ಆನೆ ಮತ್ತು ಹಣ್ಣು ಮಾರುವವಳು

ಕಿರಿಯರ ಲೋಕ ; ಲೇಖನಗಳು - 0 Comment
Issue Date : 14.5.2016

-ಶಾರದಾ ಶಾಮಣ್ಣ

ಒಂದೂರಿನಲ್ಲಿ ಒಬ್ಬಳು ಹಣ್ಣು ಮಾರುವವಳಿದ್ದಳು. ಅವಳು ಬಾಳೆಹಣ್ಣು, ಕಿತ್ತಳೆಹಣ್ಣು, ಮಾವಿನಹಣ್ಣು, ನೇರಳೆಹಣ್ಣು ಇನ್ನೂ ಮುಂತಾದ ಹಣ್ಣುಗಳನ್ನು ಪೇಟೆಯ ಬೀದಿಯ ಬದಿಯಲ್ಲಿಟ್ಟುಕೊಂಡು ಮಾರುತ್ತಿದ್ದಳು. ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಳು.
ಪ್ರತಿದಿನ ಅದೇ ದಾರಿಯಲ್ಲಿ ಒಂದು ಆನೆ ಓಡಾಡಿಕೊಂಡಿರುತ್ತಿದ್ದಿತು. ಅದು ಯಾರಿಗೂ ಏನು ಮಾಡುತ್ತಿರಲಿಲ್ಲ. ಈ ಹಣ್ಣು ಮಾರುವವಳಿಗೆ ಒಂದು ಮಗುವು ಇದ್ದಿತು. ಆ ಮಗುವಿಗೆ ಆನೆಯನ್ನು ನೋಡಲು ತುಂಬಾ ಆಸೆ. ಅದರ ಬೀಸಣಿಗೆಯಂತಹ ಕಿವಿ, ಪುಟ್ಟ ಪುಟ್ಟ ಕಣ್ಣು, ಕಂಬದಂತಹ ಕಾಲುಗಳು, ಉದ್ದವಾದ ಸೊಂಡಿಲು, ಕುಚ್ಚಿನಂತಹ ಬಾಲ ಇವುಗಳನ್ನು ನೋಡುವುದೆಂದರೆ ತುಂಬಾ ಆಸೆ. ತಾಯಿಯ ತೊಡೆಯ ಮೇಲೆ ಕುಳಿತು ಆನೆಯು ಬರುವುದನ್ನೇ ಕಾಯುತ್ತಲಿರುತ್ತಲಿತ್ತು. ಬಂದ ಮೇಲೆ ಆನೆಯ ಮೈಯ್ಯನ್ನೆಲ್ಲಾ ಧೈರ್ಯವಾಗಿ ಮುಟ್ಟುತ್ತಿದ್ದಿತು. ಆನೆಗೂ ಮಗುವಿನೊಂದಿಗೆ ಆಡುವುದೆಂದರೆ ತುಂಬಾ ಸಂತೋಷ. ಇವರಿಬ್ಬರ ಆಟವನ್ನು ದಾರಿಯಲ್ಲಿ ಓಡಾಡುವವರೆಲ್ಲಾ ನೋಡುತ್ತಾ ನಿಲ್ಲುತ್ತಿದ್ದರು.
ಆ ಹಣ್ಣು ಮಾರುವವಳು ಪ್ರತಿನಿತ್ಯವೂ ತಾನು ಮಾರುತ್ತಿದ್ದ ಹಣ್ಣುಗಳಲ್ಲಿ ಕೆಲವು ಬಾಳೆಯ ಹಣ್ಣನ್ನೋ, ಮಾವಿನ ಹಣ್ಣನ್ನೋ, ಕಿತ್ತಳೆಹಣ್ಣನ್ನೋ, ದ್ರಾಕ್ಷಿಹಣ್ಣನ್ನೋ ಯಾವುದಾದರೂ ಹಣ್ಣನ್ನು ತೆಗೆದು ಆನೆಗೆ ತಿನ್ನಲು ಕೊಡುತ್ತಿದ್ದಳು. ಆ ಮಗುವೂ ಸಹ ತನ್ನ ಪುಟ್ಟ ಪುಟ್ಟ ಕೈಗಳಿಂದ ಆನೆಗೆ ಹಣ್ಣು ಕೊಡುತ್ತಿದ್ದಿತು. ಆನೆಯೂ ಸಹ ಕೊಟ್ಟ ಹಣ್ಣನ್ನು ಸಂತೋಷದಿಂದ ತಿಂದು ಆ ತಾಯಿ ಮತ್ತು ಮಗುವಿನ ತಲೆಯ ಮೇಲೆ ಸೊಂಡಿಲನ್ನಿಟ್ಟು ಆಶೀರ್ವಾದ ಮಾಡಿ ಹೋಗುತ್ತಿದ್ದಿತು. ಹೀಗೆ ಆ ಮೂವರಲ್ಲೂ ಸ್ನೇಹಭಾವ ಬೆಳೆದು ಹೋಯಿತು. ಇದು ತುಂಬಾ ದಿನದಿಂದ ನಡೆದುಕೊಂಡು ಬರುತ್ತಿದ್ದಿತು.
ಹೀಗೆ ಆನೆ ಒಂದು ದಿನ ಸಾಯಂಕಾಲ ನಡೆದು ಬರುತ್ತಿದ್ದಾಗ, ಊರಿನ ತುಂಟ ಹುಡುಗನೊಬ್ಬ ಆನೆಯ ಸೊಂಡಿಲಿಗೆ ಬಲವಾದ ಕಡ್ಡಿಯಿಂದ ಚುಚ್ಚಿಬಿಟ್ಟನು. ಆನೆಗೆ ಬಹಳ ಕೋಪ ಬಂದಿತು, ನೋವನ್ನು ತಾಳಲಾರದೆ ಬೀದಿಯಲ್ಲೆಲ್ಲಾ ಘೀಳಿಡುತ್ತಾ ಸಿಕ್ಕಿದಲ್ಲೆಲ್ಲಾ ಅಡ್ಡಾದಿಡ್ಡಿ ಓಡಲಾರಂಭಿಸಿತು. ಎದುರಿಗೆ ಬಂದವರನ್ನೆಲ್ಲಾ ತುಳಿದುಹಾಕುತ್ತಿದ್ದಿತು.
ಜನಗಳೆಲ್ಲಾ ಗಾಬರಿಯಿಂದ ದಿಕ್ಕಾಪಾಲಾಗಿ ಓಡತೊಡಗಿದರು. ಜನರು ಏನೂ ಮಾಡಲು ತೋರದೆ ದಿಗ್ಭ್ರಾಂತರಾದರು. ಆಗ ಹಣ್ಣು ಮಾರುವವಳಿಗೆ ಏನೂ ತೋಚದಂತಾಯಿತು. ಅವಳು ಧೈರ್ಯದಿಂದ ತನ್ನ ಮಗುವನ್ನು ದಾರಿಯಲ್ಲಿ ಅಡ್ಡ ಮಲಗಿಸಿದಳು.
ಇನ್ನೇನು ಮಗುವನ್ನು ತುಳಿದೇ ಬಿಡುತ್ತದೆ ಎಂದು ಭಯದಿಂದ ಜನರೆಲ್ಲರೂ ನೋಡುತ್ತಿದ್ದರು. ಸಿಟ್ಟಿನಿಂದ ಧಾವಿಸಿ ಬಂದ ಆನೆಗೆ ತನಗೆ ಯಾವಾಗಲೂ ಹಣ್ಣು ಕೊಡುವ ಮಗು ನಗುತ್ತಾ ಮಲಗಿರುವುದನ್ನು ಕಂಡು ಆನೆಯ ಕೋಪವೆಲ್ಲವೂ ಇಳಿದು ಹೋಯಿತು. ಕೋಪ ಶಾಂತವಾಯಿತು. ಹಣ್ಣು ಮಾರುವವಳು ಕೈಗಳಲ್ಲಿ ಹಣ್ಣುಗಳನ್ನು ಹಿಡಿದುಕೊಂಡು ಬಂದು ಆನೆಗೆ ಕೊಟ್ಟಳು. ಮಗುವನ್ನು ಎತ್ತಿಕೊಂಡು ಅದರ ಕೈಯಲ್ಲೂ ಹಣ್ಣು ಕೊಡಿಸಿದಳು.
ಜನಗಳೆಲ್ಲರೂ ಹಣ್ಣು ಮಾರುವವಳ ಸಾಹಸವನ್ನು ಮೆಚ್ಚಿದರು. ಆಕೆ ಊರಿನಲ್ಲಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಳು.
ನೀತಿ : 1. ಪ್ರಾಣಿಗಳನ್ನು ಪ್ರೀತಿಸಬೇಕು.
2. ಸಮಯಕ್ಕೆ ತಕ್ಕಂತೆ ಧೈರ್ಯವನ್ನು ಪ್ರದರ್ಶಿಸಬೇಕು.
3. ತುಂಟ ಹುಡುಗರನ್ನು ಶಿಕ್ಷಿಸಬೇಕು.

   

Leave a Reply