ಎಂಥಾ ಸುದ್ದಿ

ಪ್ರಚಲಿತ - 0 Comment
Issue Date : 24.04.2015

ಕ್ಯಾಮರಾ ಕಣ್ಣನ್ನು ಪತ್ತೆ ಮಾಡಿ!
ಇದಂತೂ ಶಾಪಿಂಗ್ ಜಮಾನಾ. ಎಷ್ಟಿದ್ದರೂ ಕಡಿಮೆ ಎಂಬ ನಮ್ಮ ಕೊಳ್ಳುಬಾಕ ಮನಸ್ಥಿತಿಯಿಂದಾಗಿಯೇ ಹಲವು ಕಂಪೆನಿಗಳು ಲೆಕ್ಕ ಮಾಡಲೂ ಆಗದಷ್ಟು ಹಣ ಗಳಿಸಿವೆ. ಶಾಪಿಂಗ್ ಮಾಡುವಲ್ಲಿ ಮಹಿಳೆಯರದೇ ಮೇಲುಗೈ. ಅದರಲ್ಲೂ ಬಟ್ಟೆಯನ್ನು ಕೊಳ್ಳುವುದರಲ್ಲಿ ಅವರೆಂದಿಗೂ ಹಿಂದೆ ಬಿದ್ದಿಲ್ಲ. ಈಗೆಲ್ಲ ನಮ್ಮ ನಿಲುವಿಗೆ ಸರಿಹೊಂದುವ ಬಟ್ಟೆಯನ್ನು ಅಲ್ಲಿಯೇ ಧರಿಸಿ ನಂತರ ಖರೀದಿಸಬಹುದು. ಹೀಗೆ ಬಟ್ಟೆಯನ್ನು ಧರಿಸಿ ನೋಡುವುದಕ್ಕಾಗಿಯೇ ಬಟ್ಟೆ ಅಂಗಡಿಗಳಲ್ಲಿ ಕಂಡುಬರುವ ಟ್ರಯಲ್ ರೂಮ್‌ಗಳು ಎಷ್ಟು ಸುರಕ್ಷಿತ ಎಂಬುದು ಇತ್ತೀಚೆಗೆ ಎದ್ದಿದ್ದ ಪ್ರಶ್ನೆ. ಹಲವು ಟ್ರಯಲ್ ರೂಮ್‌ಗಳಲ್ಲಿ ಕ್ಯಾಮೆರಾಗಳು ಪತ್ತೆಯಾದ ಮೇಲಂತೂ ಹೀಗೆ ಬಟ್ಟೆ ಬದಲಿಸುವುದು ತೀರಾ ಅಪಾಯಕಾರಿ ಎಂಬುದು ಅರಿವಿಗೆ ಬಂದಿದೆ. ಹಾಗಾದರೆ ಟ್ರಯಲ್ ರೂಮಿನಲ್ಲಿ ಕ್ಯಾಮರಾಗಳಿವೆ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ? ಹಲವು ದಿನಗಳಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿದೆ.
ಟ್ರಯಲ್ ರೂಮಿಗೆ ತೆರಳಿದೊಡನೆಯೇ ನೀವು ನಿಮ್ಮ ಫೋನಿನಿಂದ ಯಾರಾದರೊಬ್ಬರಿಗೆ ಫೋನ್ ಮಾಡಿ. ಮತ್ತೊಂದು ನಂಬರ್ ನಿಮ್ಮ ಸಂಪರ್ಕಕ್ಕೆ ಸಿಕ್ಕಿದರೆ ಆ ಟ್ರಯಲ್ ರೂಮಿನಲ್ಲಿ ಕ್ಯಾಮರಾ ಇಲ್ಲವೆಂದರ್ಥ. ಅಕಸ್ಮಾತ್ ನಂಬರ್ ಸಂಪರ್ಕಕ್ಕೆ ಸಿಕ್ಕದೆ, ನೆಟ್‌ವರ್ಕ್ ಸಮಸ್ಯೆಯಾಗುತ್ತಿದ್ದರೆ ಅಲ್ಲಿ ಕ್ಯಾಮರಾ ಇರಬಹುದಾದ ಎಲ್ಲ ಸಾಧ್ಯತೆಗಳಿರಬಹುದು! ಹೌದು, ಕ್ಯಾಮರಾವನ್ನು ಅಳವಡಿಸಲಾದ ಜಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಸಿಕ್ಕುವುದಿಲ್ಲವಂತೆ.
ಕ್ಯಾಮರಾಗಳಲ್ಲಿ ಅಳವಡಿಸಲಾದ ಕೆಲ ತಾಂತ್ರಿಕ ಅಂಶಗಳು ಮೊಬೈಲ್ ನೆಟ್‌ವರ್ಕ್ ಪಡೆಯಲು ಅಡ್ಡಿಯಾಗುತ್ತವೆಯಂತೆ. ಕ್ಯಾಮರಾಗಳಲ್ಲಿರುವ ಫೈಬರ್ ಆಪ್ಟಿಕ್‌ಗಳು ನೆಟ್‌ವರ್ಕ್ ಅನ್ನು ವ್ಯತ್ಯಯಗೊಳಿಸುತ್ತವೆಯಂತೆ. ಆದ್ದರಿಂದ ಇನ್ನು ಮುಂದೆ ಯಾವುದೇ ಡ್ರೆಸ್ಸಿಂಗ್ ರೂಮಿಗೆ ತೆರಳಿದೊಡನೆ ನಿಮ್ಮ ಮೊಬೈಲ್ ಅನ್ನು ಕೈಗೆತ್ತಿಕೊಂಡು ನೆಟ್‌ವರ್ಕ್ ಪರೀಕ್ಷಿಸಿ.

ಕನ್ನಡಿಯೂ ಮೋಸ ಮಾಡುತ್ತಾ?!
ಈ ಜಗತ್ತಿನಲ್ಲಿ ಯಾರನ್ನೂ ನಂಬಬಾರದಂತೆ. ನಮ್ಮ ನೆರಳನ್ನು ಕೂಡ. ಏಕೆಂ ದರೆ ರಾತ್ರಿಯಾಗುತ್ತಿದ್ದಂತೆಯೇ ಅದೂ ನಮ್ಮೊಂದಿಗಿರುವುದಿಲ್ಲವಲ್ಲ..! ಹಾಗೆಂದು ಕೆಲವು ನಿರಾಶಾವಾದಿಗಳು ಹಲುಬುವುದನ್ನು ಕೇಳಿದ್ದೇವೆ. ಆದರೆ ನಮ್ಮದೇ ತದ್ರೂಪವನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುವ ಕನ್ನಡಿಯೂ ಮೋಸ ಮಾಡುತ್ತದೆಂದರೆ ನಂಬಬಹುದೇ?
ನಿಜ, ಈಗೆಲ್ಲ ಉದ್ದುದ್ದದ ಕನ್ನಡಿಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಆಫೀಸ್, ಮನೆ, ಕಂಪೆನಿಗಳು, ಕೊನೆಗೆ ಬಾತ್ರೂಮ್, ಟಾಯ್ಲೆಟ್‌ಗಳಲ್ಲಿ ಸಹ ಉದ್ದುದ್ದದ ಕನ್ನಡಿಯನ್ನು ನೋಡುತ್ತೇವೆ. ಆದರೆ ಹೀಗೆ ಜನರನ್ನು ಆಕರ್ಷಿಸುವುದಕ್ಕಾಗಿ ಬಳಸುವ ಕನ್ನಡಿಗಳು ಜನರ ಬದುಕನ್ನೇ ಹಾಳುಮಾಡಬಲ್ಲವು ಎಂದರೆ ನಂಬಲೇಬೇಕು. ಏಕೆಂದರೆ ಈ ಕನ್ನಡಿಗಳಲ್ಲೂ ಕೆಲವು ವಿಧಗಳಿವೆ. ಕೆಲವು ಕನ್ನಡಿಗಳು ಕೇವಲ ಅದರ ಮುಂದೆ ನಿಂತವರಿಗೆ ಮಾತ್ರ ಅವರ ಪ್ರತಿಬಿಂಬವನ್ನು ತೋರಿಸಲು ಸಮರ್ಥವಾದರೆ, ಇನ್ನೂ ಕೆಲವಷ್ಟು ಕನ್ನಡಿಗಳು ಕನ್ನಡಿಯ ಹಿಂದೆ ನಿಂತವರಿಗೂ ಕನ್ನಡಿಯ ಮುಂದೆ ನಿಂತವರ ರೂಪವನ್ನು ತೋರಿಸಲು ಶಕ್ತವಾಗಿವೆಯಂತೆ.
ಕನ್ನಡಿ ಎಂದುಕೊಂಡು ಅದರ ಮುಂದೆ ನಿಂತು ನಿಮಗೆ ಬೇಕಾದಂತೆ ನೀವಿದ್ದರೂ ಕನ್ನಡಿಯ ಹಿಂದೆ ನಿಂತ ಕಣ್ಣುಗಳು ನಿಮ್ಮೆಲ್ಲ ನಡೆಗಳನ್ನು ಕದ್ದು ನೋಡಬಲ್ಲವಂತೆ! ಈ ಟೂ ವೇ ಕನ್ನಡಿಗಳನ್ನು ಕಂಡುಹಿಡಿಯುವುದು ಹೇಗೆ? ಎಂಬ ಪ್ರಶ್ನೆಗೂ ಉತ್ತರವಿದೆ. ನಿಮ್ಮ ಬೆರಳನ್ನು ನೀವು ನಿಂತಿರುವ ಕನ್ನಡಿಗೆ ತಾಕಿಸಿ. ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬಕ್ಕೂ ನಿಮ್ಮ ಬೆರಳಿಗೂ ನಡುವೆ ಸ್ವಲ್ಪ ಅಂತರವೇನಾದರೂ ಇದ್ದರೆ ಅದು ಒನ್ ವೇ ಕನ್ನಡಿಯಾಗಿರುತ್ತದೆ. ಆ ಕನ್ನಡಿಯ ಬಗ್ಗೆ ನೀವು ಭಯಪಡುವ ಅಗತ್ಯವೇನೂ ಇಲ್ಲ. ಆದರೆ ನಿಮ್ಮ ಬೆರಳು ಮತ್ತು ಪ್ರತಿಬಿಂಬದ ನಡುವೆ ಸ್ವಲ್ಪವೂ ಅಂತರವಿಲ್ಲದಿದ್ದಲ್ಲಿ ಅದು ಖಂಡಿತವಾಗಿಯೂ ಟೂ ವೇ ಕನ್ನಡಿ.
ಈ ಕಾಲದಲ್ಲಿ ಕನ್ನಡಿಯನ್ನೂ ನಂಬುವುದು ಕಷ್ಟ. ಯಾವುದಕ್ಕೂ ಹುಷಾರಾಗಿರಿ!

ಸಸ್ಯಗಳಿಂದಲೂ ಸಂಕಷ್ಟ!
ಜಗತ್ತಿನ ಬಹುಪಾಲು ಎಲ್ಲ ಸಮಸ್ಯೆಗಳಿಗೂ ಮುಖ್ಯ ಕಾರಣ ಅವ್ಯಾಹತ ಪರಿಸರ ನಾಶ. ಆದರೆ ಇತ್ತೀಚಿನ ಸಂಶೋಧನೆಯೊಂದು ಸಸ್ಯಗಳಿಂದಲೂ ನಿಸರ್ಗ ವ್ಯವಸ್ಥೆಯ ಮೇಲೆ ದುಷ್ಪರಿಣಾಮವಾಗಬಹುದು ಎಂಬ ಆಘಾತಕಾರಿ ಅಂಶವನ್ನು ಬಯಲಿಗೆಳೆದಿದೆ. ಆದರೆ ಈ ಅಪಾಯಕ್ಕೆ ಮನುಷ್ಯನೇ ಕಾರಣ ಎಂದು ಸಹ ಅದು ಹೇಳಿದೆ.
ಇಂದು ಹೆಚ್ಚು ಹೆಚ್ಚು ಬೆಳೆ ಪಡೆಯುವುದಕ್ಕಾಗಿ ಸಸ್ಯಗಳಿಗೆ ಕಸಿ ಮಾಡುವುದನ್ನು ನಾವು ಕೇಳಿದ್ದೇವೆ. ಹೀಗೆ ಕಸಿ ಮಾಡುವುದು ನಿಸರ್ಗ ನಿಯಮಕ್ಕೆ ಹೊಂದುವಂಥದಲ್ಲ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಸಂಶೋಧಕರು ತಿಳಿಸಿದ್ದಾರೆ. ಯಾವುದೇ ಒಂದು ಸಸ್ಯ ನೈಸರ್ಗಿಕವಾಗಿಯೇ ಬೆಳೆಯಬೇಕು. ಅದನ್ನು ತಮ್ಮಿಷ್ಟದಂತೆ ಬೆಳೆಸಬೇಕೆಂದು ಮನುಷ್ಯ ಪ್ರಯತ್ನಿಸಿದರೆ ಅದರಿಂದ ಸಮಸ್ಯೆಯೇ ಉಂಟಾಗುತ್ತದೆಯಷ್ಟೆ.ಇದರಿಂದಾಗಿ ಹವಾಮಾನದ ವೈಪರೀತ್ಯವೂ ಸಂಭವಿಸುತ್ತದೆಯಂತೆ.
ನೀರು, ಜೀವವೈವಿಧ್ಯ, ಗಾಳಿ ಎಲ್ಲದರ ಮೇಲೂ ಇದರ ಪರಿಣಾಮವಾ ಗುತ್ತದೆಯಂತೆ. ಆದ್ದರಿಂದ ಯಾವುದೇ ಸಸ್ಯವನ್ನು ರೂಪಾಂತರಿಸುವ ಕೆಲಸವನ್ನು ಮಾಡದಿರುವುದು ಮನುಕುಲದ ಭವಿಷ್ಯಕ್ಕೇ ಒಳ್ಳೆಯದು ಎನ್ನುತ್ತದೆ ಸಂಶೋಧನೆ.

ಆಫ್ರಿಕಾ ಆನೆಗಳಿಗೂ ಬಂತು ಕಲಿಗಾಲ!
ಉದ್ದ ಕಿವಿಯ, ದೈತ್ಯ ಗಾತ್ರದ, ಕಪ್ಪು ಬಣ್ಣದ ಆನೆಗಳನ್ನು ನೋಡಿದರೆ ಅವು ಆಫ್ರಿಕಾದವೇ ಎಂದು ಥಟ್ ಅಂತ ಹೇಳಿಬಿಡಬಹುದು. ಆಫ್ರಿಕದ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಪ್ರಾಣಿಗಳಲ್ಲಿ ಆನೆಯೂ ಒಂದು. ಆದರೆ ಇಂದು ಅವುಗಳ ಸಂತತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆಯಂತೆ. ಇವಕ್ಕೆಲ್ಲ ಮನುಷ್ಯನ ದುರಾಸೆಯೇ ಕಾರಣವೆಂದು ಒತ್ತಿ ಹೇಳಬೇಕಿಲ್ಲ. ಮೊದಲು ಭಾರತದಲ್ಲೂ ಸಂಪದ್ಭರಿತವಾಗಿದ್ದ ಕಾಡು ಮತ್ತು ಜೀವ ವೈವಿಧ್ಯಗಳು ಮನುಷ್ಯನ ದುರಾಸೆಯ ಕಾರಣಕ್ಕಾಗಿಯೇ ಇಂದು ಬರಿದಾಗುತ್ತ ಬಂದಿವೆ. ಅವುಗಳ ರಕ್ಷಣೆಗೆಂದೇ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮಟ್ಟಿಗೆ ಈ ಸಮಸ್ಯೆ ಅಪಾಯದ ಹಂತ ತಲುಪಿದೆ.
ಆಫ್ರಿಕದ ದಟ್ಟ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ದೈತ್ಯ ಆನೆಗಳನ್ನೂ ಮನುಷ್ಯ ಬಿಟ್ಟಿಲ್ಲ. ಅವುಗಳ ದಂತದ ಆಸೆಗಾಗಿ ಆನೆಗಳನ್ನು ಹೊಡೆದು ಸಾಯಿಸುತ್ತಿದ್ದಾನೆ. ಆನೆಗಳ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಂತಗಳೇ ಇಂದು ಅವುಗಳ ಅವನತಿಗೂ ಪ್ರಮುಖ ಕಾರಣವಾಗಿವೆ.
2003ರ ಹೊತ್ತಿನಲ್ಲಿ 5,50,000 ಇದ್ದ ಆನೆಗಳ ಸಂತತಿ 2013 ರ ಹೊತ್ತಿಗೆ 4,70,000ಕ್ಕೆ ಕುಸಿದಿದೆ. ಆನೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದಕ್ಕೆ ಈ ಸಂಖ್ಯೆಗಿಂತ ಬೇರೆ ನಿದರ್ಶನ ಬೇಕಿಲ್ಲ. ದಟ್ಟ ಕಾಡನ್ನು ಹೊಂದಿ, ಸಮೃದ್ಧವಾಗಿರುವ ದಕ್ಷಿಣ ಆಫ್ರಿಕವೂ ಆಧುನೀಕರಣದ ಬೋನಿಗೆ ಬಿದ್ದು ಒದ್ದಾಡುತ್ತಿರುವುದು ಸುಳ್ಳಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

ಮೆದುಳಿನ ಆಕಾರವೇ ಮನಸ್ಥಿತಿ ಹೇಳುತ್ತೆ!
ಮೆದುಳಿನ ಆಕಾರವನ್ನು ನೋಡಿಯೇ ವ್ಯಕ್ತಿಯ ಮನಸ್ಥಿತಿಯನ್ನೂ ಹೇಳಬಹುದಂತೆ. ಅಕ್ಷರ ನೋಡಿ, ಮುಖ ನೋಡಿ, ಅಂಗೈ ನೋಡಿ, ಜಾತಕ ನೋಡಿ ವ್ಯಕ್ತಿಯ ಗುಣಾವಗುಣಗಳನ್ನು ಹೇಳಬಲ್ಲ ವ್ಯಕ್ತಿಗಳನ್ನು ನಾವು ನೋಡಿದ್ದೇವೆ. ಅಂತಾದ್ದರಲ್ಲಿ ಮೆದುಳು ನೋಡಿ ಮನಸ್ಥಿತಿ ಹೇಳುವುದೇನು ಕಷ್ಟದ ಕೆಲಸವೇ ಎಂದು ಪ್ರಶ್ನಿಸಬೇಡಿ. ಏಕೆಂದರೆ ಹೀಗೆ ಮೆದುಳಿನ ಆಕಾರ ನೋಡಿ ವ್ಯಕ್ತಿಯ ಗುಣ-ಸ್ವಭಾವಗಳನ್ನು ಹೇಳುವ ಪದ್ಧತಿ ವೈಜ್ಞಾನಿಕವಾಗಿಯೂ ಸಾಬೀತಾಗಿದೆ!
ಒಬ್ಬ ವ್ಯಕ್ತಿ ನಂಬಿಕಸ್ಥ ಹೌದೋ ಅಲ್ಲವೋ, ಆತ ಮೋಸಗಾರನೇ, ಮುಗ್ಧನೆ ಎಂಬುದನ್ನು ಆ ವ್ಯಕ್ತಿಯ ಮೆದುಳಿನ ಆಕಾರವೇ ಹೇಳುತ್ತದೆಯಂತೆ. ಇತ್ತೀಚೆಗೆ ವಾಷಿಂಗ್ಟನ್ನಿನಲ್ಲಿ ನಡೆದ ಸಂಶೋಧನೆಯೊಂದು ಇಂಥ ವಿಚಿತ್ರ ಸಂಗತಿಯನ್ನು ಬಯಲಿಗೆಳೆದಿದೆ.

ಬಾವಲಿಗಳೆಂಬ ಬುದ್ಧಿಜೀವಿಗಳು!
ಬಾವಲಿಗಳನ್ನು ಹಲವರು ಬೈದುಕೊಳ್ಳುವುದುಂಟು. ರಾತ್ರಿಯಲ್ಲೇ ಜೀವಪಡೆದಂತೆ ಸಂಜೆಯಾಗುತ್ತಲೇ ಚಟುವಟಿಕೆ ಆರಂಭಿಸುವ ಬಾವಲಿಗಳು ಕಿರಿಕಿರಿ ಉಂಟುಮಾಡುವುದಂತೂ ಸುಳ್ಳಲ್ಲ. ಮನುಷ್ಯರ ವಾಸ ಕಡಿಮೆ ಇರುವ ಸ್ಥಳಗಳಲ್ಲಿ ನಿರ್ಭಯವಾಗಿ ವಾಸಿಸುವ ಬಾವಲಿಗಳ ಸಂಖ್ಯೆ ಇತ್ತೀಚಿಗೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಸರ್ಕಾರವೂ ಚಿಂತಿಸುವಂತೆ ಮಾಡಿದೆ. ಇವುಗಳ ನಿಯಂತ್ರಣದ ಬಗ್ಗೆ ಯೋಚಿಸಬೇಕೆಂಬ ಕೂಗೂ ಕೇಳಿಬರುತ್ತಿದೆ. ಬಹುಪಾಲು ಎಲ್ಲ ಪಾರ್ಕ್‌ಗಳಲ್ಲೂ ಇವುಗಳ ಉಪಟಳ ಹೆಚ್ಚಾಗಿದೆ.
ಒಟ್ಟಿನಲ್ಲಿ ಹಾರಾಡಬಲ್ಲ ಏಕೈಕ ಸಸ್ತನಿ ಎನ್ನಿಸಿಕೊಂಡಿರುವ ಬಾವಲಿ ಮಾಡುತ್ತಿರುವ ಉಪಟಳ ಒಂದೆರಡಲ್ಲ. ಇಂಥ ಬಾವಲಿ, ನಿರ್ಧಾರ ತೆಗೆದುಕೊಳ್ಳುವಲ್ಲಿ ಬಹಳ ಚಾಣಾಕ್ಷ. ಕೇವಲ ಒಂದು ಮಿಲಿ ಸೆಕೆಂಡ್‌ನಲ್ಲಿ ಯಾವುದಾದರೊಂದು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅದಕ್ಕಿದೆಯಂತೆ. ಒಂದು ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುವ ಮನುಷ್ಯರನ್ನು ನೋಡಿದರೆ ಬಾವಲಿಗಳಿಗೆ ನಗು ಬರಲಿಕ್ಕೆ ಸಾಕು. ಏಕೆಂದರೆ ಅವುಗಳು ತಮ್ಮ ನಿರ್ಧಾರದ ಬಗ್ಗೆ ಎಂದಿಗೂ ಆತ್ಮವಿಶ್ವಾಸ ಹೊಂದಿರುತ್ತವೆಯಂತೆ. ಆ ನಿರ್ಧಾರಗಳ ಬಗ್ಗೆ ಅವಕ್ಕೆ ಪಶ್ಚಾತ್ತಾಪವೂ ಆಗುವುದಿಲ್ಲವಂತೆ. ತತ್‌ಕ್ಷಣದಲ್ಲೇ ನಿರ್ಧಾರ ತೆಗೆದುಕೊಳ್ಳಬಲ್ಲಂಥ ಚಂಚಲ ರಹಿತ ಮನಸ್ಥಿತಿಯನ್ನು ಹೊಂದಿರುವ ಬಾವಲಿಗಳನ್ನು ಬುದ್ಧಿಜೀವಿಗಳೆಂದು ಕರೆಯಲೇಬೇಕಲ್ಲವೇ?!

   

Leave a Reply