ಇವರು ಯಾರೂ ಏನೂ ಓದುವುದೇ ಇಲ್ಲವೇ?

ಸಂಸ್ಕೃತಿ-ಕಲೆ - 0 Comment
Issue Date : 23.10.2013

ನಮ್ಮ ಶಿಲ್ಪಕಲಾ ಪರಂಪರೆಯು ಅದ್ಭುತವಾದುದು, ವಿಶಿಷ್ಟವಾದುದು. ನೂರಾರು ದೇವಾಲಯಗಳನ್ನು ನೋಡಿದ್ದೇನೆ. ಪ್ರಾಚೀನ ದೇವಾಲಯಗಳು – ಆಧುನಿಕ ದೇವಾಲಯಗಳು, ಅವೆಲ್ಲವುಗಳ ವಿನ್ಯಾಸ – ಕುಸುರಿ ಕೆಲಸ – ಪ್ರತಿಮೆಗಳ ಅಂಗಸೌಷ್ಠವ ಎಲ್ಲ ಅದ್ಭುತಗಳೇ. ಅಬುವಿನಲ್ಲಿರುವ ಜೈನ ದೇವಾಲಯಗಳ ಸಂಕೀರ್ಣವಂತೂ ಕೆತ್ತನೆ ಕಲೆಯ ಪರಮೋಚ್ಚ ಉದಾಹರಣೆಯಾಗಿದೆ. ಅಂತೆಯೇ ಎತ್ತರ, ಗಾತ್ರಗಳಲ್ಲಿಯೂ ಕೆಲವು ದೇವಾಲಯಗಳು ಅಚ್ಚರಿಗೊಳಿಸುತ್ತವೆ. ಹಿಮಾಲಯದ ಎತ್ತರದಲ್ಲಿ, ಯಾವುದೋ ಕಾಡಿನ ನಡುವೆ, ನದಿಯೊಂದರ ಮಧ್ಯೆ, ಹೀಗೆ ನಮ್ಮ ಪೂರ್ವಿಕರು ಅದು ಹೇಗೆ ಕಲ್ಲುಗಳನ್ನು ಸಾಗಿಸಿದರು, ಕೆತ್ತಿದರು, ನಿರ್ಮಿಸಿದರು; ಇಂತಹ ಅಚ್ಚರಿಯ ಪರ್ವಕ್ಕೆ ಕೊನೆ ಮೊದಲಿಲ್ಲ.
  ಕೆಲವು ಶಿಲ್ಪಗಳು ತುಂಬ ತುಂಬ ಕಾಡುತ್ತವೆ. ದಶಕಗಳೇ ಉರುಳಿದರೂ ವಿಸ್ಮೃತಿಯೆಡೆಗೆ ಜಾರುವುದಿಲ್ಲ. ಅಜಂತಾದ ಗುಹೆಯೊಂದರಲ್ಲಿ ಬುದ್ಧನ ಧ್ಯಾನಮೂರ್ತಿಯೊಂದಿದೆ. ತುಂಬ ದೊಡ್ಡದು. ಆ ಮೂರ್ತಿಯನ್ನು ಮೂರೂ ದಿಕ್ಕುಗಳಿಂದ ಬೆಳಗುವ ಸರ್ಚ್ ಲೈಟುಗಳಿವೆ. ಅದೇ ಪ್ರತಿಮೆ, ಅದೇ ಮುಖ. ಒಂದು ದಿಕ್ಕಿನಿಂದ ಬೆಳಕು ಬಿಟ್ಟಾಗ ಹಸನ್ಮುದ್ರೆ, ನಗುಮುಖ. ಇನ್ನೊಂದು ಬದಿಯಿಂದ ವಿಷಾದ ಮುದ್ರೆ, ಭವಸಾಗರದ ನೋವಿನ – ದುಃಖದ ಅಭಿವ್ಯಕ್ತಿ. ಎದುರಿನಲ್ಲಿ ಪ್ರಶಾಂತವಾದ ಧ್ಯಾನಮುದ್ರೆ. ನಿಜಕ್ಕೂ ಈ ಬುದ್ಧನ ಪ್ರತಿಮೆ, ಒಂದು ಅದ್ಭುತ. ಅಷ್ಟೇ ಅಲ್ಲ. ಅಲೌಕಿಕವಾದ ಪರಮಾದ್ಭುತ. ಇಂತಹುದೊಂದು ಮಹಾಶಿಲ್ಪವನ್ನು ಕಲ್ಪಿಸಿಕೊಂಡ, ರೂಪಿಸಿದ, ಕೆತ್ತಿದ ಶಿಲ್ಪಿಗಳ ಮಹಾನ್ ಪರಂಪರೆ ನಮ್ಮದು. ಎಲ್ಲೂ ಒಂದು ತುಂಡು ತಂದು ಜೋಡಿಸಿಲ್ಲ. ಮೇಲಿನಿಂದ ಕೆಳಗೆ ಅದು ಹೇಗೆ ಕೆತ್ತಿದರೋ? ಈ ಶಿಲ್ಪಿಗಳೆಂದರೆ ಕಲಾವಂತಿಕೆ – ಶಿಸ್ತು – ತಪಸ್ಸುಗಳನ್ನು ಮೇಳಯಿಸಿಕೊಂಡ ಮಹಾನ್ ಪ್ರತಿಭೆಗಳು.
  ಇನ್ನು ನಮ್ಮ ಬಾಹುಬಲಿ, ಬರೀ ಪ್ರತಿಮೆಯಲ್ಲ. ಶಿಲೆಯ ರೂಪದ ಮಹಾಕಾವ್ಯ. ಕಲ್ಲಿನ ಮೇಲೆ ಬರೆದ ಅಧ್ಯಾತ್ಮ. ಶ್ರವಣಬೆಳಗೊಳದ ಈ ಏಕಶಿಲಾವಿಗ್ರಹದ ಅದ್ಭುತ ಮುಖ, ವಿಷಾದಪೂರ್ಣ ಮಂದಹಾಸ, ವೈರಾಗ್ಯಭಾವ ಅದ್ವಿತೀಯ. ಇಷ್ಟು ದೊಡ್ಡ ಗಾತ್ರದ ಶಿಲೆಯಲ್ಲಿ  ಇಂತಹ ಭಾವನಿರ್ಮಿತಿ ಅದು ಹೇಗೆ ಸಾಧ್ಯವಾಯಿತೋ!
  ಅಂತೆಯೇ, ಸಾರನಾಥದ ಬುದ್ಧ, ಚಿದಂಬರಂನ ನಟರಾಜ, ಮತ್ತು ಇದೇ ಅಲೌಕಿಕ ಶಿಲ್ಪಕಲಾಕೃತಿಗಳ ಸಾಲಿಗೆ ಸೇರುವ ಮತ್ತೊಂದು ಭವ್ಯ ಶಿಲ್ಪವೆಂದರೆ, ವಿದಿಶಾ ಬಳಿಯ ವರಾಹಾವತಾರ. ಮಧ್ಯಪ್ರದೇಶದ ವಿದಿಶಾ ನಗರವು ಸಾಂಚಿಯಿಂದ 10 ಕಿ.ಮೀ. ದೂರವಿದೆ. ಇಂದಿಗೆ 25 ಶತಮಾನಗಳ ಹಿಂದೆಯೇ, ಪ್ರಖ್ಯಾತಿ ಪಡೆದ ನಗರವಿದು. ತಂದೆ ಬಿಂದುಸಾರನು ರಾಜನಾಗಿದ್ದಾಗಲೇ, ಯುವಕ ಅಶೋಕನು ವಿದಿಶಾ ನಗರದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಸುಂಗರು, ಗುಪ್ತರು, ಶಾತವಾಹನರು, ರಾಷ್ಟ್ರಕೂಟರ 3ನೇ ಕೃಷ್ಣ, ಚಾಲುಕ್ಯರು ಸಹ ಈ ಪ್ರದೇಶವನ್ನು ಆಳಿದ್ದಿದೆ. ಹಾಗೆಂದೇ, ಇಲ್ಲಿ ಕಲೆ – ಸಂಸ್ಕೃತಿ – ವ್ಯಾಪಾರಗಳೂ ಪ್ರಾಧಾನ್ಯ ಪಡೆದಿದ್ದವು. ವಿದಿಶಾ ಬಳಿಯ ಉದಯಗಿರಿ ಗುಹೆಗಳಲ್ಲಿ ಸುಂದರ ಕಲಾಕೃತಿಗಳಿವೆ. ಅದರಲ್ಲೂ 5ನೇ ಗುಹೆಯಲ್ಲಿರುವ ವರಾಹಾವತಾರವಂತೂ ಒಂದು ಅಪರೂಪದ ಉಬ್ಬುಶಿಲ್ಪ. ಹಿರಣ್ಯಕಶಿಪುವನ್ನು ನರಸಿಂಹಸ್ವಾಮಿಯು ವಧಿಸುವ ತುಂಬ ಶಿಲ್ಪಕಲಾಕೃತಿಗಳಿವೆ. ಕರ್ನಾಟಕದಲ್ಲಿಯೇ ಇಂತಹ ನೂರಾರು ಪ್ರತಿಮೆಗಳನ್ನು ನೋಡಬಹುದು. ಆದರೆ ವರಾಹಾವತಾರದ ಪ್ರತಿಮಾಸಷ್ಟಿ ತುಂಬ ಅಪರೂಪ. ಹಿರಣ್ಯಾಕ್ಷನು ಭೂಮಿಯನ್ನೇ ಕದ್ದು ಪಾತಾಳದಲ್ಲಿ ಅಡಗಿಸಿಡುತ್ತಾನೆ. ವಿಷ್ಣುವು ವರಾಹ ರೂಪದಲ್ಲಿ ಹೋಗಿ ಹಿರಣ್ಯಾಕ್ಷನನ್ನು ಸಂಹರಿಸಿ, ಭೂಮಿಯನ್ನು ಕಾಪಾಡುತ್ತಾನೆ.
 ವಿದಿಶಾ ಬಳಿಯ ಈ ವರಾಹಾವತಾರದ ಉಬ್ಬುಶಿಲ್ಪವು ಒಂದು ಪರಮಾದ್ಭುತ. ಆ ವೀರಭಾವ, ಅಂಗಸೌಷ್ಠವ, ಸ್ತ್ರೀರೂಪದ ಭೂಮಿಯನ್ನು ಎತ್ತಿ ಹಿಡಿದು ರಾಕ್ಷಸನನ್ನು ವಧಿಸುತ್ತಿರುವ ದೃಶ್ಯವು ವಿಸ್ಮೃತಿಗೆ ಎಂದೂ ಜಾರದ ವಿಸ್ಮಯ. ವಿಗ್ರಹಭಂಜಕರ ದಾಳಿಯ ನಡುವೆಯೂ ಉಳಿದಿರುವ ಈ ಶಿಲ್ಪಕಲಾಕೃತಿಯು ಚಿರಕಾಲ ಕಾಡುತ್ತದೆ. ಇಂತಹ ಅದ್ಭುತಗಳ ನಿರ್ಮಿತಿ ಸಾಧ್ಯವಾದುದಾದರೂ ಹೇಗೆ ಎಂಬುದನ್ನು ಯೋಚಿಸಿದಾಗ, ಲೇಖಕ-ಸಂಶೋಧಕ ಸೀತಾರಾಮ ಗೋಯಲರ ಅಪೂರ್ವ ಚಿಂತನೆಗಳು ಬೆಳಕನ್ನು ಚೆಲ್ಲುತ್ತವೆ.
  ಮಹರ್ಷಿ ಅರವಿಂದರಂತಹ ಋಷಿಮುನಿಗಳು, ಆನಂದ ಕುಮಾರಸ್ವಾಮಿ, ಸ್ಟೆಲ್ಲಾ ಕ್ರ್ಯಾಮ್‌ರಿಶ್, ಅಲಿಸ್ ಬೋನರ್‌ರಂತಹ ವಿದ್ವಾಂಸರು ಹಿಂದೂ ವಿಗ್ರಹಾರಾಧನೆಯ ಬಗೆಗೆ ಅಧ್ಯಯನ ಮಾಡಿದ್ದಾರೆ, ಧ್ಯಾನಿಸಿದ್ದಾರೆ, ಚಿಂತನೆ ನಡೆಸಿದ್ದಾರೆ. ಮಾನವಕೋಟಿಯ ಮನೋಭೂಮಿಕೆಯ ಸಾಮಾನ್ಯ ಮಿತಿಗಳನ್ನು ಮೀರಿದ, ದಾಟಿದ ರೂಪ – ಸತ್ತ್ವ – ಗುಣಲಕ್ಷಣಗಳನ್ನು ಈ ಹಿಂದೂ ವಿಗ್ರಹಗಳಲ್ಲಿ ಕಾಣುತ್ತೇವೆ, ಎಂದು ಅವರೆಲ್ಲಾ ದೃಢವಾಗಿ ಗಟ್ಟಿಯಾಗಿ ಹೇಳುತ್ತಾರೆ. ಇವು ಮನುಷ್ಯರ – ಪ್ರಾಣಿಪಕ್ಷಿಗಳ ಕೇವಲವಾದ ಭೌತಿಕ ರೂಪಗಳ ನೆರಳಚ್ಚುಗಳು ಅಲ್ಲ ಎಂದೂ ಹೇಳಿದ್ದಾರೆ. ಅವು ಅನಂತತೆಯನ್ನು – ಅಸೀಮವಾದುದನ್ನು ಒಂದು ಪರಿಮಿತಿಯಲ್ಲಿ – ಸೀಮಿತ ಸ್ವರೂಪದಲ್ಲಿ ಕಾಣುವಂತಹ, ಅಮೂರ್ತವಾದುದನ್ನು ಮೂರ್ತಸ್ವರೂಪದಲ್ಲಿ ನೋಡುವಂತಹ ಪರಿಕಲ್ಪನೆಗಳು ಎನ್ನುತ್ತಾರೆ. ಅವು ಅವುಗಳ ಭೌತಿಕ ಸ್ವರೂಪಗಳನ್ನು ಮೀರಿದ ಅತೀತವಾದುದನ್ನು ಹೇಳುತ್ತವೆ. ಬಹಿರಂಗದಿಂದ ಅಂತರಂಗದೆಡೆಗೆ ನಮ್ಮ ಆಲೋಚನೆಗಳು – ಚಿಂತನೆಗಳು ಹರಿಯುವಂತೆ ಮಾಡುತ್ತವೆ ಎಂದಿದ್ದಾರೆ.
  ಹಿಂದೂ ಶಿಲ್ಪಶಾಸ್ತ್ರಗಳು, ಶಿಲೆಯಲ್ಲಿ – ಲೋಹದಲ್ಲಿ ಮತ್ತು ಬೇರೆ ಬೇರೆ ವಸ್ತು ಬಳಸಿ ಈ ಹಿಂದೂ ವಿಗ್ರಹಗಳನ್ನು ಕೆತ್ತುವಾಗ, ರೂಪಿಸುವಾಗ ಏನೆಲ್ಲಾ ಮಾಡಬೇಕು, ಯಾವೆಲ್ಲಾ ಬಾಹ್ಯರೂಪದ ತಾಂತ್ರಿಕವಾದ ಸೂತ್ರ – ವಿಧಾನಗಳನ್ನು ಅನುಸರಿಸಬೇಕು, ಎನ್ನುವುದನ್ನು ಮಾತ್ರವೇ ಹೇಳುವುದಿಲ್ಲ. ಒಂದು ದೇವತೆಯ ಮೂರ್ತಿಯನ್ನು ಕೆತ್ತುವ – ನಿರ್ಮಿಸುವ ಪೂರ್ವದಲ್ಲಿ, ಆ ದೇವತೆಯ ಸ್ವರೂಪ ಲಕ್ಷಣಗಳನ್ನು ಮನೋಭೂಮಿಕೆಯಲ್ಲಿ ಕಲ್ಪಿಸಿಕೊಳ್ಳುವುದಕ್ಕೆ ಮೊದಲು, ಶಿಲ್ಪಿಯು – ಕಲಾವಿದನು ಎಷ್ಟು ಸಮಯ ಉಪವಾಸವಿರಬೇಕು, ಎಷ್ಟೆಷ್ಟು ಮತ್ತು ಹೇಗೆಹೇಗೆ ಪ್ರಾರ್ಥನೆ ಮಾಡಬೇಕು ಮತ್ತು ತನ್ನನ್ನು ತಾನು ಹೇಗೆಲ್ಲಾ ಶುದ್ಧೀಕರಣ ಮಾಡಿಕೊಳ್ಳಬೇಕು ಎಂಬುದರ ಬಗೆಗೆ ವಿಸ್ತೃತವಾದ ಸಂಹಿತೆಯನ್ನೇ ತಿಳಿಸುತ್ತವೆ. ತದನಂತರವೇ, ಮೂರ್ತಿ ನಿರ್ಮಿಸಲು ಅನುಮತಿ ದೊರೆಯುತ್ತದೆ. ಭೂಮಂಡಲದ ತುಂಬ ವ್ಯಾಪಿಸಿರುವ – ಕಾಣುವ ಬಹುಸಂಖ್ಯೆಯ ದೈವಿಕವಾದ ಶಿಲ್ಪಗಳಲ್ಲಿ – ಚಿತ್ರಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ – ಚಿದಂಬರಂ ದೇವಾಲಯದ ನಟರಾಜ, ಸಾರನಾಥದ ಬುದ್ಧ, ವಿದಿಶಾ ನಗರದ ವರಾಹಮೂರ್ತಿಗಳಂತಹ ಅಪೂರ್ವ ಪ್ರತಿಮೆಗಳ ನಿರ್ಮಿತಿಯ ಆಂತರ್ಯವನ್ನು – ಮಹತ್ತ್ವವನ್ನು, ಈ ಹಿಂದೂ ಶಿಲ್ಪಶಾಸ್ತ್ರಗಳ ಉದಾತ್ತ ನಿಯಮಗಳು ಮಾತ್ರ ವಿವರಿಸಬಲ್ಲವು. ಅಂತಹ ಮಹೋನ್ನತವಾದ ಸಂಹಿತೆಯ ಪರಿಚಯವಿಲ್ಲದ ಆಧುನಿಕ ಶಿಲ್ಪಿಗಳು, ಮೂಲ ಶಿಲ್ಪಕಲಾಕೃತಿಗಳಂತಹ ಕೌತುಕಗಳನ್ನು – ವಿಸ್ಮಯಗಳನ್ನು ಸೃಷ್ಟಿಸಲಾರರು ಮತ್ತು ಬರಿಯ ಅಣಕುರೂಪಗಳನ್ನು ಮಾತ್ರ ನೀಡಬಲ್ಲರು.
 ಮೇಲೆ ಹೇಳಿದಂತಹ ಆಧುನಿಕ ಕಾಲದ ಋಷಿಗಳು – ವಿದ್ವಾಂಸರು, ಹಿಂದೂ ದೇವಾಲಯಗಳ ವಾಸ್ತು – ವಿನ್ಯಾಸ – ಬಂಧ ಮತ್ತು ಪೂಜೆಯ ವೇಳೆಯ ಶಾಸ್ತ್ರ – ಸಂಪ್ರದಾಯಗಳು ಕೂಡ ಇದೇ ರೀತಿಯ ಉದಾತ್ತವಾದ ಉನ್ನತವಾದ ಸಂಹಿತೆಯನ್ನೇ ಹೊಂದಿವೆ ಎಂದಿದ್ದಾರೆ. ಇವು ಕ್ಲಿಷ್ಟವಾದ – ಸಂಕೀರ್ಣವಾದ – ಆಳವಾದ ಚಿಂತನ ವಿಷಯಗಳು ಮತ್ತು ತತ್ತ್ವವಿಚಾರಗಳು. ಹಿಂದೂ ದೇವಾನುದೇವತೆಗಳ ಬಹುತ್ವವಾಗಲೀ, ಆ ದೇವತೆಗಳ ಮೂರ್ತಸ್ವರೂಪದ ಶಿಲ್ಪಗಳಾಗಲೀ, ಅವುಗಳನ್ನು ಪ್ರತಿಷ್ಠಾಪಿಸಿರುವ  ದೇವಾಲಯಗಳಾಗಲೀ, ಪೂಜೆ – ಆರಾಧನೆಗಳ ಶಾಸ್ತ್ರ – ಸಂಪ್ರದಾಯಗಳಾಗಲೀ, ಆಳವಾದ ಆಧ್ಯಾತ್ಮಿಕ ದರ್ಶನಗಳೆಡೆಗಿನ ಸಾಧನಗಳಷ್ಟೇ ಅಲ್ಲ, ಅವು ಅರಿವಿನ ಪಥಗಳು – ದಾರಿದೀಪಗಳು.
 ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿ ನೋಡುವಾಗ ಮನಸ್ಸಿನ ತುಂಬ ವಿಷಾದಭಾವ ಮೂಡುತ್ತದೆ. ನಮ್ಮ ನೂರಾರು ವಿಶ್ವವಿದ್ಯಾನಿಲಯಗಳ, ಸಹಸ್ರಾರು ಶಾಲಾ – ಕಾಲೇಜುಗಳ ಅಧ್ವರ್ಯಗಳ ಬಳಿ ‘‘ದೇವರು ಎಂದರೆ ಏನು, ಯಾರು? ಧರ್ಮ ಎಂದರೆ ಏನು? ಹಿಂದೂ ಧರ್ಮ ಏನನ್ನು ಹೇಳುತ್ತದೆ?’’ ಎಂಬ ಸರಳ ಪ್ರಶ್ನೆಗಳಿಗೆ ಉತ್ತರ ದೊರೆಯಲಾರದು. ಅದೇ ನೋಡಿ, ಭಾರತದ ಯಾವುದೇ ಪುಟ್ಟ ಹಳ್ಳಿಯಲ್ಲಿನ, ‘ಆಧುನಿಕತೆ’ಯ ಪರಿಚಯವಿಲ್ಲದ ‘ಅನಕ್ಷರಸ್ಥ’ ಅಜ್ಜಿಯೊಬ್ಬಳನ್ನು ಕೇಳಿ, ಸರಿಯಾದ – ಸ್ಪಷ್ಟವಾದ ಉತ್ತರವೇ ಸಿಕ್ಕುತ್ತದೆ. ಮರಗಿಡ, ಬೆಟ್ಟಗುಡ್ಡ, ನದಿ, ಪಶುಪಕ್ಷಿ, ಕಲ್ಲುಮಣ್ಣು ಎಲ್ಲವೂ ದೇವರೇ, ಎನ್ನುವ ಉತ್ತರ ಬರುತ್ತದೆ. ಎಲ್ಲರಿಗೂ ಒಳ್ಳೆಯದಾಗಲೀ ಎಂಬುದೇ ಧರ್ಮ ಎನ್ನುತ್ತಾರೆ. ಕೆಲವು ವಿದ್ವಾಂಸರಿಗೆ ಸ್ವಾಮಿ ಸನ್ಯಾಸಿಗಳಿಗೆ ಜಗದ್ಗುರುಗಳಿಗೆ ಸಹ, ಪಾಪ, ಈ ಸ್ಪಷ್ಟತೆಯಿಲ್ಲ, ಅದೇನೋ ಗೊಂದಲ.
  ಇಡೀ ಅಂತರಿಕ್ಷದಲ್ಲಿ, ಭೂಲೋಕದಲ್ಲಿ, ಸಸ್ಯಲೋಕದಲ್ಲಿ, ಮನುಷ್ಯನಲ್ಲಿ, ಪಶು-ಪಕ್ಷಿ-ಪ್ರಾಣಿಗಳಲ್ಲಿ ಅಸಂಖ್ಯ ದೇವದೇವತೆಗಳನ್ನು ನೆಲೆಗೊಳಿಸಿರುವುದು, ರೂಢಿಯಿಂದ ಹಿಂದೂ ಮಾನಸಿಕತೆಯಲ್ಲಿ ಬೇರುಬಿಟ್ಟಿರುವ ಅಪರೋಕ್ಷ ಜ್ಞಾನವೇ ಆಗಿದೆ. ಅಂತಹ ಕೆಲವು ದೇವದೇವಿಯರಿಗೆ ಪ್ರತಿಮಾರೂಪ ನೀಡಿ, ದೇವಾಲಯಗಳಲ್ಲಿ ಸ್ಥಾಪಿಸಿ, ವಿಶಿಷ್ಟ ಶಾಸ್ತ್ರ ಸಂಪ್ರದಾಯಗಳಂತೆ, ಪೂಜೆ ಆರಾಧನೆಗಳನ್ನು ನಡೆಸಲಾಗುತ್ತಿದೆ. ಇನ್ನು ಕೆಲವು ದೇವಾನುದೇವತೆಗಳನ್ನು, ಸಂದರ್ಭ ಬಂದಾಗ ಪೂಜಿಸಲಾಗುತ್ತದೆ. ಹಿಂದೂ ಶಾಸ್ತ್ರಕಾರರು, ಋಷಿಮುನಿಗಳು ಅನೇಕ ದೇವರುಗಳಿಗೆ ಮಹೋನ್ನತವಾದ ಸ್ತುತಿ – ಸ್ತೋತ್ರಗಳನ್ನು ರಚಿಸಿದ್ದಾರೆ.
      ದೇವರು ಇಡಿಯ ಜಗತ್ತಿನ ಆಕಾಶ – ಅಂತರಿಕ್ಷಗಳಲ್ಲಿ ವಿಶಾಲವಾಗಿ ಹರಡಿಕೊಂಡಿದ್ದಾನೆ. ಅಂತೆಯೇ, ಮರ ಗಿಡ ಮನುಷ್ಯ ಪ್ರಾಣಿ ಪಕ್ಷಿಗಳ ಅಂತರಾಳದಲ್ಲಿಯೂ ಇದ್ದಾನೆ. ಎಲ್ಲ ಧ್ವನಿಗಳಲ್ಲಿ – ಶಬ್ದಗಳಲ್ಲಿ ನೆಲೆಸಿದ್ದಾನೆ. ಸೂರ್ಯನಲ್ಲಿ, ಚಂದ್ರತಾರೆಯರಲ್ಲಿ , ಉಷೆ – ಸಂಧ್ಯೆಯರಲ್ಲಿಯೂ ದೇವರಿದ್ದಾನೆ. ಪ್ರಕೃತಿಯಲ್ಲಿರುವ ದೈವಗಳದ್ದೇ ಒಂದು ವೈಶಿಷ್ಟ್ಯ. ಭೂಮ್ಯಾಕಾಶಗಳ ನಡುವಿನ ಗಾಳಿಯಾಗಿ, ಬಿರುಗಾಳಿ – ಮಾರುತಗಳಾಗಿ, ಪ್ರತಿ ಜೀವಿಯ ಉಚ್ಛ್ವಾಸ – ನಿಶ್ವಾಸಗಳಲ್ಲಿ ತುಂಬಿರುವ ಶ್ವಾಸವೂ ದೇವರೇ. ಈ ಗಾಳಿಯು ಕಣ್ಣಿಗೆ ಕಾಣಿಸದಿದ್ದರೇನಂತೆ, ಅದರ ಸ್ಪರ್ಶವು ಅನುಭವಗೋಚರ.
 ತನ್ನ ಒಡಲಿನಲ್ಲಿ – ಮಡಿಲಿನಲ್ಲಿ ಅಪಾರ ಸಂಪತ್ತನ್ನು ಭರಿಸಿರುವ ಮತ್ತು ಕ್ಷಮೆ ? ತಾಳ್ಮೆ – ಸಹನೆಗಳ ಸಾಕಾರವಾಗಿರುವ ಭೂಮಿತಾಯಿಯೂ ದೇವರೇ. ಹಣ್ಣು – ಹೂವುಗಳ ವೃಕ್ಷರಾಶಿಯ ಅರಣ್ಯವಾಗಲೀ, ಹಿಮಾವೃತ ಗಿರಿ – ಶಿಖರಗಳಾಗಲೀ ದೇವರುಗಳೇ. ಮರಗಿಡ ಬಳ್ಳಿಗಳೂ, ಸರ್ವಸಮಸ್ತವೂ ದೈವೀಸ್ವರೂಪವೇ.
  ಜಲಸಂಪತ್ತು ಮೋಡಗಳಲ್ಲಿ ಅಡಗಿದೆ. ಅದು ವರ್ಷಧಾರೆಯಾಗಿ ಕೆಳಗಿಳಿದು ನದಿಯಾಗುತ್ತದೆ, ಭೂಮಿಯೊಳಗಿಳಿದು ಚಿಲುಮೆಯಾಗುತ್ತದೆ. ಕೆರೆ, ಕಟ್ಟೆ, ಸರೋವರಗಳಲ್ಲಿ, ಸಮುದ್ರ – ಸಾಗರಗಳಲ್ಲಿ ಸಂಗ್ರಹವಾಗುತ್ತದೆ. ಅದೇ, ಗಿರಿ ಶಿಖರಗಳಲ್ಲಿ ಹಿಮರಾಶಿಯೂ ಆಗುತ್ತದೆ. ಇಲ್ಲಿ ಎಲ್ಲವೂ ಎಲ್ಲವೂ ದೈವೀಸ್ವರೂಪವೇ. ಜೀವಜಲವಾಗಿ ಅದು ಎಲ್ಲ ಜೀವಿಗಳ ನೀರಡಿಕೆಯನ್ನು ಹಿಂಗಿಸುತ್ತದೆ, ತಣಿಸುತ್ತದೆ. ಮಹಾರಣ್ಯಗಳ ಮರಗಿಡಗಳನ್ನು, ನಮ್ಮ ಹೊಲ ಗದ್ದೆ ತೋಟಗಳನ್ನು ಪೋಷಿಸುವುದೂ ಇದೇ. ಹಣ್ಣು ಹಂಪಲಿನಲ್ಲಿ, ಬಳ್ಳಿ ಬೇರು ಎಲೆಗಳಲ್ಲಿ, ಹರಿಯುವ – ಸುರಿಯುವ ಜೀವರಸವೂ ಅದೇ. ಅಷ್ಟೇಕೆ, ಪಶು-ಪಕ್ಷಿ-ಪ್ರಾಣಿಗಳಲ್ಲಿ, ನಮ್ಮ ನರನಾಡಿಗಳಲ್ಲಿ ಹರಿಯುವ ರಕ್ತವೂ ಅದೇ. ದೇವಾನುದೇವತೆಗಳು ಮೀಯುವುದರಿಂದಲೇ ಮಾನಸ ಸರೋವರವು ಪರಮ ಪವಿತ್ರ. ಇನ್ನು ಗಂಗೆ, ಗೋದಾವರಿ, ಸಿಂಧು, ಕಾವೇರಿಯರು ನಮ್ಮ ನದೀದೇವತೆಗಳು.
 ಅಗ್ನಿಯ ಜ್ವಾಲೆ, ಉರಿಯುವ ಸೂರ್ಯ, ಒಲೆಯಲ್ಲಿನ ಬೆಂಕಿ, ಅಂತೆಯೇ ಎಲ್ಲ ಇಂಧನಗಳೊಳಗಿನ ಶಾಖದ್ರವ್ಯವೂ ದೈವೀಸ್ವರೂಪವೇ. ಶಾಖದ ಜೊತೆಗೆ ಬೆಳಕನ್ನೂ ನೀಡುವ ತಾರೆಯರು, ಬೆಳಕಿನೊಳಗಿನ ವರ್ಣವೈವಿಧ್ಯ, ಎಲ್ಲ ಕಣ್ಣುಗಳಿಗೆ ಶಕ್ತಿ ತುಂಬುವ ಅವುಗಳ ಬಹು ಆಯಾಮಗಳ ನೋಟ, ಇವೆಲ್ಲಾ ದೇವರಲ್ಲದೆ ಮತ್ತೇನು? ಎಲ್ಲ ಜೀವಿಗಳು ಜೀವಿಸಲು, ಅವುಗಳ ಜೀರ್ಣಾಂಗಗಳಲ್ಲಿ ಶ್ರಮಿಸುವ ಶಕ್ತಿಯೂ ದೇವರೇ. ಸನಾತನ ಧರ್ಮದ ಅನೇಕ ಸಂಸ್ಕಾರಗಳಲ್ಲಿ ಒಂದೆಂದರೆ, ಮನೆಯಲ್ಲಿ ಅಡುಗೆ ಮಾಡುವ ಒಲೆಯ ಉರಿಯನ್ನು ಅಗ್ನಿದೇವನ ಪ್ರತಿನಿಧಿಯೆಂದು ನಮಿಸುವುದು ಮತ್ತು ಎಲ್ಲ ಅಡುಗೆಯೂ ನೈವೇದ್ಯವೆಂದು ಪರಿಭಾವಿಸುವುದೇ ಆಗಿದೆ.
 ನಮ್ಮ ಅನೇಕ ದೇವದೇವಿಯರಿಗೆ ಮೀನು, ಪಕ್ಷಿ, ಪ್ರಾಣಿಗಳು ವಾಹನಗಳಾಗಿವೆ. ಆ ದೇವತೆಗಳಂತೆಯೇ ಈ ವಾಹನಗಳೂ ಹಿಂದೂಗಳಿಗೆ ವಂದನೀಯವಾಗಿವೆ. ವಿಷ್ಣುವಿನ ವಾಹನ ಗರುಡ, ಮಹಾಲಕ್ಷ್ಮಿಯ ವಾಹನ ಗೂಬೆ, ವಿನಾಯಕನ ವಾಹನ ಇಲಿ, ಶಿವನ ವಾಹನವಾದ ನಂದಿ, ದುರ್ಗೆಯ ವಾಹನವಾದ ಸಿಂಹ, ಎಲ್ಲವೂ ಪೂಜನೀಯವೇ. ಇಂದ್ರ – ಸೂರ್ಯ ಈರ್ವರ ರಥಗಳಿಗೂ ಕುದುರೆಗಳನ್ನು ಕಟ್ಟಲಾಗಿದೆ. ಹಾವು ನಾಗದೇವತೆ. ಈ ಎಲ್ಲ ಪ್ರಾಣಿಸಮೂಹದಲ್ಲಿ ಅತ್ಯಂತ ಪವಿತ್ರವಾದುದು ಗೋವು.
 ಮನೆಯಲ್ಲಿರುವ ತಂದೆ – ತಾಯಿಯರು ದೈವೀಸ್ವರೂಪರು. ‘ಮಾತೃದೇವೋಭವ’, ‘ಪಿತೃದೇವೋಭವ’, ಎಂಬುದನ್ನು ನಮ್ಮ ಪರಂಪರೆ ನಮಗೆ ಕಲಿಸುತ್ತ ಬಂದಿದೆ. ಸಂಸಾರ ನಿರ್ವಹಣೆಯ – ದುಡಿಮೆಯ ಕಾರ್ಯಭಾರ ವಹಿಸಿದ್ದಾಗ ತಂದೆ – ತಾಯಿಗೆ ನಾವು ವಿಧೇಯರಾಗಿರಬೇಕು ಮತ್ತು ಅವರು ವದ್ಧರಾದಾಗ ಅವರ ಸೇವೆಯನ್ನು ನಾವು ಮಾಡಬೇಕು. ಅವರು ಸ್ವರ್ಗಸ್ಥರಾದ ಮೇಲೆ ಪಿತೃಗಳಾದ ಅವರ ಆಶೀರ್ವಾದ – ರಕ್ಷಣೆ ನಮಗೆ ದೊರೆಯುವಂತೆ, ಅವರನ್ನು ಕುರಿತು ಶ್ರದ್ಧೆಯಿಟ್ಟುಕೊಳ್ಳಬೇಕು. ಮನೆಯಲ್ಲಿರುವ ಗೃಹಿಣಿಯೂ ದೈವೀಸ್ವರೂಪಳೇ. ಸಂಸಾರದ ಯೋಗಕ್ಷೇಮ, ಮಕ್ಕಳ ಲಾಲನೆ – ಪಾಲನೆ ಮಾಡುತ್ತ, ಎಲ್ಲ ಪೂಜೆ, ಸಂಸ್ಕಾರ, ವ್ರತಗಳನ್ನು ಮಾಡುವುದನ್ನು ಅವಳೇ ನಿರ್ವಹಿಸುತ್ತಾಳೆ. ‘ಆಚಾರ್ಯ ದೇವೋಭವ’ ಎನ್ನುವ ನಮ್ಮ ಪರಂಪರೆಯು, ಗುರುಗಳ ಮಹತ್ತ್ವವನ್ನು ಸಾರುತ್ತ ಬಂದಿದೆ. ಜ್ಞಾನ, ಅಧ್ಯಯನ, ಶಿಕ್ಷಣ ಪ್ರಸಾರಗಳ ಕೇಂದ್ರವಾದ ಗುರುವನ್ನು ಯಥೇಷ್ಟವಾಗಿ ಪುರಸ್ಕರಿಸಬೇಕು, ಪ್ರಸನ್ನಗೊಳಿಸಬೇಕು. ಅನಿರೀಕ್ಷಿತವಾಗಿ ಮನೆಗೆ ಬರುವ ಅತಿಥಿಗಳನ್ನು ಆದರಿಸಬೇಕು, ಸತ್ಕರಿಸಬೇಕು ಎನ್ನುವುದಕ್ಕಾಗಿಯೇ ‘ಅತಿಥಿ ದೇವೋಭವ’ ಎನ್ನುವ ಪರಿಕಲ್ಪನೆಯು ಬೆಳೆದುಬಂದಿದೆ. ದುಷ್ಟರಿಂದ ರಕ್ಷಣೆ ನೀಡುವ ಮತ್ತು ಪ್ರಜೆಗಳ ಯೋಗಕ್ಷೇಮ ನೋಡುವ ರಾಜನೂ ದೇವರೇ. ಈ ಪಟ್ಟಿ ಹೀಗೆಯೇ ಬೆಳೆಯುತ್ತ ಹೋಗುತ್ತದೆ.
  ಕುಟುಂಬಕ್ಕೆ ಕುಲದೇವತೆಯಿರುವಂತೆ, ಪ್ರತಿಯೊಂದು ವೃತ್ತಿನಿರತ ಸಮುದಾಯ – ಜಾತಿಗೂ ಪ್ರತ್ಯೇಕ ದೇವತೆಯಿರುತ್ತದೆ. ಹಳ್ಳಿಗೆ ಗ್ರಾಮದೇವತೆ, ನಗರಕ್ಕೆ ನಗರದೇವತೆ ಇರುವಂತೆ, ಪ್ರಾಂತ – ರಾಜ್ಯಗಳಿಗೂ ಪ್ರತ್ಯೇಕ ದೇವತೆಗಳಿವೆ (ಉದಾಹರಣೆಗೆ, ಕನ್ನಡ ಭುವನೇಶ್ವರಿಯು ಕರ್ನಾಟಕದ ದೇವತೆ). ಎಲ್ಲೆಡೆ ಮತ್ತು ಎಲ್ಲ ಚರಾಚರ ವಸ್ತುಗಳಲ್ಲಿ ದೇವಾನುದೇವತೆಗಳನ್ನು ಕಾಣುವ ಹಿಂದೂ ಮಾನಸಿಕತೆಯ ಪ್ರತೀಕವಾಗಿ, ಇತ್ತೀಚಿನ ಕಾಲಘಟ್ಟದಲ್ಲಿ ಭಾರತಮಾತೆಯನ್ನು ರಾಷ್ಟ್ರದೇವತೆಯನ್ನಾಗಿ ಆರಾಧಿಸಲಾಗುತ್ತಿದೆ ಮತ್ತು ಈ ದಿವ್ಯಪಥದಲ್ಲಿಯೇ, ‘ವಂದೇ ಮಾತರಂ’ ರಾಷ್ಟ್ರಗೀತೆಯ  ಆವಿಷ್ಕಾರವಾಯಿತು. ಅಂತೆಯೇ, ನಮ್ಮಲ್ಲಿ ಮೂವತ್ತಮೂರು ಕೋಟಿ ದೇವರುಗಳಿವೆಯೆಂಬ ಪರಿಕಲ್ಪನೆ ಹುಟ್ಟಿಕೊಂಡಿತು.
 ಪ್ರಕೃತಿಯು ನಮಗೆ ಬರಿಯ ಪ್ರಕೃತಿಯಲ್ಲ, ಪ್ರಕೃತಿಮಾತೆ. ಎಲ್ಲ ವಸ್ತುಗಳ – ಶಕ್ತಿಗಳ ಎಲ್ಲ ರೂಪಗಳ – ಬದಲಾವಣೆಗಳ ವೈವಿಧ್ಯದಲ್ಲಿ ಹಿಂದೂಗಳು ಪಾವಿತ್ರ್ಯವನ್ನು ಕಂಡಿದ್ದಾರೆ. ಹಾಗೆಂದೇ, ಮನುಷ್ಯನ ದೇಹದೊಳಗಿನ ಶಕ್ತಿಗೆ – ಅಂಗಾಂಗಗಳಿಗೆ ಸಹ ಗೌರವಪೂರ್ಣ ಸ್ಥಾನವಿದೆ. ಪ್ರಕೃತಿಮಾತೆ ನೀಡಿರುವ ಅಂಗಾಂಗಗಳಿಂದ – ಶಕ್ತಿಗಳಿಂದ ದೇವರನ್ನು, ಅವನ ಅನಂತ ಚೈತನ್ಯವನ್ನು ಕಾಣುವ ಸಾಧ್ಯತೆಗಳನ್ನು ಹಿಂದೂ ಪರಂಪರೆಯು ಗೌರವಿಸಿದೆ, ವಂದಿಸಿದೆ.
  ಈ ಹಿಂದೆಯೇ ಚರ್ಚಿಸಿದ ಹಾಗೆ, ‘ಯಥಾ ಪಿಂಡೇ ತಥಾ ಬ್ರಹ್ಮಾಂಡೇ’ ಎನ್ನುವಂತೆ, ಒಳಗಿರುವ ಎಲ್ಲವೂ ಹೊರಗಿದೆ ಮತ್ತು ಹೊರಗಿರುವ ಎಲ್ಲವೂ ಒಳಗಡೆಯೇ ಇದೆ, ಎನ್ನುವುದನ್ನೂ ಹಿಂದೂ ಮಾನಸಿಕತೆಯು ಪ್ರತಿಪಾದಿಸುತ್ತದೆ. ಎಲ್ಲ ಹೊರವಸ್ತುಗಳಲ್ಲಿಯೂ ಜೀವವಿದೆ, ಪ್ರಜ್ಞೆ – ಅರಿವುಗಳಿವೆ, ಭಾವನಾಶೀಲತೆ – ಚಿಂತನಶೀಲತೆಗಳಿವೆ, ಎಂಬುದೂ ಹಿಂದೂ ಪರಿಕಲ್ಪನೆಯೇ. ನಿರ್ಜೀವ ವಸ್ತುವು ಸಜೀವವಾಗುತ್ತದೆ. ಪ್ರಜ್ಞೆ ಇಲ್ಲದುದಕ್ಕೆ ಪ್ರಜ್ಞೆ ಮೂಡುತ್ತದೆ, ಬುದ್ಧಿಗೇಡಿಗೆ ಚಿಂತನಶೀಲತೆ ಮೂಡುತ್ತದೆ, ಜಡವಸ್ತು ಚುರುಕಾಗುತ್ತದೆ ಮತ್ತು ಸೂಕ್ಷ್ಮತೆ ಕಳೆದುಕೊಂಡವುಗಳಿಗೆ ಸೂಕ್ಷ್ಮತೆ ಹುಟ್ಟುತ್ತದೆ.
 ಓರ್ವ ಹಿಂದುವು ಇಸ್ಲಾಮಿಗೆ – ಕ್ರೈಸ್ತಮತಕ್ಕೆ ಮತಾಂತರವಾದ ಮೇಲೆಯೂ, ಇಂತಹ ಹಿಂದೂ ಮಾನಸಿಕತೆಯು ಬಹಳ ಕಾಲ ಅವನಲ್ಲಿ ಮುಂದುವರಿಯುತ್ತದೆ ಮತ್ತು ಆ ಕಾರಣದಿಂದ ಅವನು ಕೆಲವೊಮ್ಮೆ ಮುಲ್ಲಾ – ಪಾದ್ರಿಗಳ ಆಕ್ರೋಶ, ಆವೇಶ, ಭರ್ತ್ಸನೆಗಳಿಗೆ ಗುರಿಯಾಗುತ್ತಾನೆ. ಒಮ್ಮೆ ಹೀಗಾಯಿತಂತೆ. ಕೇರಳದ ಹೆಣ್ಣುಮಗಳೊಬ್ಬಳು ಕಾರಣಾಂತರಗಳಿಂದ ಕ್ರೈಸ್ತಳಾಗಿ ಮತಾಂತರವಾಗಬೇಕಾಯಿತು. ಮತಾಂತರ ಮಾಡಿದ ಪಾದ್ರಿಯು ಒಂದುದಿನ ಆ ಹೆಣ್ಣುಮಗಳ ಮನೆಗೆ ಭೇಟಿ ಮಾಡಿ ನೋಡುತ್ತಾನೆ; ಆಕೆ ಹಿಂದಿನಂತೆಯೇ, ಹಳೆಯ ಹಿಂದೂ ದೇವಾನುದೇವತೆಗಳಿಗೆ ಪೂಜೆ ಸಲ್ಲಿಸುತ್ತಿದ್ದಾಳೆ! ಪಾದ್ರಿ ಕಿಡಿಕಿಡಿಯಾಗಿಹೋದ. ಸಿಟ್ಟಿನಿಂದ ಅವನ ಮುಖ ಉರಿಯತೊಡಗಿತು. ಸತ್ಯದೇವನಾದ ಗಾಡ್‌ನ ಬದಲಿಗೆ, ಈ ಹುಸಿದೇವರುಗಳನ್ನು ಪೂಜೆ ಮಾಡುತ್ತಿರುವುದನ್ನು ವಿರೋಧಿಸಿದ. ಆಕೆ ಶಾಂತವಾಗಿ, ಮುಗುಳ್ನಗುತ್ತ ಹೇಳಿದಳು, ‘‘ತಪ್ಪೇನು? ನಾನು ಕ್ರೈಸ್ತಳಾಗಿ ಮತಾಂತರವಾದೆ ಎಂದ ಮಾತ್ರಕ್ಕೆ, ನನ್ನ ಹಿಂದೂ ಧರ್ಮವನ್ನು ಪರಿತ್ಯಜಿಸಿದ್ದೇನೆ, ಎಂದರ್ಥವಲ್ಲ’’.
  ನಿಜ. ಹಿಂದೂ ಮಾನಸಿಕತೆಯೇ ಅಂತಹುದು. ಈ ಕುರಿತು ಹಿಂದುಗಳು ಸಂಕೋಚಪಡಬೇಕಿಲ್ಲ. ತುಂಬ ಪುರಾತನವೆನಿಸಿದ ನಮ್ಮ ವೇದಗಳಿಗಿಂತಲೂ, ಶಾಸ್ತ್ರಗಳಿಗಿಂತಲೂ ಹಳೆಯದು, ಈ ಮಾನಸಿಕತೆ. ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಗಳನ್ನು ಇಡಿಯಾಗಿ ಹಿಡಿದಿಟ್ಟುಕೊಂಡಿರುವ, ಆಳವಾಗಿ ಬೇರೂರಿರುವ ಈ ಹಿಂದೂ ಮಾನಸಿಕತೆಯ ನಿರಾಕರಣೆಯು ಹಿಂದೂ ಸಮಾಜಕ್ಕೆ ಹಾನಿಕಾರಕ. ಇಂತಹ ಮಾನಸಿಕತೆಯ ಆವಿರ್ಭಾವಕ್ಕೆ ಕಾರಣವಾದ ಆಧ್ಯಾತ್ಮಿಕ ಕೇಂದ್ರವನ್ನು ನಮ್ಮ ಸಮಾಜವು ಪುನರ್ಜಾಗೃತಿಗೊಳಿಸಬೇಕು ಮತ್ತು ಅದರ ಸಾಧ್ಯತೆಗಳು, ಆಯಾಮಗಳು ಶಾಖೋಪಶಾಖೆಗಳಾಗಿ ಕವಲೊಡೆಯುವ ಪ್ರಕ್ರಿಯೆಯಲ್ಲಿ ವಿಶ್ವಾಸವಿರಿಸಬೇಕು.
  1960ರಲ್ಲಿ ಅಮ್ಮನ ಜೊತೆ ಬಂಧುಗಳ ಮದುವೆಯೊಂದಕ್ಕೆ ಹೋಗಿದ್ದೆ. ಮದುವೆ ಮುಗಿದ ಮರುದಿನ, ನದೀ ತೀರದ ಪವಿತ್ರ ಕ್ಷೇತ್ರವೊಂದಕ್ಕೆ ಹೋದೆವು. ನನಗಾಗ ಆರು ವರ್ಷ ವಯಸ್ಸು. ನಾವೆಲ್ಲಾ ಹದಿನೈದು – ಇಪ್ಪತ್ತು ಜನರಿದ್ದೆವು. ನಮ್ಮದು ದೇವಾಲಯ – ಸ್ವಾಮಿಗಳು ಎಂದರೆ, ಭಕ್ತಿಭಾವ ಉಕ್ಕಿಹರಿಯುವ ಸಮುದಾಯ. ದೂರದಲ್ಲಿ ‘ಜಗದ್ಗುರು’ಗಳು ಬರುತ್ತಿದ್ದರು. ನೋಡಿ, ನಮ್ಮ ಗುಂಪಿನಲ್ಲಿ ಸಂಭ್ರಮ. ಅವರಿಗೆ ನಮಸ್ಕರಿಸುವ ಮಹದಾಸೆ ಎಲ್ಲರಿಗೂ. ಅನುಮತಿಗಾಗಿ ಕೇಳಿಕೊಂಡು ಬರಲು, ನನ್ನನ್ನು ಕಳುಹಿಸಿದರು. ನಾನು ‘ಜಗದ್ಗುರು’ಗಳ ಬಳಿ ಹೋಗಿ, ಎಲ್ಲರೂ ನಮಸ್ಕಾರ ಮಾಡಬೇಕಂತೆ, ಎಂದು ಕೇಳಿದೆ. ಅವರು ‘ನಿಮ್ಮ ಜಾತಿ ಯಾವುದು?’, ಎಂದರು. ಹೇಳಿದೆ. ‘ಹಾಗಿದ್ದರೆ, ದೂರದಿಂದ ನಮಸ್ಕಾರ ಮಾಡಿ, ಕಾಲು ಮುಟ್ಟಬೇಡಿ’ ಎಂದರು. ಅಂತೆಯೇ, ಎಲ್ಲ ಭಕ್ತರೂ ದೂರದಿಂದಲೇ ಸಾಷ್ಟಾಂಗ ನಮಸ್ಕಾರ ಹಾಕಿ ಪುನೀತರಾದೆವು.
  ಅರ್ಧ ಶತಮಾನದ ನಂತರ, ಇವೆಲ್ಲ ನೆನಪಾದಾಗ ಸಾಲು ಸಾಲು ಸ್ವಾಮಿಗಳು – ಜಗದ್ಗುರುಗಳು – ಆನೆ ಕುದುರೆಗಳ ಮೇಲೆ, ಅಡ್ಡಪಲ್ಲಕ್ಕಿಯಲ್ಲಿ ಸಾಗುವ ಮಠಾಧೀಶರು ಕಣ್ಮುಂದೆ ಬರುತ್ತಾರೆ. ಇವರಲ್ಲಿ ಎಷ್ಟು ಜನ ‘‘ದೇವರು ಯಾರು? ಹಿಂದೂ ಧರ್ಮ ಏನನ್ನು ಹೇಳುತ್ತದೆ?’’ ಎಂಬ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬಲ್ಲರು, ಎಂಬ ಪ್ರಶ್ನೆಯೆದುರಾಗಿ ಮನಸ್ಸು ಖಿನ್ನವಾಗುತ್ತದೆ. ಇಡೀ ಹಿಂದೂ ಸಮಾಜವೇ ಅಪಾಯಗಳ ನಡುವೆ ಸಿಕ್ಕಿಬಿದ್ದಿರುವಾಗ, ತಮ್ಮ ‘ಸಂಪ್ರದಾಯ’ – ‘ವೈಶಿಷ್ಟ್ಯ’ಗಳನ್ನು ಮಾತ್ರ ಗಮನಿಸುವ ಇವರೆಲ್ಲಾ, ಗೋರ ಕುಂಬಾರ ಹೇಳುವಂತೆ ‘ಅರೆಬೆಂದ ಮಡಕೆಗಳು’ ಎನ್ನಿಸುತ್ತದೆ. ಹಿಂದೂ ಧರ್ಮದ ಈ ನಾಯಕಮಣಿಗಳಿಗೇ, ಹಿಂದೂ ಧರ್ಮ ಅರ್ಥವಾಗಿದೆಯೇ? ಎಂಬ ಅನುಮಾನ ಮೂಡುತ್ತದೆ.
 ಈ ಜಗದ್ಗುರುಗಳ, ಮಠಾಧೀಶರ ಗುಂಪಿಗೂ, ಬುದ್ಧಿಜೀವಿಗಳ – ವಿಚಾರವಾದಿಗಳ – ಪತ್ರಕರ್ತರ ಸಮುದಾಯಕ್ಕೂ ವಿಚಿತ್ರ ‘ಸಾಮ್ಯ’ವಿದೆ. ಮೈಕ್ ಮುಂದೆ ನಿಂತರೆ ಅಥವಾ ಪೆನ್ನು ಕೈಯ್ಯಲ್ಲಿ ಹಿಡಿದರೆ ಸಾಕು, ಇವರೆಲ್ಲಾ ‘ಮಾನವಧರ್ಮ’, ‘ಸಮಾನತೆ’ಗಳ ಬಗೆಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ, ಬರೆದು ಬಿಸಾಕುತ್ತಾರೆ. ‘‘ಎಲ್ಲ ಧರ್ಮಗಳ ಗುರಿ ಒಂದೇ ಅಲ್ಲವೇ? ಬುದ್ಧ – ಕ್ರಿಸ್ತ – ಮೊಹಮ್ಮದ್ – ಬಸವಣ್ಣ – ಗಾಂಧೀಜಿ, ಎಲ್ಲ ಮಹಾತ್ಮರೂ ಹೇಳಿರುವುದು ಒಂದೇ ಅಲ್ಲವೇ?’’, ಎಂದು ಭಾವುಕರಾಗಿ ಮಾತನಾಡುತ್ತಾರೆ! ‘‘ಸರಿ, ಸ್ವಾಮೀ, ಓಲ್ಡ್ ಟೆಸ್ಟಮೆಂಟ್, ನ್ಯೂ ಟೆಸ್ಟಮೆಂಟ್, ಬೈಬಲ್, ಖುರಾನ್, ಹದೀಸ್ (ಪ್ರವಾದಿ ಮೊಹಮ್ಮದರ ಮಾತುಗಳ, ವಿಚಾರಗಳ, ಅನುಭವಗಳ ಸಂಗ್ರಹ) ಓದಿದ್ದೀರಾ?’’, ಎಂಬ ಪ್ರಶ್ನೆಗಳು, ಪಾಪ, ಇವರು ಯಾರಿಗೂ ಹಿಡಿಸುವುದಿಲ್ಲ. ‘‘ಇಸ್ಲಾಂ ಎಂದರೆ ಶಾಂತಿ, ತಾಲಿಬಾನ್ ಎಂದರೆ ವಿದ್ಯಾರ್ಥಿ, ಕ್ರೈಸ್ತ ‘ಧರ್ಮ’ವು ಸೇವೆಯನ್ನು ಮಾತ್ರವೇ ಹೇಳುತ್ತದೆ’’, ಎಂಬಂತಹ ಅಜ್ಞಾನಪ್ರಸಾರವೇ ಇವರ ಪರಮೋಚ್ಚ ‘‘ಧರ್ಮ’’. ಕಳೆದ ಹಲವಾರು ವರ್ಷಗಳಲ್ಲಿ ಇಸ್ಲಾಂ – ಕ್ರೈಸ್ತಮತ – ಕಮ್ಯೂನಿಸಂ ಕುರಿತಂತೆ ತುಂಬ ಮಹತ್ತ್ವದ ಸಂಶೋಧನಾತ್ಮಕ ಗ್ರಂಥಗಳು ಬಂದಿವೆ. ಕೆಲವೊಮ್ಮೆ, ಇವರು ಯಾರೂ ಏನೂ ಓದುವುದೇ ಇಲ್ಲವೇ, ಎಂಬ ಅನುಮಾನ ಬರುತ್ತದೆ.
 ಆರಾಧನೆಯು ಮನುಷ್ಯನ ಆತ್ಮದಲ್ಲಿಯೇ ಅಂತರ್ಗತವಾಗಿದೆ. ಪ್ರತಿಯೊಂದು ಸಂಕೇತದಲ್ಲಿಯೂ ದೈವಿಕ ವೈಭವಗಳು ಬಿಂಬಿತವಾಗಿವೆ. ಆದುದರಿಂದಲೇ, ವೇದಕಾಲದ ಋಷಿಗಳು ಅನೇಕ ರೂಪಗಳಲ್ಲಿ – ಹೆಸರುಗಳಲ್ಲಿ ದೇವತಾರಾಧನೆ ಮಾಡುತ್ತಿದ್ದರು. ‘‘ಶ್ರೇಷ್ಠವಾದ ದೇವತೆಗಳಿಗೆ ಆದರಪೂರ್ವಕ ನಮನಗಳು, ಬೇರೆ ದೇವತೆಗಳಿಗೂ ನಮನಗಳು, ಹಿರಿಯ ದೇವತೆಗಳಿಗೆ – ಕಿರಿಯ ದೇವತೆಗಳಿಗೆ ನಮನಗಳು (ಋಗ್ವೇದ 1.27.13), ನಮ್ಮ ಶಕ್ತಿಯಿದ್ದಂತೆ ಎಲ್ಲ ದೇವತೆಗಳಿಗೂ ನಮಸ್ಕರಿಸುತ್ತೇವೆ’’ ಎಂಬುದೇ ಆ ಋಷಿಗಳ ಅಭಿಗಮನವಾಗಿತ್ತು. ನಿಜವಾದ ಕಳಕಳಿ, ನಿಜವಾದ ಅರ್ಚನೆಗಳು ಎಂದಿಗೂ ವಿಫಲವಾಗುವುದಿಲ್ಲ ಮತ್ತು ಅವು ಹುಸಿದೇವರುಗಳಿಗೂ ಹೋಗುವುದಿಲ್ಲ. ಅವುಗಳೇ ಎಲ್ಲರಲ್ಲಿ, ಎಲ್ಲದರಲ್ಲಿ ಇರುವ ಸತ್ಯತತ್ತ್ವ ಮತ್ತು ರಹಸ್ಯತತ್ತ್ವಗಳು.
 ಶಿಲೆಯಲ್ಲಿ ಸುಪ್ತವಾಗಿರುವ ಸತ್ ಚಿತ್ ಆನಂದ, ಸಸಿಯಲ್ಲಿ ಮೊಳಕೆಯೊಡೆಯುತ್ತಿರುವ ಜೀವಶಕ್ತಿ, ಹೂವಿನಲ್ಲಿ ಕಾಣುವ ನಗು, ಹಕ್ಕಿಯ ಕೂಗಿನಲ್ಲಿನ ಇಂಚರ, ಸೂರ್ಯ – ತಾರೆಯರಲ್ಲಿನ ಬೆಳಕು, ಎಲ್ಲ ಎಲ್ಲ ಸೇರಿ ವೇದಕಾಲೀನ ಋಷಿಗಳಿಗೆ ಸ್ಫೂರ್ತಿ ನೀಡಿವೆ. ಸಕಲ ಜೀವ, ವಸ್ತುಗಳಲ್ಲಿರುವ ದೈವತ್ವವನ್ನು ಅನುಭವಿಸಿ, ನೋಡಿ ಆಧ್ಯಾತ್ಮಿಕ ಅರಿವಿನ ಔನ್ನತ್ಯವನ್ನು ಅವರು ಸಾಧಿಸಿದರು. ಅವರು ತಮ್ಮ ತಪಸ್ಸಿನಿಂದ, ಎಲ್ಲ ವಸ್ತು ರೂಪಗಳಲ್ಲಿ, ಅವುಗಳ ಬಹುತ್ವದಲ್ಲಿ ದೈವಿಕತೆಯನ್ನು ಕಂಡುಕೊಂಡರು. ಅಂತೆಯೇ, ಏಕತ್ವದಲ್ಲಿಯೂ ದೈವಿಕ ವೈವಿಧ್ಯತೆಯು ಏಕೀಭವಿಸಿರುವುದನ್ನು ಕಂಡರು.
 ಮುಮುಕ್ಷುವಿನ ಅಧಿಕಾರಕ್ಕೆ ಅನುಗುಣವಾಗಿ, ಅವನ ಆಧ್ಯಾತ್ಮಿಕ ಪ್ರಗತಿಯ ಹಂತಕ್ಕೆ ಸರಿಹೊಂದುವಂತೆ. ವೇದಕಾಲದ ಋಷಿಮುನಿಗಳು, ಅನುಭಾವಿಗಳು ತಮ್ಮ ಅಂತರ್ಬೋಧೆಯಿಂದ, ಅನೇಕ ನಾಮ ರೂಪಗಳಲ್ಲಿ ಸತ್ಯದ ನೆಲೆಯನ್ನು ಕಂಡುಕೊಂಡರು. ಅನೇಕ ಭಾಷೆಗಳಲ್ಲಿ, ಅನೇಕ ವಿಧದ ಪೂಜೆಗಳಲ್ಲಿ, ಅದೇ ದೈವಿಕತೆಯನ್ನು ಕಾವ್ಯರೂಪದಲ್ಲಿ ಭಕ್ತಿಯಿಂದ ಹಾಡಿದರು. ಬಹುತ್ವದಲ್ಲಿ ಒಂದನ್ನು, ಒಂದರಲ್ಲಿ  ಬಹುತ್ವವನ್ನು ಕಂಡ ವಿಶಿಷ್ಟ ದೃಷ್ಟಿಯ ವೇದಕಾಲದ ಇಂತಹ ‘‘ಏಕಂ ಸತ್ ವಿಪ್ರಾ ಬಹುಧಾ ವದಂತಿ’’ ಶ್ಲೋಕವನ್ನು, ಸನಾತನಧರ್ಮದ ಇಂತಹ ಸತ್ತ್ವಪೂರ್ಣ ಪರಿಕಲ್ಪನೆಯೊಂದನ್ನು, ಇಂದು ವ್ಯತಿರಿಕ್ತವಾದ ಅರ್ಥದಲ್ಲಿ, ಸಂಕುಚಿತವಾದ ಸ್ವರೂಪದ ಏಕದೇವತಾರಾಧನೆಯ ಅಗ್ಗದ ಘೋಷಣೆಯನ್ನು ಬೆಂಬಲಿಸಲು ಬಳಸಲಾಗುತ್ತಿರುವುದು ಖಂಡನಾರ್ಹವಾಗಿದೆ.
 ಏಕದೇವತಾರಾಧಕರಾದ ಮತಾಗ್ರಹಿಗಳು. ‘‘ಒಬ್ಬನೇ ಒಬ್ಬ ಸತ್ಯದೇವ’’ ಎಂಬ ಯುದ್ಧಘೋಷಣೆ ಹಾಕುವಾಗ, ದಾಳಿ ಮಾಡುವಾಗ, ಹಿಂದುಗಳು ಆತ್ಮರಕ್ಷಣೆಯ ಆರ್ತನಾದದಲ್ಲಿ ಹೇಳುವಂತಹ ಶ್ಲೋಕ ಇದಲ್ಲ. ಮಸೀದಿ ಎದುರು ಹೋಗುವಾಗ ಹಿಂದೂ ದೇವತೆಗಳ ಮೆರವಣಿಗೆಯ ಮೇಲೆ ಮುಸ್ಲಿಂ ಗೂಂಡಾಗಳು ದಾಳಿ ಮಾಡಿದಾಗ ಅಥವಾ ಮುಸ್ಲಿಂ ಮೊಹಲ್ಲಾದಲ್ಲಿ ಹಂದಿಯೊಂದು ನುಗ್ಗಿದಾಗ ಆಗುವ ಗಲಭೆಗಳ ವೇಳೆಯಲ್ಲಿ, ಹುಸಿ-ಜಾತ್ಯತೀತ ‘‘ಬುದ್ಧಿಜೀವಿ’’ಗಳು ಉಲ್ಲೇಖಿಸುವ ಆತ್ಮರಕ್ಷಣೆಯ ಶ್ಲೋಕವೂ ಇದಲ್ಲ. ಬದಲಿಗೆ, ಎಲ್ಲೆಡೆ ಎಲ್ಲ ಕಾಲದಲ್ಲಿ, ಆಧ್ಯಾತ್ಮಿಕ ಅರಿವಿನ ಹಾದಿಯಲ್ಲಿ ಉಲ್ಲೇಖಿಸಬೇಕಾದ ಉನ್ನತ ತತ್ತ್ವವಿದು. ಜಾಗತಿಕ ವ್ಯಾಪ್ತಿಯ ಆಧ್ಯಾತ್ಮಿಕತೆಯ ಆಧಾರವೇ ಈ ಶ್ಲೋಕ.
 ಭಾರತ, ನೇಪಾಳ, ಮಯನ್ಮಾರ್ (ಬರ್ಮಾ), ಜಪಾನ್, ಕೊರಿಯಾ, ಶ್ರೀಲಂಕಾ, ಬಾಲಿದ್ವೀಪ, ಥೈಲ್ಯಾಂಡ್ ಇತ್ಯಾದಿ ದೇಶಗಳಲ್ಲಿ ನಾವು ಕಾಣುವ ಹಿಂದೂ – ಬೌದ್ಧ ಪರಂಪರೆಗಳ ದೇವದೇವಿಯರು, ವಿಶ್ವಸಮಾನತಾವಾದಿ ಆಧ್ಯಾತ್ಮಿಕತೆಯೊಂದರ ಸ್ಥಳೀಯ ಅಭಿವ್ಯಕ್ತಿಗಳು – ರೂಪಗಳು. ಹೀಗೆ ಈ ಆಧ್ಯಾತ್ಮಿಕತೆಯು ಖಗೋಳಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗರ್ಭಶಾಸ್ತ್ರಗಳಂತೆ  ವೈಜ್ಞಾನಿಕವಾದುದು – ವಿಜ್ಞಾನಕ್ಕೆ ಸಮಾನವಾದುದು. ಎಲ್ಲ ಕಾಲದಲ್ಲಿ – ಎಲ್ಲ ಮಾನವರು ಯಾವುದೇ ಭಾಷೆಯಲ್ಲಿ ವ್ಯಕ್ತಪಡಿಸಲು ಯತ್ನಿಸಿದರೂ, ಇವೆಲ್ಲಾ ಪ್ರಕೃತಿಯಲ್ಲಿ ಕಾಣುವ ಒಂದೇ ರೀತಿಯ ವಿಜ್ಞಾನತತ್ತ್ವಗಳು. ಹೀಗೆಯೇ ಸಂಸ್ಕೃತಿ, ನಾಗರಿಕತೆ, ಹವಾಮಾನ, ಪರಂಪರೆಗಳು ಬೇರೆಬೇರೆಯಾದರೂ, ಜನರ ಭಾಷೆ – ರೂಪಕಗಳು ಬೇರೆಬೇರೆಯಾದರೂ, ಎಲ್ಲ ಕಾಲದಲ್ಲಿಯೂ – ಎಲ್ಲೆಡೆಯೂ ಜನರ ಸ್ವಾಭಾವಿಕವಾದ – ಸ್ವಯಂಪ್ರೇರಿತವಾದ ಆಧ್ಯಾತ್ಮಿಕ ಅಭಿವ್ಯಕ್ತಿಗಳು ಒಂದೇ ರೀತಿಯಿರುತ್ತವೆ. ಅಂತಿಮ ವಿಶ್ಲೇಷಣೆಯಲ್ಲಿ, ಅವು ಮಹೋನ್ನತವಾದ ಉದ್ದೇಶದೆಡೆಗಿನ ವಿವಿಧ ಮಾದರಿಗಳು, ಎಂಬಂತೆಯೇ ಕಾಣುತ್ತವೆ.
 ಬೆಬಿಲೋನಿಯನ್, ಅಸ್ಸೀರಿಯನ್, ಚಾಲ್‌ಡಿಯನ್ ಮತ್ತು ಈಜಿಪ್ಟ್ ದೇಶದ ಜನರು ಸ್ಥಾಪಿಸಿದ ಅಸಂಖ್ಯ ದೇವಾಲಯಗಳನ್ನು – ಅಲ್ಲಿನ ದೇವತಾ ವಿಗ್ರಹಗಳನ್ನು ನೋಡಿದಾಗ, ಎಲ್ಲರೂ ಬಹುಸಂಖ್ಯೆಯ ದೇವತೆಗಳನ್ನು ಪೂಜಿಸುತ್ತಿದ್ದುದನ್ನು ಕಾಣಬಹುದು. ಪ್ರಾಚೀನ ಇರಾನೀಯರು, ತಮ್ಮ ಪವಿತ್ರ ಮಂದಿರಗಳಲ್ಲಿ ಅಗ್ನಿಯನ್ನು ಆರಾಧಿಸುತ್ತಿದ್ದರು. ಕ್ರೈಸ್ತಮತೀಯ ವಿಧ್ವಂಸಕ ಶಕ್ತಿಗಳು ತುಂಬ ದೊಡ್ಡ ಪ್ರಮಾಣದಲ್ಲಿ ವಿನಾಶಕಾರೀ ಕೃತ್ಯಗಳನ್ನು ಎಸಗಿದ್ದರೂ, ಅಳಿದುಳಿದಿರುವ ಪ್ರಾಚೀನ ರೋಮನ್ ಗ್ರೀಕ್ ದೇವಾಲಯಗಳ ಅವಶೇಷಗಳಲ್ಲಿ ಬಹುಸಂಖ್ಯೆಯ ದೇವರುಗಳನ್ನು ನೋಡಬಹುದು. ಬ್ರಿಟಿಷರು, ಕೆಲ್ಟರು, ಫ್ರೆಂಚರು, ಜರ್ಮನರು, ಸ್ಕ್ಯಾಂಡಿನೇವಿಯನ್ನರು, ಸ್ಲ್ಯಾವ್ ಜನರು ಸಹ ಬೆಟ್ಟಗುಡ್ಡ – ನದಿ – ಅರಣ್ಯಗಳಲ್ಲಿ ತಮ್ಮ ದೇವರುಗಳಿವೆಯೆಂದು ಪರಿಭಾವಿಸಿದ್ದರು. ಇಸ್ಲಾಂಪೂರ್ವದ ಅರಬ್ಬರು ಬಹುದೇವತಾರಾಧಕರಾಗಿದ್ದರು ಮತ್ತು ಕಾಬಾದಲ್ಲಿ ಅವರ ಮುಖ್ಯ ದೇವತೆಯ ಸುತ್ತ, ಬಹುಸಂಖ್ಯೆಯ ದೇವರುಗಳಿದ್ದವು. ಅನಂತರ ಅವುಗಳನ್ನು ಇಸ್ಲಾಮಿನ ಪ್ರವಾದಿಯವರು ನಾಶ ಮಾಡಿದರು.
  ಭಾರತ ದೇಶಕ್ಕೆ ಹತ್ತಿರವಿರುವ ಮಧ್ಯ ಏಷ್ಯಾ, ಇಂಡೋನೇಷ್ಯಾ, ಮಲೇಷ್ಯಾ ಭಾಗಗಳಲ್ಲಿಯೂ, ಇಸ್ಲಾಂಪೂರ್ವ ಅವಧಿಯಲ್ಲಿ, ತುರುಕರು – ಹಿಂದೂಗಳು – ಬೌದ್ಧರು ನಮ್ಮ ದೇಶದ ಪದ್ಧತಿಯಂತೆಯೇ ಬಹುದೇವತಾರಾಧಕರಾಗಿದ್ದರು. ಇಲ್ಲಿಯ ರೀತಿಯಲ್ಲಿಯೇ ಪೂಜೆ ಮಾಡುತ್ತಿದ್ದರು. ಚೀನಾ, ಲಾವೋಸ್, ಕಾಂಬೋಡಿಯಾ, ಮಂಗೋಲಿಯಾ, ಟಿಬೆಟ್, ವಿಯೆಟ್ನಾಂ ದೇಶಗಳ ಜನರೂ, ಕಮ್ಯೂನಿಸ್ಟ್ ಕಬಂಧಬಾಹುಗಳಿಗೆ ಸಿಲುಕುವವರೆಗೆ, ಹಿಂದೂ – ಬೌದ್ಧ ದೇವತೆಗಳ ಆರಾಧಕರಾಗಿದ್ದರು.
 ಉತ್ತರ ಅಮೆರಿಕಾ, ಮಧ್ಯ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಗಳ ರೆಡ್ ಇಂಡಿಯನ್ನರು ಮತ್ತು ಅನೇಕ ಮೂಲನಿವಾಸಿ ಜನಾಂಗಗಳವರು ಮೂಲತಃ ವಿಗ್ರಹಾರಾಧಕರಾಗಿದ್ದರು. ಇತ್ತೀಚಿನ ಶತಮಾನಗಳಲ್ಲಿ ಯೂರೋಪಿನ ಕ್ರೈಸ್ತಮತೀಯ ಆಕ್ರಮಣಕಾರಿಗಳು ಈ ಎಲ್ಲ ಮೂಲನಿವಾಸಿಗಳನ್ನು ‘‘ವಿಗ್ರಹಾರಾಧಕ’’ರೆಂದು ಖಂಡಿಸಿದರು ಮತ್ತು ಬಹುಪಾಲು ಜನಾಂಗಗಳನ್ನು ನಾಶಮಾಡಿಬಿಟ್ಟರು. ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಓಷಿಯಾನಾ ಪ್ರದೇಶದ ದೂರದೂರದ ದ್ವೀಪಗಳಲ್ಲಿದ್ದ ಕೋಟಿಕೋಟಿ ಸಂಖ್ಯೆಯ ಮೂಲನಿವಾಸಿಗಳನ್ನೂ  ಕ್ರೈಸ್ತ ಮಿಷನರಿಗಳು – ವಿಧ್ವಂಸಕಾರಿ ಆಕ್ರಮಣಕಾರರು ‘‘ವಿಗ್ರಹಾರಾಧಕ’’ರೆಂದು ಖಂಡಿಸಿ ಇದೇ ರೀತಿ ಕೊಂದುಹಾಕಿದರು.
 ಹೀಗೆ ತುಂಬ ದೇಶಗಳಲ್ಲಿ, ದೇವಾಲಯಗಳನ್ನು – ದೇವತಾ ಮೂರ್ತಿಗಳನ್ನು ನಾಶಮಾಡಿದುದರಿಂದ, ಆ ದೇವರುಗಳೇ ನಾಶವಾದವೆಂದು ಭಾವಿಸಬೇಕಾದುದಿಲ್ಲ. ಈ ದೇವರುಗಳು ಗತಕಾಲಕ್ಕೆ ಸೇರಿಹೋದವು, ಎಂದೂ ಅಂದುಕೊಳ್ಳಬೇಕಾಗಿಲ್ಲ. ಅವು ಯಾವುದೋ ಶಿಲಾಯುಗಕ್ಕೆ ಸಂಬಂಧಿಸಿದ್ದವು, ಎಂದು ಸಹ ಪರಿಭಾವಿಸಬೇಕಾದುದಿಲ್ಲ. ಆ ದೇವರುಗಳು ಇದ್ದೇ ಇವೆ. ಅವುಗಳನ್ನು ಕುರಿತು ಧ್ಯಾನಿಸಿದರೆ, ಅವುಗಳ ಇರುವಿಕೆಯನ್ನು ವಿಶ್ವಾಸದಿಂದ ಕಂಡರೆ, ಅವು ಇದ್ದೇ ಇರುತ್ತವೆ. ಏಕೆಂದರೆ ಅವು ಸಮಯ ಮತ್ತು ಅಂತರಿಕ್ಷಗಳ ಆಯಾಮಗಳನ್ನು ಮೀರುತ್ತವೆ. ಮನುಷ್ಯನ ಆತ್ಮದ ಅಂತರಾಳದ ಪರಮಪವಿತ್ರವಾದ ಹೃದಯದಲ್ಲಿ ಅವು ನೆಲೆಸಿವೆ. ಬಾಹ್ಯಪ್ರಪಂಚದಲ್ಲಿ ಅವು ಅಸ್ತಿತ್ವದಲ್ಲಿಲ್ಲ ಎಂದರೆ, ಮಾನವ ಜೀವಿಯ ಆಧ್ಯಾತ್ಮಿಕ ಅರಿವು ಪೇಲವವಾಯಿತು, ಅವನತಿ ಹೊಂದಿತು, ಎಂದು ಭಾವಿಸಬೇಕಾಗುತ್ತದೆ.
  ವಿಶ್ವದ ಅನೇಕ ಪ್ರಾಚೀನ ಸಮುದಾಯಗಳನ್ನು ಬಲವಂತವಾಗಿ ಇಸ್ಲಾಂ – ಕ್ರೈಸ್ತ ಮತಗಳಿಗೆ ಮತಾಂತರ ಮಾಡಿದುದರಿಂದ ಮತ್ತು ಅವರ ಪೂಜಾಸ್ಥಳಗಳನ್ನು ಧ್ವಂಸ ಮಾಡಿ ಮಸೀದಿ – ಚರ್ಚುಗಳನ್ನಾಗಿ ಪರಿವರ್ತಿಸಿದುದರಿಂದ ‘‘ಮರೆಯಾಗಿ ಹೋದ’’ ಅನೇಕ ಪ್ರಾಚೀನ ದೇವತೆಗಳ ಬಗೆಗೆ, ರಾಮಸ್ವರೂಪರು ಹೀಗೆ ಬರೆದಿದ್ದಾರೆ:
 ‘‘ಹಿಂದೊಂದು ಕಾಲವಿತ್ತು. ಭಕ್ತಾದಿಗಳ ಧಾರ್ಮಿಕ ಅಗತ್ಯಗಳನ್ನು ಈ ದೇವರುಗಳು ಪೂರೈಸುತ್ತಿದ್ದವು. ಅನಂತರದ ಅವಧಿಯಲ್ಲಿ  ವಕ್ಕರಿಸಿದ ‘‘ಹೊಸ ದೇವರುಗಳು’’, ಈ ಹಳೆಯ ದೇವರುಗಳ ಮೇಲೆ ದಾಳಿ ಮಾಡಲಾರಂಭಿಸಿದವು. ಹೊಸ ಗಾಡ್ ಬಂದು ತಲೆಯ ಮೇಲೆ ಕೂತ ಅನಂತರವೂ ‘‘ಆಧುನಿಕ’’ ವಿಧಾನದಲ್ಲಿ ಹಳೆಯ ದೇವರುಗಳ ಮೇಲೆ ಈ ಕಿರುಕುಳ ಮುಂದುವರಿಯಿತು. ಈ ಬಾರಿ ಕಿರುಕುಳ ನೀಡಲು ತೊಡಗಿಕೊಂಡವರು, ಮತಾಂಧರೂ ಅಲ್ಲ, ಮತಶಾಸ್ತ್ರಜ್ಞರೂ ಅಲ್ಲ; ಅವರು ವಿಶ್ವವಿದ್ಯಾನಿಲಯಗಳ ಮಹಾನ್ ‘‘ಬುದ್ಧಿಜೀವಿ’’ಗಳೆನಿಸಿಕೊಂಡ ಅಕೆಡೆಮಿಷಿಯನ್ನರು. ಪಾಪ! ಅವರು ಈ ದೇವತೆಗಳನ್ನು ‘‘ಹುಸಿ-ದೇವರುಗಳು’’ ಎಂದೇನೂ ಹೇಳಲಿಲ್ಲ, ಬರೀ ಆದಿಮಕಾಲದ ‘‘ಅನಾಗರಿಕ, ಅಸಂಸ್ಕೃತ, ದೇವರುಗಳು’’ ಎಂಬ ಮುದ್ರೆ ಒತ್ತಿದರು. ಪ್ರಕತಿಯಲ್ಲಿ ಕಾಣುವ ವಸ್ತುಗಳ  ಸಂಗತಿಗಳ ಬಗೆಗಿನ ಆದಿಮಕಾಲದ ಜನರ ‘ಅಸಂಸ್ಕೃತ’ ಸಂಕೇತಗಳಿವು, ಎಂದು ಅರ್ಥೈಸಿದರು. ಮಾನವ ವಿಕಾಸದ ಆಗಿನ ಆರಂಭಿಕ  ಹಂತದಲ್ಲಿ, ಇಂದ್ರಿಯ ಸಂವೇದನೆಗಳನ್ನು ಮೀರಿ ಬೌದ್ಧಿಕವಾದ – ಆಧ್ಯಾತ್ಮಿಕವಾದ ಜ್ಞಾನದ ಆಧಾರದ ಮೇಲೆ, ಬಹುದೇವರುಗಳನ್ನು ಕೈಬಿಟ್ಟು, ಒಬ್ಬನೇ ಒಬ್ಬ ‘‘ಸತ್ಯದೇವ’’ ಮಾತ್ರ ಇದ್ದಾನೆ ಎಂಬುದನ್ನು ಅವರು ಗ್ರಹಿಸಲು ಅಶಕ್ಯರಾಗಿದ್ದರು, ಎಂದು ಬೀಗಿದರು. ಈಚಿನ ಕಾಲಘಟ್ಟದಲ್ಲಿ ವಿಕಾಸದ ಉಚ್ಛ್ರಾಯ ಸ್ಥಿತಿಯಲ್ಲಿ, ಆಧುನಿಕ ಯೂರೋಪು ಮತ್ತು ಕ್ರೈಸ್ತಮತವು ಮಾತ್ರವೇ ಈ ಅತ್ಯುನ್ನತ ಮಟ್ಟ ತಲುಪಲು ಸಾಧ್ಯವಾಯಿತು, ಎಂದೂ ಈ ಅಕೆಡೆಮಿಷಿಯನ್ನರು ಭಾಷ್ಯ ಬರೆದರು.
 ಭಕ್ತಾದಿಗಳ ಧಾರ್ಮಿಕ ಅಗತ್ಯಗಳನ್ನು ಪೂರೈಸಲು ಮತ್ತು ಆಧ್ಯಾತ್ಮಿಕ ಅಂತರ್ಬೋಧೆಯಿಂದ ದೇವರುಗಳು ಹುಟ್ಟುವುದೇ ಆದರೆ, ಈ ಆಧುನಿಕ ಕಾಲದ ಯೂರೋಪಿಯನ್ ಕ್ರೈಸ್ತರು ಹೇಗೆ ಉನ್ನತ ದರ್ಜೆಯವರಾಗಿಬಿಡುತ್ತಾರೆ? ಈ ಯೂರೋಪಿಯನ್ನರ ಪೂರ್ವಿಕರ ಬಹುದೇವರುಗಳಿಗಿಂತ, ಈ ಗಾಡ್ ಹೇಗೆ ಏಕಮಾತ್ರ ಸತ್ಯದೇವನಾಗುತ್ತಾನೆ?
 ಈ ವಿಚಾರಕ್ಕೆ ಸಂಬಂಧಿಸಿದಂತೆ, ಹಿಂದೂ ದೇವತೆಗಳ ಪರಿಕಲ್ಪನೆಯು ಒಂದಿಷ್ಟು ಬೆಳಕು ಚೆಲ್ಲಬಹುದು. ಇತ್ತೀಚಿನ ಕಾಲಾವಧಿಯಲ್ಲಿ ಹಿಂದೂಗಳ ದೇವರುಗಳು ಸ್ವಲ್ಪಮಟ್ಟಿಗೆ ಬದಲಾಗಿದ್ದರೂ, ಹಳೆಯ ದೇವರುಗಳೂ ಮುಂದುವರಿದಿವೆ ಮತ್ತು ಅವು ಹೊಸಹೊಸ ಹೆಸರುಗಳನ್ನೂ ಪಡೆದಿವೆ. ಇಸ್ಲಾಂ ಮತ್ತು ಕ್ರೈಸ್ತ ಮತಗಳ ಕಾರಣದಿಂದ ಮತಾಂತರಗೊಂಡ ಸಮುದಾಯಗಳ ಹಲವಾರು ದೇಶಗಳು, ತಮ್ಮ ಸಾಂಸ್ಕೃತಿಕ-ಧಾರ್ಮಿಕ ನಿರಂತರತೆಯನ್ನು ಕಳೆದುಕೊಂಡವು. ಆದರೆ, ಭಾರತ ಮಾತ್ರ ತನ್ನ ಪ್ರಾಚೀನ ಕಾಲಾವಧಿಯೊಂದಿಗಿನ ನಿರಂತರ ಸಂಬಂಧವನ್ನು ಇಟ್ಟುಕೊಂಡೇ ಇದೆ. ಅನೇಕ ಸ್ತರಗಳಲ್ಲಿ, ವಿವಿಧ ಸ್ವರೂಪಗಳಲ್ಲಿ, ತನ್ನ ಅಸ್ಮಿತೆಯನ್ನು ಹಿಂದೂಧರ್ಮವು ಉಳಿಸಿಕೊಂಡು ಬಂದಿದೆ, ಕಾಪಾಡಿಕೊಂಡು ಬಂದಿದೆ. ಈ ಕುರಿತ ಅಧ್ಯಯನವು ನಿಜಕ್ಕೂ ಪ್ರಯೋಜನಕಾರಿ. ಯೂರೋಪಿನಲ್ಲಿ, ಗ್ರೀಸ್-ರೋಮ್‌ಗಳಲ್ಲಿ, ಅನೇಕ ಸ್ಕ್ಯಾಂಡಿನೇವಿಯನ್ – ಬಾಲ್ಟಿಕ್ ದೇಶಗಳಲ್ಲಿ, ಜರ್ಮನಿ ಮತ್ತು ಸ್ಲ್ಯಾವ್ ಜನಾಂಗಗಳ ಜನರಲ್ಲಿ, ಮಧ್ಯಪೂರ್ವದ ಅನೇಕ ದೇಶಗಳಲ್ಲಿ ಹಿಂದೆ ಇದ್ದ ಧಾರ್ಮಿಕ ಜಾಗೃತಿ, ಧಾರ್ಮಿಕ ಪ್ರಜ್ಞೆ, ಅಂತರ್ಬೋಧೆಗಳನ್ನು ಕುರಿತಂತೆ ತಿಳುವಳಿಕೆ ಪಡೆಯಲು ಮತ್ತು ಭಾರತದ್ದೇ ಆದ ಪ್ರಾಚೀನ ಧಾರ್ಮಿಕ ಸ್ವರೂಪವನ್ನು ಅರ್ಥಮಾಡಿಕೊಳ್ಳಲು, ಇಂತಹ ಅಧ್ಯಯನವು ತುಂಬ ಉಪಯುಕ್ತವಾಗುತ್ತದೆ. ಹೀಗೆ, ಆದಿಮಕಾಲದ – ಮೂಲಸ್ವರೂಪದ ಆಧ್ಯಾತ್ಮಿಕ ಅರಿವಿನ ವಿಸ್ತೃತ ಅಧ್ಯಯನವು, ಹಿಂದೂ ಧರ್ಮ – ಹಿಂದೂ ಸಮಾಜಗಳನ್ನೂ ಮೀರಿದ ವಿಶಾಲ ಸ್ವರೂಪದ ಉಪಯುಕ್ತ ಅಧ್ಯಯನವಾಗುತ್ತದೆ.
 ಈ ಬಗೆಯ, ಈ ನಿಟ್ಟಿನ ಸಂಶೋಧನೆ- ಅಧ್ಯಯನ- ಚರ್ಚೆಗಳು, ವೈದಿಕ ಧರ್ಮವನ್ನು – ವೇದಕಾಲದ ದೇವರುಗಳನ್ನು, ಅಂತೆಯೇ ವಿಶ್ವದ ಆದಿಮ ಕಾಲದ, ಮೂಲರೂಪದ ಆಧ್ಯಾತ್ಮಿಕ ಪ್ರಜ್ಞೆಯನ್ನು ಅರಿಯಲು ನೆರವಾಗುತ್ತವೆ. ಇವೆಲ್ಲವೂ ಬಹುದೇವತಾರಾಧನೆಯ ಭಾಷೆಯಲ್ಲಿಯೇ ಮಾತನಾಡುತ್ತವೆ. ಈಗ ನಶಿಸಿಹೋಗಿರುವ ಏಷ್ಯಾ, ಯೂರೋಪುಗಳ ಅನೇಕ ಪ್ರಾಚೀನ ಮತಧರ್ಮಗಳ ಬಗ್ಗೆ ಹೆಚ್ಚು ತಿಳಿಯಲು ಈ ರೀತಿಯ ಅಧ್ಯಯನದಿಂದ ಸಾಧ್ಯವಾಗುತ್ತದೆ. ಅಂತೆಯೇ ಈಜಿಪ್ಟ್, ಪರ್ಷಿಯಾ, ಗ್ರೀಸ್, ರೋಮ್‌ಗಳ ಹಳೆಯ ದೇವರುಗಳನ್ನು ಹಾಗೂ ಸ್ಕ್ಯಾಂಡಿನೇವಿಯಾ – ಬಾಲ್ಟಿಕ್ ದೇಶಗಳ ದೇವರುಗಳನ್ನು ಮತ್ತು ಜರ್ಮ್ಯಾನಿಕ್ – ಕೆಲ್ಟಿಕ್ – ಸ್ಲ್ಯಾವಿಕ್ ಜನಾಂಗಗಳ ದೇವರುಗಳನ್ನು, ಇನ್ನೂ ಹೊಸ ಬೆಳಕಿನಲ್ಲಿ ನೋಡಲೂ ಅರಿಯಲೂ ಸಾಧ್ಯವಾಗುತ್ತದೆ.
  ವಿಶ್ವವ್ಯಾಪಿ ಅಧ್ಯಾತ್ಮದ ಪುನರ್ಜಾಗತಿಯಾಗಬೇಕು. ಅದು ಇಸ್ಲಾಂ ಮತ್ತು ಕ್ರೈಸ್ತ ಮತಗಳ ಕಾರಣದಿಂದ ಮರೆಯಾಗಿಹೋಗಿರುವ ಪ್ರಾಚೀನ ದೇವರುಗಳ ಪುನರುತ್ಥಾನಕ್ಕೆ ಚಾಲನೆ ನೀಡಬೇಕು, ಎನ್ನುತ್ತಾರೆ ರಾಮಸ್ವರೂಪ್.
  ‘‘ವಿಶ್ವದ ಸಾಂಸ್ಕೃತಿಕ – ಧಾರ್ಮಿಕ ಇತಿಹಾಸದಲ್ಲಿ, ಇಸ್ಲಾಂ ಮತ್ತು ಕ್ರೈಸ್ತ ಮತಗಳ ಆಕ್ರಮಣ-ದಾಳಿ-ಪರಮತ ಅಸಹನೆ-ವಿಧ್ವಂಸಕತೆ-ಕಿರುಕುಳ-ಜಿಹಾದ್-ಕ್ರುಸೇಡ್‌ಗಳು, ಬಹುದೇವತೆಗಳ ಮತಗಳನ್ನು – ಸಂಸ್ಕೃತಿಗಳನ್ನು ನಾಶಮಾಡಿ ಏಕದೇವತಾರಾಧನೆಯನ್ನು ಸ್ಥಾಪಿಸಿಬಿಟ್ಟವು. ಕೆಲವು ದೇಶಗಳನ್ನು, ಕೆಲವು ಸಮುದಾಯಗಳನ್ನು ‘‘ವಿಮೋಚನೆಗೊಳಿಸುತ್ತೇವೆ’’ ಎನ್ನುತ್ತ ಯುದ್ಧಗಳನ್ನು ಹೂಡುವವರು – ಮಾಡಿಸುವವರು ಇಂದು ಸಹ ಇದ್ದಾರೆ. ಶೀತಲ ಯುದ್ಧಗಳೂ ನಡೆಯುತ್ತಿವೆ. ಕೆಲವು ಪ್ರಕಟರೂಪದ ಆಕ್ರಮಣಕಾರಿ ಯುದ್ಧಗಳಾದರೆ, ಇನ್ನು ಕೆಲವು ‘‘ಯುಕ್ತಿ’’ಯಿಂದ ಮಾಡಿಸುವ ಬುಡಮೇಲು ಕೃತ್ಯಗಳು. ಅಂತಹ ಯುದ್ಧಗಳ ಗೆಲುವಿನ ಕಾರಣದಿಂದಲೇ ಸ್ಥಳೀಯ ದೇವತೆಗಳ ಜಾಗದಲ್ಲಿ (ಉದಾ: ಅರಬ್ ಪ್ರದೇಶದ ಕೆಲವು ಬುಡಕಟ್ಟು ಜನಾಂಗಗಳ ದೇವರುಗಳ ಜಾಗದಲ್ಲಿ ಅಲ್ಲಾ ಸ್ಥಾಪಿತನಾದ) ಹೊಸ ಗಾಡ್ – ಅಲ್ಲಾ ಸ್ಥಾಪಿತವಾಗಿ, ಹೊಸಬಗೆಯ ವಿಸ್ತೃತ ಆಯಾಮದ ಸಾಮ್ರಾಜ್ಯಶಾಹಿ ಯುಗವು ಆರಂಭವಾಯಿತು.
  ಈ ಎಲ್ಲ ಅವಧಿಯ ಇತಿಹಾಸದ ಅವಲೋಕನದಿಂದ, ಪ್ರಸಕ್ತ ಕಾಲದ ಪರಿಪ್ರೇಕ್ಷ್ಯದಲ್ಲಿ, ಈ ಬಗೆಯ ಬದಲಾವಣೆಯಿಂದ ಆಧ್ಯಾತ್ಮಿಕವಾಗಿ – ಸಾಂಸ್ಕೃತಿಕವಾಗಿ ಈ ಜನಸಮುದಾಯಗಳು ಬಡವಾದವೋ – ಶ್ರೀಮಂತವಾದವೋ ಹೇಳುವುದು ಸುಲಭವಲ್ಲ. ಬಹುಪಾಲು ಪ್ರಕರಣಗಳಲ್ಲಿ, ಬರಿಯ ಬಾಹ್ಯ ಸಂಕೇತಗಳು ಬದಲಾದವೇ ಹೊರತು ಆಂತರ್ಯದ ಅರ್ಥದಲ್ಲಿ – ಮೌಲ್ಯಗಳಲ್ಲಿ ವಿಶೇಷ ಬದಲಾವಣೆಯೇನೂ ಆಗಲಿಲ್ಲ. ಸೆಮಿಟಿಕ್ ಮೂಲದ ಮತಗಳಾದ ಇಸ್ಲಾಂ – ಕ್ರೈಸ್ತ ಮತಗಳ ಅಲ್ಲಾ – ಗಾಡ್‌ಗಳು, ಪೂರ್ವಕಾಲದ ಸದ್ಯ ಬಳಕೆಯಲ್ಲಿಲ್ಲದ ಪೇಗನ್ ದೇವರುಗಳಿಗಿಂತ ಉತ್ತಮ ಎಂಬುದನ್ನು ಒಪ್ಪುವುದು ಕಷ್ಟ. ಪುರುಷರಿಗಾಗಲೀ, ಮಹಿಳೆಯರಿಗಾಗಲೀ ಹಿಂದಿನ ಕಾಲದ ದೇವರುಗಳು ಪ್ರೀತಿ, ಪ್ರೇಮ, ಕರುಣೆ, ತ್ಯಾಗ, ಉದಾತ್ತತೆ, ಶೌರ್ಯ, ಮಹಾನತೆಗಳಂತಹ ಮೌಲ್ಯಗಳನ್ನು ದಯಪಾಲಿಸಿದವು. ಶ್ರೇಷ್ಠ ವ್ಯಕ್ತಿಗಳಾಗಲು ಸ್ಫೂರ್ತಿ ನೀಡಿದ್ದವು. ಆದುದರಿಂದ ಇಂದಿನ ಜನರು ಆ ದೇವರುಗಳ ಕಡೆ ತಿರುಗಿ, ಅವುಗಳಿಗೆ ಕೃತಜ್ಞತೆ ಸಲ್ಲಿಸಲು ಸಾಧ್ಯವಾದರೆ ಒಳ್ಳೆಯದು. ಒಂದು ತೀರ್ಥಸ್ಥಳಕ್ಕೋ ಪವಿತ್ರ ಕ್ಷೇತ್ರವೊಂದಕ್ಕೋ ಚಾರಣ ಮಾಡಿಕೊಂಡು ಹೋಗುವಂತಹ ತೀರ್ಥಯಾತ್ರೆಗಳ ಬಗೆಗೆ ನಮಗೆ ಗೊತ್ತು. ಪೂರ್ವಕಾಲದ ದೇವರುಗಳ ಪವಿತ್ರ ಸಂಕೇತಗಳು – ಹೆಸರುಗಳು – ಸ್ವರೂಪಗಳು – ಪರಿಕಲ್ಪನೆಗಳು ಕಲಿಸಿದ ಉನ್ನತ ಆಧ್ಯಾತ್ಮಿಕ ಮೌಲ್ಯಗಳನ್ನು ನೆನೆಯುತ್ತ, ಗೌರವದಿಂದ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವ, ಕಾಲಕೋಶದಲ್ಲಿ ಹಿಮ್ಮುಖವಾಗಿ ಹೋಗುವ ಯಾತ್ರೆಯೂ, ಅಂತಹ ತೀರ್ಥಯಾತ್ರೆಯಂತೆಯೇ, ಅರ್ಥಪೂರ್ಣವಾಗುತ್ತದೆಯೆನ್ನಬಹುದು.
 ಅನೇಕ ದೇಶಗಳ ಪ್ರಸಕ್ತ ತಲೆಮಾರಿನ ಜನರು, ತಮ್ಮ ಪ್ರಾಚೀನ ಕಾಲವನ್ನು ‘ಅಂಧಕಾರದ ಅವಧಿ, ತಿಳಿವಳಿಕೆಯಿಲ್ಲದ ಕಾಲ’ ಎಂದು ಪರಿಭಾವಿಸುವಂತಾಗಿ ಹೋಗಿದೆ. ಪ್ರಾಚೀನ ಕಾಲದ ತಮ್ಮ ಆ ದೇವರುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಾದರೆ, ಜನರು ತಮ್ಮ ಪ್ರಾಚೀನ ಕಾಲದ ಬಗೆಗೇ – ಪೂರ್ವಿಕರ ಬಗೆಗೇ ಅಂತಹ ಅಭಿಪ್ರಾಯ ತಳೆಯಲಾರರು. ಇಂದಿನ ದಿನಗಳಲ್ಲಿ, ತಲೆಮಾರುಗಳ ನಡುವಿನ ವ್ಯತ್ಯಾಸ, ಹಿಂದಿನ-ಇಂದಿನ ತಲೆಮಾರಿನವರಿಗಿರುವ ಅಭಿಪ್ರಾಯಭೇದ ಎನ್ನುವ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಅದಕ್ಕಿಂತ ವಿಶಾಲವಾದ ಅರ್ಥದಲ್ಲಿ, ಇಡೀ ರಾಷ್ಟ್ರವೊಂದರ ಬೇರುಗಳನ್ನು ಕಳೆದುಕೊಂಡ ಇಂತಹ ದುಃಸ್ಥಿತಿಯ ಬಗೆಗೆ ನಾವೀಗ ಗಮನವೀಯಬಹುದು. ರಾಷ್ಟ್ರವೊಂದರ ಪ್ರಸಕ್ತ ಕಾಲಾವಧಿಯನ್ನು, ಪ್ರಾಚೀನ ಕಾಲದೊಂದಿಗೆ ಬೆಸೆಯುವ ಅದೃಶ್ಯರೂಪದ ಸಂಪರ್ಕ ತಂತುಗಳೇ ಈ ದೇವರುಗಳು. ಆ ದೇವರುಗಳು ಹೋದರೆ, ಆ ಸಂಪರ್ಕದ ಕೊಂಡಿಯೂ ಹೋಗಿಬಿಡುತ್ತದೆ. ಭಾರತದಷ್ಟೇ, ಈಜಿಪ್ಟ್ – ಪರ್ಷಿಯಾ ? ಗ್ರೀಸ್ – ಜರ್ಮನಿ – ಸ್ಕ್ಯಾಂಡಿನೇವಿಯಾ ದೇಶಗಳು ಪ್ರಾಚೀನವಾದಂತಹುವು. ಆ ದೇಶಗಳು ತಮ್ಮ ಪ್ರಾಚೀನ ದೇವರುಗಳನ್ನು ಕಳೆದುಕೊಂಡಂತೆಯೇ, ಐತಿಹಾಸಿಕ ಅಸ್ತಿತ್ವ – ನಿರಂತರತೆಗಳನ್ನೂ ಕಳೆದುಕೊಂಡುಬಿಟ್ಟವು.
 ಇಂದು ಪಾಶ್ಚಾತ್ಯ ಯುವಜನಾಂಗವು, ತಮ್ಮ ತಂದೆ ತಾಯಿಯರ ಮತದ ವಿರುದ್ಧ ಬಂಡೆದ್ದಿದೆ. ಇನ್ನು ಕೆಲವರು ಹೊಸ ಸಂಕೇತಗಳಿಂದ ಮಾರ್ಗದರ್ಶನ – ಬೆಳಕು ಪಡೆಯುತ್ತಿದ್ದಾರೆ. ಅತಿದೂರದ ತಮ್ಮ ಪೂರ್ವಿಕರ ಕಾಲಾವಧಿಯ ಕುರುಹುಗಳ, ಸಂಕೇತಗಳ ಪರಿಶೋಧನೆ – ಅನುಸಂಧಾನಗಳು ಅವರಲ್ಲಿ ಅನೇಕರಿಗೆ ತೃಪ್ತಿ, ಸಮಾಧಾನಗಳನ್ನು ನೀಡಿವೆ. ಇದರಿಂದ ತಮ್ಮ ತಂದೆ ತಾಯಿಯರ ಮತಧರ್ಮಕ್ಕಿಂತ – ಅವರ ಜೀವನವಿಧಾನಗಳಿಗಿಂತ ವಿಶಾಲವಾದ ಆಳವಾದ ಮೌಲ್ಯಗಳು, ಅವರಿಗೆ ಅವರ ಅತಿದೂರದ ಪೂರ್ವಿಕರ ಮತಧರ್ಮಗಳಲ್ಲಿ ದೊರೆಯುವಂತಾಗಿದೆ.
 ಮೇಲೆ ಹೇಳಿದ ಈ ಎಲ್ಲ ಸಂಗತಿಗಳು – ವಿಚಾರಗಳು, ಯೂರೋಪಿನಂತೆಯೇ ಆಫ್ರಿಕಾ – ದಕ್ಷಿಣ ಅಮೆರಿಕಾಗಳಿಗೂ ಅನ್ವಯವಾಗುತ್ತವೆ. ಈ ಎರಡೂ ಖಂಡಗಳ ಹಲವಾರು ದೇಶಗಳಿಗೆ ಇತ್ತೀಚೆಗೆ ಒಂದು ಬಗೆಯ ರಾಜಕೀಯ ಸ್ವಾತಂತ್ರ್ಯವು ದೊರೆತಿದೆ. ಆದರೆ ಅವುಗಳಿಗೆ ಅವುಗಳದ್ದೇ ಆದ ಆಧ್ಯಾತ್ಮಿಕ – ಧಾರ್ಮಿಕ ಅಸ್ಮಿತೆಗೆ – ಸ್ವಾತಂತ್ರ್ಯಕ್ಕೆ ಅವಕಾಶ ದೊರೆತಿಲ್ಲ. ನಿಜವಾಗಿಯೂ ಅವರಿಗೆ ಅವರ ಧಾರ್ಮಿಕ ಸ್ವಾತಂತ್ರ್ಯ ಬೇಕಾಗಿದ್ದಲ್ಲಿ, ತಮ್ಮ ಪ್ರಾಚೀನ ದೇವರುಗಳನ್ನು, ತಮ್ಮ ಮಾನಸಿಕತೆಯನ್ನು, ತಮ್ಮ ಬೇರುಗಳನ್ನು, ತಮ್ಮ ಆತ್ಮವನ್ನು ಅವರು ಹಿಂಪಡೆಯಬೇಕಾಗಿದೆ. ಅವರ ದೇವರುಗಳ ಪುನರುತ್ಥಾನ, ಧಾರ್ಮಿಕ ಪುನರ್‌ಮೌಲ್ಯೀಕರಣ ಆಗಬೇಕಾಗಿದೆ. ಏನಾದರೂ ಬದಲಾವಣೆ ಆಗಬೇಕು ಎಂದು ಅವರಿಗೆ ಅನ್ನಿಸಿದರೆ, ಅವರ ಅನುಭವದ ಮೂಸೆಯಲ್ಲಿಯೇ ಅದು ಮೂಡಬೇಕು ಮತ್ತು ಅಲ್ಲಿಯೇ ತೀವ್ರತೆಯ ಆವಿರ್ಭಾವವಾಗಬೇಕು. ನವಯುಗದ ಅಪೇಕ್ಷೆಗಳಿಗೆ ಅನುಗುಣವಾಗಿ ಜೀವನಮೌಲ್ಯಗಳಲ್ಲಿ, ಅವರ ದೇವತೆಗಳು ಹೊಸಹೊಸ ಅರ್ಥಗಳನ್ನು ಹೊಮ್ಮಿಸಲು, ಅವರಲ್ಲಿಯೇ ಆತ್ಮಮಂಥನವಾಗಬೇಕು. ತಮ್ಮ ಆಂತರ್ಯದ ಹಾಗೂ ಧಾರ್ಮಿಕ ವಿಚಾರಮಂಥನದಿಂದ ತಮ್ಮೊಳಗೇ ತಮ್ಮ ದೇವತೆಗಳನ್ನು ಆವಿಷ್ಕರಿಸಿಕೊಳ್ಳಬೇಕು. ಯಾವುದೇ ಜನಸಮುದಾಯವು ಬೇರೆಲ್ಲೋ ಸಿದ್ಧವಾದ ಗಾಡ್‌ನಿಂದ, ಬೇರೆ ದೇಶಗಳ ದೇವತೆಗಳಿಂದ – ಉದ್ಧಾರಕರಿಂದ – ಪ್ರವಾದಿಗಳಿಂದ ಧಾರ್ಮಿಕ – ಆಧ್ಯಾತ್ಮಿಕ ಅರಿವನ್ನು ಪಡೆಯಲು ಸಾಧ್ಯವಿಲ್ಲ.
  ತಮ್ಮ ಪ್ರಾಚೀನ ದೇವರುಗಳನ್ನು ಬರಿದೇ ಕೃತಕವಾಗಿ ಸ್ಮರಿಸಿದರೆ ಸಾಲದು. ಧಾರ್ಮಿಕವಾಗಿ ಅವುಗಳನ್ನು ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು, ತಪಸ್ಸು ಮಾಡಬೇಕು. ಈ ದೇವರುಗಳೊಂದಿಗೇ ಹೆಚ್ಚು ಸಮಯವಿದ್ದು, ಧ್ಯಾನಿಸಿ, ಆ ದೇವರುಗಳನ್ನು ಜೀವ ತುಂಬಿದ ಶಕ್ತಿಗಳನ್ನಾಗಿ ಮಾಡಬೇಕು. ತೀವ್ರವಾದ ಬಯಕೆ, ಪ್ರಾರ್ಥನೆ, ಆವಾಹನೆಗಳಿಂದ ಅಸ್ತಂಗತವಾದ ದೇವರುಗಳನ್ನೂ ಪುನರ್‌ಪ್ರತಿಷ್ಠಾಪಿಸಬಹುದು. ಸತ್ಯವೆಂಬ ಶಾಶ್ವತಮೌಲ್ಯವು ಅವುಗಳ ಆಂತರ್ಯದಲ್ಲಿದ್ದರೆ, ಆ ದೇವರುಗಳ ನಾಶವು ಅಸಾಧ್ಯ. ಕೆಲವು ಕಾಲಾವಧಿಯಲ್ಲಿ ಅವ್ಯಕ್ತ ಸ್ಥಿತಿಯಲ್ಲಿರಬಹುದು, ಅಷ್ಟೇ. ಪ್ರಸನ್ನಕರವಾದ ಅವಕಾಶ ದೊರೆತರೆ ಅವು ಮತ್ತೆ ಪ್ರತ್ಯಕ್ಷವಾಗುತ್ತವೆ. ನವಯುಗದ, ಒತ್ತಾಯದ ಕರೆಗೆ – ಆವಾಹನೆಗೆ ಅಂತಹ ದೇವರುಗಳು ಪುನರ್‌ಸ್ಥಾಪಿತವಾಗುತ್ತವೆ.
 ಏಷ್ಯಾ, ಆಫ್ರಿಕಾ, ಯೂರೋಪ್, ಅಮೆರಿಕಾ, ಆಸ್ಟ್ರೇಲೇಷಿಯಾ – ಮಲೇಷ್ಯಾ ದ್ವೀಪಸಮೂಹಗಳ ಅನೇಕ ಜನಸಮುದಾಯಗಳು ತಮ್ಮ ಪ್ರಾಚೀನ ದೇವರುಗಳನ್ನು ಹಿಂಪಡೆಯಲು, ತಮ್ಮ ಆ ದೇವರುಗಳು ಅನುಸಂಧಾನ ಮಾಡಿಕೊಡುವ ಪ್ರಾಚೀನ ಶಾಸ್ತ್ರಗಳ ಪುನರುದಯವಾಗಲು, ಹಿಂದೂ ಸಮಾಜವು ನೆರವಾಗಬೇಕು. ಹಿಮಾಲಯಸದೃಶವಾದ ಈ ಗುರಿಸಾಧನೆಗೆ ಮೊದಲು, ತನ್ನ ಪ್ರಾಚೀನ ದೇವತೆಗಳನ್ನು ಹಿಂದೂ ಸಮಾಜವು ಆವಾಹನೆ ಮಾಡಿಕೊಳ್ಳಬೇಕು, ತನ್ನ ಧಾರ್ಮಿಕ ಆಧ್ಯಾತ್ಮಿಕ ಆಚಾರವಿಚಾರಗಳ ಮೇಲೆ ದಾಳಿ ಮಾಡುತ್ತಿರುವ ಇಸ್ಲಾಂ – ಕ್ರೈಸ್ತಮತಗಳನ್ನೇ ಹಿಮ್ಮೆಟ್ಟಿಸಬೇಕು. ಅಷ್ಟೇ ಸಾಲದು, ತಾವು ಮಾತ್ರವೇ ಸರಿಯೆಂದು ಬೀಗುತ್ತ ಕೊಳೆತು ನಾರುತ್ತಿರುವ – ರೋಗಿಷ್ಠ ಮನಸ್ಸುಗಳ ಮುಲ್ಲಾ – ಮಿಷನರಿಗಳನ್ನು ಸಶಕ್ತವಾಗಿ ಎದುರಿಸಬೇಕು.
 ವಿಶ್ವವ್ಯಾಪಿ ಧಾರ್ಮಿಕತೆಯ ಮತಧರ್ಮಗಳ ಗುಂಪಿಗೆ ಇಸ್ಲಾಂ ಮತ್ತು ಕ್ರೈಸ್ತಮತಗಳು ಸೇರದಿರುವುದನ್ನು ನೋಡಿದರೆ, ದಬ್ಬಾಳಿಕೆ ಮಾಡುವ – ಪರಹಿಂಸಕವಾದ ಇಂತಹ ಮತಗಳನ್ನು ರೂಪಿಸಿದ ಮನಸ್ಸು – ಪ್ರಜ್ಞೆಗಳಿಗೇ ಕೆಟ್ಟ ರೋಗವಿದ್ದಂತೆ ಕಾಣುತ್ತದೆ. ವಿಶ್ವಸಮಾನತಾವಾದೀ ಅಧ್ಯಾತ್ಮಕ್ಕೆ ತೀವ್ರವಾಗಿ ಪ್ರತಿಕೂಲವಾಗಿರುವ ಮತ್ತು ಭಿನ್ನ ಸ್ವರೂಪದ ಅಲ್ಲಾ – ಗಾಡ್‌ಗಳಿರುವ ಈ ದುರಹಂಕಾರಿ ಮತಸಿದ್ಧಾಂತಗಳನ್ನು ರೂಪಿಸಿದವರ ಮನಸ್ಸುಗಳು ಅದೆಷ್ಟು ವಿಕೃತ ಎಂಬುದನ್ನು ಅವುಗಳ ವರ್ತನೆಯಲ್ಲಿಯೇ ಕಾಣುತ್ತೇವೆ. ಇವುಗಳ ಮತಾಂಧ ರೋಗಲಕ್ಷಣದ ಕಾರಣವನ್ನು ಕಂಡುಹಿಡಿಯಲು ಮತ್ತು ವಿಕೃತ ವರ್ತನೆಗಳ ಮೂಲ ತಿಳಿಯಲು ವಿಶೇಷವಾದ ಮನೋವಿಶ್ಲೇಷಣೆಯ ಅಗತ್ಯವಿದೆ.
 ಈ ಏಕದೇವತಾರಾಧಕ ಮತಗಳ ಬಗೆಗೆ, ರಾಮಸ್ವರೂಪರು, ಮಹತ್ತ್ವದ ಅಂಶವೊಂದನ್ನು ಹೇಳಿದ್ದಾರೆ : ಪ್ರಾಚೀನ ರೋಮ್, ಗ್ರೀಸ್ ಮತ್ತು ಈಜಿಪ್ಟ್ ದೇಶಗಳು ಬಹುದೇವತಾರಾಧನೆಯ ಸಂಸ್ಕೃತಿಗಳನ್ನು ರೂಪಿಸಿಕೊಂಡಿದ್ದವು. ಅವು ಬೇಕಾದಷ್ಟು ಯುದ್ಧಗಳನ್ನು ಮಾಡಿರಬಹುದು. ಆದರೆ ಅವು ಯಾವುವೂ ಮತ-ಆಧಾರಿತ ಯುದ್ಧಗಳಾಗಿರಲಿಲ್ಲ, ಎಂಬುದು ಗಮನಿಸಬೇಕಾದ ಅಂಶ. ಪ್ರಾಚೀನ ರೋಮ್ ದೇಶದಲ್ಲಿ ಬೇರೆಬೇರೆ ಮತ, ಕೋಮು, ಪಂಥಗಳಿಗೆ ಸೇರಿದ ಜನರಿದ್ದರು, ಅವರೆಲ್ಲ ತಮ್ಮ ತಮ್ಮ ದೇವಾಲಯಗಳನ್ನು ನಿರ್ಮಿಸಿಕೊಂಡಿದ್ದರು, ತಮ್ಮದೇ ವಿಶಿಷ್ಟ ಆರಾಧನಾ ಪದ್ಧತಿಯಿಟ್ಟುಕೊಂಡಿದ್ದರು. ಆದರೆ, ಏಕಮಾತ್ರ ಸತ್ಯದೇವನ ಮತವಾದ ಕ್ರೈಸ್ತಮತವು ರೋಮ್ ದೇಶವನ್ನು ಆಪೋಶನ ತೆಗೆದುಕೊಂಡ ಮೇಲೆ, ಅಲ್ಲಿ ಹಿಂದಿದ್ದ ಧಾರ್ಮಿಕ ಸ್ವಾತಂತ್ರ್ಯವು ಹೊರಟೇಹೋಯಿತು.
 ಏಕದೇವತಾರಾಧನೆಯು ಎಂದೂ ಆಧ್ಯಾತ್ಮಿಕ ತತ್ತ್ವವಾಗಿರಲಿಲ್ಲ. ಹೆಚ್ಚುಪಾಲು ಅದು ಮತಸಿದ್ಧಾಂತವಾಗಿತ್ತು. ಹಾಗಾಗಿ, ಅದು ಯುದ್ಧಗಳಿಗೆ ಕಾರಣವಾಯಿತು ಮತ್ತು ಈ ಪ್ರಕ್ರಿಯೆಯು ಮತ್ತಷ್ಟು ಯುದ್ಧಗಳನ್ನು ಹುಟ್ಟುಹಾಕಿತು. ಬೇರೆಬೇರೆ ಬುಡಕಟ್ಟುಗಳ ಜನರು ತಮ್ಮ ದೇವರೇ ಸರ್ವಶ್ರೇಷ್ಠವಾದುದೆಂಬ ವಾದ ಹೂಡಿ, ಯುದ್ಧಗಳನ್ನು ಮಾಡಿದರು. ಕೊನೆಗೆ ಆದುದೇನು? ಸೋತ ಬುಡಕಟ್ಟುಗಳ ದೇವರುಗಳನ್ನು, ಗೆದ್ದ ಬುಡಕಟ್ಟಿನ ದೇವರುಗಳು ಓಡಿಸಿ, ತಾವು ಸ್ಥಾಪಿತವಾದವು. ಕೆಲವು ಬುಡಕಟ್ಟುಗಳ ಜನರು, ಅಧಿಕಾರಲಾಲಸೆಯಿಂದ ತಮ್ಮ ದೇವರುಗಳನ್ನು ಒಪ್ಪಿಸಿಬಿಟ್ಟವು. ಗೆದ್ದವರ ದೇವರುಗಳಿಂದ ಸ್ಥಾನಾಕ್ರಮಣವೂ ಆಯಿತು. ‘ಒಬ್ಬನೇ ಒಬ್ಬ ಗಾಡ್’ ಎಂಬ ವಿಚಾರ ಹಿಡಿದವರಿಗೆ, ಬೇರೆ ಬುಡಕಟ್ಟಿನವರನ್ನು ಗೆಲ್ಲಲು, ಸಾಮ್ರಾಜ್ಯಗಳನ್ನು ಕಟ್ಟಲು ಸುಲಭವಾಯಿತು. ಹೀಗೆ, ದೇಶದೇಶಗಳ ನಡುವಿನ ‘ವ್ಯವಹಾರ ಕೌಶಲ’ ರಕ್ತದಾಹದ ಖಡ್ಗ, ವ್ಯವಸ್ಥಿತ ವಿಧ್ವಂಸನಕಾರ್ಯಗಳು ಒಟ್ಟಾಗಿ ಸೇರಿ ಒಬ್ಬನೇ ಒಬ್ಬ ಗಾಡ್‌ನನ್ನು ‘ಸರ್ವೋನ್ನತ’ವಾಗಿಸಿದವು. ತುಂಬ ಹಿಂದಿನ ಕಾಲದಿಂದಲೇ, ಕ್ರೈಸ್ತಮತದ ಗಾಡ್‌ನಿಂದ, ರೋಮನ್ನರ ಸಾಮ್ರಾಜ್ಯಶಾಹಿ ಆವಶ್ಯಕತೆಗಳೂ ಪೂರೈಸಿದವು. ಅನಂತರದ ಕಾಲಾವಧಿಯಲ್ಲಿ ಇಡೀ ಯೂರೋಪಿಯನ್ನರ ಶಸ್ತ್ರಾಸ್ತ್ರಗಳ ಶಕ್ತಿ ಮತ್ತು ವ್ಯಾಪಾರಗಳಿಗೆ, ಬೈಬಲ್‌ನ – ಚರ್ಚ್‌ಗಳ ಗಾಡ್ ಕುಮ್ಮಕ್ಕು ನೀಡಿದ.
  ಅಖಂಡತೆಗೆ, ಏಕತೆಗೆ ಬೇಕಾದ ಹಂಬಲ – ಪ್ರಚೋದನೆಗಳು ಅಧ್ಯಾತ್ಮದ ಹಿನ್ನೆಲೆಯಿಂದ ಮೂಡಿದವುಗಳಾದರೆ, ಒಬ್ಬ ಗಾಡ್ ಎಂಬಂತಹ ಮತಸಿದ್ಧಾಂತದಲ್ಲಿ ತಪ್ಪೇನೂ ಇಲ್ಲ. ಏಕಂ ಸತ್… ಎನ್ನುತ್ತಾ ಅದ್ವೈತದೆಡೆಗೆ ಸಾಗುವ ಮುಮುಕ್ಷುವಿನ ಸಾಧನಾಪಥವೂ ಇದೇ ರೀತಿ ಎನ್ನಬಹುದು. ಸಾಧಕನು ಆಗ ಒಬ್ಬನೇ ಒಬ್ಬ ದೇವರು ಎನ್ನದೇ, ದೇವರು ಮಾತ್ರ ಮುಮುಕ್ಷುವಿನ ಅಧ್ಯಾತ್ಮ ಪಥದ ಗುರಿ, ಎನ್ನುವುದನ್ನು ಅರಿಯುತ್ತಾನೆ.
  ಆದರೆ, ಅಖಂಡತೆಗೆ – ಏಕತೆಗೆ ಬೇಕಾಗುವ ಪ್ರೇರಣೆಯು ಕೇವಲ ಬೌದ್ಧಿಕ ಸ್ತರದ್ದಾದರೆ ದೊರೆಯುವ ಆಧ್ಯಾತ್ಮಿಕ ಪ್ರಯೋಜನವು ಕಡಿಮೆಯೇ. ದೇವರು ಕೇವಲ ಬಾಹ್ಯಕ್ಕೆ ಸೀಮಿತನಾಗಿಬಿಡುತ್ತಾನೆ; ಹಾಗಾಗಿ ಅವನು ಆತ್ಮಜ್ಞಾನದಿಂದ ದೊರೆಯುವ ಪರಮಸತ್ಯವಾಗುವುದಿಲ್ಲ. ಈ ಹಾದಿಯಲ್ಲಿ ದೇವರುಗಳ ಸಂಖ್ಯೆಯು ಕಡಿಮೆಯಾದರೆ ಸಹಾಯವೇನೂ ಆಗುವುದಿಲ್ಲ. ಕ್ರೈಸ್ತಮತವು ಸಾಗಿದ ಸಿದ್ಧಾಂತದ ಹಿನ್ನೆಲೆಯಲ್ಲಿ ಹೇಳುವುದಾದರೆ, ಈ ಹಾದಿಯಲ್ಲಿ ಸೈತಾನರ, ಡೆವಿಲ್‌ಗಳ ಸಂಖ್ಯೆಯು ಹೆಚ್ಚಾಗಬಹುದು, ಅಷ್ಟೇ. ಮಧ್ಯಯುಗದ (ಸಾಮಾನ್ಯ ಯುಗದ 5ನೆಯ ಶತಮಾನದಿಂದ, 15ನೇ ಶತಮಾನದವರೆಗಿನ ಅವಧಿ) ಕ್ರೈಸ್ತಮತದ ಇತಿಹಾಸವು, ಬರಿಯ ಸೈತಾನನ ಉಪಾಖ್ಯಾನಗಳಿಂದಲೇ ತುಂಬಿಹೋಗಿದೆ. ಅನೇಕ ಶತಮಾನಗಳ ದೀರ್ಘಾವಧಿಯ ಚರ್ಚ್‌ನ ಇತಿಹಾಸದಲ್ಲಿ, ಬೇರೆ ಯಾವುದರ ಬಗೆಗೂ ಗಮನವಿಲ್ಲದಂತಹ ಸೈತಾನ-ಕೇಂದ್ರಿತ ಸಂಗತಿಗಳೇ ತುಂಬಿಬಿಟ್ಟಿವೆ. ಈ ಅವಧಿಯಲ್ಲಿ, ಈ ಚರ್ಚ್‌ಗಳು ಗಾಡ್‌ನನ್ನು ಆರಾಧಿಸುತ್ತಿದ್ದವೋ ಅಥವಾ ಸೈತಾನನ ಆರಾಧನೆಯಲ್ಲಿ ತೊಡಗಿಕೊಂಡಿದ್ದವೋ, ಎಂಬ ಅನುಮಾನ ಹುಟ್ಟುತ್ತದೆ. ಓರ್ವ ಪರಿಣತರು ಒಟ್ಟು ಡೆಮನ್‌ಗಳ ಸಂಖ್ಯೆಯು ಅರವತ್ತೈದು ಲಕ್ಷ, ಎಂದರೆ, ಇನ್ನೋರ್ವರು 79,05,926 ಡೆಮನ್‌ಗಳನ್ನು 72 ಜನ ನರಕದ ಅಧಿಪತಿಗಳು ನಿಯಂತ್ರಿಸುತ್ತಿದ್ದರು, ಎಂದು ಲೆಕ್ಕ ಹಾಕಿದ್ದಾರೆ. ಚರ್ಚ್‌ಗಳ ಕಾರ್ಯವನ್ನು – ನಿಯುಂತ್ರಣವನ್ನು ಹಾಳುಮಾಡಲು ಇವರೆಲ್ಲರೂ ಪಿತೂರಿ ಮಾಡುತ್ತಿದ್ದರಂತೆ. ಪ್ರತಿಯೊಬ್ಬ ನರಕಾಧಿಪತಿಗೂ ಪ್ರತ್ಯೇಕ ಕೆಲಸ. ಉದಾಹರಣೆಗೆ ಲ್ಯೂಸಿಫೆರ್ ದುರಹಂಕಾರವನ್ನು, ಅಸ್ಮೊಡ್ಯೂಸ್ ವ್ಯಭಿಚಾರವನ್ನು, ಬೆಲ್‌ಫೆಗೊರ್ ಮೈಗಳ್ಳತನವನ್ನು ಉತ್ತೇಜಿಸುತ್ತಿದ್ದರಂತೆ.
 ಇತಿಹಾಸವನ್ನು ಗಮನಿಸಿದಾಗ, ಜಗತ್ತಿನ ಬಹುದೊಡ್ಡ ಭೂಭಾಗಗಳಲ್ಲಿ, ಕ್ರೈಸ್ತರ-ಮುಸ್ಲಿಮರ ಆಳ್ವಿಕೆಯು ಪ್ರಬಲವಾಗಿದ್ದಾಗ, ಈ ಮತಗಳ ಸಾಮ್ರಾಜ್ಯಶಾಹಿಯು, ಏಕದೇವತಾರಾಧನೆಯ ಮತಸಿದ್ಧಾಂತಕ್ಕೆ ಅಗಾಧವಾದ ಬೆಂಬಲ ನೀಡಿರುವುದು ಕಾಣುತ್ತದೆ. ಕ್ರೈಸ್ತ – ಮುಸ್ಲಿಂ ಮತಗಳ ಪಾದ್ರಿ – ಮುಲ್ಲಾಗಳ ಪುರೋಹಿತಶಾಹಿಯಿಂದ ಬೆಂಬಲಿತರಾದ ಸರ್ವಾಧಿಕಾರಿಗಳು, ಪ್ರಜಾಪೀಡಕರ ಪಡೆಗಳನ್ನು ಸ್ಥಾಪಿಸಿ, ಬೇರೆ ಮತಧರ್ಮಗಳ ಜನರನ್ನು ಹಿಂಸಿಸುತ್ತಿದ್ದರು. ಅವರಿಗೆ ತತ್ತ್ವಜ್ಞಾನದ ಪರಿಭಾಷೆ ಮತ್ತು ಮತದ ಪರಿಭಾಷೆಗಳ ನಡುವಿನ ವ್ಯತ್ಯಾಸವೇ ತಿಳಿದಿರಲಿಲ್ಲ. ಹುಟ್ಟುದಡ್ಡರ ಮೇಲೆ, ಮುಠ್ಠಾಳರ ಮೇಲೆ, ಇದು ಎಂತಹ ಪ್ರಭಾವ ಬೀರಲು ಸಾಧ್ಯ ಎಂಬುದಕ್ಕೆ ಡಾ॥ತಾರಾಚಂದ್ ಮತ್ತು ಅವರ ಗುಂಪಿನ ಸಿದ್ಧಾಂತವನ್ನು ಗಮನಿಸಬಹುದು. ಸಾಮಾನ್ಯ ಯುಗದ 8ನೇ ಶತಮಾನದ ಆದಿಭಾಗದಲ್ಲಿ, ಕೇರಳಕ್ಕೆ ಬಂದ ಮುಸ್ಲಿಂ ವ್ಯಾಪಾರಿಗಳು (ವ್ಯಾಪಾರಿಗಳು ಎಂಬುದನ್ನು ಗಮನಿಸಿ) ಭಾರತಕ್ಕೆ ತಂದ ಇಸ್ಲಾಮಿನ ಏಕದೇವತಾರಾಧನೆಯ ಮತಸಿದ್ಧಾಂತದ ಅನುಕರಣೆಯೇ, ಆದಿಶಂಕರಾಚಾರ್ಯರ ಅದ್ವೈತ ಸಿದ್ಧಾಂತ, ಎನ್ನುತ್ತದೆ ಡಾ॥ತಾರಾಚಂದರ ದಿವ್ಯ ಸಂಶೋಧನೆ.
 ನಿಶ್ಚೇಷ್ಟಿತ ಮನಸ್ಸು ಮತ್ತು ಜಡವಾದ ಬೌದ್ಧಿಕತೆಗಳೂ ಸೃಷ್ಟಿಸಿರುವ ಆಸ್ತಿಕತೆಯ ರೂಪವೇ ಈ ಏಕದೇವತಾರಾಧನೆ ಎಂಬ ಸಿದ್ಧಾಂತ. ಇದು ಕೇವಲ ಮತಸಿದ್ಧಾಂತೀಯ ಪರಿಕಲ್ಪನೆಯೇ ಹೊರತು, ಅಧ್ಯಾತ್ಮದಿಂದ ಮೈದಾಳಿದ ಜ್ಞಾನಕುಸುಮವಲ್ಲ. ಹಾಗಾಗಿಯೇ, ಅಂತಹ ಸಿದ್ಧಾಂತಗಳು ಮನುಷ್ಯನ ಮನೋಲೋಕದ ಯಾವುದೇ ಆಯಾಮವನ್ನು ಬೆಳಗುವುದಿಲ್ಲ ಮತ್ತು ಮಾನವಜೀವಿಗಳ ಸ್ವಭಾವ – ವರ್ತನೆಗಳಲ್ಲಿ ನೈತಿಕ ಸುಧಾರಣೆಗಳಿರುವುದಿಲ್ಲ. ಅವುಗಳದ್ದು ಬರಿಯ ಯಾಂತ್ರಿಕ ಚಲನಶೀಲತೆ, ಅವು ಬರಿಯ ಕುತರ್ಕ ಮತ್ತು ಜಗಳಗಂಟಿತನದ ಪರಿಭಾಷೆಗಳನ್ನು ಹುಟ್ಟುಹಾಕುತ್ತವೆ. ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಅವು ನಿಷ್ಪ್ರಯೋಜಕ ಮತ್ತು ಅವು ಅರಿವಿನ ಪಥದ ಅಡಚಣೆಗಳು ಮಾತ್ರ. ಮಾನವಜೀವಿಯ ಅಭ್ಯುದಯ – ಉತ್ಥಾನಗಳಲ್ಲಿ ಶ್ರದ್ಧೆಯಿರುವವರು, ಈ ಏಕದೇವತಾರಾಧಕ ಮತಸಿದ್ಧಾಂತಗಳ ಪರಿಕಲ್ಪನೆಗಳನ್ನು ಪಿಡುಗುಗಳೆಂಬಂತೆ ದೂರವಿಡಬೇಕು.
 ತುಂಬ ಬೇಸರದ ವಿಷಯವೆಂದರೆ, ಈ ಏಕದೇವತಾರಾಧನೆಯು ದ್ವೇಷಭಾವದ ಅನೇಕ ಪದಗಳನ್ನೇ ಹುಟ್ಟುಹಾಕಿತು: ಕಾಫಿರ್, ಅವಿಶ್ವಾಸಿ, ಮತದ್ರೋಹಿ, ಇನ್‌ಫೈಡೆಲ್, ಮುಂಕೀರ್, ಹೀದನ್, ಪೇಗನ್, ಮುಶ್ರಿಕ್, ಆಷಾಢಭೂತಿ, ಬಹುದೇವತಾರಾಧಕ, ಸರ್ವದೇವತಾರಾಧಕ (ಸಿಕ್ಕಿದ್ದನ್ನೆಲ್ಲಾ, ಕಂಡಿದ್ದನ್ನೆಲ್ಲಾ ಪೂಜೆ ಮಾಡುವವನು ಎನ್ನುವ ನಕಾರಾತ್ಮಕ ಅರ್ಥದಲ್ಲಿ), ಪಾಷಂಡಿ (ಕ್ರೈಸ್ತಮತ ವಿರೋಧಿ) ಇತ್ಯಾದಿ. ಇದು ಜಗತ್ತಿನ ಎಲ್ಲ ಮಾನವ-ಮಾನವರ ನಡುವೆ ಅಡ್ಡಗೋಡೆ ನಿರ್ಮಿಸಿದೆ, ಅಷ್ಟೇ ಅಲ್ಲ, ರಕ್ತಪಿಪಾಸು ಯುದ್ಧದಾಹಿಗಳ ಗುಂಪುಗಳನ್ನೇ ಎಲ್ಲೆಡೆ ಹುಟ್ಟುಹಾಕಿದೆ. ಇವು ಬರಿಯ ದೂಷಣೆಯ ಪದಗಳಲ್ಲ. ಗಲಭೆಗಳ ವೇಳೆಯಲ್ಲಿ ಶಾಂತಿಪ್ರಿಯ ನಾಗರಿಕರ ಮೇಲೆ ಬೀದಿ ಗೂಂಡಾಪಡೆಯು ಕಲ್ಲು ಎಸೆದು ಘಾಸಿ ಮಾಡುವಂತಹ, ಭರ್ತ್ಸನೆಯ – ಪರಹಿಂಸೆಯ ಹೀಯಾಳಿಕೆಗಳು, ದ್ವೇಷದ ಈ ಮನೋಭಾವದಿಂದಲೇ, ಕ್ರೈಸ್ತರ ಪರಮತಹಿಂಸೆಯ ಕ್ರುಸೇಡುಗಳು, ಮುಸ್ಲಿಮರ ವಿನಾಶಕಾರೀ ಜಿಹಾದ್‌ಗಳು, ಸಮೂಹ ಜನಹತ್ಯೆಗಳು, ಪರಮತೀಯರಿಗೆ ದಂಡನೆ ನೀಡುವ ಇನ್‌ಕ್ವಿಸಿಷನ್ನುಗಳು, ಸಾಮ್ರಾಜ್ಯಶಾಹಿ ಆಕ್ರಮಣಗಳು ಮತ್ತು ಲೂಟಿ – ಸುಲಿಗೆ – ಡಕಾಯಿತಿ – ಪರಮತೀಯ ಸ್ತ್ರೀ ಪುರುಷರ ಮಾನಭಂಗ – ಗುಲಾಮೀಕರಣಗಳು ಹುಟ್ಟಿದವು. ಈ ದ್ವೇಷದ ಪದಗಳಿಂದಲೇ, ನಿಷ್ಪಾಪಿ ಮುಗ್ಧ ಜನರ ರಕ್ತದ ನದಿಗಳೇ ಹರಿದವು. ಈ ಪದಗಳಿಂದ ಮಾನವಜೀವಿಯ ಆಧ್ಯಾತ್ಮಿಕ ವಿಕಾಸಕ್ಕೆ – ನೈತಿಕ ಪ್ರಗತಿಗೆ ಸ್ವಲ್ಪವೂ ಅವಕಾಶವಾಗಲಿಲ್ಲ. ಏಕದೇವತಾರಾಧಕನು ಹೇಳುವ ವಿಶ್ವಮಾನವ ಸೋದರತ್ವ – ಬ್ರದರ್‌ಹುಡ್‌ಗಳು ಕೇವಲ ಅವನ ಮತವನ್ನು ಒಪ್ಪಿಕೊಂಡವರಿಗೆ ಮಾತ್ರ. ಬೇರೆ ರೀತಿಯ ಸೋದರಭಾವವು ಅವನ ಪರಿಕಲ್ಪನೆಯಲ್ಲಿಯೇ ಇಲ್ಲ, ಪದಕೋಶದಲ್ಲಿಯೇ ಇಲ್ಲ.
 ಇನ್ನೂ ಅಸಹ್ಯವಾದ, ವಿಕೃತವಾದ ವಾದವೆಂದರೆ, ವಿಗ್ರಹಾರಾಧನೆಯನ್ನು ದ್ವೇಷಿಸುವ ಈ ಇಸ್ಲಾಂ – ಕ್ರೈಸ್ತ ಮತಗಳ ಪ್ರಚಾರಕರು ಉದ್ಧಾರಕ, ಪ್ರವಾದಿ, ಉಮ್ಮಾ, ಇಲ್ಹಮ್, ಚರ್ಚ್, ದಿವ್ಯಜ್ಞಾನ – ರೆವಲೇಷನ್ ಇತ್ಯಾದಿಗಳ ಹೆಸರಿನಲ್ಲಿ ಮಾನವೇತಿಹಾಸ ಕಂಡು ಕೇಳಿ ಅರಿಯದ ಕುಲಗೆಟ್ಟ ರೀತಿಯ ಮೂರ್ತಿಪೂಜೆಯನ್ನೇ ಆಗ್ರಹಿಸುತ್ತಿದ್ದಾರೆ. ಈ ಉದ್ಧಾರಕರ ಬಗೆಗೆ, ಪ್ರವಾದಿಗಳ ಬಗೆಗೆ, ಸೇಂಟ್ – ಸೂಫಿಗಳ ಬಗೆಗೆ ಪವಾಡಗಳನ್ನು ಆರೋಪಿಸುವುದು, ಸತ್ತವರ ಮೇಲೆ ಅಮರತ್ವವನ್ನು ಹೇರುವುದು ಸಹ ಇವರ ಪ್ರಚಾರದ ಭಾಗವಾಗಿದೆ. ಇಷ್ಟು ಸಾಲದೆಂಬಂತೆ, ಪ್ರವಾದಿಗಳ-ಉದ್ಧಾರಕರ ಜೊಲ್ಲು, ಕೂದಲು, ಶವದ ಮೇಲಿನ ಬಟ್ಟೆ, ಶೂ, ಹೊಲಸು, ಕೊಳಕು, ಧೂಳು ಇತ್ಯಾದಿಗಳ ಮೇಲೆ ಅತಿಮಾನುಷತೆಯ – ದೈವತ್ವದ ಆರೋಪ ಮಾಡಲಾಗುತ್ತಿದೆ. ಇದರ ಪರಿಣಾಮವೆಂದರೆ, ಮೌಢ್ಯದ ಅತಿರೇಕವೆಂಬಂತೆ, ಶವಗಳಿಗೆ – ಶವಪೆಟ್ಟಿಗೆಗಳಿಗೆ ಅತಿದೈನ್ಯದಿಂದ ಅಡ್ಡಬೀಳುವುದು, ಮುತ್ತಿಕ್ಕುವುದು ಪ್ರಾರಂಭವಾಯಿತು. ಹೀಗೆ ಪ್ರವಾದಿಗಳ – ಸಂತರ ಕಳೇಬರಗಳು – ಅವಶೇಷಗಳು ಅಂಕೆಯಿಲ್ಲದಷ್ಟು ಹೆಚ್ಚಾದವು, ಅವುಗಳ ವ್ಯಾಪಾರ, ಮಾರಾಟಗಳೂ ಆರಂಭವಾದವು. ಶ್ರೇಷ್ಠ ಮಟ್ಟದ ಶಿಲ್ಪಕಲೆಯ ದೇವಾಲಯಗಳ ಸ್ಥಳದಲ್ಲಿ, ಕೊಳೆತು ನಾರುವ ಗೋರಿಗಳು ಹುಟ್ಟಿಕೊಂಡವು. ಇಂತಹ ಸ್ಮಾರಕಗಳ – ಗೋರಿಗಳ ಬಳಿ ನಡೆಯುವ ಪ್ರಾಣಿಬಲಿಗಳ ಬಗೆಗೆ, ಮುಗ್ಧಜೀವಿಗಳ ಹತ್ಯೆಯ ಬಗೆಗೆ ಬರೆಯದಿರುವುದೇ ಉತ್ತಮ.
 ಈ ಇಸ್ಲಾಂ – ಕ್ರೈಸ್ತ ಏಕದೇವತಾರಾಧಕರು, ತಮ್ಮ ಖಡ್ಗ – ಬೆಂಕಿಗಳ ಬಲದ ಮುಂದೆ ಕಾಫಿರರ ಹುಸಿದೇವರುಗಳು ನಿಲ್ಲಲಿಲ್ಲ, ಪುಡಿಪುಡಿಯಾದವು; ತಾವು ವಿಗ್ರಹಭಂಜಕರು, ಬುದ್‌ಶಿಕನ್(ಬುದ್ಧನ ಪ್ರತಿಮಾಭಂಜಕರು), ಎಂದೆಲ್ಲಾ ಅಹಂಕಾರದಿಂದ ಬೀಗುವಾಗ, ಇನ್ನಷ್ಟು ಹಾಸ್ಯಾಸ್ಪದವಾದ ಹಂತ ತಲುಪುತ್ತಾರೆ. ಇವರ ಪ್ರವಾದಿಗಳು, ಸಂತರು, ಉದ್ಧಾರಕರು ಮಾಡಿದರೆಂದು ಹೇಳಿಕೊಳ್ಳುವ ಪವಾಡಗಳನ್ನು; ಅವರ ಜೊಲ್ಲು, ಕೂದಲು, ಶವದ ಮೇಲಿನ ಬಟ್ಟೆ, ಶೂ ಇತ್ಯಾದಿಗಳು ಮಾಡಿದ ಜಾದೂಗಳನ್ನು, ಈ ಪ್ರತಿಮೆಗಳು – ವಿಗ್ರಹಗಳು ಸಹ ಮಾಡಬೇಕೆಂದು ಇವರು ನಿರೀಕ್ಷಿಸುತ್ತಾರೋ, ಏನೋ? ಆದರೆ, ಯಾರಾದರೂ, ಈ ಎಲ್ಲ ಕಳೇಬರ – ಕೂದಲು -ಶವದ ಮೇಲಿನ ಬಟ್ಟೆ ಇತ್ಯಾದಿಗಳ ವೈಜ್ಞಾನಿಕ ಪರೀಕ್ಷೆ ಆಗಬೇಕೆಂದು ಹೇಳಿದರೆ ಮುಗಿದೇಹೋಯಿತು. ಆತನ ಮಾನಸಿಕ ಸ್ವಾಸ್ಥ್ಯವೇ ತಪ್ಪಿಹೋಗುತ್ತದೆ, ತನ್ನ ಮತಕ್ಕೆ ಅವಮಾನ ಮಾಡಿದರು, ಎನ್ನುತ್ತಾನೆ. ಅಷ್ಟೇ ಅಲ್ಲ, ತಡಮಾಡದೆ ರಸ್ತೆಗಿಳಿದು ಹಿಂಸೆ, ದೊಂಬಿ, ಗಲಭೆಗಳಲ್ಲಿ ತೊಡಗಿಕೊಳ್ಳುತ್ತಾನೆ.
  ದೇವತಾವಿಗ್ರಹಗಳು ಮನುಷ್ಯಜೀವಿಯ ಹೃದಯಗಳನ್ನು ಪವಿತ್ರೀಕರಿಸುತ್ತವೆ; ಅವು ಪವಾಡಗಳನ್ನು ಮಾಡುವುದು ಅವನ ಅಂತರಂಗದಲ್ಲಿ, ಎಂಬುದನ್ನು ಅರಿತವರು ಯಾರೂ ಈ ವಿಗ್ರಹಗಳೇ ಪವಾಡಗಳನ್ನು ಮಾಡುತ್ತವೆ, ಎನ್ನುವ ಮೂರ್ಖವಾದವನ್ನು ಮಾಡುವುದಿಲ್ಲ. ವಿಗ್ರಹಗಳೇ ಈ ಡಕಾಯಿತರಂತೆ, ಈ ಕೊಲೆಪಾತಕರಂತೆ ಶತ್ರುಗಳ ತಲೆ ಕತ್ತರಿಸಿ ತಾನು ಘಾಜಿ ಎಂದು ಬಡಾಯಿ ಕೊಚ್ಚುವುದಿಲ್ಲ; ಅಸಲು ಸ್ವ-ರಕ್ಷಣೆಗೆ ಕೈಯನ್ನೂ ಎತ್ತುವುದಿಲ್ಲ, ಕತ್ತಿಯನ್ನೂ ಎತ್ತುವುದಿಲ್ಲ. ಆದರೂ ಪಾಪ, ಈ ಏಕದೇವತಾರಾಧಕರು, ಹಿಂದೂಗಳು – ಬೌದ್ಧರು ಪೂಜಿಸುವ ವಿಗ್ರಹಗಳು ಮಾಟ ಮಂತ್ರ ಮಾಡುತ್ತವೆ, ಬಿರುಗಾಳಿ ತೂಫಾನುಗಳನ್ನು ಎಬ್ಬಿಸುತ್ತವೆ ಮತ್ತು ದೊಡ್ಡ ಸಂಖ್ಯೆಯ ಡೆಮನ್‌ಗಳನ್ನು ಸೃಷ್ಟಿಸುತ್ತವೆ,  ಎಂಬಂತಹ ಕಟ್ಟುಕಥೆಗಳನ್ನು ಶತಮಾನಗಳ ಕಾಲ ಹೇಳಿಕೊಂಡು ಬಂದಿದ್ದು, ಇನ್ನಷ್ಟು ಹಾಸ್ಯಾಸ್ಪದ.
  ಇಸ್ಲಾಂ-ಕ್ರೈಸ್ತ ಮತಗಳ ಕೆಲ ಖದೀಮ ಮತಪ್ರಚಾರಕ ವ್ಯಾಪಾರಿಗಳು ಬಡತನ ನಿವಾರಣೆ, ಪ್ರಾಯಶ್ಚಿತ್ತ, ಪಾಪನಿವೇದನೆ, ಸಹನೆ, ಶೀಲ, ಬ್ರಹ್ಮಚರ್ಯ, ವಿಧೇಯತೆ, ಇತ್ಯಾದಿ ಮುಖವಾಡ ಧರಿಸಿ ಮುಗ್ಧರನ್ನು ಪ್ರಭಾವಿಸುವುದುಂಟು. ಇವೆಲ್ಲ ಮೆಚ್ಚುವಂತಹ ಮೌಲ್ಯಗಳೇ, ಮನುಷ್ಯಜೀವಿಯ ಘನತೆಯನ್ನು ಹೆಚ್ಚಿಸುವಂತಹುವೇ. ಆದರೆ, ಪ್ರಜ್ಞೆ- ಸಮಾನತೆಗಳಂತಹ ಮೌಲ್ಯಗಳನ್ನು ಒಳಗೊಳ್ಳದ, ಆತ್ಮಶುದ್ಧಿಯಿಲ್ಲದ ಶೀಲ ಆಸ್ತಿಕತೆಗಳು ಮಾನವಜೀವಿಯನ್ನು ಅಪಾಯಕಾರಿಯನ್ನಾಗಿ ಮಾಡಿಬಿಡಬಹುದು. ನಿಜವಾದ ಅನುಕಂಪ – ಮಾನವಪ್ರೇಮ -ವಾತ್ಸಲ್ಯಗಳಿಲ್ಲದ, ಬಡಾಯಿ ಕೊಚ್ಚುವ ಶೀಲ-ಆಸ್ತಿಕತೆಗಳು ತಾನು ಮಾತ್ರವೇ ಸರಿ ಎನ್ನುವಂತಹ ಹಟಮಾರಿತನವನ್ನು ತುಂಬುತ್ತವೆ. ಇದಕ್ಕೆ ಮುಲ್ಲಾ – ಸೂಫಿ – ಪಾದ್ರಿಗಳ ಅಸಂಖ್ಯ ಉದಾಹರಣೆಗಳನ್ನು ನೀಡಬಹುದು. ಯಾರನ್ನೆಲ್ಲಾ ಇವರು ಕಾಫಿರರು, ಅವಿಶ್ವಾಸಿಗಳು ಎಂದೆಲ್ಲಾ ಜರಿಯುತ್ತಾರೋ, ಅಂತಹ ಬೇರೆ ಮತಧರ್ಮಗಳ ಜನರ ಮೇಲಿನ ಅಮಾನವೀಯವಾದ ದಬ್ಬಾಳಿಕೆ – ಕಿರುಕುಳಗಳಿಗೆ ಇವರೆಲ್ಲಾ ಕಾರಣರಾದರು; ಅಷ್ಟೇ ಅಲ್ಲ, ಪರಧರ್ಮಗಳ ಜನರ ಶವಗಳ ಮೇಲೆ ನಿರ್ಮಾಣವಾದ ಸಾಮ್ರಾಜ್ಯಶಾಹಿ ಆಡಳಿತದಲ್ಲಿ ಭೋಗದ ಸವಲತ್ತುಗಳನ್ನು ಪಡೆದ ಪಾಲುದಾರರೂ ಆದರು. ತಮ್ಮ ಕಠಿಣ ಹೃದಯ ಮತ್ತು ಮುಚ್ಚಿದ ಬಾಗಿಲಿನ ಮನಸ್ಸುಗಳ ಬಗೆಗೆ ಗಮನವೀಯದೆ, ಬೇರೆಯವರನ್ನು ಉಳಿಸಲು, ಉದ್ಧಾರ ಮಾಡಲು ಇವರೆಲ್ಲಾ ಹಾತೊರೆಯುವ ನಾಟಕವಾಡುತ್ತಾರೆ. ಇಂತಹವರು ಪರಮತ ದ್ವೇಷವನ್ನು ಮೊದಲು ಕೈಬಿಟ್ಟು, ಬೇರೆಯವರ ವಿಮೋಚನೆಗಾಗಿ ಶ್ರಮಿಸುವ ತೋರುಗಾಣಿಕೆಯನ್ನು ನಿಲ್ಲಿಸುವುದು ಉತ್ತಮ. ಬೇರೆಯವರನ್ನು ಗುಣಪಡಿಸುತ್ತೇನೆ, ಎನ್ನುವ ಮೋಸದ ಆಟ ಆಡುತ್ತಿದ್ದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನೀತಿಗೆಟ್ಟ ಪಾದ್ರಿಯು ಇದಕ್ಕೊಂದು ಉದಾಹರಣೆಯಾಗಿದ್ದ.
 ‘ಆತ್ಮೋದ್ಧಾರವಿಲ್ಲದ ಶೀಲ-ಆಸ್ತಿಕತೆಗಳು ಗುರಿಯಿಲ್ಲದಂತಹವು’, ಎಂದು ಬುದ್ಧನು ಒತ್ತಿ ಹೇಳುತ್ತಿದ್ದ. ನಾನು ಬರೀ ಶೀಲ – ಆಸ್ತಿಕತೆಗಳನ್ನು ಉಪದೇಶಿಸುತ್ತೇನೆ, ಎನ್ನುವವರು ಹೆಡ್ಡರು. ನಾನು ಪ್ರಜ್ಞೆಮತ್ತು ಸಮಾಧಿ ಸ್ಥಿತಿಗಳನ್ನು ಕಲಿಸುತ್ತೇನೆ, ಎನ್ನುತ್ತಿದ್ದ. ಭಕ್ತಿ ಶೀಲಗಳಿಗಿಂತ ಆತ್ಮಶುದ್ಧಿಯನ್ನು ಹಿಂದೂ ಅಧ್ಯಾತ್ಮವು ಸಾರಿಸಾರಿ ಹೇಳುತ್ತದೆ. ಆತ್ಮೋದ್ಧಾರ ಮತ್ತು ವಿಶ್ವವ್ಯಾಪಿ ದೃಷ್ಟಿಕೋನಗಳು ಹಿಂದೂ ಆಧ್ಯಾತ್ಮಿಕತೆಯ ವೈಶಿಷ್ಟ್ಯಗಳು. ಬೃಹದಾರಣ್ಯಕ ಉಪನಿಷತ್ತು ತಮಸೋಮಾ ಜ್ಯೋತಿರ್ಗಮಯ ಎನ್ನುತ್ತ ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು ಎನ್ನುತ್ತದೆ. ಪ್ರವಾದಿಯವರ ಸುನ್ನಾ ಮತ್ತು ಯಹೂದಿಗಳ ಹತ್ತು ದೈವಕಟ್ಟಳೆಗಳು ಬರಿಯ ಬಹಿರಂಗದ ಆಚಾರ ಸಂಹಿತೆಗಳೇ ಹೊರತು, ಅಂತರಂಗದ ಆಧ್ಯಾತ್ಮಿಕ ಅರಿವಿಗಾಗಿ ನಡೆಸುವ ಯಾತ್ರೆಗೆ ಸಹಾಯ ಮಾಡುವಂತಹುವಲ್ಲ. ಇಸ್ಲಾಂ – ಕ್ರೈಸ್ತ ಮತಗಳು ಹೇಳುವ ಆಡಂಬರದ ಶೀಲ – ಆಸ್ತಿಕತೆಗಿಂತ, ಬುದ್ಧನು ಸಾಲದು – ಕಡಿಮೆ ಎನ್ನುವ ಶೀಲ – ಆಸ್ತಿಕತೆಯು, ಎಷ್ಟೋ ಉತ್ತಮವಾದುದು, ವಿಶಾಲವಾದುದು. ಇಸ್ಲಾಂ – ಕ್ರೈಸ್ತ ಮತಗಳ ಆಸ್ತಿಕತೆಯು ಬಹುಬೇಗ ಭ್ರಷ್ಟವಾಗಿ ಪ್ರದರ್ಶನಪ್ರವೃತ್ತಿಯಾಗಿಬಿಡುತ್ತದೆ. ಇಂತಹ ಪ್ರದರ್ಶನಪ್ರಿಯತೆಗೆ ಸೂಫಿಗಳು ಉದಾಹರಣೆಗಳಾಗಿದ್ದಾರೆ. ನಿಜಾಮುದ್ದೀನ್ ಆಲಿಯಾ ಮತ್ತು ಶೈಕ್ ಫರೀದ್ ಗಂಜ್ ಶಕರ್ ಅವರ ಜೀವನಚರಿತ್ರೆಗಳು ಈ ಮಾತಿಗೆ ಸಾಕ್ಷಿಯಾಗಿವೆ.
  ದೇವರು ಎಂದರೆ ಸರ್ವಶಕ್ತ, ನಾವೆಲ್ಲಾ ಅವನೆಂದರೆ ಭಯಪಡಬೇಕು. ದೇವರೆದುರು ದೈನ್ಯದಿಂದ – ವಿಧೇಯತೆಯಿಂದ ವರ್ತಿಸಬೇಕು, ಎಂದೆಲ್ಲಾ ಮೊದಲೇ ಪರಿಭಾವಿಸಿಕೊಂಡು ಹಿಂದೂ ಋಷಿಮುನಿಗಳು ತಮ್ಮ ಚಿಂತನೆಯನ್ನು ಪ್ರಾರಂಭಿಸಲಿಲ್ಲ. ಹಾಗಾಗಿಯೇ, ವಿಶ್ವವ್ಯಾಪಿ ಅಧ್ಯಾತ್ಮದ ಅಪೂರ್ವ ವಿಚಾರಗಳು ಹೊಮ್ಮಲು ಸಾಧ್ಯವಾಯಿತು. ಅಂತೆಯೇ, ಬಾಹ್ಯಪ್ರಪಂಚದ ರೀತಿನೀತಿಯ ಆಧಾರದ ಮೇಲೆ, ಅಸ್ಪಷ್ಟವಾದ – ಅನುಮಾನಾತ್ಮಕವಾದ ತೀರ್ಮಾನಗಳನ್ನು ತಮ್ಮ ಕಣ್ಣುಗಳ ಮುಂದೆ ಇಟ್ಟುಕೊಂಡು ವಿಚಾರನಿರ್ಮಿತಿ ಮಾಡಲಿಲ್ಲ. ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ನಿಯಂತೃ ಆದ ಸರ್ವಶಕ್ತ ದೇವನೊಬ್ಬನ ಬಗೆಗೆ ವಿಶ್ವಾಸ ಇಟ್ಟುಕೊಂಡೇ – ಒಪ್ಪಿಕೊಂಡೇ ಮುಂದುವರೆಯಬೇಕೆಂದು ಸಹ ಎಂದೂ ಹೇಳಲಿಲ್ಲ. ಅಂತಹ ಸರ್ವಶಕ್ತ ದೇವನೊಬ್ಬನ ವಿಚಾರವನ್ನು ಮಾನವಾನುಭವದ ಪರೀಕ್ಷೆಗೆ – ವಿಶ್ಲೇಷಣೆಗೆ – ಚರ್ಚೆಗೆ ಒಳಪಡಿಸಬಾರದೆಂದು, ತಮ್ಮ ಶಾಸ್ತ್ರಗ್ರಂಥಗಳಲ್ಲಿ, ವೇದಗಳಲ್ಲಿ ಎಂದೂ ಹೇಳಿಲ್ಲ.
 ಹಿಂದೂ ಧರ್ಮದ ಋಷಿಮುನಿಗಳ ಚಿಂತನೆಗಳ – ವೈಚಾರಿಕತೆಯ ಆರಂಭ-ಬಿಂದುವು ಮನುಷ್ಯನೇ ಹೊರತು, ದೇವರಲ್ಲ. ಪ್ರತ್ಯಕ್ಷ ಪ್ರಮಾಣವು, ನೇರಗ್ರಹಿಕೆಯು ಪರೀಕ್ಷಾ ವೇದಿಕೆಯಾಗಿತ್ತೇ ಹೊರತು, ಮತಾಂಧ ‘ವಿಶ್ವಾಸ’ವಲ್ಲ. ಯುಗಗಳ ಹಿಂದಿನ ‘ಮಹಾಭಾರತ’ವೇ ಆಗಲೀ, ಇತ್ತೀಚಿನ ಕಾಲಮಾನದ ಚಂಡೀದಾಸನ ಕಾವ್ಯವೇ ಆಗಲೀ ‘ಸಬಾರ್ ಊಪರ್ ಮಾನುಷ ಸತ್ಯ’, ಅಂದರೆ ಅತಿದೊಡ್ಡ ಸತ್ಯ ಎಂದರೆ ಮನುಷ್ಯನೇ. ಹಾಗೂ ಮನುಷ್ಯನು ‘ಪರಮಂ ಗುಹ್ಯಂ’, ಎಲ್ಲ ರಹಸ್ಯಗಳಲ್ಲಿ ಪರಮ-ರಹಸ್ಯ.
  ಮನುಷ್ಯನು ಪೂರ್ವಭಾವೀ ಊಹೆಯೂ ಅಲ್ಲ ಅಥವಾ ದೇವರಂತೆ ಅಮೂರ್ತ ಪರಿಕಲ್ಪನೆಯೂ ಅಲ್ಲ. ಬದಲಿಗೆ ಮನುಷ್ಯನು ಪ್ರತ್ಯಕ್ಷ ಪ್ರಮಾಣಕ್ಕೆ ದೊರೆಯುವ ಇಂದ್ರಿಯಗೋಚರವಾದ ವಾಸ್ತವ, ಎಂಬುದನ್ನು ಹಿಂದೂ ಆಧ್ಯಾತ್ಮಿಕತೆಯು ಎತ್ತಿಹಿಡಿಯುತ್ತದೆ. ಅರಿವಿನ ಬೆಳಕಿನತ್ತ ಹೊರಟ ಹಿಂದೂ ಸಾಧಕನು, ತನಗೇ ಹಾಕಿಕೊಳ್ಳುವ ಮೊದಲ ಪ್ರಶ್ನೆಯೆಂದರೆ, ‘ಕೋಹಂ’ (ನಾನು ಯಾರು?). ಉಪನಿಷತ್ತುಗಳಲ್ಲಿ ಈ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸುತ್ತದೆ. ಇದೇ ಪ್ರಶ್ನೆಯನ್ನು, (ಸಾಮಾನ್ಯ ಯುಗದ) 20ನೇ ಶತಮಾನದಲ್ಲಿ ರಮಣ ಮಹರ್ಷಿಗಳೂ, ತಮ್ಮನ್ನು ತಾವೇ ಕೇಳಿಕೊಂಡರು. ಉತ್ತರ ಮಾತ್ರ ಹಳೆಯದೇ; ‘ಅಹಂ ಬ್ರಹ್ಮಾಸ್ಮಿ’, ನಾನೇ ಬ್ರಹ್ಮ, ನಾನೇ ಅದು.
 ಇಲ್ಲಿ ಇನ್ನೊಂದು ಮುಖ್ಯವಾದ ವಿಷಯವಿದೆ. ಆಧುನಿಕ ಯೂರೋಪು, ಕ್ರೈಸ್ತ ಮತಸಿದ್ಧಾಂತವನ್ನೂ – ಗಾಡ್ ಕುರಿತ ಕ್ರೈಸ್ತಮತೀಯ ಪರಿಕಲ್ಪನೆಯನ್ನೂ ತಿರಸ್ಕರಿಸಿ, ಪ್ರಾಚೀನ ಗ್ರೀಸ್ ಮತ್ತು ರೋಮ್‌ಗಳ ಮಾನವತಾವಾದಕ್ಕೆ ಹಿಂತಿರುಗಿದ ಮೇಲೆ, ಕಳೆದ ಎರಡು – ಮೂರು ಶತಮಾನಗಳಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಸಾಧಾರಣ ಪ್ರಗತಿಯನ್ನು ಸಾಧಿಸಿದುದು ಆಕಸ್ಮಿಕವಲ್ಲ. ಅಂತೆಯೇ, ಕ್ರೈಸ್ತೇತರರನ್ನು ಕೊಂದುಹಾಕುವ ಕ್ರೈಸ್ತ ಮಿಷನರಿಗಳ ಕ್ರುಸೇಡುಗಳ ಕಾಲದಲ್ಲಿ ಮತ್ತು ವಿಶ್ವದ ಎಲ್ಲ ಕ್ರೈಸ್ತೇತರ ಜನಾಂಗಗಳನ್ನು ನಾಗರಿಕರನ್ನಾಗಿಸುತ್ತೇವೆ, ಅದು ಶ್ವೇತವರ್ಣೀಯರ ಹೊಣೆ, ಎಂದೆಲ್ಲಾ ಬಿಳಿಯರು ಬಡಾಯಿ ಕೊಚ್ಚುತ್ತಿದ್ದ ಕಾಲದಲ್ಲಿ, ಪಾಶ್ಚಾತ್ಯ ಮಾನವತಾವಾದಿಗಳು ಹಿಂದೂ ಪರಂಪರೆಯನ್ನು – ಮೌಲ್ಯಗಳನ್ನು ಪ್ರಶಂಸಿದುದು ಸಹ ಆಕಸ್ಮಿಕವಲ್ಲ. ಹಾಗೆಯೇ, ಶ್ರಮಜೀವಿಗಳ ಸರ್ವಾಧಿಕಾರ ಎಂಬ ಹೆಸರಿನಲ್ಲಿ ಲೆನಿನ್ನನ ನೇತೃತ್ವದಲ್ಲಿ ರಷ್ಯಾದ ಬಾಲ್ಷೆವಿಕ್‌ರು, ಅಂದಿನ ಯೂರೋಪಿನ ಮಾನವತಾವಾದವನ್ನು ಕೈಬಿಟ್ಟು, ಬೈಬಲ್‌ನ ಗಾಡ್‌ನ ಮಾದರಿಯಲ್ಲಿ (ಕ್ರೈಸ್ತರ – ಕ್ರೈಸ್ತೇತರರ ನಡುವಿನ ಶಾಶ್ವತ ಯುದ್ಧದಂತೆ, ಮುಸ್ಲಿಮರ – ಮುಸ್ಲಿಮೇತರರ ನಡುವಿನ ನಿರಂತರ ಸಮರದಂತೆ) ಶಾಶ್ವತವಾದ ವರ್ಗಸಂಘರ್ಷದ ಸಿದ್ಧಾಂತವನ್ನು ತಮ್ಮದಾಗಿಸಿಕೊಂಡರು. ಆದುದರಿಂದಲೇ, ಸಾಮ್ಯವಾದವು ಮುಚ್ಚಿದ ಬಾಗಿಲಿನ ಸಿದ್ಧಾಂತ – ಸಮಾಜ – ಸಂಸ್ಕೃತಿ – ರಾಜ್ಯವ್ಯವಸ್ಥೆಗಳಿಗೆ ಕಾರಣವಾದುದು ಸಹ ಆಕಸ್ಮಿಕವಲ್ಲ. ಸೋವಿಯತ್ ಒಕ್ಕೂಟವು ಕುಸಿದ ಮೇಲೆ, ಇತಿಹಾಸದ ವರ್ಗಸಂಘರ್ಷದ ಹೆಸರಿನಲ್ಲಿ ನಡೆದ ಸಾಮೂಹಿಕ ನರಹತ್ಯೆ, ಹಿಂಸೆ, ದಬ್ಬಾಳಿಕೆಗಳ ಅಧ್ಯಾಯವೀಗ ಎಲ್ಲರಿಗೂ ತಿಳಿದಿದೆ. ಅದೇ ನೋಡಿ, ಯೂರೋಪಿನಲ್ಲಿ ಪ್ರಜಾಪ್ರಭುತ್ವವಿರುವ ಬೇರೆ ದೇಶಗಳು, ಮಾರ್ಕ್ಸ್ – ಎಂಗೆಲ್ಸ್ ಹೇಳಿದುದರಲ್ಲಿ ಮಾನವೀಯ ಅಂಶಗಳನ್ನು ಮಾತ್ರ ಉಳಿಸಿಕೊಂಡವು. ತರ್ಕ, ವೈಚಾರಿಕತೆ, ವಿವೇಚನೆ ಇಲ್ಲದ ಅಂಶಗಳನ್ನು ಕೈಬಿಟ್ಟವು. ದೋಷಪೂರ್ಣವಾದವುಗಳನ್ನು ಅನಂತರದ ಸಾಮಾಜಿಕ ಅಭಿವೃದ್ಧಿಯ ಪರ್ವದಲ್ಲಿ ಕೈಬಿಟ್ಟವು. ಕಲ್ಯಾಣರಾಜ್ಯದ ಸಮಾಜಗಳನ್ನು ಈ ದೇಶಗಳು ಹೇಗೆ ಸೃಷ್ಟಿಸಿದವು, ವಸಾಹತುಗಳಿಂದ ಹೇಗೆಲ್ಲಾ ನಿರ್ಗಮಿಸಬೇಕಾಯಿತು, ದೊಡ್ಡ ದೊಡ್ಡ ಸಾಮ್ರಾಜ್ಯಗಳ ನಿರ್ಮಾಣದ ಬಗೆಗೆ ಅವುಗಳ ಧೋರಣೆ ಹೇಗೆಲ್ಲಾ ಬದಲಾಯಿತು, ಎಂಬುದು ಇದೀಗ ಇತಿಹಾಸವಾಗಿ ಹೋಗಿದೆ.
 ಮಾನವತಾವಾದವು, ಮನುಷ್ಯನ ಬಗೆಗಿನ ಪರಿಕಲ್ಪನೆಯಿಂದಲೇ ಮುಂದುವರಿಯಬೇಕು. ಮಾನವತಾವಾದದ ಸಾರಭೂತ, ಸರ್ವೋತ್ಕೃಷ್ಟ ಶೋಧನೆಯು ಮಾನವನೆಂದರೆ ಯಾರು, ಏನು ಎಂಬುದರ ಕುರಿತೇ ಇರಬೇಕು. ಈ ಕುರಿತಂತೆ ವಿಭಿನ್ನ ಸಂಸ್ಕೃತಿಗಳು ವಿಭಿನ್ನ ವಿವರಣೆಗಳನ್ನು ನೀಡಿವೆ. ಹಿಂದೂ ಆಧ್ಯಾತ್ಮಿಕತೆಯು ಮಾನವನ ವ್ಯಕ್ತಿತ್ವವನ್ನು ಇನ್ನಿಲ್ಲದಂತೆ ಪರಿಶೋಧಿಸಿದೆ. ಪರಿಶೀಲನೆಗೆ-ವಿಶ್ಲೇಷಣೆಗೆ ಬಾಧಕ ತರುವ ಯಾವುದೇ ಪೂರ್ವಾಗ್ರಹಪೀಡಿತ ಸಿದ್ಧಾಂತವಿಲ್ಲಿಲ್ಲ. ತಳಮಟ್ಟ ಶೋಧಿಸಲು ಹೊರಟ ಅಪರಿಮಿತ ಕುತೂಹಲವು ಮಾತ್ರವೇ ಮುನ್ನಡೆಸಿರುವ, ಈ ಹಿಂದೂ ಆಧ್ಯಾತ್ಮಿಕತೆಯು ಏನನ್ನು ಹೇಳುತ್ತದೆ, ಎಂಬುದನ್ನು ಈಗ ಗಮನಿಸೋಣ. ಈ ಬಗೆಯ ಪರಿಶೋಧನೆಯ ಸಾರವೇ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಮಾಜದ ಆಧ್ಯಾತ್ಮಿಕ ಕೇಂದ್ರ.
 ಹಿಂದೂ ಸಮಾಜವೀಗ ಸರಿಯಾಗಿ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಈ ಇಸ್ಲಾಂ ಮತ್ತು ಕ್ರೈಸ್ತ ‘‘ಮತ’’ಗಳು ಕೇವಲ ಸಾಮ್ರಾಜ್ಯಶಾಹಿ ‘ಸಿದ್ಧಾಂತ’ಗಳೇ ಹೊರತು ನಿಜವಾದ ಅರ್ಥದ ಮತಧರ್ಮಗಳಲ್ಲ. ವಿಶ್ವದ ಬಹುಪಾಲು ದೇಶಗಳ ಸಂಸ್ಕೃತಿ ನಾಗರಿಕತೆಗಳನ್ನು ಇವು ಗರಗಸದಂತೆ ಚೂರುಚೂರು ಮಾಡಿವೆ. ವಿವೇಚನೆ ನೈತಿಕತೆಗಳಂತಹ ಉನ್ನತ ಮೌಲ್ಯಗಳನ್ನು ಇವುಗಳಿಗೆ ‘ಆರೋಪಿಸಿ’ ಶಾಂತಿ, ಸೌಹಾರ್ದಗಳಿಂದ ಆಲಂಗಿಸಲು ಹೋಗುತ್ತಿರುವುದು ಹಿಂದೂ ಸಮಾಜದ ಆತ್ಮಹತ್ಯಾತ್ಮಕವಾದ – ಭ್ರಮಾತ್ಮಕವಾದ ತಪ್ಪು ಹೆಜ್ಜೆಯಾಗಿದೆ. ಅಂತಹ ಶಾಂತಿಯ ಮೊರೆಯು, ಅವುಗಳ ಕಿವುಡು ಕಿವಿಗಳಿಗೆ ಕೇಳಿಸುವುದೇ ಇಲ್ಲ. ಅಪಾಯಕಾರಿ ಕೇಡನ್ನು ಪರಿಣಾಮಕಾರಿಯಾಗಿ ಎದುರಿಸಲು, ಅದಕ್ಕೆ ಅನುಗುಣವಾದ – ಶಕ್ತಿಯುತವಾದ ವಿಧಾನ  ಮಾರ್ಗಗಳನ್ನೇ ಅನುಸರಿಸಬೇಕು. ‘‘ಬಾತುಕೋಳಿಗಳು ಶಾಂತಿಯ ನಿರ್ಣಯವನ್ನು ಅಂಗೀಕರಿಸಿದರೆ, ತೋಳ ಒಪ್ಪುವುದಿಲ್ಲ’’ ಎಂಬುದನ್ನು ನಾವು ಮರೆಯಬಾರದು. ಇಸ್ಲಾಂ ಮತ್ತು ಕ್ರೈಸ್ತ ‘‘ಮತ’’ಗಳ ಆಕ್ರಮಣಕಾರಿ – ಸಾಮ್ರಾಜ್ಯಶಾಹಿ ಸಿದ್ಧಾಂತಗಳೆದುರು, ಹಿಂದೂ ಸಮಾಜದ ಸಹಿಷ್ಣುತೆ – ಶಾಂತಿ ಸಂದೇಶಗಳು ಮೂರು ಕಾಸಿನ ಪ್ರಯೋಜನಕ್ಕೂ ಬರುವುದಿಲ್ಲ.

 – ಮಂಜುನಾಥ  ಅಜ್ಜಂಪುರ

   

Leave a Reply