‘ಅಣ್ಣಾ ಹಜಾರೆಗೆ ಸ್ಫೂರ್ತಿಯಾಗಿದ್ದು ಸ್ವಾಮಿ ವಿವೇಕಾನಂದ’

ಬಳ್ಳಾರಿ - 0 Comment
Issue Date : 06.12.2013

ಹಗರಿಬೊಮ್ಮನಹಳ್ಳಿ: ಡಿ. 29ರಂದು ಹಂಪಾಪಟ್ಟಣ ಗ್ರಾಮದಲ್ಲಿ ಮನೆ ಮನೆಗೆ ಸ್ವಾಮಿ ವಿವೇಕಾನಂದ ಎಂಬ ಗ್ರಾಮ ಅಭಿಯಾನವನ್ನು ಆಯೋಜಿಸಲಾಗಿತ್ತು. ಮುಖ್ಯ ವಕ್ತಾರರಾಗಿ ರಾಷ್ಟ್ರೋತ್ಥಾನ ಕಾಲೇಜಿನ ಉಪನ್ಯಾಸಕರಾದ ವೀರೇಶ್.ಎಸ್.ವಿ. ಕಾರ್ಯಕ್ರಮವನ್ನುದ್ದೇಶಿಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಅಧ್ಯಯನ ಮಾಡಬೇಕು. ಅವರ ಜೀವನ ಚರಿತ್ರೆಯನ್ನು ಕೇವಲ ಓದಿ-ಬಿಡುವುದಲ್ಲ. ವಿವೇಕಾನಂದರನ್ನು ಅಧ್ಯಯನ ಮಾಡುವುದೆಂದರೆ ಸಮಗ್ರ ಭಾರತವನ್ನು ಒಳಹೊಕ್ಕು ವೀಕ್ಷಿಸಿದಂತೆ. ಸಮಗ್ರ ಹಿಂದು ಧರ್ಮವನ್ನು ಅರಿತು ಮೈಗೂಡಿಸಿಕೊಂಡಂತೆ ಅಷ್ಟೇ ಅಲ್ಲ , ವಿಶ್ವ ಭ್ರಾತೃತ್ವದ ವಿಶಾಲ ಭಾವವನ್ನು ಅಭ್ಯಸಿಸಿದಂತೆ. ಮಾನವತೆಯ ಮರ್ಮವನ್ನು ಮಥಿಸಿ, ಮನನ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು. ಜೀವನದಲ್ಲಿ ರೋಸಿ ಹೋಗಿದ್ದ ಅಣ್ಣಾ ಹಜಾರೆ ಸಾಯಲು ರೈಲ್ವೇ ಸ್ಟೇಷನ್ನಿಗೆ ಬಂದಿದ್ದರು. ರೈಲು ಬರಲು ತಡವಾಗಿದ್ದರಿಂದ ಪ್ಲಾಟ್‌ಫಾರ್ಮ್ ಮೇಲೆ ಅಡ್ಡಾಡುತ್ತಿದ್ದರು. ಈ ಸಂದರ್ಭದಲ್ಲಿ ಒಂದು ಪುಸ್ತಕಾಲಯದ ಕಡೆಗೆ ಕಣ್ಣು ಹಾಯಿಸಿದರು. ಅಲ್ಲಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಎಂಬ ಪುಸ್ತಕವನ್ನು ನೋಡಿ ಖರೀದಿಸಿದರು. ಆ ಪುಸ್ತಕವನ್ನು ಓದುತ್ತಾ ಹೋದಂತೆ ಸಾಯಲು ಬಂದ ಈ ವ್ಯಕ್ತಿಗೆ ವಿವೇಕಾನಂದ ವಿಚಾರಧಾರೆಗಳು ಸ್ಫೂರ್ತಿಯ ಚಿಲುಮೆಯಾಗಿ ರಾಷ್ಟ್ರಾದ್ಯಂತ ಸಾಮಾಜಿಕ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಯಿತು ಎಂದರು. ಕರ್ನಾಟಕದ ಬೆಂಗಳೂರಿನಲ್ಲಿ ವೈಜ್ಞಾನಿಕ ಕೇಂದ್ರವನ್ನು ಸ್ಥಾಪಿಸಲು ಸ್ವಾಮಿ ವಿವೇಕಾನಂದರು ಜೇಮಷಡ್‌ಜೀ ಟಾಟಾರವರಿಗೆ ಪ್ರೇರಣೆ ನೀಡಿದರು. ಶ್ರದ್ಧೆ ಪ್ರಾಮಾಣಿಕತೆ, ನಂಬಿಕೆಯನ್ನು ರೂಢಿಸಿಕೊಂಡವರೆಲ್ಲರೂ ಮಹತ್ ಸಾಧನೆಯನ್ನು ಮಾಡುತ್ತಾರೆಂಬುದನ್ನು ವಿವೇಕಾನಂದರ ವಿಚಾರಗಳಿಂದ ತಿಳಿಯಬಹುದು ಎಂದರು.
ಸುರೇಶ್ ಕಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಊರಿನ ಗಣ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಮನೆ ಮನೆಗೆ ವಿವೇಕಾನಂದರ ಭಾವಚಿತ್ರ ಮತ್ತು ಕರಪತ್ರವನ್ನು ವಿತರಿಸಿದರು.

   

Leave a Reply