ಕಗ್ಗದ ಪ್ರತಿಯೊಂದಕ್ಷರವೂ ಜೀವನದ ಸಾರ

ಸಂದರ್ಶನಗಳು - 0 Comment
Issue Date :

-ವಿನಾಯಕ ಅಣ್ಣಯ್ಯ

ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ನಂತರ ವಿಶ್ವೇಶ್ವರಪುರ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕ-ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಎಲ್.ಎಸ್. ಲಕ್ಷ್ಮೀನಾರಾಯಣ ಭಟ್ಟರದು ಬಹು ಮುಖ್ಯ ಪ್ರತಿಭೆ. ಯುವ ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯ ವಿಷಯವಷ್ಟೇ ಅಲ್ಲದೇ ಒಳ್ಳೆಯ ಬದುಕು ರೂಪಿಸುವಲ್ಲಿ ಪ್ರಯತ್ನಿಸಿದರು. ಡಿ.ವಿ.ಜಿ.ಯವರ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲೂ-ಸಮಾಜದಲ್ಲೂ ಹರಡಲು ಇಂದಿಗೂ ಶ್ರಮಿಸುತ್ತಿದ್ದಾರೆ. ವಾಚನುವ್ಯಾಖ್ಯಾನ ಎರಡರಲ್ಲೂ ಪರಿಣಿತಿ ಸಾಧಿಸಿರುವ ಇವರು 2 ಕೃತಿಗಳನ್ನು ರಚಿಸಿದ ಸಾಹಿತಿಯಾಗಿದ್ದಾರೆ. ಇದಕ್ಕಾಗಿ ಡಿವಿಜಿ ಸಾಹಿತ್ಯ ಪ್ರಶಸ್ತಿ ಸಂದಿದೆ. ಸಾವಿರಾರು ಭಾಷಣ, ಸಿ.ಡಿ.ಮೂಲಕ ಲಕ್ಷಾಂತರ ಜನರಿಗೆ ನಾಡು-ನುಡಿಯ ಮಹತ್ವ ಸಾರುತ್ತಿರುವ ‘ಕಗ್ಗದ ಭಟ್ಟರು’ ವಿದ್ಯಾಭಾರತಿ, ಗುರುಕುಲ, ಜನಸೇವಾ ಇತ್ಯಾದಿ ಸಂಸ್ಥೆಗಳ ಮೂಲಕ ಶಿಕ್ಷಕ ಪ್ರವೃತ್ತಿಯನ್ನೂ ಮುಂದುವರೆಸಿದ್ದಾರೆ.

ನಿಮ್ಮನ್ನು ‘ಕಗ್ಗದ ಭಟ್ಟ’ ಎಂದೇ ಜನ ಕರೆಯುತ್ತಾರೆ. ಇದರ ಬಗ್ಗೆ ತಿಳಿಸಿ.

ಹೌದು, ಏಕೆಂದರೆ ಇದುವರಗೆ 2000 ಕ್ಕೂ ಹೆಚ್ಚು ಉಪನ್ಯಾಸವನ್ನು ಡಿ.ವಿ.ಜಿ. ಯವರ ಕಗ್ಗದ ಮೇಲೆ ಕೊಟ್ಟಿದ್ದೇನೆ. ನನಗೆ ಡಿ.ವಿ.ಜಿ. ಯವರ ಕೃತಿಗಳೆ ಹೆಚ್ಚು ಇಷ್ಟ. ಅವರ ಒಂದೊಂದು ಕಗ್ಗದಲ್ಲೂ ಸಾಮಾಜಿಕ ಮೌಲ್ಯಗಳು ಎದ್ದು ಕಾಣುತ್ತವೆ. ಕಳೆದ ನಾಲ್ಕು ದಶಕಗಳಿಂದ ‘ಮಂಕುತಿಮ್ಮನ ಕಗ್ಗ’ದ ಬಗ್ಗೆ ಅಧ್ಯಯನಶೀಲನಾಗಿದ್ದೇನೆ.

ಅವರೆಷ್ಟು ಧನವಂತರು ಇವರೆಷ್ಟು ಯಶವಂತರು
ಅವರೆಷ್ಟು ಬಲವಂತರೆನುವ ಕರುಬಿನಲಿ
ಬಳಿಕ ನಿನಗಿರುವುದ ನೆನೆಯದಿರುವುದು
ಶಿವನಿಗೆ ಕೃತಜ್ಞತಯೆ ಮಂಕುತಿಮ್ಮ

ಕಗ್ಗದಲ್ಲಿರುವ ಮುಕ್ತತೆಗಳ ವಾಚನ ಮತ್ತು ವ್ಯಾಖ್ಯಾನ ಉಪನ್ಯಾಸಗಳನ್ನು ಜನ ಇಷ್ಟಪಡುತ್ತಾರೆ. ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗದ ಮೇಲೆ ನೂರಾರು ಪುಸ್ತಕಗಳು, ಸಾವಿರಾರು ವಿಚಾರ ಸಂಕಿರಣಗಳು ಇವತ್ತಿಗೂ ನಡೆಯುತ್ತಿರುವುದು ನಮಗೆ ಕೃತಿಯ ಮಹತ್ವವನ್ನು ತಿಳಿಸುತ್ತದೆ.

ರಾಷ್ಟ್ರೀಯ ಸೇವಾ ಯೋಜನೆ (NSS) ಹಾಗೂ ವಯಸ್ಕರ ಶಿಕ್ಷಣ ಕಾರ್ಯಕ್ರಮದ (NAEP) ಯ ಸಂಯೋಜಕರಾಗಿ ನಿಮ್ಮ ಕೆಲಸ ?
10 ವರ್ಷಗಳ ಕಾಲ ಘೆಖಖ ನಲ್ಲಿ ಸೇವೆ ಸಲ್ಲಿಸಿದ್ದೇನೆ. ಇಡೀ ಕರ್ನಾಟಕದ ಮೂಲೆ ಮೂಲೆಗಳಿಗೆ ತೆರಳಿ ಅಲ್ಲಿ ಘೆಖಖನ ಇಞಗಳನ್ನು ಮಾಡಿದ್ದೇವೆ. ನಮ್ಮ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವೆ ಬಗ್ಗೆ ಜಾಗೃತಿ ಮೂಡಿಸುವುದೆ ಆಗಿತ್ತು. ಶಿಕ್ಷಣದ ಜೊತೆಯಲ್ಲಿ ದೇಶದ, ಬಡವರ ಸೇವೆಯನ್ನು ಮೈಗೂಡಿಸಿಕೊಂಡರೆ ಅವರು ಒಳ್ಳೆಯ ಪ್ರಜೆಯಾಗಲು ಸಾಧ್ಯ. ನಾನು ಘೆಖಖ ನ ಶಿಬಿರಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ಅವರಿಗೆಲ್ಲ 6-7 ಮಂಕುತಿಮ್ಮನ ಕಗ್ಗವನ್ನು ಕಂಠಪಾಠ ಮಾಡಿಸಿದ್ದೆ. ಇದರಿಂದ ಅವರೂ ಇಂದಿಗೂ ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ.

ನಿಮ್ಮ ಅಚ್ಚುಮೆಚ್ಚಿನ ಭೌತಶಾಸ್ತ್ರದ ಉಪನ್ಯಾಸಕರಾಗಿ ನಿಮ್ಮ ಜೀವನ ?
1966 ರಿಂದ 2002 ರ ವರೆಗೆ ಬೆಂಗಳೂರಿನ ವಿಶ್ವೇಶ್ವರಪುರಂನ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದ ಉಪನ್ಯಾಸಕನಾಗಿ, ನಂತರ ಪ್ರಾಧ್ಯಾಪಕನಾಗಿ, 2002 ರಲ್ಲಿ ಅದೇ ಕಾಲೇಜಿನ ಪ್ರಾಚಾರ್ಯನಾಗಿ ಸೇವೆಯನ್ನು ಸಲ್ಲಿಸಿದ್ದೇನೆ.
ನಾನು ಬೆಳಿಗ್ಗೆ ಕಾಲೇಜಿಗೆ ಹೋದರೆ ರಾತ್ರಿ 7 ಅಥವಾ 8 ಕ್ಕೆ ಮನೆಗೆ ಬರುತ್ತಿದ್ದೆ. ಕಾಲೇಜಿನ ವಿದ್ಯಾರ್ಥಿಗಳು ನನ್ನನ್ನು ಹಚ್ಚಿಕೊಂಡಿದ್ದರು. ಅದೊಂದು ರೀತಿ ಯಜ್ಞವೇ ಸರಿ, ಅದು ಜ್ಞಾನ ಯಜ್ಞ.

ಕನ್ನಡದಲ್ಲಿ ನೀವು ವಿಜ್ಞಾನ ಪ್ರಸಾರ ಮಾಡುತ್ತಿದ್ದೀರ. ಅದರ ಬಗ್ಗೆ ತಿಳಿಸಿ.
ನಾನು ಕಾಲೇಜಿನಲ್ಲಿ ಕೂಡ ಕನ್ನಡದಲ್ಲಿ ಭೌತಶಾಸ್ತ್ರವನ್ನು ಹೇಳಿಕೊಡುತ್ತಿದ್ದೆ. ಉಪನ್ಯಾಸ, ಲೇಖನ ಮತ್ತು ರಸಪ್ರಶ್ನೆಗಳ ಮೂಲಕ ಕನ್ನಡವನ್ನು ಬೆಳೆಸಲು ಪ್ರಯತ್ನಪಡುತ್ತಿದ್ದೆ. ಶಿಕ್ಷಣ ಇಲಾಖೆಯಲ್ಲಿ ಕೂಡ ಯಾವುದಾದರೂ ಪ್ರಶ್ನೆಪತ್ರಿಕೆ ತರ್ಜುಮೆಯಿದ್ದರೆ ಈಗಲೂ ನಾನು ಕೈಲಾದ ಸೇವೆ ಮಾಡುತ್ತಿದ್ದೇನೆ.

ನೀವು ಬರೆದ ತಿಮ್ಮ ಗುರುವಿನ ದರ್ಶನ – ಗುಂಡೋಪನಿಷತ್ ಬಗ್ಗೆ ತಿಳಿಸಿ
ಕೆಲವರು ಗುಂಡೋಪನಿಷತ್ ಎನ್ನುವ ಹೆಸರು ಇಡಲು ಹಿಂದೆ ಸರಿದರು. ಆದರೆ ನಾನು ಬರೆದ ಪುಸ್ತಕಕ್ಕೆ ಆ ಹೆಸರು ಇಟ್ಟೆ. ಆ ಪುಸ್ತಕದಲ್ಲಿ ಕೇವಲ ಕಗ್ಗವಲ್ಲದೆ ಅದಕ್ಕೆ ತಾತ್ಪರ್ಯ ಸಹಿತ ಅರ್ಥವನ್ನೂ ನೀಡಿದ್ದೇನೆ. ಇದನ್ನು ಒಂದು ಸಂಶೋಧನಾ ಗ್ರಂಥದ ರೀತಿ ರಚನೆ ಮಾಡಿದ್ದೇನೆ. ಪುಸ್ತಕ 2 ಬಾರಿ ಪ್ರಕಟಣೆಯನ್ನು ಮುಗಿಸಿ 3ನೇ ಪ್ರಕಟಣೆಗೆ ಸಿದ್ದವಾಗುತ್ತಿದೆ.
ಹಾಗೆಯೇ ‘ಇನ್ನೂ ಘಮಘಮಿಸುವ ವನಸುಮ ಡಿ.ವಿ.ಜಿ.’ ಇದು ಖಆಐ ನ ಪ್ರಕಟಣೆ.

ರಾಮಕೃಷ್ಣ ಮಠದ ಜೊತೆಗಿನ ನಿಮ್ಮ ಒಡನಾಟವಾದುದು ಹೇಗೆ ?
ಮೊದಲು ಪುರುಷೋತ್ತಮಾನಂದಜಿ ಮಹಾರಾಜ್ ಇದ್ದರು. ನಾನು ಅವರ ಪಾದರಕ್ಷ ಪಾಲಕನಾಗಿ 5 ವರ್ಷ ಸತತವಾಗಿ ಹೋಗುತ್ತಿದ್ದೆ. ಸಂಜೆ ಭಜನೆ ಸಮಯದಲ್ಲಿ ನಾನು ಹಾಡುತ್ತಿದ್ದದ್ದನ್ನು ಗಮನಿಸಿದ ಪುರುಷೋತ್ತಮಾನಂದಜಿಯವರು ಮುಂದೆ ಬಂದು ಕುಳಿತುಕೊಳ್ಳಲು ಹೇಳಿದರು ಮತ್ತು ಹಾಡಲು ಪ್ರೆರೇಪಿಸಿದರು. ವಿವೇಕಾನಂದ ಬಾಲಕ ಸಂಘದಲ್ಲಿ ಅನೇಕ ರೀತಿ ಉಪನ್ಯಾಸಗಳನ್ನು ಕೊಟ್ಟೆ. ಹಾಗೆ ಪುರುಷೋತ್ತಮಾನಂದಜಿಯವರ 5 ವರ್ಷ ಅವರ ಯಾವುದೆ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಉದ್ಘಾಟನಾ ಭಾಷಣ ನನ್ನಿಂದ ಮಾಡಿಸುತ್ತಿದ್ದುದ್ದು ನನ್ನ ಭಾಗ್ಯವೇ ಸರಿ.

ಮಂಕುತಿಮ್ಮನ ಕಗ್ಗದಲ್ಲಿರುವ ಜೀವನ ಮೌಲ್ಯಗಳನ್ನು ತಿಳಿಸಿ.
ಮಂಕುತಿಮ್ಮನ ಕಗ್ಗದ ಪ್ರತಿಯೊಂದು ಅಕ್ಷರದಲ್ಲಿ ಜೀವನದ ಸಾರವೇ ಅಡಗಿದೆ. ಅವರ ಯೋಚನೆ ಸಾಮಾಜಿಕ ಚಿಂತನೆಗಳನ್ನು ಸರಿಯಾಗಿಸುವುದೆ ಆಗಿತ್ತು. ಉದಾಹರಣೆ.

ಎಷ್ಟು ನೀನುಂಡರೇಂ ? ಪುಷ್ಟ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ?
ಮುಷ್ಟಿ ಪಿಷ್ಟವು ತಾನೆ ? – ಮಂಕುತಿಮ್ಮ ॥

ನೋಡಿ ಎಷ್ಟು ಸುಂದರವಾಗ ಕಗ್ಗ. ನಾವು ಎಷ್ಟು ತಿಂದರೂ ಮೈಗೆಹತ್ತುವುದೆಷ್ಟು? ಹೊಟ್ಟೆ ತುಂಬಿದ ಮೇಲೆ ಉಳಿದದ್ದು ಕಸ. ಎಷ್ಟು ಗಳಿಸಿದರೇನು, ಕೊನೆಗೆ ನೀನು ಏನು ತೆಗೆದುಕೊಂಡು ಹೋಗುತ್ತೀಯ? ಮುಷ್ಟಿ ಪಿಷ್ಟವು ಮಾತ್ರ ಎಂಬುದು. ಇವತ್ತಿನ ಸ್ಥಿತಿಯನ್ನು ಇದರ ಸಾರವೆ ತಿಳಿಸುವುದು. ಮನುಷ್ಯನು ಜಗತ್ತಿನಲ್ಲಿರುವುದೆಲ್ಲ ನನ್ನದು, ಎಲ್ಲವೂ ನನಗೆ ಬೇಕು ಎನ್ನುತ್ತಾ ಮಾನವೀಯತೆಯನ್ನು ಮರೆತಿದ್ದಾನೆ. ಹೀಗೆ ಪ್ರತಿಯೊಂದು ಕಗ್ಗದಲ್ಲಿ ಡಿ.ವಿ.ಜಿ. ಯವರು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ.

ವಿದ್ಯಾಭಾರತಿಯಲ್ಲಿ ಪ್ರಾಂತ ಉಪಾಧ್ಯಕ್ಷರಾಗಿದ್ದಾಗ ನಿಮ್ಮ ಅನುಭವ ?
ವಿದ್ಯಾಭಾರತಿಯಲ್ಲಿ 5 ರಿಂದ 6 ವರ್ಷ ಜವಾಬ್ದಾರಿ ನಿರ್ವಹಿಸಿದೆ. ಆಗ ‘‘ಶೈಕ್ಷಣಿಕ ಸಹಮಿಲನ’’ ಕಾರ್ಯಕ್ರಮಗಳನ್ನು ಜಿಲ್ಲಾ, ತಾಲ್ಲೂಕು, ಪ್ರಾಂತ ಮಟ್ಟಗಳಲ್ಲಿ ಏರ್ಪಡಿಸುತ್ತಿದ್ದೆವು. ಆ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಎಲ್ಲರೂ ಕೂಡ ಭಾಗವಹಿಸುತ್ತಿದ್ದರು. ಪ್ರಶಿಕ್ಷಣ ಶಿಬಿರಗಳು, ಪ್ರಾಂತಿಯ ವಿಜ್ಞಾನ ಮೇಳ, ಕ್ಷೇತ್ರೀಯ ವಿಜ್ಞಾನ ಮೇಳಗಳಿಗೆ ಮಾರ್ಗದರ್ಶಕನಾಗಿ ಕೆಲಸ ಮಾಡಿದ್ದೇನೆ, ಕಾರಣ ನಾನು ಭೌತಶಾಸ್ತ್ರ ಪ್ರಾಧ್ಯಾಪಕನಾಗಿದ್ದರಿಂದ.
ನಮ್ಮ ಸಂಘದಿಂದ ನಡೆಯುವ ಮೈತ್ರೇಯ, ಪ್ರಬೋಧಿನಿ, ವೇದ ವಿಜ್ಞಾನ ಗುರುಕುಲ ಈ ಮೂರು ಗುರುಕುಲಗಳ ಜೊತೆ ಕೆಲಸ ಮಾಡಿದ್ದೇನೆ. ಗುರೂಜಿ ಸ್ಮರಣಾರ್ಥ ಪದವಿಪೂರ್ವ ಕಾಲೇಜನ್ನು 2006 ರಲ್ಲಿ ಜನಸೇವಾ ವಿದ್ಯಾಕೇಂದ್ರದಿಂದ ಪ್ರಾರಂಭಿಸಲಾಯಿತು. ಅವತ್ತಿನಿಂದ ಇವತ್ತಿನವರೆಗೂ ಅಲ್ಲಿ ಪ್ರಾಧ್ಯಾಪಕನಾಗಿ ವಾರಕ್ಕೆರಡು ಬಾರಿ ಪಾಠ ಮಾಡುತ್ತೇನೆ.

ಯುವ ಮನಸ್ಸುಗಳಿಗೆ ನಿಮ್ಮ ಕಿವಿ ಮಾತು ?
ನಾನು ನೋಡಿರುವ ಹಾಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿರುವುದಕ್ಕಿಂತ ಹೆಚ್ಚು ಯುವಜನತೆ ರಾಮಕೃಷ್ಣ ಮಠ ಇನ್ನಿತರೆ ದೇವಸ್ಥಾನಗಳಲ್ಲಿರುತ್ತಾರೆ. ಇದರ ಅರ್ಥ ನಮ್ಮ ಯುವಜನತೆ ಸರಿಯಾದ ಮಾರ್ಗದಲ್ಲಿದ್ದಾರೆ ಎಂದು. ಯುವಕರು ಆಧ್ಯಾತ್ಮದಲ್ಲಿ ತಲ್ಲೀನರಾಗುವುದು ಒಳ್ಳೆಯದು. ಇದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡು ಬಡವರು, ದೀನ, ದಲಿತರಲ್ಲಿ ಪರಮಾತ್ಮನನ್ನು ಕಾಣಬೇಕು. ಆಗ ಮಾತ್ರ ನಿಜವಾದ ಪರಮಾತ್ಮನ ಸೇವೆಯಾಗುತ್ತದೆ. ಯುವಜನತೆ ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳನ್ನ್ನು ಓದಬೇಕು. ಅದರಲ್ಲೂ ಡಿ.ವಿ.ಜಿ., ಕುವೆಂಪು, ಜಿ.ಪಿ.ರಾಜರತ್ನಂ ರಂಥವರ ಕೃತಿಗಳನ್ನು ಓದಬೇಕು. ಆಗ ಜೀವನ ಜ್ಞಾನ ತಿಳಿಯುತ್ತದೆ.

   

Leave a Reply