ಎದ್ದು ಹೊರಡುವ ಆ ಕ್ಷಣದ ಮಹತ್ವ ಇದೇ ರಾಕ್ ಡೇ ಮೂಲ ಸತ್ವ

ಲೇಖನಗಳು - 0 Comment
Issue Date :

-ಸಿ.ಆರ್.ಮುಕುಂದ

ನಾವೆಲ್ಲರೂ ಜೀವನದ ಯಾವುದೋ ಒಂದು ಕ್ಷಣದಲ್ಲಿ ಕವಲು ದಾರಿಯಲ್ಲಿ ನಿಂತಿರುತ್ತೇವೆ. ಸಿಡಿಲ ಸನ್ಯಾಸಿ ವಿವೇಕಾನಂದರ ಜೀವನದಲ್ಲೂ ಎರಡು ಬಾರಿ ಈ ರೀತಿಯ ಕ್ಷಣಗಳು ಬಂದವು. ಒಂದು, 1884ನೇ ಇಸವಿಯಲ್ಲಿ ಅವರ ತಂದೆ ತೀರಿಕೊಂಡಾಗ. ಅದಾಗಲೇ ರಾಮಕೃಷ್ಣ ಪರಮಹಂಸರ ಸಂಪರ್ಕಕ್ಕೆ ಬಂದಿದ್ದ ಅವರು ಅಧ್ಯಾತ್ಮದ ಹಾದಿ ತುಳಿಯಬೇಕೆಂದು ನಿರ್ಧರಿಸುತ್ತಿದ್ದ ಹೊತ್ತು. ಶ್ರೀಮಂತವಾಗಿದ್ದ ಕುಟುಂಬ ರಸ್ತೆಗೆ ಬಂದಿದ್ದ ಸ್ಥಿತಿ. ಇಂತಹ ಪರಿಸ್ಥಿಯಲ್ಲಿ ಅವರ ಎದುರು ಎರಡು ರಸ್ತೆಗಳಿದ್ದವು. ಮೊದಲನೆಯದು ಆಧ್ಯಾತ್ಮದ ದಾರಿ. ಎರಡನೆಯದು ಗೃಹಸ್ಥನಾಗಿ ತಾಯಿಯನ್ನು ನೋಡಿಕೊಳ್ಳುವುದು. ದಿಗ್ವಿಜಯಕ್ಕೆ ಹೊರಡುವ ಮನಃಸ್ಥಿತಿ ವಿವೇಕಾನಂದರದ್ದು. ಎಲ್ಲ ಕಷ್ಟಕಾರ್ಪಣ್ಯಗಳು ಕಣ್ಣಮುಂದಿದ್ದರೂ, ಕವಲು ದಾರಿಯಲ್ಲಿ ಆರಿಸಿಕೊಂಡದ್ದು ಆಧ್ಯಾತ್ಮದ ಮಾರ್ಗವನ್ನು.

 ಮತ್ತೊಮ್ಮೆ ಎರಡನೇ ಬಾರಿಗೆ ಅವರು ಕವಲು ದಾರಿಯಲ್ಲಿ ನಿಂತದ್ದು ಕನ್ಯಾಕುಮಾರಿಯ ಬಂಡೆಗಲ್ಲಿನ ಮೇಲೆ ಕುಳಿತಾಗ. ಮೊದಲನೆಯ ಮಾರ್ಗ ಅದಾಗಲೇ ಆಯ್ಕೆ ಮಾಡಿಕೊಂಡಿದ್ದ ಅಧ್ಯಾತ್ಮದ್ದು. ತನ್ನ ಸ್ವಂತ ಮೋಕ್ಷ ಸಾಧನೆಯದ್ದು. ಎರಡನೆಯದು ತನ್ನ ಒಡಹುಟ್ಟಿದ್ದ ಈ ವಿಶಾಲ ಸಮಾಜ, ಸನಾತನ ಸಂಸ್ಕೃತಿ, ಪ್ರಪಂಚಕ್ಕೇ ಮಾರ್ಗದರ್ಶನ ಮಾಡಬೇಕಾಗಿದ್ದ ವಿಚಾರ. ಸ್ವಂತ ಮೋಕ್ಷ ಸಾಧನೆಯನ್ನು ಮಾಡುತ್ತಲೂ ಅಥವಾ ಮಾಡದೆಯೂ ಸಮಾಜಕ್ಕಾಗಿ ಬದುಕಬೇಕು ಮತ್ತು ಸಮಾಜದ ಒಳಿತಿಗೇ ಹೆಚ್ಚು ಆದ್ಯತೆ ನೀಡಬೇಕು ಎನ್ನುವ ಸಂಕಲ್ಪ ಮಾಡುತ್ತಾರೆ. ಸ್ವಂತ ಸಾಧನೆಗಿಂತ ಹಿಂದು ಸಮಾಜದ ಪುನರುತ್ಥಾನವೇ ಮುಖ್ಯವೆಂಬ ನಿರ್ಧಾರಕ್ಕೆ ಬರುತ್ತಾರೆ. ಇದು ವಿವೇಕಾನಂದರ ಎರಡನೇ ದಿಗ್ವಿಜಯದ ಸಂಕಲ್ಪ!

 ಈ ಎರಡೂ ಕ್ಷಣಗಳು ವಿವೇಕಾನಂದರ ಜೀವನದ ಕವಲು ದಾರಿಯ ಕ್ಷಣಗಳು. ಸಮಾಧಿ ಸ್ಥಿತಿಯಲ್ಲಿ ಕುಳಿತ ವಿವೇಕಾನಂದರು ಎದುರಿರುವ ಎರಡು ದಾರಿಗಳಲ್ಲಿ ಸೂಕ್ತವಾದದ್ದನ್ನು ಆರಿಸಿಕೊಂಡರು. ವಿವೇಕಾನಂದರಂಥವರಿಗೆ ಅದು ಸಾಧ್ಯ. ಆದರೆ ನಮ್ಮಂತಹ ಸಾಮಾನ್ಯರು ಕವಲು ದಾರಿಯಲ್ಲಿ ನಿಂತಾಗ ವಿವೇಕಾನಂದರಂಥವರಿಂದ ಪ್ರೇರಣೆ ಪಡೆದು ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕು. ಅವರ ಜೀವನದ ಆ ಪುಣ್ಯ ಕ್ಷಣ ನಮ್ಮ ಜೀವನದಲ್ಲೂ ಪ್ರೇರಣೆ ನೀಡಲಿ ಎಂಬುವುದಕ್ಕಾಗಿ ರಾಕ್ ಡೇ ಹಾಗೂ ಹಲವು ಸಂದರ್ಭಗಳನ್ನು ಸ್ಮರಿಸಿಕೊಳ್ಳುತ್ತೇವೆ.

 ಇವತ್ತಿನ ಕಾಲಖಂಡದಲ್ಲಿ ನಮ್ಮೆಲ್ಲರ ಜೀವನದಲ್ಲೂ ಸಮಾಜಕ್ಕಾಗಿ ಬದುಕುವ ಮತ್ತು ವೈಯಕ್ತಿಕ ಸಮೃದ್ಧಿಗಾಗಿ ಬದುಕುವ ನಿರ್ಣಯವನ್ನು ತಕ್ಕಡಿಯಲ್ಲಿ ತೂಗಿ ತೆಗೆದುಕೊಳ್ಳಬೇಕಾದ ಸಂದರ್ಭಗಳು ಬರುತ್ತವೆ. ಅದರರ್ಥ ಎಲ್ಲರೂ ಸನ್ಯಾಸಿಗಳಾಗಬೇಕು ಅಥವಾ ಮನೆಮಠ ಬಿಟ್ಟು ವಿವೇಕಾನಂದರ ಪರಂಪರೆಯಲ್ಲಿ ಸಾಗಬೇಕೆಂದಲ್ಲ. ಆದರೆ ನಮ್ಮೆದುರಿರುವ ಆಯ್ಕೆಗಳನ್ನು ತಕ್ಕಡಿಯಲ್ಲಿಟ್ಟು ತೂಗಿದಾಗ ಎರಡೂ ಸಮಾನವಾಗಿ ತೂಗಲು ಸಾಧ್ಯವೇ? ಇಲ್ಲ. ಹಾಗಾಗಿ ಅಂತಹ ಸಂದರ್ಭಗಳಲ್ಲಿ ವಿವೇಕಾನಂದರ ನಿರ್ಣಯ ನಮಗೆ ಪ್ರೇರಣೆ ನೀಡುತ್ತದೆ.

 ಇಂತಹ ನಿರ್ಧಾರಗಳನ್ನು ತೆಗೆದುಕೊಂಡವರೇ ಸಮಾಜದ ಎದುರು ಆದರ್ಶವಾಗಿ ನಿಲ್ಲುತ್ತಾರೆ. ಒಮ್ಮೆ ನಾನು ಮಡಿಕೇರಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ನಿಲ್ದಾಣದ ಕಟ್ಟೆಯ ಮೇಲೆ ಒಂದು ಕಾಗದ ನೋಡಿದೆ. ಅದರಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಒಂದು ಕವನ ಬರೆದಿದ್ದ:

ಅಂತಹದ್ದೇನು ಸಿಕ್ಕಿತು ಅವನಿಗೆ
ಬಿಜ್ಜಳನ ಆಸ್ಥಾನದಲ್ಲಿ ಸಿಕ್ಕದ್ದು,
ಕಲ್ಯಾಣದ ಖಜಾನೆಯಲ್ಲಿ ಸಿಕ್ಕದ್ದು,
ನೀಳಾದೇವಿಯ ಕಣ್ಣಲ್ಲಿ ಸಿಕ್ಕದ್ದು,
ಅಂತಹದ್ದೇನು ಸಿಕ್ಕಿತು ಬಸವಣ್ಣನಿಗೆ
ಹಿಡಿಯಲ್ಲಿಡುವ ಆ ಇಷ್ಟಲಿಂಗದ ಒಳಗೆ!
ಭರತನನ್ನು ಸೋಲಿಸಿದಾಗ ಸಿಕ್ಕದ್ದು,
ರಾಜ್ಯವನ್ನು ಗೆದ್ದಾಗ ಸಿಕ್ಕದ್ದು,
ಚಕ್ರವರ್ತಿಯಾದಾಗ ಸಿಕ್ಕದ್ದು,
ಅಂತಹದ್ದೇನು ಸಿಕ್ಕಿತು ಬಾಹುಬಲಿಗೆ
ಬೆಳಗೊಳದಲ್ಲಿ ಬೆತ್ತಲೆಯಾಗಿ ನಿಂತ ಆ ಘಳಿಗೆ!
ಗೌತಮಿಯ ಮಡಿಲಲ್ಲಿ ಸಿಕ್ಕದ್ದು,
ಯಶೋಧರೆಯ ಕಣ್ಣಲ್ಲಿ ಸಿಕ್ಕದ್ದು,
ರಾಹುಲನ ನಗೆಯಲ್ಲಿ ಸಿಕ್ಕದ್ದು,
ಅಂತಹದ್ದೇನು ಸಿಕ್ಕಿತು ಬುದ್ಧನಿಗೆ
ಆ ಒಣ ಬೋಧಿವೃಕ್ಷದ ಕೆಳಗೆ!

 ಸಾಮಾನ್ಯ ಜನರು ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದರಂತೆ ಮಹಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೇ ಇದ್ದರೂ, ದೈನಂದಿನ ಕವಲುದಾರಿಗಳಿಗೆ ಮಹಾಪುರುಷರ ಜೀವನ ಪ್ರೇರಣೆಯಾಗಬಲ್ಲದು. ಹಾಗಾಗಿ ಅಂತಹ ಕ್ಷಣಗಳನ್ನು ಮತ್ತೆ-ಮತ್ತೆ ನೆನೆಯಬೇಕು. ಆಗ ಸಮಾಜ ಮತ್ತು ಸಂಸಾರದಲ್ಲಿ ಯಾವುದಕ್ಕೆ ಎಷ್ಟು ಸಮಯ ಕೊಡಬೇಕು ಎಂಬ ಅರಿವೂ ಮೂಡುತ್ತದೆ.

 ಡಿಸೆಂಬರ್ 24ರಂದು ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ತೆಗೆದುಕೊಂಡ ನಿರ್ಧಾರದ ರೀತಿ ಇನ್ನೊಂದು ಘಟನೆಗೂ ಕಾರಣವಾಗಿತ್ತು. ಪರಮಹಂಸರ ಈ ಲೋಕದ ಬಿಡುಗಡೆಯ ದಿನಗಳ ನಂತರ ವಿವೇಕಾನಂದರು ಮತ್ತು ಅವರ ಜೊತೆಗಾರರೂ ಹಳೆಯ ಮನೆಯಲ್ಲಿ ಇದ್ದು ಸನ್ಯಾಸದ ಕಷ್ಟದ ಜೀವನವನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವರೊಂದಿಗಿದ್ದ ಬಾಬುರಾಯ್ ಎಂಬ ಸನ್ಯಾಸಿಯ ಪೂರ್ವಾಶ್ರಮದ ತಾಯಿ ಊರಿಗೆ ಕರೆಯುತ್ತಾರೆ. ಅಲ್ಲಿ ಕೆಲವು ದಿನ ಗುರುಬಂಧುಗಳೆಲ್ಲ ಒಟ್ಟಿಗೆ ಇರುತ್ತಾರೆ. ಅದು ಡಿಸೆಂಬರ್ 24ರ ರಾತ್ರಿ! ಆ ದಿನದ ಮಹತ್ವ ಅಲ್ಲಿರುವವರಲ್ಲಿ ಯಾರಿಗೂ ಆ ವೇಳೆಗೆ ಮೂಡಿರುವುದಿಲ್ಲ. ಕಣ್ಣ ಮುಂದೆ ಉರಿಯುತ್ತಿದ್ದ ಅಗ್ನಿಯ ಜ್ವಾಲೆ. ಆ ಅಗ್ನಿಯ ಮುಂದೆ ಕುಳಿತ ಎಲ್ಲ ಸನ್ಯಾಸಿಗಳೂ ಸಹಜವಾಗಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಅವರಲ್ಲೊಬ್ಬರಾಗಿದ್ದ ಸ್ವಾಮಿ ನಿಖಿಲಾನಂದರು ಹೇಳುವಂತೆ ನಾವುಗಳು ಈಗ ತಲುಪಿರುವ ಸನ್ಯಸ್ಥ ಜೀವನ ಹಿಂದೆ ತಿರುಗಿ ಬರದಿರುವ ಜೀವನ ಎಂದು ನಿಶ್ಚಯಿಸಿದೆವು!

 ಡಿಸೆಂಬರ್ 24 ಕೇವಲ ವಿವೇಕಾನಂದರು ಮಾತ್ರ ನಿರ್ಧಾರ ತೆಗೆದುಕೊಂಡ ದಿನವಲ್ಲ; ರಾಮಕೃಷ್ಣ ಪರಮಹಂಸರ ಎಲ್ಲ ಶಿಷ್ಯರೂ ಸಮಾಜಕ್ಕಾಗಿ ಸಂಸಾರವನ್ನು ತ್ಯಜಿಸಿದ ದಿನ!

 ಎಲ್ಲರೂ ಸನ್ಯಾಸಿಗಳಾಗಲು ಸಾಧ್ಯವಿಲ್ಲ; ಆದರೆ ಸನ್ಯಸ್ಥ ಮನಃಸ್ಥಿತಿಯನ್ನು ಪಡೆದುಕೊಳ್ಳಬಹುದು. ಸನ್ಯಾಸ ಮನೋಭಾವ ವಿವೇಕವನ್ನು ಜಾಗೃತಗೊಳಿಸುತ್ತದೆ. ಸಮಾಜದ ಒಳಿತಿಗೆ ಬದುಕುವ ಜಾಗೃತಿ ನಮ್ಮಲ್ಲಾದರೆ ವಿವೇಕಾನಂದರಿಗೆ ನೀಡಿದ ಸನ್ಯಸ್ಥದ ಪ್ರೇರಣೆಯನ್ನು ಅದು ನಮಗೂ ನೀಡಬಲ್ಲದು. ಸಮಾಜಕ್ಕೆ ನಾವೇನು ನೀಡಬಹುದು? ಅನೇಕರು ಹಣ, ಪ್ರತಿಭೆ, ಬುದ್ಧಿಶಕ್ತಿ ನೀಡಬಹುದು. ಇವೆಲ್ಲವನ್ನೂ ನೀಡಲು ಸಮಯ ನೀಡಬೇಕು. ಈ ದೇಶದ ಹಲವಾರು ಜನರಿಗೆ ಸಮಾಜದ ಬಗ್ಗೆ, ದೇಶದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಉತ್ಕಟ ಭಾವನೆಯೇನೋ ಇದೆ. ಆದರೆ ಅವರಲ್ಲಿ ಕೆಲವರು ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ವಿಷಯದ ಪ್ರಸಾರ ಮಾಡುವುದು ಸಮಾಜದ ಕೆಲಸ ಎಂದುಕೊಂಡಿದ್ದಾರೆ. ನಿಜ, ಒಳ್ಳೆ ವಿಚಾರದ ಪ್ರಚಾರ ಒಂದು ಕೆಲಸವೇ. ಆದರೆ ಅದಕ್ಕಿಂತ ಒಂದು ಹೆಜ್ಜೆ ಮುಂದಿಡುವ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ನಗರಗಳ ಸೇವಾವಸತಿಗಳಲ್ಲಿ ಪ್ರತ್ಯಕ್ಷವಾಗಿ ಕೆಲಸ ಮಾಡಬೇಕು. ಸಮಾಜದ ನಡುವೆ ಶಾರೀರಿಕವಾಗಿ ಉಪಸ್ಥಿತರಿದ್ದು ಕೆಲಸ ಮಾಡುವ ಪ್ರೇರಣೆಯನ್ನು ಡಿ.24 ನೀಡಬೇಕು. ನಮ್ಮ ಚಿಂತನೆ ಮತ್ತು ಕೆಲಸಗಳು ಶಾರೀರಿಕವಾಗಿ ಎಲ್ಲಿ ಹೋಗಿ ಮುಟ್ಟಬೇಕೋ ಅಲ್ಲಿಗೆ ಮುಟ್ಟದೆ ಟ್ವಿಟ್ಟರ್ ಮತ್ತು ಫೇಸ್‌ಬುಕ್ಕಿಗೆ ಸೀಮಿತವಾದರೆ ಏನೂ ಪ್ರಯೋಜನವಿಲ್ಲ! ಒಂದು ರೂಪಾಯಿ ನಾಣ್ಯದ ಬದಲು ಒಂದು ರೂಪಾಯಿ ನೋಟನ್ನು ಕಾಯಿನ್ ಬಾಕ್ಸ್‌ಗೆ ಹಾಕಿದರೆ ಫೋನ್ ಮಾಡಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಶಾರೀರಿಕ ಉಪಸ್ಥಿತಿಯಿಲ್ಲದಿದ್ದರೆ ಹೆಚ್ಚಿನ ಉಪಯೋಗವಾಗಲಾರದು. ಒಂದು ರೂಪಾಯಿ ನಾಣ್ಯಕ್ಕೂ ಒಂದು ರೂಪಾಯಿ ನೋಟಿಗೂ ನೂರು ಪೈಸೆ ಮೌಲ್ಯವಾದರೂ, ನಾಣ್ಯದ ಭಾರ ಬಿದ್ದಾಗ ಫೋನ್ ಬಾಕ್ಸ್ ಕೆಲಸ ಮಾಡುತ್ತದೆ. ಅದೇ ರೀತಿ ಶಾರೀರಿಕ ಉಪಸ್ಥಿತಿಯ ಭಾರ ಬಿದ್ದಾಗ ಮಾತ್ರ ಸಮಾಜ ಸಂಘಟಿತವೂ ಕ್ರಿಯಾಶೀಲವೂ ಆಗಲು ಸಾಧ್ಯ. ಮನೆಬಿಟ್ಟು ರಸ್ತೆಗೆ ಬರುವವರೆಗೆ, ಸಮಸ್ಯೆ ಇರುವಲ್ಲಿಗೆ ದೈಹಿಕ ಉಪಸ್ಥಿತಿ ನೀಡದವರೆಗೆ ನಮ್ಮಲ್ಲಿರುವ ಎಲ್ಲ ಭಾವನೆಗಳೂ ನಿರುಪಯೋಗಿ!

 ವಿವೇಕಾನಂದರು ಧ್ಯಾನ ಮಾಡಿದ್ದಕ್ಕಿಂತ ಹೆಚ್ಚಿನ ಮಹತ್ವ ಅವರು ಕೆಲಸ ಮಾಡಲು ಹೊರಟ ರೀತಿಗಿದೆ, ಶಾರೀರಿಕವಾಗಿ ದಿಗ್ವಿಜಯ ಮಾಡಿದ್ದಕ್ಕಿದೆ. ಸ್ವಾಮಿ ವಿವೇಕಾನಂದರ ಪ್ರೇರಣೆ ಮತ್ತು ರಾಕ್ ಡೇ ಸ್ಮರಣೆ ಎಲ್ಲಿ ನಮ್ಮ ಅಗತ್ಯವಿದೆಯೋ ಅಲ್ಲಿ ತಲುಪುವಲ್ಲಿದೆ. ಧ್ಯಾನ ಮಾಡುವುದು ಒಂದು ಸ್ಥಿತಿಯಾದರೆ, ಅದಕ್ಕಿಂತ ಮಹತ್ವದ್ದು ಅಲ್ಲಿಂದ ಎದ್ದು ಹೊರಡುವುದು. ಕೃಷ್ಣ ಹೊರಟಂತೆ, ಬುದ್ದ ಹೊರಟಂತೆ, ರಾಮ ಹೊರಟಂತೆ, ವಿವೇಕಾನಂದ ಹೊರಟಂತೆ. ಕ್ರಿಯಾಶೀಲತೆಗೆ ಹೆಚ್ಚು ಮಹತ್ವವಿದೆ, ವಿಜಗೀಶು ಪ್ರ್ರವೃತ್ತಿಗೆ ಹೆಚ್ಚು ಮಹತ್ವವಿದೆ, ದಿಗ್ವಿಜಯಕ್ಕೆ ಹೆಚ್ಚು ಮಹತ್ವವಿದೆ. ಮತ್ತೆ ಮೊಳಗಲಿ ಪಾಂಚಜನ್ಯ ಎನ್ನುವುದರಲ್ಲಿ ಈ ಅರ್ಥವಿದೆ.

 

   

Leave a Reply