ಅರ್ಥಕ್ಕೆ ಕಿಂಕರರು

ಚಿಂತನ - 0 Comment
Issue Date : 26.05.2014

ಮನುಷ್ಯನ ನಾನಾ ಬಗೆಯ ಬಯಕೆ ಮತ್ತು ಲಾಲಸೆಗಳನ್ನು ಈಡೇರಿಸುವಲ್ಲಿ ಹಣಕಾಸಿನ ಪಾತ್ರ ನಿರ್ಣಾಯಕವಾದುದು. ಆದ್ದರಿಂದ ಆರ್ಥಿಕ ವಿಷಯಗಳಿಗೆ ಅವನು ಬಹಳಷ್ಟು ಪ್ರಾಮುಖ್ಯವನ್ನು ಕೊಡುತ್ತಾನೆೆ. ಈ ಧನ ಲಾಲಸೆ ಎಷ್ಟರ ಮಟ್ಟಿಗೆ ಮುಂದುವರಿಯುತ್ತದೆ ಎಂದರೆ ತಾನೇ ಅದರ ದಾಸನಾಗಿಬಿಡು ತ್ತಾನೆ. ಅದು ತನ್ನ ಬೇಕು ಬೇಡಗಳಿಗೆ ನಿರತವೂ ಸ್ಪಂದಿಸುವ ಒಂದು ಮಾಧ್ಯಮವೇ ವಿನಾ ಜೀವನದ ಪರಮ ಗುರಿಯಲ್ಲ ಎನ್ನುವುದನ್ನು ಆತ ಮರೆತೇಬಿಡುತ್ತಾನೆ.
ನಿಜವಾಗಿ ನೋಡಿದರೆ ಅರ್ಥ ಅಥವಾ ಹಣಕಾಸು ಎನ್ನುವುದು ಮನುಷ್ಯನೇ ತನ್ನ ಅನುಕೂಲತೆ ಾಗೂ ಆಗತ್ಯಗಳಿಗಾಗಿ ರೂಪಿಸಿಕೊಂಡ ಒಂದು ಸಾಧನ. ಹೋಗಿ ಸೇರಬೇಕಾದ ಗಮ್ಯ ಸ್ಥಾನವೇನೂ ಅಲ್ಲ. ಆದ್ದರಿಂದ ಆತನು ಯಾವಾಗಲೂ ಹಣವನ್ನು ತನ್ನ ಅವಶ್ಯಕತೆ, ಅನುಕೂಲತೆ ಹಾಗೂ ಹಿತಾಸಕ್ತಿಗಳಿಗೆ ತಕ್ಕಂತೆ ಉಪಯೋಗಿಸಿಕೊಳ್ಳಬೇಕು. ಅದನ್ನು ತನ್ನ ತೊತ್ತಾಗಿ, ಅಡಿಯಾಳಾಗಿ ಮಾಡಿಕೊಳ್ಳಬೇಕು. ಆದರೆ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ನಾವು ಕಾಣವುದು ತದ್ವಿರುದ್ಧವಾದ ಸ್ಥಿತಿ.
ಆದ್ದರಿಂದಲೇ ಶ್ರೇಷ್ಠ ಕವಿಯಾದ ಕುಮಾರವ್ಯಾಸನು ‘ಅರ್ಥಕ್ಕೆ ಧರಣೀಶ್ವರರು ಕಿಂಕರರು; ಅರ್ಥ ತಾ ಕಿಂಕರತೆಯ ಮಾಡುವುದು ಜಗದಲಿ’ ಎಂದು ಘೋಷಿಸಿದ್ದಾನೆೆ. ಧರಣೀಶ್ವರ (ಭೂಮಿಗೇ ಅಧಿಪತಿ) ಎಂದು ಹೇಳಿಕೊಂಡ ಮೇಲೆ ರಾಜನು ಎಲ್ಲರನ್ನೂ, ಎಲ್ಲವನ್ನೂ ತನ್ನ ದಾಸರಾಗಿ ಮಾಡಿಕೊಳ್ಳಬೇಕು. ಸಾಮ್ರಾಜ್ಯದ ವಿಸ್ತಾರವಾದ ಮಂಡಲದೊಳಗೆ ಇರುವ ಪ್ರಜಾಜನರಾಗಲೀ, ಐಹಿಕ ಸುಖ ಸಂಪತ್ತುಗಳಾಗಲೀ ಅವನ ಅಧೀನದಲ್ಲಿರಬೇಕು. ಬಲಿಷ್ಠವಾದ ಸೇನೆ, ಕುಶಾಗ್ರಮತಿಗಳಾದ ಮಂತ್ರಿ ಗಳು ಮತ್ತು ಬುದ್ಧಿಶಾಲಿಗಳಾದ ಅಧಿಕಾರಿಗಳು ಆಸ್ಥಾನದಲ್ಲಿರುವುದರಿಂದ ಎಲ್ಲವನ್ನೂ ತನ್ನ ಪ್ರಭಾವದ ಕಕ್ಷೆಯೊಳಗೆ ಬರುವಂತೆ ಮಾಡುವ ಪ್ರಂಚಡವಾದ ಶಕ್ತಿ ಅವನಲ್ಲಿದೆ. ಆದರೆ ಅರ್ಥದಿಂದ (ಹಣಕಾಸಿನಿಂದ) ಉಳಿದೆಲ್ಲವನ್ನೂ ಸಾಧಿಸಬಹುದೆಂಬ ಭ್ರಮೆಯಿಂದ ಅವನು ಅದಕ್ಕೆ ಗುಲಾಮನಾಗಿಬಿಡುತ್ತಾನೆ. ‘ಅರ್ಥಕೆ ಗುಲಾಮನಾಗುವ ತನಕ ದೊರೆಯದೆನಗೆ ಜಯವು’ ಅಂದುಕೊಳ್ಳುತ್ತಾನೆ.
ಜಗತ್ತಿನಲ್ಲಿ ಅರ್ಥವು ಏನು ಮಾಡುತ್ತದೆ? ಯಾರೆಲ್ಲ ತನ್ನ ಸಂಪರ್ಕಕ್ಕೆ ಬರುತ್ತಾರೋ ಅವರನ್ನೆಲ್ಲಾ ದಾಸರಾಗಿ ಪರಿವರ್ತಿಸುವುದು ಅದರ ಸ್ವಭಾವ. ಆದ್ದರಿಂದ ಎಲ್ಲರೂ ಈ ಬಗೆಗೆ ಜಾಗರೂಕತೆ ವಹಿಸಬೇಕು ಎಂದು ಕವಿ ಹೇಳುತ್ತಾನೆ.
ಅರ್ಥವು ಒಂದು ಪುರುಷಾರ್ಥವೇನೋ ನಿಜ. ಆದರೆ ಉಳಿದ ಮೂರು ಪುರುಷಾರ್ಥಗಳನ್ನೂ ಯಾರೂ ಕಡೆಗಣಿಸುವ ಹಾಗಿಲ್ಲ. ‘ಧರ್ಮಾವಿರುದ್ಧೋ ಅರ್ಥಃ’ ಎನ್ನುವ ಮಾತಿದೆ. ಧರ್ಮಕ್ಕೆ ವಿರೋಧವಾಗದ ರೀತಿಯಲ್ಲಿ ಅರ್ಥವನ್ನು ಅನುಭವಿಸಬೇಕು. ಹಾಗೆಯೇ ತನ್ನೆಲ್ಲ ವಾಂಛೆಗಳನ್ನು (ಕಾಮ) ಹಿತಮಿತವಾಗಿ ಮೈಗೂಡಿಸಬೇಕು. ಮೋಕ್ಷ ಸಾಧನೆಗೆ ಅಡ್ಡಿಯಾಗದ ಹಾಗೆ ಯಾರು ಅರ್ಥವನ್ನು ನಿಭಾಯಿಸುತ್ತಾರೋ ಅವರು ಹಣಕ್ಕೆ ಕಿಂಕರರಾಗದೆ ಸ್ವತಂತ್ರವಾಗಿ ಉಳಿಯುತ್ತಾರೆ. ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಮೇಲಕ್ಕೇರುತ್ತಾರೆ ಎನ್ನುವುದು ಕುಮಾರವ್ಯಾಸನ ಆಶಯ. ಇದಕ್ಕೆ ಅವನು ಧರಣಿಪತಿಗಳ ಉದಾಹರಣೆಯನ್ನು ಕೊಟ್ಟಿದ್ದಾನೆ.

– ಅರ್ತಿಕಜೆ

   

Leave a Reply