ಅವತಾರ : ಭವಭಯಹಾರ

ಬೋಧ ಕಥೆ - 0 Comment
Issue Date :

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಯಾವ ಯಾವ ಸಮಯದಲ್ಲಿ ಧರ್ಮದ ಹಾನಿ ಹಾಗೂ ಅಧರ್ಮದ ಹೆಚ್ಚಳವಾಗುವುದೋ ಆಗೆಲ್ಲ ನಾನು ಸಜ್ಜನರನ್ನು ಕಾಯಲು ದುರ್ಜನರನ್ನು ವಿನಾಶ ಮಾಡಲು ಹಾಗೂ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗಗಳಲ್ಲಿ ಅವತರಿಸುತ್ತೇನೆ (….ಸಂಭವಾಮಿ ಯುಗೇ ಯುಗೇ) ಇದು ಗೀತಾಚಾರ್ಯ ಭಗವಂತನ ಮಾತು. (ಗೀತಾ. ಅ: 2, ಶ್ಲೋ 7-8)
ಜಗತ್ಪಾಲಕನಾದ ಭಗವಂತ ಕಾಲಕಾಲಕ್ಕೆ ಹಲವು ಅವತಾರಗಳನ್ನು ತಳೆದು ಬಂದು ತನ್ನ ನಂಬಿದವರನ್ನು ಕಾಯ್ದಿದ್ದಾನೆ. ಹಲವು ಅವತಾರಗಳಲ್ಲಿ ಮತ್ಸ್ಯಾದಿ ಹತ್ತು ಅವತಾರಗಳು ಬಹುಪ್ರಸಿದ್ಧ.
ಅವತಾರ ಎಂದರೆ ಕೆಳಗೆ (ಸಗ್ಗದಿಂದ ಭುವಿಗೆ) ಭಗವಂತ ‘ಇಳಿದು’ ಬರುವುದು. ತನ್ನ ಭಕ್ತರನ್ನು, ತನ್ನನ್ನು ನಂಬಿದವರನ್ನು ಈ ಲೋಕವನ್ನು ತನ್ನ ಎತ್ತರಕ್ಕೆ ಏರಿಸಲು ತನ್ನ ಹತ್ತಿರಕ್ಕೆ ಬರಮಾಡಿಕೊಳ್ಳಲು ಭಗವಂತ ತಾನೇ ಇಳಿದು ಬರುವನು. ಇಲ್ಲಿ ‘ಭವ’ದ ‘ತರಣ’ಕ್ಕಾಗಿ – ಜಗದ ‘ಹರಣ’ (ಉಳಿಸಲು)ಭಗವಂತನ ‘ಅವತರಣ.’
ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಭಾರ್ಗವರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ಇವು ವಿಷ್ಣು ತಳೆದ ಪ್ರಸಿದ್ಧ ದಶಾವತಾರಗಳು.
ಮತ್ಸ್ಯ, ಕೂರ್ಮ, ವರಾಹ, ವಾಮನ ಅವತಾರಗಳ ಸಂಕೇತವು ಶತಪಥ ಬ್ರಾಹ್ಮಣದಲ್ಲಿ ಕಂಡುಬರುತ್ತದೆ. ನರಸಿಂಹಾವತಾರದ ಸ್ಪಷ್ಟ ಸೂಚನೆಯು ಋಗ್ವೇದದ ಮನ್ಯುಸೂಕ್ತದಲ್ಲಿ ಕಾಣಬಹುದು.
ಮೊದಲು ಎಲ್ಲೆಡೆ ಕೇವಲ ನೀರುಮಾತ್ರ (ಆಗ ಮತ್ಸ್ಯ) ಮತ್ತೆ ನಿಧಾನವಾಗಿ ಮೈದಳೆದ ಭೂಮಿ (ನೀರು – ನೆಲದ ಮೇಲೆ ಚಲಿಸಬಲ್ಲ ಕೂರ್ಮ) ಮುಂದೆ ವಿಕಾಸದ ಮುಂದಿನ ಹಂತ ಕಾಡುಮೇಡುಗಳಲ್ಲಿ ವಾಸ (ವರಾಹ), ಆಮೇಲೆ ಕಾಡುಮನುಷ್ಯರು (ನರಸಿಂಹ) ಇಷ್ಟಾದ ಮೇಲೆ ಕ್ರಮವಾದ ವಿಕಾಸ – ಕುಟುಂಬ ವ್ಯವಸ್ಥೆ, ಯುದ್ಧ ಹೋರಾಟಗಳು ಇತ್ಯಾದಿಗಳ ಬೆಳವಣಿಗೆಯ ಕುರುಹುಗಳು ಕ್ರಮವಾಗಿ ಮತ್ಸ್ಯಾದಿ ಅವತಾರಗಳು ಎಂದು ವೈಚಾರಿಕ ಹುಡುಕಾಟಗಳು ನಡೆದುಬಿಟ್ಟಿವೆ!
ಮತ್ಸ್ಯ, ಕೂರ್ಮ, ವರಾಹ, ಭಾಗವತ ಪುರಾಣ, ನರಸಿಂಹ ಪುರಾಣ ಮುಂತಾದ ಹಲವು ಪುರಾಣಗಳು ವಿಷ್ಣುವಿನ ಮಹಿಮಾಪ್ರಕಟನೆಗಾಗಿಯೇ ಮೀಸಲು ಎಂದರೂ ತಪ್ಪಿಲ್ಲ.
ಹತ್ತು ಅವತಾರಗಳಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣ ಎರಡು ಅವತಾರಗಳು ನಮ್ಮ ಜನಸಂಸ್ಕೃತಿಯನ್ನು ಬಲವಾಗಿ ಪ್ರಭಾವಿಸಿವೆ. ಶ್ರೀರಾಮನದು ಅಂಶಾ ವತಾರವಾದರೆ ಶ್ರೀಕೃಷ್ಣನದು ಪೂರ್ಣಾವತಾರ. ಶ್ರೀರಾಮ ಮರ್ಯಾದಾ ಪುರುಷೋತ್ತಮ. ಶ್ರೀ ಕೃಷ್ಣ ಸಾಕ್ಷಾತ್ ಭಗವಂತ. ರಾಮ ಮಾನವ ಆದರ್ಶ ಪುರುಷ. ಕೃಷ್ಣ ಮಗುಗಳ ಮಾಣಿಕ್ಯ.
ರಾಮ ಎಂದರೆ ಪ್ರೇಮ, ಸಂತೋಷಗೊಳಿಸುವವ. ಕೃಷ್ಣ ಎಂದರೆ ಭವಭಯ ಕಳೆಯುವವ. ಈರ್ವರ ನಡವಳಿಕೆಗಳೂ ನಮಗೆ ಆದರ್ಶ! ರಾಮನ ಕಥೆ ಹೇಳಲು ರಾಮಾಯಣ ಮೈದಳೆದರೆ, ಕೃಷ್ಣನ ಕಥೆಗಾಗಿ ಭಾರತ-ಭಾಗವತಗಳು ಪ್ರಕಟಗೊಂಡವು. ಈ ‘ಅವತಾರ’ಗಳೆಂದರೆ ನಿಜಕ್ಕೂ ‘ಭವಭಯಹಾರಕ’.

– ಶ್ರೀನಿಧಿ

   

Leave a Reply