ಕಂಬಿಯ ಹಿಂದಿನ ಕೂಗು ಕೇಳಿಸಿಕೊಂಡವರು…

ಮಹಿಳೆ ; ಲೇಖನಗಳು - 0 Comment
Issue Date : 4.7.2016


– ಶಾಂತಲಾ

ಬಾಲಾಪರಾಧಿಗಳ ಬಗ್ಗೆ ಈ ಸಮಾಜದಲ್ಲಿ ಒಂದು ತಾತ್ಸಾರ ಭಾವವಿದೆ. ಚಿಕ್ಕ ವಯಸ್ಸಿನಲ್ಲೇ ಮಾಡಬಾರದ ಕೆಲಸ ಮಾಡಿ ಜೈಲು ಸೇರಿದ ಅವರನ್ನು ಎಂದಿಗೂ ಸಮಾಜದ ಮುಖ್ಯ ವಾಹಿನಿಗೆ ಬರಮಾಡಿಕೊಳ್ಳಲು ಸಮಾಜಕ್ಕೆ ಇಷ್ಟವಿಲ್ಲ. ಸಂಸ್ಕಾರದ ಕೊರತೆ, ಬಡತನ, ಬೆಳೆದ ಪರಿಸರ ಈ ಎಲ್ಲವೂ ಮಕ್ಕಳನ್ನು ಅಪರಾಧ ಪ್ರಪಂಚಕ್ಕೆ ಆಹ್ವಾನಿಸುತ್ತದೆ. ತಮ್ಮ ವಯಸ್ಸನ್ನೇ ಮರೆತು ಇಡೀ ಸಮಾಜವೂ ತಲೆ ತಗ್ಗಿಸುವಂಥ ಕೆಲಸವನ್ನು ಮಾಡಿದ ಬಾಲಕರು ಇಲ್ಲವೆಂದಿಲ್ಲ. ದೆಹಲಿ ಅತ್ಯಾಚಾರ ಪ್ರಕರಣವನ್ನು ನೆನಪಿಸಿಕೊಂಡರೆ ಬಾಲಾಪರಾಧಿಗಳಿಗೂ ಕಠಿಣ ಶಿಕ್ಷೆಯಾಗಬೇಕೆಂದು ನಮ್ಮ ಮನಸ್ಸು ಅಲವತ್ತುಕೊಳ್ಳುತ್ತದೆ. ಆದರೆ ತಪ್ಪನ್ನೇ ಮಾಡದೆ ಕಂಬಿಯ ಹಿಂದೆ ಪ್ರತಿದಿನ ನರಕಯಾತನೆ ಅನುಭವಿಸುತ್ತಿರುವ ಮಕ್ಕಳ ಬಗ್ಗೆ ನಮಗೆ ಅರಿವಿಲ್ಲ. ಹಾಗೆಯೇ ಯಾವುದೋ ಅನಿವಾರ್ಯ ಕಾರಣಕ್ಕೋ, ಗೊತ್ತಿದ್ದೋ- ಗೊತ್ತಿಲ್ಲದೆಯೋ ತಪ್ಪು ಮಾಡಿದ ಹಲವು ಮಕ್ಕಳು ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಿರುವವರಿದ್ದಾರೆ. ಆದರೆ ಅಂಥವರನ್ನೆಲ್ಲ ನಮ್ಮ ಸಮಾಜ ತನ್ನ ತೋಳಲ್ಲಿ ಅಕ್ಕರೆಯಿಂದ ಸ್ವೀಕರಿಸುತ್ತದೆಯೇ? ಜೈಲಿನಲ್ಲಿದ್ದವರೆಂದರೆ ಅಪರಾಧಿಗಳು ಎಂಬ ಭಾವದಲ್ಲಾಗಲಿ, ಅವರು ಮಾಡಿದ ತಪ್ಪನ್ನು ಕ್ಷಮಿಸಿ ಅವರನ್ನು ಬದಲಿಸುವ ಮನಃಸ್ಥಿತಿಯಾಗಲಿ ಎಷ್ಟು ಜನರಲ್ಲಿ ಮೂಡುತ್ತದೆ? ಚಿಕ್ಕ ವಯಸ್ಸು, ಬದಲಾಗುವುದಕ್ಕೆ ಸಮಯವಿದೆ ಎಂದು ನಾವೆಷ್ಟು ಜನ ಯೋಚಿಸುತ್ತೇವೆ.
ಮತ್ತಷ್ಟು ಜನರಿದ್ದಾರೆ, ಅವರಿಗೆ ಜೈಲಿನಲ್ಲಿರುವ ಮುಗ್ಧ ಮಕ್ಕಳ ಬಗ್ಗೆ ಮರುಕವಿದೆ. ಆದರೆ ಅವರಿಗೆ ಸಹಾಯ ಮಾಡುವುದು ಹೇಗೆ ಎಂದು ಗೊತ್ತಿಲ್ಲ. ಮನಸ್ಸು ಮಾಡಿದರೆ ದಾರಿ ಕಾಣುತ್ತದಾದರೂ ಅಂಥ ಮಕ್ಕಳೊಡನೆ ಒಡನಾಡಿದರೆ ಈ ಸಮಾಜ ತನ್ನನ್ನು ಹೇಗೆ ನೋಡುತ್ತದೋ ಎಂಬ ಭಯ ಬೇರೆ. ಆದರೆ ಪುಣೆಯ ಕಾನೂನು ವಿದ್ಯಾರ್ಥಿನಿ ನಿತಿಕಾ ನಾಗರ್ ಮಾತ್ರ ಎಲ್ಲರಂತೆ ಸಮಾಜಕ್ಕೆ ಹೆದರಿ ಕೂರಲಿಲ್ಲ. ಈ ಮಕ್ಕಳಲ್ಲಿ ತಪ್ಪು ಮಾಡಿದವರಿರಬಹುದು, ಮಾಡದೇ ಇರುವವರಿರಬಹುದು. ಅವರಿಗೆ ಇಂದೇ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರನ್ನು ಬದಲಿಸಲು ಸಾಧ್ಯವಿದೆ. ಮಾತ್ರವಲ್ಲ, ಮುಂದೆ ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ನೀಡುವುದಕ್ಕೆ ಸಾಧ್ಯವಿದೆ ಎಂಬುದನ್ನು ಅರಿತ ಆಕೆ ತಕ್ಷಣವೇ ಕಾರ್ಯೋನ್ಮುಖಳಾದಳು.
ಕಾಲೇಜಿನಲ್ಲಿ ಆಯ್ದುಕೊಂಡ ಪ್ರಾಜೆಕ್ಟ್ ವರ್ಕಿನ ವಿಷಯವಾಗಿದ್ದ ಬಾಲಾಪರಾಧಿಗಳ ಮನಃಸ್ಥಿತಿಯನ್ನು ಅರಿಯುವ ಕೆಲಸ ಕೇವಲ ಪಠ್ಯಕ್ಕಷ್ಟೇ ಸೀಮಿತವಾಗದೆ ಆಕೆಯ ಮನಸ್ಸನ್ನು ಕ್ರಮೇಣ ಆವರಿಸಿತು. ಪ್ರಾಜೆಕ್ಟ್ ವರ್ಕ್ ಮುಗಿಸಿ ಸುಮ್ಮನಾಗುವುದಕ್ಕೆ ಆಕೆಗೆ ಮನಸ್ಸಾಗಲಿಲ್ಲ. ತನ್ನದೊಂದು ತಂಡ ಕಟ್ಟಿಕೊಂಡು ಅದಕ್ಕೆ ಪ್ರೇಷ್ಠಿ ಎಂದು ಹೆಸರಿಟ್ಟಳು. ಆ ತಂಡ ಬಾಲಾಪರಾಧಿಗಳ ಮನಸ್ಸನ್ನು ಅರಿತು ಅವರಿಗೆ ತಮ್ಮ ಕೈಲಾದ ಸಹಾಯ, ಶಿಕ್ಷಣ ನೀಡುವುದಕ್ಕೆ ತೊಡಗಿತು. ಅವರೊಂದಿಗೆ ಸಂವಹನ ನಡೆಸುತ್ತ, ಉಳಿದ ಮಕ್ಕಳಿಗಿಂತ ಅವರು ಎಷ್ಟು ಭಿನ್ನ ಮತ್ತು ಏಕೆ ಎಂಬುದು ಅರ್ಥವಾಯಿತು. ಅವರನ್ನು ಬದಲಿಸುವುದಕ್ಕೆ ಸಾಧ್ಯವಿದೆ ಅನ್ನಿಸುವುದಕ್ಕೆ ಶುರುವಾಯಿತು.
ಎಷ್ಟೋ ವಿಷಯಗಳಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬ ಬಗ್ಗೆ ಅವರಲ್ಲಿ ಮಾಹಿತಿ ಇರುವುದಿಲ್ಲ. ಅವರಿಗೆ ಸರಿ-ತಪ್ಪನ್ನು ವಿವೇಚಿಸುವ ಗುಣ ಬೆಳೆಸಬೇಕು. ಅದು ಉತ್ತಮ ಸಂಸ್ಕಾರದಿಂದ, ಶಿಕ್ಷಣದಿಂದ ಸಿಗುವುದಕ್ಕೆ ಸಾಧ್ಯ ಎಂಬುದು ನಿತಿಕಾ ಅಭಿಪ್ರಾಯ. ಯರವಾಡದ ಜೈಲಿನಲ್ಲಿದ್ದ 12 ಜನ ಬಾಲಾಪರಾಧಿಗಳನ್ನು ಆರಿಸಿಕೊಂಡು ಅವರಿಗೆ ಸಂಸ್ಕಾರ ನೀಡುವುದಕ್ಕೆ, ಅವರ ಮನಃಸ್ಥಿತಿಯನ್ನರಿಯುವುದಕ್ಕೆ ತೊಡಗಿದ ಈಕೆಯ ಪ್ರೇಷ್ಠಿ ತಂಡ ಇದೀಗ ಒಂದು ಎನ್‌ಜಿಒ ಆಗಿ ಬದಲಾಗಿದೆ. ಮೊದಲು ಹನ್ನೆರಡು ಬಾಲಾಪರಾಧಿಗಳಿದ್ದರೆ ಇಂದು 40 ಜನರ ಹೊಣೆಯನ್ನು ಈ ಎನ್‌ಜಿಒ ಹೊತ್ತಿದೆ.
ವಾರಕ್ಕೆ ಮೂರು ಬಾರಿ ಸಾಮೂಹಿಕ ಆಪ್ತಸಲಹಾ ಶಿಬಿರವಿದ್ದರೆ, ಮಕ್ಕಳ ಅಗತ್ಯಕ್ಕೆ ತಕ್ಕಂತೆ ದಿನವೂ ವೈಯಕ್ತಿಕ ಆಪ್ತಸಲಹೆ ಇರುತ್ತದೆ. ಆ ಮಕ್ಕಳು ಅಪರಾಧ ಮಾಡಿರುವುದಕ್ಕೆ ಕಾರಣ, ಮಗುವಿನ ಕೌಟುಂಬಿಕ ಹಿನ್ನೆಲೆ ಜೊತೆಗೆ ಬೆಳೆದ ಪರಿಸರದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಆ ಮಗುವಿನ ಮನಸ್ಸಿನಲ್ಲಿ ಆವರಿಸಿದ್ದ ಸಮಾಜದ ಬಗೆಗಿನ ಋಣಾತ್ಮಕ ಭಾವವನ್ನು ಮರೆಸಿ ಕ್ರಮೇಣ ಅಲ್ಲಿ ಧನಾತ್ಮಕ ಮನೋಭಾವವನ್ನು ತುಂಬಲಾಗುತ್ತದೆ. ಅದು ಮಾಡಿದ ತಪ್ಪಿನ ಬಗ್ಗೆ ಅದರಲ್ಲಿ ಪಾಪಪ್ರಜ್ಞೆ ಮೂಡಿ ಮತ್ತೆಂದೂ ಅದು ಅಂಥ ತಪ್ಪು ಮಾಡದಂತೆ ಸಜ್ಜುಗೊಳಿಸಲಾಗುತ್ತದೆ.
ಅವರ ವಿದ್ಯಾಭ್ಯಾಸದ ಬಗ್ಗೆಯೂ ಈ ಎನ್‌ಜಿಒ ಚಿಂತಿಸುತ್ತದೆ. ಅವುಗಳಿಗೆ ಔಪಚಾರಿಕ ಶಿಕ್ಷಣವನ್ನು ಕೊಡಿಸುವುದಕ್ಕೂ ಹೋರಾಡುತ್ತದೆ. ಮಾತ್ರವಲ್ಲ, ಮುಖ್ಯವಾಗಿ ಬದಲಾಗಬೇಕಿರುವುದು ಅವರ ಮನಸ್ಸು. ನಿರಂತರ ಸೈಕೋಥೆರಪಿ ಅವರಲ್ಲಿ ಸನ್ನಡತೆಯನ್ನು, ಸಂಸ್ಕಾರನ್ನೂ ಬಿತ್ತುವಲ್ಲಿ ಸಹಾಯಕವಾಗುತ್ತದೆ.
21 ವರ್ಷದ ನಿತಿಕಾ ಆರಂಭಿಸಿದ ಈ ಎನ್‌ಜಿಒಕ್ಕೆ ಇದೀಗ ಹಲವು ಸಮಾನ ಮನಸ್ಕರು ಸೇರಿದ್ದಾರೆ. ಆ ಮಕ್ಕಳ ಅಭಿವೃದ್ಧಿಗಾಗಿ, ಅವರಲ್ಲಿ ಪರಿವರ್ತನೆ ಮೂಡಿಸುವುದಕ್ಕಾಗಿ, ಮುಖ್ಯ ವಾಹಿನಿಗೆ ಅವರನ್ನು ಪರಿಚಯಿಸುವುದಕ್ಕಾಗಿ ಶ್ರಮಿಸುತ್ತಿವೆ. ಇಂಥ ಪುಟ್ಟ ಮಕ್ಕಳನ್ನು ತಾತ್ಸಾರದಲ್ಲಿ ಕಾಣುವವರು ಒಂದೇ ಒಂದು ಕ್ಷಣ ಅವರನ್ನು ಬದಲಿಸುವಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಯೋಚಿಸಿದರೆ ನಮ್ಮ ದೇಶದಲ್ಲಿ ಖಂಡಿತವಾಗಿಯೂ ಅಪರಾಧಿಗಳ ಸಂಖ್ಯೆ ಕಡಿಮೆಯಾಗುತ್ತದೆಯಲ್ಲವೇ?

   

Leave a Reply