ಅರಿದೆಸಗುವ ಕಾರ್ಯ

ಚಿಂತನ - 0 Comment
Issue Date : 14.05.2015

ಕೈಗೆತ್ತಿಕೊಂಡ ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಯಾವ ಯಾವ ಸಂಗತಿಗಳನ್ನು ತಿಳಿದಿರ ಬೇಕು ಎನ್ನುವುದನ್ನು ‘ನೀತಿ ಮಂಜರಿ’ಯ ಕವಿ ತನ್ನ ಪದ್ಯವೊಂದರಲ್ಲಿ ತಿಳಿಸಿಕೊಟ್ಟಿದ್ದಾನೆ. ‘ಅರಿದೆಸಗುವ ಕಾರ್ಯ ಮೆಂದುಂ ಅಮೋಘ’ (ತಿಳಿದುಕೊಂಡು ಮಾಡುವ ಕೆಲಸ ಯಾವಾಗಲೂ ವ್ಯರ್ಥವಾಗದು) ಎನ್ನುವುದು ಅವನ ಸೂಕ್ತಿ.
ಕೆಲಸ ಚೆನ್ನಾಗಿ ನಡೆಯಬೇಕಾದರೆ ಮೊತ್ತ ಮೊದಲು ಪರಿಶೀಲಿಸಬೇಕಾದುದು ಸ್ಥಳವನ್ನು. ಕಾರ್ಯವೆಸಗಬೇಕಾದ ಜಾಗದ ಲಕ್ಷಣಗಳು, ಒಳಿತು – ಕೆಡುಕುಗಳನ್ನು ಕರ್ತೃವು ಜಾಗರೂಕತೆಯಿಂದ ಪರೀಕ್ಷಿಸಿಕೊಳ್ಳಬೇಕು. ಸ್ಥಳವು ತಾನು ಗೈಯಬೇಕಾದ ಕೆಲಸಕ್ಕೆ ಅನುಕೂಲಕರವಾಗಿದ್ದರೆ ಮಾತ್ರ ಅದನ್ನು ಪ್ರಯತ್ನ ಮುಖೇನ ಕೊನೆಮುಟ್ಟಿಸಬಹುದು. ಸಾಕಷ್ಟು ನೀರು, ಫಲವತ್ತತೆ ಇರುವ ಜಮೀನಿನಲ್ಲಿ ಕೃಷಿ ಫಲ ಕೊಡುವುದಾದರೆ, ಉತ್ಪಾದನೆಯ ಅಂಗಗಳು ಲಭ್ಯವಿರುವ ಕಡೆ ಕೈಗಾರಿಕೆಯು ಲಾಭ ತರಬಹುದು.
ಎರಡನೆಯದಾಗಿ, ಕಾಲಸ್ಥಿತಿಯನ್ನು ಅರ್ಥವಿಸಿಕೊಳ್ಳಬೇಕು. ಬರಗಾಲ, ಯುದ್ಧಕಾಲ ಅಥವಾ ಸಂಕಷ್ಟಕಾಲಗಳಲ್ಲಿ ಸಣ್ಣಪುಟ್ಟ ಯೋಜನೆಗಳು ಕೂಡ ಯಶಸ್ವಿಯಾಗುವುದು ಕಷ್ಟ. ಸುಭಿಕ್ಷ ಕಾಲವಾದರೆ, ಶಾಂತಿ – ಸಮಾಧಾನಗಳ ಸಮಯವಾದರೆ ಬೃಹತ್ ಯೋಜನೆಗಳಿಗೆ ಸಹ ಜನ ಬೆಂಬಲ, ಧನ ಬೆಂಬಲ ಸಿಗುವುದು ಸಾಧ್ಯ. ಆದ್ದರಿಂದಲೇ ಗುಪ್ತರ, ರೋಮನರ, ಪೆರಿಕ್ಲಿಸನ ಮತ್ತು ಎಲಿಝಬೇತ್ ರಾಣಿಯ ಕಾಲಘಟ್ಟಗಳು ಸಮೃದ್ಧಿ ಸಂತೋಷಗಳನ್ನು ಕಂಡವು ಎಂದು ಇತಿಹಾಸ ನಮಗೆ ತಿಳಿಸುತ್ತದೆ.
ಮೂರನೆಯದು, ಕಾರ್ಯಾರಂಭ. ಯಾವಾಗ, ಎಲ್ಲಿ, ಹೇಗೆ, ಕೆಲಸಕ್ಕೆ ಯಾರ‌್ಯಾರು ತೊಡಗಬೇಕು ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಸೂಕ್ತವಾದ ಸಂದರ್ಭಕ್ಕಿಂತ ತುಂಬ ಮುಂಚಿತವಾಗಿ ಅಥವಾ ಬಹಳ ತಡವಾಗಿ, ಉಚಿತವಲ್ಲದ ಕಡೆಯಲ್ಲಿ, ಸೂಕ್ತನಲ್ಲದ ವ್ಯಕ್ತಿಯಿಂದ ಕಾರ್ಯವನ್ನು ಆರಂಭಿಸಿದರೆ ಎಡವಟ್ಟುಗಳಾಗುವುದರಲ್ಲಿ ಸಂದೇಹವಿಲ್ಲ.
ನಾಲ್ಕನೆಯದಾಗಿ, ಸಂಪನ್ಮೂಲಗಳ ಸಂಗ್ರಹ. ಯಾವ ಕಾರ್ಯಕ್ಕೆ ಆಗಲಿ ನಿರೀಕ್ಷಿತ ಪ್ರಮಾಣದ ಬಂಡವಾಳ ಅವಶ್ಯ. ಅಂತೆಯೇ ಪರಿಣಿತ ಮಾನವ ಸಂಪತ್ತು ಮತ್ತು ಸಾಮಗ್ರಿಗಳ ಕುರಿತು ಕಾರ್ಯಕರ್ತನು ಸರಿಯಾದ ನಿಗಾ ಇಡಬೇಕು. ಮಾತ್ರವಲ್ಲ, ಈ ಸಂಪನ್ಮೂಲಗಳು ನಿರಂತರವಾಗಿ ಲಭ್ಯವಿರುವುದು ನಿಜವೇ ಎನ್ನುವುದರ ಕುರಿತು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಬೇಕು. ಎಷ್ಟೋ ಉದ್ದಿಮೆಗಳು ಕಚ್ಛಾವಸ್ತುಗಳ ಕೊರತೆಯಿಂದ ಇಲ್ಲವೇ ಸಮರ್ಥ ಕಾರ್ಮಿಕರ ಅಭಾವದಿಂದ ಮುಚ್ಚಿ ಹೋಗುವುದನ್ನು ನಾವು ಅಲ್ಲಲ್ಲಿ ನೋಡುತ್ತೇವೆ. ಅದಿರು ನಿಕ್ಷೇಪಗಳು ಖಾಲಿಯದಾಗ ಗಣಿಗಾರಿಕೆಯನ್ನು ನಿಲ್ಲಿಸಲೇ ಬೇಕಾಗುತ್ತದೆ.
ಐದನೆಯದಾಗಿ, ತೊಡಗಿದ ಕೆಲಸವನ್ನು ಪೂರ್ತಿಗೊಳಿಸಬೇಕಾದ ಅವಧಿಯನ್ನು ಮೊದಲೇ ತಿಳಿದುಕೊಳ್ಳಬೇಕು. ಸರ್ಕಾರವು ಯೋಜನೆಗಳನ್ನು ಹಾಕಿಕೊಳ್ಳುವಾಗ ಸಾಧಾರಣವಾಗಿ ಐದು ವರ್ಷಗಳ ಅವಧಿಯನ್ನು ನಿರ್ಧರಿಸಿಕೊಳ್ಳುತ್ತವೆ. ಪ್ರತಿವರ್ಷವೂ ಉತ್ಪಾದನಾ ವೆಚ್ಚವು ಏರುತ್ತಲೇ ಹೋಗುವುದರಿಂದ ಯಾವ ಕಾರಣಕ್ಕೂ ಕಾರ್ಯಾಚರಣೆಯಲ್ಲಿ ವಿಳಂಬವಾಗಬಾರದು.
ಇಷ್ಟನ್ನೆಲ್ಲ ತಿಳಿದುಕೊಂಡು ಧೈರ್ಯ ಹಾಗೂ ದೃಢಸಂಕಲ್ಪಗಳಿಂದ ತಡವಿಲ್ಲದೆ ಅನುಷ್ಠಾನಗೊಳ್ಳುವ ಯಾವುದೇ ಕಾರ್ಯವು ನಿಶ್ಚಿತವಾಗಿ ಸಾಫಲ್ಯಗೊಳ್ಳುತ್ತದೆ.

– ಅರ್ತಿಕಜೆ

   

Leave a Reply