ಆ ಸಮಯ ಮನಸ್ಸು ಮಂಕಾಗದಿರಲಿ…

ಮಹಿಳೆ ; ಲೇಖನಗಳು - 0 Comment
Issue Date : 06.06.2016

-ಅಭಿಸಾರಿಕಾ

ಒಡಲಲ್ಲಿ ಮತ್ತೊಂದು ಜೀವವನ್ನಿಟ್ಟುಕೊಳ್ಳುವ ಸಮಯ ಪ್ರತಿಯೊಬ್ಬ ಸ್ತ್ರೀಯ ಬದುಕಿನ ಸುವರ್ಣಯುಗವೇ ಸರಿ. ತನ್ನೊಳಗೆ ಮತ್ತೊಂದು ಜೀವ ಮೊಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಆಕೆಗಾಗುವ ಸಂತಸವನ್ನು ಶಬ್ದಗಳಲ್ಲಿ ಹಿಡಿದಿಡುವುದಕ್ಕೆ ಸಾಧ್ಯವಿಲ್ಲ. ಇನ್ನೂ ಭೂಮಿಗೆ ಬಾರದ ಪುಟ್ಟ ಜೀವದ ಕುರಿತು ನೂರಾರು ಆಸೆಗಳು, ಸಾವಿರಾರು ನೀರಿಕ್ಷೆಗಳು, ಕನಸುಗಳು ಹುಟ್ಟಿಕೊಳ್ಳುತ್ತವೆ. ಹೆಣ್ಣೋ, ಗಂಡೋ ಗೊತ್ತಿಲ್ಲದ, ಇನ್ನೂ ಆಕಾರವನ್ನೇ ಪಡೆಯದ ಕೂಸು ಅಮ್ಮನ ಪ್ರತಿಕ್ಷಣವನ್ನೂ ಸಂಭ್ರಮದಲ್ಲಿಡುತ್ತದೆ. ಅಮ್ಮನಿಗೆ ಪುನರ್ಜನ್ಮ ನೀಡುವ ಹೆರಿಗೆಯವರೆಗೂ ಮತ್ತು ಅದರ ನಂತರವೂ ತನ್ನ ಮತ್ತು ಮಗುವಿನ ಆರೋಗ್ಯವನ್ನು ಜತನ ಮಾಡುವುದು ತಾಯಿಯ ಕರ್ತವ್ಯ. ಕೇವಲ ತಾಯಿಯ ಕರ್ತವ್ಯ ಮಾತ್ರವಲ್ಲ, ಆ ಕುಟುಂಬದ ಎಲ್ಲರ ಕರ್ತವ್ಯವೂ ಹೌದು. ದೈಹಿಕವಾಗಿ ಸದೃಢವಾಗಿರುವ ಜೊತೆಗೆ ಮಾನಸಿಕವಾಗಿಯೂ ಸ್ವಾಸ್ಥ್ಯವಾಗಿರುವುದು ಆ ಸಮಯದಲ್ಲಿ ಮಹತ್ವದ್ದಾಗಿರುತ್ತದೆ. ಏಕೆಂದರೆ ತಾಯಿಯ ಪ್ರತಿಯೊಂದು ನಡೆಯೂ ಒಡಲೊಳಗಿನ ಕುಡಿಯ ಮೇಲೆ ಪರಿಣಾಮ ಬೀರುತ್ತಿರುತ್ತದೆ.
ಆ ಸಮಯದಲ್ಲಿ ದೇಹದಲ್ಲಿನ ಹಾರ್ಮೋನ್ ವ್ಯತ್ಯಯದಿಂದಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಗರ್ಭಿಣಿಯರು ಕುಗ್ಗುತ್ತಾರೆ. ಪ್ರತಿಕ್ಷಣವೂ ನಿನ್ನೊಂದಿಗೆ ನಾನಿದ್ದೇನೆ ಅಥವಾ ನಾವಿದ್ದೇವೆ ಎಂಬ ಭದ್ರತೆಯ ಸ್ಪರ್ಶವನ್ನು ಅವರು ನಿರೀಕ್ಷಿಸುತ್ತಿರುತ್ತಾರೆ. ಸಣ್ಣ-ಪುಟ್ಟ ವಿಷಯಕ್ಕೂ ಕೊರಗುವ ಮನಸ್ಸು ಸ್ಥಿಮಿತ ಕಳೆದುಕೊಂಡಿರುತ್ತದೆ. ಆ ಸಮಯದಲ್ಲಿ ಜೊತೆಗಿರುವವರ ಸಹಕಾರ ಅಗತ್ಯಗತ್ಯ.
ಗರ್ಭಿಣಿಯಾಗಿರುವಾಗ ಆರಂಭವಾಗುವ ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳು ಶಾಶ್ವತವಾಗಿ ಉಳಿದುಬಿಡುವ ಸಾಧ್ಯತೆ ಹೆಚ್ಚಿರುವುದರಿಂದ ಆ ಸಮಯದಲ್ಲಿ ಆರೋಗ್ಯದ ಕುರಿತು ಹೆಚ್ಚಿನ ನಿಗಾ ಅಗತ್ಯ ಎಂಬುದು ತಜ್ಞರ ಅಭಿಪ್ರಾಯ. ಗರ್ಭಿಣಿಯರು ತಮ್ಮ ಮನಸ್ಸನ್ನು ಎಂದಿಗೂ ಸ್ಥಿಮಿತದಲ್ಲಿರಿಸಿಕೊಳ್ಳುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ಗರ್ಭಿಣಿಯರಿಗೆಂದೇ ಇರುವ ಕೆಲವು ವ್ಯಾಯಾಮಗಳನ್ನು ತಪ್ಪದೇ ಮಾಡುವುದು, ಹಣ್ಣು, ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳು ಇತ್ಯಾದಿ ಪೌಷ್ಟಿಕ ಆಹಾರವನ್ನು ಮಾತ್ರವೇ ಸೇವಿಸುವುದು, ನಾಲಿಗೆಯ ಚಪಲವೇನೇ ಇದ್ದರೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಆ ಮಗುವನ್ನು ಬೆಳೆಸಬೇಕಾದ ತಾಯಿಯ ಆರೋಗ್ಯ ಈ ಎರಡನ್ನೂ ಗಮನದಲ್ಲಿಟ್ಟುಕೊಂಡು ಜಿಹ್ವಾಚಾಪಲ್ಯಕ್ಕೆ ಪೂರ್ಣವಿರಾಮ ಹಾಕುವುದು ಒಳ್ಳೆಯದು.
ಗರ್ಭಿಣಿಯರ ಮನಸ್ಸು ಸದಾ ಉಲ್ಲಾಸದಲ್ಲಿರುವುದು ಮುಖ್ಯ. ಹುಟ್ಟುವ ಮಗುವೂ ಉತ್ಸಾಹದ ಚಿಲುಮೆಯಾಗಲು ಇದು ಸಹಾಯಕವಾಗುತ್ತದೆ. ಗರ್ಭಿಣಿ ಒಡನಾಡುವ ವ್ಯಕ್ತಿಗಳು, ಆಕೆ ನೋಡುವ ಕಾರ್ಯಕ್ರಮಗಳು, ಓದುವ ಪುಸ್ತಕಗಳು, ಮಾಡುವ ಕೆಲಸಗಳು, ಅಕೆಯ ಹವ್ಯಾಸಗಳು ಈ ಎಲ್ಲವೂ ಹೊಟ್ಟೆಯಲ್ಲಿನ ಮಗುವನ್ನು ಇಂಚಿಂಚೇ ರೂಪಿಸುತ್ತಿರುತ್ತವೆ. ಈ ಎಲ್ಲ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳೂ ಆ ಪುಟ್ಟ ಜೀವದ ಮೇಲೆ ನಿರಂತರ ಪರಿಣಾಮ ಬೀರುತ್ತಲೇ ಇರುತ್ತವೆ.
ಸದಾ ಧನಾತ್ಮಕ ಯೋಚನೆಯನ್ನೇ
ಮಾಡುವುದು, ಎಂದಿಗೂ ಖಿನ್ನಳಾಗಿರದಿರುವುದು, ಒಳ್ಳೆಯ ಪುಸ್ತಕ ಓದುವುದು, ಸ್ಫೂರ್ತಿ ನೀಡುವಂಥ ಸಿನೆಮಾಗಳನ್ನೇ ನೋಡುವುದು, ಮೊಬೈಲ್, ಕಂಪ್ಯೂಟರ್‌ಗಳ ಮಿತವಾದ ಬಳಕೆ, ಸಜ್ಜನರ ಸಹವಾಸ, ಜ್ಞಾನ ಹೆಚ್ಚಿಸುವಂಥ ಕಾರ್ಯಗಳಲ್ಲಿ ತಲ್ಲೀನಳಾಗುವುದು, ದೇಹಕ್ಕೆ ಅಗತ್ಯವಿರುವಷ್ಟು ನಿದ್ದೆ ಈ ಎಲ್ಲವನ್ನೂ ಗರ್ಭಿಣಿ ಪಾಲಿಸಬೇಕು.
ಹೆಚ್ಚು ಶ್ರಮದ ಕೆಲಸ ಮಾಡುವುದನ್ನು ಗರ್ಭಿಣಿಯರು ಬಿಟ್ಟುಬಿಡಬೇಕು. ಹಾಗೆಯೇ ಮನೆಯಲ್ಲಿ ವೈಮನಸ್ಯ ಉಂಟಾಗದಂತೆ ಮನೆಯ ಇತರರು ಜಾಗರೂಕರಾಗಿ ನೋಡಿಕೊಳ್ಳಬೇಕು. ಅಕಸ್ಮಾತ್ ಗರ್ಭಿಣಿ ಮತ್ತೊಬ್ಬರ ಮನಸ್ಸಿಗೆ ನೋವಾಗುವಂತೆ ಏನಾದರೂ ಮಾತನಾಡಿದರೂ ಇತರರು ಸಂಯಮ ಕಳೆದುಕೊಳ್ಳಬಾರದು. ಹಾರ್ಮೋನ್ ವ್ಯತ್ಯಯದಿಂದಾಗಿ ಗರ್ಭಿಣಿಯ ಮನಸ್ಸು ಸ್ಥಿಮಿತ ಕಳೆದುಕೊಳ್ಳುತ್ತಿದೆ ಎಂಬುದು ಮನೆಜನರಿಗೆ ಅರಿವಿರಬೇಕು. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಆಘಾತಕಾರಿ ಸುದ್ದಿಯನ್ನೂ ಗರ್ಭಿಣಿಯರಿಗೆ ತಿಳಿಸಬಾರದು. ಅಕಸ್ಮಾತ್ ತಿಳಿಸುವುದು ಅನಿವಾರ್ಯವಾಗಿದ್ದರೆ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು, ಮನಸ್ಸನ್ನು ಗಟ್ಟಿಮಾಡಿಕೊಳ್ಳುವಂತೆ ಅವರನ್ನು ಸಿದ್ಧಗೊಳಿಸಿ ನಂತರ ತಾಳ್ಮೆಯಿಂದಲೇ ಆ ವಿಷಯವನ್ನು ಹೇಳಬೇಕು. ತೀರಾ ಭಯಾನಕವಾದ ಸುದ್ದಿ ಕೇಳುವುದು, ನೋಡುವುದು ಖಂಡಿತ ಒಳ್ಳೆಯದಲ್ಲ.
ಗರ್ಭಿಣಿಯ ಬಯಕೆ ಎನ್ನುತ್ತ ಆಕೆಗೆ ತಿನ್ನಬೇಕು ಎನ್ನಿಸಿದ ಖಾದ್ಯಗಳನ್ನೆಲ್ಲ ಮಾಡಿಕೊಡುವುದು ಒಳ್ಳೆಯದಲ್ಲ. ಏಕೆಂದರೆ ಈ ಸಮಯದಲ್ಲಿ ಆಹಾರದಲ್ಲಿ ನಿಯಂತ್ರಣವಿರಬೇಕು. ಆಕೆ ಯಾವುದಾದರೂ ಖಾದ್ಯವನ್ನು ತಿನ್ನಲೇಬೇಕೆಂದು ಹಟಮಾಡುತ್ತಿದ್ದರೆ ಅದು ಆಕೆಯ ದೇಹಕ್ಕೂ, ಮಗುವಿಗೂ ಒಳ್ಳೆಯದಲ್ಲ ಎಂಬುದನ್ನು ಅರ್ಥವಾಗುವ ರೀತಿಯಲ್ಲಿ ಹೇಳಬೇಕು. ಬಿಸಿಲಲ್ಲಿ ಓಡಾಡುವುದು ಅಥವಾ ಒಬ್ಬಂಟಿಯಾಗಿ ಹೊರಗಡೆ ತಿರುಗುವುದನ್ನು ಆಕೆ ನಿಲ್ಲಿಸಬೇಕು. ಹೆಚ್ಚು ಹೆಚ್ಚು ನೀರು ಸೇವಿಸಬೇಕು.
ಹೊಟ್ಟೆಯಲ್ಲಿರುವ ಮಗು ಹೆಣ್ಣೇಆಗಿರಬೇಕೆಂದೋ ಅಥವಾ ಗಂಡೇ ಆಗಿರಬೇಕೆಂದೋ ಮೊದಲೇ ನಿರೀಕ್ಷೆ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಮಗು ಯಾವುದಾದರೂ ಸರಿ, ಆರೋಗ್ಯವಂತವಾಗಿದ್ದರೆ ಸಾಕು ಎಂದು ಯೋಚಿಸಿ. ಗರ್ಭಿಣಿ ಮಾತ್ರವಲ್ಲದೆ ಮನೆಯ ಇತರ ಸದಸ್ಯರೂ ಹೆಣ್ಣಾದರೂ ಸರಿ, ಗಂಡಾದರೂ ಸರಿ ತಾಯಿ-ಮಗು ಆರೋಗ್ಯವಾಗಿದ್ದರೆ ಸಾಕು ಎಂಬುದನ್ನು ಆಕೆಯ ಎದುರು ಮತ್ತೆ ಮತ್ತೆ ಹೇಳುತ್ತಿರಬೇಕು.
ವೈದ್ಯರು ಹೇಳಿದಷ್ಟು ಬಾರಿ ತಪಾಸಣೆ ಮಾಡಿಸಿಕೊಳ್ಳಲೇ ಬೇಕು. ನಾಲ್ಕೈದು ಜನ ಒಂದೊಂದು ರೀತಿ ಹೇಳುತ್ತಾರೆಂದು ಗೊಂದಲಗೊಳ್ಳುವುದನ್ನು ಬಿಟ್ಟು ನೀವು ನಂಬಿದ ಒಬ್ಬ ವೈದ್ಯರ ಮಾತನ್ನು ಪಾಲಿಸಬೇಕು. ಗರ್ಭಿಣಿಯಾಗಿರುವ ಸಮಯದಲ್ಲಿ ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳುವುದು, ಚುರುಕಾಗಿರುವುದು, ಸದಾ ಲವಲವಿಕೆಯಿಂದಿರುವುದು, ಧನಾತ್ಮಕ ಚಿಂತನೆ ಈ ಎಲ್ಲವನ್ನೂ ಪಾಲಿಸಿದರೆ ಹುಟ್ಟುವ ಮಗುವೂ ಸುಂದರವಾಗಿಯೂ, ಚುರುಕಾಗಿಯೂ ಇರುತ್ತದೆ. ನಮ್ಮ ಮಗುವನ್ನು ರೂಪಿಸಬೇಕಾದ್ದು ನಾವೇ ಎಂಬುದು ಗರ್ಭಿಣಿಯರಿಗೆ ತಿಳಿದಿರಲಿ.

   

Leave a Reply