ಅನ್ಸಾರಿಯೊಳಗಿನ ‘ಮುಸಲ್ಮಾನ’ ಮಾತನಾಡಿದಾಗ…

ಲೇಖನಗಳು - 0 Comment
Issue Date :

-ರಮೇಶ್ ಪತಂಗೆ

ಇಂದು ರಾಷ್ಟ್ರೀಯ ಚರ್ಚೆಯಲ್ಲಿರಬೇಕಾದರೆ ಅದಕ್ಕೆ ಸುಲಭ ವಿಧಾನವಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆರೋಪಿಸಿ, ಮುಸಲ್ಮಾನರ ಪಕ್ಷ ವಹಿಸಿ, ಮುಸಲ್ಮಾನರೊಂದಿಗೆ ದಲಿತರ ಸಮಸ್ಯೆ ಎತ್ತಿಕೊಳ್ಳಿ, ಕೇಂದ್ರದ ಬಿಜೆಪಿ ಸರ್ಕಾರ ಅದೆಷ್ಟು ಅಸಹಿಷ್ಣುವಾಗಿದೆ, ಪ್ರಜಾತಂತ್ರವಿರೋಧಿಯಾಗಿದೆ, ಎಂಬುದನ್ನು  ಮುಸಲ್ಮಾನ ಮತ್ತು ಕ್ರೈಸ್ತ, ದಲಿತರೊಡಗೂಡಿಸಿ ಮಂಡಿಸಿ, ಆಗ ನೀವು ವಾರ್ತೆಗಳ ಸೂಪರ್ ಹಿರೋ ಆಗುವಿರಿ. ಈಗ ಮೊಹಮ್ಮದ್ ಅನ್ಸಾರಿ ಆಗಿರುವುದು ಹೀಗೆಯೇ. ಕಳೆದ ಹತ್ತು ವರ್ಷಗಳಲ್ಲಿ, ಪುನಃ ಹೇಳುವೆ ಅವರು ಉಪರಾಷ್ಟ್ರಪತಿಯಾಗಿದ್ದರು, ಆದರೆ ಅವರು ವಾಸವಾಗಿದ್ದ ದಿಲ್ಲಿಯ ನಾಯಿಗೂ ಸಹ ಅವರು ಉಪರಾಷ್ಟ್ರಪತಿಯಾಗಿದ್ದುದು ಗೊತ್ತಿರಲಿಕ್ಕಿಲ್ಲ. ಆಗಸ್ಟ್ 10ರಂದು ಅವರು ನಿವೃತ್ತರಾದರು. ಅವರ ಸಾಮಾನ್ಯ ನಿವೃತ್ತಿ ಭಾಷಣವಾಗಿದ್ದರೆ ಯಾರೂ ಅದನ್ನು ಲೆಕ್ಕಿಸುತ್ತಿರಲಿಲ್ಲ, ಆದರೆ ಹೋಗುತ್ತಾ ಹೋಗುತ್ತಾ ಈಗ ಬಿಜೆಪಿ ಸರ್ಕಾರಕ್ಕೆ ಒದೆಯಲು ಸಾಧ್ಯವಾದಷ್ಟೂ ಒದ್ದುಬಿಟ್ಟು ಹೋದರು.

ರಾಜ್ಯಸಭೆಯಲ್ಲಿ ಬೀಳ್ಕೊಡಿಗೆಯಲ್ಲಿ ಭಾಷಣ, ಅದಕ್ಕೆ ಮುಂಚೆ ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ಅವರು ಮಾಡಿದ ಭಾಷಣ ಹಾಗೂ ರಾಜ್ಯಸಭಾ ಟಿವಿಯಲ್ಲಿ ಕರಣ್ ಥಾಪರ್ ಅವರಿಗೆ ನೀಡಿದ ದೀರ್ಘ ಸಂದರ್ಶನ, ಹೀಗೆ ಮೂರು ಸಂದರ್ಭಗಳಲ್ಲಿ ಮೊಹಮ್ಮದ್ ಹಮೀದ್ ಅನ್ಸಾರಿಯವರು ಮಾತನಾಡಿದ್ದು ಸುದ್ದಿಯಾದವು. ಮೊದಲ ಭಾಷಣ ಆಗಿದ್ದು ಬೆಂಗಳೂರಿನಲ್ಲಿ. ಆ ಭಾಷಣದಲ್ಲಿ  ಅವರಿಗೆ ಅಸಹಿಷ್ಣುತೆಯ ನೆನಪಾಯಿತು, ವಿವೇಕಾನಂದರೂ ನೆನಪಾದರು. ಎರಡನೆ ಭಾಷಣ ಆಗಿದ್ದು ರಾಜ್ಯಸಭೆಯಲ್ಲಿ, ಅಲ್ಲಿ ಅವರಿಗೆ ಸರ್ವಪಲ್ಲಿ ರಾಧಾಕೃಷ್ಣನ್ ನೆನಪಾದರು. ಕರಣ್ ಥಾಪರ್ ಸಂದರ್ಶನದಲ್ಲಿ ಮಹಾತ್ಮ ಗಾಂಧಿಜಿಯವರನ್ನು ಸ್ಮರಿಸಬೇಕಾಗಿತ್ತು, ಆದರೆ ಅವರೇನೂ ಸ್ಮರಿಸಲಿಲ್ಲ. ಮೊಟ್ಟಮೊದಲು ಅವರೇನು ಹೇಳಿದರೆಂದು ನೋಡೋಣ.

 ರಾಜ್ಯಸಭೆಯ ಬೀಳ್ಕೊಡಿಗೆ ಭಾಷಣದಲ್ಲಿ ಅವರು ಬಹುಮತದ ದಬ್ಬಾಳಿಕೆಯನ್ನು ಉಲ್ಲೇಖಿಸಿದರು. ತಮ್ಮ ವಿಷಯ ಮಂಡಿಸುವಾಗ ಅವರು ರಾಧಾಕೃಷ್ಣನ್‌ರನ್ನು ಉದ್ಧೃತಗೊಳಿಸಿದರು, ‘‘ವಿರೋಧಿ ಬಣಕ್ಕೆ ಸರ್ಕಾರದ ಧೋರಣೆಗಳನ್ನು ವಿಧಾಯಕ ಮತ್ತು ಮುಕ್ತ ರೀತಿಯಲ್ಲಿ  ಟೀಕಿಸುವ ಸ್ವಾತಂತ್ರ್ಯ ನೀಡದಿದ್ದಲ್ಲಿ , ಪ್ರಜಾತಂತ್ರವು ತಾನಾಶಾಹಿಯಾಗಿ ಪರಿವರ್ತನೆಗೊಳ್ಳುವ ಅಪಾಯವಿದೆ.’’ ಮುಂದೆ ಅನ್ಸಾರಿ ಹೇಳುತ್ತಾರೆ, ‘‘ಅಲ್ಪಸಂಖ್ಯಾತರಿಗೆ ಭದ್ರತೆ ನೀಡುವುದರಿಂದಲೇ ಪ್ರಜಾತಂತ್ರವು ವಿಶಿಷ್ಟ ರೀತಿಯ ರಾಜ್ಯವ್ಯವಸ್ಥೆಯೆನಿಸುತ್ತದೆ.’’

 ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ (ಬೆಂಗಳೂರು) ಭಾಷಣದ ಮೊದಲ ಭಾಗದಲ್ಲಿ ಅವರು ನಮ್ಮ ಸಂವಿಧಾನ ಮತ್ತು ಅದರ ಪ್ರಿಎಂಬಲ್‌ಅನ್ನು ಉಲ್ಲೇಖಿಸಿ, ನಮ್ಮ ಸಮಾಜವು ಅನೇಕ ಧರ್ಮ, ವರ್ಗ ಸಮುದಾಯಗಳಿಂದ ಕೂಡಿದೆ.  ಪ್ಲೂರಲಿಟಿಯನ್ನು  (ಬಹುವಿಧತೆ) ಆಧರಿಸಿದ ಪ್ರಜಾತಂತ್ರ ನಮ್ಮದು. ಇನ್ನೊಂದು ಭಾಗದಲ್ಲಿ ಜಾತ್ಯತೀತತೆ ನಮ್ಮ ಮಾರ್ಗವಾಗಿದೆ. ರಾಜ್ಯದ ಯಾವುದೇ ಉಪಾಸನಾ ಧರ್ಮವಿರಬಾರದು, ಅದು ತಟಸ್ಥವಿರಬೇಕು. ಧಾರ್ಮಿಕ ಸಹಿಷ್ಣುತೆಯಿರಬೇಕು, ಬಂಧುಭಾವವಿರಬೇಕು, ಎಂಬ ವಿಷಯವನ್ನು ಮಂಡಿಸಿದರು. ಮೂರನೇ ಭಾಗದಲ್ಲಿ ಅವರು ಸಮಸ್ಯೆ ಮಂಡಿಸತೊಡಗಿದರು. ಏಕಾತ್ಮತೆ ಎಂದರೆ ತಮ್ಮ ಅಸ್ತಿತ್ವವನ್ನು ಅಳಿಸಿಹಾಕಿ ಏಕರೂಪವಾಗುವುದಲ್ಲ ಎಂದು ಅವರು ಹೇಳಿದರು. ಈ ಭಾಷಣದಲ್ಲಿ ವಿಷ ಫೂತ್ಕಾರಕ್ಕೆ ಮೊದಲು ಮೊಹಮ್ಮದ್ ಹಮೀದ್ ಅನ್ಸಾರಿಯವರು ಆ ಫೂತ್ಕಾರದ ಒಂದು ಸೈದ್ಧಾಂತಿಕ ಮುಖವನ್ನು ನಿರೂಪಿಸಿದರು. ಭಾರತದ ಎಡ ಮತ್ತು ಜಾತ್ಯತೀತ ವೈಚಾರಿಕರ ಒಂದು ವೈಶಿಷ್ಟ್ಯವಿರುತ್ತದೆ. ನೀನು ನೀಚ ಮತ್ತು ನಾಲಾಯಕ್ ಎಂದು ಹೇಳಿದರೆ ಬೈದಂತಾಗುತ್ತದೆ, ಆದರೆ ಅದನ್ನು ಹೇಳುವ ಮೊದಲು ಸೈದ್ಧಾಂತಿಕ ಚೌಕಟ್ಟನ್ನು ತಯಾರಿಸಿದಲ್ಲಿ ಅದು ವೈಚಾರಿಕ ವಿವಾದವೆನಿಸುತ್ತದೆ.

 ಲಾ ಸ್ಕೂಲ್‌ನ ತಮ್ಮ ಭಾಷಣದಲ್ಲಿ ಅನ್ಸಾರಿಯವರು, ಉತ್ತೇಜಿತ ರಾಷ್ಟ್ರವಾದದಿಂದ ಮುಸಲ್ಮಾನರ ಮನಸ್ಸಿನಲ್ಲಿ ಅಸುರಕ್ಷಿತತೆಯ ಭಾವನೆ ಮೂಡುತ್ತಿದೆ ಎಂದು ಸೂಚಿಸಲು ಉದ್ದೇಶಿಸಿದ್ದರು. ನಾವು ಸಹಿಷ್ಣುತೆ ಮತ್ತು ಬಹುವಿಧತೆಗಳನ್ನು ಗೌರವಿಸಲು ಕಲಿಯಬೇಕು. ಸಹಿಷ್ಣುತೆಯಿಂದ ಮುಂದೆ ಹೋಗಿ ಸ್ವೀಕೃತಿಯ ಕಡೆ ನಾವು ಹೋಗಬೇಕು, ಎಂದೂ ಅನ್ಸಾರಿ ಹೇಳಿದರು. ವಿವೇಕಾನಂದರನ್ನು ಅವರು ಹೀಗೆ ಉದ್ಧೃತಗೊಳಿಸಿದರು,‘‘ಇತರ ಧರ್ಮಗಳ ಬಗ್ಗೆ ಕೇವಲ ಸಹಿಷ್ಣುಗಳಾಗಬೇಡಿ, ಸಕಾರಾತ್ಮಕ ರೀತಿಯಿಂದ ಅದನ್ನು ಸ್ವೀಕರಿಸಿರಿ. ಸತ್ಯವು ಎಲ್ಲ ಧರ್ಮಗಳ ಅಡಿಪಾಯವಾಗಿದೆ.’’

 ಅನ್ಸಾರಿಯವರಿಗೆ ಸಹಿಷ್ಣುತೆ ಮತ್ತು ಸ್ವೀಕಾರ್ಯತೆಗಳ ನೆನಪಾಯಿತು. ಇದಕ್ಕಾಗಿ ಅವರನ್ನು ಅಭಿನಂದಿಸುವೆ. ಅವರು ಸುಮಾರು ಹತ್ತು ವರ್ಷ ಮಧ್ಯಪೂರ್ವದಲ್ಲಿದ್ದರು. ಮಧ್ಯಪೂರ್ವದ ಎಲ್ಲ ದೇಶಗಳಲ್ಲಿ ಅವರದೇ ಧರ್ಮದ ಜನರಿದ್ದಾರೆ. ಅಲ್ಲಿ ಸಹಿಷ್ಣುತೆ ಹೇಗಿದೆಯೆಂದು ಅವರಿಗೆ ತಿಳಿಯದು. ಮೂರ್ತಿಪೂಜಕರಿಗೆ ಆ ದೇಶದಲ್ಲಂತೂ ಸ್ಥಾನವೇ ಇಲ್ಲ, ಅಲ್ಲಾನನ್ನು ನಂಬಿದ್ದರೂ ಸ್ವಲ್ಪ ಬೇರೆಯೇ ಯೋಚಿಸುವ ಮುಸಲ್ಮಾನರನ್ನು ಅಲ್ಲಿ ಜೀವಂತವಾಗಿಡುತ್ತಿಲ್ಲ. ವಿವೇಕಾನಂದರು ಹೇಳಿದ್ದರು, ಎಲ್ಲ ಧರ್ಮಗಳಲ್ಲೂ ಸತ್ಯದ ಅಂಶವಿದೆ ಹಾಗೂ ಕುರಾನ್ ಹೇಳುತ್ತದೆ, ಸತ್ಯ ಕೇವಲ ಕುರಾನಿನಲ್ಲಿದೆ. ಸತ್ಯ ಎಂದರೆ ಅಲ್ಲಾ, ಅಲ್ಲಾ ಬಿಟ್ಟು ಮತ್ತೆಲ್ಲಾ ಸುಳ್ಳು. ಇದು ವಿವೇಕಾನಂದರಿಗೂ ತಿಳಿದಿತ್ತು. ಹಾಗೆಂದೇ ವಿವೇಕಾನಂದರು ಹೇಳಿದ್ದು – ನನಗೆ ಇಸ್ಲಾಮೀ ಶರೀರ ಮತ್ತು ವೇದಾಂತಿ ಮೆದುಳಿನ ಸಮಾಜ ಬೇಕಾಗಿದೆ. ಇಸ್ಲಾಮೀ ಶರೀರದಲ್ಲಿ ಇಸ್ಲಾಮೀ ಮೆದುಳು ಬೇಡವೆಂಬ ಆಶಯ ಅವರದು. ಹಮೀದ್ ಅವರಿಗೆ ವಿವೇಕಾನಂದರ ಈ ವಿಚಾರ ಗೊತ್ತಿರಬಹುದೆಂದು ನಾನು ಭಾವಿಸುವೆ.

 ಹಮೀದ್ ಸಾಹೇಬರೇ ! ನಮ್ಮ ಇತಿಹಾಸವನ್ನೊಮ್ಮೆ ನೋಡಿ. ಜಗತ್ತಿನಲ್ಲಿ ಇಷ್ಟೊಂದು ಸಹನಶೀಲತೆ ತೋರುವ ಮತ್ತಾವ ಸಮಾಜವಿದೆ ಹೇಳಿ ? ಹಿಂದೂ ಸಾಂಸದರು, ಹಿಂದೂ ವಕೀಲರು, ಬಹುಸಂಖ್ಯ ಹಿಂದೂ ಶ್ರೋತೃಗಳಿಗೆ ಪ್ರಜಾತಾಂತ್ರಿಕ ಮೌಲ್ಯಗಳು, ಸಾಮಾಜಿಕ ನ್ಯಾಯ, ಸಹಿಷ್ಣುತೆ, ಬಹುಸಂಖ್ಯಾತರ ತಾನಾಶಾಹಿ, ಬಹುವಿಧತೆ, ಸರ್ವಧರ್ಮಸಮಭಾವ, ಈ ಕುರಿತು ಪ್ರವಚನ ನೀಡುವುದು ಬಹು ಸುಲಭವೇ ಆಗಿದೆ. ಪರಂಪರೆಯಂತೆ ಹಿಂದೂ ವ್ಯಕ್ತಿ ಈ ಪರಿಕಲ್ಪನೆಯಂತೆ ಜೀವಿಸುತ್ತಿದ್ದರೂ, ತನ್ನ ಹಿತದ ವಿಷಯದಲ್ಲಿ ನಿದ್ದೆಗೇಡಿ ಮತ್ತು ಭೋಳೆಯಾಗಿರುತ್ತಾನೆ. ಭಾರತಕ್ಕೆ ಬಂದಿದ್ದ ಅನ್ಸಾರಿಯವರ ಪೂರ್ವಜ ಆಕ್ರಮಣಕಾರಿಗಳು ಅವನ ಭೋಳೆತನದಿಂದ ಲಾಭ ಪಡೆದರು. ಗುಜರಾತಿನ ಮೇಲೆ ದಾಳಿುಟ್ಟಾಗ ಮುಂಚೂಣಿಯಲ್ಲಿ ಅವರು ಗೋವುಗಳ ಹಿಂಡನ್ನಿಟ್ಟರು. ಹಿಂದೂ ವ್ಯಕ್ತಿ ಗೋವನ್ನು ಪವಿತ್ರವೆಂದು ಭಾವಿಸುವಾಗ  ಅವನ್ನೆಂತು ಕಡಿಯುವನು ? ಗೋವನ್ನು ರಕ್ಷಿಸುವ ಯತ್ನದಲ್ಲಿ ಹಿಂದುವೇ ಕಡಿಯಲ್ಪಟ್ಟನು. ಈಗಲೂ ಹಿಂದುಗಳಿಗೆ ಸಾಮಾಜಿಕ ನ್ಯಾಯ, ಸಹಿಷ್ಣುತೆ, ಪ್ರಜಾತಾಂತ್ರಿಕ ಮೌಲ್ಯಗಳ ಗೋವನ್ನು ಕಳುಹಿಸಿ ಎಚ್ಚರಗೇಡಿಗಳಾಗಿಡಬಹುದೆಂದು ಮೊಹಮ್ಮದ್ ಹಮೀದ್ ಅನ್ಸಾರಿಯವರಿಗೆ ಅನಿಸಿದ್ದರೆ ತಾವು ತಪ್ಪುಮಾಡುತ್ತಿದ್ದೇವೆಂದು ಅವರು ಗಮನಿಸಬೇಕು. ಗಾಂಧಿಹಿಂದುವಿನ ಕಾಲಖಂಡ ಈಗ ಮುಗಿದಿದ್ದು, ಈಗ ಶಿವಾಜಿಹಿಂದುವಿನ  ಕಾಲಖಂಡ ಆರಂಭವಾಗಿದೆ. ಹಾಗೆಂದೇ ಅನ್ಸಾರಿಯವರ ಹೇಳಿಕೆ ಬರುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗ ಬಲವಾಗಿ ತಿರುಗೇಟು ಕೊಟ್ಟಿದ್ದಾನೆ.

 ಉಪರಾಷ್ಟ್ರಪತಿಯಾಗಿ ಬೀಳ್ಕೊಳ್ಳುವಾಗ ನೀವು ಅಬ್ದುಲ್ ಕಲಾಮ್ ಅವರ ಆದರ್ಶ ಮೆರೆಯಬೇಕಾಗಿತ್ತು. ನೀವು ಮುಸಲ್ಮಾನರ ಉಪರಾಷ್ಟ್ರಪತಿಯಾಗಿರಲಿಲ್ಲ, ಹಿಂದುಗಳದ್ದೂ ಆಗಿರಲಿಲ್ಲ, ನೀವು ದೇಶದ ಉಪರಾಷ್ಟ್ರಪತಿಯಾಗಿದ್ದಿರಿ. ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ, ಯಾವ  ದೇಶದಲ್ಲಿ ಎಲ್ಲ ಧರ್ಮಗಳ ಜನ ವಾಸಿಸುತ್ತಾರೋ ಅವರೆಲ್ಲರ ವತಿಯಿಂದ ನೀವು ಮಾತನಾಡಬೇಕಿತ್ತು. ನಿಮಗೆ ಈ ದೇಶ ತಿಳಿದಿದ್ದರೆ ಹಾಗೂ ನಿಜವಾಗಿ ನಿಮ್ಮ ಮನಸ್ಸಿನಲ್ಲಿ  ಹಿಂದೂ-ಮುಸಲ್ಮಾನರ ಮನೋಮಿಲನದ ವಿಚಾರವಿದ್ದರೆ , ನೀವು ಹೇಳುತ್ತಿದ್ದಿರಿ, ಬಾಬರನು ಶ್ರೀರಾಮನ ಮಂದಿರ ಕೆಡವಿದ್ದ ಜಾಗದ ಮೇಲೆ ನಮಗೇನೂ ಹಕ್ಕಿಲ್ಲ. ನಾವು ಒಂದು ಸಮಾಜವಾಗಿ ಉಳಿಯಲು ರಾಮಜನ್ಮಭೂಮಿಯಲ್ಲಿ ರಾಮನ ಮಂದಿರ ನಿರ್ಮಿಸಲು ಕೈ ಕೈ ಕೊಟ್ಟು ಕೆಲಸ ಮಾಡಬೇಕು. ಅನ್ಸಾರಿಯವರೇ, ನೀವು ಹೀಗೆ ಹೇಳಿದ್ದರೆ ಇಂದು ಆಗಿದ್ದಕ್ಕಿಂತಲೂ ಹೆಚ್ಚಿನ ದೊಡ್ಡ ಸುದ್ದಿ ಆ ಸುದ್ದಿ ಆಗುತ್ತಿತ್ತೇನೋ. ಆದರೆ ಉಪರಾಷ್ಟ್ರಪತಿ ಸ್ಥಾನ ತ್ಯಜಿಸುವಾಗ ತಾನು ಮುಸಲ್ಮಾನ, ಮುಸಲ್ಮಾನರ ಕಲ್ಪಿತ ವಿಷಯಗಳನ್ನೆತ್ತಿ ತಾನು ಮಾತನಾಡಬೇಕು, ಅದು ಕಾಂಗ್ರೆಸ್ ಪಕ್ಷದ ಲೈನ್ ಆಗಿದ್ದು ನಾನದನ್ನು ಬಿಡಬಾರದು ಎಂಬುದನ್ನು ಮರೆಯಲು ಸಾಧ್ಯವಾಗಲಿಲ್ಲ. ವೆಂಕಯ್ಯ ನಾಯ್ಡು ಹೇಳಿದ್ದೇ ನಿಜ, ನಿಮ್ಮ ಭಾಷಣ ರಾಜಕೀಯ ಭಾಷಣವಾಗಿದೆ.

 ಯಾರ ಮನೆತನ ಖಿಲಾಫತ್ ಆಂದೋಲನದಲ್ಲಿ ತೊಡಗಿತ್ತೋ, ಆ ಮನೆತನದ ವಾರಸುದಾರರಿಂದ ಇದರಿಂದ ಭಿನ್ನವಾದುದನ್ನು ಅಪೇಕ್ಷಿಸುವುದಾದರೂ ಹೇಗೆ ? ಖಿಲಾಫತ್ ಆಂದೋಲನ 1920ರಲ್ಲಿ ಶುರುವಾಯಿತು. ಈ ಆಂದೋಲನವು ಮುಸಲ್ಮಾನರನ್ನು ಪಾಕಿಸ್ತಾನಿಗಳನ್ನಾಗಿ ಮಾಡಿತು. ಹಾಗೆಂದೇ ಈ ಆಂದೋಲನವನ್ನು ಆಪತ್ (ವಿಪತ್ತು ) ಆಂದೋಲನವೆಂದು ಹೇಳಲಾಗುತ್ತದೆ. ಮುಸಲ್ಮಾನರಿಗೆ ದೇಶಬಾಹ್ಯ ನಿಷ್ಠೆಯನ್ನು ಕಲಿಸುವ ಕೆಲಸವನ್ನು ಈ ಆಂದೋಲನ ಮಾಡಿತು. ಮೊಹಮ್ಮದ್ ಹಮೀದ್ ಅನ್ಸಾರಿಯವರ ಮನೆತನ ಈ ಆಂದೋಲನದಲ್ಲಿ ಸಕ್ರಿಯವಾಗಿತ್ತು.ಅವರಿಗೆ ಹಿಂದುಗಳಿಂದ 1920ರ ಸಹಿಷ್ಣುತೆ ಬೇಕಾಗಿದೆ. 1920ರ ಹಿಂದು ವೈಕುಂಠವಾಸಿಯಾಗಿದ್ದು, ಇಂದು ನವಪೀಳಿಗೆಯ ಹಿಂದುವು ಇತಿಹಾಸದ ಲೆಕ್ಕ ಚುಕ್ತಾ ಮಾಡುವ ಮನಃಸ್ಥಿತಿಯಲ್ಲಿ ನಿಂತಿದ್ದಾನೆ. ಈ ಪರಿವರ್ತನೆ ಅವರಿಗೆ ಜೀರ್ಣವಾಗುತ್ತಿಲ್ಲ. ಅವರ ಜೀರ್ಣಾಂಗವನ್ನು ನಾವೇನೂ ಸುಧಾರಿಸಲಾರೆವು.

ಅನುವಾದ : ಕಾ.ರ. ಆಚಾರ್ಯ

 

   

Leave a Reply