ಆಂತರಿಕ ಸೌಂದರ್ಯಕ್ಕೂ ಇರಲಿ ಕೊಂಚ ಸಮಯ…

ಮಹಿಳೆ ; ಲೇಖನಗಳು - 0 Comment
Issue Date : 30.05.2016

ಸುಂದರವಾಗಿ ಕಾಣುವುದು ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಮಹಿಳೆಯರಂತೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಹೆಚ್ಚಿಸಿಕೊಳ್ಳಲು ಏನೆಲ್ಲ ಮಾಡುತ್ತಾರೆ. ಹೊಸ ತಲೆಮಾರು ಸೌಂದರ್ಯಕ್ಕೆ ನೀಡುವ ಮಹತ್ವವನ್ನು ಇನ್ಯಾವುದಕ್ಕೂ ನೀಡುತ್ತಿಲ್ಲ. ಹಾಗೆ ಹೇಳುವುದಕ್ಕೆ ಹೋದರೆ ಜಗತ್ತಿನಲ್ಲಿ ಕುರೂಪಿಗಳು ಯಾರೂ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಸುಂದರವಾಗಿಯೇ ಇರುತ್ತಾರೆ. ಆದರೆ ನಮ್ಮ ಮೈಕಟ್ಟಿಗೆ ಒಪ್ಪುವಂತೆ, ನಮ್ಮ ಮುಖಕ್ಕೆ ಹೊಂದುವಂತೆ ಸಿಂಗಾರ ಮಾಡಿಕೊಳ್ಳಬೇಕೇ ಹೊರತು ಇನ್ಯಾರೋ ಹೇಗೋ ಸಿಂಗರಿಸಿಕೊಳ್ಳುತ್ತಾರೆಂದು ನಾವೂ ಅವರಂತೆಯೇ ಶೃಂಗಾರ ಮಾಡಿಕೊಂಡರೆ ನಗೆಪಾಟಲಾಗಬೇಕಾಗುತ್ತದೆ.
ಅನುಕರಣೆ ತಪ್ಪಲ್ಲ. ಆದರೆ ಅದು ನಮಗೆ ಹೊಂದುತ್ತದಾದರೆ ಮಾತ್ರ ಅನುಕರಣೆ ಮಾಡಬಹುದು. ಮತ್ಯಾರಿಗೋ ಕಿತ್ತಳೆ ಬಣ್ಣದ ಸೀರೆ ಒಪ್ಪುತ್ತದೆಂದು ನಾವು ಅದೇ ಬಣ್ಣದ ಸೀರೆ ಕೊಂಡರೆ ನಮ್ಮ ಬಣ್ಣಕ್ಕೆ, ನಮ್ಮ ಮೈಕಟ್ಟಿಗೆ ಅದು ಹೊಂದದಿರಬಹುದು. ಬಾಹ್ಯ ಸೌಂದರ್ಯ ಮಹತ್ವದ್ದಲ್ಲ ನಿಜ. ಆದರೆ ಕೆಲವೊಮ್ಮೆ ನಾವು ತೊಡುವ ಬಟ್ಟೆ, ನಮ್ಮ ಮೇಕಪ್‌ಗಳೇ ನಮ್ಮ ವ್ಯಕ್ತಿತ್ವವನ್ನೂ ಅಳೆಯುವುದಕ್ಕೆ ಸಹಾಯಕವಾಗಬಹುದು. ಆದ್ದರಿಂದ ನಿಮ್ಮ ಸೌಂದರ್ಯದ ಬಗ್ಗೆ ಕಾಳಜಿ ತೋರುವಾಗ ಸ್ವಂತಿಕೆ ಉಪಯೋಗಿಸಿ. ಪ್ರತಿಯೊಂದರಲ್ಲೂ ಮತ್ತೊಬ್ಬರನ್ನು ಅನುಕರಿಸುವುದು ನಮ್ಮ ವ್ಯಕ್ತಿತ್ವವನ್ನು ಕೀಳಾಗಿ ಚಿತ್ರಿಸುತ್ತದೆ. ನಿಮ್ಮ ಸ್ನೇಹಿತೆ ಯಾವುದೋ ಉಡುಗೆಯಲ್ಲಿ, ಗಾಢ ಮೇಕಪ್‌ನಲ್ಲಿ ಸುಂದರವಾಗಿ ಕಾಣುತ್ತಾಳೆಂದು ನೀವೂ ಅಂಥದೇ ಉಡುಗೆ ತೊಟ್ಟು, ಗಾಢವಾಗಿ ಮೇಕಪ್ ಮಾಡಿಕೊಂಡರೆ ಅಪಹಾಸ್ಯಕ್ಕೊಳಗಾಗುವ ಸಾಧ್ಯತೆಯೇ ಹೆಚ್ಚು.
ಚರ್ಮದ ಬಣ್ಣ ಮಹತ್ವದ್ದಲ್ಲ. ಏಕೆಂದರೆ ಕಪ್ಪಗಿರುವ ಹುಡುಗಿಯರೂ ನೋಡುವುದಕ್ಕೆ ಸಾಕಷ್ಟು ಲಕ್ಷಣವಾಗಿರಬಹುದು. ಹಾಗೆಯೇ ತೆಳ್ಳಗೆ, ಬೆಳ್ಳಗಿರುವ ಹುಡುಗಿಯರ ಮುಖ ಕೊಂಚವೂ ಚೆಲುವಾಗಿರದಿರಬಹುದು. ನಮ್ಮ ಬಣ್ಣಕ್ಕೆ ಹೊಂದುವಂಥ ಬಟ್ಟೆ ತೊಟ್ಟರೆ ಮೈ ಬಣ್ಣ ಮಹತ್ವದ್ದಾಗುವುದಿಲ್ಲ. ಸಹಜವಾಗಿಯೇ ಸುಂದರವಾಗಿ ಕಾಣಬಹುದು.
ತೂಕ ಹೆಚ್ಚಿದ್ದವರು ಉದ್ದ ತೋಳಿನ ಬಟ್ಟೆ ತೊಟ್ಟರೆ ಚೆನ್ನಾಗಿರುತ್ತದೆ. ತೆಳ್ಳಗಿರುವವರು ಗಿಡ್ಡ ತೋಳಿನ ಬಟ್ಟೆ ಧರಿಸುತ್ತಾರೆಂದು ಧಡೂತಿ ಮೈಕಟ್ಟಿನವರೂ ಅಂಥದೇ ಬಟ್ಟೆ ತೊಟ್ಟರೆ ಅಸಹ್ಯವಾಗಿ ಕಾಣಬಹುದು.
ಫ್ಯಾಷನ್‌ಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ನಿನ್ನೆಯ ಫ್ಯಾಷನ್ ಇವತ್ತು ಇರುವುದಿಲ್ಲ. 50 ವರ್ಷದ ಹಿಂದೆ ಫ್ಯಾಷನ್ ಎನ್ನಿಸಿದ್ದು ಕೊಂಚ ಬದಲಾವಣೆ ಮಾಡಿಕೊಂಡು ಮತ್ತೊಮ್ಮೆ ಹೊಸ ಪ್ರಪಂಚಕ್ಕೆ ಲಗ್ಗೆ ಇಡುತ್ತದೆ. ಅದರಲ್ಲೂ ಮಹಿಳೆಯರ ಉಡುಪುಗಳು, ಪ್ರಸಾಧನಗಳು ಎಲ್ಲವೂ ಹೊಸ ಕಾಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡು ಲಗ್ಗೆ ಇಡುತ್ತವೆ. ಹೊಸ ಫ್ಯಾಷನ್‌ಗೆ ಹೊಂದಿಕೊಳ್ಳುವುದೇ ಕೆಲವರಿಗೆ ಜೀವನವಾಗಿಬಿಟ್ಟಿರುತ್ತದೆ.
ಫ್ಯಾಷನ್‌ಗಳು ಎಷ್ಟೇ ಬದಲಾದರೂ ನಮ್ಮ ಮುಖವಾಗಲಿ, ಮೈಕಟ್ಟಾಗಲೀ ಫ್ಯಾಷನ್‌ನಷ್ಟು ವೇಗವಾಗಿ ಬದಲಾಗುವುದಿಲ್ಲ. ಹೊಸ ಫ್ಯಾಷನ್‌ಗೆ ಹೊಂದಿಕೊಳ್ಳಬೇಕೆಂಬ ನಿಯಮವೇನಿಲ್ಲ. ನಮಗೆ ಯಾವುದು ಸುಂದರವಾಗಿ ಕಾಣುತ್ತದೆ, ಹೇಗಿರುವುದು ನಮಗೂ ಇಷ್ಟವಾಗುತ್ತದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆಯೇ ಸಿಂಗರಿಸಿಕೊಂಡರೆ ಸೌಂದರ್ಯ ಇಮ್ಮಡಿಯಾಗುತ್ತದೆ.
ಇನ್ಯಾರದೋ ಮೇಲಿನ ಹೊಟ್ಟೆಕಿಚ್ಚಿಗೆ ನಾವೂ ಅವರಂತೆಯೇ ಸಿಂಗರಿಸಿಕೊಳ್ಳುವುದು, ಅವರನ್ನೇ ಅನುಕರಣೆ ಮಾಡುವುದು ಮನಸ್ಸಿನ ನೆಮ್ಮದಿಯನ್ನೂ ನಾಶಮಾಡುವ ಜೊತೆಗೆ ಸೌಂದರ್ಯವನ್ನೂ ಹಾಳುಮಾಡುತ್ತದೆ. ಯಾರು ಹೇಗೇ ಇದ್ದಿರಲಿ, ನಾವು ಹೇಗಿರಬೇಕೆಂಬ ಸ್ವಂತಿಕೆಯ ಬುದ್ಧಿ ನಮಗಿರಬೇಕು.
ಎಷ್ಟೇ ಸುಂದರವಾಗಿದ್ದರೂ, ಎಷ್ಟೇ ಸುಂದರವಾಗಿ ಸಿಂಗರಿಸಿಕೊಂಡರೂ ಮತ್ತೊಬ್ಬರೊಂದಿಗೆ ಬೆರೆಯದೆ, ಎಲ್ಲರೊಂದಿಗೂ ಅಂತರ ಉಳಿಸಿಕೊಂಡು ನಮ್ಮ ಪಾಡಿಗೆ ನಾವು ದ್ವೀಪದಂತೆ ಇದ್ದುಬಿಡುತ್ತೇವಾದರೆ ಅದೂ ಸೌಂದರ್ಯವೆನ್ನಿಸಿಕೊಳ್ಳುವುದಿಲ್ಲ. ಏಕೆಂದರೆ ಆಂತರಿಕ ಸೌಂದರ್ಯದಿಂದ ಮಾತ್ರವೇ ಬಾಹ್ಯ ಸೌಂದರ್ಯವೂ ಕಳೆ ಪಡೆಯುತ್ತದೆ. ನಮ್ಮ ಸೌಂದರ್ಯ ನಮ್ಮಲ್ಲಿ ಅಹಂಕಾರವನ್ನು ಹುಟ್ಟಿಸಿ, ಬೇರೆಲ್ಲರಿಗಿಂತ ನಾನು ಭಿನ್ನ, ನಾನೇ ಸುಂದರಿ ಎಂಬ ಭಾವವನ್ನು ನಮ್ಮಲ್ಲಿ ಸೃಷ್ಟಿಸುವುದಾದಲ್ಲಿ ಎಷ್ಟೇ ಸುಂದರವಾಗಿದ್ದರೂ ಅದು ಸೌಂದರ್ಯವೆಂದು ಕರೆಸಿಕೊಳ್ಳುವುದಿಲ್ಲ.
ಬಾಹ್ಯ ಸೌಂದರ್ಯವನ್ನು ಇಮ್ಮಡಿಗೊಳಿಸುವುದು ಅಹಂಕಾರವಿಲ್ಲದ, ದರ್ಪವಿಲ್ಲದ, ನಿಷ್ಕಲ್ಮಷ, ನಿಸ್ವಾರ್ಥ ನಗು. ಆ ನಗುವಿನ ಸೌಂದರ್ಯ ನಮ್ಮೊಂದಿಗಿದ್ದರೆ ಬಾಹ್ಯವಾಗಿ ಎಷ್ಟೇ ಕುರೂಪವಾಗಿದ್ದರೂ ನಾವು ಸುಂದರವಾಗಿಯೇ ಕಾಣುತ್ತೇವೆ. ಹತ್ತಾರು ಜನ ನಮ್ಮನ್ನು ಪ್ರೀತಿಯಿಂದಲೇ ಕಾಣುತ್ತಾರೆ. ನಮ್ಮ ಆಂತರಿಕ ಸೌಂದರ್ಯವನ್ನು ಮೆಚ್ಚಿಕೊಂಡವರು ಬಾಹ್ಯ ಸೌಂದರ್ಯವನ್ನೂ ಮೆಚ್ಚಿಕೊಳ್ಳುತ್ತಾರೆ.
ಆದ್ದರಿಂದ ನಾವು ಯಾರಂತೆಯೋ ಬದುಕುವುದನ್ನು ಬಿಟ್ಟು, ಮತ್ತೊಬ್ಬರು ನಮ್ಮ ಪ್ರತಿಸ್ಪರ್ಧಿ ಎಂಬಂತೆ ತಿಳಿಯುವುದನ್ನು ಬಿಟ್ಟು ನಾವು ನಾವಾಗಿಯೇ, ನಮಗೊಪ್ಪುವಂತೆ, ನಮ್ಮ ಮನಸ್ಸು ಇಷ್ಟಪಡುವಂತೆ ಇದ್ದುಕೊಂಡು ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಶ್ರಮಪಟ್ಟರೆ ಬಾಹ್ಯ ಸೌಂದರ್ಯವೂ ತಂತಾನೇ ಹೆಚ್ಚುತ್ತದೆ. ನಮ್ಮ ವ್ಯಕ್ತಿತ್ವವನ್ನೂ ಅದು ಶ್ರೀಮಂತಗೊಳಿಸುತ್ತದೆ.
ಪ್ರತಿಯೊಬ್ಬರಲ್ಲೂ ಸೌಂದರ್ಯವಿದೆ. ಮುಪ್ಪಿನಲ್ಲಿ, ನಮ್ಮ ಚರ್ಮ ಸುಕ್ಕುಗಟ್ಟಿದ ನಂತರವೂ ನಮ್ಮನ್ನು ಸುಂದರವಾಗಿಯೇ ಇಡುವುದು ಆಂತರಿಕ ಸ್ವಭಾವಗಳು ಮಾತ್ರ. ಆದ್ದರಿಂದ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ನಮ್ಮ ಪ್ರತಿದಿನದ ಪ್ರಯತ್ನವೇನಿದ್ದರೂ ಕೊಂಚ ಕಾಲವನ್ನು ಆಂತರಿಕ ಸೌಂದರ್ಯ ಸುಧಾರಣೆಗೂ ನೀಡೋಣ…

   

Leave a Reply