ಅದ್ವೈತ ತಾನಾಗಿ

ಚಿಂತನ - 0 Comment
Issue Date : 15.04.2015

ಇರುವುದು ಒಂದೇ ಬ್ರಹ್ಮ. ಅದು ಏಕಮೇವಾದ್ವಿತೀಯವಾದುದು. ದ್ವೈತ ಅಥವಾ ಎರಡು ಇಲ್ಲದ್ದು ಎಂದು ಅದ್ವೈತ ಸಿದ್ಧಾಂತವು ಸಾರುತ್ತದೆ. ಶಂಕರಾಚಾರ್ಯರು ಹೇಳುವ ಪ್ರಕಾರ ‘ಬ್ರಹ್ಮವೇ ಸತ್ಯ. ಜಗತ್ತು ಮಿಥ್ಯ. ಜೀವವೂ ಬ್ರಹ್ಮವೇ. ಅದಕ್ಕಿಂತ ಬೇರೆಯಿಲ್ಲ.’ ವಿಶ್ವದಲ್ಲಿರುವ ತತ್ತ್ವವು ಒಂದೇ ಆಗಿದ್ದರೆ ಅದು ಹಲವಾಗಿ ತೋರುವುದೇಕೆ? ಇದು ಹಲವರನ್ನು ಕಾಡುವ ಪ್ರಶ್ನೆ. ಇದಕ್ಕೆ ಮಾಯೆಯೇ ಕಾರಣವೆಂದು ಶಂಕರಾಚಾರ್ಯರು ಹೇಳುತ್ತಾರೆ. ಇಲ್ಲದಿರುವುದನ್ನು ಇರುವಂತೆ ತೋರಿಸಿಕೊಡುವ ಶಕ್ತಿಯೇ ಮಾಯೆ. ಈ ಮಾಯೆಯಿಂದಾಗಿ ಈಶ್ಚರ, ಜೀವ, ಜಗತ್ತು, ಇಂದ್ರಿಯಗಳು ಇವೆ ಮತ್ತು ಇವೆಲ್ಲ ಬೇರೆ ಬೇರೆ ಎನ್ನುವ ಭ್ರಮೆ ಉಂಟಾಗುತ್ತದೆ. ಮಾಯೆಯ ತೆರೆ ಹರಿದಾಗ ಬ್ರಹ್ಮ ಸಾಕ್ಷಾತ್ಕಾರವಾಗುತ್ತದೆ.
‘ಅದ್ವೈತ ತಾನಾಗಿ ಯುದ್ಧವಿನ್ನಾರೊಡನೆ?’ ಎಂಬ ವಾಕ್ಯಮಾಣಿಕ್ಯವನ್ನು ರೂಪಿಸಿದವನು ಸರ್ವಜ್ಞ ಕವಿ. ಅದ್ವೈತ ತತ್ತ್ವದ ಮಹತ್ತ್ವವನ್ನು ಅವನು ಸೊಗಸಾದ ತ್ರಿಪದಿಯೊಂದರಲ್ಲಿ ಕಂಡರಿಸಿದ್ದಾನೆ. ಲೋಕದಲ್ಲಿ ಜನ ಪರಸ್ಪರ ಕಾದಾಟ, ಹೊಡೆದಾಟ ನಡೆಸುವುದು, ಒಬ್ಬರನ್ನೊಬ್ಬರು ತಾರತಮ್ಯ ದೃಷ್ಟಿಯಿಂದ ನೋಡುವುದು ಎಲ್ಲರೂ ಬೇರೆ ಬೇರೆ ಎಂಬ ತಪ್ಪು ಕಲ್ಪನೆಯಿಂದ ತಾನೇ? ಅದ್ವೈತನು ತಾನು (ಎರಡಿಲ್ಲದವನು) ತಾನೇ ಬ್ರಹ್ಮ ಎಂದು ತಿಳಿದವನಿಗೆ ಯಾರೊಂದಿಗೂ ಯುದ್ಧಕ್ಕೆ ಆಸ್ಪದವಿಲ್ಲ. ಏಕೆಂದರೆ ಅವನ ದೃಷ್ಟಿಯಲ್ಲಿ ಎಲ್ಲವೂ ಒಂದೇ, ಎಲ್ಲರೂ ಒಂದೇ.
‘ಸರ್ವಂ ಖಲ್ವಿದಂ ಬ್ರಹ್ಮ’ (ಎಲ್ಲವೂ ಬ್ರಹ್ಮವೇ) ಎಂಬ ಅನುಭವ ಉಂಟಾಗುವವರೆಗೆ ಎಲ್ಲವೂ ಬೇರೆ ಬೇರೆಯಾಗಿ ಕಾಣಿಸುತ್ತದೆ. ಬ್ರಹ್ಮವೇ ಆಗಿರುವ ಜಗತ್ತು ಭಿನ್ನವಾಗಿ ಗೋಚರಿಸುತ್ತದೆ. ಉದಾಹರಣೆಗೆ ಹಗ್ಗವೊಂದು ನಸುಗತ್ತಲಲ್ಲಿ ಹಾವಾಗಿ ಕಾಣಿಸಿ ನಮ್ಮಲ್ಲಿ ಭಯ ಹುಟ್ಟಿಸುತ್ತದೆ. ಆದರೆ ಅದರ ಮೇಲೆ ಬೆಳಕನ್ನು ಹಾಯಿಸಿ ನೋಡಿದಾಗ ಅದು ಯಾವುದೇ ಅಪಾಯ, ಚಲನೆಗಳಿಲ್ಲದ ಹಗ್ಗವೆಂಬುದು ಗೊತ್ತಾಗುತ್ತದೆ. ಇಲ್ಲಿ ಹಗ್ಗವು ಹಾವಾಗಿ ತೋರಿತೇ ವಿನಾ ಹಾವು ಇರಲೇ ಇಲ್ಲ. ಇದೇ ರೀತಿ ಅಜ್ಞಾನದಿಂದಾಗಿ ಬ್ರಹ್ಮದ ಭಾಗವೇ ಆಗಿರುವ ಜಗತ್ತು ಬೇರೆಯಾಗಿ ಕಾಣಿಸುತ್ತದೆ. ಜ್ಞಾನದ ಬೆಳಕನ್ನು ಬಳಸಿ ನೋಡಿದಾಗ ಮಾತ್ರ ಜಗತ್ತು ಮಿಥ್ಯೆ ಎನ್ನುವುದರ ಅರಿವು ಉಂಟಾಗುತ್ತದೆ.
ಸನಾತನ ಧರ್ಮವು ಪ್ರತಿಪಾದಿಸಿದ ಕರ್ಮ, ಭಕ್ತಿ, ಯೋಗ ಮಾರ್ಗಗಳಿಗೆ ಅದ್ವೈತ ಸಿದ್ಧಾಂತವು ವಿರೋಧಿಯೇನೂ ಅಲ್ಲ. ಆದರೆ ಅದು ಪ್ರಾಧಾನ್ಯ ನೀಡಿದ್ದು ಜ್ಞಾನಮಾರ್ಗಕ್ಕೆ. ಜಗತ್ತಿನ ಮಿಥ್ಯತೆಯನ್ನು ಮತ್ತು ಜೀವ ಬ್ರಹ್ಮ ಅಭೇದವನ್ನು ಯಾರು ತಿಳಿದುಕೊಳ್ಳುತ್ತಾರೋ ಅವರಿಗೆ ಮೋಕ್ಷ ನಿಶ್ಚಿತ ಎಂದು ಅದು ಹೇಳುತ್ತದೆ.
ಸರ್ವಜ್ಞನ ನುಡಿಮುತ್ತಿನಂತೆ ‘ಬುದ್ಧಿಯಿಂ ತನ್ನನರಿದಂಗೆ ಲೋಕದಾ ಗುದ್ದಾಟವಿಲ್ಲ.’ ಬುದ್ಧಿಶಕ್ತಿಯನ್ನು ಬಳಸಿಕೊಂಡು ಯಾರು ತನ್ನನ್ನು ತಾನು ತಿಳಿದುಕೊಳ್ಳುತ್ತಾನೋ, ಅದ್ವೈತ ವೇದಾಂತವನ್ನು ಪೂರ್ತಿಯಾಗಿ ಮೈಗೂಡಿಸಿಕೊಳ್ಳುತ್ತಾನೋ ಅವನಿಗೆ ಜಗತ್ತಿನ ಯಾವ ವ್ಯಕ್ತಿಯೊಂದಿಗೂ ಗುದ್ದಾಟವಾಡುವ ಪ್ರಮೇಯ ಉಂಟಾಗುವುದೇ ಇಲ್ಲ. ಏಕೆಂದರೆ ಒಂದಕ್ಕಿಂತ ಬ್ರಹ್ಮಕ್ಕಿಂತ ಬೇರೆಯಾದ ಯಾವ ಘಟ ಕವೂ ಇಲ್ಲವೆಂದಾದ ಮೇಲೆ ಯಾರೊಂದಿಗೆ ಜಗಳವಾಡುವುದು?
ತನಗಿಂತ ಇತರರು ಬೇರೆಯವರು ಎನ್ನುವ ತಪ್ಪು ಕಲ್ಪನೆ ಮಾಡಿಕೊಂಡು, ಜಾತಿ – ಮತ – ಪಂಥ – ಪಂಗಡ – ಬಣ್ಣ – ಪ್ರದೇಶ ಮುಂತಾದ ಭೇದಗಳನ್ನು ಆರೋಪಿಸಿ ಜಗಳವಾಡುವುದು ಮನುಷ್ಯನ ಅಜ್ಞಾನದ ಲಕ್ಷಣ ಎಂಬುದು ಇಲ್ಲಿ ವ್ಯಕ್ತವಾಗುತ್ತದೆ.

   

Leave a Reply