ಅಪೂರ್ವ ಸಾಮರಸ್ಯ ಯಾತ್ರೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date :

– ರಮೇಶ್‍ ಪತಂಗೆ

ಆ ಗ್ರಾಮದ ಹೆಸರು ಬೇಟಮಾ. ಇಂದೋರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ವೈಶಿಷ್ಟ್ಯವೆಂದರೆ ಗುರು ನಾನಕ್ ಅವರು ಈ ಗ್ರಾಮಕ್ಕೆ ಬಂದು ಹೋಗಿದ್ದರು. ಅವರು ಬರುವುದಕ್ಕೆ ಮುಂಚೆ ಈ ಗ್ರಾಮದಲ್ಲಿ ಅಷ್ಟೇನೂ ಜನವಸತಿಯಿರಲಿಲ್ಲ. ಅಲ್ಲಿಯ ಭಾವಿಗಳಲ್ಲಿ ಉಪ್ಪುನೀರಿದ್ದುದು ಇದಕ್ಕೆ ಕಾರಣ. ಗುರು ನಾನಕರ ಪಾದಸ್ಪರ್ಶದಿಂದ ಈ ಭೂಮಿ ಪವಿತ್ರವಾಯಿತು, ಸಿಹಿನೀರಿನ ಒಂದು ಭಾವಿಯನ್ನು ಅಲ್ಲಿ ತೋಡಲಾಯಿತು. ಆ ಭಾವಿಯ ಬಳಿಯೇ ಸಣ್ಣದಾದರೂ ಸ್ಥಾಪತ್ಯಕಲೆಯ ಉತ್ತಮ ಮಾದರಿಯ ಒಂದು ಗುರುದ್ವಾರವಿದೆ. ಅದರ ಹೆಸರು ಬೇಟಮಾ ಸಾಹೇಬ್.
ಈ ಬೇಟಮಾ ಗ್ರಾಮದಲ್ಲಿ ಮೇ 30ರಂದು ‘ಯುವಾ ಸಾಮರಸ್ಯ ಸಮಾಗಮ’ದ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರನಾಗಿ ನಾನು ಹೋಗಿದ್ದೆ. ‘ಹುತಾತ್ಮ ಸಾಮರಸ್ಯ ಯಾತ್ರೆ’ ಎಂಬ ಇಪ್ಪತ್ತು ದಿನಗಳ ಯಾತ್ರೆ ನಡೆದಿತ್ತು, ಅದರ ಸಮಾರೋಪ ಈ ಗ್ರಾಮದಲ್ಲಿತ್ತು. ಸುತ್ತಮುತ್ತಲಿನ 30-40 ಗ್ರಾಮಗಳಿಂದ ಈ ಸಮಾಗಮಕ್ಕೆ ಯುವಕರು ಬಂದಿದ್ದರು. ನಾನು ಈ ಕಾರ್ಯಕ್ರಮಕ್ಕೆ ಹೋಗುವುದು ಇದ್ದಕ್ಕಿದ್ದಂತೆ ನಿಶ್ಚಿತವಾಗಿತ್ತು. ಡಾ. ಮೋಹನರಿಂದ ನನಗೆ 3-4 ದಿನಗಳ ಹಿಂದೆ ಫೋನ್ ಬಂದಿತ್ತು, ನಾನು ಬರುವಂತೆ ಅವರು ತುಂಬ ಆಗ್ರಹಿಸಿದ್ದರು. ಸಾಮರಸ್ಯದ ವಿಷಯವಾಗಿದ್ದರಿಂದ ನಾನು ಇಲ್ಲವೆನ್ನಲು ಸಾಧ್ಯವಿರಲಿಲ್ಲ. ಆದರೆ ಮನಸ್ಸಿನಲ್ಲಿ ವಿಚಾರ ಬಂದಿತು, ‘ಹುತಾತ್ಮ ಸಾಮರಸ್ಯ ಯಾತ್ರೆ’ ಎಂದರೇನು ? ಮಹಾರಾಷ್ಟ್ರದಲ್ಲಿ ನಾವು ಎರಡು ಸಾಮರಸ್ಯ ಯಾತ್ರೆಗಳನ್ನು ನಡೆಸಿದೆವು, ಅವು ಪ್ರಾಂತದ ಎಲ್ಲ ಜಿಲ್ಲೆಗಳಿಗೆ ಹೋದವು. ಸಾಮಾಜಿಕ ಸಾಮರಸ್ಯವು ಈ ಯಾತ್ರೆಗಳ ಮುಖ್ಯ ವಿಷಯವಾಗಿತ್ತು. ಹಾಗಾದರೆ ಹುತಾತ್ಮ ಸಾಮರಸ್ಯ ಯಾತ್ರೆ ಎಂದರೇನು? ನನ್ನ ಮನಸ್ಸಿನಲ್ಲಿ ಪ್ರಶ್ನೆಯೆದ್ದಿತು.
ತಮ್ಮ ಮನಸ್ಸಿನಲ್ಲಿ ಈ ಯಾತ್ರೆಯ ಪರಿಕಲ್ಪನೆಯಿದ್ದವರು ಮೋಹನಜಿ ಗಿರಿ. ಅವರಿಗೆ ನಾನು ಕೇಳಿದೆ, ‘‘ಈ ಹುತಾತ್ಮ ಸಾಮರಸ್ಯ ಯಾತ್ರೆಯ ಪರಿಕಲ್ಪನೆಯೇನು? ಇನ್ನು ಸಾಮರಸ್ಯದೊಂದಿಗೆ ಅದನ್ನು ನೀವು ಜೋಡಿಸಿದ್ದು ಹೇಗೆ?’’ ಅವರು ನೀಡಿದ ಉತ್ತರದಿಂದ ಕಾರ್ಯಕರ್ತರ ಪ್ರತಿಭೆಯ ದರ್ಶನವಾಯಿತು. ಅವರು ಹೇಳಿದರು, ‘‘ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರ ಬಗ್ಗೆ ಯುವಕರಲ್ಲಿ ಬಹು ತೀವ್ರ ಭಾವನೆಗಳಿರುತ್ತವೆ. ದೇಶಕ್ಕಾಗಿ ಬಲಿದಾನಗೊಂಡ ಹುತಾತ್ಮರ ಬಗ್ಗೆ ಅವರ ಮನಸ್ಸಿನಲ್ಲಿ ಅಪಾರ ಶ್ರದ್ಧೆ ಮತ್ತು ಭಕ್ತಿಯಿರುತ್ತದೆ. ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಭಾರತ ತುಂಡು ತುಂಡಾದೀತು, ಮನೆಮನೆಗಳಲ್ಲೂ ಅಫಜಲ್ ಗುರು ಹುಟ್ಟಿಬಂದಾನು ಎಂಬ ಘೋಷಣೆ ಹಾಕಲಾಯಿತು. ಇದರ ವಿರುದ್ಧ ಯುವಕರ ಮನಸ್ಸಿನಲ್ಲಿ ಭಾರೀ ಆಕ್ರೋಶವಿದೆ. ಹಾಗೆಂದೇ, ಹುತಾತ್ಮರ ಊರಿನ ಮಣ್ಣನ್ನು ತಂದು, ಆ ಮಣ್ಣಿನಿಂದ ಒಂದು ಕಲಶವನ್ನು ತಯಾರಿಸಿ, ಗ್ರಾಮ ಗ್ರಾಮಗಳಲ್ಲೂ ಈ ಕಲಶದ ಯಾತ್ರೆ ಒಯ್ಯಲು ನಾವು ನಿಶ್ಚಯಿಸಿದೆವು. ಎರಡು ಭಾಗಗಳಲ್ಲಿ ಈ ಕಾರ್ಯಕ್ರಮ ನಡೆಸಿದೆವು. ಮೊದಲ ಭಾಗದಲ್ಲಿ 70 ಗ್ರಾಮಗಳಿಗೂ, ಎರಡನೆ ಭಾಗದಲ್ಲಿ 60 ಗ್ರಾಮಗಳಿಗೂ ಹೋದೆವು. ಯುವಕರು ನಮ್ಮ ಗುರಿಯಾಗಿದ್ದು, ಸುಮಾರು ಪ್ರತಿಯೊಂದು ಗ್ರಾಮದಲ್ಲೂ ಯಾತ್ರೆಗೆ ಯುವಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.’’
‘‘ಇದಕ್ಕೆ ನೀವು ಸಾಮರಸ್ಯದ ವಿಷಯ ಜೋಡಿಸಿದ್ದು ಹೇಗೆ ?’’ ಎಂದು ನಾನು ಪ್ರಶ್ನಿಸಿದಾಗ ಅವರು ಹೇಳಿದರು, ‘‘ನಾವು ಯುವಕರಿಗೆ ಹೇಳಿದೆವು: ದೇಶಕ್ಕಾಗಿ ಬಲಿದಾನ ಮಾಡಿದವರು ಸ್ವತಂತ್ರ, ಸಮೃದ್ಧ ಹಾಗೂ ಸಾಮರ್ಥ್ಯಶಾಲಿ ಭಾರತದ ಚಿತ್ರ ಕಂಡರು. ಅಲ್ಲದೆ ಭಾರತವು ಸಮೃದ್ಧ ಮತ್ತು ಸಾಮರ್ಥ್ಯಶಾಲಿಯಾಗಬೇಕಾದರೆ, ನಾವು ಜಾತಿಭೇದ ಮರೆಯಬೇಕು. ಅಸ್ಪೃಶ್ಯತೆ ಆಚರಿಸುವುದನ್ನು ಬಿಡಬೇಕು ಹಾಗೂ ನಮ್ಮೆಲ್ಲರ ಒಬ್ಬ ತಾಯಿಯು- ಭಾರತಮಾತೆ ಮತ್ತು ನಾವು ಅವಳ ಪುತ್ರರೆಂಬ ಭಾವನೆ ನಮ್ಮಲ್ಲಿರಬೇಕು. ಸಾಮಾಜಿಕ ಐಕ್ಯವೇ ದೇಶವನ್ನು ಸಮೃದ್ಧ ಮತ್ತು ಸಾಮರ್ಥ್ಯಶಾಲಿಗೊಳಿಸೀತು.’’
‘‘ಈ ವಿಷಯವನ್ನು ಮಂಡಿಸಲು ನೀವು ವಕ್ತಾರರನ್ನು ಹೇಗೆ ಆಯ್ಕೆ ಮಾಡಿದಿರಿ?’’ ನನ್ನ ಈ ಪ್ರಶ್ನೆಗೆ ಅವರು ಉತ್ತರಿಸಿದರು, ‘‘ಗಾಯತ್ರೀ ಪರಿವಾರ, ಸ್ವಾಧ್ಯಾಯ ಪರಿವಾರ, ಅಂಬೇಡ್ಕರ್ ಮಂಚ್, ಸಂಘದ ಕೆಲ ಕಾರ್ಯಕರ್ತರು ಮತ್ತು ಅಧಿಕಾರಿಗಳು ವಿಷಯವನ್ನು ಮಂಡಿಸಲು ಗ್ರಾಮ ಗ್ರಾಮಕ್ಕೂ ಹೋಗಿದ್ದರು. ಅವರ ಮಂಡನೆಗಳು ಜನರನ್ನು ಯೋಚಿಸಲು ತೊಡಗಿಸುತ್ತಿದ್ದವು.’’ ‘‘ಗ್ರಾಮಸ್ಥರ ಪ್ರಶ್ನೆಗಳು ಏನಿರುತ್ತಿದ್ದವು ?’’ಎಂದಾಗ ಅವರು ಹೇಳಿದರು, ‘‘ಗ್ರಾಮಸ್ಥರ ಮೇಲೆ ಇನ್ನೂ ಪರಂಪರೆ ಮತ್ತು ರೂಢಿಗಳ ಬಹು ಭಾರೀ ಪ್ರಭಾವವಿದೆ. ನೂರಾರು ವರ್ಷಗಳಿಂದ ಜಾತಿಗೀತಿ ಪದ್ಧತಿ ನಡೆದು ಬಂದಿದ್ದು, ಅದನ್ನು ತೊಡೆದು ಹಾಕುವುದು ಹೇಗೆ? ಇಂದು ನೀವು ದೇವಸ್ಥಾನ ಪ್ರವೇಶದ ಘೋಷಣೆ ಹಾಕುತ್ತೀರಿ. ನಾಳೆ ಎಲ್ಲ ಜಾತಿಗಳ ಸಾಮೂಹಿಕ ಭೋಜನದ ಮಾತು ಹೇಳುವಿರಿ. ಮುಂದೆ ಅಂತರ್ಜಾತೀಯ ವಿವಾಹದ ಪ್ರಸ್ತಾವ ಬರುತ್ತದೆ. ಇದೆಂತು ಸಾಧ್ಯ? ಇವು ಗ್ರಾಮದ ಹಿರಿಯರ ಪ್ರಶ್ನೆಗಳು. ಇವರನ್ನೆಲ್ಲ ಸಮಾಧಾನಪಡಿಸುವುದು ಅನಿಸಿದಷ್ಟು ಸುಲಭವಲ್ಲ. ಇದಕ್ಕಾಗಿ ನಾವು ಯುವಕರ ಕಡೆ ಗುರಿಯಿಟ್ಟೆವು. ಅವರಿಗೆ ಜಾತಿಭೇದವಿರಹಿತ ಸಮಾಜದ ವಿಷಯ ತಟ್ಟನೆ ತಿಳಿಯುತ್ತದೆ.’’
ನಾನು ಬೇಟಮಾ ಗ್ರಾಮಕ್ಕೆ ಕಾರ್ಯಕ್ರಮ ಸ್ಥಳಕ್ಕೆ ತಲಪಿದಾಗ, ಆ ಸಣ್ಣ ಗ್ರಾಮದಲ್ಲಿ ಹನ್ನೆರಡು-ಹದಿಮೂರು ಸಾವಿರ ಯುವಕರ ಗುಂಪು ನೋಡಿ ಆಶ್ಚರ್ಯಚಕಿತನಾದೆ. ನನ್ನ ಹೆಸರಿನಿಂದಾಗಿ ಗುಂಪು ಸೇರುವ ಶಕ್ಯತೆಯೇನೂ ಇರಲಿಲ್ಲ. ಅದು ಆ ಕಾರ್ಯಕರ್ತರ ಗುಂಪು ಮಾಡಿದ್ದ ಪರಿಶ್ರಮದ ಫಲವಾಗಿತ್ತು. ಪ್ರವೇಶದ್ವಾರದಿಂದ ವೇದಿಕೆಯವರೆಗೂ ಪುಷ್ಪವೃಷ್ಟಿಯಿಂದ ನಮ್ಮನ್ನು ಸ್ವಾಗತಿಸಲಾಯಿತು. ನನ್ನಂತಹ ಕಾರ್ಯಕರ್ತನಿಗೆ ಅದರ ಅಭ್ಯಾಸವೇನೂ ಇರಲಿಲ್ಲ. ಆ ಭಾಗದ ಹಿಂದೂ ಸಮಾಜದ ಎಲ್ಲ ಜಾತಿಗಳ ಯುವಕರೂ ಅಲ್ಲಿದ್ದರು, ಅದರಲ್ಲೂ ಪರಿಶಿಷ್ಟ ಜಾತಿಗಳ ಯುವಕರ ಸಂಖ್ಯೆ ಗಮನಾರ್ಹವಾಗಿತ್ತು. ಮೋಹನಜಿ ಗಿರಿಯವರು ಬಹು ಅದ್ಭುತ ಪ್ರಾಸ್ತಾವಿಕ ಭಾಷಣ ಮಾಡಿದರು. ಅದನ್ನು ಕೇಳುತ್ತಿದ್ದಂತೆ ಒಬ್ಬ ಉತ್ತಮ ವಕ್ತಾರನ ಭಾಷಣ ಕೇಳಿದಂತೆ ನನ್ನ ಮನದಣಿಯಿತು. ಪಂಕಜ ಗೌತಮಪುರಾ ಕಾರ್ಯಕ್ರಮದ ನಿರ್ವಹಣೆ ಮಾಡುತ್ತಿದ್ದರು. ಅವರು ಸ್ವತಃ ಕವಿಯಾಗಿದ್ದು, ನಿರ್ವಹಣೆ ಮಾಡುವಾಗ ಪ್ರಸಂಗೋಚಿತವಾಗಿ ಸ್ವರಚಿತ ಕವನಗಳ ಸಾಲುಗಳನ್ನು ಹರಿಸಿದರು. ಓರ್ವ ಒಳ್ಳೆಯ ಉದಯೋನ್ಮುಖ ಕವಿಯ ಪರಿಚಯದಿಂದ ನಾನು ಸಂತಸಗೊಂಡೆ.
ಕಾರ್ಯಕರ್ತರೆದುರು ಅಥವಾ ವಿಶಿಷ್ಟ ಸಮೂಹದೆದುರು ಮಾತನಾಡುವ ಅಭ್ಯಾಸವಿದ್ದ ಕಾರ್ಯಕರ್ತ ನಾನು. ಒಂದು ಕಾರ್ಯಕ್ರಮಕ್ಕೆ ಈ ರೀತಿ ಸಭೆಯ ಸ್ವರೂಪ ಬಂದಿದ್ದು, ಅದನ್ನು ಸಂಬೋಧಿಸುವ ಜೀವನದಲ್ಲೇ ಅಪರೂಪದ ಪ್ರಸಂಗವಿದು. ಆದರೂ ವಿಷಯ ಮಂಡಿಸಲು ನಾನು ಸಾಹಸ ಮಾಡಿದೆ. ನಾನು ಮಾತನಾಡಿದ ಸೂತ್ರ ಹೀಗಿತ್ತು: ದೇಶಕ್ಕಾಗಿ ಬಲಿದಾನ ಮಾಡುವುದು ಸರ್ವೋಚ್ಚ ತ್ಯಾಗವೆಂದು ಭಾವಿಸಲ್ಪಟ್ಟಿದೆ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಅವನ ಜೀವವು ಅತ್ಯಧಿಕ ಪ್ರಿಯವಾಗಿರುತ್ತದೆ. ದೇಶಕ್ಕಾಗಿ ಜೀವದ ಬಲಿದಾನ ಮಾಡುವುದು ಕಠಿಣ ಕೆಲಸವಾಗಿದೆ, ಆದರೆ ಸಮಾಜದಲ್ಲಿ ಮೂಲಗಾಮಿ ಪರಿವರ್ತನೆ ಮಾಡುವುದಕ್ಕಾಗಿ ಸಂಘರ್ಷ ಮಾಡುವುದು, ಅದಕ್ಕಿಂತಲೂ ಕಠಿಣ ಕೆಲಸವಾಗಿದೆ. ಏಕೆಂದರೆ ಅದಕ್ಕಾಗಿ ನಿತ್ಯವೂ ಸಾಯಬೇಕಾಗುತ್ತದೆ. ಪರಕೀಯರ ವಿರುದ್ಧ ಸೆಣಸುವುದೇನೊ ಸುಲಭ, ಆದರೆ ನಮ್ಮದೇ ಜನರ ವಿರುದ್ಧ ಸೆಣಸುವುದು ಕಠಿಣವೇ ! ಮಹಾತ್ಮ ಫುಲೆ, ಸ್ವಾತಂತ್ರ್ಯವೀರ ಸಾವರ್ಕರ್, ಡಾ. ಬಾಬಾಸಾಹೆಬ್ ಅಂಬೇಡ್ಕರ್, ಸಂತ ಗಾಡಗೆ ಬಾಬಾ, ಸ್ವಾಮಿ ವಿವೇಕಾನಂದ ಮುಂತಾದವರು ಈ ಕಾರ್ಯ ಮಾಡಿದ ಬಗೆ ಹೇಗೆಂದು ಅವರ ಜೀವನದ ಉದಾಹರಣೆಗಳನ್ನು ಹೇಳಿ ವಿಶದೀಕರಿಸಿದೆ. ಪರಂಪರೆ, ರೂಢಿಗಳನ್ನು ಕಾಕ್ಕೆ ತಕ್ಕಂತೆ ಬದಲಾಯಿಸಬೇಕಾಗುತ್ತದೆ. ಮನುಷ್ಯನು ಯೋಚಿಸುವ ಪ್ರಾಣಿ, ಹಾಗೆಂದೇ ಪ್ರತಿಯೊಂದು ರೂಢಿ-ಪರಂಪರೆಯ ಬಗ್ಗೆ ಬುದ್ಧಿವಾದಿ ಚಿಕಿತ್ಸೆ ಮಾಡಬೇಕು. ಅಂಧರಂತೆ ಅದನ್ನು ಪಾಲಿಸಬಾರದು. ಈ ಕುರಿತೂ ಕೆಲ ಉದಾಹರಣೆಗಳನ್ನು ಹೇಳಿ ಕೊನೆಗೆ ಹೇಳಿದೆ- ಗೋಹತ್ಯೆ, ಸ್ತ್ರೀಹತ್ಯೆ ಇವು ನಮ್ಮಲ್ಲಿ ಮಹಾಪಾಪವೆಂದು ಹೇಳಲಾಗಿದೆ, ಅದರಲ್ಲೂ ಅಸ್ಪೃಶ್ಯತೆ ಆಚರಿಸುವುದು ಮಹಾ-ಮಹಾ ಪಾಪವೆಂದು ತಿಳಿಯಬೇಕು. ಏಕೆಂದರೆ ಇದಂತೂ ದೇವರಿಗೇ ಅಪಮಾನವಾಗಿದೆ.
ಕಾರ್ಯಕ್ರಮದ ಕೊನೆಯಲ್ಲಿ ಸಾಧು ಬಾಲಕ ಯೋಗೇಶ್ವರ ದಾಸಜಿ ತರುಣ, ವಿದ್ವಾಂಸ ಮತ್ತು ಸಂನ್ಯಾಸಿ- ಅವರು ಎಲ್ಲರಿಗೂ ಒಂದು ಸಂಕಲ್ಪ ನೀಡಿದರು. ಅದು ಹೀಗಿದೆ-
‘ಹಿಂದವಃ ಸೋದರಾ ಸರ್ವೇ, ನ ಹಿಂದುಃ ಪತಿತೋ ಭವೇತ್‌
ಮಮ ದೀಕ್ಷಾ ಹಿಂದೂ ರಕ್ಷಾ, ಮಮ ಮಂತ್ರಃ ಸಮಾನತಾ ॥
ಎಂದರೆ, ಎಲ್ಲ ಹಿಂದುಗಳೂ ಸಹೋದರರು, ಯಾರೂ ಪತಿತ (ಕೀಳು)ರಲ್ಲ. ಎಲ್ಲರೂ ಸಮಾನರು, ನಾನು ಧರ್ಮವನ್ನು ಮುರಿಯುವ ಜಾತೀಯ ಮೇಲು-ಕೀಳು ಭೇದಭಾವವನ್ನು ಒಪ್ಪಲಾರೆ. ಸಮಾನತೆಯೇ ನನ್ನ ಮಂತ್ರ.
ಅದಕ್ಕನುಸಾರವಾಗಿ ನಾನು ಪರಮೇಶ್ವರ ಮತ್ತು ಹುತಾತ್ಮರ ಮೃತ್ತಿಕೆಯ ಕಲಶವನ್ನು ಸಾಕ್ಷಿಯಾಗಿಟ್ಟು ದೇಶಸೇವೆಯ ಸಂಕಲ್ಪ ಮಾಡುತ್ತೇನೆ, ಅಲ್ಲದೆ ಇನ್ನೂ ಪ್ರತಿಜ್ಞೆ ಮಾಡುತ್ತೇನೆ- ಸೇವೆ ಮತ್ತು ಸಮಾನತೆಯ ಈ ಪವಿತ್ರ ವಿಚಾರವನ್ನು ಮನಸ್ಸು, ಮಾತು ಮತ್ತು ಕರ್ಮದಿಂದ ಆಜೀವನ ಪಾಲಿಸುವೆನು.
-ವಂದೇ ಮಾತರಮ್
ಎಲ್ಲರೂ ಈ ಸಂಕಲ್ಪವನ್ನು ಉಚ್ಚರಿಸಿದರು. ಕೊನೆಗೆ ಬೇಟಮಾ ಸಾಹೆಬ್ ಗುರುದ್ವಾರಾದಲ್ಲಿ ಲಂಗರ್ (ಸಹಭೋಜನ ) ನಡೆದು ಕಾರ್ಯಕ್ರಮದ ಮುಕ್ತಾಯವಾಯಿತು.
ಕಳೆದ ಎರಡು ವರ್ಷ ಸಾಮರಸ್ಯದ ಕಾರ್ಯಕ್ರಮಗಳಿಗಾಗಿ ನಾನು ದೇಶದೆಲ್ಲೆಡೆ ನಾನಾ ಕಡೆಗಳಿಗೆ ಹೋಗಿದ್ದೆ; ಆದರೆ ‘ಹುತಾತ್ಮ ಸಾಮರಸ್ಯ ಯಾತ್ರೆ’ಯ ಕಾರ್ಯಕ್ರಮವು ಬಹು ವಿನೂತನವೆನಿಸಿದ್ದಲ್ಲದೆ, ಬಹಳ ಸ್ಫೂರ್ತಿ ಮತ್ತು ಪ್ರೇರಣೆ ನೀಡುವಂತಹದ್ದಾಗಿತ್ತು.

   

Leave a Reply