ಅನಾಥಮಕ್ಕಳ ಆಶ್ರಯತಾಣ : ನಂದಗೋಕುಲ

ಸೇವಾ ವಿಭಾಗ - 0 Comment
Issue Date : 16.02.2016

ಕಲಬುರ್ಗಿ-ಬೆಂಗಳೂರು (ಹೈಕೋರ್ಟದಿಂದ ಉದನೂರು ರಸ್ತೆಗಿಂತ ಮುಂಚೆ) ಹೆದ್ದಾರಿಯ ಕಲ್ಬುರ್ಗಿ ನಗರದಲ್ಲಿ ‘ನಂದಗೋಕುಲ’ ಎಂಬ ಬರಹದ ಪುಟ್ಟ ಅಚ್ಚುಕಟ್ಟಾದ ಕಟ್ಟಡ ಕಾಣಿಸುತ್ತದೆ. ನಂದಗೋಕುಲ ಹೆಸರಿಗೆ ತಕ್ಕಂತೆ ಇದೆ. ಅಂದು ತಂದೆತಾಯಿಯರ ಪಾಲನೆಯಿಂದ ವಂಚಿತನಾದ ಕೃಷ್ಣ ಯಶೋದಾನಂದನಾಗಿ ಗೋಕುಲದಲ್ಲಿ ಬಾಲ್ಯ ಕಳೆದರೆ ಇಂದು ಕಲಬುರ್ಗಿಯಲ್ಲಿ ಹೇಳಲಾರದ ಕಾರಣಕ್ಕಾಗಿ ಕುಂತಿ ತನ್ನ ಮಗುವ ತ್ಯಜಿಸಿದಂತೆ ತಾಯಿಯಿಂದ-ಪಾಲಕರಿಂದ ಪರಿತ್ಯಕ್ತ ಮಕ್ಕಳು ಸ್ವರ್ಗೀಯ ವೆಂಕಟೇಶಗುರುನಾಯಕರ ಪ್ರೀತಿಯ ಮಡಿಲಲ್ಲಿ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ. ಅಸ್ತಿತ್ವವಿಲ್ಲದೆ, ಅನಾಥರಾಗಿ, ಅಶನಕ್ಕೆ ಆಸರೆಯಿಲ್ಲದೆ ಅಂತ್ಯ ಕಾಣಬಹುದಾದ ಮಕ್ಕಳು, ಅಥವಾ ದುಷ್ಟರ ಕೈಗೆ ಸಿಕ್ಕು ಸಮಾಜ ಕಂಟಕರಾಗಿ ಬೆಳೆಯಬಹುದಾದ ಮಕ್ಕಳಿಗೆ ನಾಗರೀಕ ಸಮಾಜ ಹೆಮ್ಮೆ ಪಡುವಂತಹ ರೀತಿಯಲ್ಲಿ ಸುರಕ್ಷೆಯ, ಭದ್ರತೆಯ ಬದುಕ ನೀಡಿದೆ ನಂದಗೋಕುಲ (ಅನಾಥಮಕ್ಕಳ ಆಶ್ರಮ).
ವೆಂಕಟೇಶ ಗುರುನಾಯಕರ ನಂದಗೋಕುಲದ ಕನಸಿಗೆ ಕಾರಣವಾಗುವ ಹೃದಯಸ್ಪರ್ಷಿ ಘಟನೆಯೊಂದಿದೆ. ಸಂಘದ ಪ್ರಚಾರಕರಾಗಿದ್ದು ಪ್ರಾಂತ ಸೇವಾ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದ ವೆಂಕಟೇಶ ಗುರುನಾಯಕರು 1994ರ ಒಂದು ರಾತ್ರಿ ಕಲಬುರ್ಗಿ ಸಂಗಮೇಶ್ವರ ಬಡಾವಣೆಯ ಕಾರ್ಯಾಲಯದಲ್ಲಿ ಮಲಗಿದ್ದ ಸಮಯದಲ್ಲಿ ಅಪರಾತ್ರಿಯಲ್ಲಿ ಮಗುವಿನ ಅಳು ಕೇಳಿಸಿತು. ರಾತ್ರಿ ಕೇಳಿದ ಅಳುವಿನ ಗುಂಗಿನಲ್ಲಿ ಬೆಳಗಿನ ಜಾವದಲ್ಲಿ ಬಾಗಿಲ ತೆರೆದು ಹೊರಗೆ ಬಂದಾಗ ಜನರು ಕಸದ ತೊಟ್ಟಿಯ ಸುತ್ತ ನಿಂತು ಗಟ್ಟಿ ದನಿಯಲ್ಲಿ ಚರ್ಚಿಸುತ್ತಿದ್ದರು. ಗಾಬರಿಯಿಂದ ಜನರ ಮಧ್ಯೆ ತೂರಿಕೊಂಡು ಹೋದಾಗ ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಇರುವುದು ಗಮನಕ್ಕೆ ಬಂದಿತು (ಹೆಣ್ಣೊಂದು ಅಪವಾದದ ಅಂಜಿಕೆಯಿಂದ ತನ್ನ ಹೆಣ್ಣು ಮಗುವನ್ನು ರಾತ್ರಿ ಕಸದ ತೊಟ್ಟಿಯಲ್ಲಿಟ್ಟಿದ್ದಳು). ಮಗುವಿನ ವಾಸನೆ, ಅಳುವಿನ ಸದ್ದು ಮಾನವರನ್ನು ಕರೆಯುವ ಬದಲಿಗೆ ಹಂದಿ-ನಾಯಿಗಳಿಗೆ ಅಹ್ವಾನವಿತ್ತಿತ್ತು. ಮನೆ ಬೆಳಗಬೇಕಾದ ಮಗು ಹಂದಿ-ನಾಯಿಗಳಿಗೆ ಆಹಾರವಾಗಿತ್ತು. ಹೃದಯ ವಿದ್ರಾವಕವಾದ ಪ್ರಸಂಗ ಗುರುನಾಯಕರ ಮನತಟ್ಟಿತು. ರಾತ್ರಿ ಎದ್ದು ಹೊರಗೆ ಬಂದಿದ್ದರೆ ಮಗು ಉಳಿಸಬಹುದಿತ್ತು ಎಂಬ ಅಂತರಂಗದ ಪ್ರಜ್ಞೆ ಕಾಡಿತ್ತು. ಪರಿಣಾಮವಾಗಿ ಅನಾಥ ಶಿಶುಗಳು ಬೀದಿ ಹೆಣವಾಗಬಾರದು ಎಂದು ರಕ್ಷಣೆಯ ಚಿಂತನೆ ಮಾಡಿದರು. ವಿಶ್ವ ಹಿಂದು ಪರಿಷತ್ತಿನ ಬೆಂಬಲದಿಂದ ಚಿಕ್ಕ ಮನೆಯನ್ನು ಬಾಡಿಗೆ ಪಡೆದು 2 ಪರಿತ್ಯಕ್ತ ಮಕ್ಕಳಿಂದ ಅನಾಥಶ್ರಮವನ್ನು ಆರಂಭಿಸಿದರು. ಸಹೃದಯ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಸ್ವಂತ ಕಟ್ಟಡ ‘ನಂದಗೋಕುಲ’ ನಿರ್ಮಿಸಿದರು. 2001ರಲ್ಲಿ ಚಿಂಚೋಳಿ ತಾಂಡಾಗಳಲ್ಲಿನ ಬಡಕುಟುಂಬಗಳನ್ನು ಆಶ್ರಯ ಮತ್ತು ಪೋಷಣೆ ಭರವಸೆ ನೀಡಿ ಪುಸಲಾಯಿಸಿ ಹೆಣ್ಣುಮಕ್ಕಳ ಕಳ್ಳಸಾಕಣೆ ಮಾಡುವ ಜಾಲವೊಂದನ್ನು ಜಿಲ್ಲಾಡಳಿತ ಪತ್ತೆ ಹಚ್ಚಿತು. ನಾಗರೀಕ ಸಮಾಜ ಬೆಚ್ಚಿಬೀಳುವಂತಹ ಪ್ರಕರಣ ಅದು. ಲಂಬಾಣಿ ಮಕ್ಕಳ ಪತ್ತೆ ಹಚ್ಚಿ 2ರಿಂದ 4 ತಿಂಗಳೊಳಗಿನ 4 ಹೆಣ್ಣು ಮತ್ತು 1 ಗಂಡು ಹಸುಗೂಸನ್ನು ವಶಪಡಿಸಿಕೊಂಡು ಜಿಲ್ಲಾಡಳಿತ ನಂದಗೋಕುಲಕ್ಕೆ ನೀಡಿತು.
ನಂದಗೋಕುಲದ ಪರಿಕಲ್ಪನೆ, ಉದ್ದೇಶ ಒಳ್ಳೆಯದಿತ್ತು. ಪುಣ್ಯದ ಕೆಲಸವಾಗಿತ್ತು. ಒಂದೆಡೆ ಬೇಕಾದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಬೇಕು. ಮತ್ತೊಂದೆಡೆ ಅಸಡ್ಡೆ, ಅನಾದರ, ತಿರಸ್ಕಾರ, ಬೇಸರವಿಲ್ಲದೆ ಮಕ್ಕಳ ಲಾಲನೆ ಪಾಲನೆ ಪೋಷಣೆ ಮಾಡಬೇಕಿತ್ತು. ಅಲ್ಲದೇ ದುಷ್ಟ ಶಕ್ತಿಗಳ ಛಾಯೆ ಬೀಳದಂತೆ, ಹಸಿವು, ನೀರಡಿಕೆಗಳು ಕಾಡದಂತೆ ಅನಾಥ ಮಕ್ಕಳಿಗೆ ಸುಖದ ಸುಂದರ ಬದುಕು ನೀಡಬೇಕಾದ ಸಂಕಷ್ಟಗಳಿಂದ ಕೂಡಿದ ಸವಾಲು ಎದುರಿತ್ತು. ಅದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದವರು ವೆಂಕಟೇಶ ಗುರುನಾಯಕ. ಅವರ ಸೇವೆಗೆ ರಾಷ್ಟ್ರಪ್ರಶಸ್ತಿ ಸಹ ದೊರೆತಿತ್ತು. ಸಧ್ಯ ನಂದಗೋಕುಲದಲ್ಲಿ ಎಲ್‌ಕೆಜಿಯಿಂದ ಸ್ನಾತಕೋತ್ತರವರೆಗೆ 22 ಮಕ್ಕಳು ಇದ್ದಾರೆ. ಪವಿತ್ರ ಕಾರ್ಯಕ್ಕೆ ಆರಂಭದಲ್ಲಿ ಆಸರೆಯಾಗಿ ನಿಂತವರು ಸೇವಾವ್ರತಿ ಮಾತಾಜಿ ಶೋಭಾ ಮತ್ತು 2006ರಿಂದ ಮಾತಾಜಿ ಸುಧಾ ನಾಯಕ್. ಆರೋಗ್ಯ ನೀಡುವ ತಾಯ ಮೊಲೆಹಾಲಿನಿಂದ ಸೂಸುವ ಪ್ರೀತಿ ಪ್ರೇಮದ ಧಾರೆ ಮತ್ತು ಸುಖ-ಭದ್ರತೆಯಿಂದ ನೀಡುವ ತಂದೆಯ ರಕ್ಷೆಯಿಂದ ವಂಚಿತರಾದ ಪುಟ್ಟ ಕಂದಮ್ಮಗಳಿಗೆ ಭದ್ರತೆಯ ಮತ್ತು ಭರವಸೆಯ ಬದುಕು ನೀಡುವಲ್ಲಿ ವೆಂಕಟೇಶ ಗುರುನಾಯಕರ ಮಾತೃಹೃದಯ ಮತ್ತು ಮಾತಾಜಿಯವರ ತ್ಯಾಗ ಕಾರಣವಾಗಿವೆ.
ಸರ್ಕಾರಿ, ಅರೆಸರ್ಕಾರಿ ಅಥವಾ ಬೇರೆ ಸಂಘಸಂಸ್ಥೆಗಳಲ್ಲಿನ ಅನಾಥಾಶ್ರಮದ ವಾತಾವರಣಕ್ಕೂ ನಂದಗೋಕುಲದ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಂದಗೋಕುಲದ ಮಕ್ಕಳು ಸ್ವಂತ ಮನೆಯ ವಾತಾವರಣದಲ್ಲಿ ಸಂಭ್ರಮದಿಂದ ಬದುಕುತ್ತಿದ್ದಾರೆ. ಬೆಳಿಗ್ಗೆ ಪ್ರಾರ್ಥನೆಯಿಂದ ಆರಂಭವಾಗುವ ಚಟುವಟಿಕೆಗಳು ರಾತ್ರಿ ಮಲಗುವವರೆಗೆ ಸಂಸ್ಕಾರಯುತವಾಗಿ ನಡೆಯುತ್ತವೆ. ಆರೋಗ್ಯಕ್ಕಾಗಿ ಯೋಗ, ವ್ಯಾಯಾಮ, ಧ್ಯಾನ; ಉತ್ತಮ ಜ್ಞಾನ ಸಂಪಾದನೆಗೆ ಸ್ವಾಧ್ಯಾಯ; ಸಂಬಂಧಗಳ ಬಳ್ಳಿ ಹರವಾಗಿ ಬೆಳೆಯಲು ನಿತ್ಯ ಸತ್ಸಂಗದಲ್ಲಿ ಭಜನೆ, ದೇವರನಾಮ, ಇತ್ಯಾದಿ ಕಲಿಸಿಕೊಡಲಾಗುತ್ತದೆ. ಉತ್ತಮ ಪೌಷ್ಠಿಕಆಹಾರ, ವೈದ್ಯೋಪಚಾರ ಸೇರಿದಂತೆ ಸ್ವಚ್ಚತೆ, ಸಾಹಿತ್ಯ, ಕ್ರೀಡೆ, ಮನೋವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇಂದು ನಂದಗೋಕುಲದಲ್ಲಿ ಬೆಳೆದ ಯುವತಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾಳೆ. ಕಲಬುರ್ಗಿಯ ಜನ ಉದಾರ ಹೃದಯದವರು. ದಾನಿಗಳು ಹಲವರು ಸ್ವಇಚ್ಛೆ ಯಿಂದ ಮಕ್ಕಳ ಪಾಲನೆ ಪೋಷಣೆಗೆ ಸಹಕರಿಸುವುದಲ್ಲದೆ ವಿದ್ಯಾಭ್ಯಾಸದ ವಾರ್ಷಿಕ ಖರ್ಚಿನ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಸಜ್ಜನರು ತಮ್ಮ ಮಕ್ಕಳ ಜನ್ಮದಿನ, ಮದುವೆ, ಮದುವೆ ವಾರ್ಷಿಕೋತ್ಸವ, ಯುಗಾದಿ, ದಸರೆ, ದೀಪಾವಳಿಗಳಂತಹ ಹಬ್ಬ ಹರಿದಿನ ಗಳಂದು ನಂದಗೋಕುಲದ ಮಕ್ಕಳನ್ನು ತಮ್ಮಲ್ಲಿಗೆ ಆಮಂತ್ರಿಸಿ ಅಥವಾ ನಂದಗೋಕುಲಕ್ಕೆ ಹೋಗಿ ಅನಾಥ ಮಕ್ಕಳ ಜೊತೆ ಆಚರಿಸಿಕೊಂಡು ಮಕ್ಕಳಲ್ಲಿನ ಅನಾಥಪ್ರಜ್ಞೆ ದೂರಾಗುವಂತೆ ನಿರಂತರ ಪ್ರಯತ್ನ ಮಾಡುತ್ತಿರುವುದು ನಂದಗೋಕುಲದ ವಿಶೇಷ. ಜನರು – ಸಂಸ್ಥೆಗಳು ನೀಡುವ ದೇಣಿಗೆಯಿಂದ ಮಕ್ಕಳಿಗೆ ಎಲ್ಲವೂ ದೊರೆಯುತ್ತಿದೆ. ನಿರಂತರವಾಗಿ ನಡೆಯಲು ಜನ ಬೆಂಬಲಿಸಬೇಕೆಂಬುದು ಸದಾಶಯ ಹೌದು.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಕಲಬುರ್ಗಿ ಜನತೆ ನಂದಗೋಕುಲದ ಪದವೀಧರ ಯುವತಿಗೆ ಹಿಂದೂ ಸಂಪ್ರದಾಯದಂತೆ 22.06.2014ರಂದು ವಿವಾಹ ಮಂಗಲಕಾರ್ಯ ನಡೆಸಿಕೊಟ್ಟರು. ಸದ್ಯ ಪದವೀಧರ ಯುವತಿ ಪತಿಯ ಮನ ಮನೆ ಬೆಳಗುವ ಗೃಹಿಣಿಯಾಗಿದ್ದಾಳೆ. ಮಗುವೊಂದಕ್ಕೆ ತಾಯಿಯಾಗಿದ್ದಾಳೆ. ವೆಂಕಟೇಶ ಗುರುನಾಯಕರ ಹೆಜ್ಜೆಯಲ್ಲಿ ನಡೆಯುತ್ತ ಮಾತಾಜಿ ಸುಧಾನಾಯಕ್‌ರವರು ನಿಸ್ವಾರ್ಥದಿಂದ, ಪೂರ್ಣ ಪ್ರೀತಿಯಿಂದ ಮಕ್ಕಳನ್ನು ಬೆಳೆಸುವಲ್ಲಿ ಆನಂದ ಅನುಭವಿಸುತ್ತಿದ್ದಾರೆ. ರುದ್ರಮುನಿ ಮತ್ತು ಜಯತೀರ್ಥ ಎಂಬ ಯುವಕರು ನಂದಗೋಕುಲದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿವೇಕಾನಂದ ಕುಷ್ಠ ಸೇವಾ ಸಮಿತಿಯ ಪದಾಧಿಕಾರಿಗಳು ರಾಘವೇಂದ್ರ ನಾಡಗೌಡರ ನೇತೃತ್ವದಲ್ಲಿ ನಂದಗೋಕುಲದ ಆಡಳಿತದ ಮೇಲ್ವಿಚಾರಣೆ ನಿರ್ವಹಿಸುತ್ತಿದ್ದಾರೆ. 2015ರ ಅಗಸ್ಟ್ 2 ರಂದು ಸಂಧ್ಯಾದೀಪ ಎಂಬ ವೃದ್ಧಾಶ್ರಮ ಆರಂಭಿಸಿದ್ದಾರೆ. ಪರಿತ್ಯಕ್ತ ಮಕ್ಕಳಿಗೆ, ಪಾಲಕರಿಗೆ, ವೃದ್ಧರಿಗೆ, ಅಸಹಾಯಕ, ರೋಗ ಪೀಡಿತ ಸಹಸ್ರಾರು ಮಕ್ಕಳಿಗೆ ತನ್ನ ಸುಪುತ್ರರ ಮೂಲಕ ತಾಯಿ ಭಾರತಿಯು ತನ್ನ ಒಡಲಲ್ಲಿ ಬೆಚ್ಚನೆ ಆಶ್ರಯ ನೀಡುತ್ತಾಳೆ ಎಂಬುದಕ್ಕೆ ಕಲಬುರ್ಗಿಯ ನಂದಗೋಕುಲ ಜೀವಂತ ಉದಾಹರಣೆಯಾಗಿದೆ.

   

Leave a Reply