ಉದಾರತೆಯ ಉದಾಸೀ ಸಂಪ್ರದಾಯ- ಭಾಗ 2

ಇತಿಹಾಸ - 0 Comment
Issue Date :

ಸನಾತನ ಧರ್ಮದ ಪರಮಗುರಿಯೇ ಮೋಕ್ಷಸಾಧನೆ. ಮೋಕ್ಷದ ಗುರಿ ಹೊಂದಲು ಜ್ಞಾನ-ಕರ್ಮ-ಭಕ್ತಿಗಳೆಂಬ ಮೂರು ಮಾರ್ಗಗಳನ್ನು ನಮ್ಮ ಪ್ರಾಚೀನ ಪ್ರಾಜ್ಞರು ನೀಡಿರುತ್ತಾರೆ. ಅವುಗಳಲ್ಲಿ ಯಾವುದೇ ಒಂದು ಮಾರ್ಗದ ಅನುಷ್ಠಾನವೂ ಅಂತಿಮ ಗುರಿ ಸೇರಲು ಸಹಕಾರಿಯಾಗಿದೆ. ಮಧ್ಯಯುಗದ ಭಾರತದ ಇತಿಹಾಸದಲ್ಲಿಯ ಒಂದು ವಿಶೇಷ ಧಾರ್ಮಿಕ-ಸಾಮಾಜಿಕ ಬೆಳವಣಿಗೆಯೇ ‘ಭಕ್ತಿ ಪಂಥ’ದ ಅಥವಾ ‘ಭಕ್ತಿ ಚಳುವಳಿಯ’ ಬೆಳವಣಿಗೆ. ಗುರು ನಾನಕರ (1469-1538) ನೇತೃತ್ವದಲ್ಲಿ ಅರಳಿದ ಭಕ್ತಿ ಚಳುವಳಿ ಮುಂದೆ ಸಿಖ್ ಪಂಥದ ಸ್ಥಾಪನೆಗೆ ನಾಂದಿಯಾಯಿತು. ನಾನಕಪುತ್ರ ಶ್ರೀ ಬೀಬಾ ಚಂದ್ರಾಚಾರ್ಯರು (1496-1629) ಭಕ್ತಿಪಂಥವನ್ನು ಅದರದೇ ಆದ ರೀತಿಯಲ್ಲಿ ಬೆಳೆಸಿ ‘ಉದಾಸೀ’ ಸಂಪ್ರದಾಯವನ್ನು ಊರ್ಜಿತಗೊಳಿಸಿದರು.
ಶ್ರೀ ಬಾಬಾ ಚಂದಾ ಅವರು ಸನ್ಯಾಸಾಶ್ರಮ ಸ್ವೀಕರಿಸಿ ಭಕ್ತಿ ಮಾರ್ಗದ ಪ್ರವರ್ತಕರೂ, ಪ್ರಚಾರಕರೂ ಆಗಿ ಹೆಸರುವಾಸಿಯಾದರು. ಅವರು ಯಾವುದೇ ಹೊಸ ಧರ್ಮವನ್ನು ಸ್ಥಾಪಿಸಲು ಇಷ್ಟಪಡಲಿಲ್ಲ. ಆದರೆ, ಅವರಿಗರಿಯದೇ ಅದೊಂದು ವಿಶಿಷ್ಟ ಸಂಪ್ರದಾಯದ (ಉದಾಸೀ) ಬೆಳವಣಿಗೆಗೆ ಕಾರಣವಾಯಿತು. ಅದರ ಕೆಲವು ಪ್ರಮುಖ ಲಕ್ಷಣಗಳನ್ನೂ, ಕೊಡುಗೆಗಳನ್ನೂ ತಿಳಿಯುವ ಪ್ರಯತ್ನ ಇಲ್ಲಿದೆ.
ಬಾಬಾ ಶ್ರೀ ಚಂದಾ ಅವರು ಸುಮಾರು 133 ವರ್ಷಗಳ ಕಾಲ ಜೀವಿಸಿದರು ಎನ್ನಲಾಗಿದೆ. ಇಂದಿನ ದಿನಗಳಲ್ಲಿ ಈ ಜೀವಾವಧಿ ನಂಬಲರ್ಹವೇ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುವುದು. ಅದರೆ, ಈಗಲೂ ಎಷ್ಟೋ ಸಾಧು-ಸಂತರು, ಹಿಮಾಲಯದ ತಪಸ್ವಿಗಳು, ನೂರು ವರ್ಷಗಳಿಗೆ ಮೇಲ್ಪಟ್ಟು ಬದುಕುವುದು ವಿಶೇಷವಲ್ಲ. ಬಾಬಾ ಅವರ ಕಾಲದಲ್ಲಿ ಉತ್ತರ ಭಾರತದಲ್ಲಿ ಮುಸಲ್ಮಾನರ ಆಡಳಿತದ ಪ್ರಭಾವವಿತ್ತು. ದೆಹಲಿಯಲ್ಲಿ, ಸಿಕಂದರ್ ಲೋದಿ (Lodi) (14891517) ಇಬ್ರಾಹಿಂ ಲೋದಿ (1517-1526), ಬಾಬರ್ (1526-1530) ಹುಮಾಯುನ (1530-1556) ಷೇರ್‌ಷಹ (1540-1545) ಅಕ್ಬರ್ (1556-1606) ಹಾಗೂ ಜಹಾಂಗೀರ್ (1605-1627) ಆಗ ಆಳಿದ್ದರು. ಅವರಲ್ಲಿ ಅತ್ಯಂತ ಕಠೋರ ಹಿಂದು ದ್ವೇಷಿ ಸುಲ್ತಾನ್ ಸಿಕಂದರ್ ಲೋದಿಯಾಗಿದ್ದ. ಹಾಗೆಯೇ ಪ್ರಥಮ ಬಾರಿಗೆ ರಾಜಕೀಯ ಧರ್ಮವಾಗಿ ‘ಜಿಹಾದ್’ ಘೋಷಣೆ ಮಾಡಿದವ ಬಾಬರ್ ಆಗಿದ್ದ. ಇತಿಹಾಸಕಾರರನ್ನೂ ಮೋಸಗೊಳಿಸುವ ನಯವಂಚಕನಾಗಿದ್ದ ಅಕ್ಬರ್ ಮಹಾ ದುರಾಕ್ರಮಣಶೀಲನಾಗಿದ್ದ. ಅಕ್ಬರನ ಹುಳುಕುಗಳನ್ನು ಬೇರೆ ಬೇರೆಯಾಗಿ ಇತಿಹಾಸಕಾರ ವಿನ್ಸೆಂಟ್ ಸ್ಮಿತ್ ತೋರಿಸಿದ್ದಾರೆ. ಹೀಗಿದ್ದ ಸಂದರ್ಭದಲ್ಲಿ ಬಾಬಾ ಶ್ರೀ ಚಂದಾ ಅವರು ತಮ್ಮ ಪಾಡಿಗೆ ತಾವು ಭಕ್ತಿನಿರತರಾಗಿ ದೇವಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
(1) ಅವರು ತಮ್ಮದೇ ಆದ ಯಾವುದೇ ಮತ, ಪಂಥ, ಧರ್ಮವನ್ನು ಸ್ಥಾಪಿಸಲು ಯೋಚಿಸಲಿಲ್ಲ. ‘ಉದಾಸೀ’ ತತ್ವವಾದ ನಿಸ್ಪೃಹತೆಯನ್ನು ರೂಢಿಸಿಕೊಂಡಿದ್ದ ಅವರೊಡನೆಯೇ ಉದಾಸಿ ಸಂಪ್ರದಾಯ ಬೆಳೆಯಿತು.
(2) ಬಾಬಾ ಅವರು ಮೋಕ್ಷಸಾಧನೆಗಾಗಿ ಭಕ್ತಿಮಾರ್ಗವನ್ನು ಅನುಸರಿಸುವವರಾದರು.
(3) ಒಬ್ಬನೇ ಆದ ಭಗವಂತನನ್ನು ವಿವಿಧ ಹೆಸರುಗಳಿಂದ ಹಾಗೂ ಧಾರ್ಮಿಕ ಕ್ರಿಯೆಗಳಿಂದ ಆರಾಧಿಸುವುದನ್ನು ಒಪ್ಪಿಕೊಂಡರು. (Unity of God)
(4) ಬಾಬಾ ಅವರು ‘ಧರ್ಮವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಒಯ್ದರು’. ಸಾಮಾನ್ಯರಿಗೂ ಅರ್ಥವಾಗುವಂತೆ ಧರ್ಮವನ್ನೂ, ಭಕ್ತಿಯನ್ನೂ ಜನರಿಗೆ ಪರಿಚಯಿಸಿದರು.
(5) ಬಾಬಾ ಅವರ ಒಂದು ಅತಿ ಮುಖ್ಯ ಸಾಧನೆ, ಆ ಕಾಲದ ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟ. ಅನೇಕ ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಜನಜಾಗೃತಿಯನ್ನುಂಟು ಮಾಡಿದರು. ಅಸ್ಪೃಶ್ಯತೆ, ಜೀತ ಪದ್ಧತಿಯ ಕೆಡುಕು, ಸತೀ ಪದ್ಧತಿ, ಜೋಹರ್, ಶಿಶು ಹತ್ಯೆ, ಮೊದಲಾದವುಗಳನ್ನು ಖಂಡಿಸಿ ಅವುಗಳ ವಿರುದ್ಧ ಪ್ರಚಾರ ಕೈಗೊಂಡರು. ಮಾನವರೆಲ್ಲರೂ ದೇವರ ಮಕ್ಕಳಾದುದರಿಂದ ಎಲ್ಲರೂ ಸಹೋದರರು ಮತ್ತು ಸಮಾನರು ಎಂದು ಸಮಾನತೆಯ ತತ್ವವನ್ನು ಸಾರಿದರು. ಸತ್ಯ, ಶಾಂತಿ, ಸಹನೆ, ಅಹಿಂಸೆ, ಪರೋಪಕಾರ ಮುಂತಾದ ತತ್ವಗಳನ್ನು ಸರಳ ರೂಪದಲ್ಲಿ ನಿದರ್ಶನಗಳ ಮೂಲಕ ತೋರಿಸಿದರು. ಅದು ಅವರ ನೈತಿಕ ಬೋಧನೆಯಾಗಿತ್ತು. ಅದರೊಡನೆಯೇ ಅವರಿಂದ ಅನೇಕ ಪವಾಡ ಕಾರ್ಯಗಳು ನಡೆದವು.
(6) ಅವರ ಕಾಲದಲ್ಲಿ ದೆಹಲಿ ಸುಲ್ತಾನ ಹಾಗೂ ಮೊಗಲರಿಂದ ಹಿಂದೂ, ಜೈನ, ಬೌದ್ಧ ಮತ್ತು ಸಿಖ್ ಧರ್ಮಗಳ ಅಸ್ತಿತ್ವಕ್ಕೇ ಅಪಾಯವಿತ್ತು. ಆ ಮಧ್ಯೆಯೂ ಅವರು ಹಿಂದೂ-ಮುಸ್ಲಿಂ ಸೌಹಾರ್ದ ಸಂಬಂಧಕ್ಕಾಗಿ ಶ್ರಮಿಸಿದರು.
(7) ಸರ್ವಸಹಿಷ್ಣುತೆಯ (Universal toleration) ಉದಾರತೆಯ ಉದಾಸೀ ತತ್ವಗಳನ್ನು ಪ್ರಚಾರ ಮಾಡುತ್ತಾ ವಿವಿಧೆಡೆಗಳಲ್ಲಿ ಸುತ್ತಾಡಿದರು.
(8) ಅವರ ಸಾಹಿತ್ಯಿಕ ಕೊಡುಗೆಗಳೂ ಪ್ರಶಂಸನೀಯ. ಅವರು ಮಹಾ ಸಂಸ್ಕೃತ ವಿದ್ವಾಂಸರಾಗಿದ್ದರೂ ಜನರ ಆಡುಮಾತಿನಲ್ಲಿ ನಾನಕರ ಮೇಲೆ 10 ಪದಗಳನ್ನೂ, ‘ಗುರು ಗಾಯತ್ರೀ’ಯನ್ನೂ, ‘ಸಹಸ್ರನಾಮ’ವನ್ನೂ, ‘ಪಂಚದೇವತಾಶತಕ’ ವನ್ನೂ, ‘ಮಾತ್ರಾಶಾಸ್ತ್ರ’ ವನ್ನೂ ರಚಿಸಿದ್ದರು. ಅವರು ಸಂಸ್ಕೃತದಲ್ಲಿ ವೇದ, ಉಪನಿಷತ್ತು ಮತ್ತು ವೇದಾಂತ ಸೂತ್ರಗಳ ಮೇಲೆ ಭಾಷ್ಯ ರಚಿಸಿದ್ದರು.
(9) ‘ದೇವಪೂಜಾ’ ಮತ್ತು ‘ಗುರುಪೂಜಾ’ ಗಳನ್ನು ಬೆಂಬಲಿಸಿ, ‘ಜ್ಞಾನ-ಭಕ್ತಿ ಸಮುಚ್ಛ್ಛಯ’ ದತ್ತ ಒಲವು ತೋರಿದರು. ಸಾಮಾನ್ಯ ಜನರ ಉಪಾಸನೆಗಾಗಿ ಅವರು ‘ಪಂಚದೇವತಾ ಉಪಾಸನೆ’ಯನ್ನು ಪ್ರಚಾರ ಮಾಡಿದರು. ಅದು ಸೂರ್ಯ, ಗಣಪತಿ, ಶಕ್ತಿ, ಶಿವ ಹಾಗೂ ವಿಷ್ಣುವಿನ ಅರಾಧನೆಯಾಗಿತ್ತು. ಇಲ್ಲಿ ಅವರ ಮೇಲೆ ಜಗದ್ಗುರು ಶಂಕರಾಚಾರ್ಯರ ಪ್ರಭಾವವನ್ನು ಕಾಣಬಹುದು.
ಪಂಜಾಬದ ಗುರ್‌ದಾಸ್‌ಪುರದಲ್ಲಿ (Pekhote)
ಶ್ರೀ ಬಾಬಾ ಅವರ ಒಂದು ಗುಡಿ ಹಾಗೂ ಪ್ರತಿಮೆ ಈಗಲೂ ಇದೆ. ಉದಾಸೀ ಸಾಧುಗಳಲ್ಲಿ ಆರು ವಿಭಾಗಗಳಿಗೆ. ಅದೆಂದರೆ, ಆಶ್ರಮಕ್ಕೆ ಸೀಮಿತರಾದವರು (Kuieake), ಸಂಚಾರಿ ಸಾಧುಗಳು (Bahudaka), ಹಂಸವರ್ಗದವರು, ಪರಮಹಂಸರು, ತುರಿಯಾತೀತರು ಮತ್ತು ಅವಧೂತ ವರ್ಗದವರು. ‘ಆಶ್ರಮ’ (Class) ಪ್ರಕಾರ ಅವರನ್ನು ‘ಮುನಿ’, ‘ಋಷಿ’ ಮತ್ತು ‘ಸೇವಕ’ ಎಂಬುದಾಗಿ ವಿಂಗಡಿಸುತ್ತಾರೆ. ‘ಮುನಿ’ಗಳು ಸಂಸಾರ ಧರ್ಮವನ್ನು ಅನುಸರಿಸುವವರೂ, ‘ಋಷಿ’ಗಳು ವಾನಪ್ರಸ್ಥಾಶ್ರಮವನ್ನು ಅನುಸರಿಸುವವರೂ, ಮತ್ತು ‘ಸೇವಕ’ರು ಗೃಹಸ್ಥರೂ ಆಗಿರುತ್ತಾರೆ. ಉದಾಸೀ ಸಂಪ್ರದಾಯದಂತೆ ಅವರು ಕೆಲವು ಸಂಕೇತಗಳನ್ನು (Symbol) ಹೊಂದಿರುತ್ತಾರೆ. ಅವುಗಳಲ್ಲಿ ಪ್ರಧಾನವಾದುವುಗಳು ಯಾವುವೆಂದರೆ: 1108 ಗಂಟುಗಳುಳ್ಳ ನೂಲು (Seli), ತಲೆಗೆ ಟೋಪಿ, ರಜಾಯಿ (Khintha), ಜೋಳಿಗೆ, ಜಪಮಾಲೆ, ಅಗ್ನಿಪಾತ್ರೆ (dhuna) ಮತ್ತು ವಿಭೂತಿ. ಅವರ ಧರ್ಮಧ್ವಜವು ನವಿಲುಗರಿ ಮತ್ತು ಕೈಯ ಗುರುತಿನದ್ದಾಗಿದೆ (Panja). ಅವರು ತಮ್ಮೊಡನೆ ಕಮಂಡಲ, ಜಿಂಕೆ ಚರ್ಮ ಮತ್ತು ಒಂದು ದಂಡವನ್ನು ಯಾವಾಗಲೂ ಹೊಂದಿದವರಾಗಿ ಸಂಚರಿಸುತ್ತಿದ್ದರು. ದಂಡ ಅವರ ರಕ್ಷಣೆಗೆ ಬೇಕಾಗಿತ್ತು. ಮಧ್ಯಯುಗದ ಹಿಂದೂಸ್ಥಾನವನ್ನು ಆಳಿದ ದೆಹಲಿ ಸುಲ್ತಾನರು ಹಾಗೂ ಮೊಗಲರು ಈ ದೇಶವನ್ನು ‘ಇಸ್ಲಾಂದೇಶ’ (Dar-ul-Islam) ಮಾಡಲು ಹವಣಿಸಿದರು. ಅವರಿಂದ ಮತಾಂತರ, ದೇವಾಲಯಗಳ ನಾಶ, ಸ್ತ್ರೀ ಹಿಂಸೆ ಮುಂತಾದವುಗಳು ಸತತವಾಗಿ ನಡೆದವು. ಭಕ್ತಿ ಸಂತರು ಹಿಂದೂ ಮುಸ್ಲಿಂ ಏಕತೆಯನ್ನು ಬೋಧಿಸಿದರೂ, ಮತಾಂಧ ಮುಸಲ್ಮಾನ ಆಡಳಿತಗಾರರನ್ನು ಯಾರಿಂದಲೂ ಪರಿವರ್ತಿಸಲಾಗಲಿಲ್ಲ. ಬಾಬಾ ಶ್ರೀ ಚಂದಾ ಅವರು ಮುಸಲ್ಮಾನರನ್ನು ಸಹೋದರರಂತೆ ನಡೆಸಿಕೊಂಡರೂ, ಮತಾಂಧತೆಯನ್ನು ತೀವ್ರವಾಗಿ ಖಂಡಿಸಿದ್ದರು. ವಿಷಮ ಸಂದರ್ಭಗಳಲ್ಲಿ ಶಸ್ತ್ರಾಸ್ತ್ರಗಳಿಂದ ರಕ್ಷಣೆ ಮಾಡಿಕೊಳ್ಳುವುದೂ ಶಾಸ್ತ್ರಸಮ್ಮತವೇ ಆಗಿದೆ ಎಂಬ ಅಭಿಪ್ರಾಯವೂ ಅವರದಾಗಿತ್ತು. ಶಾಂತಸ್ವರೂಪಿಯಾದ ಅವರಲ್ಲಿ ಕ್ಷಾತ್ರತೇಜ ಪ್ರಜ್ವಲಿಸಿತ್ತು! ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತಾ ಜನಸೇವಾ ನಿರತರಾಗಿ ಅವರು ‘ಉದಾಸೀ ಪ್ರಮುಖ’ ರೆಂದೇ ಪ್ರಸಿದ್ಧರಾದರು.

   

Leave a Reply