ಈ ವ್ಯಕ್ತಿತ್ವವನ್ನು ಯಾವ ತಕ್ಕಡಿ ಸರಿದೂಗಿಸೀತು?

ಮಹಿಳೆ - 0 Comment
Issue Date : 23.05.2016

ತನ್ನ ಅಂಧ ತಂದೆ-ತಾಯಿಯನ್ನು ತಕ್ಕಡಿಯಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಶ್ರವಣ ಕುಮಾರನ ಮಾತೃ-ಪಿತೃ ಭಕ್ತಿಯ ಬಗ್ಗೆ ಕೇಳಿದ್ದೇವೆ. ಆ ಕತೆಯನ್ನು ಓದುವಾಗೆಲ್ಲ ಶ್ರವಣ ಕುಮಾರನ ಪಾತ್ರ ಈಗೆಲ್ಲ ಊಹೆಗೂ ನಿಲುಕದ್ದು ಎಂದುಕೊಂಡು ನಿಟ್ಟುಸಿರುಬಿಟ್ಟಿದ್ದೇವೆ. ಆದರೆ ಮಧ್ಯಪ್ರದೇಶದ ಜಬಲ್‌ಪುರದ ವಾರ್ಗಿ ಎಂಬ ಹಳ್ಳಿಯಲ್ಲಿ ಆಧುನಿಕ ಶ್ರವಣ ಕುಮಾರನೊಬ್ಬ ಇದ್ದಾನೆ. ದೇಶದ ಪ್ರೇಕ್ಷಣೀಯ ದೇವಾಲಯಗಳಿಗೆಲ್ಲ ಭೇಟಿ ನೀಡಬೇಕೆಂಬ ಅಂಧ ತಾಯಿಯ ಆಸೆಯನ್ನು ಬಹುಪಾಲು ಈಡೇರಿಸಿದ್ದಾನೆ. ತಾನು 25 ವರ್ಷದ ಆಸುಪಾಸಿನಲ್ಲಿದ್ದಾಗ ಆರಂಭಿಸಿದ್ದ ಯಾತ್ರೆ ಇದೀಗ ಆತನಿಗೆ 50 ತುಂಬುವ ಹೊತ್ತಿಗೆ ಭಾರತದ ಹಲವು ಪ್ರೇಕ್ಷಣೀಯ ದೇವಾಲಯಗಳನ್ನು ಸುತ್ತಿಕೊಂಡು ಬಂದಿದೆ.
ಕಾಲ್ನಡಿಗೆಯಲ್ಲೇ ಆತ ಇದುವರೆಗೂ ಸಂಚರಿಸಿದ ದೂರ ಬರೋಬ್ಬರಿ 36,000 ಕಿ.ಮೀ.! ತಕ್ಕಡಿಯ ಒಂದು ಕಡೆ ತನ್ನ 92 ವರ್ಷದ ತಾಯಿಯನ್ನು ಕೂರಿಸಿಕೊಂಡಿರುವ ಈತ ಇನ್ನೊಂದೆಡೆ ದಿನಬಳಕೆಗೆ ಬೇಕಾಗಿರುವ ಸಾಮಾನುಗಳನ್ನು ತುಂಬಿಕೊಂಡಿದ್ದಾನೆ. ರಸ್ತೆಯಲ್ಲಿ ಸಿಗುವ ಜನ ಈತನ ಮಾತೃಭಕ್ತಿಯನ್ನು ಕಂಡು ಸಂತಸದಿಂದ ಏನನ್ನಾದರು ಕೊಟ್ಟರೆ ಅದೇ ಅಂದಿನ ಊಟಕ್ಕೆ. ತನ್ನ ಬಳಿ ಇರುವ ಪಾತ್ರ ಪಗಡೆಗಳನ್ನು ಉಪಯೋಗಿಸಿ ಅಗತ್ಯವಿದ್ದಾಗ ಈತನೇ ಅಡುಗೆಯನ್ನೂ ಮಾಡಿ ಅಮ್ಮನಿಗೆ ಕೈತುತ್ತು ನೀಡುತ್ತಾನೆ.
ಹೌದು, ಬೆಳೆಯುತ್ತಿದ್ದಂತೆಯೇ ಅಪ್ಪ-ಅಮ್ಮನನ್ನು ಮನೆಯಿಂದ ಹೊರಹಾಕುವ, ಅನಾಥಾಶ್ರಮಕ್ಕೆ ಅಟ್ಟುವ ಇಂಥ ಕಾಲದಲ್ಲೂ ತಾಯಿಯ ಬಗೆಗೆ ಅಕ್ಕರೆಯ ಸೆಲೆಯೊಂದನ್ನು ಜೀವಂತವಾಗಿರಿಸಿದ್ದಾನೆ ಈ ಕೈಲಾಶ್ ಗಿರಿ ಬ್ರಹ್ಮಚಾರಿ. ತಾಯಿ ಕೀರ್ತಿದೇವಿಗೆ ಮಗನೆಂದರೆ ಎಲ್ಲಿಲ್ಲದ ಪ್ರೀತಿ. ತನ್ನ ವೈಯಕ್ತಿಕ ಬದುಕಿನ ಬಗ್ಗೆ ಚಿಂತಿಸದೆ ಸದಾ ತಾಯಿಯ ಒಳಿತಿಗಾಗಿ, ಆಕೆಯ ಆಸೆಯನ್ನು ಈಡೇರಿಸುವುದಕ್ಕಾಗಿ ಹೆಣಗುವ ಇಂಥವರ ಬಗ್ಗೆ ಯಾವ ತಾಯಿಗೆ ಪ್ರೀತಿ ಇರಲಾರದು?
ಚಿಕ್ಕ ವಯಸ್ಸಿನಲ್ಲಿ ಮರದಿಂದ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದ ಕೈಲಾಶ್‌ಗೆ ಚಿಕಿತ್ಸೆ ನೀಡುವುದಕ್ಕೆ ಅಮ್ಮನ ಬಳಿ ಹಣವಿರಲಿಲ್ಲ. ಕೈಲಾಶ್ 10 ವರ್ಷದವನಿದ್ದಾಗಲೇ ತಂದೆ ತೀರಿಹೋಗಿದ್ದರು. ಒಡಹುಟ್ಟಿದವರೂ ಬದುಕಿರಲಿಲ್ಲ. ಆ ಮನೆಯಲ್ಲಿ ಕೈಲಾಶ್ ಮತ್ತು ಕೀರ್ತಿದೇವಿ ಇಬ್ಬರೇ. ಅಮ್ಮನಿಗೆ ಮಗ, ಮಗನಿಗೆ ಅಮ್ಮ. ಇವಿಷ್ಟೇ ಪ್ರಪಂಚ. ಹೀಗಿರುವಾಗ ಮಗನಿಗೆ ಚಿಕಿತ್ಸೆ ಕೊಡಿಸುವುದು ಹೇಗೆಂಬುದು ಕೀರ್ತಿದೇವಿಗೆ ತೋಚಲಿಲ್ಲ. ಅಸಹಾಯಕಳಾಗಿದ್ದ ಆಕೆಗೆ ತೋಚಿದ್ದ ಒಂದೇ ಒಂದು ದಾರಿಯೆಂದರೆ ಮಂಡಿಯೂರಿ ದೇವರನ್ನು ಬೇಡುವುದು. ಆ ಕ್ಷಣದಲ್ಲಿ ಮಗನಿಗೆ ಗುಣವಾದರೆ ಸಾಕಿತ್ತು. ನನ್ನ ಕರುಳಕುಡಿ ಗುಣವಾದರೆ ಕಾಲ್ನಡಿಗೆಯಲ್ಲೇ ಬಂದು ನಿನ್ನ ಸೇವೆ ಮಾಡುತ್ತೇನಪ್ಪ ಎಂದು ಮನಸ್ಸಲ್ಲೇ ಗೊಣಗಿಕೊಂಡಿದ್ದಳು. ಪವಾಡವೋ ಏನೋ ಕೀರ್ತಿದೇವಿಯ ಭಕ್ತಿ ತುಂಬಿದ್ದ ಆ ಗೊಣಗಾಟವನ್ನೂ ದೇವರು ಕೇಳಿಸಿಕೊಂಡುಬಿಟ್ಟಿದ್ದ. ಯಾವ ಔಷಧವೂ ಇಲ್ಲದೆ ಮಗ ಹುಷಾರಾಗಿದ್ದನ್ನು ಕಂಡ ಕೀರ್ತಿದೇವಿ ಆ ದೇವರದೇ ಕೃಪೆ, ಜೀವನದಲ್ಲಿ ಒಮ್ಮೆಯಾದರೂ ಎಲ್ಲ ಪ್ರಸಿದ್ಧ ದೇವಾಲಯಗಳಿಗೂ ಭೇಟಿ ನೀಡಬೇಕೆಂಬ ಅಭಿಲಾಷೆಯನ್ನು ಮಗನ ಮುಂದಿಟ್ಟಳು. ಅಮ್ಮನನ್ನೇ ದೇವರ ಮತ್ತೊಂದು ರೂಪವೆಂದುಕೊಂಡ ಕೈಲಾಶ್ ಆ ಮಾತನ್ನು ಮರೆಯಲಿಲ್ಲ.
ಆತನಿಗೆ 20 ವರ್ಷ ತುಂಬುತ್ತಲೇ ಅಮ್ಮ ನೆನಪಿಸದಿದ್ದರೂ ತಾನೇ ಅದನ್ನು ನೆನಪಿಸಿಕೊಂಡು ಇನ್ನು ಒಂದೆರಡು ವರ್ಷದಲ್ಲಿ ಯಾತ್ರೆ ಆರಂಭಿಸಿಬಿಡುವ ಯೋಚನೆಯನ್ನು ತಾಯಿಯ ಮುಂದಿಟ್ಟ. ಅಮ್ಮನಿಗೂ ಅದೇ ಬೇಕಿತ್ತು. ಹರಕೆಯ ನೆಪದಲ್ಲಿ ಇಟ್ಟ ಒಂದೊಂದು ಹೆಜ್ಜೆಯೂ ಅಮ್ಮ-ಮಗನ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುತ್ತಲೇ ಸಾಗಿತು.
ರಾಮೇಶ್ವರ, ಪುರಿ ಜಗನ್ನಾಥ, ತಿರುಪತಿ, ಗಂಗಾ ಸಾಗರ, ಬಾಸುಕಿನಾಥ್‌ಧಾಮ್, ತಾರಾಪೀಠ, ಬದರಿನಾಥ್, ಕೇದಾರನಾಥ್, ಹರಿದ್ವಾರ, ಕಾಶಿ, ಅಯೋಧ್ಯೆ , ಚಿತ್ರಕೂಟ ಮುಂತಾಗಿ ಹಲವು ಪ್ರಸಿದ್ಧ ಸ್ಥಳಗಳನ್ನು ಅಮ್ಮ-ಮಗ ಇಬ್ಬರೂ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಬೆಳಗ್ಗೆ 6ಕ್ಕೆಲ್ಲ ಯಾತ್ರೆ ಆರಂಭವಾದರೆ ಬಿಸಿಲು ನೆತ್ತಿಗೇರುತ್ತಲೇ ನಿಲ್ಲುತ್ತದೆ. ಮತ್ತೆ ಸಂಜೆಯಾಗುತ್ತಲೇ ಯಾತ್ರೆ ಶುರು. ರಾತ್ರಿ ತಂಗುವುದಕ್ಕೆ ಸಿಕ್ಕ ಯಾವುದಾದರೂ ಊರಿನ ದೇವಾಲಯದ ಜಗುಲಿ ಸಾಕು!
ನಮ್ಮ ತಂದೆ ನಾನು ಹತ್ತು ವರುಷದವನಿದ್ದಾಗಲೇ ತೀರಿಹೋದರು. ನಮ್ಮಮ್ಮನಿಗೆ ಯಾರಿದ್ದಾರೆ. ಅವರ ಆಸೆಗಳನ್ನು ನಾನಲ್ಲದೆ ಇನ್ಯಾರು ಈಡೇರಿಸುವುದಕ್ಕಾಗುತ್ತದೆ ಎಂಬ ಕೈಲಾಶ್ ಮಾತು ಒಮ್ಮೆ ಕಣ್ಣಲ್ಲಿ ನೀರುತರಿಸುತ್ತದೆ. ತಂದೆ-ತಾಯಿ ತಮ್ಮನ್ನು ಬೆಳೆಸುವುದಕ್ಕೆ, ತಮ್ಮ ಅನುಕೂಲಕ್ಕಾಗಿ ಇರುವವರು ಎಂದೇ ಭಾವಿಸಿರುವ ಈ ಪೀಳಿಗೆಯ ಮಕ್ಕಳೆದುರು ಕೈಲಾಶ್ ಭಿನ್ನವಾಗಿ ನಿಲ್ಲುತ್ತಾನೆ. ಮತ್ತು ಪ್ರೀತಿ, ವಾತ್ಸಲ್ಯ, ಗೌರವಗಳೆಲ್ಲ ನಾಪತ್ತೆಯಾಗಿರುವ ಈ ಕಾಲದಲ್ಲೂ ಮರೀಚಿಕೆಯಂತೆ ನಮ್ಮಂಥವರಿದ್ದೇವೆ ಎಂಬುದನ್ನು ಕೈಲಾಶ್ ಕೂಗಿ ಹೇಳುತ್ತಾನೆ.
ನನ್ನನ್ನು ನೋಡಿ ನನ್ನ ವಯಸ್ಸಿನ ಎಷ್ಟೋ ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ಗೌರವ ನೀಡುವುದನ್ನು ಕಲಿತಿದ್ದಾರೆ. ಸಾರ್ಥಕ ಬದುಕೆಂದರೆ ಅದೇ ಎಂದು ನಾನು ಭಾವಿಸಿದ್ದೇನೆ ಎನ್ನುವ ಕೈಲಾಶ್ ಮಾತನ್ನು ಕೇಳಿದರೆ ನಮ್ಮ ಕೈಗಳು ಜೋಡಿಸಿಕೊಳ್ಳುತ್ತವೆ. ನಿನ್ನಂಥ ಮಗನನ್ನು ಪಡೆದ ಆ ತಾಯಿ ಧನ್ಯ ಎಂದು ನಾಲಿಗೆ ಅರಿವಿಲ್ಲದೆ ಉಚ್ಚರಿಸುತ್ತದೆ.
ಆ ತಕ್ಕಡಿಯಲ್ಲಿ ಅಮ್ಮನನ್ನು ಹೊತ್ತು ಸಾಗುವ ಕೈಲಾಶ್‌ನ ವ್ಯಕ್ತಿತ್ವವನ್ನು ಜಗತ್ತಿನ ಯಾವ ತಕ್ಕಡಿ ತಾನೆ ಸರಿದೂಗಿಸೀತು?

   

Leave a Reply