ಆಡದೇ ಮಾಡುವನು ರೂಢಿಯೊಳಗುತ್ತಮನು

ಚಿಂತನ - 0 Comment
Issue Date : 14.07.2015

ಕಾರ್ಯಗಳನ್ನು ಮಾಡುವ ದೃಷ್ಟಿಯಿಂದ ಮೂರು ರೀತಿಯ ಜನರಿದ್ದಾರೆ. ಕೆಲವರು ಪ್ರಚಾರ ಪ್ರಿಯರಲ್ಲವಾದ್ದರಿಂದ ಸ್ವಯಂ ಸ್ಫೂರ್ತಿಯ ಮೂಲಕ ಒಳ್ಳೆಯ ಕೆಲಸವನ್ನೇನೋ ಮಾಡುತ್ತಾರೆ. ಆದರೆ ಆ ಬಗೆಗೆ ಯಾರಲ್ಲೂ ಹೇಳಿಕೊಂಡು ತಿರುಗಾಡುವುದಿಲ್ಲ. ಕೆಲಸ ಮಾಡುವ ಮೊದಲಾಗಲೀ ಅನಂತರವಾಗಲೀ ಅದರ ಕುರಿತು ಎಲ್ಲರೆದುರು ಕೊಚ್ಚಿಕೊಳ್ಳುವುದಿಲ್ಲ; ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸುವುದಿಲ್ಲ. ಸದ್ದುಗದ್ದಲಗಳಿಲ್ಲದೆ, ಗೌಜಿ ಪ್ರಚಾರಗಳಿಲ್ಲದೆ ಅವರು ಕೈಗೆತ್ತಿಕೊಂಡ ಕೆಲಸಗಳು ಪ್ರಾರಂಭಗೊಂಡು ಯಶಸ್ವಿಯಾಗಿ ಮುಗಿದುಹೋಗುತ್ತವೆ.
‘‘ಆಡದೇ ಮಾಡುವನು ರೂಢಿಯೊಳಗುತ್ತಮನು’’ ಎನ್ನುವ ಮುಖಾಂತರ ಸರ್ವಜ್ಞ ಕವಿಯು ಇಂತಹ ಸರಳ ವ್ಯಕ್ತಿಯನ್ನು ಶ್ಲಾಘಿಸುತ್ತಾನೆ. ಏಕೆಂದರೆ ಈ ರೀತಿಯ ಜನರಿಂದ ಸಮಾಜಕ್ಕೆ ಸಾಕಷ್ಟು ಉಪಕಾರವಾಗುತ್ತದೆ. ಯಾವುದೇ ಬಗೆಯ ತೊಂದರೆಯಾಗಲಿ, ಹಾನಿಯಾಗಲಿ ಆಗುವುದಿಲ್ಲ. ಇವರು ಕಾರ್ಯಪ್ರವೃತ್ತರಾಗುವುದು ಸ್ವಾರ್ಥಕ್ಕಾಗಿ ಅಲ್ಲ. ತಾವು ಮಾಡುವ ಕೆಲಸವನ್ನು ಇತರರು ಗಮನಿಸಬೇಕು, ತಮ್ಮನ್ನು ಹಾಡಿಹೊಗಳಬೇಕು ಅಥವಾ ಪ್ರತಿಫಲವನ್ನು ಸಲ್ಲಿಸಬೇಕು ಎಂಬ ಉದ್ದೇಶವೇ ಅವರಲ್ಲಿ ಇರುವುದಿಲ್ಲ. ಪರೋಪಕಾರ ಬುದ್ಧಿ, ಕರ್ತವ್ಯ ಪ್ರಜ್ಞೆ ಮತ್ತು ನಿರ್ವ್ಯಾಜ ಪ್ರೀತಿಗಳಷ್ಟೇ ಇಲ್ಲಿ ಕಂಡುಬರುತ್ತವೆ.
ಇನ್ನು ಕೆಲವರು ಕೆಲಸ ಮಾಡುತ್ತಾರೆ. ಆದರೆ ಇದಕ್ಕಾಗಿ ತಮಗೆ ಹೆಸರು ಬರಬೇಕು ಎಂಬ ಅಪೇಕ್ಷೆ ಇವರಲ್ಲಿ ಬಲವಾಗಿರುತ್ತದೆ. ಹಾಗಾಗಿ ಅವರು ಕೆಲಸವಾಗುವ ಮೊದಲೂ ಅನಂತರವೂ ಇದರ ಕುರಿತು ಅಲ್ಲಿ, ಇಲ್ಲಿ, ಎಲ್ಲೆಂದರಲ್ಲಿ ಪ್ರಚಾರ ಮಾಡುತ್ತಾರೆ. ತಾವೇ ಇತರರಲ್ಲಿ ಹೇಳಿಕೊಂಡು ಬರುವುದಲ್ಲದೆ ತಮ್ಮ ಸ್ನೇಹಿತರು ಮತ್ತು ಏಜೆಂಟರ ಮೂಲಕ ಹೇಳಿಸುತ್ತಾರೆ. ಸ್ವಂತ ಖರ್ಚು ಹಾಕಿ ಅಥವಾ ಅಧಿಕಾರ ಅಂತಸ್ತುಗಳ ಪ್ರಭಾವ ಬೀರಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುತ್ತಾರೆ. ಇವರಿಂದಾಗಿ ಕೆಲವು ಕೆಲಸಗಳಾಗಬಹುದು. ಆದರೆ ಜತೆಗೆ ಇತರರಿಗೆ ಕಿರಿಕಿರಿ, ಉಪದ್ರವಗಳು ಉಂಟಾಗುವುದುಂಟು. ಆದ್ದರಿಂದ ಇಂತಹ ವ್ಯಕ್ತಿಗಳನ್ನು ಸರ್ವಜ್ಞನು ಮಧ್ಯಮ ಗುಂಪಿಗೆ ಸೇರಿಸಿದ್ದಾನೆ.
ಉಳಿದ ಜನರು ಕೇವಲ ವಚನಶೂರರು. ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಲೇ ಇರುತ್ತಾರೆ. ತಾವು ಮಾಡಬಹುದಾದ ಕೆಲಸ ಎಷ್ಟು ಭರ್ಜರಿಯಾಗಿರಬಹುದು ಎನ್ನುವುದನ್ನು ರಂಗುರಂಗಾಗಿ ಬಣ್ಣಿಸುತ್ತಾರೆ. ಕಾರ್ಯಾರಂಭವು ವಿಳಂಬಗೊಂಡಿರುವುದಕ್ಕೆ ಕ್ಷುಲ್ಲಕವಾದ ಕಾರಣಗಳನ್ನು ಕೊಡುತ್ತಾರೆ. ಕೊನೆಗೂ ಇವರು ತಾವು ಹೇಳಿದ ಯಾವುದೇ ಕೆಲಸಗಳಲ್ಲಿ ತೊಡಗುವುದಿಲ್ಲ. ಸ್ವಾಭಾವಿಕವಾಗಿಯೇ ಈ ಮಂದಿ ಅಧಮರ ಗುಂಪಿಗೆ ಸೇರುತ್ತಾರೆ.
ನೀಚರಾದವರು ವಿಘ್ನ ಬರಬಹುದೆಂಬ ಕಾಲ್ಪನಿಕ ಭಯದಿಂದ ಕಾರ್ಯಾರಂಭ ಮಾಡುವುದಕ್ಕೆ ಹಿಂದೇಟು ಹಾಕಿದರೆ; ಮಧ್ಯಮ ಗುಂಪಿನವರು ಕೆಲಸವನ್ನು ಹಿಂದೆ ಮುಂದೆ ಯೋಚಿಸದೆ ತೊಡಗಿ ಎಡರುತೊಡರುಗಳು ಎದುರಾದಾಗ ಅದನ್ನು ಯಾವ ಸಂಕೋಚವೂ ಇಲ್ಲದೆ ಕೈಬಿಡುತ್ತಾರೆ. ಉತ್ತಮರಾದವರು ಮಾತ್ರ ಚೆನ್ನಾಗಿ ಯೋಚಿಸಿ, ಕಾರ್ಯಾರಂಭ ಮಾಡಿ ಎಷ್ಟೇ ತೊಂದರೆಗಳು ಬಂದರೂ ಅದನ್ನು ನಿವಾರಿಸಿಕೊಂಡು ಯಶಸ್ಸಿನ ಗುರಿ ಮುಟ್ಟುತ್ತಾರೆ ಎನ್ನುವ ಸೂಕ್ತಿಯೊಂದು ಸಂಸ್ಕೃತದಲ್ಲಿದೆ.

– ಅರ್ತಿಕಜೆ

   

Leave a Reply