ಅನ್ನವನು ಇಕ್ಕು

ಬೋಧ ಕಥೆ - 0 Comment
Issue Date : 13.04.2015

‘ಅನ್ನವನು ಇಕ್ಕು, ನನ್ನಿಯನು ನುಡಿ’ ಎನ್ನುವ ಕವಿ ವಾಕ್ಯವು ಮಾನವ ಜೀವನದ ಸಾರ್ಥಕ್ಯವನ್ನು ಅತ್ಯಂತ ಸರಳವಾಗಿಯೂ ಸುಂದರವಾಗಿಯೂ ಬಿಂಬಿಸುತ್ತದೆ. ಅತಿಥಿ ಸತ್ಕಾರ ಮತ್ತು ಸತ್ಯ ನಿಷ್ಠೆಗಳಿಗೆ ನಮ್ಮ ಪೂರ್ವಜರು ಎಷ್ಟು ಮಹತ್ತ್ವ ಕೊಡುತ್ತಿದ್ದರು ಎಂಬುದನ್ನು ಇದರಿಂದ ತಿಳಿಯಬಹುದು.
ಹಸಿವೆಯು ಮನುಕುಲದ ಅತ್ಯಂತ ದೊಡ್ಡ ಪಿಡುಗು. ಜಗತ್ತು ಬಹಳಷ್ಟು ಸುಧಾರಣೆಗಳನ್ನು ಕಂಡಿದ್ದರೂ, ಇಂದಿಗೂ ಕೆಲವು ಬಡ ದೇಶಗಳಲ್ಲಿ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆಂಬುದು ತೀರಾ ನಾಚಿಕೆಗೇಡಿನ ಸಂಗತಿ. ಆದ್ದರಿಂದ ಯಾರು ಹಸಿದು ಅತಿಥಿಯಾಗಿ ಮನೆಗೆ ಬರುತ್ತಾರೋ ಅವರಿಗೆ ಊಟವನ್ನು ಬಡಿಸುವುದು ಸಜ್ಜನರ ಕ್ರಮ. ತಿಥಿ – ವಾರಗಳ ಪರಿವೆ ಇಲ್ಲದೆ, ಮುಂಚಿತವಾಗಿ ತಿಳಿಸದೆ ಮನೆಗೆ ಬರುವವನು ‘ಅತಿಥಿ’ಯೆಂದು ಪರಿಗಣಿ ಸಲ್ಪಡುತ್ತಾನೆ. ‘ಅತಿಥಿ ದೇವೋ ಭವ’ ಎನ್ನುವ ಸಂದೇಶವನ್ನು ಕೊಡುವ ಮೂಲಕ ಉಪನಿಷತ್ ಕಾಲದ ಋಷಿಗಳು ಅತಿಥಿ ಸತ್ಕಾರಕ್ಕೆ ಸೂಕ್ತವಾದ ಮನ್ನಣೆಯನ್ನು ಒದಗಿಸಿದರು. ಇಂದಿಗೂ ಅನೇಕರ ಮನೆಗಳಲ್ಲಿ ದಣಿದವರ ಹಸಿವನ್ನು ತಣಿಸುವ ಸತ್ಕರ್ಮ ನಡೆಯುತ್ತಿದೆ.
ಆದರೆ ಅನೇಕರು ಹೀಗೆ ಮಾಡುವುದಿಲ್ಲ. ಅಂದರೆ ಅವರು ಯಾರಿಗೂ ಅನ್ನವನ್ನು ಇಕ್ಕುವುದಿಲ್ಲವೆಂದು ಇದರ ಅರ್ಥವಲ್ಲ, ಬಡಿಸುತ್ತಾರೆ. ಆದರೆ ಯಾರಿಗೆ? ಉಳ್ಳವರಿಗೆ, ತಮ್ಮ ಬಂಧು ಮಿತ್ರರಿಗೆ. ಹಸಿವೆ ಇಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಉಣ್ಣಿಸುತ್ತಾರೆ. ಇದರಿಂದ ಯಾವ ಪ್ರಯೋಜನವೂ ಆಗದು. ಏಕೆಂದರೆ ಹೊಟ್ಟೆ ತುಂಬಿದ ವ್ಯಕ್ತಿ ಮತ್ತೆ ಉಣ್ಣ್ಣುವುದರಿಂದ ಆತನಿಗೆ ಅಜೀರ್ಣವಾಗುತ್ತದೆ. ಅದೇ ಅನ್ನವನ್ನು ನಿಜವಾಗಿ ಹಸಿದವನಿಗೆ ಬಡಿಸಿದರೆ ಅವನ ಹೊಟ್ಟೆ ತಣ್ಣಗಾಗುತ್ತದೆ. ಹಸಿವು ಅಷ್ಟಾದರೂ ಕಡಿಮೆಯಾಗುತ್ತದೆ.
ನನ್ನಿಯನು ನುಡಿಯುವುದೆಂದರೆ ಸತ್ಯವನ್ನು ಹೇಳುವುದು. ‘ಸತ್ಯವೆಂಬುದೆ ತಾಯಿ – ತಂದೆ, ಸತ್ಯವೆಂಬುದು ಬಂಧು – ಬಳಗವು ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು’ ಎಂದು ಸಾರಿದ ಪುಣ್ಯಕೋಟಿಯ ನೆಲವಿದು. ಆದರೂ ಬಹಳಷ್ಟು ಜನ ಸುಳ್ಳು ಹೇಳುವುದನ್ನು ಬಿಟ್ಟಿಲ್ಲ. ಬಾಯಿ ತೆರೆದರೆ ಸಾಕು, ಸುಳ್ಳನ್ನೇ ನುಡಿಯುತ್ತಾ ತಿರುಗುವ ಮಂದಿ ಅನೇಕರಿದ್ದಾರೆ. ಉದ್ಯೋಗಕ್ಕಾಗಿ ಸುಳ್ಳು ಹೇಳುವವರೂ ಇದ್ದಾರೆ, ಸುಳ್ಳನ್ನೇ ಉದ್ಯೋಗವಾಗಿ ಮಾಡಿಕೊಂಡವರೂ ಇದ್ದಾರೆ. ಅನಿವಾರ್ಯವಾಗಿ, ಅಪದ್ಧರ್ಮದ ನೆಲೆಯಲ್ಲಿ ಹೀಗೆ ಮಾಡಬೇಕಾ ಯಿತೆಂಬ ಸಮರ್ಥನೆ ಬೇರೆ!
ಹೀಗೆ ಸುಳ್ಳು ಹೇಳುವುದರಿಂದ ನಾನಾ ಬಗೆಯ ಅನಾಹುತ ಗಳಿಗೆ ಎಡೆಯಾಗುತ್ತದೆ. ಮಾತ್ರವಲ್ಲ, ಸಮಾಜದಲ್ಲಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ಯಾರನ್ನು ಎಷ್ಟು ನಂಬಬೇಕು ಅಥವಾ ಬೇಡ ಎಂಬುದೇ ಗೊತ್ತಾಗುವುದಿಲ್ಲ. ಪತಿ – ಪತ್ನಿ, ತಂದೆ – ಮಕ್ಕಳು, ಗುರು – ಶಿಷ್ಯರು ಹಾಗೂ ಸಹೋದರ – ಸಹೋದರಿಯರ ನಡುವೆ ಕೂಡ ಅಪ್ಪಟ ಸತ್ಯದ ಪರಿಣಾಮವಾಗಿ ಸಿಗುವ ವಿಶ್ವಾಸ ಬಲುಮಟ್ಟಿಗೆ ಮಾಯವಾಗುತ್ತಿದೆ. ಸ್ವಾರ್ಥೈಕ ದೃಷ್ಟಿ ಇದಕ್ಕೆ ಕಾರಣ.
ಆದ್ದರಿಂದ ಪರಿಸ್ಥಿತಿ ಕೈಮೀರಿ ಹೋಗುವ ಮೊದಲೇ ಸತ್ಯವಾಕ್ಯ ಪರಿಪಾಲನೆಯ ಕಡೆಗೆ ನಾವು ಸರಿಯಾದ ಗಮನಹರಿಸಬೇಕು. ನನ್ನಿಯನು ನುಡಿಯುವುದು ತನಗೂ ಒಳ್ಳೆಯದು, ಊರಿಗೂ ಒಳ್ಳೆಯದು. ಇದು ಅತಿಥಿ ಸತ್ಕಾರದಷ್ಟೇ ಮುಖ್ಯವಾದುದು, ಮಹತ್ತ್ವದ್ದು.

   

Leave a Reply