ಆರೆಸ್ಸೆಸ್ ಮತ್ತು ಬೌದ್ಧಿಕ ಸ್ಪಷ್ಟತೆ

ಲೇಖನಗಳು - 0 Comment
Issue Date :

-ನಾರಾಯಣ ಶೇವಿರೆ

ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ಹಿಂದೂ ರಾಷ್ಟ್ರೀಯ ಸಂಘಟನೆ. ಹಲವು ದಶಕಗಳಿಂದ ಆಗಾಗ ಹಿಂದೂ ಮತ್ತು ರಾಷ್ಟ್ರ ಎಂಬೆರಡು ಶಬ್ದಗಳು ಆಕ್ಷೇಪ ಮತ್ತು ಅಪಹಾಸ್ಯಕ್ಕೊಳಗಾಗುತ್ತಲೇ ಬಂದಿವೆ. ಹಿಂದೂ ಎಂಬ ಶಬ್ದ ಹೊರಗಿನಿಂದ ಬಂದುದು,ಪ್ರಾಚೀನವಲ್ಲ ಮತ್ತು ಸಂಕುಚಿತ ಎಂಬುದು ಅದರ ಕುರಿತಾದ ಮುಖ್ಯ ಆಕ್ಷೇಪ. ಸುಮಾರು 3700 ವರ್ಷಗಳಷ್ಟು ಹಿಂದೆ ಅರಬ್ ಕವಿ ಅಕ ತಬ್ ಬಿನ್ ತುರ್ಫಾ ತನ್ನ ಹಲವು ಕವಿತೆಗಳಲ್ಲಿ ಭಾರತದ ಬಗೆಗೆ ಉಲ್ಲೇಖ ಮಾಡುವಾಗಲೆಲ್ಲ ಅತ್ಯಂತ ಗೌರವದಿಂದ ಹಾಗೂ ಶ್ರದ್ಧೆಯಿಂದ ’ಹಿಂದ’ ಎಂಬ ಶಬ್ದವನ್ನು ಬಳಸಿದ್ದಾನೆ. ಹಾಗೆಯೇ ಮಹಮ್ಮದ್ ಪೈಗಂಬರನ ಚಿಕ್ಕಪ್ಪನಾಗಿದ್ದ ಉಮ್ರ ಬಿನ್ ಹಶ್ಶ್ಯಾಂ ಕೂಡಾ  ’ಹಿಂದ’ ಎಂಬ ಶಬ್ದವನ್ನೇ ಹಿಂದೂಸ್ಥಾನವನ್ನು ಅತ್ಯಂತ ಶ್ರದ್ಧೆಯಿಂದ ಕಾಣುತ್ತ ಉಲ್ಲೇಖಿಸಿದ್ದಾನೆ. ಅಷ್ಟು ಪ್ರಾಚೀನದಲ್ಲಿ ಅವರಿಗೆ ಈ ಹಿಂದ ಎಂಬ ಶಬ್ದವು ಎಲ್ಲಿಂದ ಸಿಕ್ಕಿತು ಎಂದರೆ ಅವರದೇ ಶಬ್ದಕೋಶಗಳಿಂದಲ್ಲ ಅಥವಾ ಇನ್ನಾವುದೇ ಹೊರದೇಶಗಳಿಂದಲ್ಲ, ಬದಲಾಗಿ ಜಗತ್ತಿನ ಅತಿ ಪ್ರಾಚೀನ ಸಾಹಿತ್ಯವೆನ್ನಲಾದ ವೇದಗಳಿಂದ. ವೇದಗಳಲ್ಲಿ ಸಿಂಧು ಎಂಬ ಶಬ್ದ  ಪದೇಪದೇ ಬರುತ್ತದಷ್ಟೆ. ಮತ್ತು ಹಿಂದು ಎಂಬ ಶಬ್ದ ಸಿಂಧುವಿನಿಂದಲೇ ಬಂದಿದೆ ಎಂದು  ಆಕ್ಷೇಪಿಸುವವರೂ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ’ಸ’ಕಾರ ಉಚ್ಚರಿಸಲಾಸಾಧ್ಯವಾಗಿ ಅರಬ್ಬರದೋ ಗ್ರೀಕರದೋ ಬಾಯಲ್ಲಿ ಅದು ’ಹ’ಕಾರವಾಯಿತು ಎಂಬ ಆಕ್ಷೇಪಕರ ವಾದವೇ ಆಕ್ಷೇಪಾರ್ಹವಾದುದು. ಯಾಕೆಂದರೆ ಯಾರಿಗೇ ಆದರೂ ಉಚ್ಚರಿಸಲು ‘ಸ’ಕಾರಕ್ಕಿಂತ ‘ಹ’ಕಾರವೇ ಕಷ್ಟಕರವಾದುದು. ಆಗ ಸಿಂಧು ಎನ್ನುವುದು ಸಂಸ್ಕೃತ ಮತ್ತು ಹಿಂದು ಎನ್ನುವುದು ಪ್ರಾಕೃತ ಎಂಬ ವಿವರಣೆಗೆ  ಪುಷ್ಟಿ ಸಿಗುತ್ತದೆ. ಇನ್ನು ಹಿಂದು ಸಮಾಜದೊಳಗೆ ಹತ್ತುಹಲವು ಜಾತಿ, ಮತ, ಪಂಥಗಳಿವೆಯೇ  ಹೊರತು ಹಿಂದು ಎನ್ನುವ ಒಂದು ಜಾತಿಯಾಗಲೀ ಮತವಾಗಲೀ ಪಂಥವಾಗಲೀ ಇಲ್ಲದಿರುವುದರಿಂದ ಅದು ಸಂಕುಚಿತ ಎಂಬ ವಾದವೂ ಬಿದ್ದುಹೋಗುತ್ತದೆ.

ಕವಿ ರವೀಂದ್ರರು ಈಗಿನ ಎಡವಾದೀ ಬುದ್ಧಿಜೀವಿಗಳು ರಾಷ್ಟ್ರವನ್ನು  ದ್ವೇಷಿಸುವಂತೆ ಅಲ್ಲ, ಬದಲಾಗಿ ವಿಶ್ವಮಾನವತೆಯ ನೆಲೆಯಲ್ಲಿ ರಾಷ್ಟೀಯತೆಯನ್ನು ಒಂದು ತೊಡಕೆಂದು ವಿರೋಧಿಸಿದ್ದರು. ಯಾರೂ ರಾಷ್ಟ್ರೀಯನಾಗದೆ ಅಂತಾರಾಷ್ಟ್ರೀಯನಾಗಲಾರ ಎಂದು ಅದಕ್ಕೆ ಗಾಂಧೀಜಿಯವರು ನೀಡಿದ ಉತ್ತರ ಪ್ರಸಿದ್ಧವೇ ಇದೆ. ಎಡವಾದವು ರಾಷ್ಟ್ರವನ್ನು ಬಂಡವಾಳಶಾಹಿ ಹಿನ್ನೆಲೆಯಲ್ಲಿಟ್ಟು  ನೋಡುತ್ತದೆ. ಅದು ಅಲ್ಲಿಯ ಮಟ್ಟಿಗೆ ಸರಿಯೇ ಇರಬಹುದು. ಭಾರತದ ಮಟ್ಟಿಗೆ ಹಾಗೆ ನೋಡುವುದು ತಪ್ಪಾಗುತ್ತದೆ. ವಿಶ್ವಕುಟುಂಬದ (ವಿಶ್ವ ಒಳಿತು)ಲಕ್ಷ್ಯವನ್ನಿಟ್ಟುಕೊಂಡು  ಋಷಿಗಳು ತಪಸ್ಸಿನ ಮೂಲಕ ಕಂಡುಕೊಂಡ ರಾಷ್ಟ್ರವಿದೆನ್ನುವ ಅರ್ಥದ ಸಾಲುಗಳು ಅಥರ್ವವೇದದಲ್ಲಿವೆ.

 ಹೀಗೆ ಹಿಂದು ಎಂಬ ಶಬ್ದದ ಕುರಿತ ಆಕ್ಷೇಪವಾಗಲೀ ರಾಷ್ಟ್ರ ಎಂಬ ಕಲ್ಪನೆಯ ಕುರಿತ ಆಕ್ಷೇಪವಾಗಲೀ ಗಹನವಾದುದೆಂದು ಅನ್ನಿಸುವುದಿಲ್ಲ.

 ಇವೆರಡನ್ನು ಬಿಟ್ಟು ಆರೆಸ್ಸೆಸ್ ಇಲ್ಲ. ರಾಷ್ಟ್ರೀಯತೆ ಅದರ ವಿಚಾರ. ಆ ವಿಚಾರವನ್ನು ಗುರುತಿಸುವ ಶಬ್ದ ಹಿಂದು. ಹಿಂದು ಎನ್ನುವ ಶಬ್ದ ಹೇಗೆ ಹೊರಗಿನಿಂದ ಬಂತೆಂಬ ಆಕ್ಷೇಪವಿದೆಯೋ ಅದಕ್ಕೆ ವಿಲೋಮವಾಗಿ ಆರೆಸ್ಸೆಸ್ ಎಂಬ ಶಬ್ದ ನಿಜಕ್ಕೂ ಆಂಗ್ಲಶೈಲಿಯಲ್ಲಿ ಹೊರಗಿಂದ ಬಂತು. ಸಂಘ ಅದನ್ನು  ತಾನಲ್ಲ ಎಂದು ಎಲ್ಲೂ ಎಂದೂ ನಿರಾಕರಣೆ ಮಾಡಿಲ್ಲ. ಆಕ್ಷೇಪವೋ ತಪ್ಪಾದ ಹೆಸರಿಸುವಿಕೆಯೋ ದುಷ್ಟ ಧ್ವನಿಯಲ್ಲಿ ನಡೆದಾಗ ಅದಕ್ಕುತ್ತರಿಸುವುದೋ ನಿರಾಕರಿಸುವುದೋ ಮಾಡಬೇಕಾಗುತ್ತದೆ. ಹಾಗಿಲ್ಲವಾದಾಗ ಸುಮ್ಮನಾಗುವುದೋ ಸ್ವೀಕರಿಸುವುದೋ ಸರ್ವಸಮಾವೇಶಕ ಸ್ವಭಾವಕ್ಕೆ ಸಹಜವಾದುದು.

 ಈಗ ಎದುರಾಗುತ್ತಿರುವ ಒಂದು ಆಕ್ಷೇಪವೆಂದರೆ ಆರೆಸ್ಸೆಸ್‌ಗೆ ಬೌದ್ಧಿಕ ಸ್ಪಷ್ಟತೆ ಇಲ್ಲವೆಂಬುದು. ಇದು ಸಾಕಷ್ಟು  ಬಾರಿ ಬೇರೆಬೇರೆ ರೀತಿಯಲ್ಲಿ ಎದುರಾಗಿರುವ ಆಕ್ಷೇಪವೇ. ತಾಜ್ ಮಹಲನ್ನು ತೇಜೋಮಹಲ್ ಆಗಿತ್ತೆಂಬ ಪಿ.ಎನ್.ಓಕರ ವಾದವನ್ನು ಆರೆಸ್ಸೆಸ್ ಯಾವ ಸಾಕ್ಷ್ಯವೂ ಇಲ್ಲದೆ ಉಲ್ಲೇಖಿಸುತ್ತಿದೆ ಎಂಬುದು ಈ ಆಕ್ಷೇಪಕ್ಕೆ ಆಧಾರವಾಗಿ ನೀಡುತ್ತಿರುವ ಉದಾಹರಣೆ. ತರ್ಕದಿಂದ ಎಲ್ಲವನ್ನು ನೋಡಲಾಗದು. ಆದರೂ ಈಗ ಎದುರಾಗಿರುವ ತರ್ಕವನ್ನು  ತರ್ಕದಿಂದಲೇ ನೋಡುವುದಾದರೆ; ಹೇಗೆ ತಾಜ್ ಮಹಲ್ ತೇಜೋಮಹಲು ಆಗಿತ್ತೆಂಬುದಕ್ಕೆ ಸಾಕ್ಷ್ಯ ಇಲ್ಲವೋ ಹಾಗೇ ಅದನ್ನು ಷಹಜಾನನೇ ಕಟ್ಟಿಸಿದನೆಂಬುದಕ್ಕೂ ಸಾಕ್ಷ್ಯ ಇಲ್ಲ. ಅದೇ ವೇಳೆ ಸಾಕ್ಷ್ಯಾಧಾರಗಳ ಮೂಲಕ ನಡೆಯುವ ಇತಿಹಾಸ ಅಧ್ಯಯನದ ಈ ಆಧುನಿಕ ಶೈಲಿಯಲ್ಲಿಯೇ ಆರ್ಯರು ಹೊರಗಿಂದ ಬಂದವರಲ್ಲ, ಇಲ್ಲಿಯವರೇ ಎಂಬುದನ್ನು ನಟವರ್ ಝಾ ಮತ್ತು ನವರತ್ನ ರಾಜಾರಾಮ್ ಅವರು ಸಾಬೀತುಪಡಿಸಿದ್ದಾರೆ. ಅಲ್ಲದೆ ಆರ್ಯರು ಹೊರಗಿಂದ ಬಂದರೆಂಬುದಕ್ಕೆ ಯಾವ ಸಾಕ್ಷ್ಯವೂ ಇಲ್ಲ. ಆದರೂ ಸಾಕ್ಷ್ಯಾಧಾರಿತ ಆಧುನಿಕ ಇತಿಹಾಸದ ಶೈಲಿಯಲ್ಲಿಯೇ ಇಂದಿಗೂ ಶಾಲಾ ಪಠ್ಯಪುಸ್ತಕಗಳಲ್ಲಿ ಆರ್ಯರು ಹೊರಗಿಂದ ಬಂದರೆಂಬುದನ್ನು ಬರೆಯಲಾಗಿದೆ. ಈ ಆಧುನಿಕವು ಅಧ್ಯಯನಕ್ಕೆ ತನ್ನದೇ ಆದ ಶಿಸ್ತನ್ನು ರೂಪಿಸಿಕೊಂಡು ಅದನ್ನು ತಾನೇ ಮುರಿಯುತ್ತಿರುವುದಕ್ಕೆ ಈ ಆರ್ಯವಾದ ಒಂದು ಜ್ವಲಂತ ಉದಾಹರಣೆಯೆನ್ನಲಡ್ಡಿಯಿಲ್ಲ. ಸಂಘದಲ್ಲಿ ಬೌದ್ಧಿಕ ಅಸ್ಪಷ್ಟತೆಯನ್ನು ಆಧುನಿಕ ಶಿಸ್ತಿನಲ್ಲಿ ನೋಡುತ್ತ ನಿರ್ಣಯಿಸುವುದು ಒಂದು ತಾರ್ಕಿಕ ವ್ಯಾಯಾಮವಾದೀತೇ ಹೊರತು ನಿಜದ ಶೋಧವಾಗಲಾರದು.

 ಏಕೆಂದು ಅದನ್ನು ಸ್ವಲ್ಪ ಸಂಕ್ಷಿಪ್ತದಲ್ಲಿ ನೋಡುವುದಾದರೆ; ನೋಡಿ, ಬೌದ್ಧಿಕ ಸ್ಪಷ್ಟತೆ ಬೇಕೆನ್ನುವುದು ಮನುಷ್ಯ ತನ್ನನ್ನು ಬುದ್ಧಿಜೀವಿ ಎಂದು ತಿಳಿದುಕೊಂಡಿರುವುದರಿಂದ ಬಂದಿರುವ ಒತ್ತಾಯ. ಬುದ್ಧಿಯ ಕಾರಣಕ್ಕಾಗಿ ಇತರೆಲ್ಲ ಪ್ರಾಣಿಗಳಿಗಿಂತ ಮನುಷ್ಯ ತನ್ನನ್ನು ಶ್ರೇಷ್ಠನೆಂದು ತಿಳಿದಿದ್ದಾನೆ. ಇದು ಪಶ್ಚಿಮದ ಗ್ರಹಿಕೆ. ಇಲ್ಲೊಂದು ಶ್ರೇಷ್ಠತೆಯ ಅಹಂಕಾರವಿದೆ, ಮತ್ತು ಈ ಅಹಂಕಾರ ಪ್ರಕಟವಾಗಿರುವುದು ಪ್ರಾಣಿಗಳ ಎದುರು.  ಇದು ಅಹಂಕಾರವಾಗಿ ರೂಪುಗೊಂಡಿರುವುದಕ್ಕೂ ಅಹಂಕಾರದ ವಾಸಸ್ಥಾನವು ಬುದ್ಧಿಯೇ ಆಗಿರುವುದಕ್ಕೂ ಸಂಬಂಧ ಇದೆ. ನಾನು ಯೋಚಿಸುತ್ತೇನೆ, ಹಾಗಾಗಿ ನಾನು ಇದ್ದೇನೆ ಎಂಬಿತ್ಯಾದಿ ವಾದಗಳಿಗೆಲ್ಲ  ಮನುಷ್ಯ ತನ್ನನ್ನು ಬುದ್ಧಿಯ ಜತೆ ಸಮೀಕರಿಸಿಕೊಂಡದ್ದೇ ಆಧಾರ. ತಾನೆಂದರೆ ಬುದ್ಧಿ ಎಂದ ಮೇಲೆ ತನಗದರಲ್ಲಿ ಸ್ಪಷ್ಟತೆಯೂ ಬೇಕೆನಿಸುವುದು ಸಹಜ.

 ಪ್ರತಿಯೊಬ್ಬನೂ ಭಿನ್ನ ಎನ್ನುವುದು ಪ್ರಕೃತಿಸತ್ಯ. ಅದು ದೈಹಿಕವಾಗಿಯೂ ಹೌದು, ಮಾನಸಿಕವಾಗಿಯೂ ಹೌದು, ಬೌದ್ಧಿಕವಾಗಿಯೂ ಹೌದು. ಈ ಭಿನ್ನತೆಯನ್ನು ಅನುಭವಿಸಿಕೊಂಡೇ ಸಂಘ ಸಾಮೂಹಿಕ ನಿರ್ಣಯಗಳನ್ನು ಸ್ವೀಕರಿಸುತ್ತದೆ. ಅಂದರೆ ಸಾಮೂಹಿಕ ನಿರ್ಣಯದಲ್ಲಿ ಎಲ್ಲರ ಅಭಿಪ್ರಾಯಗಳಿಗೂ ಎಡೆಯಿದೆ.ಸಾಮಾಜಿಕವಾಗಿ ಎಲ್ಲರನ್ನು ಒಳಗೊಳ್ಳುವ,ವೈಚಾರಿಕವಾಗಿ  ತನ್ನದೇ ನಿರ್ದಿಷ್ಟ ನಿಲುವನ್ನು ಹೊಂದಿದ್ದು ಯಾರನ್ನೂ ಬಿಟ್ಟುಕೊಡದ ಸಂಘಕ್ಕೆ ಒಂದು ಸಾಮೂಹಿಕ ಹೊಣೆಗಾರಿಕೆ ಇದೆಯಾಗಿ ಪ್ರಪಂಚದ ಆಗುಹೋಗುಗಳಿಗೆಲ್ಲ  ಪ್ರತಿಕ್ರಿಯಿಸದು. ರಾಷ್ಟ್ರಕ್ಕೆ ಪ್ರತಿಕೂಲವಲ್ಲದ ಯಾವ ವಿಚಾರವನ್ನೂ ವಿರೋಧಿಸದು. ಇದು ವೈವಿಧ್ಯವನ್ನೊಪ್ಪುವ ಸರ್ವಸಮಾವೇಶಕ ಸ್ವಭಾವಕ್ಕೆ ತಕ್ಕುದಾದ ದಾರಿ. ಇಷ್ಟಿದ್ದೂ  ಸಂಘವು ಮತ್ತು ಅದು ಪ್ರತಿನಿಧಿಸುತ್ತಿರುವ ಹಿಂದೂ ಸಮಾಜವು ಎದುರಿಸಬೇಕಾಗಿ ಬಂದ ಅನ್ಯಾಯ – ಅಧರ್ಮಗಳ ಹೊರೆಯ ಹಿನ್ನೆಲೆಯಲ್ಲಿ ಕೆಲವು ಹಿತೈಷಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಉದ್ವಿಗ್ನಕರವಾಗಿ  ವಾದ ಹರಿಯಬಿಡುವುದಿದೆ. ಇದು ಸಂಘಕ್ಕೆ ಖಂಡಿತಾ ಒಪ್ಪಿತವಾದುದಲ್ಲ, ಅಷ್ಟೇ ಅಲ್ಲ, ಈ ಬಗೆಯ ಪ್ರತಿಕ್ರಿಯೆಗಳಿಂದ ಸಂಘಪ್ರತಿಮೆಗೇ ಹಾನಿ ಕೂಡಾ.

 ಮನುಷ್ಯನೆಂದರೆ ಬುದ್ಧಿ ಎಂದಷ್ಟೆ ತಿಳಿದಿರುವುದರ ಅಪಸವ್ಯಗಳಿವು. ಮತ್ತು ಇದನ್ನು ತರ್ಕ – ಪ್ರತಿತರ್ಕಗಳಿಂದ ಚರ್ಚಿಸಿ ಒಂದು ನಿರ್ಣಯಕ್ಕೂ ಬರಲಾಗದು ಮತ್ತು ಮುಗಿತಾಯಮುಕ್ತಾಯವನ್ನೂ ಕಾಣಲಾಗದು. ಅಧ್ಯಾತ್ಮದ ನೆಲೆಯಲ್ಲೇ ಮನುಷ್ಯ ತನ್ನರಿವನ್ನು  ಮಾಡಿಕೊಳ್ಳಬೇಕು ಎಂಬುದು ಹೌದಾದರೂ ಲೌಕಿಕದ ನೆಲೆಯಲ್ಲಿ ಆತ ತನ್ನನ್ನು ತನ್ನ ಕರ್ತವ್ಯದ ಜತೆಗೆ ಗುರುತಿಸಿಕೊಳ್ಳುವುದರೆ ಸ್ಮೃತಿವಾಕ್ಯ ಹೇಳುವಂತೆ; ಆಹಾರ, ನಿದ್ದೆ, ಭಯ ಮತ್ತು ಸಂತಾನಕ್ರಿಯೆ ಇವುಗಳಲ್ಲಿ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿಲ್ಲ. ಆದರೆ ಮನುಷ್ಯ ತಾನು ಪಾಲಿಸಬೇಕಾದ ಧರ್ಮದ ನೆಲೆಯಲ್ಲ್ ಇತರ ಪ್ರಾಣಿಗಳಿಗಿಂತ ವಿಶೇಷನೆನಿಸಿದ್ದಾನೆ. ಇಲ್ಲೂ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ ಆತ ಧರ್ಮವನ್ನು  ಅನುಸರಿಸುತ್ತ ಪ್ರಾಣಿಗಳಿಗಿಂತ ವಿಶೇಷನಾಗುತ್ತಾನೆಯೇ ವಿನಾ ಶ್ರೇಷ್ಠನೆಂದಲ್ಲ. ಧರ್ಮವನ್ನು ಅನುಸರಿಸುತ್ತ ಆತ ವಿನೀತನಾಗುತ್ತ ಹೋಗಬೇಕೇ ವಿನಾ ಉಳಿದವುಗಳಿಗಿಂತ, ಉಳಿದವರಿಗಿಂತ ಶ್ರೇಷ್ಠನೆಂಬ ಮೇಲರಿಮೆಯನ್ನಲ್ಲ. ಪ್ರಾಣಿಗಳು ಧರ್ಮವನ್ನು ಪಾಲಿಸಬೇಕಿಲ್ಲ, ಯಾಕೆಂದರೆ ಅವು ಅಧರ್ಮವನ್ನು ಯೋಚಿಸಲೂ ಆರವು. ಮನುಷ್ಯ ಹಾಗಲ್ಲ, ಅಧರ್ಮವನ್ನು  ಯೋಚಿಸಲೂ ಬಲ್ಲ, ಅಧರ್ಮವನ್ನು ಅನುಷ್ಠಾನಿಸಲೂ ಬಲ್ಲ. ಮತ್ತಿದಕ್ಕೆ ಅವನಿಗೆ ಬುದ್ಧಿಯೇ ಪ್ರೇರಕ, ಸಹಾಯಕ. ಹಾಗಾಗಿ ಆತನಿಗೆ ಧರ್ಮದ ದಾರಿಯಲ್ಲಿ ನಡಿಗೆ ಅನಿವಾರ್ಯ.ಇದು ಮನುಷ್ಯ ಸಾಗಬೇಕಾದ ದಾರಿ ಎಂದು ಅನಿಸುತ್ತದೆ. ಈ ದಾರಿಯಲ್ಲಿ ಸಾಗಲು ಆತನಿಗೆ ಬೇಕಾದುದು ಅಂತಃಕರಣ ಶುದ್ಧಿ. ಇದಕ್ಕೆ ದೇಹ, ಮನಸ್ಸು, ಬುದ್ಧಿ ಇತ್ಯಾದಿಗಳು ಸಹಾಯಕವಾಗಬೇಕೇ ವಿನಾ ಅವವೇ ಮುಖ್ಯವಾಗಿ  ಮನುಷ್ಯನನ್ನಾಳುವುದಲ್ಲವಷ್ಟೆ. ಬಹುಶಃ ನಿರಹಂಕಾರದ ದಾರಿಯಲ್ಲಿ ಸಾಗುತ್ತ ವ್ಯಕ್ತಿಯನ್ನು ಶುದ್ಧಾಂತಃಕರಣನನ್ನಾಗಿ ಮಾಡುವ ಕಾರ್ಯ ಸಂಘದ ಶಾಖೆಯಲ್ಲಿ ಆಗುತ್ತದೆಯೆನಿಸುತ್ತದೆ.

   

Leave a Reply