ಅನುಕರಣೆಯ ಆಟಗಳು

ಕ್ರೀಡೆ - 0 Comment
Issue Date : 15.07.2015

ಆಟಗಳು ಶಾರೀರಿಕ ವ್ಯಾಯಾಮಕ್ಕೆ, ಮನೋಲ್ಲಾಸಕ್ಕೆ ಸೂಕ್ತ ಮಾಧ್ಯಮ ಎಂಬುದು ನಮಗೆ ಗೊತ್ತಿರುವ ಸಂಗತಿ. ಹಾಗೆಯೇ ಆಟಗಳು ಹಲವು ಪ್ರಾಕೃತಿಕ ಅನುಕರಣೆಯಿಂದ ಉದ್ಭವವಾಗಿರುವುದು ಗೊತ್ತಿರುವ ಸಂಗತಿ. ಮಕ್ಕಳ ಅನೇಕ ಆಟಗಳು ನಮ್ಮ ಸುತ್ತಮುತ್ತಣ ಸಮಾಜದಿಂದ ಪುಷ್ಟಿಗೊಂಡಿದೆ. ಉತ್ತರಕನ್ನಡ ಜಿಲ್ಲೆಯ ಬಂಡಿಹಬ್ಬದ ಕಳಸಗಳ ಮೆರವಣಿಗೆಯಿಂದ ಪ್ರೇರಿತರಾಗಿ ಮಕ್ಕಳು ಎಳೆಯ ತೆಂಗಿನ ಗರಿಯ ಕಡ್ಡಿಗಳನ್ನು ಕಮಾನಿನಂತೆ ಚುಚ್ಚಿ, ಇನ್ನೊಂದು ಕಡ್ಡಿಯನ್ನು ಕಮಾನಿಗಿಂತ ತುಸು ಮೇಲಕ್ಕೆ ಹೋಗುವಂತೆ ಮಧ್ಯದಲ್ಲಿ ನೆಟ್ಟಗೆ ಚುಚ್ಚಿ, ತಟ್ಟಿಯನ್ನು ಹೆಣೆದಂತೆ ಅಡ್ಡ ಕಡ್ಡಿಗಳನ್ನು ಜೋಡಿಸಿ, ಮಧ್ಯದ ರಂಧ್ರಗಳಲ್ಲಿ ಹೂವನ್ನು ಸಿಕ್ಕಿಸುವರು. ಹೀಗೆ ತಯಾರಾದ ಕಳಸವನ್ನು ತಲೆಯ ಮೇಲೆ ಹೊತ್ತು, ಅಣಕು ಬಂಡಿಯ ಆಟವನ್ನು ಮಕ್ಕಳು ಆಡುವುದೇ ಹಿರಿಯರಿಗೆ ಆನಂದದ ಸಂಗತಿ.
ಕರಾವಳಿಯಲ್ಲಿ ಯಕ್ಷಗಾನವು ಅತ್ಯಂತ ಜನಪ್ರಿಯ ಕಲೆ. ಇಲ್ಲಿ ಯಕ್ಷಗಾನ ಬಯಲಾಟ ನೋಡದ ಹಳ್ಳಿಯೇ ದೊರೆಯಲಾರದು. ಯಕ್ಷಗಾನ ನೋಡಿದ ಮಕ್ಕಳು ಮರುದಿನವೇ ಗದ್ದೆಯ ಬಯಲಲ್ಲಿ ಮರದ ಕೆಳಗೂ ಯಕ್ಷಗಾನ ಆಡುವರು. ಒಡಕು ಟಿನ್ನಿನ ಡಬ್ಬಿಯೇ ಇವರ ಚಂಡೆ, ಹರಕು ಗೋಣಿಯ ತಟ್ಟು – ಕಂಬಳಿಯ ತುಂಡುಗಳೇ ಯಕ್ಷಗಾನದ ಪರದೆ, ಅಡಕೆ ಗರಿಯಿಂದ ತಲೆಯ ಅಳತೆಗೆ ಹೊಂದುವಂತೆ ರಚಿಸಿದ ಇರಿಕೆಯೇ ಪಗಡೆ. ಪಗೆಯನ್ನು ಮಾವಿನ ಎಲೆ ಸುಟ್ಟು ತಯಾರಿಸುವುದುಂಟು. ಈ ಪಗಡೆಗಳನ್ನು ಹೂವಿನಿಂದ ಅಲಂಕರಿಸಿ ತಲೆಗೆ ಕಟ್ಟಿಕೊಳ್ಳುವರು. ಹಂಚು, ಮಸಿ, ಸೇಡಿ ಮುಂತಾದವುಗಳನ್ನು ತೇದು ಬಣ್ಣ ತಯಾರಿಸಿ, ಸಿಕ್ಕಿದ ಗೆಜ್ಜೆಗಳನ್ನು ಕಟ್ಟಿಕೊಂಡು ಡಬ್ಬಿಯ ಹೊಡೆತದ ಗತ್ತಿಗೆ ತಪ್ಪೋ ಒಪ್ಪೋ ಕುಣಿಯುವರು. ತಮಗೆ ತಿಳಿದಂತೆ ಅರ್ಥ ಹೇಳುವರು. ಯುದ್ಧ ಮಾಡುವರು. ಇವರ ಯಕ್ಷಗಾನದಲ್ಲಿ ಗೆಲುವು ದೈಹಿಕ ಶಕ್ತಿಯಿದ್ದವರನ್ನೇ ಸೇರುವುದುಂಟು. ಭೀಮನ ಬದಲು ದುರ್ಯೋಧನನು ಗೆಲ್ಲಬಹುದು. ಸ್ವಲ್ಪ ಬುದ್ಧಿ ಬಲಿತ ಮಕ್ಕಳು ಸರಿಯಾದ ರೀತಿಯಲ್ಲಿಯೇ ಅನುಸರಿಸಿ ನೆರೆದವರನ್ನು ರಂಜಿಸುವ ಉದಾ ಹರಣೆಗಳು ಇಲ್ಲದಿಲ್ಲ.
ಮಕ್ಕಳಿಗೆ ಮಣ್ಣೆಂದರೆ ಬಲು ಪ್ರೀತಿ. ಮಣ್ಣಿರುವ ಸ್ಥಳವೇ ಅವರ ಆಟದ ರಂಗಭೂಮಿ. ಅವರ ಆಟದ ಸಾಮಗ್ರಿಗಳು ಕೂಡಾ ಹೆಚ್ಚಾಗಿ ಕಲ್ಲು ಮಣ್ಣುಗಳೇ. ಗಿಡ ಮರಗಳಿಗೆ ತಮ್ಮ ತಾಯಿ ನೀರು ಹನಿಸುವುದನ್ನು, ಅಡಿಗೆ ಮಾಡುವುದನ್ನು ನೋಡಿದ ಮಕ್ಕಳು ಮಣ್ಣನ್ನು ಗೆರಟೆಯಿಂದ ಇಲ್ಲವೆ ಬೊಗಸೆಯಿಂದ ಒಯ್ದು ಗಿಡಗಳಿಗೆ ಹಾಕಿ, ನೀರು ಹನಿಸುವುದನ್ನು ಅನುಕರಿಸುವರು. ಅಡಿಗೆಯ ಆಟವಾಡುವವರು ಮೂರು ಕಲ್ಲಿಟ್ಟು ಒಲೆ ತಯಾರಿಸಿ,ಅದರ ಮೇಲೆ ಗೆರಟೆ ಇಡುವರು. ತೆಂಗಿನ ಗರಿಯ ಕಡ್ಡಿಗೆ ಚಿಪ್ಪು ಸಿಕ್ಕಿಸಿ ಸೌಟು ಮಾಡುವರು. ಗೆರಟೆಯಲ್ಲಿ ಮಣ್ಣು ಹಾಕಿ ಅನ್ನ, ಪಾಯಸ ಪರಮಾನ್ನಗಳನ್ನು ಮಾಡುವರು. ಸ್ವಲ್ಪ ಬುದ್ಧಿ ಬಂದವರು ಅನ್ನ , ಪಾಯಸ, ಹುಳಿಗಳನ್ನು ಪ್ರತ್ಯೇಕಿಸಲು ಮಣ್ಣಿನಲ್ಲಿ ಬಾಳೆಯ ಹೂವಿನ ಚೂರು, ಎಲೆಯ ಚೂರು ಸೇರಿಸುವರು.
ದೊಡ್ಡ ಮಕ್ಕಳು ತಮಗಿಂತ ಚಿಕ್ಕ ಮಕ್ಕಳನ್ನು ಕರೆದು ಅಥವಾ ಗೊಂಬೆ ತಂದು ಮದುವೆಯಾಟ ಆಡುವರು. ಮದುವೆ ನಡೆದಾಗ ತಾವು ನೋಡಿದ ಅನೇಕ ಘಟನೆಗಳನ್ನು ತಪ್ಪದೇ ಅನುಕರಿಸುವರು. ಮಾವಿನ ಎಲೆ, ಕಲ್ಲು ಹರಳುಗಳೇ ಅವರ ಮದುವೆಯ ವೀಳ್ಯಗಳು, ಮಾವಿನ ತಳಿರು, ಹೂಗಳು ಇವರ ಬಾಸಿಂಗ ತೊಡಿಲುಗಳು. ನೆರದ ಹಿರಿಯ ಹುಡುಗರೇ ತಂದೆ, ತಾಯಿ, ಪುರೋಹಿತ, ಕಂಬಾರ, ಮಡಿವಾಳ ಮುಂತಾದವರ ಪಾತ್ರ ವಹಿಸುವರು. ಬಾಯಿ ಊದಿ ವಾದ್ಯ ಬಾರಿಸುವರು. ಹೀಗೆ ಇವರ ಮದುವೆಯಾಟ ಮನೋಜ್ಞ.
ಅನೇಕ ಆಟಗಳು ಯುದ್ಧ, ಬೇಟೆ ಮುಂತಾದವುಗಳ ಅನುಕರಣೆಗಳಾಗಿವೆ. ಇವುಗಳಿಗೆ ಉದಾಹರಣೆಯಾಗಿ ಗುಡುಗುಡು ಚೆಂಡಕ್ಕೆ, ತೋಲನ ಆಟ, ಬಲೆ ಆಟ ಮುಂತಾದ ಆಟಗಳನ್ನು ಹೆಸರಿಸಬಹುದು.
ಆಟಗಳಲ್ಲಿ ಹೆಸರಿಸುವ ತಿಂಡಿ ತಿನಿಸುಗಳು, ಗಿಡ ಮರ ಬಳ್ಳಿಗಳು, ಹೂ ಹಣ್ಣು ಕಾಯಿಗಳು, ಪ್ರಾಣಿ ಪಶು ಪಕ್ಷಿಗಳು, ಬಳಸುವ ವಸ್ತು ಒಡವೆಗಳು, ಮಾಡುವ ಉದ್ಯೋಗ ವ್ಯವಸಾಯಗಳು, ಸ್ಥಳ ನಾಮಗಳು ಆಟಗಳಲ್ಲಿಯ ಪ್ರಾದೇಶಿಕತೆಯನ್ನು ಸೂಚಿಸುತ್ತದೆ.
ಗಿಡ ಮಂಗನಾಟ, ತೋಳ ಕುರಿಯಾಟ, ಹುಲಿಕಲ್ಲು ಆಟ, ಆನೆ ನಾಯಿ ಆಟ ಮುಂತಾದ ಆಟಗಳು ಪ್ರಾಣಿಗಳಿಗೂ ಮಾನವನಿಗೂ ಇರುವ ಪುರಾತನ ನಂಟಿನ ನಿದರ್ಶನಗಳು. ಪ್ರಕೃತಿ ಸೌಂದರ್ಯದ ಉಯ್ಯಾಲೆಯಲ್ಲಿ ತೇಲಾಡುವ ಮಾನವನಿಗೆ ನಿಸರ್ಗ ಸಾಮೀಪ್ಯ ಸದಾ ಸರ್ವದಾ ಬೇಕು. ಆ ತನ್ನ ಪರಿಸರದ ಸುತ್ತಮುತ್ತಲಿನ ಪಶುಪಕ್ಷಿಗಳ ಜೊತೆಯಲ್ಲಿ ಬೆರೆತಾಗ ಮಾತ್ರ ಆತನ ಆನಂದಕ್ಕೆ ಕೋಡು ಮೂಡಬಲ್ಲದು.
ಹೀಗೆ ಪ್ರಾಕೃತಿಕ ಅನುಕರಣೀಯವಾದ ಸೃಜನಶೀಲತೆ ಹೆಚ್ಚಿಸುವಲ್ಲಿ ಈ ಆಟಗಳು ಪ್ರಾಮುಖ್ಯತೆ ವಹಿಸುತ್ತವೆ.

– ಶಿ.ನಾ. ಚಂದ್ರಶೇಖರ

   

Leave a Reply