ಅನಗತ್ಯ ದುಡುಕು

ಕಿರಿಯರ ಲೋಕ ; ಲೇಖನಗಳು - 0 Comment
Issue Date : 30.05.2016

-ಶಾರದಾ ಶಾಮಣ್ಣ

ಒಂದೂರು. ಆ ಊರಿನಲ್ಲಿ ರೈತನೊಬ್ಬನಿದ್ದನು. ಒಂದು ಸಲ ಅವನು ಒಳ್ಳೆ ಜಾತಿಯ ಹೆಚ್ಚು ಹಾಲು ಕೊಡುವ ಹಸುವೊಂದನ್ನು ಸಂತೆಯಲ್ಲಿ ಕೊಂಡುತಂದನು. ಚೆನ್ನಾಗಿ ಸಾಕಿದನು. ಹಾಲು ಮಾರಿ ನೆಮ್ಮದಿಯಿಂದ ಇದ್ದನು.

ಒಂದು ದಿನ ಅದನ್ನು ಗೋಮಾಳದಲ್ಲಿ ಹುಲ್ಲು ಮೇಯಿಸಿಕೊಂಡು ಬರಲು ಹೋದನು. ಹುಲ್ಲು ಚೆನ್ನಾಗಿ ಬೆಳೆದಿರುವ ಸ್ಥಳವನ್ನು ಆರಿಸಿಕೊಂಡು ಹಸುವನ್ನು ಅಲ್ಲಿಯೇ ಮೇಯಲು ಬಿಟ್ಟನು. ಸಮೀಪದಲ್ಲೇ ಒಂದು ದೊಡ್ಡ ಆಲದ ಮರವಿದ್ದಿತು. ಅದರ ಕೆಳಗೆ ಒಬ್ಬ ಸನ್ಯಾಸಿ ಧ್ಯಾನಾಸಕ್ತನಾಗಿದ್ದನು. ಅವನಿಗೆ ಕೇಳಿಸುವಂತೆ ‘ಅಯ್ಯಾ, ಹಾಗೆಯೇ ನನ್ನ ಹಸುವಿನ ಬಗ್ಗೆಯೂ ಕಣ್ಣಿಟ್ಟಿರು. ನಾನು ಇಲ್ಲೇ ಕಾಡಿನೊಳಗೆ ಹೋಗಿ ಸ್ವಲ್ಪ ಕಟ್ಟಿಗೆಯನ್ನು ಒಟ್ಟುಮಾಡಿಕೊಂಡು ಬರುತ್ತೇನೆ. ತಿಳಿಯಿತೇ?’ ಎಂದು ಹೇಳಿ ಹೋದನು.
ಕಟ್ಟಿಗೆಯನ್ನು ಒಟ್ಟು ಮಾಡಿಕೊಂಡು ಬಂದು ನೋಡುತ್ತಾನೆ. ಹಸುವು ಮಾಯಾ. ರೈತನಿಗೆ ಸನ್ಯಾಸಿಯ ಮೇಲೆ ಅಸಾಧ್ಯ ಕೋಪ ಬಂದಿತು. ಕಳ್ಳನೊಬ್ಬ ಸನ್ಯಾಸಿಯ ವೇಷದಲ್ಲಿ ಬಂದು ಕುಳಿತು ಹಸುವನ್ನು ಎಗರಿಸಿದ್ದಾನೆ. ಅವನ ಕಡೆಯವರೊಬ್ಬರಿಗೆ ಸಾಗಹಾಕಿದ್ದಾನೆ. ಇದೆಲ್ಲಾ ಪೂರ್ವಯೋಜಿತ ಕಳ್ಳರ ಕೈವಾಡ. ಅಥವಾ ಇವನು ಕಳ್ಳರ ಗುಂಪಿನವನಾಗಿರದಿದ್ದರೆ ಕಳ್ಳರು ಹಸುವನ್ನು ಕೊಂಡೊಯ್ಯುವಾಗ ನನಗೆ ಕೂಗಿ ಹೇಳಬಹುದಾಗಿದ್ದತು. ಅದೂ ಮಾಡಲಿಲ್ಲ. ಈ ಸನ್ಯಾಸಿಯ ಬೇಜವಾಬ್ದಾರಿಯಿಂದಾಗಿ ನನ್ನ ಬೆಲೆ ಬಾಳುವ ಹಸು ಕಳುವಾಯಿತು ಎಂದು ಹಲುಬಿದನು. ರೋಷ ಉಕ್ಕೇರುತ್ತಲೇ ಇದ್ದಿತು. ಅದೇ ಕೋಪದಿಂದ ತಾನು ತಂದಿದ್ದ ಕಟ್ಟಿಗೆಯಿಂದ ಎರಡು ಹೊಡೆತ ಕೊಟ್ಟರೆ ಬಾಯಿ ಬಿಡಬಹುದು ಎಂಬ ಆಲೋಚನೆ ಮೂಡಿತು. ಕೂಡಲೇ ಕಟ್ಟಿಗೆಯಿಂದ ಬಾರಿಸಿ ‘ಈಗಲಾದರೂ ಬೊಗಳು ನನ್ನ ಹಸು ಏನಾಯಿತು?’ ಎಂದನು. ಆದರೆ ಸನ್ಯಾಸಿ ತನ್ನ ಧ್ಯಾನಾವಸ್ಥೆಯಿಂದ ಹೊರಕ್ಕೆ ಬರಲೇ ಇಲ್ಲ.
ರೈತ ಬೇಸತ್ತು ಮನೆ ಕಡೆ ಹೊರಟನು. ಆಗಲೇ ಕತ್ತಲಾಗಿತ್ತು. ಹಸುವಿನ ವಿಷಯವನ್ನು ಕುರಿತೇ ಮನಸ್ಸು ಭಾರವಾಗಿದ್ದಿತು. ಮನೆ ತಲಪಿದ್ದಾಯಿತು. ಅಂಗಳದಲ್ಲಿ ನೋಡಿದರೆ ಏನಾಶ್ಚರ್ಯ? – ಹಸು ಅಂಗಳದಲ್ಲಿ ಝೋಕಾಗಿ ಮೆಲುಕಾಡಿಸುತ್ತಾ ಮಲಗಿದೆ. ತುಂಬಾ ಸಂತೋಷವಾಯಿತು. ಸನ್ಯಾಸಿಗೆ
4 ಒದೆಗಳನ್ನು ಕೊಟ್ಟಿದ್ದೇ ಸರಿಯಾಯಿತು. ತನ್ನ ಸಂಗಡಿಗರಿಗೆ ಹೇಳಿ ಹಸುವನ್ನು ಹಿಂತಿರುಗಿಸಿದ್ದಾನೆ ಎಂದುಕೊಂಡನು. ಅಂತೂ ಏನೇ ಆಗಲಿ ಹಸು ದೊರಕಿದ ನೆಮ್ಮದಿಯಿಂದ ನಿದ್ರಿಸಿದನು.
ಆದರೆ ಬೆಳಗಿನ ನಸುಕಿನಲ್ಲೇ ಜನಗಳ ಗುಂಪು, ಗೌಜು, ಗಲಾಟೆ ಕೇಳಿಸಿತು. ಕಣ್ಣುಜ್ಜುತ್ತಾ ಬಂದು ನೋಡಿದನು. ಊರಿನ ಜನರೆಲ್ಲಾ ಕಾಡಿನ ಆಲದ ಮರದ ಕಡೆಗೆ ಧಾವಿಸುತ್ತಿದ್ದಾರೆ. ರೈತನೂ ಮನೆಯಿಂದ ಈಚೆಗೆ ಬಂದು ಹೋಗುತ್ತಿದ್ದವನೊಬ್ಬನನ್ನು ಕೇಳಿದನು. ಅದಕ್ಕೆ ಅವನು ‘ಜೈನ ಮಹಾ ಮುನಿಗಳು ಮೌನ ವ್ರತಧಾರಣೆ ಮಾಡಿ 15 ದಿನಗಳ ಕಾಲ ನಮ್ಮ ಹಳ್ಳಿಯಲ್ಲಿ ಇರುತ್ತಾರೆ. ಅವರ ದರ್ಶನ ಭಾಗ್ಯವನ್ನು ಪಡೆಯಲು ಹೋಗುತ್ತಿದ್ದೇವೆ, ಬಾ,’ ಎಂದನು. ಅಷ್ಟರಲ್ಲಿ ಅವನ ಸ್ನೇಹಿತನೊಬ್ಬನು ಬಾ, ಬಾ, ಏನು ಮಾಡುತ್ತಿರುವೆ ನಡಿ ನಡಿ ಎಂದು ರೈತನನ್ನು ದಬ್ಬಿಕೊಂಡೇ ಹೊರಟನು.
ಜನಜಂಗುಳಿ ಸಾಧಾರಣವಾಗಿದ್ದತು. ರೈತನೂ ಸಾಲು ಸರದಿಯಲ್ಲಿ ನಿಂತನು. ಜೈನಯತಿಗಳ ದರ್ಶನ ಪಡೆದು ಸುತ್ತು ಪ್ರದಕ್ಷಿಣೆ ಹಾಕುವಾಗ ಯತಿಗಳ ಬೆನ್ನ ಮೇಲೆ ಬಾಸುಂಡೆಯ ಗುರುತುಗಳಿದ್ದು ರಕ್ತ ಒಸರುವುದನ್ನು ನೋಡಿ ಭಕ್ತರೆಲ್ಲರೂ ಮಮ್ಮಲ ಮರುಗಿದರು. ಕೂಡಲೇ ಸದ್ಗೃಹಸ್ತನೊಬ್ಬನು ಮನೆಗೆ ಹೋಗಿ ತಂಪು ತೈಲವನ್ನು ತಂದು ಗಾಯದ ಮೇಲೆ ಮೃದುವಾಗಿ ಸವರತೊಡಗಿದನು. ‘ಯಾರೋ ಕೇಡಿಯೊಬ್ಬನು ಕಟ್ಟಿಗೆಯಿಂದ ಹೊಡೆದಿರುವ ಗುರುತು’ ಎಂದು ಶಪಿಸುತ್ತಾ ಎಣ್ಣೆ ಸವರುತ್ತಿದ್ದರು ಭಕ್ತಾದಿಗಳು. ರೈತನಿಗೆ ಹಿಂದಿನ ರಾತ್ರಿ ನಡೆದ ಘಟನೆ ಮಸುಕು ಮಸುಕಾಗಿ ಕಣ್ಣ ಮುಂದೆ ತೇಲಿ ಬಂತು. ಅಷ್ಟರಲ್ಲಿ ಹಿಂದೆ ಇದ್ದವನೊಬ್ಬ ರೈತನನ್ನ್ನುಮುಂದೆ ತಳ್ಳುತ್ತಾ ತೈಲದ ಬಟ್ಟಲನ್ನು ಅವನ ಮುಂದೆ ಹಿಡಿದು ಗಾಯಕ್ಕೆ ಎಣ್ಣೆ ಸವರಿ ಮುಂದೆ ಹೋಗಿ, ಇನ್ನೂ ಭಕ್ತಾದಿಗಳು ಬೇಕಾದಷ್ಟು ಜನ ಇದ್ದಾರೆ ಎಂದು ಅವಸರಿಸಿದನು.
ತಾನು ಮಾಡಿದ ಘೋರ ಕೃತ್ಯಕ್ಕೆ ಕಡುನೊಂದು ಪಶ್ಚಾತಾಪವೆಂಬಂತೆ ರೈತನು ಅಹಿಂಸಾ ಪರಮೋಧರ್ಮಃ ಎಂಬ ತತ್ವವನ್ನು ಪ್ರತಿಪಾದಿಸುವ ಜೈನಮತದ ಅನುಯಾಯಿಯಾದನು.

   

Leave a Reply