ಆನೆಯ ಸೇಡು

ಬೋಧ ಕಥೆ - 0 Comment
Issue Date : 28.10.2014

ಪ್ರಾಣಿಗಳು ದ್ವೇಷ ಸಾಧಿಸುತ್ತವೆಯೇ? ಹೌದು ಕೆಲವೊಮ್ಮೆ ಅವು ಮನುಷ್ಯರಂತೆ ದ್ವೇಷ ಸಾಧಿಸುತ್ತವೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಹಿಂಸೆಯನ್ನು ಯಾವತ್ತೂ ಅವು ಸಹಿಸಿಕೊಳ್ಳುವುದಿಲ್ಲ. ಅದಕ್ಕೊಂದು ಕತೆ ಹೇಳುತ್ತೇನೆ ಕೇಳಿ.

ಮಕ್ಕಳೆ, ಪ್ರಾಣಿಗಳಲ್ಲೆಲ್ಲಾ ದೊಡ್ಡವರಿಂದ ಚಿಕ್ಕವರವರೆಗೆ ಎಲ್ಲರೂ ಪ್ರೀತಿಸುವ ಪ್ರಾಣಿ ಎಂದರೆ ಆನೆ. ಆನೆಗಳು ಬಲಶಾಲಿಗಳಾಗಿರುತ್ತವೆ. ಯಾರಿಂದಲೂ ಎತ್ತಲಾರದಷ್ಟು ಬಹುಬಾರದ ಹೊರೆಯನ್ನು ಅವು ಎತ್ತಬಲ್ಲವು. ಕಾಡಿನ ಮರಗಳನ್ನು ಎಳೆಯಲು ಮರದ ದಿಮ್ಮಿಗಳನ್ನು ತರಲು ಆನೆಗಳನ್ನು ಬಳಸುತ್ತಾರೆ. ದೊಡ್ಡ ಕಾರ್ಖಾನೆಗಳಿಗೆ ಸರಕು ಸಾಗಿಸಲು ಅವಶ್ಯಕತೆ ಕಂಡು ಬಂದಾಗ ಆನೆಯನ್ನು ಉಪಯೋಗಿಸುತ್ತಾರೆ. ಆನೆಗೆ ದೊಡ್ಡ ಸೊಂಡಿಲು, ಅಗಲವಾದ ಕಿವಿಗಳು, ಪುಟ್ಟ ಮೊಂಡು ಬಾಲ, ಸಣ್ಣ ಕಣ್ಣುಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆನೆಗೆ ತೀಕ್ಷ್ಣ ಬುದ್ಧಿ ಎನ್ನುವವರೂ ಇದ್ದಾರೆ. ಮಂದಬುದ್ಧಿ ಎನ್ನುವವರೂ ಇದ್ದಾರೆ. ಆನೆ ಒಂದು ರೀತಿಯಲ್ಲಿ ಆಕರ್ಷಣೆಯ ವಸ್ತು. ಜೊತೆಗೆ ಅದು ಗಣಪತಿ ದೇವರ ಪ್ರತಿರೂಪ ಎಂದು ನಂಬುವ ಜನರಿದ್ದಾರೆ. ಆನೆಯ ತಲೆಯನ್ನು ಗಣಪನಿಗೆ ತಂದು ಜೋಡಿಸಿದ ಕತೆಯನ್ನು ಎಲ್ಲರೂ ಕೇಳಿರುತ್ತೀರಿ.


ಅದೇನೆ ಇರಲಿ, ಆನೆ ಎಂಬ ಪ್ರಾಣಿ ಎಲ್ಲರಿಗೂ ಇಷ್ಟವಾದ ಪ್ರಾಣಿ. ಒಮ್ಮೆ ಒಂದು ಆನೆ ಏನು ಮಾಡಿತು ಗೊತ್ತೆ. ಉಡುಪಿ ಮಠದಲ್ಲಿ ಜಾತ್ರೆ ನಡೆಯುತ್ತಿತ್ತು. ಜಾತ್ರೆ ಎಂದರೆ ಕೇಳುವುದೇ ಬೇಡ. ಜನರ ನೂಕು ನುಗ್ಗಲು ಇರುತ್ತದೆ. ಆ ನೂಕು ನುಗ್ಗುಲನ್ನು ಭೇದಿಸಿಕೊಂಡು ಒಂದು ಆನೆ ಓಡೋಡಿ ಬರುತ್ತಿರುವುದನ್ನು ಕಂಡ ಜನರು ಅತ್ತಿತ್ತ ಸರಿದು ಜಾಗ ಮಾಡಿಕೊಟ್ಟರು. ಗಜ ಗಾತ್ರ ಎಂದು ಹೇಳುವ ಮಾತನ್ನು ಕೇಳಿದ್ದೀರಲ್ಲವೇ? ಒಂದು ವಸ್ತು ಇರುವುದಕ್ಕಿಂತ ಗಾತ್ರದಲ್ಲಿ ದೊಡ್ಡದಿದ್ದರೆ ಗಜಗಾತ್ರ ಎನ್ನುತ್ತೇವೆ. ಹಾಗೆ ಜಾಗ ಬಿಟ್ಟುಕೊಟ್ಟರೂ ಗಾತ್ರದ ಆನೆಗೆ ಆ ಜಾಗ ಸಾಕಾಗಲಿಲ್ಲ. ಜನರನ್ನು ತಳ್ಳಿಕೊಂಡು ಅದು ಮುಂದುವರೆಯಿತು. ಹೋ…ಎನ್ನುವ ಕೂಗು ಆಕ್ರಂದನ ಎಲ್ಲ ಕಡೆಯಿಂದ ಕೇಳತೊಡಗಿತು. ಅನೆಯ ಕಾಲ್ತುಳಿತಕ್ಕೆ ಅನೇಕರು ಸಿಕ್ಕಿಬಿದ್ದಿದ್ದರು. ಆನೆಗೆ ಮಾತ್ರ ಅದರ ಅರಿವಿಲ್ಲ. ಅದು ಒಂದೇ ಸಮ ಹುಡುಕುತ್ತಿದೆ. ತನ್ನ ಚಿಕ್ಕ ಕಣ್ಣುಗಳಲ್ಲಿ ನೆಟ್ಟ ನೋಟ ಹರಿಸುತ್ತಿದೆ. ಉಹು.. ಅದಕ್ಕೆ ಬೇಕಾದವರು ಸಿಗುವ ಸೂಚನೆ ಕಾಣಿಸಲಿಲ್ಲ. ಆನೆಗೆ ರೇಗಿರಬೇಕು. ಮತ್ತೆ ಅದು ಓಡಲು ಯತ್ನಿಸಿತು. ಜನರ ಗದ್ದಲ ಗಲಾಟೆ ವಿಪರೀತವಿದ್ದುದರಿಂದ ವೇಗವಾಗಿ ಓಡಲು ಅದರಿಂದಾಗಲಿಲ್ಲ. ಇದ್ದಕ್ಕಿದ್ದಂತೆ ಆನೆ ಒಂದು ಕಡೆ ತಟ್ಟನೆ ನಿಂತುಕೊಂಡಿತು. ಅದು ಹುಡುಕುತ್ತಿದ್ದ ವ್ಯಕ್ತಿ ಆ ಗುಂಪಿನೊಳಗೆ ಇದ್ದನು. ಅವನಿನ್ನೂ ಹದಿನೈದು ಇಪ್ಪತ್ತರ ಹುಡುಗ. ಅವನಿಗೆ ಅರ್ಥವಾಗಿದೆ. ತಾನು ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಲು ಆನೆ ಬಂದಿದೆ ಎನ್ನುವುದು. ಆನೆ ತನ್ನನ್ನು ಹುಡುಕುತ್ತಿದೆ ಎಂದು ಅವನಿಗೆ ತಿಳಿದು ಹೋಯ್ತು. ತಾನಿನ್ನೂ ಗುಂಪೊಳಗೆ ಅಡಗಿ ಕುಳಿತುಕೊಂಡರೆ ಆನೆ ಸುಮ್ಮನೆ ಬಿಡುವುದಿಲ್ಲ. ಗುಂಪಿನಿಂದ ಹೊರಗೆ ಹೋಗುವುದು ಒಳ್ಳೆಯದು ಎಂದುಕೊಂಡ. ಅದರಂತೆ ಗುಂಪಿನಿಂದ ಹೊರಗೆ ಬಂದ. ಇದರಿಂದ ಜನರು ಕಾಲ್ತುಳಿತಕ್ಕೆ ಸಿಕ್ಕಿ ಬೀಳುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಆನೆ ಆ ಹುಡುಗನನ್ನು ಗುರುತಿಸಿತು. ಅದರ ನೋಟ ತನ್ನತ್ತ ಹರಿದುದನ್ನು ಹುಡುಗ ನೋಡಿದನು, ಮತ್ತೆ ಆನೆಗೆ ಕೈಮುಗಿದು ಪ್ರಾರ್ಥಿಸಿದನು.
‘ತಿಳಿಯದೆ ತಪ್ಪು ಮಾಡಿದ್ದೇನೆ. ಕ್ಷಮಿಸಿ ಬಿಡು’ ಎಂದು ಹೇಳಿಕೊಂಡನು. ಅವನೇನು ಸಣ್ಣ ತಪ್ಪು ಮಾಡಿದ್ದಾನೆಯೇ ಕ್ಷಮಿ ಸಲು, ಆನೆ ಕ್ಷಮಿಸಲಿಲ್ಲ. ಅವನು ಕೊಟ್ಟ ಹಿಂಸೆ ಸಾಮಾನ್ಯದ್ದಾಗಿದ್ದರೆ ಕ್ಷಮಿಸುತ್ತಿತ್ತೇನೋ? ಅವನು ಕೊಟ್ಟ ಹಿಂಸೆ ಸಾಮಾನ್ಯದ್ದಾಗಿರಲಿಲ್ಲ. ಕಳೆದೆರಡು ವರ್ಷಗಳ ಹಿಂದೆ ಜಾತ್ರೆಗೆ ಆ ಹುಡುಗ ಅಪ್ಪ ಅಮ್ಮನ ಜೊತೆಯಲ್ಲಿ ಬಂದಿದ್ದನು. ಹುಡುಗಾಟ, ಚೇಷ್ಟೆ ಬುದ್ಧಿ, ಮಾವುತನ ಜೊತೆಯಲ್ಲಿ ರಾಜಗಾಂಭೀರ್ಯದಿಂದ ನಡೆದು ಹೋಗುತ್ತಿದ್ದ ಆನೆಗೆ ಬೀದಿಯಲ್ಲಿ ಬಿದ್ದಿದ್ದ ಕಲ್ಲನ್ನು ಹೆಕ್ಕಿ ಒಂದೊಂದಾಗಿ ಬೀಸಿ ಎಸೆದಿದ್ದ. ಕಲ್ಲನ್ನು ಎಸೆಯುತ್ತಿರುವವರು ಯಾರು? ಎಲ್ಲಿಂದ ಕಲ್ಲು ಬಂದು ಬೀಳುತ್ತಿದೆ ಎಂದು ಮಾವುತನಿಗೆ ಗೊತ್ತಾಗಲಿಲ್ಲ. ಅವನು ಸುತ್ತಲೂ ಕಲ್ಲು ಎಸೆಯುವವರು ಯಾರೆಂದು ಹುಡುಕುತ್ತಿದ್ದನು. ಜನಜಂಗುಳಿಯಲ್ಲಿ ಕಲ್ಲು ಎಸೆಯುತ್ತಿರುವ ಹುಡುಗ ಸಿಕ್ಕಿ ಬೀಳಲಿಲ್ಲ. ಅಮ್ಮ ಅವನು ಆನೆಗೆ ಕಲ್ಲು ಎಸೆಯುತ್ತಿರುವುದನ್ನು ನೋಡಿ ಬಿಟ್ಟಳು. ಅಪ್ಪನೂ ನೋಡಿದ. ಇಬ್ಬರೂ ಹುಡುಗನನ್ನು ಗದರಿಕೊಂಡರು. ಆಗ ಜನಜಂಗುಳಿಯ ಮಧ್ಯೆಯೇ ಆನೆ ಆ ಹುಡುಗನನ್ನು ನೋಡಿ ಬಿಟ್ಟಿತು. ಮುಂದೆ ಹೋಗುತ್ತಿದ್ದ ಆನೆ ಹಿಂತಿರುಗಿ ಅವನತ್ತ ಹೆಜ್ಜೆ ಹಾಕುತ್ತಿರಬೇಕಾದರೆ ಮತ್ತೊಂದು ಕಲ್ಲು ನೇರವಾಗಿ ಬಂದು ಅದರ ಕಣ್ಣಿಗೆ ಬಿತ್ತು. ಕಣ್ಣಿಗೆ ಕಲ್ಲು ಬಿದ್ದ ಕಾರಣ, ಆನೆಗೆ ದಿಕ್ಕು ತೋಚಲಿಲ್ಲ. ಹ್ಯಾಗೋ ಮಾವುತ ಅದನ್ನು ಅನೆಗಳಿರುವ ಆಲಯಕ್ಕೆ ಕರೆದುಕೊಂಡು ಹೋದನು. ಆನೆಯ ಕಣ್ಣಿಂದ ರಕ್ತ ಸೋರುತ್ತಿತ್ತು. ಮಾವುತ ಹೆಚ್ಚುಕಮ್ಮಿ ಆರುತಿಂಗಳು ಅದರ ಕಣ್ಣಿಗೆ ಮದ್ದು ಹಚ್ಚಿ ಗುಣಪಡಿಸಿದನು. ಅಷ್ಟರವರೆಗೆ ಆನೆ ಅದೆಷ್ಟು ಹಿಂಸೆ ಅನುವಿಸಿತ್ತೋ ದೇವರೇ ಬಲ್ಲ. ಆಗಿನಿಂದ ಆನೆ ಆ ಹುಡುಗನನ್ನು ಹುಡುಕುತ್ತಿತ್ತು. ಕಳೆದ ವರ್ಷದ ಜಾತ್ರೆಯಲ್ಲಿ ಹುಡುಗ ಕಣ್ಣಿಗೆ ಬಿದ್ದಿರಲಿಲ್ಲ. ಈ ವರ್ಷ ಆ ಹುಡುಗ ಆನೆಯ ಒಂಟಿ ಕಣ್ಣಿಗೆ ಸಿಕ್ಕಿಬಿದ್ದಿದ್ದನು. ಬಿಡುತ್ತದೆಯೇ ಆನೆ. ಅದರ ಕಣ್ಣು ಹೊಟ್ಟಿ ಹೋಗಿತ್ತು. ಆನೆಗೆ ಅದರ ನೆನಪು ಚೆನ್ನಾಗಿದೆ. ಅವನನ್ನು ಕಂಡೊಡನೆ ಆನೆ ತನ್ನ ಸೊಂಡಿಲಿನಿಂದ ಎತ್ತಿ ಎತ್ತಿ ಹಾಕಿತು, ಕುಕ್ಕಿಕುಕ್ಕಿ ಬಿಸುಡಿತು. ಕಾಲಿನಿಂದ ಒದ್ದು ಮುದ್ದೆ ಮಾಡಿತು. ಬಿಡಿಸಲು ಹೊರಟವರನ್ನು ಅಟ್ಟಿಸಿಕೊಂಡು ಹೋಯ್ತು. ಇದನ್ನೆಲ್ಲಾ ನೋಡುತ್ತ ನಿಂತವರಿಗೆ ಎದೆ ಜಲ್ಲೆನ್ನತೊಡಗಿತು. ಎಲ್ಲರೂ ಗಾಬರಿಯಿಂದ ನೋಡುತ್ತಲೇ ನಿಂತಿದ್ದಾರೆ. ಆನೆ ಅವನನ್ನು ಬಿಡುತ್ತಿಲ್ಲ. ಅವನ ಅಪ್ಪ ಅಮ್ಮ ಮುಂದೆ ಬಂದು ಕಣ್ಣೀರಿಟ್ಟು ಬೇಡಿಕೊಂಡರು ಉಹು… ಆನೆಗೆ ಕರುಣೆ ಬರಲೇ ಇಲ್ಲ. ‘ಓ! ಕೃಷ್ಣ ದೇವರೆ ನೀನಾದರು ಬಂದು ಕಾಪಾಡು’ ಎಂದು ಕ್ತಿಯಿಂದ ಕೃಷ್ಣನಿಗೆ ಕೈಮುಗಿದರು ಹೆತ್ತವರು. ಉಹು.. ಕೃಷ್ಣನೂ ಪಾರುಮಾಡಲಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದು ಭಗವಂತನ ಉದ್ದೇಶ ತಾನೆ. ಮತ್ತೆ ಏನೂ ಮಾಡಲು ಸಾಧ್ಯವಾಗದೆ ಕೈಚೆಲ್ಲಿ ಬಿಟ್ಟರು ಹೆತ್ತವರು.
ಆನೆ ಆವೇಶ ಬಂದವರಂತೆ ಆ ಹುಡುಗನ ಮೇಲೆ ಕುಣಿದು ನರ್ತಿಸತೊಡಗಿತು. ಕೊನೆಗೂ ಆನೆ ಎಲ್ಲರೂ ನೋಡ ನೋಡುತ್ತಿದ್ದಂತೆ ಹುಡುಗನನ್ನು ಕೊಂದೇ ಬಿಟ್ಟಿತು. ನಂತರ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಮಾವುತನನ್ನು ಹುಡುಕಿಕೊಂಡು ಹೊರಟು ಹೋಯಿತು.
ಪ್ರಾಣಿ ಹಿಂಸೆ ಮಾಡಿದ್ದಕ್ಕೆ ಆ ಹುಡುಗ ತಕ್ಕ ಶಿಕ್ಷೆಯನ್ನು ಅನುವಿಸಬೇಕಾಯಿತು.

– ಪ್ರೇಮಾ ಭಟ್

   

Leave a Reply