ಆರು ರುಚಿಗಳು ಬೇರೆ; ಸಾರವೊಂದೇ

ಬೋಧ ಕಥೆ - 0 Comment
Issue Date : 10.12.2015

ಸಿಹಿ, ಹುಳಿ, ಉಪ್ಪು, ಖಾರ, ಒಗರು ಮತ್ತು ಕಹಿ-ಇವನ್ನು ಷಡ್ರಸಗಳೆಂದು (ಆರು ರುಚಿಗಳೆಂದು) ಕರೆಯುತ್ತಾರೆ. ಯಾವನೇ ವ್ಯಕ್ತಿಯು ಉಣ್ಣುವ ಆಹಾರದಲ್ಲಿ ಈ ರಸಗಳೆಲ್ಲ ಸೇರಿದಾಗ ಅದರ ರುಚಿಯೂ ಹೆಚ್ಚುತ್ತದೆ. ಉಣ್ಣುವವನ ಖುಷಿಯೂ ಅಧಿಕಗೊಳ್ಳುತ್ತದೆ. ಆದರೆ ಉಣ್ಣುವಾಗ, ತಿನ್ನುವಾಗ ಇವುಗಳನ್ನು ಬೇರೆ ಬೇರೆಯಾಗಿ ಗುರುತಿಸುವುದಿಲ್ಲ. ಊಟ, ತಿಂಡಿ, ಫಲಾಹಾರ, ಉಪಾಹಾರ ಇತ್ಯಾದಿಗಳೆಲ್ಲ ಒಂದೇ. ನಿನಗೆ ತಿಂಡಿ ಆಯಿತೇ? ಊಟ ಮುಗಿಯಿತೇ? ಎಂದು ಕೇಳುತ್ತಾರಲ್ಲದೆ ನೀನು ಹುಳಿ ತಿಂದೆಯೇ, ಕಹಿ ಸೇವಿಸಿದೆಯೇ ಎಂದು ಯಾರೂ ಕೇಳುವುದಿಲ್ಲ. ಊಟೋಪಚಾರಗಳಲ್ಲಿ ವೈವಿಧ್ಯಕ್ಕಾಗಿ, ಶರೀರ ಪೋಷಣೆಗಾಗಿ ಬೇರೆ ಬೇರೆ ರಸ-ರುಚಿಗಳನ್ನು ಸೇರಿಸುತ್ತಾರೆ. ಇದಕ್ಕೆಂದೇ ಮನುಷ್ಯ ಪಾಕಶಾಸ್ತ್ರವನ್ನು ಬೆಳೆಸಿದ್ದಾನೆ, ಅಡುಗೆಯವರನ್ನು ಸಾಕುತ್ತಾನೆ. ಈ ಹಿನ್ನೆಲೆಯಲ್ಲಿ ವೇಮನ ಕವಿ ‘‘ಆರು ರುಚಿಗಳು ಬೇರೆ ಸಾರವೊಂದೇ’’ ಎಂದು ವರ್ಣಿಸಿದ್ದಾನೆ.
 ಭಾರತದಲ್ಲಿನ, ನಮ್ಮ ವಿಸ್ತಾರವಾದ ಸಮಾಜದಲ್ಲಿನ, ವಿವಿಧತೆ-ಅನೇಕತೆಗಳ ನಡುವೆ ಏಕತೆಯನ್ನು ಸಾರುವುದು ಕವಿಯ ಉದ್ದೇಶ. ಸಾಧು-ಸಜ್ಜನರ ನಿಷ್ಠೆಗಳು, ದಾರಿಗಳು, ಚಿಂತನೆಗಳು, ತತ್ವಗಳು, ಅವರು ಅನುಸರಿಸುವ, ಉಪಯೋಗಿಸುವ ವಿಧಿ-ವಿಧಾನಗಳು ಬೇರೆ ಬೇರೆ ಇರಬಹುದು. ಆದರೆ ಅವರೆಲ್ಲರೂ ಕೊನೆಯಲ್ಲಿ ಕಂಡುಕೊಳ್ಳುವ ಮತ್ತು ಸಾರುವ ಸತ್ಯ ಒಂದೇ ಆಗಿದೆ.
 ಸನಾತನ ಧರ್ಮದಲ್ಲಿ ಷಡ್‌ದರ್ಶನ ಎಂಬ ಹೆಸರಿನ ಆರು ದರ್ಶನಗಳಿವೆ. ಇವನ್ನು ಸಾಂಖ್ಯ, ಯೋಗ, ನ್ಯಾಯ, ವೇದಾಂತ, ಮೀಮಾಂಸೆ, ವೈಶೇಷಿಕ ಎಂದು ಕರೆಯುತ್ತಾರೆ. ಇವನ್ನು ಬೇರೆ ಬೇರೆ ಋಷಿಗಳು ರೂಪಿಸಿದ್ದಾರೆ. ಹಾಗೆಯೇ ಸೌರ, ಶೈವ, ವೈಷ್ಣವ, ಗಾಣಪತ್ಯ,ಶಾಕ್ತ ಮತ್ತು ಕೌಮಾರ ಎಂಬ ಷಣ್ಮತಗಳಿವೆ. ಜೈನ, ಬೌದ್ಧ ಮುಂತಾದ ಹಲವಾರು ಪಂಥಗಳಿವೆ. ಆಸ್ತಿಕರೂ ಇದ್ದಾರೆ, ನಾಸ್ತಿಕರೂ ಇದ್ದಾರೆ. ಆದರೆ ಎಲ್ಲ ಮತ ಪಂಥಗಳ ಏಕಮೇವ ಉದ್ದೇಶ ಶಾಶ್ವತವಾದ ಆನಂದವನ್ನು ಪಡೆಯುವುದು ಅಥವಾ ಬದುಕಿನ ಜಂಜಾಟ, ದುಃಖಗಳಿಂದ ಬಿಡುಗಡೆಯನ್ನು ಹೊಂದುವುದು.
 ಇದೇ ರೀತಿ ಪ್ರಪಂಚದ ನಾನಾ ಖಂಡಗಳಲ್ಲಿ, ದೇಶ-ಪ್ರದೇಶಗಳಲ್ಲಿ ಪರಮ ಸಾಧನೆ ಮಾಡಿದ ಋಷಿ-ಮುನಿಗಳು, ದ್ರಷ್ಟಾರರು, ಸಾಧಕರು, ಮಹಾತ್ಮರು ಅನೇಕರಿದ್ದಾರೆ. ಆದರೆ ಅವರೆಲ್ಲರೂ ಕೊನೆಗೆ ಸೇರಿಕೊಳ್ಳುವ ಪರಮಾತ್ಮನು ಒಬ್ಬನೇ, ಪರತತ್ವ ಒಂದೇ, ಅದನ್ನು ಜನ ಬೇರೆ ಬೇರೆ ಹೆಸರುಗಳಿಂದ ಕರೆಯಬಹುದು ಎಂದು ವೇಮನ ಹೇಳುತ್ತಾನೆ.
 ಕನ್ನಡದಲ್ಲಿ ನಾವು ಯಾವುದನ್ನು ನೀರು ಎಂದು ಕರೆಯುತ್ತೇವೆಯೋ ಅದನ್ನು ಸಂಸ್ಕೃತದಲ್ಲಿ ಜಲ ಎಂದು ಕರೆಯುತ್ತಾರೆ. ಇಂಗ್ಲಿಷಿನಲ್ಲಿ ವಾಟರ್ ಎನ್ನುತ್ತಾರೆ. ಹಿಂದಿಯಲ್ಲಿ ಪಾನಿ ಎನ್ನುವರು. ಕೆಲವರು ಉದಕ ಎನ್ನಬಹುದು, ಸಣ್ಣ ಮಕ್ಕಳು ಜೀಜಿ ಎನ್ನಬಹುದು. ಆದರೆ ಕೊನೆಯಲ್ಲಿ ನೋಡಿದರೆ ವಸ್ತು ಒಂದೇ. ಎಲ್ಲ ನದಿಗಳು ಸೇರಿ ಸಮುದ್ರವಾದಂತೆ, ಅನೇಕ ಮಕರಂದಗಳು ಜೊತೆಗೊಂಡು ಜೇನಾದಂತೆ, ಸಹಸ್ರ ಸಹಸ್ರ ಕಾಳುಗಳು ರಾಶಿಗೊಂಡು ಕಣಜವಾದಂತೆ ನಾನಾ ರುಚಿಗಳು ಪಕ್ವಗೊಂಡು ಸಾರವು ಏಕೀಕೃತಗೊಳ್ಳುತ್ತದೆ. ಒಮ್ಮೆ ಒಂದಾದ ಬಳಿಕ ಅದನ್ನು ಭಿನ್ನಭಿನ್ನವಾಗಿ ಪ್ರತ್ಯೇಕಿಸುವುದಕ್ಕೆ ಆಗುವುದಿಲ್ಲ. ಇದೇ ಕವಿಯ ಆಶಯ.

   

Leave a Reply