ಅನುಶಾಸನದ ಅತ್ಯಪೂರ್ವ ಮೇಲ್ಪಂಕ್ತಿ

ಚಂದ್ರಶೇಖರ ಭಂಡಾರಿ - 0 Comment
Issue Date : 28.05.2016

 

….ಉರ್ದೂ ದೈನಿಕ ‘ಪ್ರತಾಪ’ದ ಜಾಮೀನು ಹಣವನ್ನು ಹಲವು ಬಾರಿ ಜಪ್ತುಗೊಳಿಸಲಾಗಿತ್ತು. ಅದರ ವಿರುದ್ಧ ಮೊಕದ್ದಮೆ ಹೂಡಲಾದರೂ ಪ್ರತಿ ಬಾರಿ ನ್ಯಾಯಾಲಯವು ಸರಕಾರದ ಕ್ರಮವನ್ನ್ನು ಅನ್ಯಾಯದ್ದೆಂದು ತಿಳಿಸಿ ‘ಪ್ರತಾಪ’ ದ ಪರವಾಗಿಯೇ ತೀರ್ಪು ನೀಡಿತು. ಸರಕಾರದ ದಮನ ನೀತಿಗೆ ಈ ಪತ್ರಿಕೆಯು ಕೊನೆಗೂ ಮಣಿಯಲೇ ಇಲ್ಲ.
….ಜಾಲಂಧರನ ಉರ್ದೂ ಸಾಪ್ತಾಹಿಕ ‘ಹಿಂದು’ವಿನ ಪ್ರಕಾಶನದ ಮೇಲೆ ಮೂರು ತಿಂಗಳ ಕಾಲ ನಿಷೇಧ ವಿಧಿಸಲಾಗಿತ್ತು. ಕಾರಣವೆಂದರೆ ಅದು ಸರಕಾರದ ಸಂಘ ಸಂಬಂಧಿತ ಎಲ್ಲ ಕ್ರಮಗಳಲ್ಲಿನ ಅನ್ಯಾಯ ಮತ್ತು ಸುಳ್ಳನ್ನು ಬಯಲಿಗೆಳೆಯುತ್ತಿತ್ತು. ಜತೆಯಲ್ಲಿ ಸತ್ಯಾಗ್ರಹದ ನ್ಯಾಯಸಮ್ಮತ ಭೂಮಿಕೆ ಮತ್ತು ಯಥಾರ್ಥತೆಯನ್ನು ಅದು ಜನತೆಗೆ ಪರಿಚಯಿಸುತ್ತಿತ್ತು.
….ಜಾಲಂಧರನ ಹಿಂದಿ ಸಾಪ್ತಾಹಿಕ ‘ಆಕಾಶವಾಣಿ’ಯನ್ನು ಸಹ ಮೂರು ತಿಂಗಳ ಕಾಲ ನಿಷೇಧಿಸಲಾಗಿತ್ತು’
….ಶಿಮ್ಲಾದ ‘ವಿಜಯ’ ದ ಜಾಮೀನು ಹಣ ರೂಪಾಯಿ ಐದು ಸಾವಿರವನ್ನು ಜಪ್ತುಗೊಳಿಸಲಾಗಿತ್ತು. ಪರಿಣಾಮ ಅದು ಪೂರಾ ನಿಂತೇ ಹೋಯಿತು. ಆದರೆ ಅದು ಸರಕಾರದ ದಬ್ಬಾಳಿಕೆಗೆ ಮಣಿಯಲೇ ಇಲ್ಲ.
….ರೋಹತಕ್‌ನ ‘ರಣನಾದ’ವನ್ನು ಸಹ ನಿಷೇಧಿಸಲಾಗಿತ್ತು.
ಹೆಚ್ಚಿದ ಸತ್ಯಾಗ್ರಹದ ಪ್ರಭಾವ
ಸಂಘದ ಸತ್ಯಾಗ್ರಹ ಆರಂಭವಾದಾಗ ಸಮಾಜದ ಬಹು ದೊಡ್ಡ ವರ್ಗದ ಮನದಲ್ಲಿ ಹಲವು ವಿಧ ಸಂದೇಹಗಳಿದ್ದವು. ಸಂಘದ ಪರವಾಗಿ ಒಲವು ಇದ್ದಂತಹರ ಮನದಲ್ಲೂ ಸಂಶಯವಿತ್ತು. ಇಷ್ಟು ದೀರ್ಘಾವಧಿಯ ನಿಷೇಧ ಮತ್ತು ಸತತವಾಗಿ ನಡೆದಿದ್ದ ಸುದೀರ್ಘ ಅಪಪ್ರಚಾರ ಇವೆರಡರ ಹಿನ್ನೆಲೆಯಲ್ಲಿ ಈ ಸತ್ಯಾಗ್ರಹ ಯಶಸ್ವಿಯಾಗಬಲ್ಲದೇ, ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಘವು ಮಾಡಬಲ್ಲದೆ ಇತ್ಯಾದಿ ಸಂದೇಹಗಳು ಅವು. ಸಂಘವು ಹಿಂಸೆಯಲ್ಲಿ ವಿಶ್ವಾಸವಿಟ್ಟಿರುವ ಸಂಸ್ಥೆ ಎಂಬ ಪ್ರಚಾರವನ್ನು ಸಂಘ ವಿರೋಧಿಗಳು ಮಾಡಿದ್ದ ಹಿನ್ನೆಲೆಯಲ್ಲಿ ಸಂಘದ ಸತ್ಯಾಗ್ರಹವು ಅಹಿಂಸಾತ್ಮಕವಾಗಿ ಇರುವುದು ಸಾಧ್ಯವೇ; ದೇಶವ್ಯಾಪಿಯಾಗಿ ಹಿಂಸಾಚಾರ ನಡೆಯಲಾರದೇ, ಜನತೆಗೆ ತೊಂದರೆ, ವಿಧ್ವಂಸಕ ಕೃತ್ಯಗಳು ಸಂಭವಿಸದಿರಬಹುದೇ? -ಇಂತಹ ಭಯ, ಆತಂಕ ಅನೇಕರಲ್ಲಿದ್ದವು. ಸ್ವತಃ ಸರದಾರ ಪಟೇಲರೇ ‘ಸಂಘದವರ ಮನದಲ್ಲಿ ಕೇವಲ ತಿರಸ್ಕಾರ ಅಷ್ಟೇ ತುಂಬಿದೆ. ಅಂತಹವರು ಸತ್ಯಾಗ್ರಹ ಮಾಡುವುದು ಸಾಧ್ಯವೇ ಇಲ್ಲ’ ಎಂದಿದ್ದರು. ಸಂಘದ ಇತರ ವಿರೋಧಿಗಳೂ ತಮ್ಮ ಅಪಪ್ರಚಾರದ ಮೂಲಕ ಅದೇ ವಿಧದ ವಾತಾವರಣವನ್ನು ಸೃಷ್ಟಿಸಿದ್ದರು. ಹೀಗಾಗಿ ಜನರ ಮನದಲ್ಲೂ ಅಂತಹ ಆತಂಕ ಸೃಷ್ಟಿಯಾಗಿದ್ದಲ್ಲಿ ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ಆದರೆ ಸತ್ಯಾಗ್ರಹ ಆರಂಭವಾದ ಎರಡು ವಾರಗಳೊಳಗೆ ಅದರ ಅತ್ಯಂತ ಶಾಂತ, ಪೂರಾ ಅಹಿಂಸಾತ್ಮಕ ಹಾಗೂ ಸಾತ್ವಿಕ ಸ್ವರೂಪ ಕಂಡು, ಎಲ್ಲರ ಮನದಲ್ಲಿನ ಭಯ, ಸಂದೇಹಗಳೆಲ್ಲವೂ ದೂರವಾದವು. ಸಂಘದವರೆಂದರೆ ಬರ್ಬರ, ಕ್ರೂರ ಜನಗಳು, ಹಿಂಸಾವಾದಿಗಳು, ಇತ್ಯಾದಿ ಮಾಡಲಾಗಿದ್ದ ಪ್ರಚಾರದ ಹಿನ್ನೆಲೆಯಲ್ಲಿ ಸತ್ಯಾಗ್ರಹವಂತೂ ಪೂರಾ ಸಂಯಮಿತ, ಅನುಶಾಸಿತ, ಸ್ವಲ್ಪವೂ ಹಿಂಸಾಚಾರವಿಲ್ಲದೆ, ಶಾಂತಿಪೂರ್ಣವಾಗಿ ನಡೆದುದು ಕಂಡು ಜನರಿಗೆ ಆಶ್ಚರ್ಯ. ಜತೆಯಲ್ಲಿ ಯೋಜನಾಬದ್ಧವಾಗಿ, ಮುಂಚಿತವಾಗಿ ತಿಳಿಸಿ, ನಿರಂತರವಾಗಿ, ದೇಶವ್ಯಾಪಿಯಾಗಿ ನಡೆಯುತ್ತಿರುವುದನ್ನು ನೋಡಿದರು ಅವರು. ಯಾರ ವಿರುದ್ಧವೂ ದುರ್ಭಾವನೆಯಿಲ್ಲ,
ತಿರಸ್ಕ್ಕಾರವಿಲ್ಲ, ಮುರ್ದಾಬಾದ್ ಇಲ್ಲ – ಹೀಗೂ ಸತ್ಯಾಗ್ರಹ ವಾಗಬಹುದೇ ಎಂದು ಜನರಿಗೆ ಅನಿಸಿತು. ಕೇವಲ ತಮ್ಮ ನ್ಯಾಯಬದ್ಧವಾದ ಬೇಡಿಕೆಗಾಗಿ ಆಗ್ರಹ, ಅಪರಾಧಿ ಎನ್ನುವುದಾದಲ್ಲಿ ಸಾಬೀತುಪಡಿಸಿ ಎಂಬ ಒತ್ತಾಯ ಅಷ್ಟೇ. ಅದರಲ್ಲಿ ತಪ್ಪೇನಿದೆ? ಆಡಳಿತಗಾರರು ತಮ್ಮ ಸದಸದ್ವಿವೇಕ ಬಳಸಿ ಯೋಚಿಸಲೆಂಬ ಸಲುವಾಗಿ ಜನರಿಗೆ ತಿಳಿವಳಿಕೆ ಮೂಡಿಸಲು ಮೆರವಣಿಗೆ, ಕರಪತ್ರಗಳ ವಿತರಣೆ – ಅದನ್ನೂ ಮಾಡಬಾರದೇನು? ಸ್ವತಂತ್ರ ಭಾರತದಲ್ಲಿ ಇದನ್ನು ಮಾಡಿದರೂ ಲಾಠಿಚಾರ್ಜ್ ಮಾಡುವುದು ಸರಿಯೇ? ಆದರೆ ಇಲ್ಲಿ ನೋಡಿ, ಪೊಲೀಸರು ಲಾಠಿಚಾರ್ಜ್ ಮಾಡಿದರೂ ಸತ್ಯಾಗ್ರಹಿಗಳು ನಿಜಕ್ಕೂ ಸತ್ಯಕ್ಕ್ಕಾಗಿ ಆಗ್ರಹಿಸುತಿದ್ದಾರೆ. ಸೆರೆಮನೆವಾಸವನ್ನೂ ಸಹರ್ಷ ಸ್ವೀಕರಿಸುತ್ತಿದ್ದಾರೆ. ಇವೆಲ್ಲವನ್ನೂ ಪ್ರತ್ಯಕ್ಷ ಕಂಡ ಜನತೆ ಸಹಜವಾಗಿಯೇ ಸ್ವಯಂಸೇವಕರೊಂದಿಗೆ ಸಹಾನುಭೂತವಾಯಿತು. ಸ್ವಯಂಸೇವಕರ ಸಂಯಮ, ದೃಢಸಂಕಲ್ಪ, ಸತ್ಯ ಮತ್ತು ನ್ಯಾಯದ ವಿಷಯದಲ್ಲಿ ರಾಜಿಯೇ ಇಲ್ಲದ ನಿಷ್ಠೆ ಇವೆಲ್ಲವುಗಳಿಂದ ಪ್ರಭಾವಿತರಾಗಿ ಸಂಘ ವಿರೋಧಿಗಳು ಮತ್ತು ಸರಕಾರ ಸೃಷ್ಟಿಸಿದ್ದ ಸಂಘ ಸಂಬಂಧಿತ ಭ್ರಮೆಗಳನ್ನು ಝಾಡಿಸಿ ಸಂಘದ ಪರವಾಗಿ ಸ್ಪಂದಿಸಲಾರಂಭಿಸಿತು.
ಅಹಂಕಾರ ಧೂಳಿಪಟ
ಸತ್ಯಾಗ್ರಹ ಎಂಬುದು ಏನಿದ್ದರೂ ನಮಗೆ ಮಾತ್ರ ಗೊತ್ತು. ಅದರ ಅರಿವಿನ ಗುತ್ತಿಗೆ ಇರುವುದು ನಮ್ಮ ಬಳಿ ಮಾತ್ರ, ಸಂಘಕ್ಕೆ ಸತ್ಯಾಗ್ರಹದ ಅನುಭವವೇನಿದೆ? ಎಂದು ಅಹಂಕಾರಪಡುತ್ತಿದ್ದವರು ಕಾಂಗ್ರೆಸಿನವರು. ಆದರೆ ಇಷ್ಟು ಕಡಿಮೆ ಸಮಯದಲ್ಲಿಷ್ಟು ಶಾಂತಿಯುತವಾಗಿ, ಆದರೆ ಯಾವುದೇ ಪ್ರದೇಶವನ್ನು ಬಿಡದೆ ಸತ್ಯಾಗ್ರಹ ಮಾಡಿರುವುದಷ್ಟೆ ಅಲ್ಲ, ಅದರ ಪ್ರಚಾರಕ್ಕಾಗಿಯೂ ಸುವ್ಯವಸ್ಥಿತವಾದ ಯೋಜನೆ ಮಾಡಿರುವುದು, ತಂಡೋಪತಂಡವಾಗಿ ಸೆರೆಮನೆ ಸೇರಲು ಸ್ವಯಂಸೇವಕರು ಉತ್ಸಾಹಿತರಾಗಿರುವುದು ಅವರು ಕನಸುಮನಸಿನಲ್ಲೂ ಕಲ್ಪಿಸಿರಲಿಲ್ಲ. ಹೀಗಾಗಿ ಸತ್ಯಾಗ್ರಹಕ್ಕೆ ಸಂಬಂಧಿಸಿದ ಅವರ ಅಹಂಕಾರವೆಲ್ಲ ಎರಡೇ ವಾರಗಳಲ್ಲಿ ನುಚ್ಚುನೂರಾಗಿತ್ತು.
ಕೆಲವರ ಕಲ್ಪನೆಯಲ್ಲಿ ಸಂಘವೆಂದರೆ ಏನೋ ಹುಡುಗರ ಆಟ ಅಷ್ಟೇ. ಅವರಿಗೆಲ್ಲಿ ಆಂದೋಲನ ನಡೆಸಲು ಸಾಧ್ಯ ? ಅಕಸ್ಮ್ಮಾತ್ ನಡೆಸಿದರೂ ಒಂದೆರಡು ದಿನಗಳ ಕಾಲ ಒಂದಿಷ್ಟು ಹಾರಾಡಬಹುದು ಅಷ್ಟೇ. ಆಮೇಲೆ ತಾನೇ ತಾನಾಗಿ ಎಲ್ಲ ತಣ್ಣಗಾಗುವುದು ಇತ್ಯಾದಿ ಯೋಚಿಸುತ್ತಿದ್ದವರಿಗೂ ತಮ್ಮ ಭ್ರಮೆ ದೂರ ಸರಿಸಲೇ ಬೇಕಾಯಿತು. ಡಿಲ್ಲಿಯ ಆ ದಿನಗಳ ಮುಖ್ಯ ಪೊಲೀಸ್ ಅಧಿಕಾರಿ ಡಿಸೆಂಬರ್ 16ರಂದು ಒಂದು ಹೇಳಿಕೆ ನೀಡಿದ್ದರು. ಅದರಲ್ಲಿ ‘ಸಂಘವು ದೇಶಾದ್ಯಂತ ಏಕಕಾಲದಲ್ಲಿ ಸತ್ಯಾಗ್ರಹವನ್ನು ಆರಂಭಿಸಿದೆ. ಅದು ಬೇಗನೆ ಮುಗಿಯುವಂತಹದಲ್ಲ, ಇದಕ್ಕ್ಕಾಗಿ ಈ ಸಂಘಟನೆಯನ್ನು ಸಮರ್ಥವಾಗಿ ಎದುರಿಸಬೇಕಾದಲ್ಲಿ ಸರಕಾರವು ಪೂರಾ, ಸಂಕಲ್ಪದೊಡನೆ ಸಾಹಸದ ಕ್ರಮದಲ್ಲಿ ಮುಂದಾದಲ್ಲಿ ಮಾತ್ರ ಅದು ಸಾಧ್ಯವಾದೀತು’ ಎಂದು ಹೇಳಿದ್ದರು.
ಸತ್ಯಾಗ್ರಹವು ಆರಂಭವಾದ ಕೇವಲ ಎರಡೇ ವಾರಗಳಲ್ಲಿ ಜನಮಾನಸದ ಮೇಲೆ ಅದು ಬೀರಿರುವ ಪ್ರಭಾವದ ಬಗ್ಗೆ ಡಿಲ್ಲಿಯಿಂದ ಪ್ರಕಟವಾಗುವ ‘ನವಭಾರತ’ ವರದಿ ಮಾಡಿದುದು ಹೀಗೆ: ‘ಸಂಘದಲ್ಲಿ ಅಡಕವಾಗಿರುವ ಒಂದು ಪ್ರಭಾವೀ ವಿಚಾರ ಪ್ರವಾಹವನ್ನು ಸರಕಾರವು ಏನೇ ಆದರೂ ಉಪೇಕ್ಷಿಸುವಂತಿಲ್ಲ. ಸಂಘದಲ್ಲಿರುವ ಸಂಘಟನೆಯ ಕೌಶಲ್ಯ ಲೋಕೋತ್ತರವಾದುದು. ಸ್ವಯಂಸೇವಕರ ಸೈದ್ದಾಂತಿಕ ನಿಷ್ಠೆ ಯಾರೂ ಪ್ರಶ್ನಿಸಲಾಗದಂತಹುದು ಮತ್ತು ಅವರ ಅನುಶಾಸನವೂ ಅತ್ಯಂತ ಕುತೂಹಲಕಾರಿಯಾದುದು. ಅಹಿಂಸೆಯ ವ್ರತವನ್ನು ಅವರು ಈ ಆಂದೋಲನದಲ್ಲಿ ಅಕ್ಷರಶಃ ಪಾಲಿಸುವುದರ ಮೂಲಕ ಇನ್ನಿತರ ಆಂದೋಲನಕಾರಿಗಳಿಗೆ ಒಂದು ಅತ್ಯಪೂರ್ವ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ದೇಶದ ಆರ್ಥಿಕ ಉತ್ಪ್ಪಾದನೆಗೆ ಯಾವುದೇ ಕಾರಣಕ್ಕೂ ಅಡ್ಡಿಯೊಡ್ಡಿಲ್ಲ. ಸಾರಿಗೆ ಸಂಪರ್ಕ ವ್ಯವಸ್ಥೆಗಳನ್ನು ಕೆಡಿಸಿಲ್ಲ. ಅಷ್ಟೇ ಅಲ್ಲ, ತಮ್ಮ ಆಂದೋಲನದಿಂದ ಜನರಿಗೆ ಏನೂ ತೊಂದರೆಯಾಗದಂತೆ ಎಚ್ಚರ ವಹಿಸಿದ್ದಾರೆ. ಅಂತಹ ಸಂಯಮ ಮತ್ತು ಸ್ವಾರ್ಥತ್ಯಾಗದ ಭೂಮಿಕೆಯಲ್ಲಿ ಈ ಆಂದೋಲನವನ್ನು ಆರಂಭಿಸಿ ಅದೇ ರೀತಿಯಲ್ಲೇ ಈಗಲೂ ನಡೆಸುತ್ತಿದ್ದಾರೆ.’
ಪುಣೆಯ ‘ಕೇಸರಿ’ಯ ವರದಿ ಹೀಗಿತ್ತು: ಈ ಸತ್ಯಾಗ್ರಹದಲ್ಲಿ ಗಾಂಧೀಜಿಯವರ ತಂತ್ರವನ್ನು ಅಕ್ಷರಶಃ ಪಾಲಿಸಲಾಗಿದೆ. ಸರಕಾರಿ ಅಧಿಕಾರಿಗಳಿಗೆ ಸತ್ಯಾಗ್ರಹದ ಪೂರ್ವಸೂಚನೆ ನೀಡುವುದರೊಂದಿಗೆ ತಂಡದಲ್ಲಿರುವ ಸತ್ಯಾಗ್ರಹಿಗಳ ಹೆಸರುಗಳ ಪಟ್ಟಿಯನ್ನು ಸಲ್ಲಿಸಲಾಗುತ್ತಿದೆ. ಪೊಲೀಸರ ಜತೆಯಲ್ಲಿ ಯಾವುದೇ ವಿಧದಲ್ಲೂ ಘರ್ಷಣೆಯೇ ಇಲ್ಲ. ತದ್ವಿರುದ್ಧವಾಗಿ ಅವರು ಬಂದಾಗ ತಾವಾಗಿಯೇ, ಅವರಿಗೆ ತಮ್ಮನ್ನು ಒಪ್ಪಿಸಿಕೊಳ್ಳಲಾಗುತ್ತದೆ. ಅವರ ಭಾಷಣಗಳಲ್ಲಿ ಯಾರದೇ ಭಾವನೆಗಳನ್ನು ನೋಯಿಸುವುದಿಲ್ಲ. ಅಂತಹ ಘೋಷಣೆಗಳೂ ಇರುವುದಿಲ್ಲ. ತಮ್ಮ ಭಾಷಣಗಳಲ್ಲಿ ಅವರು ಸ್ಪಷ್ಟವಾಗಿ ತಿಳಿಸುವ ಸಂಗತಿಯೆಂದರೆ, ತಮ್ಮ ಸತ್ಯಾಗ್ರಹವು ಸರಕಾರಕ್ಕೆ ಯಾವುದೇ ಸವಾಲು ಎಸಗುವ ಸಲುವಾಗಿ ಅಲ್ಲ. ಆದರೆ ನ್ಯಾಯದ ಬೇಡಿಕೆಗಾಗಿ ಸ್ವತಃ ಕಷ್ಟಗಳನ್ನು ಅನುಭವಿಸುವ ಸಲುವಾಗಿ ಇರುವಂತಹದು-
‘ಸತ್ಯಾಗ್ರಹದಲ್ಲಿ ಎಲ್ಲ್ಲಾ ಜಾತಿ ಮತ್ತು ಎಲ್ಲ ವಿಧ ಕಸಬು ಮಾಡುವವರೂ ಪಾಲ್ಗೊಂಡಿದ್ದಾರೆ. ನಗರ ಪ್ರದೇಶದ ಸುಶಿಕ್ಷ್ಷಿತ, ಪ್ರತಿಷ್ಠಿತ ವ್ಯಕ್ತಿಗಳ ಜತೆ ಗ್ರಾಮೀಣ ಜನಸಾಮಾನ್ಯರೂ ಇದ್ದಾರೆ. ಸತ್ಯಾಗ್ರಹದ ಕಾರಣದಿಂದಾಗಿ ಯಾವುದಾದರೂ ಊರಲ್ಲಿ ಪರಸ್ಪರ ಸಂಘರ್ಷ ಉಂಟಾಗುವ ಸಂಭವವಿದೆ ಅನಿಸಿದರೆ, ಅದನ್ನು ಇಲ್ಲವಾಗಿಸುವ ಸಲುವಾಗಿ ಆ ಸ್ಥ್ಥಳ ಬಿಟ್ಟು ಬೇರೆಡೆಗೆೆ ಸತ್ಯಾಗ್ರಹದ ಸ್ಥಾನವನ್ನೇ ಬದಲಿಸುತ್ತಾರೆ. ಕಾಂಗ್ರೆಸ್ ಕೈಗೊಂಡಿದ್ದ ‘ಜೈಲ್ ಭರೋ’ ಆಂದೋಲನ ಸಂದರ್ಭದಲ್ಲೂ, ಇಷ್ಟು ಕಡಿಮೆ ಕಾಲಾವಧಿಯಲ್ಲಿ ಇಷ್ಟೊಂದು ವಿಶಾಲ ಪ್ರಮಾಣದಲ್ಲಿ ಜೈಲು ತುಂಬಿರುವ ಉದಾಹರಣೆ ಹುಡುಕಿದರೂ ಸಿಗಲಾರದು….’
ಸೆರೆಮನೆಗಳು ಭರ್ತಿ
ಸರಕಾರಿ ಮಾಧ್ಯಮ ಮತ್ತು ಆಡಳಿತಗಾರರು ಸಹ ತಮ್ಮ ಹೇಳಿಕೆಗಳ ಮೂಲಕ ಸತ್ಯಾಗ್ರಹದ ವ್ಯಾಪಕತೆ ಮತ್ತು ಸತ್ಯಾಗ್ರಹಿಗಳ ಸಂಖ್ಯೆ ಇವೆರಡನ್ನೂ ಅತಿ ಕನಿಷ್ಠತಮವಾಗಿ ತಿಳಿಸುವ ಪ್ರಯತ್ನದಲ್ಲಿ ತೊಡಗಿದ್ದವು. ಈ ಕುರಿತಾದ ವಿಕೃತ ವರದಿ ನೀಡುವುದರಲ್ಲಿ ಹೆಚ್ಚಿನ ಲಕ್ಷ್ಯ ವಹಿಸುತಿದ್ದವು. ಅವು ಮಾಡುತ್ತಿದ್ದ ಪ್ರಚಾರವೆಂದರೆ ಸತ್ಯಾಗ್ರಹದ ಆರಂಭದಿಂದಲೇ ಅದರ ತಾಖತ್ತನ್ನು ನಷ್ಟಗೊಳಿಸಲಾಗಿದೆ ಎಂಬುದೇ. ಆದರೆ ಸರಕಾರಿ ಪ್ರಚಾರದ ಟೊಳ್ಳನ್ನು ಬಯಲುಗೊಳಿಸುವಂತಿದ್ದಂತಹವು ನಿಷ್ಪಕ್ಷವಾದಿ ಪತ್ರಿಕೆಗಳು. ವಾಸ್ತವಿಕತೆಯೆಂದರೆ ಸತ್ಯಾಗ್ರಹ ಆರಂಭವಾದ ಎರಡು ವಾರದೊಳಗಾಗಿ ದೇಶಾದ್ಯಂತ ಎಲ್ಲ ಪ್ರಮುಖ ಸೆರೆಮನೆಗಳು ತುಂಬಿಕೊಂಡಿದ್ದಷ್ಟೇ ಅಲ್ಲ, ಅವುಗಳಲ್ಲಿ ಇದ್ದ ಅವಕಾಶಕ್ಕಿಂತ ಎರಡರಿಂದ ಮೂರು ಪಟ್ಟು ಸತ್ಯಾಗ್ರಹಿಗಳನ್ನು ತುಂಬಿಸಬೇಕಾದ ವಿವಶತೆ ಸರಕಾರಕ್ಕೆ ಎದುರಾಗಿತ್ತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಪಂ. ಗೋವಿಂದವಲ್ಲಭ ಪಂತ ಅವರು ಒಂದು ಪತ್ರಿಕಾ ಪರಿಷತ್ತಿನಲ್ಲಿ ‘ಎಲ್ಲಿದೆ ಸಂಘದ ಸತ್ಯಾಗ್ರಹ? ಅದು ಕಣ್ಣಿಗೆ ಕಾಣಿಸುವುದೇ ಇಲ್ಲವಲ್ಲ’ ಎಂಬರ್ಥ ಬರುವಂತಹ ರೀತಿಯಲ್ಲಿ ಮಾತನಾಡಿದಾಗ ಅಮೃತ ಬಜಾರ್ ಪತ್ರಿಕೆಯು ತನ್ನ ಡಿಸೆಂಬರ್ 16ರ ಸಂಚಿಕೆಯಲ್ಲಿ ‘ಪ್ರಾಂತದಾದ್ಯಂತ ಈಗಾಗಲೇ 4500 ಸತ್ಯಾಗ್ರಹಿಗಳನ್ನು ಬಂಧಿಸಲಾಗಿದೆ’ ಎಂದು ವರದಿ ಮಾಡಿತ್ತು. ಮಧ್ಯ ಪ್ರದೇಶದಲ್ಲಿ ಡಿಸೆಂಬರ್ 17ರ ಮೊದಲು ಮೂರು ಸಾವಿರ ಸತ್ಯಾಗ್ರಹಿಗಳು ಬಂಧಿತರಾಗಿದ್ದರು.
ಸತ್ಯಾಗ್ರಹ ಮಾಡಿದ್ದವರ ಸಂಖ್ಯೆಯಂತೂ ಇದಕ್ಕಿಂತ ಹಲವು ಪಟ್ಟು ದೊಡ್ಡದಾಗಿತ್ತು. 19.12.1948ರ ‘ಸಂಡೇ ಟೈಮ್ಸ್ ’ ವರದಿ ಮಾಡಿರುವಂತೆ, ‘ಎರವಾಡ (ಮಹಾರಾಷ್ಟ್ರ)ದ ಸೆರೆಮನೆಯಲ್ಲಿ ಅವಕಾಶವಿರುವುದು 2000 ಕೈದಿಗಳಿಗಾಗಿ ಮಾತ್ರವಾದರೂ ಈಗಾಗಲೇ 3500 ಸತ್ಯಾಗ್ರಹಿಗಳನ್ನು ತಂದು ಸೇರಿಸಲಾಗಿರುವುದರಿಂದ ಸೆರೆಮನೆ ಅಧಿಕಾರಿಗಳು ಹಲವು ವಿಧ ಸಮಸ್ಯೆಗಳನ್ನು ಎದುರಿಸುತಿದ್ದಾರೆ.’
ಈ ಪರಿಸ್ಥಿತಿ ಎರವಾಡದಂತಹ ಕೆಲವೇ ಆಯ್ದ ಸೆರೆಮನೆಗಳದ್ದಷ್ಟೇ ಅಲ್ಲ, ದೇಶದಲ್ಲ್‌ನ ಹೆಚ್ಚಿನ ಎಲ್ಲ ಸೆರೆಮನೆಗಳಲ್ಲೂ ಉಂಟಾಗಿತ್ತು. ಗೊತ್ತಿರಲಿ, ಸತ್ಯಾಗ್ರಹ ಆರಂಭವಾಗಿ ಇನ್ನೂ ಒಂದು ವಾರವಷ್ಟೇ ಕಳೆದಾಗ ಉಂಟಾದ ಸ್ಥಿತಿ ಇದು.

   

Leave a Reply