ಅಜೀರ್ಣೇ ಭೇಷಜಂ ವಾರಿ

ಚಿಂತನ - 0 Comment
Issue Date : 29.04.2015

ಊಟದ ವೇಳೆ ನೀರನ್ನು ಯಾವಾಗ, ಎಷ್ಟು ಕುಡಿಯಬೇಕು ಎನ್ನುವುದು ಅನೇಕರಿಗೆ ತಿಳಿದಿರುವುದಿಲ್ಲ. ಕೆಲವರು ಊಟಕ್ಕೆ ಮುನ್ನ, ಇಲ್ಲವೇ ಊಟದ ನಂತರ ಧಾರಾಳವಾಗಿ ನೀರನ್ನು ಕುಡಿಯುತ್ತಾರೆ. ಕೆಲವರು ಊಟದ ನಡು ನಡುವೆ ಕುಡಿದು ಬಿಡುತ್ತಾರೆ. ಕೆಲವರು ಹೆದರಿ ಭೋಜನದ ಸಮಯದಲ್ಲಿ ನೀರನ್ನೇ ಕುಡಿಯುವುದಿಲ್ಲ. ನಾರು, ಮಜ್ಜಿಗೆ ಇತ್ಯಾದಿಗಳಲ್ಲಿ ಸಾಕಷ್ಟು ನೀರಿನ ಪ್ರಮಾಣ ಇದೆಯಲ್ಲ ಅಂದುಕೊಳ್ಳುತ್ತಾರೆ. ಅಂತೂ ನೀರಿನ ಹಿತ – ಮಿತ ಬಳಕೆಯ ಕುರಿತು ಸ್ಪಷ್ಟವಾದ ಅಭಿಪ್ರಾಯ ಕೊಡುವವರು ವಿರಳ.
ಆದರೆ ಚಾಣಕ್ಯ ನೀತಿ ದರ್ಪಣದಲ್ಲಿ ಈ ಕುರಿತು ಸ್ಪಷ್ಟವಾದ ನಿಲುವು ಪ್ರಕಟವಾಗಿದೆ: ‘ಅಜೀರ್ಣೇಭೇಷಜಂ ವಾರಿ, ಜೀರ್ಣೇವಾರಿ ಬಲಪ್ರದಂ! ಭೋಜನೇಚಾಮೃತಂ ವಾರಿ, ಭೋಜನಾಂತೇ ವಿಷಪ್ರದಂ’. ಅಂದರೆ ಅಧಿಕ ಭೋಜನ ಅಥವಾ ಅಜೀರ್ಣ ಸ್ಥಿತಿಯಲ್ಲಿ ನೀರು ಔಷಧದಂತೆ ಕೆಲಸ ಮಾಡುತ್ತದೆ. ಉಂಡ ಆಹಾರವು ಜೀರ್ಣವಾದ ಬಳಿಕ ನೀರು ಬಲಕಾರಿಯಾಗಿದೆ. ಭೋಜನದ ಮಧ್ಯದಲ್ಲಿ ನೀರಿನ ಸೇವನೆ ಅಮೃತ ಸಮಾನ. ಆದರೆ ಭೋಜನದ ಕೊನೆಯಲ್ಲಿ ಜಲಪಾನ ಮಾಡುವುದು ವಿಷಪ್ರದ.
ಮನುಷ್ಯನ ಆರೋಗ್ಯಕ್ಕೆ ಜಲಪಾನ ತುಂಬ ಅಗತ್ಯವಾದದ್ದು ಎಂಬುದರ ಬಗೆಗೆ ಎರಡು ಮಾತಿಲ್ಲ. ಆದರೆ ನೀರನ್ನೇ ಅತಿಯಾಗಿ ಸೇವಿಸುವುದು ಗುಣಕಾರಿಯಲ್ಲ. ಅದೇ ರೀತಿ ನೀರು ಕುಡಿಯುವುದರಿಂದ ದೋಷ ಬಂದೀತೇನೋ ಎಂಬ ಸಂದೇಹದಿಂದ ಜಲಪಾನವನ್ನೇ ಮಾಡದಿರುವುದು ಕೂಡ ದೋಷವೇ ಆಗುತ್ತದೆ. ಆದ್ದರಿಂದ ಊಟದ ನಡುನಡುವೆ ಸ್ವಲ್ಪ ಸ್ವಲ್ಪ ಜಲ ಸೇವನೆ ಮಾಡುವುದು ಅತ್ಯವಶ್ಯ ಎಂದು ನೀತಿಕಾರರು ಹೇಳುತ್ತಾರೆ.
ಇದನ್ನೇ ವಾಗ್ಭಟ, ಸುಶ್ರುತ, ಭಾವಮಿಶ್ರ ಪಂಡಿತ ಮುಂತಾದ ಆಯುರ್ವೇದ ಪರಿಣತರು ವೈಜ್ಞಾನಿಕವಾಗಿ ಸಮರ್ಥಿಸುತ್ತಾರೆ. ವಾಗ್ಭಟಾಚಾರ್ಯರ ಅಭಿಪ್ರಾಯದ ಪ್ರಕಾರ ಭೋಜನದ ನಡುವೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಕುಡಿಯುವುದರಿಂದ ಸಪ್ತಧಾತುಗಳು (ರಸ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ, ಶುಕ್ಲ) ಸಮಾನತೆಯನ್ನು ಹೊಂದುತ್ತವೆ. ತತ್ ಪರಿಣಾಮವಾಗಿ ಶರೀರವು ಮಿತಿಮೀರಿ ತೆಳ್ಳಗೂ ಆಗದೆ, ಅತಿಯಾಗಿ ದಪ್ಪಗೂ ಆಗದೆ ಸಮಸ್ಥಿತಿಯನ್ನು ಹೊಂದುತ್ತವೆ. ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ಪ್ರಜ್ವಲಗೊಂಡಿರುವ ಜಠರಾಗ್ನಿಯು ಬಹಳಷ್ಟು ಮಂದವಾಗಿ ಆಹಾರದ ಪಚನಕ್ರಿಯೆಗೆ ಅಡ್ಡಿಯಂಟಾಗುತ್ತದೆ. ಏಕೆಂದರೆ ಮಂದಾಗ್ನಿಯಿಂದ ಪಾಕಗೊಂಡ ಆಹಾರ ಪದಾರ್ಥಗಳು ರಸೋತ್ಪತ್ತಿ ಮಾಡಲಾರವು. ರಸಾಭಾವದಿಂದ ಧಾತುಗಳು ಕ್ಷೀಣಗೊಳ್ಳುವುದರಿಂದ ಪುಷ್ಟವಾಗಬೇಕಾದ ಶರೀರವು ದಿನೇ ದಿನೇ ಕ್ಷೀಣವಾಗುತ್ತಾ ಹೋಗುತ್ತದೆ.
ಇನ್ನು ಊಟವಾದ ಕೂಡಲೇ ನೀರು ಸೇವಿಸಿದರೆ ಏನಾಗುತ್ತದೆ? ಆಮಾಶಯದಲ್ಲಿ ಕಫದ ಪ್ರಮಾಣವು ಅಧಿಕಗೊಂಡು ಅದರ ಪರಿಣಾಮವಾಗಿ ಶರೀರವು ಸ್ಥೂಲಗೊಳ್ಳುತ್ತದೆ. ಹಾಗಂತ ಭೋಜನಾಂತ್ಯದಲ್ಲಿ ಒಂದೆರಡು ಗುಟುಕು ನೀರು ಕುಡಿದರೆ ದೋಷವಾಗಲಾರದು. ಆದ್ದರಿಂದ ಮಂದಾಗ್ನಿ ಹಾಗೂ ಕೃಶತ್ವ ತರುವ ಮೊದಲ ಪಾನವನ್ನೂ, ಶ್ಲೇಷ್ಮಾಧಿಕ್ಯ ಮತ್ತು ಸ್ಥೂಲತೆ ತರುವ ಕೊನೆಯ ಪಾನವನ್ನೂ ತಜ್ಞ ವೈದ್ಯರು ನಿರಾಕರಿಸಿರುವುದು ಸಮಂಜಸವಾಗಿದೆ.

– ಅರ್ತಿಕಜೆ

   

Leave a Reply