ಎಂಥಾ ಸುದ್ದಿ

ಪ್ರಚಲಿತ - 0 Comment
Issue Date :

ಇದು ಸೌರ ವಿಮಾನ!
ಸದ್ಯಕ್ಕೆ ಎಲ್ಲೆಲ್ಲೂ ಸೌರ ಶಕ್ತಿಯದ್ದೇ ಸುದ್ದಿ. ವಿದ್ಯುತ್ ವ್ಯತ್ಯಯ ಹೆಚ್ಚಾಗುತ್ತಿದ್ದಂತೆಯೇ ಪರ್ಯಾಯ ಉಪಾಯವಾಗಿ ಕಂಡಿದ್ದು ಸೌರಶಕ್ತಿಯೇ. ಇದೀಗ ಹಲವು ಯಂತ್ರಗಳು ಸೌರಶಕ್ತಿಯಿಂದಲೇ ನಡೆಯುತ್ತಿರುವುದು ನಮಗೆಲ್ಲ ಗೊತ್ತು. ಗೀಜರ್, ಟಿವಿ, ಲೈಟ್ ಇತ್ಯಾದಿ ಎಲ್ಲವೂ ಇದೀಗ ಸೌರಶಕ್ತಿಯಿಂದಲೇ ಜೀವ ಪಡೆಯಬಹುದಾಗಿದೆ. ಹಲವು ಪ್ರೀದೇಶಗಳಲ್ಲಿ ಸೌರಶಕ್ತಿ ಘಟಕಗಳನ್ನೂ ಸ್ಥಾಪಿಸುವ ಮೂಲಕ ಶಕ್ತಿಯ ಸಂರಕ್ಷಣೆಗೂ ಸರ್ಕಾರ ಮುಂದಾಗಿದೆ. ಹೀಗಿರುವಾಗ ಸೌರ ವಿಮಾನವನ್ನು ತಯಾರಿಸಿ, ಯಶಸ್ವಿಯಾಗಿ ಹಾರಿಸುವ ಮೂಲಕ ಚೀನಾ ಜಗತ್ತೇ ತನ್ನತ್ತ ನೋಡುವಂತೆ ಮಾಡಿದೆ.
ಹವಾಮಾನ ವೈಪರೀತ್ಯದ ಕಾರಣ ಮೂರು ವಾರ ತಡವಾಗಿ ವಿಮಾನ ಹಾರಿಸಲಾಯ್ತಾದರೂ 1190 ಕಿ.ಮೀ.ದೂರವನ್ನು ಯಾವ ಸಮಸ್ಯೆಯಿಲ್ಲದೆ ನಿರೀಕ್ಷಿತ 20 ಗಂಟೆಗಳ ಸಮಯದಲ್ಲಿ ತಲುಪಿದ್ದು ತಂತ್ರಜ್ಞರ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಇನ್ನೂ 35,000 ಕಿ.ಮೀ. ದೂರವನ್ನು 25 ದಿನಗಳಲ್ಲಿ ತಲುಪಲಿರುವ ಈ ವಿಮಾನ ಕೊನೆಯಲ್ಲಿ ಅಬುದಾಬಿಯಲ್ಲಿ ಇಳಿಯಲಿದೆ. ಸದ್ಯಕ್ಕೆ ವಿಮಾನ ತೀರಾ ನಿಧಾನ.
ಗತಿಯಲ್ಲಿದ್ದರೂ ಸೌರಶಕ್ತಿಯ ಮೂಲಕ ವಿಮಾನ ಚಾಲನೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಇನ್ನಷ್ಟು ಸುಧಾರಿತ ತಂತ್ರಜ್ಞಾನವನ್ನು ಬಳಸುವ ಮೂಲಕ ಸೌರಶಕ್ತಿಯಿಂದಲೇ ವಿಮಾನ ಚಾಲನೆ ಸಾಧ್ಯ ಎಂದಿರುವ ವಿಜ್ಞಾನಿಗಳು ಜಗತ್ತಿನ ಇತರ ದೇಶದ ವಿಜ್ಞಾನಿಗಳಿಗೆ ಆದರ್ಶವಾಗಿದ್ದಾರೆ.

ಮರ ಬೇಗ ಬೆಳೆಯಬೇಕಾ?
ಮಕ್ಕಳು ಬೇಗ ಬೆಳೆಯಬೇಕಾ? ನಿಮ್ಮ ಮಗು ಉದ್ದವಾಗಬೇಕಾ..? ಹಾಗಾದರೆ ಈ ಪುಡಿಯನ್ನು ದಿನವೂ ಹಾಲಿನಲ್ಲಿ ಸೇರಿಸಿ ಕುಡಿಯಿರಿ… ಎಂದು ವೀಕ್ಷಕರನ್ನು ಮರುಳು ಮಾಡುವ ತರಹೇವಾರಿ ಜಾಹಿರಾತುಗಳನ್ನು ನೋಡಿದ್ದೇವೆ. ನಮ್ಮ ಮಕ್ಕಳಿಗೂ ಅದನ್ನು ತಂದು ಸೇವಿಸುವಂತೆ ಪೀಡಿಸಿದ್ದೇವೆ. ಈ ಜಾಹೀರಾತುಗಳ ಜಮಾನದಲ್ಲಿ ಇವೆಲ್ಲ ಹೊಸತೇನಲ್ಲ. ಆದರೆ ಇತ್ತೀಚೆಗೆ ನಡೆದ ಹೊಸ ಸಂಶೋಧನೆಯೊಂದು ಮರಗಳನ್ನೂ ಶೀಘ್ರವಾಗಿ ಬೆಳೆಸಬಹುದು ಎಂಬುದನ್ನು ಸಾಬೀತುಪಡಿಸಿದೆ.
ಸಸ್ಯಗಳಲ್ಲಿರುವ ಎರಡು ರೀತಿಯ ವಂಶವಾಹಿಯು ಅವು ಬೇಗ ಬೆಳೆಯುವಂತೆ ಮಾಡುತ್ತವೆ. ಸಸ್ಯಗಳಲ್ಲಿರುವ ಜೀವಕೋಶಗಳ ಅಗತ್ಯವನ್ನು ಮನಗಂಡು ಅವಕ್ಕೆ ಬೇಕಾದಷ್ಟು ಸಂಪನ್ಮೂಲವನ್ನು ಒದಗಿಸಿದರೆ ಅವು ಸಾಕಷ್ಟು ಬೆಳೆಯಬಲ್ಲವು. ಸಾಮಾನ್ಯ ಗಾತ್ರಕ್ಕಿಂತ ಬಹುಪಟ್ಟು ಬೃಹತ್ತಾಗಿ ಬೆಳೆಯಬಲ್ಲವು ಎಂದು ಈ ಸಂಶೋಧನೆ ತಿಳಿಸಿದೆ.
ಸಸ್ಯಗಳು ಹೀಗೆ ಕನಿಷ್ಠ ಸಮಯದಲ್ಲಿಯೇ ಬೃಹತ್ತಾಗಿ ಬೆಳೆಯುವುದರಿಂದಾಗಿ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಅಂಶವನ್ನು ಹೆಚ್ಚು ಹೀರಿಕೊಳ್ಳುತ್ತವೆ. ಇದರಿಂದ ವಾತಾವರಣವೂ ಕಲುಷಿತಮುಕ್ತವಾಗುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ. ಆದರೆ ಸಸ್ಯಗಳನ್ನು ಸಹಜವಾಗಿ ಬೆಳೆಯುವುದಕ್ಕೆ ಬಿಡದೆ ಬಲವಂತವಾಗಿ ಅವನ್ನು ದೈತ್ಯವಾಗಿ ಬೆಳೆಯುವಂತೆ ಮಾಡುವುದು ಪ್ರಕೃತಿ ನಿಯಮಕ್ಕೆ ವಿರೋಧವಲ್ಲವೇ ಎಂಬುದು ಪ್ರಜ್ಞಾವಂತರ ಕಳಕಳಿ.

ಹೊಸ ಅವತಾರದಲ್ಲಿ ಸೇಬು!

ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ಭೇಟಿ ಮಾಡುವುದೇ ಬೇಕಾಗುವುದಿಲ್ಲವೆಂಬ ಮಾತಿದೆ. ಅಷ್ಟರ ಮಟ್ಟಿಗೆ ಸೇಬು ಆರೋಗ್ಯ ಖಜಾನೆ ಎನ್ನಿಸಿದೆ. ಆದರೆ ಇತ್ತೀಚೆಗೆ ಸೇಬು ಹಣ್ಣಿನ ಆಕಾರವೇ ಬದಲಾ ದಂತೆ ಕಾಣಿಸುವುದಿಲ್ಲವೇ? ಮೊದಲೆಲ್ಲ ಸ್ವಲ್ಪ ಉದ್ದವಾದ ಆಕಾರದಲ್ಲಿರುತ್ತಿದ್ದ ಸೇಬು ಇತ್ತೀಚೆಗೆ ಸಂಪೂರ್ಣ ವೃತ್ತಾಕಾರದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಇದಕ್ಕೆ ಕಾರಣ ವಾತಾವರಣವಂತೆ!
ಹೌದು, ವಾತಾವರಣದಲ್ಲಿನ ವೈಪರೀತ್ಯ ಸೇಬು ಬೆಳೆಯಲ್ಲಿ ಮಾತ್ರವಲ್ಲ, ಅದರ ಸ್ವರೂಪದ ಮೇಲೆಯೂ ಪರಿಣಾಮ ಬೀರಿದೆಯಂತೆ. ಹಿಮಪಾತ, ಅತಿಯಾದ ಮಳೆ ಮುಂತಾದ ಕಾರಣದಿಂದಾಗಿ ಸೇಬು ಬೆಳೆ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿ, ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳುವಂಥ ತಳಿಯನ್ನು ರೈತರು ಕಂಡುಕೊಳ್ಳುತ್ತಿದ್ದಾರಂತೆ.
ಇನ್ನು ಕೆಲವೇ ದಿನಗಳಲ್ಲಿ ಸೇಬುವಿನ ಆಕಾರ ಮಾತ್ರವಲ್ಲದೆ ರುಚಿಯಲ್ಲೂ ಬದಲಾವಣೆಯನ್ನು ಕಂಡರೆ ಅಚ್ಚರಿಯಿಲ್ಲ ಎಂಬುದು ತಜ್ಞ ಕೃಷಿಕರ ಅಭಿಪ್ರಾಯ.

ಜಗತ್ತಿನ ಚಿಕ್ಕ ದ್ವೀಪವಿರುವುದು ಭಾರತದಲ್ಲಿ!

ಭಾರತದಲ್ಲೇ ಇರುವ ಹಲವು ಅಚ್ಚರಿಗಳೇ ನಮಗೆ ಗೊತ್ತಿರಲಿಕ್ಕಿಲ್ಲ. ಅವುಗಳಲ್ಲಿ ಈ ದ್ವೀಪವೂ ಒಂದು. ಗುವಾಹಟಿಯಲ್ಲಿರುವ ಉಮಾನಂದ ಎಂಬ ಪುಟ್ಟ ದ್ವೀಪ ಜಗತ್ತಿನಲ್ಲೇ ಅತ್ಯಂತ ಚಿಕ್ಕ ದ್ವೀಪವೆಂಬ ಹೆಸರು ಪಡೆದಿದೆ. ಈ ದ್ವೀಪದ ಹಿಂದೆ ಹಲವು ಪುರಾಣೇತಿಹಾಸಗಳಿವೆ. ಭಗವಾನ್ ಈಶ್ವರ ಈ ಸ್ಥಳಕ್ಕೆ ಬಂದಾಗಲೆಲ್ಲ ಆನಂದದಿಂದ ಇರುತ್ತಿದ್ದನಂತೆ. ತಪಸ್ಸಿಗಾಗಿ ಹಲವು ಬಾರಿ ಇದೇ ದ್ವೀಪಕ್ಕೆ ಬರುತ್ತಿದ್ದನಂತೆ. ಆಗೆಲ್ಲ ಪಾರ್ವತಿ ಸಹ ಆತನೊಂದಿಗೆ ಬರುತ್ತಿದ್ದಳಂತೆ. ಪಾರ್ವತಿಗೆ ಉಮಾ ಎಂಬ ಹೆಸರೂ ಇದೆ. ಉಮಾಳೊಂದಿಗೆ ಆನಂದದಿಂದಿರುವುದಕ್ಕಾಗಿ ಬರುತ್ತಿದ್ದುದರಿಂದ ಇದಕ್ಕೆ ಉಮಾನಂದವೆಂದೇ ಹೆಸರು.
ಈಶ್ವರನ ತಪಸ್ಸನ್ನು ಭಂಗ ಮಾಡಿದ್ದಕ್ಕಾಗಿ ತನ್ನ ಮೂರನೇ ಕಣ್ಣಿನಿಂದ ಕಾಮದೇವನನ್ನು ಈಶ್ವರ ಭಸ್ಮ ಮಾಡಿದ ಜಾಗವೂ ಇದೇ ಎಂಬ ಪ್ರತೀತಿ ಇದೆ. ಇವೆಲ್ಲ ಪುರಾಣಗಳಾದರೆ ಸದ್ಯಕ್ಕೆ ಈ ಜಾಗ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.
ಈ ಸ್ಥಳದಲ್ಲಿ ಸಾಕಷ್ಟು ಜೀವವೈವಿಧ್ಯಗಳೂ ಇವೆ. ಅಳಿವಿನಂಚಿನ ಹಲವು ಜೀವಿಗಳೂ ಇಲ್ಲಿವೆಯಂತೆ. ಬಹುಶಃ ಮನುಷ್ಯರ ಸಂಪರ್ಕ ಈ ಸ್ಥಳಕ್ಕೆ ಹೆಚ್ಚಿಲ್ಲದಿರುವುದರಿಂದಲೋ ಏನೋ, ನೈಸರ್ಗಿಕವಾಗಿಯಂತೂ ಈ ಸ್ಥಳ ಸಮೃದ್ಧವಾಗಿದೆ.
ವಿದ್ಯುತ್ ಇಲ್ಲದೆ ನೀರೆಳೆಯಬಹುದು!
ಇವರ ಹೆಸರು ಮಂಗಲ್ ಸಿಂಗ್. ಉತ್ತರ ಪ್ರದೇಶದ ಭೈಲೋನಿ ಲೋಧ್ ಎಂಬ ಹಳ್ಳಿಯ ಈ ರೈತನಿಗೆ ತನ್ನ ಜಮೀನಿಗೆ ವಿದ್ಯುತ್ ಉಪಯೋಗಿಸದೆ ನೀರು ಹಾಯಿಸುವುದಕ್ಕೆ ಸಾಧ್ಯವೇ ಎಂಬ ಯೋಚನೆ ಇದ್ದಕ್ಕಿದ್ದಂತೆ ತಲೆಯಲ್ಲಿ ಗಿರಕಿ ಹೊಡೆಯುವುದಕ್ಕೆ ಶುರುವಾಯ್ತು. ಬಾಲ್ಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ದಿನಗಳು ನೆನಪಾಗಿ ಈ ಯೋಚನೆಗೆ ಯಾವುದೋ ಹೊಸ ಸುಳಿವು ಸಿಕ್ಕಂತಾಯ್ತು. ನೀರಿನ ರಭಸವೇ ಹೊಸತೇನನ್ನೂ ಕಂಡುಹಿಡಿಯುವ ಉತ್ಸಾಹಕ್ಕೆ ಮತ್ತಷ್ಟು ಪುಷ್ಟಿ ನೀಡಿತು.
ಸಂಪೂರ್ಣವಾಗಿ ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ, ಸುಲಭ ತಂತ್ರಜ್ಞಾನಗಳ ಮೂಲಕವೇ ಇದನ್ನು ನಿರ್ಮಿಸಲಾಗಿದ್ದು ಅಕ್ಕೀಗ ಮಂಗಲ್ ಎಂದೇ ನಾಮಕರಣ ಮಾಡಲಾಗಿದೆ. ರಭಸವಾಗಿರುವ ನದಿ ಅಥವಾ ನೀರಿನ ಯಾವುದೇ ಮೂಲದಲ್ಲಿ ಈ ಯಂತ್ರವನ್ನು ಬಳಸಬಹುದು. ಇದಕ್ಕೆ ಯಾವುದೇ ರೀತಿಯ ವಿದ್ಯುತ್ತಿನ ಬಳಕೆ ಬೇಕಿಲ್ಲ. ಯಾವ ಖರ್ಚೂ ಇಲ್ಲದೆ ಮನೆಯಲ್ಲಿ ತ್ಯಾಜ್ಯವೆಂದು ಬಿಸಾಡುವ ವಸ್ತುಗಳಿಂದಲೇ ತಯಾರಿಸಬಹುದಂತೆ.
ಈ ತಂತ್ರಜ್ಞಾನವನ್ನು ಮಂಗಲ್ ಸಿಂಗ್ 1987 ರಲ್ಲೇ ಕಂಡುಕೊಂಡಿದ್ದರು ಎಂದರೆ ಅಚ್ಚರಿಯಾಗಬಹುದು. ಅವರ ಬಳಿ ಇದ್ದ ವಿದ್ಯುತ್ ಚಾಲಿತ ಪಂಪು ಕೈಕೊಟ್ಟಾಗ ಪರ್ಯಾಯವೆಂಬಂತೆ ಸ್ಥಾಪಿಸಿದ ಈ ಯಂತ್ರ ಇಂದಿಗೂ ಸುಲಲಿತವಾಗಿ ನಡೆದುಕೊಂಡು ಬರುತ್ತಿದೆ. ಅಂದಿನಿಂದಲೇ ವಿದ್ಯುತ್ ಬಳಸದೆ ಹೊಲಕ್ಕೆ ಸಮೃದ್ಧವಾಗಿ ನೀರು ಹಾಯಿಸುತ್ತಿರುವ ಕೀರ್ತಿ ಮಂಗಲ್ ಸಿಂಗ್ ಅವರದ್ದು.
ವಿದ್ಯೆ ಕಲಿಯದಿದ್ದರೂ ನಮ್ಮ ಅನುಭವಗಳನ್ನೇ ಇಟ್ಟುಕೊಂಡು ಇಂಥ ಸಾಕಷ್ಟು ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು. ಆದರೆ ಅದಕ್ಕೆ ಮನಸ್ಸು ಬೇಕಷ್ಟೆ ಎಂಬುದು ಮಂಗಲ್ ಸಿಂಗ್ ಮಾತು. ನಾವು ಮಾಡುವ ಕೆಲಸವನ್ನೇ ಸ್ವಲ್ಪ ಆಸಕ್ತಿಯಿಂದ ಮಾಡಿದರೆ ಇಂಥ ಪರ್ಯಾಯ ಆಲೋಚನೆಗಳು ಹೊಳೆಯುತ್ತವೆ ಎಂಬ ಮಂಗಲ್ ಸಿಂಗ್‌ರಂಥ ಮನಸ್ಸು ಎಲ್ಲ ರೈತರಿಗೂ ಇದ್ದರೆ ನಮ್ಮ ರೈತರಿಗೆ ವಿದ್ಯುತ್ ಸಮಸ್ಯೆ ಉಂಟಾಗುತ್ತಲೇ ಇರಲಿಲ್ಲವೇನೋ..! ಅಲ್ಲವೇ?

   

Leave a Reply