ಅಗಲಿ ಹೋದ ಬಂಧುವಿಗೊಂದು ಕಣ್ಣೀರ ನಮನ

ಲೇಖನಗಳು - 0 Comment
Issue Date :

ಅ.10, ಶುಕ್ರವಾರ ಸಂಜೆ 7ರ ಸಮಯಕ್ಕೆ ಬಂಧುವರ್ಗ ಮತ್ತು ವಿಶಾಲಪ್ರಮಾಣದ ಸ್ವಯಂಸೇವಕರನ್ನು ಅಗಲಿಹೋದ ಸಂಘದ ಹಿರಿಯ ಕಾರ್ಯಕರ್ತ ಶ್ರೀ ಪ.ರಾ. ಆನಂದರಾವ್ ಬೆಂಗಳೂರಿನವರೇ. ಬಸವನಗುಡಿಯ ಸನ್ನಿಧಿ ರಸ್ತೆಯಲ್ಲಿ ನೆಲೆಸಿದ್ದ ಹಿರಿಯ ಅಡ್ವೋಕೇಟ್ ಆಗಿದ್ದ ಶ್ರೀಯುತ ರಾಘವೇಂದ್ರರಾವ್‌ರವರ ಪುತ್ರ.

 1950-56 ರ ಸಮಯದಲ್ಲಿ ರಾ.ಸ್ವ. ಸಂಘಕ್ಕೆ ಪಂಥಾಹ್ವಾನ ನೀಡಿದ್ದ ಅವಧಿ. ಗಾಂಧಿಯವರನ್ನು ಕೊಂದ ಸಂಘ ಎಂದು ಹೇಳುವುದರಲ್ಲಿ, ಭಾಷಣ ಮಾಡುವಲ್ಲಿ, ಬರೆಯುವಲ್ಲಿ ಯಾರಿಗೂ ಏನೂ ಹಿಂಜರಿಕೆ ಇರಲಿಲ್ಲ. 1946-47 ರ ಸಮಯದಲ್ಲಿ ಸಂಘ ಶಾಖೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ವಿದ್ಯಾರ್ಥಿಗಳು ಸೇರಿಕೊಂಡಿದ್ದು, ಅವರ ಪಡೆಯ ಸದುಪಯೋಗ ಪಡೆಯಬೇಕೆಂದು ಸಂಘದ ತತ್ಕಾಲೀನ ಕಾರ್ಯಕರ್ತರು ಶ್ರಮವಹಿಸುತ್ತಿದ್ದುದರಲ್ಲಿ ಅತಿಶಯೋಕ್ತಿ ಏನಿಲ್ಲ. ಬಾಲಕ ಆನಂದರಾವ್‌ಗೆ ಆ ಹಿನ್ನೋಟ ಅತಿ ಸ್ಫೂರ್ತಿ, ಉತ್ಸಾಹ, ಧ್ಯೇಯಪ್ರೀತಿಯನ್ನು ನಿರ್ಮಿಸಿತ್ತೆಂದೇ ಅವರು ಆ ಅವಧಿಯಲ್ಲಿ ಸಂಘಪ್ರಚಾರಕರಾಗಿ ಬೆಂಗಳೂರಿನಿಂದ ಹೊರಟರು.

 ಬೆಂಗಳೂರಿನವರೇ ಆಗಿದ್ದುಕೊಂಡು ಕಳೆದ ಸುಮಾರು 65ಕ್ಕಿಂತಲೂ ಹೆಚ್ಚು ವರ್ಷ ನಗರದ ಪರಿಸರದಲ್ಲಿ ಕಾರ್ಯಕರ್ತರಾಗಿ ಬೆಳೆದು, ಸಕ್ರಿಯರಾಗಿಯೇ ಇದ್ದ (ಇರುವ), ಕಾರ್ಯಕರ್ತರ ಪೈಕಿ, ಆನಂದರಾವ್ ಓರ್ವರು.

 ಪ್ರಚಾರಕ ಜೀವನದ ನಂತರವೂ, ಸಂಘವನ್ನೆಲ್ಲ, ಕೇಶವಕೃಪಾವನ್ನೇ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ಕಾರ್ಯಮಾಡುತ್ತಾ ಕೆಲವು ವರ್ಷ ಕಾರ್ಯಾಲಯ ಪ್ರಮುಖರಾಗಿದ್ದರು, ಹೀಗಾಗಿ ಸಂಘದ ಹಿರಿಯರ ಅತಿ ಆಪ್ತರು. ವೃತ್ತಪತ್ರಿಕೆ, ಪುಸ್ತಕ ಭಂಡಾರಗಳ ಚಟುವಟಿಕೆ ಅವರಿಗೆ ಅತಿ ಪ್ರಿಯ. ಕೆಲಕಾಲ ಅವರು ‘ಉತ್ಥಾನ’ದ ಸಂಪಾದಕರಾಗಿದ್ದರು. ಮುಂದೆ ವಿಕ್ರಮ ಪತ್ರಿಕೆಯ ಆಡಳಿತಾಧಿಕಾರಿಯಾಗಿದ್ದರು.

 ಸಂಘವಸ್ತು ಭಂಡಾರದ ಆಗುಹೋಗುಗಳಲ್ಲಿ ಅತೀವ ಆಸಕ್ತಿ ತೋರುತ್ತಿದ್ದರು. ಭಾರತ ವಿಕಾಸ ಪರಿಷತ್, ಹಿಂದು ಸೇವಾ ಪ್ರತಿಷ್ಠಾನದಲ್ಲೂ ಅವರ ಸೇವೆ ಸಂದಿದೆ. ಸಾರ್ವಜನಿಕ ಉಪಯೋಗಿಯಾದ ಟ್ರಸ್ಟ್‌ನಲ್ಲೂ ಅವರ ಸಕ್ರಿಯ ಪಾತ್ರವಿತ್ತು. ಅವರು ಅತಿ ಮಾತಿನವರಲ್ಲ. ತನ್ನ ಮಾತಿಗೆ ನಿಖರತೆ, ಸಾಕ್ಷಿ, ಆಧಾರ ಉಂಟೆಂಬ ಗುಂಪಿಗೆ ಸೇರಿದವರು. 30 ವರ್ಷಗಳಷ್ಟು ದೀರ್ಘ ಅವಧಿ ಪ್ರಾಂತ ವ್ಯವಸ್ಥಾ ಪ್ರಮುಖರಾಗಿದ್ದರು. ಈಗಿನ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವಾರು ಜಿಲ್ಲೆ ವಿಭಾಗಗಳಲ್ಲಿ ಅವರಿಂದ ಸ್ಫೂರ್ತಿ, ಮಾರ್ಗದರ್ಶನ ಪಡೆದವರು ಈಗಲೂ ಕಾಣಸಿಗುತ್ತಾರೆ. ಒಟ್ಟು ಕರ್ನಾಟಕ ರಾಜ್ಯದ ಸ್ವಯಂಸೇವಕರಿಗೆ, ಸಂಘಕ್ಕೆ ಅವರ ಅಗಲಿಕೆ ಒಂದು ಅಪಾರ ನಷ್ಟ. ಅವರ ಆತ್ಮಕ್ಕೆ ಸದ್ಗತಿ ನಿಶ್ಚಿತ. ಏಕೆಂದರೆ ಸಂಘದ ಮೂಲಕವೇ ರಾಷ್ಟ್ರದ ಚಿರಂತನ ಏಳಿಗೆ ಎಂಬ ಏಕಾಂತಿಕ ನಿಷ್ಠೆ, ಭಕ್ತಿ ಅವರದು. ಅವರು ಸಂಘಯಜ್ಞದಲ್ಲಿ ಒಂದು ಸಮಿತ್ತು.

 ಸಂಘದ ಪ್ರಚಾರಕನಾಗಿ ಹೊರಡುವ ಕಾರ್ಯಕರ್ತನೊಬ್ಬನ ಮನೋಭೂಮಿಕೆ ಅತಿ ವಿಶ್ವಾಸದ್ದು. ಸುತ್ತಲ ಪ್ರಪಂಚವೆಲ್ಲವೂ ಹಣ, ಕೀರ್ತಿ, ಗೌರವ, ಸ್ಥಾನಮಾನಗಳ ಅನ್ವೇಷಣೆಗಾಗಿ ಸ್ಪರ್ಧೆಹೂಡಿಕೊಂಡು ನಿಂತಿದ್ದಾಗ ಅದರ ಗೊಡವೆಯಿಂದ ದೂರವಿದ್ದು, ಅಪಾರ ಸಾಧನೆಯೊಂದರ ಅತಿ ಚಿಕ್ಕ ಬಿಂದು ತಾನೆಂದು ಆತ ಭಾವಿಸಿಕೊಳ್ಳುತ್ತಾನೆ. ಮನೆಯಿಂದ ಹೊರಹೊರಡುವ ಎಲ್ಲಾ ಕಾರ್ಯಕರ್ತರಿಗೂ ಮನೆಯ ತಂದೆ-ತಾಯಿಗಳು ಸಾಮಾನ್ಯವಾಗಿ ಹೇಳುವುದು ಸ್ವಂತದ ಏಳಿಗೆಯ ಮಾತನ್ನೇ. ಇದರಿಂದ ನಿನಗೇ, ನಿನ್ನ ತಂದೆ-ತಾಯಿ, ಅಣ್ಣ ತಮ್ಮಂದಿರಿಗೇ ನಷ್ಟ ಎಂಬ ವ್ಯಾವಹಾರಿಕ ಸತ್ಯವನ್ನು ತಿಳಿಸಿಕೊಡುತ್ತಾರೆ. ಈ ಪ್ರೇಮದ ಆಕರ್ಷಣೆಯನ್ನು ಮೀರಿ ಹೊರಬರುವವರ ಪೈಕಿ ಕೆಲವರು ಮನೆಯ, ತಂದೆ-ತಾಯಿಗಳ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಆನಂದರಾವ್ ಒಂದು ಉದಾಹರಣೆ.

 ಅತಿ ಕೋಪದ ಮನೋಭೂಮಿಕೆಯಿಂದ ಅವರ ತಂದೆಯವರು, ಮಗನನ್ನು ಸಂಘದ ‘ಬಂಧನ’ದಿಂದ ಬಿಡಿಸಿ ಕರೆದೊಯ್ಯಲು ಸಂಘಕಾರ್ಯಾಲಯಕ್ಕೆ ಧಾವಿಸಿಬಂದರು. ಹಿರಿಯರಾದ ಯಾದವರಾವ್ ಜೋಷಿಯವರನ್ನು ಭೇಟಿಯಾಗಿ ತಮ್ಮ ಉದ್ದೇಶ ತಿಳಿಸಿದರು. ‘ನಿಮ್ಮ ಮಗನು ಸ್ವಂತ ಪ್ರೇರಣೆಯಿಂದ ಪ್ರಚಾರಕನಾದವನು, ಅವನನ್ನು ವಾಪಸ್ ಹೋಗು ಎಂದು ನಾ ಹೇಳಲಾರೆ’ ಎಂಬ ಸಮಾಧಾನಕರ ಉತ್ತರ ಕೇಳಿ ತಂದೆಯವರ ಕೋಪ ಭುಗಿಲೆದ್ದಿತು. ‘ನನ್ನ ಮಗನನ್ನು ಬಂಧಿಸಿಟ್ಟಿರುವುದರ ಕುರಿತು ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ಗುಡುಗಿದರು. ಅದಕ್ಕೆ ಅವರಿಗೆ ದೊರೆತದ್ದೂ ಅಷ್ಟೆ ಖಡಕ್ಕಾದ ಉತ್ತರ : ‘ಪೊಲೀಸ್ ಅಲ್ಲದಿದ್ದರೆ ಮಿಲಿಟರಿ ಕರೆತನ್ನಿ !’ ಆ ಸಮಯದಲ್ಲಿ ಗೆದ್ದವರು, ಆನಂದರಾವ್. ತಂದೆಯವರಿಗೆ ಮತ್ತೊಮ್ಮೆ ಅನುನಯಿಸಿ, ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸುವ ಸಾವಧಾನತೆ ಅವರಿಗೆ ಇತ್ತೆಂದೇ ಹತ್ತೆಂಟು ವರ್ಷಕಾಲ ಅವರು ಪ್ರಚಾರಕರಾಗಿ ಮುಂದುವರೆದರು. ಮಾತ್ರವಲ್ಲ, ನಂತರದ ದಿನಗಳಲ್ಲಿ ಸಂಸಾರಿಯಾಗಿದ್ದೂ ಸಂಘಕ್ಕೆ ಸಮರ್ಪಿತ, ಸಂಘದ ಭಕ್ತ ಸ್ವಯಂಸೇವಕ ಎಂಬುದನ್ನು ಕೃತಿಗಿಳಿಸಿ ತೋರಿದರು. 45 ವರ್ಷಗಳ ನಿಕಟ ಸಂಪರ್ಕ, ಮಾತುಕತೆ, ವಿಚಾರವಿನಿಮಯಕ್ಕೆ ಆನಂದರಾವ್ ನನಗೂ ದೊರಕಿದ್ದರು ಎಂದು ಅಭಿಮಾನದಿಂದ ಸ್ಮರಿಸಿಕೊಳ್ಳುವೆ.

 ಆತ್ಮೀಯ ಆನಂದರಾವ್ !

ದಶಕಗಳ ಹಿಂದೆ ನಾನು ಸಂಘ ಪ್ರಾಂತ ಕಾರ್ಯಾಲಯ ಕೇಶವ ಕೃಪಾ  ದಲ್ಲಿ ನಡೆಯುವ ಶಂಕರ ಸಾಯಂ ಶಾಖೆಯ ಮುಖ್ಯ ಶಿಕ್ಷಕ್ ಆಗಿ ಘೋಷಿತನಾದ ಮೊದಲ ದಿನ ನನ್ನ ಸ್ಮರಣೆಯಲ್ಲಿ ಇನ್ನೂ ಹಸಿರಾಗಿಯೇ ಇದೆ. ಆಗ  ಶ್ರೀ ಪ.ರಾ.ಆನಂದರಾವ್ ಅವರು ಕೇಶವ ಕೃಪಾದಲ್ಲಿ ಕಾರ್ಯಾಲಯ ಪ್ರಮುಖ್ ಆಗಿದ್ದರು. ಅಂದು ಸಂಜೆ ಕೇಶವ ಕೃಪಾಗೆ ಬಂದಕೂಡಲೆ ನನಗೆ ಸಿಕ್ಕ ಉಡುಗೊರೆ ಶಾಖೆ ನಡೆಸಲು ಅತಿ ಅಗತ್ಯವಾದ ಸೀಟಿ  ! ಅದನ್ನು ಪ್ರೀತಿಯಿಂದ ಕೊಟ್ಟವರು  ಶ್ರೀಯುತರೇ.  ಆ ಸೀಟಿಯ ಕಥೆಯನ್ನು ಶಾಖೆಯ ನಂತರ ಹೇಳುತ್ತೇನೆ  ಎಂದರು. ಶಾಖೆಯ ನಂತರ ಕೇಳಿದ ಆ ಕಥೆ ಇನ್ನೂ ನೆನಪಿದೆ. ಲಂಡನ್‌ನಲ್ಲಿ ನೆಲೆಸಿದ್ದ ಬೆಂಗಳೂರಿನ  ಶ್ರೀಮಾನ್ ಸತ್ಯನಾರಾಯಣರಾವ್ ಅವರು (ರಾಯರು ಎಂದೇ ಪ್ರಸಿದ್ಧಿ) ಒಮ್ಮೆ ಬೆಂಗಳೂರಿಗೆ ಬಂದಾಗ ಮೂರು ಸೀಟಿ ತಂದರು. ಒಂದನ್ನು ದಿ. ಅಜಿತಕುಮಾರ್ ಅವರಿಗೂ, ಇನ್ನೊಂದನ್ನು ದಿ. ಚಾಮು ಅವರಿಗೂ, ಮೂರನೆಯದನ್ನು ಪ.ರಾ.ಆ. ಅವರಿಗೂ ಕೊಟ್ಟರು. ಅವರ ಪಾಲಿಗೆ ಬಂದ ಅದು ಅಂದು ನನ್ನದಾಯಿತು. ಹೀಗಿತ್ತು ನನಗೂ  ಶ್ರೀಯುತರಿಗೂ ಇದ್ದ ಸಂಬಂಧ.

ಅವರು ಕೇಶವ ಕೃಪಾದಲ್ಲೇ ನಡೆಯುತ್ತಿದ್ದ  ಗುರುವಾರ ಶಾಖೆ  (ಪರಿವಾರ ಶಾಖೆ)ಯ ಕಾರ್ಯವಾಹ ಆಗಿದ್ದರು. ಆ ಸಮಯದಲ್ಲಿ ಕೊಂಚ ಕಾಲ ಶಾಖೆಗೆ ಮುಖ್ಯ ಶಿಕ್ಷಕ್ ಇರಲಿಲ್ಲ. ಅವರು ಕೇಶವ ಕೃಪಾದಲ್ಲಿ ಸಿಕ್ಕಾಗಲೆಲ್ಲ ನಾನು ಕುಚೋದ್ಯಕ್ಕಾಗಿ, ಏನು ಆನಂದರಾವ್, ಯಾರೂ ಮುಖ್ಯ ಶಿಕ್ಷಕ್ ಸಿಗಲಿಲ್ಲವೇ  ಎಂದು ಕೇಳುತ್ತಿದ್ದೆ. ಅವರು ಅವರದೇ ಶೈಲಿಯಲ್ಲಿ ನಕ್ಕು ಬಿಡುತ್ತಿದ್ದರು. ಕೊಂಚ ಕಾಲ ಕಳೆಯಿತು. ಮತ್ತೊಮ್ಮೆ ಸಿಕ್ಕಾಗ ಮತ್ತೆ ಅದೇ ಪ್ರಶ್ನೆ. ಅವರಿಗೇನು ಹೊಳೆಯಿತೋ… ವೂರನೇ ದಿನ ಮೈ.ಚ.ಜಯದೇವ ಅವರಿಂದ ನನಗೆ ದೂರವಾಣಿ ಕರೆ.   ಬಿಡುವಾದಾಗ ಬಾ . ಹೋದೆ.  ನೀನು ಯಾಕೆ ಗುರುವಾರ ಶಾಖೆಯ ಮುಖ್ಯ ಶಿಕ್ಷಕ್ ಆಗಬಾರದು ?! .  ಶ್ರೀಯುತರಿಗೆ ನಾನೆಂದೂ ಮರುತ್ತರ ಕೊಟ್ಟಿದ್ದೇ ಇಲ್ಲ ! ಹೀಗೆ ನಾನು ಗುರುವಾರ ಶಾಖೆಯ ಮುಖ್ಯ ಶಿಕ್ಷಕ್ ಆದದ್ದು !

 ಗುರುವಾರ ಶಾಖೆಯಲ್ಲಿ ಪ.ರಾ.ಆ. ಮತ್ತು ನನ್ನ ಜೋಡಿ ಅನೇಕರ  ಅಸೂಯೆಗೆ ಕಾರಣವಾಗಿತ್ತು ! ಹಾಗಿತ್ತು ನಮ್ಮ ಸಂಬಂಧ, ಅನ್ಯೋನ್ಯತೆ, ಪ್ರೀತಿ, ವಿಶ್ವಾಸ. ಅನೇಕರು ಇದನ್ನು ಗಮನಿಸಿ  ಎಂಥ ಜೋಡಿ  ಎಂದು ಉದ್ಗಾರ ತೆಗೆದಿದ್ದರು. ಶಾಖೆಯಲ್ಲಿ ಅನೇಕ ಕಾರ್ಯಕ್ರಮಗಳು, ಅವಿರತ ಸಂಪರ್ಕ, ಮಾರ್ಗದರ್ಶನ. ಈಗಿನಂತೆ ದೂರವಾಣಿಯ ಮೂಲಕ ಅಲ್ಲ, ಮನೆಗೆ ಹೋಗಿ ಭೇಟಿ, ಮಾತುಕತೆ. ವರ್ಷಕ್ಕೊಮ್ಮೆ ಶಾಖಾ ಸಹಲ್ ಇತ್ಯಾದಿ, ಇತ್ಯಾದಿ. ನಾವು ಹೋಗದ ಶಾಖೆಯ ಸ್ವಯಂಸೇವಕರ ಮನೆಗಳಿಲ್ಲ ಎನ್ನುವಂತಿತ್ತು. ಕೆಲವು ಪದ್ಧತಿಗಳನ್ನು ಭದ್ರವಾಗಿಸಿದೆವು. ಬದಲಾವಣೆ ಜಗದ ನಿಯಮ ! ಹಾಗಾಗಿ ನಾನು ಕಾರ್ಯವಾಹನಾದೆ. ಅವರ ಮಾರ್ಗದರ್ಶನ ಮಾತ್ರ ಅದೇ ರೀತಿ ಮುಂದುವರೆದಿತ್ತು. ನನ್ನ ಮುಖ್ಯ ಶಿಕ್ಷಕ್ ಅವಧಿಯ ನಂತರವೂ ಅದು ಮುಂದುವರೆದಿದ್ದು ಕೊನೆಯವರೆಗೂ ಇತ್ತು.

 ಅಬಲಾಶ್ರಮದಲ್ಲಿ ನಡೆಯುವ ಕೆಲ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ಮಾರ್ಗದರ್ಶನ ಮಾಡುತ್ತಿದ್ದರು. ಹಾಗೊಮ್ಮೆ ಬಂದಿದ್ದಾಗ ಅವರು,  ಆಶ್ರಮದಲ್ಲಿ ಗ್ರಂಥಾಲಯವಿದೆಯೇ ?  ಎಂದು ಕೇಳಿದರು. ನಾನು,  ಇದೆ, ಆದರೆ ವ್ಯವಸ್ಥಿತವಾಗಿಲ್ಲ  ಎಂದೆ. ನೇರವಾಗಿ  ಅವಕಾಶವಿದ್ದರೆ ನಾನು ಮಾಡಬಲ್ಲೆ  ಎಂದವರು ಹೇಳಿದಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಪ್ರಾರಂಭದಲ್ಲಿ ವಾರಕ್ಕೆ ಒಂದು ಬಾರಿ ಬರುತ್ತಿದ್ದರು. ನಂತರ ವಾರಕ್ಕೆ ಮೂರು ದಿನ ಬರಲು ಪ್ರಾರಂಭ ಮಾಡಿ ಕಳೆದ 4 – 5 ತಿಂಗಳ ತನಕ (ಕೈಲಾಗುವವರೆಗೂ) ಬಂದರು. ಅದನ್ನು thematic library ಯನ್ನಾಗಿ ಮಾಡಲು ಉಪಕ್ರಮಿಸಿದರು. ಸಾಮಾನ್ಯ ಪುಸ್ತಕಗಳ ಜೊತೆಗೆ ಮಹಿಳೆಯರಿಗೆ ಸಂಬಂಧಿತ ಪುಸ್ತಕಗಳಿಗೆ ಸೀಮಿತವಾಗಿರಬೇಕೆಂಬುದು ಅವರ ಇಚ್ಛೆಯಾಗಿತ್ತು. ಅವರ ಭಾಷೆಯಲ್ಲೇ ಹೇಳುವುದಾದರೆ… ನಮ್ಮದು ಈಗ ಗ್ರಂಥ ಭಂಡಾರ, ಸ್ವಲ್ಪ ಕಾಲಾನಂತರ ಅಧ್ಯಯನ ಕೇಂದ್ರ, ಅಂತಿಮವಾಗಿ ಸಂಶೋಧನಾ ಕೇಂದ್ರ ್ಫ ಇದು ಅವರ ಕಲ್ಪನೆ. ಆ ದಿಕ್ಕಿನಲ್ಲಿ ಅವರ ಯೋಚನೆ, ಯೋಜನೆ ಸಾಗಿತ್ತು. ವಾರಕ್ಕೆ ಮೂರು ಬಾರಿ ಕಷ್ಟಪಟ್ಟು ಬರುತ್ತಿದ್ದರು; ಇಷ್ಟಪಟ್ಟು ಬರುತ್ತಿದ್ದರು; ತಪ್ಪದೆ ಬರುತ್ತಿದ್ದರು.  ನಾನೀಗ grace period ನಲ್ಲಿದ್ದೇನೆ,  ಎಂದು ಪದೇ ಪದೇ ಹೇಳುತ್ತಿದ್ದರು. ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳ ಸಂಗ್ರಹ (paper cutting)   ಅನೂಚಾನವಾಗಿ ನಡೆದಿತ್ತು.

ಒಂದು ಪುಸ್ತಕ ಆಚೀಚೆ ಹೋದರೆ ಅವರಿಗೆ ಬೇಜಾರಾಗುತ್ತಿತ್ತು. ಅವರೊಬ್ಬ perfectionist… ಎಲ್ಲವೂ ವ್ಯವಸ್ಧಿತವಾಗಿ ಆಗಬೇಕು,  ಅಚ್ಚುಕಟ್ಟಾಗಿ ಆಗಬೆಕು, ಅದಕ್ಕೆ ಅವರಿಗೆ ಅಚ್ಚುಕಟ್ಟು ಆನಂದ ರಾವ್ ಎಂಬ ಬಿರುದಾಂಕಿತವಾಯಿತು. ಕೊನೆಯವರೆಗೂ ಹಾಗೇ ಇದ್ದರು .

  ನನಗೆ ಅವರೊಬ್ಬ ಆತ್ಮೀಯ ಸ್ನೇಹಿತ, ಹಿತ್ಯೆಷಿ, ಮಾರ್ಗದರ್ಶಕ ಆಗಿದ್ದರು.

 

   

Leave a Reply