ಅಧೀಕ್ಷಣ ಎಂದರೆ ಶೋಧನೆ ಎಂದರ್ಥ

ಲೇಖನಗಳು ; ಸಂದರ್ಶನಗಳು - 0 Comment
Issue Date :

-ರಂ. ಶಿವಶಂಕರ

ನಿಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳಬಹುದೆ ?
ದೇವರಾಜ ಅರಸ್ ಕಾಲದಲ್ಲಿಉಳುವವನಿಗೇ ಭೂಮಿ ರಾಜಕಾರಣಕ್ಕೆ ಬಲಿಯಾಗಿ ಇದ್ದ ಕೇವಲ 3.5 ಎಕರೆ ಜೀವನಾಧಾರ ಭೂಮಿಯನ್ನು ಕಳೆದುಕೊಂಡ ನಮ್ಮ ಕುಟುಂಬ ಅಕ್ಷರಶಹ ಬೀದಿಗೆ ಬಿದ್ದಿತ್ತು. ನಮ್ಮ ದುರಾದೃಷ್ಟಕ್ಕೆ ಇದ್ದ ಪುರಾತನ ಮನೆಯೂ ಸಹ ಕುಸಿದು, ನಾವು ಪಾಳು ಮನೆಯಲ್ಲೇ ತಡಿಕೆಗಳ ಅಡಿಯಲ್ಲಿ ಬದುಕು ಸವೆಸಬೇಕಾದ ದುಃಸ್ಥಿಗೆ ತಲುಪಿದ್ದೆವು. ದಿನಕ್ಕೆ ಎರಡು ಹೊತ್ತಿನ ತುತ್ತಿಗೂ ತತ್ವಾರ ಉಂಟಾಗಿತ್ತು, ಅದೇ ಸಮಯದಲ್ಲಿ ತಂದೆಯವರಿಗೆ ಅಪಘಾತವಾಗಿ ಹಾಸಿಗೆ ಹಿಡಿದುದರಿಂದ ಕಡುಬಡತನದ ಕಠಿಣ ಅನುಭವಗಳು ಜೀವನವನ್ನು ಸಾಕು ಸಾಕೆನಿಸಿತ್ತು. ಸರ್ಕಾರಿ ಶಾಲೆಯಲ್ಲಿ ಯಾವುದೇ ಜಾತಿ ಬೇದವಿಲ್ಲದ ಮುಕ್ತ ವಾತಾವರಣದಲ್ಲಿ ಸಂಸ್ಕೃತ ಅಭ್ಯಾಸ ವಿದ್ಯಾಭ್ಯಾಸ, ಅಂದೊಮ್ಮೆ ಸಂಪೂರ್ಣ ಜರ್ಝರಿತ ಶಾಲಾಚೆಡ್ಡಿ ಧರಿಸಿ ಸಹಜವಾಗೇ ಶಾಲೆಗೆ ಹೋಗಿದ್ದ ನನ್ನ ಪರಿಸ್ಥಿತಿ ಕಂಡು ಸಹಪಾಠಿಗಳು ಆಡಿಕೊಳ್ಳುವುದನ್ನು ನೋಡಿ ನಮ್ಮ ಶಿಕ್ಷಕರು ನನ್ನನ್ನು ಕರೆದು ಬೈದು ಮನೆಗೆ ಕಳುಹಿಸಿದ್ದರು. ಆದರೆ ಮಾರನೆ ದಿನವೂ ಅದೇ ರೀತಿ ಹೋದಾಗ ಅವರು ನನ್ನನ್ನು ಪ್ರಶ್ನಿಸಿದಾಗ ಸಾರ್. ನನಗೆ ಇರುವುದು ಎರಡೇ ವಿಕಲ್ಪಗಳು ಒಂದು ಈ ಹರಿದ ಚಡ್ಡಿಯನ್ನೇ ಧರಿಸಿ ಶಾಲೆಗೆ ಬರುವುದು ಇಲ್ಲಾ ಅದನ್ನೂ ಕಿತ್ತೆಸೆದು ಬರುವುದು ಅಷ್ಟೇ ಎಂದು ಉತ್ತರಿಸಿದ್ದೆ. ಏಕೆಂದರೆ ಮನೆಯಲ್ಲಿ ಒಂದು ಹೊತ್ತು ಗಂಜಿ ಸಿಕ್ಕರೆ ಮೃಷ್ಠಾನ್ನ ಎಂದುಕೊಳ್ಳುವ ಪರಿಸ್ಥಿತಿ. ನಮ್ಮ ಜೊತೆಯಲ್ಲಿ ಹೊಟೇಲಿನ ಮಾಣಿ, ಅಂಗಡಿ ಶೆಟ್ಟರ ಮಗ ಸುಬ್ಬಣ್ಣ, ಪುಟ್ಟೀರೇಗೌಡ, ದರ್ಜಿ, ಭಜಂತ್ರಿ, ಶೌಚ ಕೆಲಸದ ಪೌರಕಾರ್ಮಿಕರ ಮಕ್ಕಳೊಡನೆಯೇ ಶಾಲೆಯಲ್ಲಿ ಸಂಸ್ಕೃತ ಸಹಿತ ಎಲ್ಲಾ ವಿಷಯಗಳ ಶಿಕ್ಷಣ ಸಮಾನವಾಗೇ ದೊರೆಯಿತು. ಜೊತೆ ಜೊತೆಗೆ ಮುಂಜಾನೆ 3.30ಕ್ಕೆ ಆರಂಭವಾಗುತ್ತಿದ್ದ ಕಠಿಣ ವೇದ ವೇದಾಂತ ಪಾಠಾಭ್ಯಾಸ, ನಿತ್ಯ ದೇವಾಲಯ ಪ್ರಸಾದ, ಬೆಟ್ಟಗುಡ್ಡಗಳ ಅಲೆದಾಟ, ಐತಿಹಾಸಿಕ ಸ್ಥಳ ಪಳೆಯುಳಿಕೆಗಳ ದರ್ಶನ ಹೀಗೆ ಬಿಡುವಿಲ್ಲದ ಚಟುವಟಿಕೆಗಳು ನಮ್ಮ ದಿನಚರಿಯಾಗಿತ್ತು.
ನಿಮ್ಮ ಮನೆತನದ ಬಗ್ಗೆ ತಿಳಿದಿರುವ ವಿವರಗಳೇನು ?
ನಮ್ಮದು ಯತಿರಾಜದಾಸರ ಮನೆತನ. ಹನ್ನೊಂದನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಚೋಳರಾಜನ ಬಾಧೆೆಗೆ ಗುರಿಯಾಗಿ ತಮಿಳುನಾಡನ್ನು ಬಿಟ್ಟು ಕರ್ನಾಟಕಕ್ಕೆ ಬರಬೇಕಾಯಿತು. ಆಗ ಅವರಿಗೆ ಜೀವಾಪಾಯವೂ ಇದ್ದ ಸಂದರ್ಭದಲ್ಲಿ ಯತಿಗಳು ನಾಲ್ಕು ಮನೆಗಳಲ್ಲಿ ಮಾತ್ರ ವಿಶ್ವಾಸ ರಕ್ಷಣೆಗಾಗಿ ಆಶ್ರಯಿಸಿದ್ದರು. ತಿರುಕ್ಕುಂಡಂಗುಡಿ ದಾಸ, ತಿರುವನಂತಪುರ ದಾಸ, ತಂಜಾವೂರಿನ ಸಮೀಪದಿಂದ ಬಂದ ನಮ್ಮನ್ನು ಬಹಳ ಪ್ರೀತಿಯಿಂದ ಯತಿರಾಜದಾಸರೆಂದೇ ಗುರುತಿಸಿ ಮೇಲುಕೋಟೆ ದೇವಾಲಯದ ಪ್ರಧಾನತ್ವವನ್ನು ನಮ್ಮ ಮನೆತನದವರಿಗೆ ವಹಿಸಿದ್ದರು. ಸಮಾನತೆಯ ಸುಧಾರಣೆಯನ್ನು ಒಪ್ಪಿಕೊಳ್ಳದ ಜನ ರಾಮಾನುಜರ ಸುಧಾರಣಾ ಯತ್ನಗಳಿಂದ ಕ್ರುದ್ಧರಾಗಿ ಅವರಿಗೆ ಶ್ರೀರಂಗಂನಲ್ಲಿ ವಿಷಪ್ರಯೋಗ ಮಾಡಿದ್ದರು, ಅಂದಿನಿಂದ ಭಿಕ್ಷಾಟನೆ ಬಿಟ್ಟು ಸನ್ಯಾಸಿಗಳಾಗಿದ್ದ ರಾಮಾನುಜರು ನಮ್ಮ ನಾಲ್ಕು ಮನೆಗಳಲ್ಲೇ ಊಟೋಪಚಾರವನ್ನೂ ಪಡೆಯುತ್ತಿದ್ದರು.
ರಾಮಾನುಜರಲ್ಲಿ ನೀವು ಕಂಡ ವಿಶೇಷತೆಯೇನು?
ರಾಮಾನುಜರು ಅದೆಷ್ಟು ಸಮಾಜಮುಖಿಗಳೂ ಜಾತ್ಯತೀತರೂ ಆಗಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ ಎಂದರೆ, ಗೋಷ್ಠಿಪೂರ್ಣರೆಂಬ ಚಾಣಕ್ಯ ವಂಶಸ್ಥ ಗುರುಗಳಲ್ಲಿ ಮೋಕ್ಷಸಾಧನೆಗಾಗಿ ಮಂತ್ರೋಪದೇಶವನ್ನು ಬಯಸಿ ಅವರಲ್ಲಿ ಆಶ್ರಯಿಸಿರಲು ಗುರುಗಳು ರಾಮಾನುಜರನ್ನು ಪರೀಕ್ಷಿಸಲೋಸುಗ ಇಂದು ಊಟ ಮಾಡಿಬಿಟ್ಟಿದ್ದೇನೆ, ಇಂದು ಕ್ಷೌರ ಮಾಡಿಸಿದ್ದೇನೆ, ಇಂದು ಅಮಾವಾಸ್ಯೆ ಹೀಗೆ ಹಲವು ನೆಪಗಳನ್ನು ಹೇಳುತ್ತಾ ಸಾಗಹಾಕುತ್ತಾ ಕಡೆಗೊಂದು ದಿನ ಏಕಾಂಗಿಯಾಗಿ ಬರಲು ಅಪ್ಪಣೆ ಮಾಡಿದರು. ಆದರೆ ರಾಮಾನುಜರು ತಮ್ಮ ಶಿಷ್ಯಂದಿರಾದ ಕೂರತ್ತಾಳ್ವಾರ್ ಹಾಗೂ ದಾಸರತಿ ಮೊದಲಿಯಾರ್ ಅವರನ್ನು ಕೂಡಿಯೇ ಹೋದರು. ಗುರುಗಳು ಪ್ರಶ್ನಿಸಲು ರಾಮಾನುಜರು ಸನ್ಯಾಸಿಗಳು ಸಂಚಾರದಲ್ಲಿ ತಮ್ಮ ರಕ್ಷಣೆಗಾಗಿ ಸದಾ ವಾಗ್ದಂಡ, ಕಾಯದಂಡ, ಮನೋದಂಡಗಳನ್ನು ಜೊತೆಗೊಯ್ಯಬೇಕು ಆದರೆ ನನಗೆ ಈ ಇಬ್ಬರ ರಕ್ಷಣೆಯೇ ಸಕಲವೂ ಆಗಿರುವುದರಿಂದ ಅವರನ್ನು ಬಿಟ್ಟು ಬರುವುದು ಸರಿಯಲ್ಲ ಎಂಬುದನ್ನು ಅರಿಕೆ ಮಾಡಿಕೊಟ್ಟರು. ಸಂಪ್ರೀತರಾದ ಗುರುಗಳು ಅಷ್ಟಾಕ್ಷರಿ ಮಂತ್ರವನ್ನು ಬೋಧಿಸಿದರು, ರಾಮಾನುಜರು ಆ ಮಂತ್ರದ ಮಹಿಮೆಯನ್ನು ಪ್ರಶ್ನಿಸಲು ಅದರಿಂದ ಎಲ್ಲಾ ದುಷ್ಟಾರಿಷ್ಟಗಳ ನಿವಾರಣೆಯಾಗಿ, ಸುಖಸಂವೃದ್ಧಿ ಪ್ರಾಪ್ತಿಯಾಗುತ್ತದೆ, ಮೋಕ್ಷಸಾಧನೆಯಾಗುತ್ತದೆ ಎಂದರು. ಅಷ್ಟು ಕಷ್ಟಪಟ್ಟು ಸಂಪಾದಿಸಿದ ಆ ಮಂತ್ರವನ್ನು ರಾಮಾನುಜರು ಗುರುಗಳ ಸೂಚನೆಯನ್ನೆ ಮೀರಿ ತ್ರಿಮೂರ್ತಿಗಳನ್ನು ಪೂಜಿಸುವ ತಿರುಕೋಟಿಯೂರು ದೇವಾಲಯದ ಮೇಲೆ ಏರಿ ಎಲ್ಲರನ್ನೂ ಬಳಿಗೆ ಬರುವಂತೆ ಕೂಗಿಕರೆದಾಗ ನೂರಾರು ಜನ ನೆರೆದರು, ಅಲ್ಲಿ ಸೇರಿದ ಎಲ್ಲಾ ವರ್ಗ ಜಾತಿ ಜನರಲ್ಲಿ ಯಾವುದೇ ಭೇದವೆಣಿಸದೆ ಮಂತ್ರೋಪದೇಶವನ್ನು ಮಾಡಿದರು. ಗುರುಗಳು ಅದನ್ನು ಕಂಡು ನೀನು ನರಕಕ್ಕೆ ಹೋಗುತ್ತೀಯೆ ಎಂದರು. ಅದಕ್ಕೆ ರಾಮಾನುಜರು ಇಷ್ಟೊಂದು ಜನ ಸಮೂಹ ಸುಖಸಂವೃದ್ಧಿ ಹೊಂದಿ ಮೋಕ್ಷಹೊಂದುವುದಾದರೆ ಅದಕ್ಕಾಗಿ ನಾನೊಬ್ಬ ಸದಾ ನರಕದಲ್ಲೇ ಇರಲು ಸಿದ್ಧನಿದ್ದೇನೆ ಎಂದು ಉತ್ತರಿಸಿದರು. ಗುರುಗಳು ಪಶ್ಚಾತಾಪದಿಂದ ಛೆ ! ಎಂಥಾ ಅದ್ಭುತ ಚಿಂತನೆ, ಒಮ್ಮೆಯೂ ನಮಗೆ ಈ ರೀತಿ ಅನಿಸಲಿಲ್ಲವೇ ಎಂದು ನೊಂದುಕೊಂಡರು. ಈ ಬಗೆಗಿನ ಶಾಸನ ಸದರೀ ದೇವಾಲಯದಲ್ಲಿ ಕಾಣಬಹುದಾಗಿದೆ. ಅಂಥ ಮಹಿಮಾನ್ವಿತ ರಾಮಾನುಜರ ರಕ್ಷಣೆಯ ಹೊಣೆ ಹೊತ್ತು ಅವರೊಂದಿಗೆ ಮೇಲುಕೋಟೆಗೆ ಬಂದವರ ವಂಶದಲ್ಲಿ ಜನಿಸಿದ ಪುಣ್ಯ ನನ್ನದು.
ಇಲ್ಲಿಯವರೆಗಿನ ನಿಮ್ಮ ಸಾಧನೆ ಏನು ?
ರಿಯೋ ಡಿ ಜನೈರೋದ ಚಾರ್ಲ್ಸ್ ಶಿವಶಂಕರ ಸೇರಿದಂತೆ ನೂರಾರು ಜನ ವಿದೇಶಿಗರು ನನ್ನ ಶಿಷ್ಯಂದಿರಾಗಿದ್ದಾರೆ, ಇದರಿಂದಾಗಿ ನಮ್ಮ ಪ್ರೇರಣೆಯಿಂದ 1000ಕ್ಕೂ ಹೆಚ್ಚು ವಿದೇಶಿ ಗಣ್ಯರು ಹಿಂದುತ್ವವನ್ನು ಸ್ವೀಕರಿಸಿದ್ದಾರೆ. ಐ.ಎ.ಎಸ್., ಕೆ.ಎ.ಎಸ್. ವಿದ್ಯಾರ್ಥಿಗಳಿಗೆ ಭಾರತೀಯ ಇತಿಹಾಸದ ಬಗ್ಗೆ ಉಪನ್ಯಾಸ ಮಾಡುತ್ತಿದ್ದೇನೆ. ಭಾರತೀಯ ಯೋಧರಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವುದೊಂದು ಹೆಮ್ಮೆಯ ವಿಚಾರ ಎನಿಸುತ್ತದೆ, ಮೈಸೂರಿನ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ ಮೂರ‌್ನಾಲ್ಕು ಸಾವಿರ ಜನ ಸರ್ಕಾರಿ ಅಧಿಕಾರಿಗಳು ನನ್ನ ವಿದ್ಯಾರ್ಥಿಗಳಾಗಿದ್ದಾರೆ. ಆಗಮ ವಿಜಯೋತ್ಸವ, ವಿಜಯಲಕ್ಷ್ಮಿ ಕಟಾಕ್ಷ,
ಶ್ರೀರಾಮಾನುಜ ದಿವ್ಯ ಚರಿತಂ, ಶ್ರೀವೈಷ್ಣವ ಕನಕದಾಸ, ಅಧೀಕ್ಷಣ ಎಂಬ ಕನ್ನಡ ಪುಸ್ತಕಗಳನ್ನು ಐಕನಾಗ್ರಫಿ ಆಪ್ ವಿಷ್ಣು ಇನ್ ಹೊಯ್ಸಳ ಟೆಂಪಲ್ ಎಂಬ ಇಂಗ್ಲೀಷ್ ಪುಸ್ತಕವನ್ನೂ ಬರೆದಿದ್ದೇನೆ. ತನ್ಮೂಲಕ ಸಾಹಿತ್ಯ ಸಂಸ್ಕೃತಿಯ ಸೇವೆಯಲ್ಲಿ ತೊಡಗಿರುವ ಹೆಮ್ಮೆ ನನಗಿದೆ.
ಸಾಮಾಜಿಕ ಸ್ಥಿತಿಯ ಕುರಿತು ಏನೆನ್ನುವಿರಿ?
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಬ್ಬರ ಅನ್ನ ಕಿತ್ತು ಮತ್ತೊಬ್ಬರಿಗೆ ಕೊಟ್ಟು ರಾಜಕೀಯ ಮಾಡುವುದು ಬೇಡ. ನಮ್ಮ ಇತಿಹಾಸಕ್ಕೆ ಯಾವುದೇ ಬಣ್ಣ ಬಳಿಯುವುದು ಬೇಡ, ಇತಿಹಾಸವನ್ನು ಮೂಲ ಸ್ವರೂಪದಲ್ಲೇ ಕಾಣಬೇಕಿದೆ. ಹಸಿರನ್ನೋ ಕೆಂಪನ್ನೋ ತೊಡಿಸಿದಾಗ ಅದನ್ನು ಬಿಚ್ಚಲೇ ಬೇಕಾಗುತ್ತದೆ, ಅದನ್ನು ಬಿಚ್ಚುವವರನ್ನು ಕೇಸರಿ ಎಂದು ಕರೆದರೆ ವ್ಯಥೆ ಪಡಬೇಕಾಗಿಲ್ಲ. ಏಕೆಂದರೆ ಇಂದು ಕೇಸರಿಯನ್ನು ಯಾರೋ ಕೆಲವರು ಮಾನ್ಯ ಮಾಡದಿದ್ದರೂ ಕಾಲ ಸತ್ಯವನ್ನು ಸ್ವೀಕರಿಸುತ್ತದೆ. ಸತ್ಯ ಶಾಶ್ವತ, ಅದಕ್ಕೆ ಜಯವಾಗಲಿ ಎನ್ನುವುದಷ್ಟೇ ನನ್ನ ಕಾಳಜಿ.
ಅಧೀಕ್ಷಣ ಎಂದರೆ ಏನು ? ಆ ಪುಸ್ತಕದಲ್ಲಿ ಏನನ್ನು ತಿಳಿಸಿದ್ದೀರಿ ?
ಅಧೀಕ್ಷಣ ಎಂದರೆ ಶೋಧನೆ ಎಂದರ್ಥ. ಅದರಲ್ಲಿ ಪ್ರಮುಖವಾಗಿ ಕನಕದಾಸರು ಮೇಲುಕೋಟೆಗೆ ಬಂದ ವಿಚಾರವನ್ನು ಸಾದೃಷವಾಗಿ ಅವರದೇ ಕೀರ್ತನೆಗಳಲ್ಲಿ ಹೇಳಿರುವುದನ್ನು ವಾಸ್ತವ ದಿನಾಂಕ ಸಂದರ್ಭ ಸ್ಥಳ ವಿವರಗಳ ಸಮೇತ ಕರಾರುವಕ್ಕಾಗಿ ಸಾಬೀತು ಮಾಡಿದ್ದೇವೆ. ಮೇಲುಕೋಟೆಯ ವೈಜ್ಞಾನಿಕ ಐತಿಹಾಸಿಕ ಪೌರಾಣಿಕ ಉಲ್ಲೇಖ ಬೌತಿಕವಾಗಿ ನಿರೂಪಿಸಿದ್ದೇವೆ. ಉದಾಹರಣೆಗೆ : ಕನಕರು ವಿಕೃತಿ ಸಂವತ್ಸರ ಚೈತ್ರ ದ್ವಿತೀಯೇಕಾದಶಿಯೊಳು ಶುಕ್ರವಾರ ಭಕುತರಿಗುತ್ಸಾಹ ಸಂಧ್ಯಾಕಾಲದೊಳು ಎಂದಿರುವುದು, 29.03.1530ರಂದು ವೈರಮುಡಿ ಉತ್ಸವದಲ್ಲಿನ ಬ್ರಹ್ಮೋತ್ಸವ ಸಂದರ್ಭ. ಅವರು ತಿರುಮಲೆ ತಾತಾಚಾರ್ಯ ಅವರ ಶಿಷ್ಯತ್ವವನ್ನು ವಹಿಸಿದ್ದುದಲ್ಲದೆ ರಾಮಾನುಜರ ವಿಶಿಷ್ಟಾದ್ವೈತ ಪ್ರತಿಪಾದನೆಯನ್ನು ಚಲುವನಾರಾಯಣ, ಕೃಷ್ಣ, ರಾಮರು ಒಂದೇ ಎಂಬುದನ್ನು ತಮ್ಮ ಹಲವು ಕೃತಿಗಳಲ್ಲಿ ಸಾಂದರ್ಭಿಕವಾಗಿ ಉಲ್ಲೇಖಿಸಿದ್ದಾರೆ. ಕನಕರು ಅಂದು ವಿವರಿಸಿರುವ ದೇವಾಲಯದ ವಿವರಗಳಿಂದ ಅವರು ದೇವಾಲಯದ ಎಲ್ಲೆಡೆ ಎಷ್ಟೊಂದು ನಿರಾಳವಾಗಿ ಯಾವುದೇ ಜಾತಿ ಮತ ಬೇದವಿಲ್ಲದ ಮೇಲುಕೋಟೆಯ ಸನ್ನಿಧಿಯಲ್ಲಿ ಸ್ವಚ್ಛಂದವಾಗಿ ಭಗವನ್ನಾಮ ಸಂಕೀರ್ತನೆಯಲ್ಲಿ ತೊಡಗಿದ್ದರು ಎಂಬುದನ್ನು ಸಾಬೀತು ಮಾಡಿದ್ದೇವೆ. ಜೊತೆಯಲ್ಲಿ ನನ್ನ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಸಂಶೋಧನೆಗಳ ಇನ್ನೂ ಆರು ಜನ ಇತಿಹಾಸ ಪ್ರಾಧ್ಯಾಪಕರು ಬರೆದಿರುವ ವಿವಿಧ ಲೇಖನಗಳನ್ನು ಸಂಪಾದಿಸಿದ್ದೇನೆ. ಆ ಮೂಲಕ ಹೆಗ್ಗಡದೇವನಕೋಟೆಯ ಸ್ಥಳೀಯ ಇತಿಹಾಸ, ಹುಣಸೂರಿನ ದಲ್ಲಾಳು ಗ್ರಾಮದ ಮಂತ್ರಯಂತ್ರಗಲ್ಲುಗಳ, ಶಿವಮೊಗ್ಗ ಜಿಲ್ಲೆಯ ಶಾಸನೋಕ್ತ ಮಠಗಳ ಬಗ್ಗೆ, ಮೊಸಳೆ ಗ್ರಾಮದ ವೈಷ್ಣವ ಗಣಪತಿ, ಜಿನನಾಥಪುರದ ಶಾಂತಿನಾಥ ಬಸದಿಯ ಬಗ್ಗೆ, ಮೊಸಳೆ ಗ್ರಾಮದ ದ್ಯಾವಮ್ಮ ಜಾತ್ರೆ ಆಚರಣೆಗಳು, ಮಳವಳ್ಳಿಯ ಸ್ಥಾನೀಕರ ಬಗೆಗಿನ ವಿವರಗಳನ್ನು ಸಂಪೂರ್ಣವಾಗಿ ನೀಡಲಾಗಿದೆ. ಒಂದು ಐತಿಹಾಸಿಕ ಶೋಧನೆ ಯಾವ ಯಾವ ಆಯಾಮಗಳನ್ನು ಹೊಂದಿರಬೇಕೆಂಬುದರ ಮಾರ್ಗದರ್ಶಿ ನಿದರ್ಶನವೂ ಆಗಿ ಇದುವರೆಗೂ ಯಾರೂ ಗಮನ ಹರಿಸದಿದ್ದ ಹೊಸ ಹೊಸ ಆಧಾರ ಸಹಿತವಾದ ವಿಚಾರಗಳು ಕರ್ನಾಟಕ ಇತಿಹಾಸ ಪುಟಕ್ಕೆ ಸೇರಿಸಿದ್ದರಿಂದ ಈ ಪುಸ್ತಕ ಬಹಳ ಮಹತ್ವದ್ದೆನಿಸಿದೆ.

   

Leave a Reply