ಆರತಿ ಬೇಡ, ಆಚರಣೆ ಮಾಡೋಣ!

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 08.03.2016

ಫೆ.18ರಂದು ಶಿವಾಜಿ ಮಹಾರಾಜರ, ಆಂಗ್ಲ ದಿನಾಂಕದಂತೆ ಜಯಂತಿ. ಜಯಂತಿಯ ಈ ದಿನಾಂಕವನ್ನು ಸರ್ಕಾರವು ನಿಶ್ಚಿತಗೊಳಿಸಿದ್ದು, ಆ ದಿನ ರಜೆ ಘೋಷಿಸಲಾಗಿದೆ. ಇದು ಸರ್ಕಾರಿ ಶಿವಜಯಂತಿಯಾಗಿದ್ದು, ಜನತೆಯ ಶಿವಜಯಂತಿಯು ತಿಥಿಯ ಪ್ರಕಾರ ಇನ್ನೂ ಒಂದೆರಡು ತಿಂಗಳ ಬಳಿಕ ಬಂದೀತು. ಆದರೂ ಒಬ್ಬ ಶ್ರೇಷ್ಠ ಪುರುಷನನ್ನು, ಮಹಾಪುರುಷನನ್ನು, ಯುಗಪುರುಷನನ್ನು ಸ್ಮರಿಸುವ ದಿನವಿದು.
ಇಂತಹ ಸ್ಮರಣೆಯನ್ನು ಎರಡು ರೀತಿಯಲ್ಲಿ ಮಾಡಬಹುದು. ಮೊದಲ ರೀತಿಯಂತೆ, ಶ್ರೇಷ್ಠ ಪುರುಷನನ್ನು ಅವನಿಗೆ ಆರತಿಯೆತ್ತುವ ಮೂಲಕ ಮಾಡುವುದು. ಆರತಿಯನ್ನು ಹಾಡಿ ಮಾಡುವುದೆಂದರೆ, ಶಿವಾಜಿ ಮಹಾರಾಜರು ಅದೆಷ್ಟು ಶೇಷ್ಠರಾಗಿದ್ದರು, ಎಂತಹ ಸಹಿಷ್ಣುವಾಗಿದ್ದರು, ಯಾವ ರೀತಿ ಜಾತ್ಯತೀತರಾಗಿದ್ದರು, ಅವರ ರಾಜ್ಯವ್ಯವಹಾರ ಎಷ್ಟು ಉತ್ತಮವಾಗಿತ್ತು, ಅವರು ಎಂತಹ ಮಾತೃಭಕ್ತರಾಗಿದ್ದರು, ಎಂತಹ ಮಹಾನ್ ನಾಯಕರಾಗಿದ್ದರು ಇತ್ಯಾದಿ ವಿಷಯಗಳನ್ನು ಹೇಳುತ್ತಿರುವುದು. ಇನ್ನು ಎರಡನೆ ರೀತಿಯೆಂದರೆ, ಶಿವಾಜಿ ಮಹಾರಾಜರ ಜೀವನವು, ಎಂದರೆ ಅವರ ಜೀವನಕಾರ್ಯ ಮತ್ತು ವಿಚಾರಗಳು ಇಂದಿನ ಕಾಲಕ್ಕೆ ಒಂದಷ್ಟು ಉಪಯುಕ್ತವಾಗಿವೆಯೇ ? ಎಂದು ಆಲೋಚಿಸುವುದು. ಮೊದಲ ರೀತಿಯ ಸ್ತವನವು ಬಹು ಸುಲಭವೇ. ಶಿವಾಜಿ ಮಹಾರಾಜರ ಚರಿತ್ರೆ ಓದಿದೆವೆಂದರೆ ಅವರ ಶ್ರೇಷ್ಠತೆಯ ಅನೇಕ ಕಥೆಗಳನ್ನು ಹೇಳಬಹುದು, ಅಲ್ಲದೆ ಅವುಗಳಲ್ಲಿ ಬಹುಪಾಲು ಕಥೆಗಳು ಜನಜನಿತವಾಗಿವೆ. ಆರತಿಯೆತ್ತುವ ಕಾರ್ಯವು ಬಹು ಸುಲಭವಾಗಿರುತ್ತದೆ. ಕಾರಣ, ಒಮ್ಮೆ ಆರತಿಯೆತ್ತಿದೆವೆಂದರೆ, ಆ ಮಹಾಪುರುಷನ ಬಗೆಗಿನ ಕರ್ತವ್ಯ ಮುಗಿಯುತ್ತದೆ ಹಾಗೂ ಮುಂದೆ ನಾವು ನಮ್ಮ ವಿಚಾರಗಳಂತೆ, ನಮ್ಮ ಪದ್ಧತಿಯಂತೆ ವರ್ತಿಸಲು ಮುಕ್ತರಾಗುವೆವು. ಎರಡನೆ ರೀತಿಯಲ್ಲಿ ಹೀಗೆ ಮಾಡಲು ಬರುತ್ತಿಲ್ಲ. ಅಲ್ಲದೆ ಇಂದು ನಾವು ಶಿವಾಜಿಯ ಆದರ್ಶದಂತೆ ಪ್ರತ್ಯಕ್ಷ ಜೀವಿಸುವ ಬಗೆ ಹೇಗೆಂದು ಯೋಚಿಸಬೇಕಾಗುತ್ತದೆ.
ಇಂದು ದೇಶದ ಕೇಂದ್ರಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವಿದೆ, ಅಲ್ಲದೆ ಅನೇಕ ರಾಜ್ಯಗಳಲ್ಲಿಯೂ ಇದೇ ಪಕ್ಷದ ಸರ್ಕಾರವಿದೆ. ಸಂಘದ ವಿಚಾರಧಾರೆಯಿಂದ ಭಾರತೀಯ ಜನತಾ ಪಕ್ಷ ಜನ್ಮತಳೆದಿದೆ. ಸಂಘ ಸಂಸ್ಥಾಪಕರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಹೇಳುತ್ತಿದ್ದರು, ‘‘ ಸಂಘ ಯಾವ ವ್ಯಕ್ತಿಯನ್ನೂ ಆದರ್ಶವಾಗಿ ಇಟ್ಟುಕೊಳ್ಳದಿದ್ದರೂ, ವ್ಯಕ್ತಿಯೆಂದು ಆದರ್ಶವನ್ನೇ ಕಣ್ಣಮುಂದೆ ತರಬೇಕಿದ್ದರೆ ಶಿವಾಜಿ ಮಹಾರಾಜರನ್ನು ಸ್ಮರಿಸಿ.’’ ಸಂಘದಲ್ಲಿ ಆರು ಉತ್ಸವಗಳನ್ನು ಅಚರಿಸಲಾಗುತ್ತದೆ. ಅವುಗಳಲ್ಲಿ ಹಿಂದೂ ಸಾಮ್ರಾಜ್ಯ ದಿನ ಉತ್ಸವವು ಶಿವರಾಜ್ಯಾಭಿಷೇಕ ದಿನದ ಉತ್ಸವವಾಗಿದೆ. ಅಲ್ಲದೆ ಅದು ಒಬ್ಬ ವ್ಯಕ್ತಿಯ ಕಾರ್ಯದೊಂದಿಗೆ ಸಂಬಂಧಿಸಿದೆ. ಹೀಗೆ ಸಂಘದಲ್ಲಿ ಛತ್ರಪತಿ ಶಿವಾಜಿಗೆ ಬಹು ಉಚ್ಚ ಸ್ಥಾನವಿದೆ. ಡಾ. ಹೆಡಗೇವಾರರಿಗೆ ಶುಷ್ಕ ತಾತ್ವಿಕ ಚರ್ಚೆಯ ಬಗ್ಗೆ ನಂಬಿಕೆಯಿರಲಿಲ್ಲ. ಆಚರಣೆಗೆ ತರಲು ಶಕ್ಯವಿಲ್ಲದಂತಹ ತತ್ವಗಳು ನಮಗೇನೂ ಉಪಯೋಗವಿಲ್ಲ, ಅಲ್ಲದೆ ಇಟ್ಟುಕೊಂಡಿರುವ ಆದರ್ಶಗಳಂತೆ ನಾವೂ ಆಗಲು ಮತ್ತು ನಡೆದುಕೊಳ್ಳಲು ಪ್ರಯತ್ನಿಸಬೇಕು, ಎಂಬ ಆಗ್ರಹ ಅವರದಾಗಿತ್ತು.
ಹೀಗಾಗಿ ಈಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲೂ ನಮ್ಮ ಆಡಳಿತವಿರುವಾಗ, ಎಂದರೆ ಶಿವಾಜಿ ಮಹಾರಾಜರ ಆದರ್ಶಗಳನ್ನು ಪಾಲಿಸುವ ಆಡಳಿತವಿರುವಾಗ, ಪ್ರತ್ಯಕ್ಷ ಶಿವಾಜಿಯಂತೆ ಜೀವಿಸಲು ನಮಗೆ ಸಾಧ್ಯವಾಗಬೇಕು. ಎಂದರೆ ನಮ್ಮ ರಾಜ್ಯವ್ಯವಹಾರದಲ್ಲಿ, ವಿದೇಶಾಂಗ ವ್ಯವಹಾರದಲ್ಲಿ, ರಕ್ಷಣಾ ವ್ಯವಹಾರದಲ್ಲಿ ಶಿವಾಜಿ ಮಹಾರಾಜರ ಧೋರಣೆಗಳ ದರ್ಶನವಾಗಬೇಕು. ಶಿವಾಜಿ ಮಹಾರಾಜರ ರಾಜ್ಯವ್ಯವಹಾರದ ಮೊದಲ ವೈಶಿಷ್ಟ್ಯವೆಂದರೆ ಅದು ನ್ಯಾಯವನ್ನು ಅವಲಂಬಿಸಿತ್ತು. ಅವರು ಯಾರಿಗೂ, ಎಂತಹದೇ ಲಾಂಗೂಲಚಾಲನ ಮಾಡಲಿಲ್ಲ ಅಥವಾ ಯಾರನ್ನೂ ತಲೆಯ ಮೇಲೆ ಕೂರಿಸಿಕೊಳ್ಳಲಿಲ್ಲ. ಜಾತೀಯ ಸಮೀಕರಣದ ಲೆಕ್ಕಾಚಾರ ಮಾಡಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಜ್ಯದಲ್ಲಿ ಯಾರಿಗೂ ಸ್ವೇಚ್ಛಾಚಾರಕ್ಕೆ ಅವಕಾಶ ನೀಡಲಿಲ್ಲ. ಧಾರ್ಮಿಕ ಸ್ವಾತಂತ್ರ್ಯವೆಂದರೆ ಮತಾಂತರದ ಸ್ವಾತಂತ್ರ್ಯವಾಗದಂತೆ ಅವರು ಕಟ್ಟುನಿಟ್ಟಾಗಿ ನಿಗಾ ವಹಿಸಿದರು. ಅವರು ಗೋ-ಬ್ರಾಹ್ಮಣ ರಕ್ಷಣೆಯ ಪ್ರತಿಜ್ಞೆ ಗೈದರು, ಆದರೆ ಅದೇ ವೇಳೆಗೆ ಒಬ್ಬ ಬ್ರಾಹ್ಮಣ ಸರ್ಕಾರಿ ನೌಕರನಿಗೆ ‘ಬ್ರಾಹ್ಮಣನೆಂದು ಮುಲಾಜು ಯಾರಿಗಿದೆ’ ಎಂದು ಗಡಸಾಗಿ ಗದರಿಸಿದರು. ಅಫ್ಜಲ್‌ಖಾನನ ವಧೆಯ ಸಂದರ್ಭದಲ್ಲಿ ಆತನ ಬ್ರಾಹ್ಮಣ ವಕೀಲನು ಖಡ್ಗ ಹಿರಿದು ಶಿವಾಜಿ ಮಹಾರಾಜರ ಕಡೆ ಧಾವಿಸಿ ಬಂದ. ಮಹಾರಾಜರು ಅವನಿಗೆ ಹೇಳಿದರು, ‘‘ಬ್ರಾಹ್ಮಣನ ಮೇಲೆ ಶಸ್ತ್ರವೆತ್ತಬಾರದೆಂದು ನಮಗೆ ಆದೇಶವಿದೆ,’’ ಆದರೂ ಆತ ಕೇಳಲಿಲ್ಲ. ಆಗ ಶಿವಾಜಿ ಮಹಾರಾಜರು ಅವನನ್ನೂ ಕೊಂದರು. ಊರಿನ ಪಾಟೀಲ, ತೂಕದ ಆಸಾಮಿಯೆಂದು ಅವನಿಗೆ ಕ್ಷಮೆ ನೀಡದೆ, ಆತ ಶೀಲಭಂಗ ಮಾಡಿದನೆಂದು ಅವನ ಕೈ-ಕಾಲು ಕತ್ತರಿಸಿದರು. ಅಲ್ಲದೆ ದ್ರೋಹ ಮಾಡಿದ್ದಕ್ಕೆ ಖಂಡೋಜಿ ಖೋಪಡೆಗೂ ತಕ್ಕ ಶಾಸ್ತಿ ಮಾಡಿದರು. ಮರಾಠಾ ಸಮಾಜ ಸಿಟ್ಟಾದೀತು, ಬ್ರಾಹ್ಮಣರು ಸಿಟ್ಟಾಗುವರು, ಹೀಗೆಂದು ಛತ್ರಪತಿ ಶಿವಾಜಿ ಮಹಾರಾಜರು ಜಾತೀಯ ವಿಚಾರ ಮಾಡಲಿಲ್ಲ. ನ್ಯಾಯ ಎಲ್ಲರಿಗೂ ಒಂದೇ. ದೇಶ ಮತ್ತು ನೀತಿಯೆದುರು ಯಾರೂ ದೊಡ್ಡವರಲ್ಲ, ಯಾರೇ ಅಪರಾಧ ಮಾಡಿದಲ್ಲಿ ಅವನಿಗೆ ಶಿಕ್ಷೆಯಾಗಲೇಬೇಕು, ಈ ಬಗ್ಗೆ ದಾಕ್ಷಿಣ್ಯ ಬೇಡ.
ಶಿವಾಜಿ ಮಹಾರಾಜರು ಎಲ್ಲ ಸಂಘರ್ಷಗಳನ್ನೂ ಮುಖ್ಯವಾಗಿ ಮುಸ್ಲಿಂ ರಾಜಸತ್ತೆಯ ವಿರುದ್ಧ ಮಾಡಿದರು. ಈ ಸಂಘರ್ಷವನ್ನು ಅವರು ಪೂರ್ಣವಾಗಿ ರಾಜಕೀಯವಾಗಿಟ್ಟರು. ಅದಕ್ಕೆ ಧಾರ್ಮಿಕ ಸ್ವರೂಪ ಬರಲು ಬಿಡಲಿಲ್ಲ. ಮುಸ್ಲಿಂ ರಾಜಸತ್ತೆಯ ವಿರುದ್ಧ ಅವರು ಸೆಣಸಿದರು, ಆದರೆ ಇಸ್ಲಾಮನ್ನು ಗೌರವಿಸಿದರು. ಇಂದಿಗೂ ನಾವು ಪಾಕಿಸ್ತಾನದಂತಹ ಮುಸ್ಲಿಂ ರಾಜಸತ್ತೆಯ ವಿರುದ್ಧ ಸೆಣಸಬೇಕಾಗುತ್ತಿದೆ. ಈ ರಾಜಸತ್ತೆಗೆ ಮಿತ್ರರು ಮುಸ್ಲಿಂ ಅರಬ್ ದೇಶಗಳು ಮತ್ತು ಅಫ್ಘಾನಿಸ್ತಾನ. ಪಾಕಿಸ್ತಾನ ಯುದ್ಧ ಮಾಡುವಾಗ ಇಸ್ಲಾಮಿನ ಹೆಸರಿನಲ್ಲಿ ಹೋರಾಡುತ್ತದೆ. ನಾವು ಪಾಕಿಸ್ತಾನದೊಂದಿಗೆ ಯುದ್ಧ ಮಾಡುವಾಗ ಇಸ್ಲಾಂವಿರುದ್ಧ ಎಂಬ ನಿಲುವು ತಳೆಯಲು ಸಾಧ್ಯವಿಲ್ಲ. ಇಲ್ಲಿ ಶಿವಾಜಿ ಮಹಾರಾಜರ ಧೋರಣೆಯನ್ನು ಅನುಸರಿಸಬೇಕು. ಶಿವಾಜಿ ಮಹಾರಾಜರು ಆಗಿನ ಮುಸ್ಲಿಂ ರಾಜಸತ್ತೆಗಳಿಗೆ ತಮ್ಮ ವಿರುದ್ಧ ಒಂದಾಗಲು ಬಿಡಲಿಲ್ಲ. ಬದಲಾಗಿ ಅವರು ಬಹು ಚಾಣಾಕ್ಷತೆಯಿಂದ ದಿಲ್ಲಿಯ ಮೊಗಲ್‌ಶಾಹಿಯನ್ನು ಆದಿಲ್‌ಶಾಹಿಯ ವಿರುದ್ಧ ಎತ್ತಿಕಟ್ಟಿದರು. ದಕ್ಷಿಣದ ರಾಜಸತ್ತೆಯು ದಕ್ಷಿಣದ ಮುಸಲ್ಮಾನರ ವಶದಲ್ಲೇ ಇರಬೇಕೆಂದು ದಕ್ಷಿಣದಲ್ಲಿ ಪ್ರಚಾರ ಮಾಡಿದರು. ಅಲ್ಲಿ ಪರಕೀಯ ಪಠಾಣರ ಕೆಲಸವೇನಿಲ್ಲ.
ಶಿವಾಜಿ ಮಹಾರಾಜರ ವಿದೇಶಾಂಗ ಧೋರಣೆಯ ಈ ಸೂತ್ರವನ್ನು ಪಾಕಿಸ್ತಾನದೊಂದಿಗೆ ಸಂಘರ್ಷದಲ್ಲಿ ನಾವು ಅನುಸರಿಸಬೇಕು. ಪಾಕಿಸ್ತಾನವು ಭಯೋತ್ಪಾದಕ ದೇಶ. ಹಾಗೆಂದೇ ಅದನ್ನು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಏಕಾಕಿಗೊಳಿಸಲು ಸಾಧ್ಯವಾಗಬೇಕು. ಈ ಕಾರ್ಯವನ್ನು ವಿಶ್ವಸಂಸ್ಥೆಯು ಮಾಡಬಲ್ಲದು. ವಿಶ್ವಸಂಸ್ಥೆಯು ಈ ಕಾರ್ಯ ಮಾಡಿದಲ್ಲಿ ಇತರ ಮುಸ್ಲಿಂ ದೇಶಗಳು ಪಾಕಿಸ್ತಾನದಿಂದ ಮಾರು ದೂರ ಉಳಿಯುವವು. ಇತರ ಮುಸ್ಲಿಂ ದೇಶಗಳಲ್ಲೂ ಪ್ರಚಾರ ಮಾಡಿ ಆಯಾ ರಾಜಸತ್ತೆಗಳಿಗೆ ಪಾಕಿಸ್ತಾನಿ ಭಯೋತ್ಪಾದನೆಯ ಅಪಾಯ ಹೇಗಿದೆಯೆಂದು ಮನಗಾಣಿಸಲು ನಮಗೆ ಸಾಧ್ಯವಾಗಬೇಕು. ಮಧ್ಯ ಏಶ್ಯಾದ ಮುಸ್ಲಿಂ ದೇಶಗಳು ಹಾಗೂ ಪಾಕಿಸ್ತಾನ ನಡುವೆ ವಿದ್ವೇಷ ಮತ್ತು ಅವಿಶ್ವಾಸ ಮೂಡಿಸುವ ಶಿವನೀತಿ ನಮ್ಮದಿರಬೇಕು.
ಮುಸ್ಲಿಂ ರಾಜಸತ್ತೆಯ ಅಸಂತುಷ್ಟ ಗುಂಪುಗಳನ್ನು ಶಿವಾಜಿ ಮಹಾರಾಜರು ಪ್ರೋತ್ಸಾಹಿಸಿದರು. ರಾಜಾ ಛತ್ರಸಾಲನಿಗೆ ಮೊಗಲರ ವಿರುದ್ಧ ಬಂಡಾಯವೇಳಲು ಪ್ರೇರಣೆ ನೀಡಿದರು. ಹಾಗೆಯೇ ಮೊಗಲರಲ್ಲಿ ಕೆಲವು ಮುಸಲ್ಮಾನ ಸರದಾರರಿಗೆ ಹಣದ ಲಂಚ ನೀಡಿ ಆಯಾ ರಾಜಸತ್ತೆಯ ವಿರುದ್ಧ ದಂಗೆಯೇಳಲು ಪ್ರಚೋದಿಸಿದರು. ರಾಜ್ಯದ ರಕ್ಷಣೆಯು ಎರಡು ರೀತಿಯಲ್ಲಿರುತ್ತದೆ. ಒಂದು ಆಂತರಿಕ ರಕ್ಷಣೆ, ಇನ್ನೊಂದು ಬಾಹ್ಯ ರಕ್ಷಣೆ. ಆಂತರಿಕ ರಕ್ಷಣೆಯನ್ನು ಶಿಥಿಲಗೊಳಿಸಲು ಸಾಧ್ಯವಾದರೆ ಬಾಹ್ಯ ರಕ್ಷಣೆ ಛಿದ್ರಗೊಂಡೀತು. ಪಾಕಿಸ್ತಾನ ಛಿದ್ರಗೊಳ್ಳಬೇಕಿದ್ದರೆ ಅಲ್ಲಿಯ ಸಿಂಧಿ, ಬಲುಚೀ ಮತ್ತು ಪಖ್ಥುನೀ ಮುಸಲ್ಮಾನರನ್ನು ರಾಜ್ಯಕರ್ತ ಪಂಜಾಬಿ ಮುಸಲ್ಮಾನರ ವಿರುದ್ಧ ದಂಗೆಯೆಬ್ಬಿಸಲು ನಮಗೆ ಸಾಧ್ಯವಾಗಬೇಕು. ಬಲುಚೀ ಮತ್ತು ಸಿಂಧೀ ಮುಸಲ್ಮಾನರಲ್ಲಿ ಭಾರೀ ಅಸಂತೋಷವಿದೆ. ಅಲ್ಲಿ ಸಿಂಧೂ ದೇಶದ ಚಳವಳಿ ನಡೆಯುತ್ತಿದೆ. ಸ್ವತಂತ್ರ ಬಲುಚಿಸ್ತಾನದ ಚಳವಳಿ ಅಲ್ಲಿ ನಡೆಯುತ್ತಿದೆ. ಇವೆಲ್ಲ ಚಳವಳಿಗಳನ್ನು ಶಿವನೀತಿ ಅನುಸರಿಸಿ ಬಲಗೊಳಿಸಲು ನಮಗೆ ಸಾಧ್ಯವಾಗಬೇಕು.
ಹೀಗೆ ಮಾಡುತ್ತಿರುವಾಗ ಒಂದು ಸಂಗತಿ ಗಮನಿಸಬೇಕು. ಅದೆಂದರೆ ಈ ಧೋರಣೆಯನ್ನು ಪಾಕಿಸ್ತಾನವು ಭಾರತದ ವಿರುದ್ಧವೂ ಅನುಸರಿಸಬಹುದು. ಹಾಗೆಂದೇ ನಮ್ಮ ಆಂತರಿಕ ರಕ್ಷಣೆ ಬಲಿಷ್ಠವಾಗಿರುವಂತೆ ಪ್ರಯತ್ನಿಸಬೇಕು. ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪ್ರತಿಯೊಂದು ಜಾತಿಯನ್ನೂ ಸ್ವರಾಜ್ಯದ ವ್ಯಾಪಕ ಪ್ರಯತ್ನಗಳಲ್ಲಿ ತೊಡಗಿಸಿಕೊಂಡರು. ಸ್ಪೃಶ್ಯ-ಅಸ್ಪೃಶ್ಯ ಭೇದವನ್ನು ಆಚರಿಸಲಿಲ್ಲ. ಅಥವಾ ತಮ್ಮದೇ ಜಾತಿಯ ವ್ಯಕ್ತಿಗಳನ್ನು ಮುಂದೆ ತರಲಿಲ್ಲ. ಗುಣವಂತಿಕೆ, ಅರ್ಹತೆ, ಕಾರ್ಯದಕ್ಷತೆ, ಸ್ವದೇಶನಿಷ್ಠೆ ಈ ಗುಣಗಳಿಗೆ ಅವರು ಆದ್ಯತೆ ನೀಡಿದರು. ಮಹಾರಾಜರ ಕಾಲಕ್ಕಿಂತಲೂ ಇಂದಿನ ಪರಿಸ್ಥಿತಿಯು ಮತ್ತಷ್ಟು ಹೆಚ್ಚಿನ ಸವಾಲಿನದ್ದಾಗಿದೆ. ವಿವಿಧ ಭಾಷೆಗಳು, ಪಂಥಗಳು, ರಾಜ್ಯಗಳು, ಇವೆಲ್ಲ ಸೇರಿ ನಮ್ಮ ಭಾರತ ದೇಶವಾಗುತ್ತದೆ. ಇವರೆಲ್ಲರನ್ನೂ ಒಂದುಗೂಡಿಸುವ ಸೂತ್ರವೇ ಬಂಧುತ್ವ. ಮಹಾರಾಜರು ಸ್ವರಾಜ್ಯ ಸ್ಥಾಪನೆ ಮತ್ತು ಸ್ವಧರ್ಮ ರಕ್ಷಣೆಯ ಪ್ರೇರಣೆಯಿಂದ ಬಂಧುತ್ವದ ಭಾವನೆಯನ್ನು ಮೂಡಿಸಿದರು. ಇಂದು ನಾವು ಜಾಗತಿಕ ಮಹಾಪ್ರಭುತ್ವ ಭಾರತ, ಅಭಿವೃದ್ಧಿಶೀಲ ಭಾರತ ಹಾಗೂ ಜಗದ್ಗುರು ಭಾರತ ಈ ಭವ್ಯ ಸ್ವಪ್ನದ ಆಧಾರದ ಮೇಲೆ ಈ ಭಾವನೆಯನ್ನು ಮೂಡಿಸಬಲ್ಲೆವು. ಎಪಿಜೆ ಅಬ್ದುಲ್ ಕಲಾಮ್ ಅವರ ಸಂಪೂರ್ಣ ಜೀವನವು ಇಂದಿನ ಕಾಲದ ನುಡಿಯುವ-ನಡೆಯುವ ಆದರ್ಶವಾಗಿದೆ.
ಹಿಂದೂ ರಾಜ್ಯ ಹೇಗಿರಬೇಕೆಂದು ತೋರಿಸುವ ಶಿವಾಜಿ ಮಹಾರಾಜರ ರಾಜ್ಯವು ಆದರ್ಶ ರಾಜ್ಯವಾಗಿತ್ತು. ಆದರ್ಶ ಹಿಂದೂ ರಾಜನು ಧಾರ್ಮಿಕ ಅತಿರೇಕಿಯೇನಲ್ಲ. ಪರಮೇಶ್ವರನು ಒಬ್ಬನೇ ಆಗಿದ್ದು ಅವನನ್ನು ಉಪಾಸನೆ ಮಾಡುವ ಅನೇಕ ಮಾರ್ಗಗಳಿದ್ದು, ಇದರ ಮೇಲೆ ಅವನಿಗೆ ವಿಶ್ವಾಸವಿದೆ. ಆದರ್ಶ ಹಿಂದೂ ರಾಜನು ತನ್ನ ಉಪಾಸನೆಯ ಧರ್ಮವನ್ನು ಎಂದೂ ಪ್ರಜೆಗಳ ಮೇಲೆ ಹೇರುವುದಿಲ್ಲ. ಆತ ಪ್ರತಿಯೊಬ್ಬನಿಗೂ ಉಪಾಸನೆಯ ಸ್ವಾತಂತ್ರ್ಯ ನೀಡುತ್ತಾನೆ. ಇಂದು ಅನೇಕ ಧೂರ್ತ ವ್ಯಕ್ತಿಗಳು ಶಿವಾಜಿ ಮಹಾರಾಜರಿಗೆ ಜಾತ್ಯತೀತರೆಂಬ ಲೇಬಲ್ ಹಚ್ಚುತ್ತಾರೆ. ಶಿವಾಜಿ ಇಂದಿನ ಪರಿಭಾಷೆಯಲ್ಲಿ ಜಾತ್ಯತೀತ ರಾಜರಾಗಿರಲಿಲ್ಲ. ಅವರು ಸ್ವತಃ ಬಹು ಧಾರ್ಮಿಕರಾಗಿದ್ದರು. ಮಾತೆ ಭವಾನಿಯ ಮೇಲೆ ಅವರಿಗೆ ಗಾಢ ಶ್ರದ್ಧೆಯಿತ್ತು, ನಮ್ಮ ಧಾರ್ಮಿಕ ಸ್ಥಳಗಳ ರಕ್ಷಣೆಯನ್ನು ಅವರು ಪವಿತ್ರ ಧಾರ್ಮಿಕ ಕರ್ತವ್ಯವೆಂದು ಭಾವಿಸಿದ್ದರು. ಇಂದಿನ ಜಾತ್ಯತೀತ ಪರಿಭಾಷೆಯು ಹಿಂದೂ ಧರ್ಮ, ಹಿಂದೂ ರೀತಿ-ರೂಢಿಗಳು, ಹಿಂದೂ ಆದರ್ಶ ಇವುಗಳ ಮೇಲೆ ಘಾತವೆಸಗುವಂತಹದ್ದು. ಶಿವಾಜಿ ಮಹಾರಾಜರು ಅದಕ್ಕೆ ವಿರುದ್ಧ ವರ್ತನೆಯವರಾಗಿದ್ದರು. ಇಂದು ಕೇಂದ್ರದಲ್ಲೂ ಅನೇಕ ರಾಜ್ಯಗಳಲ್ಲೂ ಹಿಂದೂ ವಿಚಾರಗಳನ್ನು ಮಂಡಿಸುವವರ ರಾಜ್ಯಗಳಿವೆ. ಛತ್ರಪತಿ ಶಿವಾಜಿ ಮಹಾರಾಜರಂತೆ ಅವರು ವಿವಿಧ ಉಪಾಸನಾಪಂಥಗಳಿಗೆ ಸ್ವಾತಂತ್ರ್ಯವನ್ನು ಮಾನ್ಯಮಾಡಿದ್ದಾರೆ ಹಾಗೂ ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದಾರೆ. ಅದನ್ನು ನಮ್ಮ ಸಂವಿಧಾನವೇ ಮಾನ್ಯಮಾಡಿದೆ. ಇದಲ್ಲದೆ ನಮ್ಮ ಹಿಂದೂ ಜೀವನಾದರ್ಶಗಳು, ಹಿಂದೂ ಜೀವನ ಪರಂಪರೆ, ಹಿಂದೂ ಜೀವನಮೌಲ್ಯಗಳನ್ನು ವರ್ಧಿಸಬೇಕಾಗಿದೆ. ಈ ಮೌಲ್ಯಗಳಲ್ಲಿ ಸ್ತ್ರೀ ಸನ್ಮಾನ, ಭ್ರಷ್ಟಾಚಾರಮುಕ್ತ ಜೀವನ, ಕರ್ತವ್ಯನಿಷ್ಠೆ, ಹಿರಿಯರ ಬಗ್ಗೆ ಆದರ, ಮಾತಾಪಿತೃಗಳಿಗೆ ಗೌರವ, ಕುಟುಂಬವ್ಯವಸ್ಥೆಯ ಸಂರಕ್ಷಣೆ ಹಾಗೂ ನಿಸರ್ಗದೊಂದಿಗೆ ಹೊಂದಾಣಿಕೆ ಇಂತಹ ಅನೇಕ ವಿಷಯಗಳಿವೆ. ಪ್ರತ್ಯಕ್ಷ ವ್ಯವಹಾರದಲ್ಲಿ ಅವು ಕಾಣಬೇಕು. ಶಿವಾಜಿ ಮಹಾರಾಜರ ಜಯಂತಿಯನ್ನು ಕೇವಲ ಹಾರತುರಾಯಿ ಹಾಕುವುದಕ್ಕೇ ಸೀಮಿತಗೊಳಿಸಬಾರದು, ಅವರ ಆದರ್ಶಗಳಂತೆ ನಡೆಯುವ ಪ್ರೇರಣೆಯನ್ನು ನಾವೆಲ್ಲರೂ ಪಡೆಯಬೇಕು.

   

Leave a Reply