ಉದಾರತೆಯ ಉದಾಸೀ ಸಂಪ್ರದಾಯ – ಭಾಗ I

ಇತಿಹಾಸ ; ಲೇಖನಗಳು - 0 Comment
Issue Date : 06.06.2016

ಭಾರತೀಯ ಸಂಸ್ಕೃತಿಯ ವೈವಿಧ್ಯಮಯ ಇತಿಹಾಸದಲ್ಲಿ ಅದೆಷ್ಟೋ ಪಂಥಗಳು, ಸಂಪ್ರದಾಯಗಳು ತಮ್ಮದೇ ಆದ ಕೊಡುಗೆಗಳಿಂದ ಇಲ್ಲಿಯ ಸಾಂಸ್ಕೃತಿಕ-ಧಾರ್ಮಿಕ ಜೀವನವನ್ನು ಶ್ರೀಮಂತಗೊಳಿಸಿವೆ. ಇಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್ಖ ಎಂಬ ಪಂಥ ಭೇದವಿಲ್ಲದೆ (ಮತಭೇದವಲ್ಲ) ಆತ್ಮಸಾಕ್ಷಾತ್ಕಾರವನ್ನರಸುವ ಋಷಿ-ಮುನಿಗಳು, ಸಾಧು-ಸಂತರೂ, ಸನ್ಯಾಸಿ-ವಿರಾಗಿಗಳೂ ತಮ್ಮ ಜೀವನಧರ್ಮವನ್ನೂ, ಅಧ್ಯಾತ್ಮಿಕ ಚಿಂತನೆಗಳನ್ನೂ ಮಾನವ ಸುಖದರ್ಶನಕ್ಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಉದಾಸೀ ಸಂಪ್ರದಾಯದ ವೈಶಿಷ್ಟ್ಯವನ್ನು ಡಾ. ಸತೀಶ್.ಕೆ.ಕಪೂರ್ ಅವರು ವಿಶ್ಲೇಷಿಸಿದ್ದಾರೆ. (“The Udasi Tradition,’  Bhavans Journal, May 14, 2014)
‘ಉದಾಸೀ’ ಶಬ್ದವೇ ಸೂಚಿಸುವಂತೆ ಅದು ‘ಉದಾಸೀನ ಭಾವನೆ’ಯನ್ನು ತಿಳಿಯಪಡಿಸುತ್ತದೆ. ಅದು ಲೌಕಿಕ ವಿಷಯಗಳಿಗೆ ಉದಾಸೀನತೆ ತೋರಿಸುವುದಾಗಿದೆ. ಅದು ಇಂದ್ರಿಯಾತೀತವಾದ ನಿಸ್ಪೃಹ ಭಾವನೆಯನ್ನು ಹೊಂದಿ ‘ನಿವೃತ್ತಿ ಮಾರ್ಗ’ ವನ್ನು ಸದಾ ಅನುಸರಿಸುವ ಒಂದು ಪ್ರಕ್ರಿಯೆಯಾಗಿದೆ. ಧನ-ಕನಕ-ಮಾನಿನಿ-ಮದ ಇತ್ಯಾದಿಗಳ ಬಗ್ಗೆ ಅವರು ನಿರ್ಲಿಪ್ತರಾಗಿ, ‘ಪ್ರವೃತ್ತಿ ಮಾರ್ಗ’ ವನ್ನು ಸಂಪೂರ್ಣ ತ್ಯಜಿಸಿ ಪಾರಮಾರ್ಥಿಕ ವಿಷಯಗಳಲ್ಲೇ ತಲ್ಲೀನರಾಗಿ ಬ್ರಹ್ಮಜ್ಞಾನವನ್ನು ಹೊಂದುವ ಸಾತ್ವಿಕ ಬದುಕು ಅವರದ್ದಾಗಿದೆ.
ಉದಾಸೀ ಸಂಪ್ರದಾಯವನ್ನು ಪ್ರಚುರಪಡಿಸಿದವರಲ್ಲಿ ಬಾಬಾ ಶ್ರೀ ಚಂದ್ರಾಚಾರ್ಯ ಪ್ರಮುಖರಾಗಿದ್ದಾರೆ. ಬಾಬಾ ಶ್ರೀ ಚಂದಾ (1496-1629) ಗುರು ನಾನಕ ದೇವ್ ಮತ್ತು ಮಾತಾ ಸುಖಲಾನಿ ದೇವಿಯವರ ಪುತ್ರರಾಗಿ, ‘ನಾನಕ ಪುತ್ರ’ ರೆಂದೇ ಪ್ರಸಿದ್ಧರಾಗಿದ್ದಾರೆ. ಒಂದು ಹೇಳಿಕೆಯಂತೆ, ಶ್ರೀ ಚಂದಾ 1494 ರಲ್ಲಿ ಸುಲ್ತಾನ್‌ಪುರ (ಪಂಜಾಬ್) ದಲ್ಲಿ ಜನಿಸಿದ್ದರು. ಉದಾಸೀ ಮೂಲವನ್ನು, ಶ್ರೀ ಮಹಾವಿಷ್ಣುವಿನಿಂದ ಬ್ರಹ್ಮಜ್ಞಾನ ಪಡೆದ ಸನಕ, ಸನಂದ, ಸನತ್ಕುಮಾರರಲ್ಲಿಗೆ ಕೊಂಡೊಯ್ಯುವ ನಂಬಿಕೆಯಿದೆ. ಉದಾಸೀಗಳು ಸಿಖ್ಖ್‌ಪಂಥದಿಂದ ಸಂಪೂರ್ಣವಾಗಿ ಬೇರೆಯಾಗಲಿಲ್ಲ. ಅವರು ಮಾತ್ರ ಸಿಖ್ಖರ ನಡವಳಿಕಾ ನಿಯಮವನ್ನು (್ಕಛಿಠಿ ಚ್ಟ) ಮತ್ತು ಧಾರ್ಮಿಕ ವಿಧಿಗಳನ್ನು ‘ಶಿರೋಮಣಿ ಗುರುದ್ವಾರಾ ಪ್ರಬಂಧಕ್ ಕಮಿಟಿ’ ಯ ನಿರ್ಣಯದಂತೆ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರುವುದಿಲ್ಲ.
ಬಾಲಕ ಚಂದಾ ಹುಟ್ಟಿದಾಗಲೇ ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದ್ದ! ಅದರ ಪ್ರಕಾರ ಮುಂದೆ ಅವನು ಓರ್ವ ಮಹಾಪುರುಷನಾಗುವ ಸಾಧ್ಯತೆಯಿತ್ತು. ಆ ಬಾಲಕನಿಗೆ ಒಂಭತ್ತು ವರ್ಷವಾದಾಗ ಯಜ್ಞೋಪವೀತಧಾರಣೆ ಮಾಡಲಾಯಿತು. ಆಮೇಲೆ, ಪಂಡಿತ ಹರ್‌ದಯಾಳ್ ಅವರಿಂದ ವೈದಿಕ ಸಾಹಿತ್ಯಾಭ್ಯಾಸವಾಯಿತು. ಮುಂದೆ, 11 ವರ್ಷಗಳಾದಾಗ ಶ್ರೀನಗರಕ್ಕೆ ಹೋಗಿ ಆಚಾರ್ಯ ಪುರುಷೋತ್ತಮರ ಗುರುಕುಲ ಸೇರಿ ವೇದ, ಪುರಾಣ, ಉಪನಿಷತ್ತುಗಳಲ್ಲಿ ಪಾರಂಗತನಾದ. ಆಗ ಶ್ರೀನಗರದಲ್ಲಿ ನಡೆದ ಒಂದು ಚರ್ಚಾಕೂಟದಲ್ಲಿ ಪ್ರಸಿದ್ಧ ವಿದ್ವಾಂಸರಾದ ಸೋಮನಾಥ ತ್ರಿಪಾಠಿಯವರನ್ನು ಸೋಲಿಸಿ ಹೆಸರುವಾಸಿಯಾದ. ಆಮೇಲೆ, ಅವಿನಾಮುನಿ ಚಂದಾಗೆ ಸನ್ಯಾಸ ದೀಕ್ಷೆ ನೀಡುವುದರೊಂದಿಗೆ ‘ಚಂದ್ರಾಚಾರ್ಯ’ ರಾಗಿ, ಬಾಬಾ ಶ್ರೀ ಚಂದಾ ಎಂದೇ ಪ್ರಸಿದ್ಧರಾಗಿ ಉದಾಸೀ ಪರಂಪರೆಯನ್ನು ಮುಂದುವರಿಸಿದರು.
ಶ್ರೀ ಚಂದಾ ಅವರು ಜನಸಂದಣಿಯಿಂದ ದೂರವಿದ್ದು ಒಬ್ಬಂಟಿಗರಾಗಿ ಅರಣ್ಯ ಪ್ರದೇಶದಲ್ಲಿ ತಪೋನಿರತರಾದರು. ಮಳೆ-ಗಾಳಿ-ಛಳಿ-ಕಾಡುಪ್ರಾಣಿಗಳ ಭೀತಿಯನ್ನು ಲೆಕ್ಕಿಸದೆ ತಪೋನಿಷ್ಠರಾಗಿ ದೈವಸಾಕ್ಷಾತ್ಕಾರವನ್ನು ಮಾಡಿಕೊಂಡರು!
ಶ್ರೀ ಚಂದಾ ಅವರ ಪವಾಡಗಳ ಬಗ್ಗೆ ಅನೇಕ ಹೇಳಿಕೆಗಳಿವೆ. ಒಮ್ಮೆ ಸಂಕೇಶ್ವರ ಎಂಬಲ್ಲಿ (ಗುಜರಾತ್) ಬರಗಾಲವಿದ್ದಾಗ ಅವರು ಅವರ ಶಂಖವನ್ನೂದಿ ನೆಲದಲ್ಲಿ ಹೂಳಿದರು. ಅದರೊಂದಿಗೆ ಅಲ್ಲಿ ನೀರಿನ ಚಿಲುಮೆಯೇ ಉದ್ಭವವಾಯಿತು! ಒಮ್ಮೆ ಕಾಶ್ಮೀರದಲ್ಲಿ ಮತಾಂಧ ಯಾಕೂಬ್ ಖಾನ್ ಮುಸ್ಲಿಮೇತರರ ಮೇಲೆ ದೌರ್ಜನ್ಯ ಮಾಡುತ್ತಾ ಶ್ರೀ ಬಾಬಾ ಅವರನ್ನು ದಸ್ತಗಿರಿ ಮಾಡಲು ಬಂದ. ಅವನು ಬಾಬಾರನ್ನು ಉದ್ದೇಶಿಸಿ, ‘‘ಎಲಾ ಬೈರಾಗಿಯೇ, ನೀನು ನಿನ್ನ ಪವಾಡಗಳಿಂದ ನಮ್ಮ ಜನರನ್ನು ಮೋಸಮಾಡುತ್ತಿರುವೆ. ಅದಕ್ಕೆ ತಕ್ಕ ಶಾಸ್ತಿಯಾಗಲೇಬೇಕು. ಆ ಉದ್ದೇಶಕ್ಕಾಗಿ ನಾನು ಬಂದಿರುವೆ’’ ಎಂದಾಗ, ಶ್ರೀ ಬಾಬಾರು, ‘‘ನಾನು ಯಾರನ್ನೂ ಮೋಸಮಾಡುತ್ತಿಲ್ಲ. ನನಗೆ ಹಿಂದೂ-ಮುಸ್ಲಿಂ ಎಂಬ ಭೇದವೂ ಇಲ್ಲ. ನಾವೆಲ್ಲಾ ಆ ಭಗವಂತನ ಮಕ್ಕಳೇ. ಅವನನ್ನು ಭಕ್ತಿಭಾವದಿಂದ ಪೂಜಿಸುವುದೇ ನಮ್ಮ ಧರ್ಮ’’ ಎಂದರು. ‘‘ಎಲಾ ಮೂರ್ಖನೆ ! ನಿನ್ನ ಉಪದೇಶ ನನಗೆ ಬೇಕಾಗಿಲ್ಲ. ನಿನ್ನಂಥಹವರನ್ನು ನಿಗ್ರಹಿಸಿ ಇಸ್ಲಾಂ ಧರ್ಮವನ್ನು ಈ ದೇಶದಲ್ಲಿ ಸ್ಥಾಪಿಸುವುದೇ ನಮ್ಮ ಧಾರ್ಮಿಕ ಗುರಿ. ಇದಕ್ಕೆ ನೀನು ತೊಡಕಾಗಿರುವೆ. ನಿನ್ನ ಆ ಮಹಾ ಪವಾಡಗಳನ್ನು ತೋರಿಸಬಲ್ಲೆಯಾ?’’ ಅದಕ್ಕೆ ಉತ್ತರವಾಗಿ ‘ಬಂಧುವೇ ಶಾಂತನಾಗು. ನಾನು ನಿಜವಾಗಿಯೂ ಪವಾಡಗಳನ್ನು ಮಾಡುವುದಿಲ್ಲ. ಅವೆಲ್ಲಾ ಆ ಭಗವಂತನ ಕಾರ್ಯಗಳೇ. ನಿಮ್ಮ-ನಮ್ಮಂಥಹ ಹುಲು ಮಾನವರಿಂದ ಏನೂ ಆಗದು’ ಎಂದಾಗ ಕ್ರೋಧನಾದ ಖಾನ್, ಬಾಬಾ ಅವರ ಅಗ್ನಿಪಾತ್ರೆ (ಜ್ಠ್ಞ) ಯಿಂದ ಉರಿಯುತ್ತಿದ್ದ ಮರದ ಕಡ್ಡಿಯನ್ನು ನೆಲಕ್ಕೆ ಎಸೆದು, ‘ನಿನ್ನ ಪವಾಡವಿದ್ದರೆ ಉರಿದ ಕಡ್ಡಿಯನ್ನು ಪುನಃ ಮೊದಲಿನಂತೆಯೇ ಮಾಡು. ತಪ್ಪಿದಲ್ಲಿ ಇದೇ ಖಡ್ಗಕ್ಕೆ ಬಲಿಯಾಗುವೆ’ ಎಂದ. ಬಾಬಾ ಅವರು ನಸುನಗುತ್ತಾ ತಮ್ಮ ಕಮಂಡಲದಿಂದ ಆ ಉರಿದ ಕಡ್ಡಿಗೆ ನೀರು ಪ್ರೋಕ್ಷಿಸಿದರು. ಆಗ ಘಟಿಸಿತು ಪವಾಡ! ಉರಿದು ಮಸಿಯಾದ ಕಡ್ಡಿ ಕೋಲಾಗಿ, ಗೆಲ್ಲಾಗಿ, ಮರವಾಗಿ ತಲೆಯೆತ್ತಿತು! ಮರದ ತುಂಬಾ ಎಲೆಗಳೂ, ಹೂ, ಕಾಯಿ ಮತ್ತು ಹಣ್ಣುಗಳು, ಹಾರಾಡುವ ಹಕ್ಕಿಗಳು, ಓಡಾಡುವ ಅಳಿಲುಗಳು! ಖಾನ್ ತಬ್ಬಿಬ್ಬಾದ – ಗುರುಗಳ ಕಾಲಿಗೆರಗಿದ! ಬಾಬಾ ಅವನನ್ನು ಕ್ಷಮಿಸಿ, ಕಳುಹಿಸಿದರು. ಆ ಸ್ಥಳ ಈಗ ಉದಾಸೀಗಳ ಪವಿತ್ರ ಕ್ಷೇತ್ರವಾಗಿದೆ. ಅದು ಉದಾಸೀ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟಿದೆ. (ಖ್ಟಜಿ ಇಚ್ಞಛ್ಟ ಇಜ್ಞಿಚ್ಟ ಆಚಿ ಅಚ್ಟ ಖಿಜ್ಞಿ ಖ್ಟ್ಠಠಿಓಞಜ್ಟಿ). ಇನ್ನೊಮ್ಮೆ, ರಾವೀ ನದೀ ದಡದ ಚಂಬಾ ಎಂಬಲ್ಲಿ ಅಂಬಿಗನೊಬ್ಬ ಬಾಬಾ ಅವರನ್ನು ನದೀ ದಾಟಿಸಲು ಒಪ್ಪಲಿಲ್ಲ. ಮಾತ್ರವಲ್ಲದೆ, ಬಾಬಾರನ್ನು ಚೇಷ್ಟೆ ಮಾಡಿದ. ಅಂಗಲಾಚಿ ಬೇಡಿದರೂ ಅಂಬಿಗ ಒಪ್ಪಲಿಲ್ಲ. ಆಗ ಬಾಬಾ ‘ಅಂಬಿಗ ಸಹೋದರನೇ, ನಾನು ನದೀ ದಾಟಲು ಬಯಸಿದೆ ಹಾಗೂ ನಿನ್ನನ್ನು ಬೇಡಿಕೊಂಡೆ. ಆದರೆ ನೀನೇನೋ ಸಹಕರಿಸಲಿಲ್ಲ. ಸರಿ, ನನಗೆ ಆ ಭಾಗ್ಯವಿಲ್ಲವೋ ಏನೋ’ ಎಂದು ಹೇಳಿ ಅಲ್ಲೇ ಸಮೀಪದಲ್ಲಿದ್ದ ದೊಡ್ಡ ಬಂಡೆಯ ಮೇಲೆ ಕುಳಿತರು. ಅದೇನಾಶ್ಚರ್ಯ! ಆ ಬೃಹದ್ ಬಂಡೆ ಅವರನ್ನು ಹೊತ್ತು ದೋಣಿಯಂತೆ ನೀರಿನಲ್ಲಿ ತೇಲಿ ನದಿ ದಾಟಿತು! ಈ ರೀತಿಯ ಅನೇಕ ಪವಾಡಗಳ ವೃತ್ತಾಂತ ಬಾಬಾ ಅವರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಬಾಬಾ ಶ್ರೀ ಚಂದಾ ಅವರು ಸಿಂಧ್, ಬಲೂಚಿಸ್ತಾನ್, ಕಾಬೂಲ್, ಕಂದಾಹರ್, ಪೇಶಾವರ್, ಮೊದಲಾದ ಸ್ಥಳಗಳಲ್ಲಿ ಧರ್ಮಪ್ರಚಾರ ಕೈಗೊಂಡರು. ಅವರು ಕೈಲಾಸ ಪರ್ವತ, ಮಾನಸ ಸರೋವರ, ಕಾಮರೂಪ, ಪುರಿ, ದ್ವಾರಕಾ, ಸೋಮನಾಥ, ರಾಮೇಶ್ವರ, ಕನ್ಯಾಕುಮಾರಿ ಹಾಗೂ ಸಿಂಹಳಗಳನ್ನೂ ಸಂದರ್ಶಿಸಿದ್ದರು. ಸಿಂಧ್ ಸಮೀಪ ಶ್ರೀ ಚಂದಾ ಅವರ ವಿಗ್ರಹವಿರುವ ಒಂದು ದೇವಾಲಯವಿದೆ. ಸಾಮಾನ್ಯರ ಹೇಳಿಕೆಯಂತೆ, ಬಾಬಾ ಅವರು ಜನವರಿ 13, 1629 ರಲ್ಲಿ ಕಿರಾತ್‌ಪುರ್‌ನಲ್ಲಿ ಇಹಲೋಕ ತ್ಯಜಿಸಿದರು. ಇನ್ನೊಂದು ಹೇಳಿಕೆಯಂತೆ, ಭೂತಾನದ ಅವರ ಶಿಷ್ಯ ಬ್ರಹ್ಮಕೇತುವಿಗೆ ಉದಾಸೀ ಬೋಧನೆ ನೀಡಿ, ಹಿಮಾಲಯ ಪ್ರದೇಶದಲ್ಲಿ ಬಾಬಾ ಕಣ್ಮರೆಯಾದರು.
ಹಿಂದೂಗಳೂ, ಸಿಖ್ಖರೂ ಬಾಬಾ ಅವರನ್ನು ಬಹಳ ಗೌರವಪೂರ್ವಕವಾಗಿ ಕಂಡರು. ಪಂಜಾಬಿನ ಪಟಾಣ್‌ಕೋಟ್‌ನಲ್ಲಿ ಬಾಬಾ ಸಿಖ್ ಗುರು ಹರ್‌ಗೋವಿಂದರ ಪುತ್ರ ಗುರುದಿತಾ ಅವರನ್ನು ಶಿಷ್ಯರಾಗಿ ಸ್ವೀಕರಿಸಿ ಉದಾಸೀ ಸಂಪ್ರದಾಯ ಮುಂದುವರಿಯುವಂತೆ ಮಾಡಿದರು. ಅವರ ನಂಬಿಕೆ ಮತ್ತು ಆರಾಧನೆ ವಿಶಿಷ್ಟವಾದುದು. ಅದು ಸಗುಣ ಬ್ರಹ್ಮ ಮತ್ತು ನಿರ್ಗುಣ ಬ್ರಹ್ಮರ ಆರಾಧನೆಯಾಗಿತ್ತು. ಹಾಗೆಯೇ, ಜ್ಞಾನಮಾರ್ಗ ಮತ್ತು ಭಕ್ತಿಮಾರ್ಗದ ಸಮನ್ವಯ ಸಾಧಿಸಿದರು. ಅದರೊಂದಿಗೇ, ಅನೇಕ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡರು ಹಾಗೂ ಹಿಂದೂ-ಮುಸ್ಲಿಂ ಅವರೊಳಗೆ ಸೌಹಾರ್ದಮಯ ಸಂಬಂಧಕ್ಕ್ಕಾಗಿ ಶ್ರಮಿಸಿದರು. ಮುಸ್ಲಿಮರಿಂದಾಗುತ್ತಿದ್ದ ಬಲವಂತದ ಮತಾಂತರವನ್ನು ಅವರು ಬಲವಾಗಿ ಖಂಡಿಸಿ, ಆ ಮತಾಂಧರಿಗೂ ಭಗವಂತನು ಸದ್ಭುದ್ಧಿ ಕರುಣಿಸಲೀ ಎಂದು ಪ್ರಾರ್ಥಿಸಿದ್ದರು.

   

Leave a Reply