ಇನ್ನೊಬ್ಬ ರೋಹಿತ್‍ ಬೇಡ !

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 22.02.2016

ರೋಹಿತ್ ವೇಮುಲನು ಇಂದು ವೃತ್ತಪತ್ರಿಕೆಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾನೆ. ಸುದ್ದಿಯಲ್ಲಿದ್ದಾನೆ ಎನ್ನುವ ಬದಲು ಅದನ್ನು ಮೆರೆಸಲಾಗುತ್ತಿದೆ ಎಂಬುದೇ ಸರಿ. ಅವನೇನೋ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ. ದೇಶದಲ್ಲಿ ಉಚ್ಚ ಶಿಕ್ಷಣ ಪಡೆಯುವ ಲಕ್ಷಾಂತರ ವಿದ್ಯಾರ್ಥಿಗಳಿದ್ದಾರೆ. ಈ ಲಕ್ಷದಲ್ಲಿ ಆತ ಒಬ್ಬನಾಗಿದ್ದ. ಆದರೆ ಆತ ಆತ್ಮಹತ್ಯೆ ಮಾಡಿಕೊಂಡ, ಅದರಿಂದ ‘ಲಾಖೋ ಮೆ ಏಕ್ ಹೋ ಗಯಾ’ ಎಂದು ಅನಿಸಿದೆ. ಹೈದರಾಬಾದ್ ವಿಶ್ವವಿದ್ಯಾಲಯವು ಅವನ ಸಹಿತ ಐವರು ವಿದ್ಯಾರ್ಥಿಗಳನ್ನು ಆರು ತಿಂಗಳಿಗೆ ಅಮಾನತುಗೊಳಿಸಿತು, ಅವರ ವಿದ್ಯಾರ್ಥಿವೇತನ ನಿಂತು ಹೋಯಿತು. ಅವನನ್ನು ಉದ್ರೇಕಿಸಿದವರು ಮತ್ತು ಅವನ ತಲೆಯಲ್ಲಿ ಬಂಡಾಯ ತುಂಬಿದವರು ಮಾಯವಾದರು. ಅವರಲ್ಲಾರೂ ಅವನ ಬಗ್ಗೆ ಕಾಳಜಿ ವಹಿಸಲಿಲ್ಲ. ವಿದ್ಯಾರ್ಥಿವೇತನ ತಪ್ಪಿದ್ದರಿಂದ ಅವನಿಗೆ ಹಣದ ಅಡಚಣೆಯುಂಟಾಗಿ, ಅದನ್ನು ಪೂರೈಸಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಅವನಿಗೆ ಜೀವನದಲ್ಲಿ ನಿರಾಶೆಯುಂಟಾಗಿ, ಆ ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡ. ತನ್ನ ಆತ್ಮಹತ್ಯೆಯ ಹೊಣೆಯನ್ನು ಆತ ಯಾರ ಮೇಲೂ ಹೊರಿಸಲಿಲ್ಲ. ಆತನ ಈ ಪ್ರಾಮಾಣಿಕತೆಗೆ ಒಂದು ಸಲಾಂ.
ರೋಹಿತ್ ವೇಮುಲನು ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಎಂಬ ವಿದ್ಯಾರ್ಥಿ ಸಂಘಟನೆಯ ಸದಸ್ಯನಾಗಿದ್ದ. ಈ ಸಂಘಟನೆಯನ್ನು ನಡೆಸುವ ಎಲ್ಲರೂ ವಾಮಪಂಥೀ ವಿಚಾರದವರು, ಹಿಂದುವಿರೋಧಿಗಳು, ಹಿಂದುತ್ವವಿರೋಧಿಗಳಾಗಿದ್ದಾರೆ. ಹಿಂದುತ್ವವಾದಿಗಳೊಂದಿಗೆ ಸೆಣಸಲು ಅವರಿಗೆ ಹಿಂದುಳಿದವರು ಮತ್ತು ದಲಿತರು ಕಾಲಾಳು ಸೈನಿಕರಾಗುತ್ತಾರೆ. 18ರಿಂದ 25ರ ವಯಸ್ಸು, ಬಹು ಭಾವನಾಶೀಲ ಯೋಚನೆಯುಳ್ಳದ್ದು, ರೊಮ್ಯಾಂಟಿಕ್ ಆಗಿರುತ್ತದೆ. ಈ ರೊಮ್ಯಾಂಟಿಸಿಸಂ ಪ್ರೇಮದ ರೂಪದಲ್ಲೂ ವ್ಯಕ್ತವಾಗುತ್ತದೆ, ಹಾಗೆಯೇ ವಿಚಾರಗಳ ದಿಶೆಯಲ್ಲೂ ವ್ಯಕ್ತವಾಗುತ್ತದೆ. ರೋಹಿತ್ ವೇಮುಲನ ವಯಸ್ಸನ್ನು ನೋಡಿದರೆ ಆತ ಈ ವೈಚಾರಿಕ ರೊಮ್ಯಾಂಟಿಸಿಸಂಗೆ ಬಲಿಯಾದಂತೆ ತೋರುತ್ತದೆ.
ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಮನುಷ್ಯ ಜೀವನದಲ್ಲಿ ಆತ್ಮಹತ್ಯೆಯು ಎಲ್ಲಕ್ಕೂ ಕೆಟ್ಟ ಕೃತ್ಯವೆಂದೂ, ಪೌರುಷಹೀನತೆಯ ಕೃತ್ಯವೆಂದೂ ಭಾವಿಸಲ್ಪಟ್ಟಿದೆ. ಜೀವನವು ಸದಾ ಸಂಘರ್ಷಮಯವೇ. ಕೈಬೆರಳಲ್ಲಿ ಎಣಿಸುವಷ್ಟು ವ್ಯಕ್ತಿಗಳನ್ನು ಬಿಟ್ಟರೆ ಪ್ರತಿಯೊಬ್ಬನೂ ಜೀವನಸಂಘರ್ಷ ಮಾಡಬೇಕಾಗುತ್ತದೆ. ಅದರಲ್ಲಿ ಯಶಸ್ವಿಯಾಗಬೇಕಾಗುತ್ತದೆ. ವೇಮುಲನು ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಸದಸ್ಯನಾಗಿದ್ದ. ಈ ಅಸೋಸಿಯೇಶನ್ನಿನ ಕಾರ್ಯಕರ್ತರೆಂದೂ ರೋಹಿತ್‌ನಿಗೆ ಅಂಬೇಡ್ಕರರ ಕುರಿತು ತಿಳಿಸಿ ಹೇಳಿರಲಿಕ್ಕಿಲ್ಲ. ರೋಹಿತ್‌ನು ಆತ್ಮಹತ್ಯೆ ಮಾಡಿಕೊಂಡ ಆ ಕಾರಣಗಳು, ಅಂಬೇಡ್ಕರರ ಜೀವನದಲ್ಲಿ ಅನೇಕ ಬಾರಿ ಬಂದಿವೆ. ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಕೈಯಲ್ಲಿ ಹಣವಿಲ್ಲದೆ ಎರಡು ಬ್ರೆಡ್ ತುಂಡು, ಒಂದು ಹಪ್ಪಳ ಮತ್ತು ಕಪ್ ಹಾಲು ಕುಡಿದು ಬಾಬಾಸಾಹೆಬ್ ದಿನ ಕಳೆದರು. ಕಾರಣ ಅವರು ದೇಶಕ್ಕಾಗಿ ಬದುಕಬೇಕಾಗಿತ್ತು. ತಮ್ಮ ಸಮಾಜದ ಸಮಸ್ಯೆಗಳಿಗೆ ಪರಿಹಾರ ಶೋಧನೆ ಮಾಡಲು ಬದುಕಬೇಕಾಗಿತ್ತು. ಶಿಕ್ಷಣವನ್ನೆಲ್ಲ ಪೂರ್ಣಗೊಳಿಸಿ ಡಾ. ಅಂಬೇಡ್ಕರರು ಒಪ್ಪಂದದಂತೆ ಬರೋಡಾ ಸಂಸ್ಥಾನಕ್ಕೆ ಉದ್ಯೋಗಕ್ಕಾಗಿ ಹೋದರು. ಅಲ್ಲಿಯೂ ಅವರಿಗೆ ಮರಣಾಂತಿಕ ಯಾತನೆಯೇ ಕಾದಿತ್ತು. ವಾಸಿಸಲು ಸಾದಾ ಕೊಠಡಿ ಸಿಗುತ್ತಿರಲಿಲ್ಲ, ಕಛೇರಿಯಲ್ಲಂತೂ ನಿತ್ಯವೂ ಅವಮಾನ. ಬಾಬಾಸಾಹೆಬ್‌ರಿಗೆ ಇದರಿಂದ ದುಃಖವಾಯಿತು. ಅವರು ಒಂದು ಮರದ ಕೆಳಗೆ ಕುಳಿತು ತಮ್ಮ ದುಃಖಗಳಿಗೆ ಕಣ್ಣೀರ ರೂಪದಲ್ಲಿ ದಾರಿ ಮಾಡಿ ಕೊಟ್ಟರು. ಇಂತಹ ಪರಿಸ್ಥಿತಿಯು ನನ್ನ ಬಾಂಧವರಿಗೆ ಬರಬಾರದು, ಅದಕ್ಕಾಗಿ ನಾನು ಶಕ್ತಿ ಮೀರಿ ಶ್ರಮಿಸುವೆ, ಎಂದು ಅವರು ಸಂಕಲ್ಪ ಮಾಡಿದರು. ರೋಹಿತ್ ವೇಮುಲನಿಗೆ ಈ ಪ್ರಸಂಗ ಗೊತ್ತಿರಲಿಕ್ಕಿಲ್ಲ. ಅದು ಗೊತ್ತಿದ್ದಲ್ಲಿ ಆತ ಬಾಬಾಸಾಹೆಬ್‌ರನ್ನು ಅವಮಾನಿಸುವ ಈ ಆತ್ಮಹತ್ಯೆ ಮಾಡುತ್ತಿರಲ್ಲ. ಸಮಾಜವನ್ನು ಬದಲಾಯಿಸುವ ಸಂಕಲ್ಪ ಮಾಡುತ್ತಿದ್ದ. ಪುರುಷಾರ್ಥದ ಪೂಜೆಗೆ ಅಣಿಯಾಗುತ್ತಿದ್ದ.
ರೋಹಿತ್ ವೇಮುಲನಂತಹ ಸಮಾಜದ ಕೆಳವರ್ಗದ ತರುಣರ ತಲೆಕೆಡಿಸುವ ಕೆಲಸ ಮಾಡಿದ್ದ ವ್ಯಕ್ತಿಗಳೇ, ನಿಜವಾಗಿ ಅವನ ಆತ್ಮಹತ್ಯೆಗೆ ಹೊಣೆಗಾರರು. ಇಸೋಪನ ಒಂದು ನೀತಿಕಥೆಯಿದೆ. ಯುದ್ಧ ನಡೆಯುತ್ತಿರುತ್ತದೆ, ಡೋಲು-ತಮಟೆ ಮತ್ತು ರಣಕಹಳೆಗಳು ಜೋರಾಗಿ ಮೊಳಗುತ್ತಿರುತ್ತವೆ. ಶತ್ರುಗಳ ತುಕಡಿ ಬರುತ್ತದೆ, ಆ ಬ್ಯಾಂಡ್ ಪಥಕವನ್ನು ಸೆರೆಹಿಡಿಯುತ್ತದೆ. ಸೇನಾಪತಿ ಹೇಳುತ್ತಾನೆ, ‘‘ಇವರನ್ನೆಲ್ಲಾ ಕೂಡಲೇ ಕೊಂದು ಹಾಕಿ.’’ ಆಗ ಆ ವಾದಕರು ಹೇಳುತ್ತಾರೆ, ‘‘ಸ್ವಾಮೀ, ನಾವಂತೂ ಯುದ್ಧ ಮಾಡುತ್ತಿಲ್ಲ, ನಮ್ಮ ಕೈಯಲ್ಲಂತೂ ಶಸ್ತ್ರಗಳೇ ಇಲ್ಲ. ಹಾಗಾದರೆ ನಮ್ಮನ್ನೇಕೆ
ಕೊಲ್ಲುತ್ತೀರಾ ?’’ ಸೇನಾಪತಿ ಹೇಳುತ್ತಾನೆ, ‘‘ ನೀವೇನೋ ಯುದ್ಧ ಮಾಡುತ್ತಿಲ್ಲ, ನಿಜವೇ. ಆದರೆ ಸೈನ್ಯವು ಯುದ್ಧಮಾಡಲು ನೀವು ತೊಡಗಿಸುತ್ತಿದ್ದೀರಾ, ಅವರಲ್ಲಿ ಹುರುಪು ತುಂಬುತ್ತಿದ್ದೀರಾ, ಹಾಗೆಂದೇ ನಿಮ್ಮನ್ನೇ ಮೊದಲು ಕೊಲ್ಲಬೇಕು,’’ ರೋಹಿತ್ ವೇಮುಲನಂತಹ ಭಾವನಾಶೀಲ ವಿದ್ಯಾರ್ಥಿಗಳ ತಲೆಕೆಡಿಸಿದವರೇ, ಇಸೋಪನ ಕಥೆಯ ವಾದಕರು. ಇಸೋಪ ಅವರಿಗೆ ಮರಣದಂಡನೆ ನೀಡುತ್ತಾನೆ. ಪ್ರಜಾತಂತ್ರದಲ್ಲಿ ಹಾಗೆ ಮಾಡಲು ಬರುತ್ತಿಲ್ಲ, ಆದರೆ ಸಮಾಜವು ಅವರಿಗೆ ತಕ್ಕ ಶಾಸ್ತಿ ಮಾಡಬೇಕು.
ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಹೆಸರೆತ್ತಿ ಡಾ. ಅಂಬೇಡ್ಕರರ ವಿಚಾರಗಳ ಹೆಣ ಬೀಳಿಸುವ ಕೆಲಸವನ್ನು ಈ ಸಂಘಟನೆ ಮಾಡುತ್ತಿದೆ. ಬಾಬಾಸಾಹೆಬ್ ಬಗ್ಗೆ ಶ್ರದ್ಧೆ, ಭಕ್ತಿಯಿರುವವರು ಈ ಸಂಗತಿಯನ್ನು ಚೆನ್ನಾಗಿ ತಿಳಿಯಬೇಕಿದೆ. ಮಹಾರಾಷ್ಟ್ರದಲ್ಲಿ ನಾವು ಸಾಮಾಜಿಕ ಸಾಮರಸ್ಯದ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಬಾಬಾಸಾಹೆಬ್‌ರ ವಿಚಾರಗಳು ಮತ್ತು ಹೆಸರಿನ ಬಗ್ಗೆ ಯೋಚಿಸುತ್ತೇವೆ. ಆದರೆ ನಮ್ಮನ್ನೂ ಬಹು ಕಾಳಜಿಯಿಂದ ಪರಿಶೀಲಿಸಿ ನೋಡುವ ಅಂಬೇಡ್ಕರೀ ವಿಚಾರವಂತರಿದ್ದಾರೆ, ಚಳವಳಿ ಮಾಡುವವರಿದ್ದಾರೆ, ರಾಜಕೀಯ ನಾಯಕರಿದ್ದಾರೆ. ಅಂತೆಯೇ ಅಂಬೇಡ್ಕರ್ ಹೆಸರು ಹಚ್ಚಿಕೊಂಡವರಾರು, ಅದನ್ನೇಕೆ ಹಚ್ಚಿಕೊಂಡಿದ್ದಾರೆ, ಅವರ ಹಿಂದೆ ಯಾವ ಮಿಶನರಿಗಳಿದ್ದಾರೆ, ಯಾವ ಮುಸ್ಲಿಂ ಸಂಘಟನೆಗಳಿವೆ ಎಂಬುದನ್ನು ಶೋಧನೆ ಮಾಡಬೇಕು. ಈ ವಿಷಯದಲ್ಲಿ ಎಚ್ಚರಗೇಡಿಗಳಾದರೆ, ಬಾಬಾಸಾಹೆಬ್‌ರ ಪುತ್ರರು ನಕ್ಸಲೀಯರಾಗಲು ಸಮಯ ಹಿಡಿಯದು ಅಥವಾ ತಿಳಿಗೇಡಿಗಳಾಗಿ ಐಎಸ್‌ಐಯ ಹಸ್ತಕರಾಗುವುದನ್ನೂ ನಿರಾಕರಿಸಲಾಗದು. ಕಾರಣ, ಈ ಮಂದಿಯ ಜಾಲಗಳು ಅದೆಷ್ಟು ಜಾಣ್ಮೆಯಿಂದ ಹೆಣೆದಿವೆಯೆಂದರೆ, ಅದರಲ್ಲಿ ಸಿಲುಕಿದರೂ ತಾವು ಸಿಲುಕಿದ್ದೇ ತಿಳಿಯದು.
ರೋಹಿತ್ ಬಗ್ಗೆಯೇ ಯೋಚಿಸೋಣ. ಮುಂಬಯಿ ಭಯೋತ್ಪಾದಕ ದಾಳಿಯ ಯಾಕೂಬ್ ಮೆಮನ್‌ನಿಗೆ ಗಲ್ಲುಶಿಕ್ಷೆ ಜಾರಿಯಾಯಿತು. ಅವನಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಭೆ ನಡೆಸಲಾಯಿತು. ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ನಿನ ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಿದರು. ಬಾಬಾಸಾಹೆಬ್ ಒಳಹೊರಗೂ ರಾಷ್ಟ್ರಭಕ್ತರಾಗಿದ್ದರು. ದೇಶದ್ರೋಹಿಗಳನ್ನು ಅವರು ಕಟುಶಬ್ದಗಳಲ್ಲಿ ಖಂಡಿಸಿದ್ದಾರೆ. ಜಿನ್ನಾ ಅವರ ಸಮಕಾಲೀನರು. ಇಬ್ಬರ ಗಾಂಧಿವಿರೋಧ ಬಹು ಅತಿರೇಕದ್ದೇ. ಆದರೆ ಬಾಬಾಸಾಹೆಬ್ ಜಿನ್ನಾರನ್ನೆಂದೂ ಭೇಟಿ ಮಾಡಲಿಲ್ಲ, ಅವರೊಂದಿಗೆ ಕೈಜೋಡಿಸಲಿಲ್ಲ. ಪಾಕಿಸ್ತಾನವಾಗಿದ್ದು ಒಳ್ಳೆಯದಾಯಿತು ಎಂದು ಅವರು ಹೇಳುತ್ತಿದ್ದರು. ಅಲ್ಲಿಯ ಮುಸಲ್ಮಾನರು ಭಾರತದಲ್ಲಿ ಇರುತ್ತಿದ್ದರೆ ಹಿಂದುಗಳು ಸ್ವತಂತ್ರರಾಗುತ್ತಿದ್ದರು, ಆದರೆ ಮುಕ್ತರಾಗುತ್ತಿರಲಿಲ್ಲ. ಈ ವಾಕ್ಯವು ಅವರ ‘ಥಾಟ್ಸ್ ಆನ್ ಲಿಂಗ್ವಿಸ್ಟಿಕ್ ಸ್ಟೇಟ್ಸ್’ ಎಂಬ ಪುಸ್ತಕದ್ದು. ಮುಸಲ್ಮಾನರ ಕುರಿತಾಗಿ ಬಾಬಾಸಾಹೆಬ್‌ರ ಅಭಿಪ್ರಾಯವು ಬಹು ಸ್ಪಷ್ಟ ಮತ್ತು ದೇಶಹಿತದ್ದಾಗಿತ್ತು. ರೋಹಿತ್‌ನಿಗೆ ಈ ಸಂಗತಿ ಹೇಳಿದ್ದರೆ, ಆತ ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದನೆಂದು ನನಗನಿಸುತ್ತಿಲ್ಲ.
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಇಂತಹ ದೇಶಘಾತಕ ಚಟುವಟಿಕೆಗಳು ತುಂಬ ನಡೆಯುತ್ತಿರುತ್ತವೆ. ಅದರಲ್ಲೊಂದು ಬೀಫ್ ಫೆಸ್ಟಿವಲ್ ಕಾರ್ಯಕ್ರಮವಾಗಿತ್ತು. ಡಾ. ಅಂಬೇಡ್ಕರರು ಪ್ರಾಚೀನ ಭಾರತದ ವ್ಯಾಪಾರಗಳ ಕುರಿತು ಒಂದು ಪ್ರಬಂಧ ಬರೆದಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ, ಭಾರತದಲ್ಲಿ ವ್ಯವಸಾಯ ಬಹು ಸಮೃದ್ಧವಾಗಿತ್ತು. ಹಸು ಮತ್ತು ಎತ್ತುಗಳು ವ್ಯವಸಾಯಕ್ಕೆ ಬಹು ಉಪಯುಕ್ತವಾಗಿದ್ದವು. ಅವುಗಳ ಉಪಯುಕ್ತತೆ ಗಮನಕ್ಕೆ ಬಂದ
ನಂತರ ಗೋಹತ್ಯೆಯನ್ನು ನಿಷೇಧಿಸಲಾಯಿತು. ಕೇವಲ ಗೋಹತ್ಯೆ ನಿಷೇಧಿಸುವುದರಿಂದ ಜನರು ಗೋವಿನ ಹತ್ಯೆ ನಿಲ್ಲಿಸಲಾರರು. ಹಾಗೆಂದೇ ಅದಕ್ಕೆ ಬೆಂಬಲವಾಗಿ ಧರ್ಮದ ಅಧಿಷ್ಠಾನವನ್ನು ನಿರ್ಮಿಸಲಾಯಿತು. ಬಾಬಾಸಾಹೆಬ್ ಹೆಸರಿನಲ್ಲಿ ಸಂಸ್ಥೆಯನ್ನು ಆರಂಭಿಸಿ ಬೀಫ್ ಫೆಸ್ಟಿವಲ್ ಆಯೋಜಿಸುವುದು, ಅವರಿಗೆ ಘೋರ ಅಪಮಾನವಾಗಿದೆ.
ಬಾಬಾಸಾಹೆಬ್‌ರು ಭಗವಾನ್ ಗೌತಮ ಬುದ್ಧನನ್ನು ತಮ್ಮ ಮಹಾನ್ ಗುರುವೆಂದು ನಂಬಿದರು. ನಮಗೆಲ್ಲ ಗೊತ್ತಿದೆ, 1956ರಲ್ಲಿ ಅವರು ನಾಗಪುರದಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧಮತವನ್ನು ಸ್ವೀಕರಿಸಿದರು. ಗೌತಮ ಬುದ್ಧನು ಅಹಿಂಸೆಯ ಉಪಾಸಕನಾಗಿದ್ದ. ಗೋವಿನ ಹತ್ಯೆಯನ್ನು ಡಾ.ಅಂಬೇಡ್ಕರರು ಬಹು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. ಗೋವಿನ ಕುರಿತು ಅವರ ವಿಚಾರಗಳು ಅವರದೇ ಶಬ್ದಗಳಲ್ಲಿ ಹೀಗಿವೆ, ‘‘ಗೋವಿನ ಕುರಿತು ಅವರ ದೃಷ್ಟಿಕೋನ ಹೇಗಿತ್ತೆಂದರೆ, ಅವು ತಮ್ಮ ತಾಯಿ-ತಂದೆ, ಬಂಧುಗಳಿಗೆ ಸಮಾನವಾಗಿವೆ. ಅವು ತಮ್ಮ ಪರಮಮಿತ್ರರು ಹಾಗೂ ಅವುಗಳಿಂದ ಉತ್ತಮ ಔಷಧಿಗಳು ತಯಾರಾಗುತ್ತವೆ. ಆದರೆ ಮೆಲ್ಲಮೆಲ್ಲನೆ ರಾಜನ ವೈಭವ, ಅವರ ಸುಂದರ ಸ್ತ್ರೀಯರು, ಸುಂದರ ರಥವನ್ನು ಕಂಡು ಅವರಲ್ಲಿ ಪರಿವರ್ತನೆಯುಂಟಾಯಿತು. ಅವರಿಗೂ ಸ್ತ್ರೀಯರು, ಗೋಧನಗಳ ಮೋಹವುಂಟಾಯಿತು. ಆಗ ಅವರು ಕೆಲವು ಮಂತ್ರಗಳನ್ನು ರಚಿಸಿದರು ಮತ್ತು ಇಕ್ಷ್ವಾಕು ರಾಜನ ಬಳಿಗೆ ಹೋಗಿ ಅವನಿಗೆ ಹೇಳಿದರು, ನಿನ್ನ ಬಳಿ ಧಾರಾಳ ಧನವಿದೆ, ಹಾಗಾದರೆ ನೀನು ಯಜ್ಞ ಮಾಡು.
ರಾಜನು ಅವರು ಹೇಳಿದಂತೆ ಯಜ್ಞ ಮಾಡಿದನು ಹಾಗೂ ಬ್ರಾಹ್ಮಣರಿಗೆ ಸುಂದರ ಸ್ತ್ರೀಯರು, ರಥ, ಕುದುರೆ, ಗೋವುಗಳನ್ನು ದಾನ ಮಾಡಿದನು. ಬ್ರಾಹ್ಮಣರು ಮುಂದೆ ಸಂಪತ್ತು ಲೋಭದಿಂದ ಇಂತಹ ಅನೇಕ ಯಜ್ಞಗಳನ್ನು ಮಾಡಿಸಿದರು ಹಾಗೂ ಅವುಗಳಲ್ಲಿ ಲಕ್ಷಾಂತರ ಗೋವುಗಳನ್ನು ವಧಿಸಿದರು.
ಗೋವಿನ ವಧೆಯನ್ನು ಕಂಡು ದೇವತೆಗಳು, ಪಿತೃಗಳು ಮತ್ತು ಇಂದ್ರ ಹೇಳಿದರು, ಇದು ಅಧರ್ಮ. ಗೋವಿನ ಹತ್ಯೆ ನಡೆಯುವುದಕ್ಕೆ ಮುಂಚೆ ಮೂರೇ ರೋಗಗಳಿದ್ದವು- ಇಚ್ಛೆ, ಹಸಿವು ಮತ್ತು ವಾರ್ಧಕ್ಯ. ಈ ನೀಚಕರ್ಮಗಳಿಂದಾಗಿ ಅವುಗಳ ಸಂಖ್ಯೆ ತೊಂಭತ್ತೆಂಟು ಆಯಿತು. ಈ ನೀಚಕರ್ಮಗಳಿಂದಾಗಿ ಕ್ಷತ್ರಿಯ, ವೈಶ್ಯ, ಶೂದ್ರರಲ್ಲಿ ಒಡಕುಂಟಾಗಿ ಅವರ ಅವನತಿಯುಂಟಾಯಿತು.’’
ರೋಹಿತ್ ವೇಮುಲ ಒಬ್ಬ ವಿದ್ಯಾರ್ಥಿ. ವಿದ್ಯಾರ್ಥಿಯೆಂದೇ ಅವನ ಗುರುತು, ಇದೇ ಅವನ ಜಾತಿ. ಆದರೆ ಇಂದು ದೇಶದ ಎಲ್ಲ ಪ್ರಗತಿಪರರು, ವಾಮಪಂಥಿಗಳು, ಜಾತ್ಯತೀತರು ಅವನ ಜಾತಿಯ ಶೋಧನೆಗೆ ತೊಡಗಿದ್ದಾರೆ.ಆತ ದಲಿತನಾಗಿದ್ದ, ವಡ್ಡರ್ ಆಗಿದ್ದ, ಓಬಿಸಿ ಆಗಿದ್ದ, ಹೀಗೆ ವಿವಿಧ ಶೋಧನೆಗಳು ಆಗಿವೆ. ಈ ಶೋಧನೆಗಳಿಂದ ಆಮೇಲೆ ತುಚ್ಛ ಜಾತೀಯ ರಾಜಕೀಯ ನಡೆಯುತ್ತಿದೆ. ಹೀಗೆ ರಾಜಕೀಯ ಮಾಡುವವರು ನಾವು ಜಾತಿಮುಕ್ತರಾಗಬೇಕು, ಎಂದು ದೇಶಕ್ಕೆ ಉಪದೇಶ ನೀಡುತ್ತಾರೆ. ಜಾತಿಗಳು ಸಾಮಾಜಿಕ ಐಕ್ಯಕ್ಕೆ ಮಾರಕವಾಗಿವೆ ಎಂದರೆ, ಇನ್ನೊಂದು ಕಡೆ ಇದೇ ಮಂದಿ ದೌರ್ಭಾಗ್ಯದಿಂದ ಆತ್ಮಹತ್ಯೆ ಮಾಡಿಕೊಂಡವನ ಕೈಯಲ್ಲಿನ ಜಾತಿಯ ಬೆಣ್ಣೆ ತಿನ್ನುತ್ತ ಕೂತಿದ್ದಾರೆ. ಇಡೀ ಪ್ರಕರಣಕ್ಕೆ ಜಾತೀಯ ಬಣ್ಣ ನೀಡಲು ಯತ್ನಿಸುತ್ತಿದ್ದಾರೆ. ಅದರಲ್ಲಿ ಹುಚ್ಚಾಟವೇನಲ್ಲ, ರಾಜಕೀಯ ಧೂರ್ತತೆ ಮತ್ತು ಮುತ್ಸದ್ದಿತನವಿದೆ. ಆದರೆ ಈ ರಾಜಕೀಯ ಮುತ್ಸದ್ದಿತನ ದೇಶಕ್ಕೆ ಘಾತಕವಾಗಿದ್ದು, ಈ ಕಾರಣಕ್ಕೆ ಅದನ್ನು ಖಂಡಿಸಿದಷ್ಟೂ ಕಡಿಮೆಯೇ.
ರೋಹಿತ್‌ನ ಆತ್ಮಹತ್ಯೆಯ ವಿಷಯವೆತ್ತಿ ಅನೇಕ ಸಕಾರಾತ್ಮಕ ಸಂಗತಿಗಳನ್ನು ಮಾಡಲು ಸಾಧ್ಯವಿತ್ತು. ನಮ್ಮ ವಿಶ್ವವಿದ್ಯಾಲಯಗಳು ಜಾಗತಿಕ ಕೀರ್ತಿಯ ವಿಶ್ವವಿದ್ಯಾಲಯಗಳಾಗಬೇಕು. ನಲಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳ ಭವ್ಯ, ದಿವ್ಯ ಪರಂಪರೆಗಳನ್ನು ನಾವು ಪುನರುಜ್ಜೀವನಗೊಳಿಸಬೇಕು. ಅದಕ್ಕಾಗಿ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲೂ ಶಿಕ್ಷಣ ನೀಡುವ ಜ್ಞಾನಮಹರ್ಷಿಗಳ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಜಿಜ್ಞಾಸುಗಳಾಗಿರಬೇಕು. ವಿದ್ಯೆಯ ಸಾಧನೆ ಮಾಡುವವರಾಗಿರಬೇಕು. ಅದಕ್ಕೆ ಅವಶ್ಯಕವಾದ ಸಾಧನಗಳು ಮತ್ತು ಧನವನ್ನು ಸರ್ಕಾರ ಮತ್ತು ಸಮಾಜವು ಒದಗಿಸಬೇಕು. ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವಲ್ಲದೆ ಮತ್ತಾವ ಚಟುವಟಿಕೆ ನಡೆಸಲೂ ಅನುಮತಿಯಿರಬಾರದು. ವಿಶ್ವವಿದ್ಯಾಲಯದ ಸಂಘಟನೆ ರಾಜಕೀಯವಾಗಿರಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯ ಉದರಪೋಷಣೆ ಅವಶ್ಯಕತೆಗಳ ಬಗ್ಗೆ ವಿಶ್ವವಿದ್ಯಾಲಯವು ಕಾಳಜಿ ವಹಿಸಬೇಕು. ವಿದ್ಯಾರ್ಥಿಯ ಗುಣಮಟ್ಟವನ್ನು ಆತನ ಜ್ಞಾನಜಿಜ್ಞಾಸೆಯಿಂದಲೇ ತಪಾಸಣೆ ಮಾಡಬೇಕು. ಅಲ್ಲಿ ಜಾತಿ, ವರ್ಣ ಮತ್ತು ವರ್ಗ ಲೆಕ್ಕಿಸಲೇಬಾರದು. ವಿಶ್ವವಿದ್ಯಾಲಯದ ವಾತಾವರಣವೆಲ್ಲ ಸಮತೆ ಮತ್ತು ಭ್ರಾತೃಭಾವದಿಂದ ಕೂಡಿರಬೇಕು. ಏಕೆಂದರೆ ಇಲ್ಲಿ ಆಗುವ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಯು ಜೀವನದಲ್ಲಿ ಕಾಲಿಡುವನು. ಅದು ಅವನ ಬುತ್ತಿ. ದೇಶದ ಕೆಲವು ವಿಶ್ವವಿದ್ಯಾಲಯಗಳು ಈ ಶಿಕ್ಷಣಕ್ಕಿಂತಲೂ ಸಮಾಜದಲ್ಲಿ ಕಿಚ್ಚೆಬ್ಬಿಸುವ ಪ್ರಶಿಕ್ಷಣ ನೀಡಲು ಹವಣಿಸುತ್ತಿರುವುದು ದುರ್ಭಾಗ್ಯಕರ.
ಆದ್ದರಿಂದ ನಮ್ಮ ದೇಶದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಅವಶ್ಯಕತೆಗಳನ್ನು ಗಮನಿಸಿ ಅಗತ್ಯವಿದ್ದರೆ ವಿಶ್ವವಿದ್ಯಾಲಯ ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕು. ಯಾವನೇ ವಿದ್ಯಾರ್ಥಿಯು ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವುದು ರಾಷ್ಟ್ರೀಯ ಪಾಪವೆಂದು ತಿಳಿಯಬೇಕು. ನಮ್ಮ ಮಕ್ಕಳನ್ನು ಪುರುಷಾರ್ಥಿಗಳಾಗಿ ಮಾಡಬೇಕಿದೆ. ಅವರಲ್ಲಿ ಆತ್ಮಗೌರವದ ತಿಳಿವಳಿಕೆ ಮೂಡಿಸಬೇಕು. ಕಠಿಣ ಸವಾಲುಗಳನ್ನು ಎದುರಿಸುವ ಮನೋಧೈರ್ಯವನ್ನು ಅವರಲ್ಲಿ ಮೂಡಿಸಬೇಕು. ಇಂದು ಇದರಲ್ಲಿ ನಮ್ಮಲ್ಲೇನಾದರೂ ದೋಷಗಳಿದ್ದರೆ, ನಮ್ಮ ದೋಷವೆಲ್ಲಿದೆಯೆಂದು ಶೋಧನೆ ಮಾಡಬೇಕು ಹಾಗೂ ಈಗ ಇನ್ನೊಬ್ಬ ರೋಹಿತ್ ಬೇಡವೆಂಬ ಸಂಕಲ್ಪ ಮಾಡಬೇಕು.

   

Leave a Reply