ಅಮೆರಿಕದ ಹಿತ್ತಲಿನಲ್ಲಿ ಚೀನಾದ ರಿಯಲ್ ಎಸ್ಟೇಟ್

ಲೇಖನಗಳು - 0 Comment
Issue Date :

-ಪ್ರದೀಪ

ಭೂ-ರಾಜಕೀಯದಲ್ಲಿ ವಿಶ್ವದ ದೇಶಗಳು ಹಲವು ಪ್ರದೇಶಗಳಾಗಿ ವಿಭಜಿತವಾಗಿವೆ. ಭಾಷೆ, ರಾಜಕೀಯ, ವ್ಯಾಪಾರ, ರಿಲಿಜನ್, ಇತಿಹಾಸ ಇತ್ಯಾದಿ ಸಮಾನ ಅಂಶಗಳ ಆಧಾರದಲ್ಲಿ ಈ ಪ್ರದೇಶಗಳು ಅಸ್ತಿತ್ವಕ್ಕೆ ಬಂದಿವೆ. ಇಂದು ಪ್ರಚಲಿತವಿರುವ ಪ್ರದೇಶಗಳು ಪ್ರಮುಖವಾಗಿ 9 –

   1)     ಆಫ್ರಿಕ                          2) ಮಧ್ಯ ಏಶ್ಯಾ

   3)    ಪೂರ್ವ ಏಶ್ಯಾ               4) ಯೂರೋಪ್

   5)    ಲ್ಯಾಟಿನ್ ಅಮೆರಿಕ          6) ಉತ್ತರ ಅಮೆರಿಕ

   7)    ದಕ್ಷಿಣ ಏಶ್ಯಾ                  8) ಆಗ್ನೇಯ ಏಶ್ಯಾ

   9)    ಪಶ್ಚಿಮ ಏಶ್ಯಾ

 ಇದಲ್ಲದೆ ವ್ಯಾಪಾರದ ಕಾರಣಕ್ಕಾಗಿ, ಸೈನಿಕೀಯ ಒಪ್ಪಂದಕ್ಕಾಗಿ ಮತ್ತು ಸಮಾನ ವೈರಿಗಳನ್ನು ಎದುರಿಸುವುದಕ್ಕಾಗಿ ಅನೇಕ ಒಕ್ಕೂಟಗಳು ರಚಿತವಾಗಿವೆ. ಇದನ್ನೇ ಹಿಂದು, ಕ್ರೈಸ್ತ, ಯಹೂದಿ, ಇಸ್ಲಾಮ್ ಮತ್ತು ಕಮ್ಯುನಿಸ್ಟ್ ಮತ ಮತ್ತು ವಿಚಾರದ ಜನ ಮತ್ತು ಸರ್ಕಾರಗಳು ಇರುವ ಪ್ರದೇಶಗಳು ಎಂಬ ಹಿನ್ನೆಲೆಯಲ್ಲೂ ನೋಡಬಹುದು. ಈ ಎಲ್ಲ ಪ್ರದೇಶಗಳಲ್ಲೂ ಅಮೆರಿಕದ ಸೈನಿಕರು, ರಾಯಭಾರಿಗಳು ಮತು ಕಾರ್ಪೊರೇಟ್ ದಿಗ್ಗಜರು ಕಾಣುವುದು ತೀರಾ ಸಾಮಾನ್ಯ. ಅರ್ಥಾತ್ ಅಮೆರಿಕದ ರಿಯಲ್ ಎಸ್ಟೇಟ್ ವ್ಯಾಪಾರವು ಭೂಮಂಡಲದಲ್ಲಿ ವ್ಯಾಪಿಸಿ ಅದನ್ನು ರಕ್ಷಿಸುವುದಕ್ಕಾಗಿ ಅಮೆರಿಕವು ತನ್ನ ಸೈನಿಕರನ್ನು ಕಾವಲಿಟ್ಟು ಈಗ್ಗೆ ಅರ್ಧ ಶತಮಾನವೇ ಕಳೆದಿದೆ. ಒಂದು ದಶಕದ ಹಿಂದೆ ಅಮೆರಿಕದವನೇ ಆದ ಜಾನ್ ಪರ್ಕಿನ್ಸ್ ಬರೆದಿರುವ ಪುಸ್ತಕ Confessions of an Economic Hitman (ಆರ್ಥಿಕ ಹಂತಕನ ತಪ್ಪೊಪ್ಪಿಗೆ) ಓದಿದವರೆದುರಿಗೆ ಅಮೆರಿಕ ದೇಶವು ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕ ಪ್ರದೇಶಗಳನ್ನು ಹೇಗೆ ಹಿಂಡಿ ಹಿಪ್ಪೆ ಮಾಡಿ ಅಲ್ಲಿನ ರಾಜಕೀಯ, ವ್ಯಾಪಾರ ತ್ತು ಪರಿಸರದ ಮೇಲೆ ದೌರ್ಜನ್ಯ ಎಸಗಿದೆ ಎಂಬುದು ಎಳೆಎಳೆಯಾಗಿ ತೆರೆದುಕೊಳ್ಳುತ್ತದೆ.

  ಈ ದೇಶಗಳು ಅಮೆರಿಕದ ಹಿತ್ತಲು (Backyard of America) ಎಂದೇ ಕರೆಯಲ್ಪಡುತ್ತಿದ್ದವು. ತೀರಾ ಇತ್ತೀಚಿನವರೆಗೆ. ಇದೆಲ್ಲವೂ ಬದಲಾಗಿದ್ದು 2001ರಿಂದ. ಅಮೆರಿಕದ ಅವಳಿ ಕಟ್ಟಡಗಳು ನೆಲಸಮಗೊಂಡ ಕಾಲದಿಂದ. ಅದೇಕೋ ಹೊಸ ಸಹಸ್ರಮಾನದಲ್ಲಿ ಅಮೆರಿಕದ ಮೇಲೆ ಸೂರ್ಯದೇವನು ಪ್ರಕಾಶಿಸಲೇ ಇಲ್ಲ. ಆ ದೇಶದ ಬಹುಭಾಗದ ಗಮನ, ಕಾರ್ಯತಂತ್ರ ಮತ್ತು ಆರ್ಥಿಕ ನೀತಿಗಳು ಇಸ್ಲಾಂನ್ನು ಎದುರಿಸುವುದು ಮತ್ತು ಏನಕೇನಪ್ರಕಾರೇಣ ತನ್ನ ಪ್ರಭುತ್ವವನ್ನು ಜಗತ್ತಿನ ಮೇಲೆ ಕಾಯ್ದುಕೊಳ್ಳುವುದಕ್ಕಾಗಿ ವಿನಿಯೋಗವಾಯ್ತು. ಆದರೆ ಅಮೆರಿಕದ ಹಿಡಿತವು ನಿಧಾನವಾಗಿ ಸಡಿಲಗೊಂಡು ಇಂದು ಏಕಧೃವ ಪ್ರಪಂಚವು ಪರಸ್ಪರಾವಲಂಬನೆಯ ವಿಶ್ವವಾಗಿ ಮಾರ್ಪಟ್ಟಿದೆ. ಅಮೆರಿಕ ಹತ್ತರಲ್ಲಿ ಹನ್ನೊಂದಾಗಿದೆ. ಉತ್ತರ ಕೊರಿಯಾವನ್ನು ನಿಯಂತ್ರಿಸಲು ಅದು ಚೀನಾವನ್ನು ಆಗ್ರಹಿಸುತ್ತಿದೆ. ಅಂತೆಯೇ ಆಗಸ್ಟ್ 22ರಂದು ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಅಫಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಮಗೆ ಭಾರತದ ಸಹಕಾರ ಬೇಕು ಎಂದು ಘೊಷಿಸಿದ್ದಾರೆ. ಪಾಕಿಸ್ತಾನವು ತನ್ನ ದೇಶದಲ್ಲಿರುವ ಉಗ್ರರವಾದಿಗಳನ್ನು ಹತ್ತಿಕ್ಕದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ನೇರ ನುಡಿಗಳಲ್ಲಿ ಎಚ್ಚರಿಸಿದ್ದಾರೆ. ಕೂಡ. ಅಮೆರಿಕದ ಚಿಂತೆಯನ್ನು ನಿವಾರಿಸಲು ಭಾರತ ಮತ್ತು ಚೀನಾ ದಾಳಗಳಂತೆ ಬಳಸಲ್ಪಡುತ್ತಿವೆ ಎಂದು ಭಾವಿಸಬೇಕಾಗಿಲ್ಲ. ಯುದ್ಧ ಯಾರಿಗೂ ಬೇಡ. ಜೊತೆಗೆ ಭಯೋತ್ಪಾದನೆಯನ್ನು ನಿಗ್ರಹಿಸುವುದು ಇಂದು ಜಾಗತಿಕ ಹೊಣೆಗಾರಿಕೆಯಾಗಿದೆ. ಎಲ್ಲರೂ ಒಟ್ಟಾಗಿ ಉಗ್ರವಾದವನ್ನು ಎದುರಿಸಬೇಕು ಎಂಬುದರ ಬಗ್ಗೆ ಒಮ್ಮತ ಮೂಡಿ ಒಡಂಬಡಿಕೆ, ಸಹಕಾರಗಳು ದೇಶ ದೇಶಗಳ ನಡುವೆ ಏರ್ಪಟ್ಟಿದೆ. ಪ್ರಪಂಚದ ಅನ್ಯಾನ್ಯ ಕಡೆಗಳಲ್ಲಿ ಸಾಮರಿಕವಾಗಿ ಬಲಾಢ್ಯವಾಗಿ ಬೆಳೆದಿರುವ ದೇಶಗಳನ್ನು ಏಕಾಂಗಿಯಾಗಿ ನಿಭಾಯಿಸುವುದು ಇಂದು ಯಾವುದೇ ದೇಶಕ್ಕೂ ಅಸಾಧ್ಯವಾದ ವಿಷಯ. ಹಾಗಾಗಿ ಎಲ್ಲರೂ ಎಲ್ಲರ ಕೈ ಕುಲುಕುತ್ತಿರುವುದು, ಒಬ್ಬರನ್ನು ಕಂಡಾಗ ಇನ್ನೊಬ್ಬರು ಹಲ್ಲುಕಿಸಿಯುತ್ತಿರುವುದು, ನಮ್ಮ ಮನೆಗೊಮ್ಮೆ ಬಂದು ಒಂದು ಕಪ್ ಚಹಾ ಕುಡಿಯಿರಿ ಎಂಬ ಆತಿಥ್ಯದ ಅತ್ಯುತ್ಸಾಹ ತೋರ್ಪಡಿಸುತ್ತಿರುವುದು ಪರಸ್ಪರ ಲಾಭಕ್ಕಾಗಿ ಅಲ್ಲದೆ ವಿಶ್ವಶಾಂತಿಯ ಉದಾತ್ತ ಉದ್ದೇಶದಿಂದಲ್ಲ.

ಭಯವೇ ಸ್ನೇಹದ ಮೂಲವಯ್ಯಾ…

  ಕಾಲಚಕ್ರವನ್ನು 50 ವರ್ಷ ಹಿಂದೋಡಿಸಿದರೆ ಇಂಥದ್ದೇ ಸನ್ನಿವೇಶವು ಗೋಚರಿಸುತ್ತದೆ. ಬ್ರಿಟಿಷ್ ವಸಾಹತಿನ ಕಪಿಮುಷ್ಟಿಯು ಸಡಿಲಗೊಂಡಿದ್ದು ಎರಡನೆ ವಿಶ್ವಯುದ್ಧದ ನಂತರ. ಯುದ್ಧದಲ್ಲಿ ಬಳಲಿ ಬೆಂಡಾದ ಇಂಗ್ಲೆಂಡ್ ದೇಶವು ತನ್ನ ಅಂಕೆಯಲ್ಲಿದ್ದ ದೇಶಗಳನ್ನು ನಿಭಾಯಿಸುವ ತಾಕತ್ತು ಕಳೆದುಕೊಂಡು ಅವುಗಳನ್ನು ತನ್ನ ಬಂಧನದಿಂದ ಮುಕ್ತಗೊಳಿಸಿತು. ಆಗ ಉದಯಿಸಿದ್ದೇ ಅಮೆರಿಕ. ಈಗ ಅಮೆರಿಕ ಸಹ ಅದೇ ಸ್ಥಿತಿಗೆ ಬಂದು ಮುಟ್ಟಿದೆ. ರಾಜಕೀಯವಾಗಿ ಸ್ವತಂತ್ರಗೊಂಡ ದೇಶಗಳನ್ನು ಆರ್ಥಿಕವಾಗಿ ತನ್ನ ಗುಲಾಮ ದೇಶಗಳನ್ನಾಗಿ ಮಾಡಿಕೊಂಡು ಮೆರೆದಾಡಿದ ಅಮೆರಿಕದ ಪೈಶಾಚಿಕ ರೂಪವನ್ನು ಇನ್ನೂ ಯಾರೂ ಮರೆತಿಲ್ಲ. ತನ್ನ ವೈಶ್ವಿಕ ಅಸ್ತಿತ್ವಕ್ಕಾಗಿ ಅಮೆರಿಕ ತೀವ್ರವಾದ ಪ್ರಯತ್ನವನ್ನೇ ಮಾಡುತ್ತಿದೆ. ದಾರಿ ಸುಲಭವಲ್ಲ. ಸಾಧ್ಯವೂ ಅಲ್ಲ. ಚೀನಾದ ಬೆಳವಣಿಗೆಯು ಅಮೆರಿಕ ಸೇರಿ ಅನೇಕ ದೇಶಗಳ ನಿದ್ದೆಗೆಡಿಸಿದೆ. ಅಮೆರಿಕವು ನಿಜಕ್ಕೂ ಕಂಗಾಲಾಗಿದ್ದು 2008ರ ಅಲ್ಲಿನ ಆರ್ಥಿಕ ಕುಸಿತದ ಸಮಯದಿಂದ. ಆಗ ಚೀನಾ ಉದಯಿಸಿದ ಸೂರ್ಯನಂತೆ ಕಂಗೊಳಿಸುತ್ತಿರಲಿಲ್ಲ, ಬದಲಾಗಿ ನಿಮ್ಮೆಲ್ಲರನ್ನೂ ಸುಟ್ಟುಬಿಡುವೆ ಎಂದು ಕೆನ್ನಾಲಿಗೆಯನ್ನು ಚಾಚಿತ್ತು. ಹೀಗೆ ಕಳೆದ ಶತಮಾನದ ಆರಂಭದಲ್ಲಿ ಇಂಗ್ಲೆಂಡ್, ಅರ್ಧ ಸೆಂಚುರಿಯ ನಂತರ ಅಮೆರಿಕ, ಐವತ್ತು ವರ್ಷದ ತರುವಾಯ ಈಗ ಚೀನಾ.

ಆದರೆ ಈ ಭಯವೇಕೆ?

  ಭಯ ಆರಂಭವಾಗಿರುವುದು ಈಗಲ್ಲ, 2000ನೇ ಇಸವಿಯಿಂದ! ಚೀನಾದ ತಂತ್ರಗಾರಿಕೆ ಒಂದೆಡೆಯಾದರೆ, ಅಮೆರಿಕದ ದೌರ್ಬಲ್ಯ ಇನ್ನೊಂದೆಡೆ. ಯಾರು ಖಾಲಿ ಜಾಗವನ್ನು ಕುಶಲತೆಯಿಂದ ನಿರ್ವಹಿಸುತ್ತಾರೋ ಅವರದ್ದೇ ಜಗತ್ತು ಎಂಬುದು ಭೂರಾಜಕೀಯ ಸಿದ್ಧಾಂತದ ಮೂಲ ಪಾಠ (Managing the space). ತನ್ನ ದೇಶದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಅಮೆರಿಕವು ತನ್ನ ಗಮನವನ್ನು ಮಧ್ಯಪ್ರಾಚ್ಯದೆಡೆಗೆ ತಿರುಗಿಸಿತು. ಕಳೆದ 15 ವರ್ಷಗಳು ತನ್ನೆಲ್ಲ ಹೂಡಿಕೆ, ತಂತ್ರಗಾರಿಕೆ, ಸೈನ್ಯ ನಿಯೋಜನೆಯನ್ನು ಮಧ್ಯಪ್ರಾಚ್ಯ ಪ್ರದೇಶದಲ್ಲೇ ಮಾಡಿದೆ. ಎಲ್ಲ ಮೊಟ್ಟೆಯನ್ನೂ ಒಂದೇ ಬುಟ್ಟಿಯಲ್ಲಿ ಇಡಬಾರದು ಎಂಬ ವ್ಯಾಪಾರದ ಪ್ರಾಥಮಿಕ ಸೂತ್ರವನ್ನು ಮರೆತು ಅಮೆರಿಕವು ಇಂಥ ಅವಿವೇಕವನ್ನು ಮಾಡಿಕೊಂಡಿದೆ. ಹಾಗಾದರೆ ಅಮೆರಿಕೆಯು ಎಲ್ಲಿಂದ ತನ್ನ ಕಾಲನ್ನು ತೆಗೆಯಿತು? ಅದು ಎಲ್.ಎ.ಸಿ. ಪ್ರದೇಶದಿಂದ.

  ಲ್ಯಾಟಿನ್ ಅಮೆರಿಕ ಮತ್ತು ಕೆರೆಬಿಯನ್ ಪ್ರದೇಶವದು (Latin America and Caribbean region). ಅಲ್ಲಿ ಮಾನವ ಸಂಪನ್ಮೂಲವು ವಿಪುಲವಾಗಿದೆ. ಅಗ್ಗದ ಬೆಲೆಗೆ ಕಾರ್ಮಿಕರು ಸಿಗುತ್ತಾರೆ, ಪ್ರಾಕೃತಿಕ ಸಂಪತ್ತು ಹೇರಳವಾಗಿದೆ. ಚೀನಾ ಅಲ್ಲಿಗೆ ಬಂದು ಕುಳಿತಿದೆ. ರಿಯಲ್ ಎಸ್ಟೇಟ್ ದಂಧೆಯನ್ನು ಆರಂಭಿಸಿದೆ. ಅಮೆರಿಕಗೆ ಅದರ ಹಿತ್ತಲಿನಲ್ಲೇ ತನ್ನ ಪರಮ ಶತ್ರುವಿನ ಆಗಮನವಾಗಿ ಒಂದು ದಶಕವೇ ಸಂದಿದೆ. ಭಯವಾಗದೆ ಇರುವುದೇ? ಇನ್ನೊಂದು ಕಾರಣವೇನೆಂದರೆ

ಎಲ್.ಎ.ಸಿ. ಪ್ರದೇಶದಲ್ಲಿ ಕಳೆದ ಒಂದು ದಶಕದಲ್ಲಿ ಆಗಿರುವ ರಾಜಕೀಯ ಬದಲಾವಣೆಗಳು. ಆ ಪ್ರದೇಶದ ದೇಶಗಳಾದ ಬ್ರೆಜಿಲ್, ಅರ್ಜೆಂಟಿನ, ಬೊಲಿವಿಯಾ, ನಿಕರಾಗುವಾ, ಎಲ್ ಸಾಲ್ವೆಡಾರ್, ಪೆರು, ಪರಾಗುವೆ, ವೆನೆಜುವೆಲಾ ದೇಶಗಳಲ್ಲಿ ಎಡಕ್ಕೆ ವಾಲಿರುವ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಚೀನಾಗೆ ತನ್ನ ಕಾಲು ಜಮಾಯಿಸಲು ಇದಕ್ಕಿಂತ ಇನ್ನೇನು ಬೇಕು? ಹಿತ್ತಲ ಬಾಗಿಲೇ ಭದ್ರವಿಲ್ಲದ ಅಮೆರಿಕವು ತನ್ನ ಸೈನಿಕರನ್ನು ಇರಾಕ್, ಅಫಘಾನಿಸ್ತಾನ ಇತ್ಯಾದಿ ದೇಶಗಳಲ್ಲಿ ನಿಯೋಜಿಸುತ್ತಿದೆ. ಅನ್ಯಾನ್ಯ ದೇಶಗಳಲ್ಲಿ ಬೀಡುಬಿಟ್ಟಿರುವ ತನ್ನ ಸೇನೆಯ ನಿರ್ವಹಣಾ ವೆಚ್ಚವನ್ನು ಸರಿದೂಗಿಸುವುದು ಸುಲಭದ ಮಾತಲ್ಲ. ಮುಂದಿನ ಒಂದು ದಶಕವು ಚೀನಾ ಈ ಪ್ರದೇಶವನ್ನು ಹೇಗೆ ನಿರ್ವಹಿಸುತ್ತದೆ ಎಂಬುದರ ಮೇಲೆ ನಿರ್ಭರವಾಗಿದೆ. ಹಿಂದು ಹಾಸಾಗರದ ದ್ವೀಪಗಳಿಂದ ಹಿಡಿದು ಕೆರೆಬಿಯನ್ ದ್ವೀಪಗಳವರೆಗೆ ಚೀನಾ ತನ್ನ ಇರುವಿಕೆಯನ್ನು ತೋರ್ಪಡಿಸಿದೆ. ಖಾಲಿ ಜಾಗವನ್ನು ಕುಶಲತೆಯಿಂದ ಬಳಸಿಕೊಂಡಿದೆ. ಆಫ್ರಿಕದಲ್ಲೂ ಕಳೆದ ಹತ್ತು ವರ್ಷದಲ್ಲಿ ಚೀನಾವು ಅಮೆರಿಕ ಹಾಗೂ ಇಂಗ್ಲೆಂಡ್ ದೇಶಗಳಿಗೆ ಸರಿಸಮವಾಗಿ ನಿಂತು ಪೈಪೋಟಿ ನೀಡಿದೆ. ವಿಶ್ವದ ದೊಡ್ಡಣ್ಣನೀಗ ಚಿಕ್ಕವನಾಗಿ ಗೊಂದಲಕ್ಕೀಡಾದವನಂತೆ ಕಾಣುತ್ತಿದ್ದಾನೆ. ಅಮೆರಿಕವು ತನ್ನ ವಿದೇಶಾಂಗ ನೀತಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬಾಡಿಗೆದಾರನಾಗಿ ಬಂದವನು ನಿಧಾನವಾಗಿ ಮಾಲೀಕನೇ ಆಗುವಂತೆ, ಚೀನಾ ಕೇವಲ ಬ್ರೆಜಿಲ್‌ನ ಕಾಫಿ ಸೇವಿಸಿ ಹೋಗಲು ಅಲ್ಲಿಗೆ ಬಂದಿಲ್ಲ. ಇದೇ ಆಟವನ್ನು ಒಂದು ಕಾಲದಲ್ಲಿ ಆಡಿರುವ ಅಮೆರಿಕಗೆ ಮುಂದೇನಾಗಬಹುದು ಎಂದು ತಿಳಿದಿಲ್ಲವೇನಿಲ್ಲ. ದಿ ಗೇಮ್ ವಿಲ್ ಬಿ ಟಫ್.

ಹೀಗೊಂದು ಗಾಸಿಪ್ಪು!

  ಕೋಣೆಯ ಬಾಗಿಲು ಜಡಿದುಕೊಂಡು ಪ್ರಪಂಚದ ಬಗೆಗೆ ತಲೆ ಕೆಡಿಸಿಕೊಂಡವರು ಶುರುವಿಟ್ಟುಕೊಂಡಿರುವ ಗಾಳಿಮಾತು ಏನೆಂದರೆ ಮುಂದಿನ ದಿನಗಳಲ್ಲಿ ಜಿ-2 ಗುಂಪೊಂದು ಅಸ್ತಿತ್ವಕ್ಕೆ ಬರುತ್ತದೆ. ಅದು ಚೀನಾ ಮತ್ತು ಐರೋಪ್ಯ ಒಕ್ಕೂಟ. ಹಾಗೇನಾದರು ಆದರೆ ಅಮೆರಿಕೆಗೆ ಹಿತ್ತಲಿನಲ್ಲಿ, ನೆರೆಕೆರೆಯಲ್ಲಿ, ಸುದೂರದಲ್ಲಿ ಎಲ್ಲಿಯೂ ವಿಶ್ವಸನೀಯ ಗೆಳೆಯರು ಸಿಗುವುದು ಕಷ್ಟವಾಗಬಹುದು. ಇದೆಲ್ಲವೂ ತುಂಬ ದೂರದ ಅನುಮಾನಗಳು.

  ಇವತ್ತಿನ ಮಟ್ಟಿಗಂತೂ ಬಂಡವಾಳವಾದಿ ಅಮೆರಿಕವು ತನ್ನ ದೇಶದ ಹೆಬ್ಬಾಗಿಲನ್ನು ತೆರೆದು ಇರಾಕ್, ಸಿರಿಯಾ, ಅಫಘಾನಿಸ್ತಾನ ಇತ್ಯಾದಿ ದೇಶಗಳಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುತ್ತೇನೆಂದು ಹೇಳಿಕೊಂಡು ತನ್ನ ಸೇನೆಯನ್ನು ರವಾನಿಸುತ್ತಿದೆ. ಆದರೆ ಅದರ ಹಿತ್ತಲಿನಲ್ಲೇ ಕಮ್ಯುನಿಸ್ಟ್ ಚೀನಾದ ಡ್ರಾಗನ್ ಬಂದು ಕುಳಿತಿದೆ.

   

Leave a Reply