ಅನ್ನದಾತರ ಆತ್ಮಹತ್ಯೆ ಸರಣಿಗೆ ಕೊನೆ ಎಂದು?

ದು ಗು ಲಕ್ಷ್ಮಣ್ - 0 Comment
Issue Date :

ರಾಜ್ಯದಲ್ಲಿ  ಕಳೆದ ಮೂರು ತಿಂಗಳ ಅವಧಿಯಲ್ಲಿ 89 ರೈತರು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಮಾನ ಆಡಳಿತಸೂತ್ರ ಹಿಡಿದವರಲ್ಲಿ ಕಿಂಚಿತ್ ಸಂಚಲನವನ್ನೂ ಮೂಡಿಸದಿರುವುದು ನಿಜಕ್ಕೂ ವಿಪರ್ಯಸ! ಇಷ್ಟೊಂದು ರೈತರು ಸಾವಿಗೆ ಶರಣಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ ಮೀನಮೇಷ ಎಣಿಸುತ್ತಿದ್ದುದು ಯಾಕೆಂದು ಗೊತ್ತಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಜು. 17ರಂದು ಭೇಟಿ ನೀಡಿದ ಬಳಿಕವೇ  ಸಿದ್ದರಾಮಯ್ಯ ಎಚ್ಚೆತ್ತುಕೊಂಡು ನಿನ್ನೆ ಭಾನುವಾರ ಮಂಡ್ಯ ಮತ್ತು ಮೈಸೂರಿನ ಎರಡು ಗ್ರಾಮಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿದ್ದು ಒಂದು ರಾಜಕೀಯ ನಾಟಕ, ಅಷ್ಟೆ. ರೈತ ಸಂತ್ರಸ್ತ ಕುಟುಂಬದಿಂದ ಕೃಷ್ಣ ಅವರಿಗೆ ಮಾತ್ರ ಕ್ರೆಡಿಟ್ ಸಿಗಬಾರದೆಂಬುದಷ್ಟೇ ಸಿದ್ದರಾಮಯ್ಯನವರ ಈ ಭೇಟಿಗೆ ಹಿನ್ನೆಲೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ತೆರಳಲು ಅವರು ಇಷ್ಟೊಂದು ವಿಳಂಬ ಮಾಡಿದ್ದೇಕೆ?
  ರೈತರ ಆತ್ಮಹತ್ಯೆ ಸರಣಿ ಮುಂದುವರೆಯುತ್ತಲೇ ಇದೆ. ಅತ್ತ ಆತ್ಮಹತ್ಯೆ ಸರಣಿ ನಡೆಯುತ್ತಿರುವಾಗಲೇ ಇತ್ತ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ನಡೆದಿದ್ದರೂ, ರೈತರ ಆತ್ಮಹತ್ಯೆ ತಡೆಗೆ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಅದರ ವೈಫಲ್ಯಕ್ಕೆ ಸಾಕ್ಷಿ. ಬೆಳಗಾವಿ ಅಧಿವೇಶನದ ಆರಂಭದ ದಿನವೇ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಮೊತ್ತದ ಬಗ್ಗೆ ಪರಿಹಾರವನ್ನು ಕಂಡುಹಿಡಿಯಬೇಕಾಗಿತ್ತು. ಆದರೆ ಅದೇನೂ ಆಗಲಿಲ್ಲ. ಕಾರ್ಖಾನೆ ಮಾಲೀಕರು ಸರ್ಕಾರದ ಯಾವ ಬೆದರಿಕೆಗೂ ಜಗ್ಗಲಿಲ್ಲ. ರೈತರಿಗೆ ಪಾವತಿಸಬೇಕಾದ ಬಾಕಿ ಮೊತ್ತವನ್ನೂ ಕೊಡಲಿಲ್ಲ. ರೈತರ ಬಾಕಿ ಮೊತ್ತ ಪಾವತಿಸದ ಕಾರ್ಖಾನೆಗಳಿಗೆ ಬೀಗಮುದ್ರೆ ಹಾಕಲಾಗುವುದೆಂಬ ಸರ್ಕಾರದ ಎಚ್ಚರಿಕೆ ಕಾರ್ಯರೂಪಕ್ಕೆ ಅಷ್ಟಾಗಿ ಇಳಿಯಲೇ ಇಲ್ಲ. ಎಲ್ಲೋ ಒಂದೆರಡು ಸಣ್ಣ ಪುಟ್ಟ ಕಾರ್ಖಾನೆಗಳಿಗೆ ಬೀಗಮುದ್ರೆ ಹಾಕಿದ್ದು ಬಿಟ್ಟರೆ ಪ್ರಭಾವಿ ಮಾಲೀಕರ ಕಾರ್ಖಾನೆಗಳ ಬಾಗಿಲು ಈಗಲೂ ತೆರೆದೇ ಇದೆ. ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತ ಚುಕ್ತಾ ಮಾಡದೆ, ಚುಕ್ತಾ ಮಾಡುವ ಮನಸ್ಸೂ ಇಲ್ಲದೆ, ಯಾರಿಗೂ ಕ್ಯಾರೇ ಎನ್ನದೇ ಆ ಮಾಲೀಕರು ಅಹಂಕಾರದಿಂದ ಬೀಗುತ್ತಿದ್ದಾರೆ. ಆಡಳಿತ ಪಕ್ಷ , ಪ್ರತಿಪಕ್ಷಗಳ ಪ್ರಭಾವಿ ಮುಖಂಡರೇ ಇಂತಹ ಸಕ್ಕರೆ ಕಾರ್ಖಾನೆಗಳ ಮಾಲೀಕರು! ತಮ್ಮ ಪಕ್ಷಕ್ಕೆ ಸೇರಿರುವ ಇಂತಹ ಕಾರ್ಖಾನೆ ಮಾಲೀಕರ ಕಿವಿಹಿಂಡಿ, ಕಬ್ಬು ಬೆಳೆಗಾರರ ಬಾಕಿ ಮೊತ್ತ ಪಾವತಿಸುವಂತೆ ತಾಕೀತು ಮಾಡುವ ದಿಟ್ಟತನ ಕಾಂಗ್ರೆಸ್‌ಗೂ ಇಲ್ಲ , ಬಿಜೆಪಿ, ಜೆಡಿಎಸ್‌ಗೆ ಮೊದಲೇ ಇಲ್ಲ. ಅಸಲಿಗೆ ಅಂತಹ ಪ್ರಭಾವಿ ಮಾಲೀಕರ ಮೇಲೆ ಪಕ್ಷದ ಮುಖಂಡರ ಹಿಡಿತವೇ ಇಲ್ಲ. ಪಕ್ಷದ ಮುಖಂಡರು ಅಂತಹ ಪ್ರಭಾವಿ ಮಾಲೀಕರ ‘ಕೃಪಾಕಟಾಕ್ಷ’ಕ್ಕೆ ಪಾತ್ರರಾಗಿದ್ದಾರೆ ಎಂಬುದು ಈಗ ಈ ವಿದ್ಯಮಾನಗಳನ್ನು ನೋಡಿದಾಗ ರಹಸ್ಯವೆನಿಸುವುದಿಲ್ಲ.
  ರೈತರ ಆತ್ಮಹತ್ಯೆಗೆ ನಿಜವಾದ ಕಾರಣಗಳೇನು? ಈ ಪ್ರಶ್ನೆಗೆ ಯಾರಿಂದಲೂ ಸಮರ್ಪಕ ಉತ್ತರ ಈಗ ಸಿಗುತ್ತಿಲ್ಲ. ರೈತರು ಮಾಡಿಕೊಂಡಿರುವ ವಿಪರೀತ ಸಾಲದ ಹೊರೆ, ಲೇವಾದೇವಿಗಾರರ ಎಡಬಿಡದ ಕಿರುಕುಳ, ಬೆಳೆಗೆ ಸಿಗದ ಸೂಕ್ತ ಬೆಲೆ, ಮಿತಿಮೀರಿದ ಇಳುವರಿ, ಇದರಿಂದಾಗಿ ಅನಿರೀಕ್ಷಿತ ನಷ್ಟ… ಹೀಗೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು. ರಾಜ್ಯದಲ್ಲಿ 89 ಮಂದಿಯಷ್ಟು ರೈತರ ಆತ್ಮಹತ್ಯೆಗೆ ಮುಖ್ಯ ಕಾರಣ – ರೈತರಿಂದ ಅತೀ ಹೆಚ್ಚು ಬಡ್ಡಿ ಪಡೆಯುವ ಹಾಗೂ ಬಲವಂತವಾಗಿ ಸಾಲ ವಸೂಲಿ ಮಾಡುವ ಲೇವಾದೇವಿಗಾರರು ಎಂಬುದು ಸಾಮಾನ್ಯ ಅಭಿಪ್ರಾಯ. ಅದು ನಿಜವೂ ಹೌದು. ಖಾಸಗಿ ಲೇವಾದೇವಿಗಾರರು ಭದ್ರತಾ ಸಾಲಕ್ಕೆ ವಾರ್ಷಿಕ ಶೇ. 14, ಭದ್ರತೆರಹಿತ ಸಾಲಕ್ಕೆ ಶೇ. 16ರಷ್ಟು ಮಾತ್ರ ಬಡ್ಡಿ ಪಡೆಯಬೇಕು. ಅದಕ್ಕಿಂತ ಹೆಚ್ಚು ಬಡ್ಡಿ ಪಡೆಯುವುದು ಅಪರಾಧ. ಆದರೆ ಹೀಗೆ ಅತೀ ಹೆಚ್ಚು ಬಡ್ಡಿ ವಸೂಲಿ ಮಾಡುವ ಲೇವಾದೇವಿಗಾರರ ವಿರುದ್ಧ ಇದುವರೆಗೆ ಸರ್ಕಾರ ಯಾವುದೇ ಕಠಿಣ ಕ್ರಮ ಕೈಕೊಂಡಿರಲಿಲ್ಲ. ಯುದ್ಧಕಾಲ ಸಂಭವಿಸಿದಾಗ ಶಸ್ತ್ರಾಸ್ತ್ರಗಳನ್ನು ಹೊಳಪುಗೊಳಿಸಿದಂತೆ, ಈಗ ರೈತರ ನಿರಂತರ ಆತ್ಮಹತ್ಯೆ ಸರಣಿ ಮುಂದುವರೆದಾಗ ಸರ್ಕಾರ ಲೇವಾದೇವಿಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಶೌರ್ಯ ಮೆರೆದಿದೆ! ಮೈಸೂರಿನಲ್ಲಿ 14, ಮಂಡ್ಯದಲ್ಲಿ 24, ಹಾಸನದಲ್ಲಿ 47 ಹಾಗೂ ಚಾಮರಾಜನಗರದಲ್ಲಿ ಒಬ್ಬರು ಖಾಸಗಿ ಲೇವಾದೇವಿಗಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ. ಅವರ ಬಳಿಯಿದ್ದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇದೇ ಕೆಲಸವನ್ನು ರೈತರ ಆತ್ಮಹತ್ಯೆಗೆ ಮುನ್ನವೇ ಕೈಗೊಳ್ಳಲು ಸರ್ಕಾರಕ್ಕೆ ಇದ್ದ ತೊಂದರೆಯಾದರೂ ಏನು?
  ನಮ್ಮ ದೇಶದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುವವರು ಬಹುಶಃ ರೈತರು ಮಾತ್ರ. ಬೇರೆ ಯಾವ ಕ್ಷೇತ್ರದವರೂ ಸಾಲಬಾಧೆಯ ಕಾರಣದಿಂದ ಇಷ್ಟೊಂದು ಅಪಾರ ಪ್ರಮಾಣದಲ್ಲಿ ನೇಣಿಗೆ ಶರಣಾದ ನಿದರ್ಶನಗಳಿಲ್ಲ. ಉದ್ಯಮ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಯಾವುದೇ ಉದ್ಯಮ ಆರಂಭಿಸಲು ಕೋಟ್ಯಂತರ ಹಣ ಬೇಕೇಬೇಕು. ಹಾಗಾಗಿ ಬ್ಯಾಂಕ್‌ಗಳಿಂದ ಕೋಟಿಗಟ್ಟಲೆ ಹಣ ಸಾಲವಾಗಿ ಉದ್ಯಮಿಗಳು ಪಡೆಯಬೇಕಾಗುತ್ತದೆ. ಅದಕ್ಕೆ ಬಡ್ಡಿಯನ್ನೂ ತೆರಬೇಕಾಗುತ್ತದೆ. ಎಲ್ಲ ಉದ್ಯಮಗಳು ಯಶಸ್ವಿಯಾಗಿ, ಲಾಭ ಗಳಿಸುತ್ತವೆ ಎಂದೇನಿಲ್ಲ. ಹಲವು ಉದ್ಯಮಗಳು ನಷ್ಟ ಅನುಭವಿಸಿ ಕಣ್ಮುಚ್ಚುತ್ತವೆ. ಅವನ್ನೆಲ್ಲ ರೋಗಗ್ರಸ್ತ ಉದ್ದಿಮೆಗಳೆಂದು ಪಟ್ಟಿ ಮಾಡಲಾಗುತ್ತದೆ. ಆದರೆ ಹೀಗೆ ನಷ್ಟ ಅನುಭವಿಸಿದ ಉದ್ಯಮಿಗಳು ಆತ್ಮಹತ್ಯೆಗೆ ಶರಣಾದ ನಿದರ್ಶನಗಳು ಇಲ್ಲವೇ ಇಲ್ಲ. ಅನೇಕ ದೊಡ್ಡ ದೊಡ್ಡ ಉದ್ಯಮಿಗಳ ಕೋಟಿ ಕೋಟಿ ಸಾಲವನ್ನು ಬ್ಯಾಂಕುಗಳೇ ಮನ್ನಾ ಮಾಡಿಬಿಡುವುದೂ ಉಂಟು. ಅದು ಮಾತ್ರ ಸಾರ್ವಜನಿಕರಿಗೆ ತಿಳಿಯುವುದೇ ಇಲ್ಲ. ದೊಡ್ಡ ಉದ್ಯಮಿಗಳ ಕೋಟಿ ಕೋಟಿ ಸಾಲಮನ್ನಾ ಮಾಡಿದ್ದಕ್ಕೆ ಕಾರಣವೇನು ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೇನೂ ತಿಳಿಸುವುದಿಲ್ಲ. ಆದರೆ ರೈತನೊಬ್ಬ ಬ್ಯಾಂಕ್ ಸಾಲ ತೀರಿಸದಿದ್ದರೆ ಆತನ ಮನೆ, ಜಮೀನು, ಆಸ್ತಿ ಎಲ್ಲವೂ ಜಫ್ತಿಗೊಳಗಾಗುತ್ತದೆ. ಆತನ ಮಾನ ಎಲ್ಲರ ಮುಂದೆ ಹರಾಜಾಗುತ್ತದೆ. ಸಾರ್ವಜನಿಕರ ಮುಂದೆ ಹೀಗೆ ಮಾನ ಮರ್ಯಾದೆ ಹರಾಜಾದಾಗ ಆ ರೈತನಿಗೆ ಆತ್ಮಹತ್ಯೆ ಬಿಟ್ಟು ಬೇರೊಂದು ಮಾರ್ಗ ಹೊಳೆಯುವುದಾದರೂ ಹೇಗೆ? ಎಷ್ಟಾದರೂ ಆತ ಅನ್ನದಾತ. ಮಾನ – ಮರ್ಯಾದೆಗೆ ಅಂಜುವ ಶ್ರೀಸಾಮಾನ್ಯ. ಉದ್ಯಮಿಗಳಿಗೆ ಹಾಗಲ್ಲ. ಮಾನ ಮರ್ಯಾದೆಗಳಿಗಂಜಿ ಅವರು ಉದ್ಯಮ ನಡೆಸುವುದೇ ಇಲ್ಲ. ಅವರದೇನಿದ್ದರೂ ಒಂದೇ ಗುರಿ – ಉದ್ಯಮದ ಮೂಲಕ ಕೋಟಿ ಕೋಟಿ ಲಾಭ ಸಂಪಾದಿಸುವುದು. ಆ ಉದ್ದೇಶಕ್ಕಾಗಿ ವಂಚನೆ, ಸುಳ್ಳು, ತಟವಟ… ಇತ್ಯಾದಿ ಎಲ್ಲ  ಅಪಸವ್ಯಗಳಿಗೂ ಅವರು ಸಿದ್ಧ. ರೈತನ ವಿಷಯದಲ್ಲಿ ಹೀಗೆ ಹೇಳುವಂತಿಲ್ಲ. ಸುಳ್ಳು, ತಟವಟ, ಕಪಟ ಅರಿಯದ  ಆತನಿಗೆ ಸಾಲಬಾಧೆ ಶೂಲದಂತೆ ಪ್ರತಿಕ್ಷಣ ತಿವಿಯುತ್ತಲೇ ಇರುತ್ತದೆ. ಅದರ ಪರಿಣಾಮವೇ ಇಷ್ಟೊಂದು ಆತ್ಮಹತ್ಯೆ.
  ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮೇಲೆ ಜನತೆಗೆ ಹಲವಾರು ‘ಭಾಗ್ಯ’ಗಳನ್ನು ಕರುಣಿಸಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಬಟ್ಟೆಭಾಗ್ಯ, ಶಾದೀಭಾಗ್ಯ… ಇಂತಹ ಭಾಗ್ಯಗಳ ಪರಿಣಾಮವೇನು ಎಂಬುದು ಬೇರೆ ವಿಚಾರ. ಈ ಭಾಗ್ಯಗಳಲ್ಲಿ  ಮುಖ್ಯಮಂತ್ರಿಯವರು ಕೆಲವನ್ನಾದರೂ ತಾತ್ಕಾಲಿಕವಾಗಿ ತಡೆ ಹಿಡಿದು, ಆ ಹಣದಿಂದ ರೈತರಿಗೆ ಕಾರ್ಖಾನೆಗಳಿಂದ ಬರಬೇಕಾದ ಹಣವನ್ನು ಪೂರ್ಣ ಪಾವತಿ ಮಾಡಬಹುದಿತ್ತು. ಕಾರ್ಖಾನೆಗಳಲ್ಲಿ ದಾಸ್ತಾನಿರುವ ಸಕ್ಕರೆಯನ್ನು ಬಡವರಿಗೆ ಹಂಚಿ ‘ಸಕ್ಕರೆ ಭಾಗ್ಯ’ ಕರುಣಿಸಬಹುದಿತ್ತು.
ಆಡಳಿತ ಸೂತ್ರ ಹಿಡಿದವರು ಅಭಿವೃದ್ಧಿಯ ಗುಂಗಿನಲ್ಲಿ ಗ್ರಾಮೀಣ ಪ್ರದೇಶದ ಜನತೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಸ್ಮಾರ್ಟ್‌ಸಿಟಿ, ಕೈಗಾರಿಕಾ ವಲಯ, ಎಸ್‌ಇಝಡ್… ಇತ್ಯಾದಿ ಅಭಿವೃದ್ಧಿಯ ಗುಂಗಿನಲ್ಲೇ ವಿಹರಿಸುತ್ತಿದ್ದಾರೆ. ಸ್ಮಾರ್ಟ್‌ಸಿಟಿಯ ಬದಲು ಸ್ಮಾರ್ಟ್ ಹಳ್ಳಿಯನ್ನು ಏಕೆ ರೂಪಿಸಬಾರದು? ಗ್ರಾಮೀಣ ಜನತೆ ಸುಖ, ನೆಮ್ಮದಿ, ಉದ್ಯೋಗ ಅರಸಲು ಪೇಟೆ – ಪಟ್ಟಣಗಳಿಗೇ ಏಕೆ ಹೋಗಬೇಕು? ಸ್ಮಾರ್ಟ್ ಗ್ರಾಮ ನಿರ್ಮಿಸಿ, ಅಲ್ಲಿ ಹಳ್ಳಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದರೆ ಅವರು ನಗರ ಪ್ರದೇಶಕ್ಕೆ  ಅಂಡಲೆಯುವ ಅಗತ್ಯವೇ ಇರುವುದಿಲ್ಲ. ಗ್ರಾಮಗಳಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ವಿದ್ಯುತ್ ದೀಪ, ಶಾಲೆ ಇತ್ಯಾದಿ ಯಾವುದೇ ಮೂಲಭೂತ ಸೌಕರ್ಯ ಇರುವುದಿಲ್ಲವೆಂದೇ ಗ್ರಾಮೀಣ ಯುವಕರು ನಗರಗಳತ್ತ ದಾಪುಗಾಲು ಹಾಕುತ್ತಿರುವುದು. ಸ್ವಾತಂತ್ರ್ಯ ಬಂದು 68 ವರ್ಷಗಳ ಬಳಿಕವೂ ಗ್ರಾಮೀಣ ಮಹಿಳೆಯರು ಶೌಚಕ್ಕೆ ಬಯಲು ಪ್ರದೇಶಕ್ಕೆೆ  ಹೋಗಬೇಕಾದ ದುಃಸ್ಥಿತಿ ತಪ್ಪಿಲ್ಲ. ಇದಕ್ಕೆ  ಯಾರು ಹೊಣೆ? ಗಾಂಧೀಜಿ ಹೇಳಿದ ಗ್ರಾಮರಾಜ್ಯದ ಕಲ್ಪನೆ ಯಾರ ತಲೆಗೂ ಹೋಗಿಲ್ಲ. ಪಟ್ಟಣಗಳ ರಂಗುರಂಗಿನ ಬದುಕಿನಲ್ಲಿ ವಿಹರಿಸುವವರಿಗೆ   ಗ್ರಾಮಗಳನ್ನು ನೋಡುವ ದೃಷ್ಟಿಕೋನವೇ ಸರಿಯಾಗಿಲ್ಲ. ಮೊದಲು ಗ್ರಾಮಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಮೂಲಭೂತ ಸೌಲಭ್ಯಗಳನ್ನು ಹೊಂದುವ ಮೂಲಕ ಹಳ್ಳಿಗಳಲ್ಲೂ ಸುಧಾರಿತ ಬದುಕು ಸಾಗಿಸಬಹುದು ಎಂಬುದು ಸಾಬೀತಾಗಬೇಕು. ಆಗ ಮಾತ್ರ ರೈತರ ಆತ್ಮಹತ್ಯೆಗೆ ಒಂದು ತಾರ್ಕಿಕ ಅಂತ್ಯ ನೀಡಬಹುದು. ಅನ್ನದಾತ ಆಗ ಸುಖಿಯಾಗಿರಬಹುದು. ಆದರೆ ಗಾಂಧೀಜಿ ಕಂಡ ಅಂತಹದೊಂದು ಕನಸನ್ನು ನನಸು ಮಾಡಲು ನಮ್ಮ ಆಡಳಿತ ಸೂತ್ರ ಹಿಡಿದವರಿಗೆ ಇಚ್ಛಾಶಕ್ತಿ ಪ್ರಾಪ್ತವಾಗುವುದು ಎಂದಿಗೆ?

   

Leave a Reply