ಆ ಇಸ್ಲಾಂ ಮತಾಂಧರ ಏಟು ನನಗೆ ದೇಶದ ಕೆಲಸ ಮಾಡಲು ಇನ್ನಷ್ಟು ಕಿಚ್ಚನ್ನು ತುಂಬಿತು

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ.

  ಈ ಘಟನೆ ನಡೆದು ಇಂದಿಗೆ ಏಳು ವರ್ಷವಾಯಿತು. 2010 ದೇಶಾದ್ಯಂತ ವಿಶ್ವಮಂಗಲ ಗೋಗ್ರಾಮ ಯಾತ್ರೆ ರಥದ ಮೂಲಕ ಜನಜಾಗೃತಿಯನ್ನು ಮೂಡಿಸುತ್ತಿತ್ತು. ಆ ಸಮಯದಲ್ಲಿ ನಾನು ಸಂಸ್ಕೃತ ಭಾರತಿಯ ಪ್ರಚಾರಕನಾಗಿ ಹಾಸನದಲ್ಲಿದ್ದೆ. ಹಾಸನದ ‘ಪಾಂಚಜನ್ಯ’ ಕಾರ್ಯಾಲಯದಲ್ಲಿ ಜಿಲ್ಲೆಯ ಕಾರ್ಯಕರ್ತರೆಲ್ಲಾ ಸೇರಿ, ಅ.28ರಂದು ನಮ್ಮ ಜಿಲ್ಲೆಯಲ್ಲಿ ‘ವಿಶ್ವಮಂಗಲ ಗೋ ಗ್ರಾಮ ಯಾತ್ರೆ’ಯನ್ನು ಅದ್ದೂರಿಯಾಗಿ ಮಾಡಬೇಕೆಂದು ತೀರ್ಮಾನಿಸಿ ಅಲ್ಲಿದ್ದವರಿಗೆಲ್ಲಾ ಜವಾಬ್ದಾರಿಯನ್ನು ಘೋಷಿಸಿದರು. ಅದರಂತೆ ನನಗೆ ಹಾಗೂ ನನ್ನ ಗೆಳೆಯ ಪ್ರಸಾದ್ ಕಲ್ಲಡ್ಕನಿಗೆ ಪ್ರಚಾರದ ಜವಾಬ್ದಾರಿ ಬಂತು. ಇನ್ನೇನು ಕಾರ್ಯಕ್ರಮಕ್ಕೆ ಬರೀ 20 ದಿನ ಬಾಕಿ ಇದೆ. ಪ್ರಚಾರದ ಕೆಲಸ ಜೋರಾಗಿ ಆಗಬೇಕೆಂದು ಬೆಳಗ್ಗಿನ ಸಮಯದಲ್ಲಿ ಯಾತ್ರೆಯ ಕರಪತ್ರಗಳನ್ನು ಮನೆಮನೆಗಳಿಗೆ ಹಂಚಿ ರಾತ್ರಿಯ ಹೊತ್ತು ಕೆಲವು ಕಾರ್ಯಕರ್ತರ ಜೊತೆ ಪೋಸ್ಟರ್ ಬ್ಯಾನರ್‌ಗಳನ್ನೆಲ್ಲಾ, ಹಾಸನ ನಗರದ ಮೂಲೆಮೂಲೆಗಳಲ್ಲೂ ಕಟ್ಟಲು, ಅಂಟಿಸಲು ಶುರುಮಾಡಿದೆವು. ಅ.23ರಂದು ಪ್ರಚಾರ ವಿಭಾಗದ ಕಾರ್ಯಕರ್ತರೆಲ್ಲ ಸೇರಿ ಇನ್ನೇನು ಕಾರ್ಯಕ್ರಮ ಸಮೀಪಿಸುತ್ತಿದೆ, ಇನ್ನು ಹೆಚ್ಚಿನ ರೀತಿಯಲ್ಲಿ ನಾವು ಜನರನ್ನು ತಲುಪಬೇಕಾಗಿದೆ ಹಾಗಾಗಿ ಮರುದಿನ ಆಟೋದಲ್ಲಿ ಮೈಕ್ ಕಟ್ಟಿಕೊಂಡು ಪ್ರಚಾರಮಾಡೋಣವೆಂದು ತೀರ್ಮಾನಿಸಿದೆವು. ಅ.24ರಂದು ಮಧ್ಯಾಹ್ನ 2 ಗಂಟೆಗೆ ಪಾಂಚಜನ್ಯದ ಮುಂದೆ ನಮ್ಮ ಗೋ ಗ್ರಾಮ ಯಾತ್ರೆಯ ಪ್ರಚಾರದ ಆಟೋವನ್ನು ಬ್ಯಾನರ್ ಮತ್ತು ಧ್ವಜಗಳಿಂದ ಅಲಂಕರಿಸಿ ನಾನು ಮತ್ತು ಪ್ರಸಾದ್ ಮೈಕನ್ನು ಹಿಡಿದುಕೊಂಡು ಆಟೋದಲ್ಲಿ ಕುಳಿತು ಪ್ರಚಾರಮಾಡಲು ಶುರುಮಾಡಿದೆವು. ಅಗ್ರಹಾರದಿಂದ ಎಂಸಿಇ ಕಾಲೇಜ್ ವಿದ್ಯಾನಗರದವರೆಗೂ ಹೋಗಿ ಮತ್ತೆ ಎಂ.ಜಿ. ರಸ್ತೆ ಮೂಲಕ ಬಂದು ಎನ್.ಆರ್. ಸರ್ಕಲ್‌ನಿಂದ ಮಹಾವೀರ ಸರ್ಕಲ್ ತಲುಪಿದೆವು. ಅಲ್ಲಿ ನನ್ನ ಜೊತೆಗಿದ್ದ ಪ್ರಸಾದ್ ಏನೋ ಅನಿವಾರ್ಯ ಕಾರಣದಿಂದ ‘ಮನೋಜ್ ನೀವು ಮುಂದೆ ಹೋಗಿ ನಾನು ಆಮೇಲೆ ಬಂದು ಸೇರಿಕೊಳ್ಳುತ್ತೇನೆ’ ಎಂದು ಹೇಳಿ ಹೊರಟುಹೋದರು.

ಅದೇ ಸಮಯಕ್ಕೆ ಒಬ್ಬ ಕಾಲೇಜು ವಿದ್ಯಾರ್ಥಿ ದರ್ಶನ್ ಸಿಕ್ಕಿ ‘ಜೀ ನಾನು ನಿಮ್ಮ ಜೊತೆ ಬರುತ್ತೇನೆ’ ಎಂದು ಆಟೋದಲ್ಲಿ ಕುಳಿತುಕೊಂಡನು. ಮತ್ತೆ ನಮ್ಮ ಮೈಕ್ ಪ್ರಚಾರ ಶುರುವಾಯಿತು. ಮಹಾವೀರ ಸರ್ಕಲ್‌ನಿಂದ ಹೊಸಲೈನ್ ರಸ್ತೆಯ ಬಸವೇಶ್ವರ ಕಲ್ಯಾಣಮಂಟಪದ ಹತ್ತಿರ ಹೋಗಿ ಅದರ ಹಿಂಭಾಗ ಇದ್ದ ಪೆನ್ಷನ್ ಮೊಹಲ್ಲಾ ಕಡೆ ಆಟೋವನ್ನು ತಿರುಗಿಸಿ ಪ್ರಚಾರಕ್ಕೆ ಹೋದೆವು. ಎಲ್ಲಾ ಮುಸಲ್ಮಾನರ ಮನೆಗಳೇ ಇದ್ದವು. ಕೆಲವು ಮನೆಗಳ ಮುಂದೆ ಪಿ.ಎಫ್.ಐ. , ಕೆ.ಎಫ್.ಡಿ. ಧ್ವಜಗಳು ಹಾರಾಡುತ್ತಿದ್ದವು.

 ಹೀಗೆ ನಾನು ಪ್ರಚಾರಮಾಡುತ್ತಾ ಮೊಹಲ್ಲಾದ ಒಳಗಡೆ ಪ್ರವೇಶಿಸಿದೆ, ಆಗ ಸಂಜೆ 6ರ ಸಮಯ. ಮೊಹಲ್ಲಾದ ಕೊನೆಯ ಭಾಗದಲ್ಲಿ ಒಂದು ಮಸೀದಿ ಇತ್ತು. ಆ ಮಸೀದಿಯ ಎದುರಿನಲ್ಲಿ ಎರಡು ನಿಮಿಷ ವಿಶ್ವಮಂಗಲ ಗೋ ಗ್ರಾಮ ಯಾತ್ರೆಯ ಉದ್ದೇಶವನ್ನು ಮೈಕ್‌ನಲ್ಲಿ ಹೇಳಿ ಅಲ್ಲಿಂದ ಹೊರಡಲು ಅಣಿಯಾದಾಗ ಇದ್ದಕ್ಕಿದ್ದಂತೆ ಆಟೋ ಕೆಳಗೆ ಬಿತ್ತು. ಕೆಳಗೆ ಬಿದ್ದಂಥ ಆಟೋದಿಂದ ಎದ್ದು ನೋಡಿದರೆ ಸುಮಾರು 200ಕ್ಕೂ ಹೆಚ್ಚು ಮುಸಲ್ಮಾನರು, ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ನಮ್ಮ ಆಟೋ ಸುತ್ತ ನಿಂತಿದ್ದರು, ಯಾರನ್ನು ಕೇಳಿ ನೀನು ನಮ್ಮ ಏರಿಯಾದೊಳಗೆ ಕಾಲು ಹಾಕಿದೆ ಎನ್ನುತ್ತಾ ಏಕಾಏಕಿ ನಮ್ಮನ್ನು ಮನಬಂದಂತೆ ಥಳಿಸಲು ಶುರುಮಾಡಿದರು. ಮುಂದೆ ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಅಷ್ಟರಲ್ಲೇ ಆಟೋ ಸಂಪೂರ್ಣ ಜಖಂಗೊಂಡಿತು. ನನ್ನ ಜೊತೆಯಿದ್ದ ದರ್ಶನ್‌ನನ್ನು ಹಾಕಿಕೊಂಡು ತುಳಿಯುತ್ತಿದ್ದರು. ಆ ರಾಕ್ಷಸರ ಗುಂಪಿನಿಂದ ತಪ್ಪಿಸಿಕೊಳ್ಳುವುದನ್ನು ಬಿಟ್ಟರೆ ನನಗೆ ಬೇರೆ ದಾರಿಯೇ ಇರಲಿಲ್ಲ. ಅಷ್ಟರಲ್ಲಿ ಇಡೀ ಏರಿಯಾದವರು ಅಲ್ಲಿ ಸೇರಿಹೋಗಿದ್ದರು. ಕೆಲವರ ಕೈಯಲ್ಲಿ ಕಬ್ಬಿಣದ ರಾಡ್‌ಗಳು ರಾರಾಜಿಸುತ್ತಿದ್ದವು. ಒಂದೇ ಸಮನೆ ಮಳೆ ಭೂಮಿಗೆ ಸುರಿಯುವ ಹಾಗೆ, ನನ್ನ ಮೇಲೆ ಅವರ ಹೊಡೆತಗಳು ಬೀಳುತ್ತಿದ್ದವು. ಆಗ ನನಗೆ ಅಲ್ಲಿಂದ ಓಡುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಅಂಥಾ ಸಮಯದಲ್ಲೂ ನಿನ್ನ ತಲೆಯಲ್ಲಿ ಹೊಳೆದ ಆಲೋಚನೆಯೆಂದರೆ ಚಪ್ಪಲಿಹಾಕಿಕೊಂಡು ಓಡಬೇಕೆ ಅಥವಾ ಚಪ್ಪಲಿಬಿಟ್ಟು ಓಡಬೇಕೆಂಬುದು. ಏಕೆಂದರೆ ನಾನು ಹಿಂದಿನವಷ್ಟೇ ತಾನೇ 125 ರೂ.ಗಳನ್ನು ಕೊಟ್ಟು ಲೂನಾರ್ಸ್‌ ಚಪ್ಪಲಿಯನ್ನು ತೆಗೆದುಕೊಂಡಿದ್ದೆ. ಅದು ಸಂಘಟನೆಯ ಹಣವಾದ್ದರಿಂದ ಹಾಗಾಗಿ ನಾನು ಆ ಗುಂಪಿನಿಂದ ಕಷ್ಟಪಟ್ಟು ಚಪ್ಪಲಿಯನ್ನು ಹಾಕಿಕೊಂಡೇ ಓಡಿದೆ. ಆಗ ಸುಮಾರು 6.20ರ ಸಮಯ. ಸ್ವಲ್ಪ ಕತ್ತಲು ಕವಿದಿತ್ತು. ನಾನು ಹಾಸನಕ್ಕೆ ಹೊಸಬನಾದ್ದರಿಂದ ಅಷ್ಟಾಗಿ ಮೊಹಲ್ಲಾದ ಪರಿಚಯವಿರಲಿಲ್ಲ. ನನಗೆ ದಾರಿ ತಿಳಿಯದೆ ಮೊಹಲ್ಲಾದ ಹೊರಗೆ ಬರುವ ಬದಲು ಇನ್ನೂ ಮೊಹಲ್ಲಾದ ಒಳಗೇ ಓಡಿಹೋದೆ. ನನ್ನ ಹಿಂದೆ ಅನೇಕರು ಅಟ್ಟಿಸಿಕೊಂಡು ಬರುತ್ತಿದ್ದರು. ಸಿನಿಮೀಯ ರೀತಿಯಲ್ಲಿ ನಾನು ಸಿಕ್ಕಸಿಕ್ಕ ಓಣಿಯಲ್ಲೆಲ್ಲಾ ಓಡಬೇಕಾದರೆ ಒಂದು ಓಣಿಯಲ್ಲಿ ಮುಂದೆ ಹೋಗಲು ಜಾಗವಿರಲಿಲ್ಲ. ಅದು ಡೆಡ್‌ಎಂಡ್ ಆಗಿತ್ತು. ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಅಲ್ಲೇ ಪಕ್ಕದಲ್ಲಿ ಒಂದು ಮನೆಯ ಬಾಗಿಲು ತೆರೆದಿತ್ತು. ನಾನು ಆ ಮನೆಯನ್ನು ಚಪ್ಪಲಿ ಸಮೇತನಾಗಿ ಪ್ರವೇಶಿಸಿ ಅಡುಗೆಮನೆಯ ಸಿಲಿಂಡರ್ ಪಕ್ಕದಲ್ಲಿ ಕುಳಿತೆ. ಆ ಮನೆಯ ಒಳಗಡೆ ಯಾರೂ ಕಾಣಿಸಲೇ ಇಲ್ಲ. ಸುಮಾರು ಒಂದೆರಡು ನಿಮಿಷವಾಗಿರಬೇಕು, ಅಡುಗೆಮನೆಗೆ ಒಬ್ಬರು ಅಜ್ಜಿ ಬಂದರು. ಆ ಅಜ್ಜಿಯ ಹಣೆಯಲ್ಲಿ ಕುಂಕುಮ ಇದ್ದದ್ದನ್ನು ನೋಡಿ ನನಗೆ ಸಮಾಧಾನವಾಯಿತು. ಆ ಅಜ್ಜಿ ಸ್ಟೌವ್ ಹಚ್ಚಲಿಕ್ಕೆ ಸ್ಟೌ ಬಳಿಗೆ ಬಂದಾಗ, ಸಿಲಿಂಡರ್ ಪಕ್ಕದಲ್ಲಿ ಕುಳಿತಿದ್ದ ನನ್ನನ್ನು ನೋಡಿ, ತಕ್ಷಣವೇ ಕಳ್ಳ ಕಳ್ಳಾ ಎಂದು ಕಿರುಚಲು ಶುರುಮಾಡಿದರು. ನಾನು ಗಾಬರಿಯಾಗಿ, ನಾನು ಕಳ್ಳ ಅಲ್ಲ , ಅಲ್ಲಾ ಎಂದು ಎಷ್ಟೇ ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವರು ಹೊರಗೆ  ಹೋಗಲು ಯತ್ನಿಸಿದಾಗ ಅಷ್ಟರಲ್ಲೇ ನಾನು ಗಾಭರಿಯಾಗಿ ಅವರ ಬಾಯಿಯನ್ನು ಕೈಯಿಂದ ಭದ್ರವಾಗಿ ಮುಚ್ಚಿದೆ, ಅಷ್ಟರಲ್ಲಿ ಅಡುಗೆಮನೆಯೊಳಗೆ ಇನ್ನೊಬ್ಬ ಹಿರಿಯಾಕೆ  ಬಂದು, ಅಜ್ಜಿಯ ಬಾಯನ್ನು ಮುಚ್ಚಿದ್ದನ್ನು ಕಂಡು ಅವರೂ ಕೂಡಾ ಕಳ್ಳ ಕಳ್ಳ ಎಂದು ಕೂಗಾಡಿದರು. ಪಕ್ಕದಲ್ಲೇ ಇದ್ದ ಚಾಕನ್ನು ಎತ್ತಿಕೊಂಡು ಬಿಡು ಅವಳನ್ನು ಎಂದು ಭಯದಿಂದ ಹೇಳಿದರು. ನಾನು ಅಷ್ಟರಲ್ಲಿ ಕೈಮುಗಿಯುತ್ತಾ ‘ಅಜ್ಜಿ ನಾನು ಕಳ್ಳ ಅಲ್ಲ. ಸ್ವಲ್ಪ ನನ್ನ ಮಾತನ್ನು ಕೇಳಿ, ಜೋರಾಗಿ ಕೂಗಬೇಡಿ’ ಎಂದು ಕಾಲಿಗೆ ಬಿದ್ದೆ. ಆಗ ಅಜ್ಜಿ ಕೂಗುವುದನ್ನು ನಿಲ್ಲಿಸಿದರು. ನಾನು ಒಂದೇ ನಿಮಿಷದಲ್ಲಿ ನಡೆದದ್ದೆಲ್ಲವನ್ನೂ ಹೇಳಿದೆ. ಅಜ್ಜಿ ಹೋಗಿ ಮನೆಯ ಬಾಗಿಲನ್ನು ಹಾಕಿ ಒಳಗೆ ಬಂದು ಕುಡಿಯಲು ನೀರನ್ನು ಕೊಟ್ಟು ಆಕೆಗೆ ಕಿವಿ ಕೇಳಿಸುವುದಿಲ್ಲ ಹಾಗಾಗಿ ಅವರು ಗಾಭರಿಯಾಗಿ ಕೂಗಿಕೊಂಡಿದ್ದಾರೆ ಎಂದು ಹೇಳಿದರು.

 ಅಷ್ಟರಲ್ಲೇ ಆಚೆ ಯಾರೋ ಜೋರಾಗಿ ಬಾಗಿಲು ಬಡಿಯುವ ಶಬ್ಧ ಕೇಳಿಸಿ ಮತ್ತೆ ನನಗೆ ಗಾಭರಿಯಾಯಿತು. ಮತ್ತೆ ಅವರಿಗೆ ದಯವಿಟ್ಟು ನಾನು ಇಲ್ಲಿರುವುದನ್ನು ಹೇಳಬೇಡಿ ಎಂದು ಪ್ರಾರ್ಥಿಸಿದೆ. ಅಲ್ಲೇ ಇದ್ದ ಒಂದು ರೂಮಿನಲ್ಲಿ ಅವಿತು ಕುಳಿತೆ. ನಂತರ ಅಜ್ಜಿ ಹೋಗಿ ಬಾಗಿಲು ತೆಗೆದರು. ಹೊರಗೆ ಇದ್ದ ನಾಲ್ಕಾರು ಮುಸಲ್ಮಾನರು ಯಾರಾದ್ರೂ ಈ ಕಡೆ ಬಂದ್ರಾ? ನೀನು ನೋಡಿದೆಯಾ ಎಂದು ಏಕವಚನದಲ್ಲಿಯೇ ಅಜ್ಜಿಯನ್ನು ಕೇಳಿದ್ದು ನನಗೆ ಸ್ಪಷ್ಟವಾಗಿ ಕೇಳಿಸಿತು. ಆದರೆ ಅಜ್ಜಿ ಇಲ್ಲಿ ಯಾರೂ ಬಂದಿಲ್ಲ! ಯಾರನ್ನೂ ನೋಡಲಿಲ್ಲ ಎಂದು ಅವರನ್ನು ಕಳುಹಿಸಿ ಬಾಗಿಲನ್ನು ಹಾಕಿ ನನಗೆ ನೋಡಪ್ಪಾ ಇವೆಲ್ಲಾ ಪೂರ್ತಿ ಮುಸ್ಲಿಂ ಏರಿಯಾ. ಇಲ್ಲಿರುವ ಜನರು ಯಾರೂ ಸರಿಯಿಲ್ಲ, ಈಗ ಕರೆಂಟ್ ಇಲ್ಲದೆ ಕತ್ತಲಾಗಿದೆ. 7 ಗಂಟೆಗೆ ಕರೆಂಟ್ ಬಂದುಬಿಡುತ್ತೆ. ನೀನು ಆದಷ್ಟು ಬೇಗ ಇಲ್ಲಿಂದ ತಪ್ಪಿಸಿಕೋ, ಈ ಮನೆಯ ಪಕ್ಕದಲ್ಲೇ ಒಂದು ಸಣ್ಣ ಗಲ್ಲಿ ಇದೆ. ಅಲ್ಲಿಂದ ನೀನು ಹೊರಟು ಹೋಗು, ಆಮೇಲೆ ನೀನು ಇಲ್ಲಿಂದ ಹೋಗುವುದು ಕಷ್ಟ ಎಂದು ತಿಳಿ ಹೇಳಿದರು.

 ನಾನು ಅವರನ್ನು ಒಂದು ಫೋನ್‌ಕರೆ ಮಾಡುತ್ತೇನೆ, ಫೋನ್ ಕೊಡಿ ಎಂದು ಕೇಳಿದೆ. ಆದರೆ ದುರದೃಷ್ಟವಶಾತ್ ಅವರ ಹತ್ತಿರ ಫೋನ್ ಇರಲಿಲ್ಲ. ಆಗ ಸಂಜೆ 6.45 ಗಂಟೆ ಆಗಿತ್ತು. ನಾನು ಅವರು ಹೇಳಿದ ಹಾಗೆ ಅವರ ಮನೆಯ ಪಕ್ಕದಲ್ಲಿದ್ದ ಕೊಳಕಾದ ಗಲ್ಲಿಯಲ್ಲಿ ತಪ್ಪಿಸಿಕೊಳ್ಳಲು ಹೊರಟೆ. ಆ ಗಲ್ಲಿ ಯಾವ ರಸ್ತೆಯಲ್ಲಿ ಕೊನೆಯಾಯಿತೋ, ಆ ರಸ್ತೆಯಲ್ಲಿ ನಾಲ್ಕೈದು ಮುಸಲ್ಮಾನರು ಕೈನಲ್ಲಿ ಲಾಂಗುಗಳನ್ನು ಹಿಡಿದುಕೊಂಡು ಉರ್ದುವಿನಲ್ಲಿ ಏನೋ ಜೋರಾಗಿ ಅರಚುತ್ತಿದ್ದರು. ಅವರ ಹಾವಭಾವಗಳನ್ನು ನೋಡಿ ಅವರು ನನ್ನನ್ನೇ ಹುಡುಕುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯಿತು. ಈಗ ಇಲ್ಲಿಂದ ಹೋಗುವುದಕ್ಕಿಂತ ಆ ಅಜ್ಜಿಯ ಮನೆಯಲ್ಲಿರುವುದೇ ಸುರಕ್ಷಿತ ಎಂದು ಭಾವಿಸಿ ಮತ್ತೆ ಅಜ್ಜಿಯ ಮನೆಗೆ ಬಂದೆ. ಮನೆಯ ಬಾಗಿಲು ಮುಚ್ಚಿತ್ತು. ನಾನು ಅಕ್ಕ ಪಕ್ಕಾ ನೋಡಿ ಬಾಗಿಲನ್ನು ಬಡಿದೆ. ಎಷ್ಟೇ ಬಡಿದರೂ ಯಾರೂ ಬಾಗಿಲು ತೆರೆಯಲಿಲ್ಲ. ಒಂದೆರಡು ನಿಮಿಷಗಳಾಗಿರಬೇಕಷ್ಟೆ. ಆ ಅಜ್ಜಿಯ ಮನೆಯ ಎದುರುಗಡೆಯಿದ್ದ ಒಂದು ಮನೆಯ ಹೆಂಗಸರು ಬಾಗಿಲ ಬಳಿ ನಿಂತು ಶ್ ಶ್ ಎಂದು  ಶಬ್ದ ಮಾಡುತ್ತಾ ನನ್ನನ್ನು ಕೈಸನ್ನೆ ಮಾಡಿ ಕರೆದರು. ಸದ್ಯ ಅವರ ಹಣೆಯಲ್ಲೂ ದೊಡ್ಡದಾದ ಕುಂಕುಮವಿದ್ದದ್ದನ್ನು ನೋಡಿ ಮನಸ್ಸು ನಿರಾಳವಾಗಿ ಅವರ ಮನೆಗೆ ಹೋದೆ. ಕೂಡಲೇ ಅವರು ನನ್ನನ್ನು ಮನೆಯ ಒಳಗಡೆ ಕೂರಿಸಿ ಬಾಗಿಲ ಚಿಲಕವನ್ನು ಹಾಕಿ ಹೇಳಿದರು: ನೀನು ಓಡಿಬಂದದ್ದು, ಮನೆಯ ಒಳಗಡೆ ನುಗ್ಗಿದ್ದು, ನಿನ್ನನ್ನು ಹುಡುಕಿಕೊಂಡು ಮುಸಲ್ಮಾನರು ಬಂದಿದ್ದನ್ನೆಲ್ಲಾ ನಾನು ನೋಡಿದೆ. ನೋಡು  ಈ ಏರಿಯಾದಲ್ಲಿ ಆ ಅಜ್ಜಿ ಮನೆ, ನನ್ನ ಮನೆ ಬಿಟ್ಟರೆ ಬೇರೆ ಯಾವ ಹಿಂದುಗಳ ಮನೆಯೂ ಇಲ್ಲ. ನಿನ್ನ ಪುಣ್ಯ ನೀನು ಈ ರಸ್ತೆಗೆ ಬಂದು ಹಿಂದು ಮನೆಗೇ ನುಗ್ಗಿದೆ ಎಂದರು. ಅಷ್ಟರಲ್ಲೇ ಕರೆಂಟ್ ಬಂತು. ಅವರು ತಮ್ಮ ಮಗನಿಗೆ ಅರ್ಜೆಂಟಾಗಿ ಹೊರಟು ಬಾ ಎಂದು ಫೋನ್‌ಕರೆ ಮಾಡಿದರು. ಅವರ ಫೋನ್ ಸಂಭಾಷಣೆ ನನಗೆ ಸಮಾಧಾನ ತಂದಿತು. ಅಷ್ಟರ‌್ಲಲೇ ಅವರು ನನಗೆ ನಿಮ್ಮ ಕಡೆಯವರಿಗೆ ಫೋನ್‌ಮಾಡು ಎಂದು ಫೋನನ್ನು ಕೈಗಿತ್ತರು. ಆದರೆ ಹಾಸನದ ಯಾರೊಬ್ಬರ ಫೋನ್ ನಂಬರ‌್ರೂ ನನ್ನ ಬಳಿ ಇರಲಿಲ್ಲ, ಹತ್ತಿರವಿದ್ದ ಸಂಪರ್ಕದ ಬ್ಯಾಗ್ ಕೂಡಾ ಆ ಗಲಾಟೆಯಲ್ಲೇ ಎಲ್ಲೋ ಬಿದ್ದುಹೋಗಿತ್ತು. ನನಗೆ ನೆನಪಿದ್ದ ಬೆಂಗಳೂರಿನ ಅಕ್ಷರಂನ ಲ್ಯಾಂಡ್‌ಲೈನ್‌ಗೆ ಫೋನ್‌ಕರೆಮಾಡಿದೆ. ಅಂದು ದಿನೇಶ್ ಕಾಮತ್‌ಜಿಯವರು ದೆಹಲಿಯಿಂದ ಬೆಂಗಳೂರಿನ ಅಕ್ಷರಂಗೆ ಬಂದಿದ್ದರು. ನನ್ನ ಕರೆಯನ್ನು ಅವರೇ ರಿಸೀವ್ ಮಾಡಿದರು. ನಾನು ನಡೆದದ್ದನ್ನೆಲ್ಲಾ ಸಂಕ್ಷಿಪ್ತವಾಗಿ ಅವರ ಬಳಿ ಹೇಳಿದ್ದೇ ತಡ, ಅವರು ತಕ್ಷಣ ಕೇಶವಕೃಪಾಗೆ ಫೋನ್‌ಮಾಡಿ ಹೇಳಿದರು. ಕೇಶವಕೃಪಾದವರು ಕೂಡಲೇ ಹಾಸನದ ಕಾರ್ಯಕರ್ತರಿಗೆ ತಿಳಿಸಿದರು. ಅಷ್ಟರಲ್ಲೇ ನನ್ನ ಜೊತೆ ಇದ್ದ ವಿದ್ಯಾರ್ಥಿ ದರ್ಶನ್ ತಪ್ಪಿಸಿಕೊಂಡು ಹೋಗಿ ಎಲ್ಲರಿಗೂ ವಿಷಯವನ್ನು ಮುಟ್ಟಿಸಿದ್ದ. ಆದರೆ ನಾನೆಲ್ಲಿದ್ದೇನೆಂದು ಯಾರಿಗೂ ಗೊತ್ತಿರಲಿಲ್ಲ. ಇತ್ತ ಕೇಶವಕೃಪಾದಿಂದ ಫೋನ್‌ಕರೆ ಹೋದ ಕೂಡಲೇ ಇನ್ನೂ ನಾನು ಪೆನ್ಷನ್ ಮೊಹಲ್ಲಾದಲ್ಲೇ ಇದ್ದೇನೆಂದು ತಿಳಿದು ಇನ್ನೂರಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಮೊಹಲ್ಲಾದೊಳಗೆಲ್ಲಾ ನುಗ್ಗಿ ಮನೋಜ್, ಮನೋಜ್ ಎಂದು ಕೂಗಿದರು. ಅಷ್ಟರೊಳಗೆ ಆ ಮನೆಯ ಮಹಿಳೆಯ ಮಗನೂ ಬಂದಿದ್ದ, ನಾನೂ ಅವನ ಜೊತೆ ಮನೆಯಿಂದ ಹೊರಗಡೆ ಬಂದು ನಮ್ಮವರನ್ನು ಸೇರಿದೆ. ಆಗ ಸುಮಾರು 7.30ರ ಸಮಯವಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ ಆ ಮೊಹಲ್ಲಾದ ಅಂಗಡಿಗಳೆಲ್ಲಾ ಮುಚ್ಚಿ ಎನ್ನುತ್ತಿದ್ದವು. ಯಾವೊಬ್ಬ  ಮುಸಲ್ಮಾನ ಹುಡುಗನೂ ಅಲ್ಲಿರಲಿಲ್ಲ. ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ಅಷ್ಟರಲ್ಲೇ ಪೊಲೀಸಿನವರೂ ಬಹಳ ಸಂಖ್ಯೆಯಲ್ಲಿ ಜಮಾಯಿಸಿದರು. ಕಾರ್ಯಕರ್ತರೆಲ್ಲಾ ಮೊಹಲ್ಲಾದ ಬೀದಿಗಳಲ್ಲಿ ನಿಂತು ‘ಯಾವನೋ ಅವನು ನಮ್ಮ ಹುಡುಗನ ಮೈಮುಟ್ಟಿದ್ದು , ತಾಕತ್ತಿದ್ದರೆ ಬನ್ರೋ’ ಎಂದು ಜೋರಾಗಿ ಹೇಳಲು ಶುರುಮಾಡಿದರು. ಆದರೆ ಯಾರೊಬ್ಬರ ಸುಳಿವೂ ಅಲ್ಲಿರಲಿಲ್ಲ. ಕಾರ್ಯಕರ್ತರ ಕಿಚ್ಚನ್ನು ನೋಡಿ ಹೆದರಿದ ಮುಸಲ್ಮಾನ ವಯೋವೃದ್ಧರೆಲ್ಲಾ ಗುಂಪು ಗುಂಪಾಗಿ ಬಂದು ಸಮಾಧಾನಮಾಡಲು ಪ್ರಯತ್ನಿಸಿದರು.

ಆ ಕೋಪದಲ್ಲೂ ಕಾರ್ಯಕರ್ತರು ಯಾವೊಬ್ಬ ವೃದ್ಧ ಮುಸಲ್ಮಾನನ ಮೇಲೂ ಕೈಮಾಡಲಿಲ್ಲ. ಆದರೆ ಆಶ್ಚರ್ಯದ ಸಂಗತಿಯೆಂದರೆ ಸಂಜೆ ನನ್ನ ಮೇಲೆ ನಡೆದ ಆಕ್ರಮಣದಲ್ಲಿ ಆ ಇಸ್ಲಾಂ ಮತಾಂಧರು ದೊಣ್ಣೆಗಳಿಂದ ಹೊಡೆದಿದ್ದರೂ ನನ್ನ ಶರೀರದಲ್ಲಿ ರಕ್ತದ ಕಲೆಯಾಗಲೀ, ನೋವಾಗಲೀ  ಇರಲಿಲ್ಲ. ಇದೇ ಇರಬೇಕು ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ವಾಕ್ಯಾರ್ಥ. ಆ ಒಂದು ಘಟನೆಯಿಂದ ನನಗೆ ಧೈರ್ಯ ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ದೇಶಕ್ಕಾಗಿ ಕೆಲಸಮಾಡಬೇಕೆಂಬ ಕಿಚ್ಚುಂಟಾಯಿತು.

 

   

Leave a Reply