ಅಧಮಾ ಧನಮಿಚ್ಛಂತಿ

ಧಾರ್ಮಿಕ - 0 Comment
Issue Date : 06.04.2015

ದೇಶ ಮತ್ತು ಕಾಲಗಳ ವ್ಯತ್ಯಾಸವಿಲ್ಲದೆ ಎಲ್ಲ ಸಮಾಜದಲ್ಲೂ ಅಧಮರು, ಮಧ್ಯಮರು ಮತ್ತು ಉತ್ತಮರು ಯಾವಾಗಲೂ ಕಾಣಸಿಗುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಈ ಮೂರು ವರ್ಗಗಳ ನಡುವೆ ಸಾಕಷ್ಟು ತಾರತಮ್ಯಗಳಿರುತ್ತವೆ. ಆದರೆ ಎಲ್ಲದರಲ್ಲೂ ಮೇಲುಗೈ ಸಾಧಿಸಿ ಎತ್ತರದ ಸ್ಥಾನವನ್ನು ಅಲಂಕರಿಸುವವರು ಉತ್ತಮರೇ ಎನ್ನುವುದು ಗಮನಾರ್ಹ. ಹೀಗಾಗಿಯೇ ಅವರನ್ನು ಶ್ರೇಷ್ಠರೆಂದು ಗುರುತಿಸಲಾಗುತ್ತದೆ.
 ಚಾಣಕ್ಯನು ಹೇಳುವ ಪ್ರಕಾರ “Aಧಮಾ ಧನಮಿಚ್ಛಂತಿ, ಧನಂ ಮಾನಂಚ ಮಧ್ಯಮಾಃ ಉತ್ತಮಾ ಮಾನಮಿಚ್ಛಂತಿ ಮಾನೋ ಹಿ ಮಹತಾಂ ಧನಮ್’॥(ಅಧಮರು ಧನವನ್ನಷ್ಟೇ ಇಚ್ಛಿಸುತ್ತಾರೆ. ಮಧ್ಯಮರಿಗೆ ಧನವೂ ಬೇಕು, ಮಾನವೂ ಬೇಕು. ಉತ್ತಮರು ಮಾನವನ್ನೇ ಅಪೇಕ್ಷಿಸುವರು. ಏಕೆಂದರೆ ಅವರ ಪಾಲಿಗೆ ಮಾನವೇ ಬಲುದೊಡ್ಡ ಸಂಪತ್ತು).
 ತೀರಾ ಕೆಳ ಶ್ರೇಣಿಯ ಮಂದಿ ಹಣವನ್ನಷ್ಟೇ ಇಷ್ಟಪಡುವುದು ಸಹಜ. ಇದಕ್ಕೆ ಕಾರಣವೆಂದರೆ ಹಣಕೊಟ್ಟು ಕೊಳ್ಳಬಹುದಾದ ವಸ್ತುಗಳ ಬಾಹ್ಯ ಗೌರವ – ಗೌಜಿಗಳಿಗೆ ಅವರು ಮಾರುಹೋಗಿರುತ್ತಾರೆ. ಜೇಬಿನಲ್ಲಿ ದುಡ್ಡಿದ್ದರೆ ಬೇಕು ಬೇಕಾದ ತಿನಿಸುಗಳನ್ನು ಕೊಂಡು ತಿನ್ನಬಹುದು, ಹೊಟ್ಟೆ ತುಂಬ ಬಗೆ ಬಗೆಯ ಭಕ್ಷ್ಯಗಳನ್ನು ಉಣ್ಣಬಹುದು. ಬಣ್ಣ ಬಣ್ಣದ ನಾನಾ ನಮೂನೆಯ ಉಡುಪು ತೊಡುಪುಗಳನ್ನು ಧರಿಸಿಕೊಂಡು ಓಡಾಡಬಹುದು. ವಿಶಾಲವಾದ, ಸಕಲ ಸೌಕರ್ಯ ಸಾಧನಗಳಿಂದ ಕೂಡಿದ ವಸತಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದು. ಅಶನ – ವಸನ – ವಸತಿಗಳೆಂಬ ತ್ರಿವಿಧ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಿಂತ ಅಧಿಕ ಮಾನವಾದರೂ ಯಾತರದು? ಈ ಭಾವನೆ ಅವರದು.
 ಆದರೆ ಮಧ್ಯಮರಿಗೆ ಕೇವಲ ಹಣ ಸಾಕಾಗುವುದಿಲ್ಲ. ಕೆಳಹಂತದವರಿಗಿಂತ ಹೆಚ್ಚು ಚಿಂತನ ನಡೆಸುವ ಸಾಮರ್ಥ್ಯ ಅವರಲ್ಲಿರುವುದರಿಂದ, ಸಮಾಜದಲ್ಲಿ ಗುರುತಿಸಲ್ಪಡಬೇಕಾದರೆ ಒಂದಷ್ಟು ಗೌರವವೂ ಅವಶ್ಯ ಎಂಬುದನ್ನು ತಿಳಿದು ಕೊಂಡಿರುತ್ತಾರೆ. ಈ ಮಾನವು ತಾವು ತಲುಪಿದ ಸ್ಥಾನದ್ದಿರಬಹುದು, ಅಧಿಕಾರದ್ದಿರ ಬಹುದು ಅಥವಾ ಮಾಡಿದ ಸತ್ಕಾರ್ಯಗಳ ಪರಿಣಾಮವಾಗಿ ತಮಗೆ ಬಂದ ಕೀರ್ತಿಯದ್ದಿರಬಹುದು. ಹೀಗಾಗಿ ನಡುವಣ ಮಂದಿ ಸಾಧನೆಯ ಕ್ಷೇತ್ರದಲ್ಲಿ ಕೊಂಚವಾದರೂ ಮೇಲಕ್ಕೆ ಸಾಗಲು ಪ್ರಯತ್ನ ಮಾಡುತ್ತಾರೆ.
 ಉತ್ತಮರಾದವರು ಮಾನವೊಂದನ್ನೇ ಗುರಿಯಾಗಿ ಇಟ್ಟುಕೊಂಡಿ ರುತ್ತಾರೆ. ಏಕೆಂದರೆ ಮಾನ (ಗೌರವ)ವೇ ಅವರ ದೃಷ್ಟಿಯಲ್ಲಿ ಬಲುದೊಡ್ಡ ಶ್ರೀಮಂತಿಕೆ. ಶ್ರೇಷ್ಠತೆಗೆ, ಹಿರಿಮೆಗೆ ಜಗತ್ತು ಕೊಡುವಷ್ಟು ಬೆಲೆಯನ್ನು ಇನ್ಯಾವುದಕ್ಕೂ ಕೊಡುವುದಿಲ್ಲ. ಜೀವನದಲ್ಲಿ ಮನುಷ್ಯ ಎಷ್ಟೇ ಹಣ ಸಂಪಾದಿಸಬಹುದು, ಕುತಂತ್ರ – ದುರಾಚಾರಗಳ ಮೂಲಕ ಅಧಿಕಾರ – ಅಂತಸ್ತುಗಳನ್ನು ಗಳಿಸಬಹುದು, ನೀರಿನಂತೆ ದುಡ್ಡು ಖರ್ಚು ಮಡಿ ಲಕ್ಷಗಟ್ಟಲೆ ಜನರಿಂದ ಹೊಗಳಿಸಿಕೊಳ್ಳಬಹುದು – ಆದರೆ ವ್ಯಕ್ತಿ ಮಾನಗೆಟ್ಟು ನಡೆದುಕೊಂಡರೆ ಇವೆಲ್ಲವೂ ನೀರಲ್ಲಿಟ್ಟ ಹೋಮದಂತಾಗುತ್ತದೆ. ಯಾರೂ ಕೂಡ ಆತನಿಗೆ ಗೌರವ ನೀಡುವುದಿಲ್ಲ.
 ‘ಮಾನ ಸಹಿತ ವಿಷ ಕುಡಿದ ಶಂಭುವದೊ
 ಮೆರೆವನಾಗಿ ಜಗದೀಶ
 ಮಾನಗೆಟ್ಟಮೃತಪಾನ ಮಾಡಿದರೆ
 ರಾಹುಗಾಯ್ತು ತಲೆನಾಶ’
 ಸಮುದ್ರ ಮಂಥನ ಕಾಲದ ಹಾಲಾಹಲ ಮತ್ತು ಅಮೃತಗಳಿಗೆ ಸಂಬಂಧಿಸಿದ ಈ ಕಥೆ ಮಾನದ ಶ್ರೇಷ್ಠತೆಯನ್ನೂ, ಮಾನರಾಹಿತ್ಯದ ಅವಗುಣವನ್ನೂ ಏಕಕಾಲಕ್ಕೆ ಮನ ಮುಟ್ಟುವ ಹಾಗೆ ವರ್ಣಿಸುತ್ತದೆ.\

– ಅರ್ತಿಕಜೆ
 

   

Leave a Reply