ಅಕ್ಕ ತಂಗೇರ ಹೊರತು

ಚಿಂತನ - 0 Comment
Issue Date :

‘ಅಕ್ಕ ತಂಗೇರ ಹೊರತು ಮತ್ತೊಬ್ಬ ಗೆಳತಿಲ್ಲ’ ಎನ್ನುವದು ಜನಪದರ ಹೃದಯಾಂತರಾಳದಿಂದ ಹೊರಹೊಮ್ಮಿ ಹಲವು ಶತಮಾನಗಳೇ ಕಳೆದಿರಬಹುದು. ಆದರೆ ಇದರಲ್ಲಿ ಅಡಗಿರುವ ಸತ್ಯ ಮಾತ್ರ ಇಂದಿಗೂ, ಮುಂದಿಗೂ ಪ್ರಸ್ತುತ, ಸ್ಮರಣೀಯ.
ಸಾಂಸಾರಿಕ ಮತ್ತು ಸಾಮಾಜಿಕ ಜೀವನಕ್ಕೆ ಕುಟುಂಬವೇ ಪಂಚಾಂಗ. ಅದರಲ್ಲಿ ಮನುಷ್ಯನು ಪಡೆಯುವ ಪ್ರೀತಿ, ವಾತ್ಸಲ್ಯ, ಆದರ, ಅನ್ಯೋನ್ಯತೆ, ಆಸರೆ ಮುಂತಾದ ಭಾವರಸಗಳು ಅವನನ್ನು ಮೃದುಗೊಳಿಸುತ್ತವೆ, ಹದಗಳಿಸುತ್ತವೆ, ಪಾಕಗೊಳಿಸುತ್ತವೆ. ಸಾಮಾಜಿಕ ಕ್ಷೇತ್ರದಲ್ಲಿ ಯಾರು ಸಮರ್ಪಕವಾಗಿ ಸೌಹಾರ್ದದಿಂದ ಬೆರೆಯುವುದಿಲ್ಲವೋ, ನೆರೆಯುವುದಿಲ್ಲವೋ ಅಂತಹ ವ್ಯಕ್ತಿಯ ಕೌಟುಂಬಿಕ ಬದುಕು ಸರಿಯಿರಲಿಲ್ಲವೆಂದು ನೋಡದೆಯೇ ಹೇಳಬಹುದು.
ಕುಟುಂಬದಲ್ಲಿರುವ ಸೋದರರಿಗೆ, ಸೋದರಿಯರಿಗೆ ಪ್ರೀತಿ ಯ ರಸಾನುಭವವನ್ನು ತಂದುಕೊಡುವವರು ಅಕ್ಕ ತಂಗಿಯರು. ಬಾಲ್ಯದ ಆಟ – ಪಾಠಗಳಿಂದ ತೊಡಗಿ ಯೌವನದ ನೋಟ – ಕೂಟಗಳವರೆಗೆ ಅವರ ನುಡಿ, ನಡೆ, ಚಿಂತನೆ, ವರ್ತನೆಗಳು ಉಳಿದವರ ಮೇಲೆ ಅದ್ಭುತವೂ ಅನನ್ಯವೂ ಆದ ಪರಿಣಾಮವನ್ನು ಬೀರುತ್ತೆ. ಇಡಿಯ ಕುಟುಂಬವೇ ಸುಖ – ಶಾಂತಿ – ನೆಮ್ಮದಿಗಳ ಸಾಗರವಾಗಿಬಿಡುತ್ತದೆ.
ಮನೆಯಲ್ಲೊಬ್ಬಳು ಅಕ್ಕ ಇದ್ದರೆ ಅವಳು ತಮ್ಮ – ತಂಗಿಯರ ಮಾತು – ಕೃತಿಗಳನ್ನು ತಿದ್ದುತ್ತಾಳೆ. ಅಗತ್ಯವಿದ್ದಾಗಲೆಲ್ಲ ಸೂಕ್ತವಾದ ಮಾರ್ಗದರ್ಶನ ಮಾಡುತ್ತಾಳೆ. ತಾಯಿ – ತಂದೆಯರಿೆ ವಿವಿಧ ಕೆಲಸಗಳಲ್ಲಿ ನೆರವಾಗುತ್ತಾಳೆ. ರುಚಿಕರವಾದ ತಿಂಡಿ – ತಿನಿಸುಗಳನ್ನು ತಯಾರಿಸುವ ಮುಖಾಂತರ ಕುಟುಂಬದ ಸದಸ್ಯರೆಲ್ಲರ ಮೆಚ್ಚುಗೆ ಗಳಿಸುತ್ತಾಳೆ. ಅನೇಕ ವೇಳೆ ತುಂಬಾ ಕಟ್ಟು ನಿಟ್ಟಿನಿಂದ ವರ್ತಿಸುವ ತಾಯಿ – ತಂದೆ ಮತ್ತು ಕುಟುಂಬದ ಎಳೆಯ ಸದಸ್ಯರ ನಡುವೆ ಮಧ್ಯಸ್ಥಿಕೆ ವಹಿಸುತ್ತಾಳೆ.
ಒಬ್ಬಳು ತಂಗಿ ಇದ್ದರೆ ಆಕೆ ತನ್ನ ತುಂಟಾಟ, ಲಲ್ಲೆಮಾತು ಮತ್ತು ಆಟಗಳ ಮುಖಾಂತರ ಮನೆಯೊಳಗೆಲ್ಲ ತನ್ನ ಚಟುವಟಿಕೆಗಳನ್ನು ಹಬ್ಬಿಸುತ್ತಾಳೆ. ಉಳಿದೆಲ್ಲ ಸದಸ್ಯರ ಬೇನೆ ಬೇಸರಗಳನ್ನು ದೂರ ಮಾಡುತ್ತಾಳೆ. ಎಲ್ಲೆಲ್ಲೂ ಸಂತೋಷದ ಬೆಳಕನ್ನೇ ಹಬ್ಬಿಸುತ್ತಾಳೆ. ಅಕ್ಕ – ತಂಗಿ ಒಟ್ಟು ಸೇರಿದರಂತೂ ಅಲ್ಲಿ ಹರ್ಷದ ಹೊನಲೇ ಹರಿಯುತ್ತದೆ.
ಕುಟುಂಬದ ಸದಸ್ಯರು ಹೊರಗೆ ಹೋದಾಗ ಅಲ್ಲಿ ಗೆಳತಿಯರು, ಸ್ನೇಹಿತೆಯರು ಸಿಗುವುದಿಲ್ಲವೆಂದಲ್ಲ, ಧಾರಾಳವಾಗಿ ಸಿಗುತ್ತಾರೆ. ಆದರೆ ಅವರೊಂದಿಗೆ ಯುವಕರು ಒಡಹುಟ್ಟುಗಳ ಜತೆಗೆ ಇದ್ದಷ್ಟು ನಿಕಟತೆ, ಾಮೀಪ್ಯ, ಪರಸ್ಪರತೆ ಸಾಧಿಸುವುದು ಕಷ್ಟ. ಹೇಗಿದ್ದರೂ ಅವರು ಹೊರಗಿನವರೇ. ಒಂದು ವೇಳೆ ಸಜ್ಜನಿಕೆಯ ಲಕ್ಷ್ಮಣರೇಖೆಯನ್ನು ದಾಟಲು ಪ್ರಯತ್ನಿಸಿದ್ದೇ ಆದರೆ ಅಪಾಯವು ತಪ್ಪಿದ್ದಲ್ಲ ಎನ್ನುವ ಎಚ್ಚರಿಕೆಯನ್ನು ಹಳ್ಳಿಗಾಡಿನ ಗರತಿಯರು ತಮ್ಮ ಜಾಣ ನುಡಿಯ ಮೂಲಕ ನೀಡಿದ್ದಾರೆ.
ಒಡಹುಟ್ಟಿದ ಅಕ್ಕ ತಂಗಿಯರೇ ನಮಗೆ ಅಚ್ಚುಮೆಚ್ಚಿನ ಗೆಳತಿಯರು. ಬೇರಾರೂ ಆ ಮಟ್ಟಕ್ಕೆ ಏರಲಾರರು ಎಂಬುದು ಅವರ ಅಭಿಮತ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಮಕ್ಕಳಿಗೆ ಅಕ್ಕನೂ ಇಲ್ಲ ತಂಗಿಯೂ ಇಲ್ಲ ಎಂಬಂತಾಗಿವೆ. ಇದರಿಂದಾಗಿ ಕೂಡುಕುಟುಂಬದ ಅಂದ ಚಂದ, ಸುಖ ಸೌಖ್ಯಗಳು ಕ್ರಮೇಣ ಮಾಯವಾಗಿ ಅವು ಜನಪದದ ಹಾಡುಗಳಿಗಷ್ಟೇ ಸೀಮಿತವಾಗಿವೆ. ಇದು ಆಧುನಿಕ ಜನ ಜೀವನದ ಒಂದು ದುರಂತವೆನ್ನಬಹುದು.

– ಅರ್ತಿಕಜೆ

   

Leave a Reply