಾನ ಮಾಡಿಸಿದ್ದೇವೆ.
ಯಾವುದೇ ವಯಸ್ಸಿನವರಿಗೆ ಯಾವುದೇ ವಯಸ್ಸಿನವರ ಕಣ್ಣು ಹೊಂದಾಣಿಕೆ ಆಗುತ್ತದೆಯೇ ?
ಇಲ್ಲ, ದಾನಿ ಹಾಗೂ ಆಕಾಂಕ್ಷಿ ವಯಸ್ಸಿನ ಅಂತರ ಸಾಮಾನ್ಯವಾಗಿ 10 ವರ್ಷಗಳವರೆಗೂ ಹೊಂದಾಣಿಕೆ ಆಗುತ್ತದೆ. ಕಣ್ಣುಗಳನ್ನು ಪಡೆದ ಮೇಲೆ ವೈದ್ಯರು ಅವನ್ನು ಅವುಗಳ ಕ್ಷಮತೆಯನ್ನು ಆಧರಿಸಿ ವರ್ಗೀಕರಿಸುತ್ತಾರೆ. ನಂತರ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೊಂದಾಣಿಕೆ ಆಗುವವರಿಗೆ ಮಾತ್ರ ಅವನ್ನು ಜೋಡಿಸುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಇರುವಂತೆಯೇ ಅದಕ್ಕಾಗಿಯೇ ಬಹಳ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ, ಯಾವುದೇ ಆಸ್ಪತ್ರೆಯವರು ನೇತ್ರ ಪಡೆದರೂ 48 ಗಂಟೆಗಳ ಒಳಗೆ ಅದನ್ನು ಅಳವಡಿಸಬೇಕು. ಸೂಕ್ತ ಆಕಾಂಕ್ಷಿ ಅವರ ಪರಿಧಿಯಲ್ಲಿ ಇಲ್ಲದಿದ್ದಲ್ಲಿ ಕೇಂದ್ರೀಯ ವ್ಯವಸ್ಥೆಗೆ ಅದನ್ನು ತಲುಪಿಸುತ್ತಾರೆ. ಅಲ್ಲಿಂದ ಅದು ಅಗತ್ಯ ಇರುವಲ್ಲಿ ಸೇರುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ಯಾವುದೇ ನೇತ್ರಗಳು ನಿರುಪಯುಕ್ತವಾಗುವುದಿಲ್ಲ. ವ್ಯಕ್ತಿಯ ಮರಣದ ನಂತರ 6ಗಂಟೆಗಳಲ್ಲಿ ನೇತ್ರದಾನ ಅಗತ್ಯವಾಗಿ ಮಾಡಬೇಕಿದೆ, ನೇತ್ರದಾನ ಮಾಡುವುದರಿಂದ ಮುಖ ವಿಕಾರ ಹೊಂದುವುದಿಲ್ಲ. ಕೇವಲ ಅಕ್ಷಿಪಟಲವನ್ನು ಮಾತ್ರ ಪಡೆಯಲಾಗುತ್ತದೆ.
ನೀವು ಎದುರುಗೊಂಡ ವಿಶೇಷ ಸಂದರ್ಭಗಳ ಬಗ್ಗೆ ಹೇಳಬಹುದೇ ?
ಕೋಟ್ಯಾಧಿಪತಿಯೊಬ್ಬರ ಕೊಲೆ ನಡೆದ ವಿಚಾರ ತಿಳಿದುಬಂತು. ನನಗಂತೂ ಯಾರದೇ ಸಾವಿನ ವಿಚಾರ ತಿಳಿದಾಕ್ಷಣ ಕಣ್ಣಿನಮೇಲೆ ಮೊದಲ ಗಮನ. ಅದರಂತೆ ಕೂಡಲೆ ಅಲ್ಲಿಗೆ ಹೋಗುತ್ತಿದ್ದಂತೆ ನೋಡೋ ನಾವೆಲ್ಲಾ ಕುದಿತಾ ಇದ್ರೆ ಇವ್ನ ಕಣ್ಣು ಕಿತ್ಕೊಳೊಕೆ ಬಂದ್ಬಿಟ್ಟಾ, ಏನೋ ಮಾಡೋದು ಇಂಥ ಕಟುಕನಿಗೆ ಅಂದ್ರು, ನಾನದಕ್ಕೆ ಪ್ರತಿಕ್ರಿಯಿಸಲಿಲ್ಲಾ. ಆದರೆ ಕಡೆಗೆ ಆ ಮನೆಯವರ ಮನವೊಲಿಸಿ ನೇತ್ರದಾನ ಮಾಡಿಸಿದೆ. ಮತ್ತೊಮ್ಮೆ ಏಳು ವರ್ಷದ ಮಗುವಿನ ಮನೆಯವರನ್ನು ಬಹಳ ಕಷ್ಟಪಟ್ಟು ಮನವೊಲಿಸಿ ನೇತ್ರದಾನ ಮಾಡಿಸಿದ್ದನ್ನು ಮಾಧ್ಯಮಗಳು ಒಳ್ಳೆಯ ಸುದ್ದಿ ಮಾಡಿದ್ದವು. ನಮ್ಮ ಸುತ್ತಮುತ್ತ ನಾನು ಸಾವಿನ ಮನೆಗೆ ಹೋದಾಗ ‘ಕಣ್ಣು ಕಿತ್ತುಕೊಳ್ಳುವವನು’ ಎಂದೇ ಗುರುತಿಸುತ್ತಾರೆ. ಆದರೆ ಅದರಿಂದ ಇಬ್ಬರ ಬಾಳಿಗೆ ಬೆಳಕು ನೀಡುತ್ತೇನೆ, ಅವರ ಬದುಕಿಗೆ ಹೊಸಬೆಳಕು ನೀಡುತ್ತೇನೆ ಎಂಬ ತೃಪ್ತಿ ನನಗೆ ಸ್ಪೂರ್ತಿಯಾಗಿದೆ.
ನೀವು ಮೊದಲಲ್ಲೇ ದಲಿತ ಎಂದು ಹೇಳಿಕೊಂಡಿರಿ, ನಿಮಗೆ ಎಲ್ಲಿಯಾದರೂ ಭೇದಭಾವನೆಯ ಅನುಭವ ಆಗಿದೆಯೆ ?
ನನ್ನನ್ನು ಒಬ್ಬ ಸಮಾಜಸೇವಕನಾಗಿ ಸಮಾಜ ನೋಡಿದೆಯೆ ಹೊರತು ಎಂದಿಗೂ ದಲಿತನೆಂದು ಹೇಳಿಕೊಳ್ಳುವ / ಕೇಳಿದ ಸಂದರ್ಭಗಳೇ ಬಂದಿಲ್ಲ. ಈಗ ಜಾತಿಯಿಂದಲೇ ವ್ಯಕ್ತಿಯನ್ನು ಗುರುತಿಸುವ ಕಾಲ ದೂರವಾಗಿದೆ ಎಂಬುದು ನನ್ನ ಅನುಭವ. ಒಳ್ಳೆ ಕೆಲಸ ಮಾಡುವ ಎಲ್ಲರನ್ನೂ ಸಮಾಜ ಸ್ವೀಕರಿಸುತ್ತಿದೆ ಅನಿಸುತ್ತೆ.
ನಿಮ್ಮ ಸುತ್ತಮುತ್ತ ಯಾರಿಗಾದರೂ ದಲಿತನೆಂಬ ಕಾರಣದಿಂದಲೇ ಅನ್ಯಾಯಕ್ಕೆ ಗುರಿಯಾಗಿದ್ದಿದೆಯೆ ?
ಅವರು ಹೇಗೆ ನಡೆದುಕೊಂಡಿರುತ್ತಾರೆ, ಯಾವುದಕ್ಕೆ ಕಮಿಟ್ ಆಗಿರುತ್ತಾರೆ ಎಂಬುದರ ಮೇಲೆ ತುಳಿತಕ್ಕೆ ಒಳಗಾಗಿರಬಹುದು. ನನಗನಿಸಿದಂತೆ ದಲಿತ ಬಾರೋ ಇಲ್ಲಿ ಎಂದು ಎಂತಹ ಸಮಯದಲ್ಲೂ ತುಳಿತ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ನಾನು ಕಂಡಿಲ್ಲ, ಹಿಂದೆ ಕೆಲವರು ನಮ್ಮ ಬಂಧುಗಳು ಕಷ್ಟದಲ್ಲಿದ್ದಾಗ ಅವರಿಗೆ 1000, 2000ದಷ್ಟು ಪುಡಿಗಾಸು ಕೊಟ್ಟು ಮೋಸ ಮಾಡಿ ಜಮೀನು ಬರೆಸಿಕೊಂಡು ಅನ್ಯಾಯ ಮಾಡಿದ್ದಾರೆ. ಆದರೆ ಅವರು ದಲಿತರಿಗೆ ಮಾತ್ರ ಆ ರೀತಿ ಮಾಡಿದ್ದಾರೆ ಎನ್ನುವುದು ಸುಳ್ಳು. ಅವರ ಬಂಧುಗಳಿಗೂ ಸ್ನೇಹಿತರಿಗೂ ಯಾರೆಲ್ಲಾ ಅನಕ್ಷರಸ್ಥರು ದೊರೆತರೂ ಹಾಗೇ ಮಾಡಿರುತ್ತಾರೆ. ನೊಂದವರಿಗೆ ಜಾತಿಯಿಲ್ಲ.
ಕಣ್ಣುಗಳನ್ನು ಏಕೆ ದಾನ ಮಾಡಬೇಕು ?
ಹಲವಾರು ಜನ ಹುಟ್ಟುವಾಗ ನಮ್ಮ ನಿಮ್ಮಂತೆ ಸಾಮಾನ್ಯ ದೃಷ್ಠಿಯುಳ್ಳವರೇ ಆಗಿರುತ್ತಾರೆ. ಆದರೆ ತೀವ್ರ ಜ್ವರ, ಮಧುಮೇಹ, ಅಪಘಾತ ಇನ್ನಿತರೆ ಸಂದರ್ಭಗಳಲ್ಲಿ ದೃಷ್ಟಿ ಕಳೆದುಕೊಂಡಿರುತ್ತಾರೆ. ಅಂತ ಲಕ್ಷಾಂತರ ಜನರು ಮತ್ತೆ ಜಗತ್ತನ್ನು ಕಾಣಲು ದಾನಿಯ ಕಣ್ಣುಗಳ ಅವಶ್ಯಕತೆಯಿದೆ. ಪುಟ್ಟ ರಾಷ್ಟ್ರವಾದರೂ ನಮ್ಮ ಪಕ್ಕದಲ್ಲೇ ಇರುವ ಶ್ರೀಲಂಕದಲ್ಲಿ ಯಾರೇ ಮೃತಪಟ್ಟರೂ ಮೊದಲ ಕರೆ ಹತ್ತಿರದ ಕಣ್ಣುನಿಧಿ ತಜ್ಞರಿಗೆ ಮಾಡಿ ನೇತ್ರದಾನ ಮಾಡುವುದೆ ಒಂದು ಸಂಪ್ರದಾಯದಂತೆ ಬೆಳೆದಿದೆ. ಅಲ್ಲಿನ ಅಗತ್ಯ ಪೂರೈಸಿ ಬೇರೆ ದೇಶಗಳಿಗೂ ಉಚಿತವಾಗಿ ರಪ್ತು ಮಾಡುತ್ತಿದೆ ಎಂಬ ಹೆಮ್ಮೆ ಅವರದಾಗಿರುವಾಗ ನಾವಿನ್ನೂ ಕಣ್ಣುತೆರೆಯದೆ ಕಣ್ಣುಗಳನ್ನು ಮಣ್ಣು ಮಾಡುವುದು ನಿಜಕ್ಕೂ ಶೋಚನೀಯವಾಗಿದೆ. ದಯವಿಟ್ಟು ಜನತೆ ಇನ್ನಾದರೂ ಎಚ್ಚೆತ್ತು ಕಣ್ಣುಗಳ ಮೂಲಕ ಮೃತರು ಜಗತ್ತನ್ನು ನೂರಾರು ವರ್ಷ ಕಾಣುವಂತೆ ಅಮರರಾಗಿಸಬೇಕೆಂದು ಕೇಳಿಕೊಳ್ಳುತ್ತೇನೆ.

   

Leave a Reply