ಎತ್ತ ಸಾಗುತ್ತಿವೆ ಇಂದಿನ ನಮ್ಮ ವಿಶ್ವವಿದ್ಯಾಲಯದ ಸಂಶೋಧನೆಗಳು

ಲೇಖನಗಳು - 0 Comment
Issue Date :

– ಜಗದೀಶ ಮಾನೆ

ವಾಸ್ತವವಾಗಿ ಇಂದಿನ  ನಮ್ಮ ಸಂಶೋಧನಾ ಕ್ಷೇತ್ರದಿಂದ ದೇಶದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಂಡು ದೇಶ ಅಭಿವೃದ್ದಿ ಕಾಣಲು ಎಷ್ಟರ ಮಟ್ಟಿಗೆ ಸಂಶೋದನೆಗಳು ಯಶಸ್ಸನ್ನು ಕಂಡಿವೆ. ಯಶಸ್ಸನ್ನು ಕಂಡಿಲ್ಲ ಅನ್ನೋದಾದರೆ ಅದಕ್ಕೆ ಮೂಲ ಸಮಸ್ಯೆಗಳೇನು? ಮತ್ತು ಅದಕ್ಕೆ ಪರಿಹಾರಗಳೇನು? ಯಾವ ದಿಕ್ಕಿಗೆ ನಮ್ಮ ಸಂಶೋದನೆಗಳು ನಡೆಯುತ್ತಿವೆ? ಎಂಬಿತ್ಯಾದಿ ಚರ್ಚೆಗಳನ್ನು ಮಾಡಬೇಕು, ಇಂದಿನ ಕೆಂದ್ರ ಸರ್ಕಾರವಂತೂ ಸಂಶೋಧನಾ ಕ್ಷೇತ್ರಗಳ ಅಭಿವೃದ್ದಿಗಾಗಿ ಸಾಕಷ್ಟು ಅನುದಾನ ನೀಡಿದೆ. ಆದರೂ ಗುಣಮಟ್ಟದ ಸಂಶೋಧನೆಗಳು ನಡೆಯುತ್ತಿಲ್ಲ. ಅದರಲ್ಲೂ ಸಮಾಜ ವಿಜ್ಞಾನ ಸಂಶೋಧನಾ ಕ್ಷೇತ್ರವಂತೂ ಬಹುತೇಕ ಗುಣಮಟ್ಟ ಕಳೆದುಕೊಂಡಂತೆ ಗೋಚರಿಸುತ್ತದೆ. ವಾಸ್ತವವಾಗಿ ನಮ್ಮ ಸಂಶೋಧನೆಗಳು ಹೇಗಿವೆ? ವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ಯಾರಾದರೂ ಸಂಶೋಧನೆ ಮಾಡಿದ್ದಾರೆ.  ಅಥವಾ ಪಿಎಚ್.ಡಿ. ಪದವಿ ಪಡೆದಿದ್ದಾರೆಂದರೆ ಅದಕ್ಕೆ ನೂರೆಂಟು ಪ್ರಶ್ನೆಗಳು ಉದ್ಭವವಾಗುತ್ತವೆ. ನೌಕರಿಯಲ್ಲಿ ಬಡ್ತಿ ಪಡೆಯಲು ಈ ಪಿಎಚ್.ಡಿ. ಅರ್ಹತೆಯಾಗುತ್ತದೆಯೆಂಬ ಕಾರಣಗಳಿಗಾಗಿ, ಉದ್ಯೋಗ ಪಡೆಯಲಿಕ್ಕಾಗಿಯೇ ಹೆಚ್ಚು ಸಂಶೋಧನೆಗಳಾಗುತ್ತಿವೆ ವಿನಃ ಆಸಕ್ತಿಗಾಗಿ ಅಲ್ಲ ಎನಿಸುತ್ತದೆ. ಅನೇಕ ವಿಭಾಗಗಳಲ್ಲಿ ಸಂಶೋಧನೆಗೆ ಆಯ್ದುಕೊಳ್ಳುವಂತಹ ವಿಷಯವಾದರು ಎಂತಹದ್ದು? ಈ ಸಂಶೋಧನಾ ಪ್ರಬಂಧವನ್ನು ಓದುವವರ ಸಂಖ್ಯೆ ಎಷ್ಟು? ಈ ರೀತಿಯ ಸಂಶೋಧನೆಗಳಿಂದ ಅಥವಾ ಸಂಶೋಧಕರಿಂದ ದೇಶಕ್ಕೆ ಏನಾದರು ಪ್ರಯೋಜನ ಇದೆಯೇ? ಹೀಗೆ ನೂರಾರು ಪ್ರಶ್ನೆಗಳು ನಮ್ಮ ಸಂಶೋಧನಾ ಕ್ಷೇತ್ರದ ಮುಂದಿದ್ದಾವೆ.  ಪ್ರಸ್ತುತ ನಮ್ಮ ಮಾಧ್ಯಮಗಳಾಗಲಿ, ಸಂಶೋಧಕರಾಗಲಿ, ಇತಿಹಾಸಕಾರರಾಗಲಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವದಕ್ಕೆ ಒಂದು ಉದಾಹರಣೆ ನೆನಪಿಗೆ ಬರುತ್ತದೆ.

 ಸುಮಾರು ಹತ್ತು ವರ್ಷಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಂತಹ ಘಟನೆ ಇದು. ಶಿರಸಿಯ ಗಣಪತಿ ದೇವಸ್ಥಾನದ ಶಂಕರ ಹೊಂಡದ ಸ್ವಚ್ಛತಾ ಕಾರ್ಯ ನಡೆದಿತ್ತು.  ಅಲ್ಲಿ ಗಣಪತಿಯ ವಿಗ್ರಹವೊಂದು ದೊರಕಿತು. ಕ್ಷಣಾರ್ಧದಲ್ಲಿ ಈ ಸುದ್ದಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಹರಡಿತು. ವೂರನೆದಿನ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿಬಿಟ್ಟಿತು. ಒಬ್ಬ ಸಂಶೋಧಕರು ಹೇಳಿದ್ದು- ಈ ವಿಗ್ರಹ ಶಾತವಾಹನರ ಕಾಲದ್ದು, ಮತ್ತೊಬ್ಬ ಪುರಾತತ್ವ ಇಲಾಖೆಯ ಅಧಿಕಾರಿಗಳು ಇದು ಸುಮಾರು ಸಾವಿರ ವರ್ಷಗಳ ಹಿಂದಿನ ವಿಗ್ರಹ ಎನ್ನುತ್ತಾ ನೂರೆಂಟು ವಿವರಗಳನ್ನು ಕೊಟ್ಟಿದ್ದರು. ತಮಾಷೆಯ ಸಂಗತಿಯೆಂದರೆ ಶಂಕರ ಹೊಂಡ ಸ್ವಚ್ಛ ಮಾಡುವ ಒಂದು ವರ್ಷದ ಮೊದಲು ಅಲ್ಲೇ ಪಕ್ಕದ ಹಳ್ಳಿಯಲ್ಲಿ ವಾಸ ಮಾಡುವ ನಿವಾಸಿಯೊಬ್ಬರು ಕುಮಟಾದಿಂದ ವಿಗ್ರಹವೊಂದನ್ನು ಖರೀದಿಸಿ ತಂದಿದ್ದರು. ಅವರ ಮನೆಯಲ್ಲಿ ಅವಘಡಗಳು ಹೆಚ್ಚಾದಾಗ ಜ್ಯೋತಿಷಿಯೊಬ್ಬರು ಆ ನಿವಾಸಿಗೆ ವಿಗ್ರಹದ ಕಾರಣದಿಂದ ನಿಮ್ಮ ಮನೆಯಲ್ಲಿ ತೊಂದರೆಯುಂಟಾಗುತ್ತಿದೆ. ಆದ್ದರಿಂದ ಆ ವಿಗ್ರಹವನ್ನು ನೀರಲ್ಲಿ ಮುಳಗಿಸುವದೆಂದು ಸಲಹೆ ನೀಡಿದಾಕ್ಷಣ ಆ ಗ್ರಹಸ್ಥ ಅದನ್ನು ಶಂಕರ ಹೊಂಡದಲ್ಲಿ ಎಸೆದಿದ್ದ. ಆ ವಿಗ್ರಹಕ್ಕೆ ನಮ್ಮ ಸಂಶೋಧಕರು, ಮಾಧ್ಯಮಗಳು ಸಾವಿರಾರು ವರ್ಷದ ಇತಿಹಾಸ ಕಟ್ಟಿದರು. ಇಂತಹ ಸಂಶೋಧನೆಗಳಿಂದ ಇಂತಹ ಮಹಾನ್ ಸಂಶೋಧಕರು ಹುಟ್ಟುತ್ತಾರಲ್ಲದೆ ಬೇರೆ ವಿಧಿ ಇಲ್ಲ.

 ವಾಸ್ತವವಾಗಿ ಸಂಶೋಧನೆ ಎಂದರೇನು ?

ಯಾಕೆ ಮಾಡಬೇಕು ? ಹೇಗೆ ಮಾಡಬೇಕು ? ಅದರಿಂದ ಯಾರಿಗೆಲ್ಲ ಪ್ರಯೋಜನ ? ಈ ರೀತಿಯ ಹಲವಾರು ಪ್ರಶ್ನೆಗಳಿಗೆಲ್ಲ ನಾವು ಉತ್ತರ ಕಂಡುಕೊಳ್ಳದೇ ಹೋದರೆ ನಮ್ಮ ಸಂಶೋಧನೆಗಳು ಪರಿಪೂರ್ಣವಾಗಲಾರವು.  ಸಂಶೋಧನೆಗಳಿಗೂ ಸಮಾಜಕ್ಕೂ ಏನಾದರೂ ಸಂಬಂಧ ಇದೆಯೇ? ಇಲ್ಲ ಎಂದಾದರೆ ಸಮಾಜದಲ್ಲಿ ಒಂದು ಸುಸಂಬಂದ್ಧ ಚಿಂತನಾಕ್ರಮ ಬೆಳೆಯಲು ಸಾಧ್ಯವಿಲ್ಲ. ಯಾರೋ ಹೇಳಿದ ವಿಚಾರಗಳನ್ನು ನಕಲು ಮಾಡಿ ಕೊನೆಗೆ ಆ ವಿಚಾರ ಯಾರಿಗೂ ಅರ್ಥವಾಗದ ಹಂತ ತಲುಪಿಬಿಡುವಂತಹ ಸಾಧ್ಯತೆಗಳು ಹೆಚ್ಚುತ್ತವೆ. ಹಾಗಾಗಿ ಈ ದೇಶದಲ್ಲಿ ಸಂಶೋಧನಾ ಕಾರ್ಯಕ್ಕೆ ಪುನರುಜ್ಜೀವನ ನೀಡಬೇಕಾಗಿದೆ. ಇಂತಹ ಉತ್ತಮವಾಗಿ ಕೆಲಸ ಮಾಡುತ್ತಿರುವ ಸಂಶೋಧನಾ ಕೇಂದ್ರ ಕರ್ನಾಟಕದಲ್ಲೊಂದಿದೆ. ಅದೇ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ’ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ’. ಈ ಕೇಂದ್ರ ಕುವೆಂಪು ವಿಶ್ವವಿದ್ಯಾಲಯ ಮತ್ತು ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ  ನಡೆಯುತ್ತಿದೆ.  ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂಬುದಕ್ಕೆ ಮಾದರಿ ಇದು. ಗುರುಕುಲ ಮಾದರಿಯ ಮಾರ್ಗದರ್ಶನ ಇಲ್ಲಿದೆ.  ನಿಜವಾದ ಸಂಶೋಧನೆ ಮಾಡಬೇಕೆಂದವರಿಗೆ, ಅಂತಹ ಪ್ರಬಲ ಇಚ್ಛೆ ಹೊಂದಿದವರಿಗೆ ಮಾತ್ರ ಅಲ್ಲಿ ಅವಕಾಶ. ಹಾಗಾಗಿ ಜಗತ್ತಿನಲ್ಲಿ ಉತ್ತಮ ಸಂಶೋಧನಾ ಕೇಂದ್ರ ಎಂಬ ಹೆಗ್ಗಳಿಕೆಗೂ ಈ ಕೇಂದ್ರ ಪಾತ್ರವಾಗಿದೆ.  ಈ ಸಂಶೋಧನಾ ಕೇಂದ್ರದಲ್ಲಿ ಆಯ್ದುಕೊಳ್ಳಬಹುದಾದ ವಿಷಯ ಸಮಾಜವಿಜ್ಞಾನಕ್ಕೆ ಸಂಬಂಧಿಸಿರಬೇಕು. ಯಾಕೆಂದರೆ ಸಧ್ಯ ಭಾರತದ ಸಮಾಜವಿಜ್ಞಾನ ವಸಾಹತು ನಿರೂಪಣೆಯಿಂದ ವಿಕೃತವಾಗಿದೆ. ಇದರಿಂದ ಬಿಡುಗಡೆಗೊಳಿಸುವುದೇ ಇಲ್ಲಿನ ಸಂಶೋಧನೆಗಳ ಮುಖ್ಯ ಗುರಿಯಾಗಿರುವುದು ಬಹಳ ಹೆಮ್ಮೆಯ ಸಂಗತಿ.

 ಇಲ್ಲಿ ಹೆಚ್ಚು ಒತ್ತುಕೊಡುವಂತಹ ವಿಷಯಗಳು – ಜ್ಯಾತಿ / ಅಸಮಾನತೆ, ಬಹುತ್ವ, ಸಂಘರ್ಷಗಳ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನೆತ್ತಿಕೊಳ್ಳುವುದು; ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸಮಾಜಶಾಸ್ತ್ರೀಯ ಸಂಶೋಧನೆಯ ಕೌಶಲಗಳನ್ನು ಕಲಿಸುವುದು; ಅಭಿವೃದ್ಧಿಪರ ನೀತಿಗಳಲ್ಲಿ ಮತ್ತು ರಾಜ್ಯದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಸಮಸ್ಯೆಗಳು ಯಾವ ರೀತಿಯ ಪ್ರಭಾವ ಬೀರುತ್ತವೆಂಬ ವಿಷಯದ ಕುರಿತು ಬೆಳಕು ಚೆಲ್ಲುವುದು; ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘರ್ಷಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ಸಂಶೋಧನೆ ಜ್ಞಾನದ ಸಹಾಯದಿಂದ ರೂಪಿಸುವುದು… ಹೀಗೆ ಇನ್ನೂ ಹಲವಾರು ವಿಷಯಗಳ ಬಗ್ಗೆ ತಿಳಿದುಕೊಂಡು ಜಾಗೃತಿ ಮೂಡಿಸುವುದು. ಇಲ್ಲಿ ಮಾಡುವ ಸಂಶೋಧನೆಗಳು ಸಮಾಜಮುಖಿ ಕಾರ್ಯ ಹೊರತು ಕೇವಲ ವಿಶ್ವವಿದ್ಯಾಲಯದ ಕೊಠಡಿಯೊಳಗೆ ಮಾಡುವ ಅಧ್ಯಯನವಲ್ಲ. ಸಮಾಜದಲ್ಲಿ ಜನರೊಂದಿಗೆ ಬೆರೆತು ಅವರ ಅಹವಾಲುಗಳನ್ನು ಸ್ವೀಕರಿಸಿ ಅವುಗಳಿಗೆ ಉತ್ತರ ನೀಡುತ್ತಾ, ಜನರಿಂದಲೂ ಕಲಿತು ವಿಚಾರ ರೂಪಿಸಿಕೊಳ್ಳುತ್ತಾ ಬೆಳೆಯುವುದೇ ಇವರ ಸಂಶೋಧನಾ ಕ್ರಮ. ಹಾಗಾಗಿ ಈ ರೀತಿಯ ಸಂಶೋಧನೆಗಳನ್ನು ಅರಿತಾಗ ನಾವೆಷ್ಟು ಬೌದ್ಧಿಕವಾಗಿ ಬಡವರಾಗಿಬಿಟ್ಟಿದ್ದೇವೆಂಬುದು ಗೊತ್ತಾಗುತ್ತದೆ.

 ಅನೇಕ ವಿದ್ಯಾರ್ಥಿಗಳಿಗೆ ಸರಿಯಾದ ಓದಿನ ಕ್ರಮ ಗೊತ್ತಿಲ್ಲ, ನಿರ್ದಿಷ್ಟವಾದ ಚಿಂತನಾ ಕ್ರಮ ಇಲ್ಲ, ಗ್ರಹಿಕೆಯ ಸೂಕ್ಷ್ಮತೆ ಕಡಿಮೆ. ಹೀಗಿದ್ದಾಗ ನಾವು ಮಾಡುವಂತಹ ಕಟ್ ಆ್ಯಂಡ್ ಪೇಸ್ಟ್ ಸಂಶೋಧನೆಗಳಿಗೆ ಬಿಡಿಗಾಸು ಕಿಮ್ಮತ್ತು ಬರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಇಂದು ಅನೇಕ ವಿಶ್ವವಿದ್ಯಾಲಯಗಳ ಸಂಶೋಧನೆಗಳು ಗುಜರಿ ವ್ಯಾಪಾರವಾಗಿವೆ.  ಈ ಅಂಶಗಳಿಗೆ ಮುಖ್ಯ ಕಾರಣಗಳಾದರೂ ಯಾವುವು? ಏನು ಕೊರತೆಗಳಿವೆ ? ಎಂಬಿತ್ಯಾದಿ ಪ್ರಶ್ನೆಗಳಿಗೆ ನನಗೆ ತಿಳಿದಮಟ್ಟಿಗೆ ಒಂದಿಷ್ಟು ಕಾರಣಗಳನ್ನು ಗುರುತಿಸಿದ್ದೇನೆ. ಮೊದಲನೆಯದಾಗಿ ಭಾಷಾ ಸಮಸ್ಯೆ, ಕನ್ನಡದಲ್ಲಿ ಗ್ರಂಥಗಳು ಸಿಗುವುದು ಕಷ್ಟ. ಹಾಗಾಗಿ ಭಾಷಾಂತರ  ಕಾರ್ಯವು ಇವರ ಗುರಿಯಾಗಿದೆ.

ಸಮಾಜವಿಜ್ಞಾನದ ಪಠ್ಯಗಳ ಕನ್ನಡಾನುವಾದ ಮಾಡುತ್ತಿದ್ದಾರೆ.  ಜಾತಿ, ಅಸಮಾನತೆ, ಬಹುತ್ವ ಹಾಗೂ ಸಂಘರ್ಷಗಳ ಸಂಶೋಧನೆಗೆ ಸಂಬಂಧಿಸಿ ವಿಶೇಷವಾದ ಗ್ರಂಥಾಲಯವೊಂದನ್ನು ರೂಪಿಸುತ್ತಿದ್ದಾರೆ. ಸ್ಥಾನಿಕ ಸಮುದಾಯಗಳು ಹಾಗೂ ಸಮಾಜವಿಜ್ಞಾನದ ಸಿದ್ಧಾಂತಗಳ ನಡುವಿನ ಸಂಬಂಧ ಬಹುತೇಕ ಕಡಿದುಹೋಗಿದೆ.  ಸಂಶೋಧನೆಗೆ ಅವಶ್ಯಕವಿರುವ ತರಬೇತಿಯ ಕೊರತೆ ಬಹಳ ಇರುವುದು. ಸಂಶೋಧನೆಗೆ ಅವಶ್ಯವಿರುವ ಮಾಹಿತಿಗಳು ಸರಿಯಾಗಿ ಲಭ್ಯವಿಲ್ಲದಿರುವುದು.

ಹೀಗಾಗಿ ಈ ರೀತಿಯ ಸಮಸ್ಯೆಗಳು ಸಮಾಜವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಇರುವುದರಿಂದಲೇ ಈ ಎಲ್ಲ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ಸಂಶೋಧಕರ ತಂಡವನ್ನು ಹುಟ್ಟು ಹಾಕಲಾಗಿದೆ. ಅತ್ಯುತ್ತಮವಾದ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡಿ ಅವರನ್ನು ಸ್ಥಳೀಯ ಸಮಾಜಗಳ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸುವಂತೆ ಪ್ರೇರೇಪಿಸುವುದು ಆ ಕೇಂದ್ರದ ಮಹತ್ವದ ಉದ್ದೇಶವಾಗಿರುವುದು ಬಹಳ ಹೆಮ್ಮೆಯ ಸಂಗತಿ. ಈ ರೀತಿಯ ಸಂಶೋಧನೆಗಳು ನಡೆದಾಗ ಮಾತ್ರ ಅದಕ್ಕೊಂದು ಬೆಲೆ ಕಂಡುಕೊಳ್ಳಲು ಸಾಧ್ಯ. ಅವುಗಳಿಂದ ಮಾತ್ರ ಸಮಾಜ ನಿರ್ಮಾಣವಾಗಲು ಸಾಧ್ಯ.  ನಮ್ಮ ಸಂಶೋಧನೆಗಳಿಂದ ಸಮಾಜ, ದೇಶದಲ್ಲಿ ನೂರಾರು, ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾದರೆ ಮಾತ್ರ ಸಂಶೋಧನೆಗಳಿಗೆ ಮಹತ್ವ ಬರಲು ಸಾಧ್ಯ. ಈ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವಂತಹ ಶಿವಮೊಗ್ಗದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ರಾಜ್ಯದ ಹಾಗೂ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಮಾದರಿಯಾಗಲಿ.

 

   

Leave a Reply