ಅರುಣ್‍ ಶೌರಿಯವರ ಶರಸಂಧಾನ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date :

– ರಮೇಶ್‍ ಪತಂಗೆ

ಅರುಣ್‍ ಶೌರಿಯವರು ಅಟಲ್‌ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ನರೇಂದ್ರ ಮೋದಿಯವರ ಸರ್ಕಾರ ಬಂದ ಬಳಿಕ ಈ ಸರ್ಕಾರದಲ್ಲೂ ತಮಗೇನೋ ಸ್ಥಾನ ಸಿಕ್ಕೀತೆಂಬ ಅಪೇಕ್ಷೆ ಅವರಿಗಿದ್ದೀತು. ಸರ್ಕಾರ ಬರುವ ಮುಂಚೆ ನರೇಂದ್ರ ಮೋದಿಯವರು ಅರುಣ್ ಶೌರಿಯವರನ್ನು ಭೇಟಿಯಾಗಿದ್ದರು. ನರೇಂದ್ರ ಮೋದಿ ಸರ್ಕಾರದಲ್ಲಿ ಅರುಣ್ ಶೌರಿಯವರಿಗೆ ಸ್ಥಾನ ಲಭಿಸೀತು, ಅವರು ಪ್ರಾಯಶಃ ಅರ್ಥಮಂತ್ರಿಯಾಗಬಹುದು, ಎಂದು ಆಗ ವೃತ್ತಪತ್ರಿಕೆಗಳಲ್ಲಿ ಚರ್ಚಿಸಲಾಗುತ್ತಿತ್ತು. ಆದರೆ ಹಾಗೇನೂ ಆಗಲಿಲ್ಲ. ಮಂತ್ರಿಮಂಡಲದಲ್ಲಿ ಅರುಣ್ ಶೌರಿಯವರಿಗೆ ಸ್ಥಾನ ಸಿಗಲಿಲ್ಲ. ಇದರಿಂದ ಅವರು ಅಸಂತುಷ್ಟರಾಗಿದ್ದಾರೆ.
ರಾಜಕಾರಣಿ ಅಸಂತುಷ್ಟನಾದಾಗ ಆತ ಸುಮ್ಮನೆ ಕೂರುವುದಿಲ್ಲ. ಆತ ತನ್ನ ಉಪದ್ರವ ಮೌಲ್ಯ ತೋರಿಸಲು ಶುರು ಮಾಡುತ್ತಾನೆ. ಕೆಲ ರಾಜಕಾರಣಿಗಳು ಪಕ್ಷತ್ಯಾಗವನ್ನು ಘೋಷಿಸಿದರೆ, ಕೆಲವರು ಬೇರೆ ಪಕ್ಷಕ್ಕೆ ಹೋಗುತ್ತಾರೆ. ಜನಾಧಾರವಿರುವ ನಾಯಕನ ಪಕ್ಷತ್ಯಾಗದಿಂದ ಪಕ್ಷಕ್ಕೆ ಎಡವಟ್ಟಾದೀತು. ಅರುಣ್ ಶೌರಿಯವರಿಗೆ ಜನಾಧಾರವಿಲ್ಲ. ಅವರು ವಿದ್ವಾಂಸರು, ಬುದ್ಧಿವಂತರು, ಒಂದು ಕಾಲದಲ್ಲಿ ಅವರು ಪತ್ರಿಕಾವಲಯದಲ್ಲಿ ತುಂಬ ಮೆರೆದಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಅಂತುಲೆಯವರನ್ನು ಮನೆಯಲ್ಲಿ ಕೂರಿಸುವ ಕೆಲಸ, ಅರುಣ್ ಶೌರಿ ಮಾಡಿದ್ದರು. ಪತ್ರಿಕಾವಲಯದಲ್ಲಿ ಅವರ ಈ ಕೆಲಸ ಬಹು ಮಹತ್ವದ್ದಾಗಿದೆ.
ಮುಂದೆ ಅವರು ರಾಜಕಾರಣಕ್ಕೆ ಬಂದರು, ಬಿಜೆಪಿಗೆ ಸೇರಿದರು. ಬಿಜೆಪಿಗೂ ಇಂತಹ ಬುದ್ಧಿವಂತ ಪತ್ರಕರ್ತರ ಅವಶ್ಯಕತೆಯಿತ್ತು. ಪಕ್ಷದಲ್ಲಿ ಅವರಿಗೆ ದೊಡ್ಡ ಸ್ಥಾನ ಲಭಿಸಿತು. ಪಕ್ಷದ ವರಿಷ್ಠ ನಾಯಕನೆಂದು ಅವರ ಹೆಸರನ್ನು ಚರ್ಚಿಸಲಾಯಿತು. ಪಕ್ಷದ ವಿಚಾರಧಾರೆ ಮತ್ತು ಆಚಾರಪದ್ಧತಿಯನ್ನು ಅರುಣ್ ಶೌರಿ ಅದೆಷ್ಟು ಮೈಗೂಡಿಸಿಕೊಂಡರೆಂದು ಯಾರೂ ಅಷ್ಟೇನೂ ಚರ್ಚಿಸಲಿಲ್ಲ. ಈ ಗೋಜಿಗೆ ಹೋಗದೆ ಇದ್ದುದರಿಂದ ಅರುಣ್ ಶೌರಿ ಯಾರೆಂದು ಆಗಾಗ್ಯೆ ಬಿಜೆಪಿಗೆ ತಲೆ ಚಿಟ್ಟುಹಿಡಿಯುತ್ತದೆ. ರಾಜನಾಥ ಸಿಂಗ್ ಪಕ್ಷಾಧ್ಯಕ್ಷರಾಗಿದ್ದಾಗ ಅವರ ಕಾರ್ಯಶೈಲಿಯ ಬಗ್ಗೆ ಅನೇಕರು ಸಿಟ್ಟಾಗಿದ್ದರು. ಅರುಣ್ ಶೌರಿ ಆಗ ದಿ ಇಂಡಿಯನ್ ಎಕ್ಸ್‌ಪ್ರೆಸ್ಸಿನಲ್ಲಿ ‘ಅಲೀಸ್ ಇನ್ ಬ್ಲಂಡರ್‌ಲ್ಯಾಂಡ್’ ಎಂಬ ಲೇಖನ ಬರೆದು ರಾಜನಾಥ ಸಿಂಗ್‌ರನ್ನು ಉಪಹಾಸ ಮಾಡಲು ಯತ್ನಿಸಿದ್ದರು.
ಈಗಲೂ ಅವರು ನರೇಂದ್ರ ಮೋದಿ ಕಡೆ ಗುರಿಯಾಗಿಟ್ಟು ಟೀಕಿಸಿದ್ದಾರೆ. ಈ ಸಲ ಅವರು ಹೇಳಿದರು, ‘‘ಬಿಜೆಪಿಗೆ ನರೇಂದ್ರ ಮೋದಿ ಸರ್ಕಾರದ ಕಾರ್ಯಪದ್ಧತಿಯು ಅಪಾಯಕಾರಿಯಾಗಿದ್ದು, ಸರ್ಕಾರದಲ್ಲಿ ಲೆಕ್ಕಪತ್ರ ಬರೆಯುವವರು ಯಾರೂ ಇಲ್ಲ. ಮೋದಿಯವರ ಸರ್ಕಾರವೆಂದರೆ ಒಬ್ಬ ವ್ಯಕ್ತಿಯು ನಡೆಸುವ ರಾಷ್ಟ್ರಪತಿ ಪದ್ಧತಿಯ ಸರ್ಕಾರದಂತಿದೆ. ಭಾರತಕ್ಕೆ ಇದು ಅಪಾಯಕಾರಿಯಾಗಿದೆ. ನರೇಂದ್ರ ಮೋದಿಯವರು ನ್ಯಾಪ್ಕಿನ್ನಿನಂತೆ ಜನರನ್ನು ಬಳಸಿಕೊಳ್ಳುತ್ತಿದ್ದಾರೆ. ನಾಗರಿಕರ ಸ್ವಾತಂತ್ರ್ಯಕ್ಕೆ ಮೋದಿ ಪ್ರಯತ್ನಿಸುತ್ತಿದ್ದು, ಇದರಿಂದ ವಿಕೇಂದ್ರೀಕರಣ ಕೊನೆಗೊಂಡೀತು ಹಾಗೂ ವಿರೋಧಿ ಅಭಿಪ್ರಾಯಗಳನ್ನು ಹತ್ತಿಕ್ಕಲಾಗುವುದು.’’
ಈ ಹಿಂದೆಯೂ ಅರುಣ್ ಶೌರಿಯವರು ನರೇಂದ್ರ ಮೋದಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. 3 ನವೆಂಬರ್ 2015ರಂದು ಅವರು ಹೇಳಿದರು, ‘‘ನರೇಂದ್ರ ಮೋದಿ ಉದ್ದೇಶಪೂರ್ವಕ ದಾದರೀ ಘಟನೆಯ ಬಗ್ಗೆ ಏನೂ ಹೇಳುತ್ತಿಲ್ಲ. ಬಿಹಾರ ಚುನಾವಣೆಯಲ್ಲಿ ಒಂದು ಸಮುದಾಯವನ್ನು ಇನ್ನೊಂದರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಅಮಿತ್ ಶಾ ಮತ್ತು ನರೇಂದ್ರ ಮೋದಿ ಮಾಡುತ್ತಿದ್ದಾರೆ.’’
ಅನಂತರ ನವೆಂಬರ್ 9ರಂದು ಪುನಃ ಅರುಣ್ ಶೌರಿ ಹೇಳುತ್ತಾರೆ, ‘‘ಬಿಹಾರ ಚುನಾವಣೆಯ ಫಲಿತಾಂಶವು ಪಕ್ಷದ ಮುಖಕ್ಕೆ ಭಾರೀ ತಪರಾಕಿ ಹೊಡೆದಿದೆ. ಈ ಪರಾಭವಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಹೊಣೆಗಾರರು. ಪಕ್ಷ ಮತ್ತು ಸರ್ಕಾರವನ್ನು ಈ ಮೂವರು ನಾಯಕರು ನಡೆಸುತ್ತಿದ್ದಾರೆ. ಈ ಪೈಕಿ ಒಬ್ಬರನ್ನೂ ತೊಲಗಿಸಲು ಸಾಧ್ಯವಿಲ್ಲ , ಕಾರಣ ಅವರು ನರೇಂದ್ರ ಮೋದಿಯವರ ಜೊತೆಗಿದ್ದಾರೆ. ಪಕ್ಷವು ತನ್ನ ಕಾರ್ಯಪದ್ಧತಿಯನ್ನು ಬದಲಾಯಿಸ
ಬೇಕು. ತಾವು ಅಜೇಯರೆಂಬ ಭ್ರಮೆಯಲ್ಲಿರಬಾರದು.’’
ಅರುಣ್ ಶೌರಿಯವರು ಇಂತಹ ಹೇಳಿಕೆಗಳನ್ನು ನೀಡಿದಾಗ, ಅವು ಪ್ರಸಾರಮಾಧ್ಯಮಗಳ ಸುದ್ದಿಯ ವಿಷಯವಾಗುತ್ತವೆ. ಮೇಲೆ ಹೇಳಿದಂತೆ ಒಂದು ಕಾಲದಲ್ಲಿ ಈ ಅರುಣ್ ಶೌರಿಯವರು ಅಟಲ್‌ಬಿಹಾರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು, ಬಿಜೆಪಿಯ ಕೇಂದ್ರ ನಾಯಕರಲ್ಲಿ ಅವರನ್ನು ಪರಿಗಣಿಸಲಾಗುತ್ತಿತ್ತು. ಮನೆಯ ವ್ಯಕ್ತಿಯೆಂದು ಅವರ ಟೀಕೆಗಳಿಗೆ ಬೇರೆಯೇ ಮಹತ್ವವಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ನಿತ್ಯವೂ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸುತ್ತಿರುತ್ತಾರೆ. ತಾಯಿ-ಮಗನ ರಾಜಕೀಯ ಅಸ್ತಿತ್ವದ ಪ್ರಶ್ನೆಯಿದು. ಹೀಗಾಗಿ ಅವರು ಟೀಕಿಸುವುದು ಸ್ವಾಭಾವಿಕವೇ. ಅರುಣ್ ಮೋದಿಯವರ ಟೀಕೆಗಳು ಈ ಸಾಲಿಗೆ ಸೇರುವುದಿಲ್ಲ. ‘‘ನೀವು ನನಗೆ ಪಕ್ಷದಲ್ಲಿ ಯಾವ ಸ್ಥಾನವನ್ನೂ ನೀಡುತ್ತಿಲ್ಲ, ಸರ್ಕಾರಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಂದಮೇಲೆ ನಾನು ನಿಮ್ಮನ್ನು ನೋಡಿಕೊಳ್ಳುವೆ. ಮೋದಿಯವರನ್ನು ಟೀಕಿಸಲು ಯಾರೂ ಸಾಹಸ ಮಾಡುತ್ತಿಲ್ಲ, ಆದರೆ ನಾನು ಮಾಡುವೆ. ನೀವು ನನ್ನ ಕೂದಲು ಕೊಂಕಿಸಲೂ ಸಾಧ್ಯವಿಲ್ಲ.’’
ಹೀಗೆ ಟೀಕಿಸುವುದರಿಂದ ಪಕ್ಷವು ತಮ್ಮ ವಿರುದ್ಧ ಯಾವ ಕ್ರಮ ಕೈಗೊಳ್ಳಲೂ ಧೈರ್ಯಮಾಡದೆಂದು, ಅರುಣ್ ಶೌರಿಯವರಿಗೆ ಗೊತ್ತಿದೆ. ಇದರಿಂದ ಪಕ್ಷದ ಪ್ರತಿಮೆ ಕೆಡಲು ಕಾರಣವಾದೀತು. ಪಕ್ಷದಲ್ಲಿ ವಾಕ್‌ಸ್ವಾತಂತ್ರ್ಯವಿಲ್ಲ, ವಿಚಾರಸ್ವಾತಂತ್ರ್ಯವಿಲ್ಲ, ಎಂದು ಕೂಗಾಡಬಹುದು. ಅರುಣ್ ಶೌರಿಯವರು ಹಾಗೆ ಕೂಗಾಡಬೇಕಾಗಿಲ್ಲ, ವಿವಿಧ ಚಾನೆಲ್‌ಗಳ ಮುಖ್ಯ ಆಂಕರ್‌ಗಳು ಈ ಚರ್ಚೆ ಶುರುಮಾಡುವರು. ಹೀಗಾಗಿ ಶೌರಿ ನಿಶ್ಚಿಂತರಾಗಿದ್ದಾರೆ.
ಅರುಣ್ ಶೌರಿಯವರು ನರೇಂದ್ರ ಮೋದಿಯವರ ಮೇಲೆ ಹೊರಿಸಿದ ಆರೋಪಗಳ ಸ್ವಲ್ಪ ನೋಡಬೇಕು. ನರೇಂದ್ರ ಮೋದಿ ತರಾತುರಿ ಕೆಲಸ ಮಾಡುವವರು. ಭಾರತದ ಬಗ್ಗೆ ಅವರ ಕಣ್ಣೆದುರು ಒಂದು ‘ವಿಶನ್’ ಇದೆ. ಈ ದಿಶೆಯಲ್ಲಿ ಅವರು ಎಲ್ಲ ಸಹಕಾರಿಗಳನ್ನೂ ಕರೆದೊಯ್ಯುವರು. ನಾಯಕನು ಸದಾ ದೃಢವಾಗಿದ್ದು ದಿಶೆ ನೀಡುವಂಥವನಾಗಿರಬೇಕು. ನಿನ್ನ ಜೊತೆ, ನನ್ನ ಜೊತೆ ಮತ್ತು ಅವನ ಜೊತೆಯೂ ಎಂಬಂತಹ ವ್ಯಕ್ತಿ ನಾಯಕನಾಗಲಾರ. ಆಗುವುದಿದ್ದರೆ ಆತ ಮನಮೋಹನ ಸಿಂಗ್ ಆಗುವನು. ಮೋದಿಯವರು ಮನಮೋಹನ ಸಿಂಗ್‌ರಂತೆ ವರ್ತಿಸಿದರೆ, ಅರುಣ್ ಶೌರಿ ಹೇಳುತ್ತಿದ್ದರು, ನರೇಂದ್ರ ಮೋದಿ ಬೆನ್ನುಮೂಳೆಯಿಲ್ಲದ ನಾಯಕರು, ಅವರಲ್ಲೇನೂ ದಮ್ ಇಲ್ಲ. ಭಾರತವು ಸಂಸದೀಯ ಪದ್ಧತಿಯನ್ನು ಅಂಗೀಕರಿಸಿದೆ. ಸಂಸದೀಯ ಪದ್ಧತಿಯಲ್ಲಿ ಪ್ರಧಾನಿಯು ಸರ್ಕಾರದ ಪ್ರಮುಖನೆಂದು ಕೆಲಸ ಮಾಡಬೇಕಾಗುತ್ತದೆ.ಅವರ ಕಾರ್ಯಶೈಲಿಯ ಬಗ್ಗೆ ಅವರ ಸಹಕಾರಿಗಳ ಯಾವ ತಕರಾರೂ ಇಲ್ಲ.ಅವರು ಆನಂದದಿಂದ ಅವರೊಂದಿಗೆ ಕೆಲಸ ಮಾಡುತ್ತಾರೆ. ಶೌರಿ ಅಳುವುದು ತಮಗೆ ಹುದ್ದೆ ಸಿಗಲಿಲ್ಲವೆಂದು, ಎಂದರೆ ತಪ್ಪೇನು ?
ಬಿಜೆಪಿ ಸರ್ಕಾರ 2004ರಲ್ಲಿ ಹೋಯಿತು. ಸರ್ಕಾರ ಹೋಗಲು ಅನೇಕ ಕಾರಣಗಳಿವೆ. ಅದರಲ್ಲಿ ಒಂದು ಕಾರಣ ಅರುಣ್ ಶೌರಿಯವರು. ಅರುಣ್ ಶೌರಿಯವರು ಡಾ. ಬಾಬಾಸಾಹೇಬ ಅಂಬೇಡ್ಕರರ ಹೆಸರಿಗೆ ಮಸಿ ಬಳಿಯುವ ‘ವರ್ಶಿಪಿಂಗ್ ಫಾಲ್ಸ್ ಗಾಡ್’ ಎಂಬ ಪುಸ್ತಕ ಬರೆದಿದ್ದಾರೆ. ಇದು ದೊಡ್ಡ ಗ್ರಂಥವಾಗಿದ್ದು, ಅದರಲ್ಲಿ ಅಂಬೇಡ್ಕರರು ದೇಶಭಕ್ತರಾಗಿರಲಿಲ್ಲ, ಆಂಗ್ಲರ ಹಸ್ತಕರಾಗಿದ್ದರು, ಸಂವಿಧಾನವನ್ನು ಅವರು ಬರೆದಿಲ್ಲ, ಇತ್ಯಾದಿ ಅಂಶಗಳನ್ನು ಒಮ್ಮುಖ ಪುರಾವೆಗಳನ್ನು ನೀಡಿ ಮಂಡಿಸಲು ಯತ್ನಿಸಿದ್ದಾರೆ. ಇಂತಹ ವ್ಯಕ್ತಿ ಬಿಜೆಪಿಯಲ್ಲಿ ಇದ್ದರು. ಬಿಜೆಪಿ ಅವರನ್ನು ಮಂತ್ರಿಯನ್ನಾಗಿ ಮಾಡಿತು. ಇದರಿಂದ ಸಮಸ್ತ ದಲಿತ ಸಮಾಜ ಬಿಜೆಪಿ ವಿರೋಧಿಯಾಯಿತು. ಇದು ಅಂಬೇಡ್ಕರರ ಬಗ್ಗೆ ಬಿಜೆಪಿಯ ಅಭಿಪ್ರಾಯವಲ್ಲ. ಸಂಘದ ಅಭಿಪ್ರಾಯವೂ ಅಲ್ಲ.
ಅರುಣ್ ಶೌರಿ ಮಂತ್ರಿಯಾಗಿದ್ದಾಗ ಅವರು ಸಾರ್ವಜನಿಕ ಉದ್ಯಮಗಳನ್ನು ಖಾಸಗಿಗೊಳಿಸುವ ಧೋರಣೆ ರೂಪಿಸಿದರು. ಸಾರ್ವಜನಿಕ ಉದ್ಯಮಗಳಲ್ಲಿ ಮೀಸಲು ಜಾಗಗಳಿರುತ್ತವೆ. ಖಾಸಗಿ ಉದ್ಯಮಗಳಲ್ಲಿ ಮೀಸಲು ಜಾಗಗಳಿಲ್ಲ. ಪರಿಶಿಷ್ಟ ಜಾತಿ-ಪಂಗಡಗಳ ಮೀಸಲು ಜಾಗಗಳನ್ನು ಕೊನೆಗೊಳಿಸಲು ಅರುಣ್ ಶೌರಿ ಈ ಆಟವಾಡಿದರೆಂದು ಪ್ರಚಾರ ನಡೆಯಿತು. ಇದರಿಂದಾಗಿ ದೇಶದೆಲ್ಲೆಡೆ ಪರಿಶಿಷ್ಟ ಜಾತಿ-ಪಂಗಡಗಳ ಮತದಾರರು ಆತಂಕಗೊಂಡರು, ಬಿಜೆಪಿಗೆ ಮತಗಳ ಖೋತಾ ಆಯಿತು. ಶೌರಿಯವರು ಪಕ್ಷದಲ್ಲಿದ್ದರೆ ಪಕ್ಷಕ್ಕೆ ಲಾಭವೆಷ್ಟು ಮತ್ತು ಪಕ್ಷದಲ್ಲಿ ಇಲ್ಲದಿದ್ದರೆ ಪಕ್ಷಕ್ಕೆ ಲಾಭವೆಷ್ಟು ಎಂಬ ವ್ಯಾವಹಾರಿಕ ಲೆಕ್ಕಾಚಾರವನ್ನು ಬಿಜೆಪಿಯ ನಾಯಕರೇ ಹೇಳಬೇಕು. ರಾಜಕಾರಣದಲ್ಲಿ ನಾಯಕನ ಮಹತ್ವವು ಕೇವಲ ಆತನ ಬುದ್ಧಿಮತ್ತೆಯಿಂದಲೇ ನಿಶ್ಚಿತವಾಗುವುದಿಲ್ಲ. ಬುದ್ಧಿಯು ನೇರವಾಗಿಯೂ ಚಲಿಸುತ್ತದೆ, ವಕ್ರವಾಗಿಯೂ ಚಲಿಸುತ್ತದೆ. ನಾಯಕನ ಮಹತ್ವವು ಆತ ಎಷ್ಟು ಮತಗಳನ್ನು ತರಬಲ್ಲ, ಎಷ್ಟು ಮತದಾರರನ್ನು ತನ್ನ ಕಡೆ ಒಲಿಸಬಲ್ಲ, ಎಂಬುದನ್ನು ಅವಲಂಬಿಸಿದೆ. ಈ ಕಾರ್ಯವನ್ನು ಒಳ್ಳೆಯ ವಿಧಾನದಿಂದ ಮಾಡಬೇಕಾಗುತ್ತದೆ. ಈ ಒರೆಗಲ್ಲಿನಲ್ಲಿ ಅರುಣ್ ಶೌರಿ ಅದೆಷ್ಟು ಸಫಲರಾಗುವರೆಂದು ಬಿಜೆಪಿ ಯೋಚಿಸಬೇಕು.
ನರೇಂದ್ರ ಮೋದಿಯವರನ್ನು ಟೀಕಿಸಿದರೆಂದು ಅರುಣ್ ಶೌರಿ ನಿರುಪಯೋಗಿಯೆಂದು ಭಾವಿಸಬೇಕಾಗಿಲ್ಲ. ಟೀಕಿಸುವವರ ಉದ್ದೇಶವೇನೆಂದು ನೋಡಬೇಕು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಸಮಾಜದ ಒಂದು ಗುಂಪಿನ ಟೀಕೆಗೆ ಗುರಿಯಾಗಿದ್ದಾರೆ. ಈ ಟೀಕಾಕಾರ ಮಂದಿಯು ಯಾವ ವಿಷಯದ ಬಗ್ಗೆ ಹೇಗೆ ಟೀಕಿಸುವುದೆಂದು ಹೇಳುವುದಿಲ್ಲ. ಆಚಾರ್ಯ ವಿನೋಬಾ ಭಾವೆಯವರು ಬ್ರಹ್ಮದೇವನ ಒಂದು ಕಥೆ ಹೇಳಿದ್ದಾರೆ. ‘‘ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಲು ಆರಂಭಿಸಿದ. ತಾನೇನೋ ಮಾಡುತ್ತಿದ್ದರೆ ಅದನ್ನು ಸರಿಯಾಗಿ ಮಾಡುತ್ತಿರುವೆನೇ, ಎಂದು ಸಮೀಕ್ಷೆ ಮಾಡಲು ಬ್ರಹ್ಮದೇವನು ಮೊಟ್ಟಮೊದಲು ಒಬ್ಬ ಟೀಕಾಕಾರನನ್ನು ನಿರ್ಮಿಸಿದ. ಬ್ರಹ್ಮದೇವನು ಆನೆಯನ್ನು ತಯಾರಿಸಿದ. ಟೀಕಾಕಾರ ಹೇಳಿದ ‘‘ಇದಂತೂ ಬರೀ ಕೆಳಗಡೆ ನೋಡುತ್ತಿದೆ. ತಲೆಯೆತ್ತಿ ನೋಡಲು ಸಾಧ್ಯವಿಲ್ಲ,’’ ಬ್ರಹ್ಮದೇವನು ಒಂಟೆಯನ್ನು ತಯಾರಿಸಿದ. ಟೀಕಾಕಾರ ಹೇಳಿದ, ‘‘ಇದಂತೂ ಸದಾ ಮೇಲಕ್ಕೇ ನೋಡುತ್ತದೆ, ಕೆಳಕ್ಕೆ ನೋಡುವುದೇ ಇಲ್ಲ.’’ ಬ್ರಹ್ಮದೇವನು ಕೋತಿಯನ್ನು ತಯಾರಿಸಿದ. ಟೀಕಾಕಾರ ಹೇಳಿದ,‘‘ಇದಂತೂ ಬಹು ಚಂಚಲ ಪ್ರಾಣಿ, ಸದಾ ಒಂದಲ್ಲ ಒಂದು ಚೇಷ್ಟೆ ಮಾಡುತ್ತಿರುತ್ತದೆ.’’ ಬ್ರಹ್ಮದೇವ ಕತ್ತೆಯನ್ನು ತಯಾರಿಸಿದ. ಟೀಕಾಕಾರ ಹೇಳಿದ, ‘‘ಇದಂತೂ ಹೇಳ್ದಂಗೆ ಮಾಡುತ್ತದೆ, ಬರೀ ಭಾರ ಹೊರುತ್ತದೆ.’’ ಟೀಕಾಕಾರನ ವಟವಟ ಕೇಳಿ ಬ್ರಹ್ಮದೇವ ಬೇಸರಗೊಂಡು, ಮನುಷ್ಯನನ್ನು ತಯಾರಿಸಿದ. ಟೀಕಾಕಾರನು ಈ ಸಲ ಟೀಕಿಸಲು ಸ್ವಲ್ಪ ತಡೆದು, ಆಮೇಲೆ ಹೇಳಿದ,‘‘ಇದರ ಎದೆಯಲ್ಲಿ ಕಿಟಿಕಿ ಇರಬೇಕಾಗಿತ್ತು, ಹಾಗಿದ್ದರೆ ಇದರ ಮನಸ್ಸಿನಲ್ಲಿ ಏನಾಗುತ್ತದೆಂದು ತಿಳಿಯುತ್ತಿತ್ತು.’’ ಕೊನೆಗೆ ಬ್ರಹ್ಮದೇವನು ಟೀಕಾಕಾರನನ್ನು ಶಿವನ ಬಳಿಗೆ ಕಳುಹಿಸಿದ. ಶಿವನ ಭೂತಗಣದಲ್ಲಿ ಪ್ರಾಯಶಃ ಅವನಿಗೆ ಜಾಗ ಸಿಕ್ಕಿರಬಹುದು.
ನರೇಂದ್ರ ಮೋದಿ ಬಗೆಗಿನ ಅರುಣ್ ಶೌರಿಯವರ ಟೀಕೆಯು ಮೇಲೆ ಹೇಳಿದ ಟೀಕಾಕಾರನಂತಿದೆ. ಏನೇ ಮಾಡಿ, ವಕ್ರವಾಗಿಯೇ ಹೋಗಲು ಅವರು ನಿಶ್ಚಯಿಸಿದ್ದಾರೆ. ಇಂತಹ ಟೀಕಾಕಾರರನ್ನು ಬ್ರಹ್ಮದೇವನೂ ಸಂತುಷ್ಟಗೊಳಿಸಲಾರ. ಇಲ್ಲಿ ನಮ್ಮ ಮರ್ತ್ಯ ಮಾನವರ ಕಥೆ ಕೇಳಬೇಕೇ ?

   

Leave a Reply