ಅವಮಾನವಾದರೆ ಒಳ್ಳಿತು

ಬೋಧ ಕಥೆ - 0 Comment
Issue Date : 08.05.2015

ಸಾಮಾನ್ಯವಾಗಿ ಸಮಾಜದಲ್ಲಿ ಯಾರೂ ಕೂಡ ಮಾನ – ಸಮ್ಮಾನ – ಪ್ರಶಸ್ತಿ – ಗೌರವ – ಶ್ಲಾಘನೆಗಳನ್ನು ಇಷ್ಟಪಡುತ್ತಾರಲ್ಲದೆ ಅಪಮಾನ – ನಿಂದೆ – ಟೀಕೆ – ಬೈಗುಳಗಳನ್ನಲ್ಲ. ಆದರೆ ಪುರಂದರದಾಸರು ತಮ್ಮ ಕೀರ್ತನೆಯೊಂದರಲ್ಲಿ ‘‘ಅಪಮಾನವಾದರೆ ಒಳ್ಳಿತು’’ ಎಂದು ಹೇಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೇಲ್ನೋಟಕ್ಕೆ ಅವರ ಈ ಮಾತು ವಿಚಿತ್ರವಾಗಿ ತೋರಿದರೂ ಒಳಹೊಕ್ಕು ನೋಡಿದರೆ ಅದರ ಅಂತರಾರ್ಥ ಸ್ಪಷ್ಟವಾಗುತ್ತದೆ.

 ನಿತ್ಯವೂ ಭಿಕ್ಷೆಗಾಗಿ ಊರೂರು ಅಲೆದಾಡುವ ಹರಿದಾಸ ರನ್ನು ಕಂಡು ಕೆಲ ಜನರು ಹೀನಾಯವಾಗಿ ಜರೆದಾಗ ಅವರು ಸಿಟ್ಟುಗೊಳ್ಳಲಿಲ್ಲ; ಪ್ರತಿಭಟಿಸಲಿಲ್ಲ. ಬದಲಾಗಿ ತಮಗಾದ ಅಪಮಾನಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದರು. ಅದರಿಂದ ಆದ ಅನುಕೂಲತೆಗಳನ್ನು ಎತ್ತಿ ತೋರಿಸಿದರು.

 ಯಾವನೇ ಮನುಷ್ಯನಿಗೆ ಇತರರು ಗೌರವಾದರಗಳನ್ನು ಮತ್ತು ಉನ್ನತವಾದ ಸ್ಥಾನಮಾನಗಳನ್ನು ನೀಡಿದರೆ ಏನಾಗುತ್ತದೆ? ಅವನಿಗೆ ಇನ್ನಿಲ್ಲದ ಅಹಂಕಾರ ಬಂದು ಬಿಡುತ್ತದೆ. ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ. ಆತ್ಮಪ್ರಶಂಸೆ ಯಲ್ಲಿ ಮುಳುಗುತ್ತಾನೆ. ಇದರಿಂದಾಗಿ ದೇವರೇ ಎಲ್ಲವನ್ನೂ ಮಾಡಿದವನೆಂಬ ದೃಢವಾದ ವಿಶ್ವಾಸ ಮಾಯವಾಗಿ ತಾನೇ ಬಲಶಾಲಿಯೆಂಬ ಗರ್ವ ಉಂಟಾಗುತ್ತದೆ. ‘ನಾಹಂ ಕರ್ತಾ, ಹರಿಕರ್ತಾ’ ಎನ್ನುವ ಸೂಕ್ತಿ ಎಲ್ಲೋ ಮರೆತು ಹೋಗುತ್ತದೆ. ಇದರ ಫಲವಾಗಿ ತಪಸ್ಸು ಕೆಟ್ಟುಹೋಗುತ್ತದೆ ಎನ್ನುವ ದಾಸರು ಇದಕ್ಕೆ ದುರ್ಯೋಧನನ ಉದಾಹರಣೆಯನ್ನು ಕೊಡುತ್ತಾರೆ.

 ಕೌರವನಿಗೆ ಮುಳುವಾದುದು ಆತನ ದುರಭಿಮಾನ. ಸ್ವಾಭಿಮಾನದಿಂದ ಯಾರಿಗೂ ಯಾವುದೇ ಕೆಡುಕಾಗುವುದಿಲ್ಲ. ಆದರೆ ತಾನೇ ಸರ್ವಶಕ್ತನೆಂಬ ಕೆಟ್ಟ ಅಭಿಮಾನ ವಿನಾಶಕಾರಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ದೌರ್ಬಲ್ಯದಿಂದಾಗಿ ದುರ್ಯೋಧನನು ಅನೇಕ ತಪ್ಪುಗಳನ್ನು ಮಾಡಿದ. ಭೀಷ್ಮ, ದ್ರೋಣ, ವಿದುರ ಮುಂತಾದ ಹಿರಿಯರು, ಸಾಕ್ಷಾತ್ ದೇವನಾದ ಶ್ರೀಕೃಷ್ಣ ಮುಂತಾದ ಯಾರ ಮಾತಿಗೂ ಕಿವಿಗೊಡಲಿಲ್ಲ. ಪರಿಣಾಮವಾಗಿ ಕುರುಕ್ಷೇತ್ರದಲ್ಲಿ ಅವನ ಊರುಭಂಗವಾಯಿತು; ಮಾತ್ರವಲ್ಲ ಅಲ್ಲಿ ಜರುಗಿದ ಭೀಕರ, ದಾರುಣ ಯುದ್ಧದಲ್ಲಿ ಕೋಟಿಗಟ್ಟಲೆ ಕ್ಷತ್ರಿಯರು ಮರಣ ಹೊಂದಿದರು.

 ಭಕ್ತರಿಗೆ, ಹರಿದಾಸರಿಗೆ, ಸತ್ಯವ್ರತರಿಗೆ ಒಂದು ವೇಳೆ ಯಾರಿಂದಾದರೂ ಅಪಮಾನವಾದರೆ ಏನಾಗುತ್ತದೆ? ಅವರ ತಪಸ್ಸು ವೃದ್ಧಿಯಾಗುತ್ತದೆ. ಸತ್ಕಾರ್ಯಗಳಿಗೆ ಅವಶ್ಯವಾದ ಛಲ ಒದಗಿಬರುತ್ತದೆ. ಇದಕ್ಕೆ ಧ್ರುವನು ಒಳ್ಳೆಯ ನಿದರ್ಶನ. ಮಲತಾಯಿಯಾದ ಸುರುಚಿ ಅವ ನನ್ನು ಹೀನಾಯವಾಗಿ ಜರೆದು ತೀವ್ರವಾದ ಅಪಮಾನಕ್ಕೆ ಒಳಗಾಗಿರದಿದ್ದರೆ ಪ್ರಾಯಶಃ ಆತ ಅಷ್ಟೊಂದು ಎಳೆಯ ವಯಸ್ಸಿನಲ್ಲೇ ಕಾಡಿಗೆ ಹೋಗಿ ಅತ್ಯಂತ ಕಠಿಣವಾದ ತಪಸ್ಸನ್ನು ಮಾಡಿ ಪರಮಾತ್ಮನನ್ನು ಒಲಿಸಿಕೊಳ್ಳುತ್ತಿರಲಿಲ್ಲ ಎಂದು ಪುರಂದರದಾಸರು ಹೇಳುತ್ತಾರೆ.

 ಐತಿಹಾಸಿಕ ಯುಗದಲ್ಲಿ ಕೂಡ ಚಾಣಕ್ಯನಂತಹ ವ್ಯಕ್ತಿಗಳು ಅಪಮಾನವನ್ನು ಸವಾಲಾಗಿ ಸ್ವೀಕರಿಸಿ ಅದ್ಭುತ ವಾದ ಸಾಧನೆಯನ್ನು ಮಾಡಿದ್ದುಂಟು. ಆದರೆ ಇದಕ್ಕೆ ಆತ್ಮಶಕ್ತಿ ಹಾಗೂ ಶ್ರದ್ಧೆ ಬಹುಮುಖ್ಯ.

– ಅರ್ತಿಕಜೆ

   

Leave a Reply