ಕನ್ಯಾ ಸಂಸ್ಕಾರ ಏಕೆ ಮತ್ತು ಹೇಗೆ?

ಲೇಖನಗಳು - 0 Comment
Issue Date :

-ಡಾ|| ರಾಮಕೃಷ್ಣಭಟ್ ಕೆ.

ಸನಾತನ ಆರ್ಯ ವೈದಿಕ ಪರಂಪರೆಯಲ್ಲಿ ಸಂಸ್ಕಾರಕರ್ಮಗಳಿಗೆ ಶ್ರೇಷ್ಠವಾದ ಸ್ಥಾನವಿದೆ. ಸಂಸ್ಕಾರ ಎಂದರೆ ವ್ಯಕ್ತಿಯಲ್ಲಿರುವ ದೋಷಗಳನ್ನು ದೂರಮಾಡಿ ಗುಣಗಳನ್ನು ಸೇರಿಸುವುದೆಂದರ್ಥ. ಶಾಸ್ತ್ರಕಾರರು ಸಂಸ್ಕಾರಕರ್ಮಗಳನ್ನೂ, ಅವುಗಳನ್ನು ಮಾಡಬೇಕಾದ ಕಾಲವನ್ನೂ ಹೇಳಿದ್ದಾರೆ. ಶಾಸ್ತ್ರಕಾರರ ದೃಷ್ಟಿಯಲ್ಲಿ ಸೃಷ್ಟಿಯಲ್ಲಿನ ಪ್ರತಿಯೊಂದು ಜೀವಿಯ ಜನ್ಮದ ಉದ್ದೇಶ ಶಾಶ್ವತ ಸುಖ ಪಡೆಯುವುದೇ ಆಗಿರುವುದರಿಂದ  ಅದಕ್ಕೆ ಪೂರಕವಾದ ಸಂಸ್ಕಾರ ಕರ್ಮಗಳನ್ನು ಶಾಸ್ತ್ರಕಾರರು ಕಡ್ಡಾಯಗೊಳಿಸಿದ್ದಾರೆ. ಆದರೆ ನಮ್ಮ ಜನ್ಮದ ಪರಮೋದ್ದೇಶ ನಮಗೆ ತಿಳಿದಿಲ್ಲವಾದ್ದರಿಂದ ಈ ಕರ್ಮಗಳ ವಿಚಾರದಲ್ಲಿ ಅನಾದರ ಹಾಗೂ ಕೆಲವೊಮ್ಮೆ ದ್ವೇಷವೂ ಉಂಟಾಗುತ್ತದೆ. ಮನುಷ್ಯನ ಬದುಕಿನ ಸಾರ್ಥಕತೆಗೆ  ಪೂರಕವಾದ ಕರ್ಮಗಳೇ ಸಂಸ್ಕಾರ ಕರ್ಮಗಳು. ಹುಟ್ಟಿದ ಪ್ರತಿಯೊಂದು ವ್ಯಕ್ತಿಗೂ ಸಂಸ್ಕಾರ ಅತ್ಯಗತ್ಯವೆಂದಾದಮೇಲೆ ಸ್ತ್ರೀ ಪುರುಷರೆಂಬ ಭೇದ ಅಲ್ಲಿ ಇಲ್ಲ. ಅದು ಎಲ್ಲರಿಗೂ ವಿಹಿತ. ಕರ್ಮಸ್ವರೂಪದಲ್ಲಿ ಮಾತ್ರ ವ್ಯತ್ಯಾಸವೇ ಹೊರತು ಕರ್ಮದಲ್ಲಲ್ಲ. ಈ ಕರ್ಮಸ್ವರೂಪವನ್ನು ಮಹರ್ಷಿಗಳು ತಮ್ಮ ತಪೋಭೂಮಿಕೆಯಲ್ಲಿ ಕಂಡುಕೊಂಡು ನಿರ್ಧರಿಸಿರುತ್ತಾರೆ. ಇದನ್ನು ಬದಲಾಯಿಸುವ ಅಧಿಕಾರ ಯಾರಿಗೂ ಇಲ್ಲ.

 ಜನನಪೂರ್ವದಲ್ಲಿ ಗರ್ಭಾದಾನ, ಪುಂಸವನ, ಸೀಮಂತ, ವಿಷ್ಣುಬಲಿ ಎಂಬ ಸಂಸ್ಕಾರಗಳು ವಿಹಿತವಾದವು.  ಹುಟ್ಟಿದ ಮಗುವಿಗೆ ಶಾಸ್ತ್ರಕಾರರು ಹೇಳಿದಂತೆ ಕಾಲ ಕಾಲದಲ್ಲಿ ಮಾಡಬೇಕಾದ ಜಾತಕರ್ಮ, ನಾಮಕರಣ, ಉಪನಿಷ್ಕ್ರಮಣ, ಅನ್ನಪ್ರಾಶನ, ಕರ್ಣವೇಧನ, ಚೌಲ ಸಂಸ್ಕಾರಗಳನ್ನು ಆಯಾ ಕಾಲದಲ್ಲಿ ಮಾಡಿಸುವುದಾಗಿದೆ. ಈ ಸಂಸ್ಕಾರಗಳನ್ನು ಹೆಣ್ಣುಮಗುವಿಗೂ ಕೂಡ ಆಯಾ ಕಾಲದಲ್ಲಿ ಶಾಸ್ತ್ರೀಯವಾಗಿ ಮಾಡಬೇಕು. ಕಾಲಕಾಲಕ್ಕೆ ಈ ಸಂಸ್ಕಾರಗಳನ್ನು ಹೆಣ್ಣುಮಗುವಿಗೆ ಮಾಡಿರದಿದ್ದರೆ ಪ್ರಾಯಶ್ಚಿತ್ತ ಮಾಡಿಕೊಂಡು ಮಾಡಿರದ ಸಂಸ್ಕಾರಗಳನ್ನು ಒಂದೇ ಬಾರಿಗೆ ಶಾಸ್ತ್ರೋಕ್ತವಾಗಿ ಒಟ್ಟಿಗೆ ಮಾಡುವುದಕ್ಕೆ ‘ಕನ್ಯಾಸಂಸ್ಕಾರ’ ಎಂದು ಹೆಸರು.  ಒಂದೇ ವಾಕ್ಯದಲ್ಲಿ ಹೇಳುವುದಾದರೆ ಶಾಸ್ತ್ರೋಕ್ತವಾದ ರೀತಿಯಲ್ಲಿ ಕನ್ಯೆಗೆ ನೀಡಬೇಕಾದ ವಿವಾಹಪೂರ್ವದ ಎಲ್ಲ ಸಂಸ್ಕಾರಗಳಿಗೆ ಕನ್ಯಾಸಂಸ್ಕಾರ ಎಂದು ಹೆಸರು.  ಕನ್ಯೆಗೆ ನೀಡುವ ಸಂಸ್ಕಾರಗಳಾಗಿದ್ದರಿಂದ ಬೋಧಾಯನ ಬ್ರಹ್ಮಕರ್ಮಸಮುಚ್ಚಯದಲ್ಲಿ ಕನ್ಯಾಸಂಸ್ಕಾರ ಎಂಬ ಹೆಸರನ್ನು ನೀಡಲಾಗಿದೆ.

 ಎಲ್ಲ ಗೃಹ್ಯಸೂತ್ರಕಾರರೂ ಈ ಸಂಸ್ಕಾರವನ್ನು ಹೇಳಿದ್ದರೂ ಕನ್ಯಾಸಂಸ್ಕಾರ ಎಂಬ ಹೆಸರು ಎಲ್ಲೂ ಕಾಣದಿರುವುದರಿಂದ ಅನೇಕರಿಗೆ ಇದಾವುದೋ ಹದಿನಾರು ಸಂಸ್ಕಾರಗಳನ್ನು ಹೊರತುಪಡಿಸಿದ ಹೊಸ ಸಂಸ್ಕಾರವೆಂಬ ಭ್ರಾಂತಿ ಉಂಟಾಗಿದೆ. ಜಾತಕರ್ಮ, ನಾಮಕರಣ ಎಂಬುದಾಗಿ ಸಂಸ್ಕಾರಕ್ಕೆ ಇರುವ ಹೆಸರಿನಂತೆ  ಕನ್ಯಾಸಂಸ್ಕಾರ ಎಂಬುದೇ ಒಂದು ಸ್ವತಂತ್ರ ಪ್ರತ್ಯೇಕ ಸಂಸ್ಕಾರವಲ್ಲ. ಒಂದು ಲೌಕಿಕ ಉದಾಹರಣೆಯೊಂದಿಗೆ ವಿವರಿಸುವುದಿದ್ದರೆ ಬೆಂಗಳೂರು ನಗರ ಎಂಬುದಾಗಿ ಹೇಳಿದಾಗ ಬೆಂಗಳೂರಿನಲ್ಲಿರುವ ಗಿರಿನಗರ ,ಹನುಮಂತನಗರ, ಬಸವೇಶ್ವರನಗರಗಳೇ ಮೊದಲಾದ ಎಲ್ಲಾ ನಗರಗಳೂ ಸೇರಿ  ಹೇಗೆ  ಬೆಂಗಳೂರು ನಗರ ಎಂಬ ಹೆಸರು ಬರುತ್ತದೆಯೋ  ಅದೇ ರೀತಿಯಾಗಿ ಕನ್ಯಾಸಂಸ್ಕಾರವೆಂದರೆ ಕನ್ಯೆಗೆ ನೀಡುವ ಎಲ್ಲಾ ಸಂಸ್ಕಾರಗಳನ್ನು ಒಟ್ಟಿಗೆ ಸೇರಿಸಿ ಕನ್ಯಾಸಂಸ್ಕಾರ ಎಂಬ ಹೆಸರು ಬಂದಿದೆ. ಹಾಗೆಯೇ ಬೆಂಗಳೂರು ನಗರದೊಳಗಿರುವ ಒಂದೊಂದು ನಗರವನ್ನು ಪ್ರತ್ಯೇಕವಾಗಿ ಹೇಳುವಾಗಲೂ ಗಿರಿನಗರ-ಬೆಂಗಳೂರು ಎಂದು ಹೇಳಿದಂತೆ ಆಯಾ ಕಾಲದಲ್ಲೇ ಮಾಡುವ ಸಂದರ್ಭದಲ್ಲಿ ಜಾತಕರ್ಮ (ಕನ್ಯಾ) ಸಂಸ್ಕಾರ, ನಾಮಕರಣ (ಕನ್ಯಾ)ಸಂಸ್ಕಾರ ಎಂದು ಹೇಳಬಹುದು.

ರಾಮಚಂದ್ರಾಪುರ ಮಠದಲ್ಲಿ ನಡೆಸುತ್ತಿರುವ ಕನ್ಯಾಸಂಸ್ಕಾರದ  ಸ್ಪಷ್ಟ ಚಿತ್ರಣ

 ಇಲ್ಲಿ ಎರಡು ಅಂಶಗಳಿವೆ, ಮೊದಲನೆಯದು ಶಾಸ್ತ್ರೀಯವಾದ ಕನ್ಯಾಸಂಸ್ಕಾರ ಕರ್ಮ. ಶ್ರೀರಾಮಚಂದ್ರಾಪುರ ಮಠದ 36 ನೆಯ ಪೀಠಾಧೀಶ್ವರರಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಶಿಷ್ಯವರ್ಗದಲ್ಲಿ ಅನೇಕ ಕಡೆ ಹೆಣ್ಣುಮಕ್ಕಳಿಗೆ ಜಾತಕರ್ಮಾದಿ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡದಿರುವುದನ್ನು ಮನಗಂಡು  ಯಾವ ಹೆಣ್ಣುಮಕ್ಕಳಿಗೆ ಸಂಸ್ಕಾರಗಳು ಆಗಿಲ್ಲವೋ ಅವರಿಗೆ ಸಂಸ್ಕಾರವನ್ನು ಮಾಡಿಸುವುದೊಳಿತೆಂದು ಶಿಷ್ಯರಿಗೆ ತಿಳಿಸಿದರು. ಗುರುಗಳ ಮಾರ್ಗದರ್ಶನದಂತೆ ಹೆಣ್ಣು ಮಗಳನ್ನು ಹೆತ್ತ  ಅನೇಕ ಶಿಷ್ಯರು ತಮ್ಮ ಮಗಳಿಗೆ ಈ ಸಂಸ್ಕಾರ ಕರ್ಮವನ್ನು ಪುರೋಹಿತರನ್ನು ಕರೆಸಿ  ಶಾಸ್ತ್ರೀಯವಾಗಿ ಮಾಡಿಸುತ್ತಿದ್ದಾರೆ.  ಈ ಸಂಸ್ಕಾರಕರ್ಮವನ್ನು ಮಾಡಬೇಕಾದರೆ ಕನ್ಯೆಯ ಮಾತಾಪಿತೃಗಳು ಅತ್ಯಗತ್ಯ. ತಂದೆತಾಯಿಯರ ಅನುಪಸ್ಥಿತಿಯಲ್ಲಿ ಇದನ್ನು ನೆರವೇರಿಸಲು ಶ್ರೀಮಠದ ಅನುಮತಿ ಇರುವುದಿಲ್ಲ. ಅಲ್ಲದೆ ಸ್ವಗೃಹದಲ್ಲೇ ಕುಲಪುರೋಹಿತರಿಂದಲೇ ಈ ಸಂಸ್ಕಾರವನ್ನು ನೆರವೇರಿಸುವುದಕ್ಕೆ ಮೊದಲ ಆದ್ಯತೆ. ಇದು ಕಷ್ಟವಾದಲ್ಲಿ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಪುರೋಹಿತರಿಂದಲೇ ನಡೆಸುವ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಕನ್ಯೆಗೆ ಸಂಸ್ಕಾರಕರ್ಮವನ್ನು ಮಾಡುವವರು ಕನ್ಯೆಯ ತಂದೆತಾಯಿಗಳು. ಮಾಡಿಸುವವರು ಪುರೋಹಿತರು ಎಂಬುದು ಗಮನಿಸಬೇಕಾದ ಅಂಶವಾಗಿದೆ.  ಅಲ್ಲದೆ ಶ್ರೀಮಠದ ಆವರಣದಲ್ಲೇ ಈ ಧಾರ್ಮಿಕ ಕಾರ್ಯಕ್ರಮ ನಡೆದಾಗಲೂ ಶ್ರೀಗುರುಗಳ ಉಪಸ್ಥಿತಿ ಆ ಸಂದರ್ಭದಲ್ಲಿ ಇರುವುದಿಲ್ಲ. ಆದ್ದರಿಂದ ಕನ್ಯಾಸಂಸ್ಕಾರವನ್ನು ಶ್ರೀಗುರುಗಳೇ ನೀಡುತ್ತಾರೆ ಎಂಬುದು ಮಾಹಿತಿಯ ಕೊರತೆಯ ಮಾತಾಗಿದೆ.

 ಎರಡನೆಯ ಅಂಶ : ಶ್ಲೋಕ ಹೇಳಿಕೊಡುವ ವಿಚಾರ 

 ಹೆಣ್ಣುಮಕ್ಕಳಲ್ಲಿ ಬದ್ಧತೆಯಿಂದ ನಿತ್ಯ ದೇವತಾರಾಧನೆ ಮಾಡಲು ಆಸಕ್ತಿಯುಳ್ಳವರಿಗೆ ಯಾವುದೇ ವ್ಯವಸ್ಥೆ ನಮ್ಮಲ್ಲಿ ಈಗ ಇಲ್ಲದಿರುವುದರಿಂದ ಅರ್ಥಗರ್ಭಿತವಾದ ಒಂದು ಶ್ಲೋಕವನ್ನು ಹೇಳಿಕೊಡುವ ವ್ಯವಸ್ಥೆಯನ್ನು ಶ್ರೀಸಂಸ್ಥಾನದವರು ಕಲ್ಪಿಸಿಕೊಟ್ಟಿದ್ದಾರೆ. ಇದು ಕನ್ಯೆಯಾದವಳು ಪ್ರತಿನಿತ್ಯ ಸೂರ್ಯೋದಯ ಹಾಗೂ ಸೂರ್ಯಾಸ್ತಗಳಲ್ಲಿ ದೇವತಾರಾಧನೆ ಮಾಡಬೇಕೆಂಬ ಉದ್ದೇಶದಿಂದ ಅವಳ ಹಿತಕ್ಕಾಗಿ ಹೇಳಿಕೊಡುವ ಒಂದು ಸ್ತೋತ್ರವಾಗಿದೆ. ಆದರೆ ಈ ಶ್ಲೋಕವನ್ನು ಹೇಳಿಕೊಡುವುದಕ್ಕೆ ಕನ್ಯಾಸಂಸ್ಕಾರ ಎಂಬ ಹೆಸರಲ್ಲ.  ಆದರೆ ಆ ಶ್ಲೋಕವನ್ನು ಈ ದಶ ಸಂಸ್ಕಾರವನ್ನು ಶಾಸ್ತ್ರೀಯವಾಗಿ ಮಾಡಿಸಿದ ನಂತರವೇ ಹೇಳಿಕೊಡುವುದರಿಂದ ಈ ಶ್ಲೋಕ ಹೇಳಿಕೊಡುವುದನ್ನೇ ಕನ್ಯಾಸಂಸ್ಕಾರ ಎಂದು ಜನ ತಪ್ಪಾಗಿ ತಿಳಿದುಕೊಂಡಿರುತ್ತಾರೆ.  ಬದುಕಿನ ಉದ್ಧಾರದ ದೃಷ್ಟಿಯಿಂದ ಶ್ಲೋಕವೊಂದನ್ನು ಹೇಳಿಕೊಡುವ  ಮೊದಲು ಶಾಸ್ತ್ರಕಾರರು ಹೇಳಿದ ಸಂಸ್ಕಾರಗಳನ್ನು ಶಾಸ್ತ್ರೀಯವಾಗಿಯೇ ಮಾಡಬೇಕೆಂಬುದು ಶ್ರೀಮದ್ರಾಮಚಂದ್ರಾಪುರಮಠಾಧೀಶರ ನಿಲುವಾಗಿದೆ. ಆದ್ದರಿಂದ ಕನ್ಯೆಗೆ ವಿಹಿತವಾದ ಸಂಸ್ಕಾರಗಳನ್ನು ಪೂರೈಸಿದ ನಂತರ  ನಿತ್ಯ ಪಠಿಸುವ ಶ್ಲೋಕವನ್ನು ಹೇಳಿಕೊಡುವ ವ್ಯವಸ್ಥೆ ಮಾಡಲಾಯಿತು. ಮಕ್ಕಳಿಗೆ ನಿತ್ಯವೂ ಈ ಶ್ಲೋಕಪಠಣದಲ್ಲಿ ಶ್ರದ್ಧೆ ಬರುವ ಉದ್ದೇಶದಿಂದ ಪೂಜ್ಯಶ್ರೀಗುರುಗಳೇ ಮಕ್ಕಳಿಗೆ ಶ್ರೀಕರಾರ್ಚಿತದೇವತಾ ದಿವ್ಯಸನ್ನಿಧಿಯಲ್ಲಿ  ಸಾಮೂಹಿಕವಾಗಿ ತಂದೆತಾಯಿಯರ ಸಮ್ಮುಖದಲ್ಲಿ ಬಹಿರಂಗವಾಗಿ ಹೇಳಿಕೊಡುತ್ತಾರೆ.

 ಹೀಗೆ ಸಮಾಜದಲ್ಲಿ ಬಿಟ್ಟು ಹೋದ ಕನ್ಯಾಸಂಸ್ಕಾರವನ್ನು  ಮತ್ತೆ ಜಾಗೃತಗೊಳಿಸುವ ಮೂಲಕ ಹಾಗೂ ನಿತ್ಯ ದೇವತೋಪಾಸನೆಗೆ ಅನುಕೂಲವಾದ ಒಂದು ಶ್ಲೋಕವನ್ನು ಪ್ರತಿನಿತ್ಯ ಪಠಿಸಬೇಕೆಂದು ಮಕ್ಕಳಿಗೆ ಹೇಳುವ ಮೂಲಕ ಸ್ವಸ್ಥ ಹಾಗೂ ಸಮಸಮಾಜದ ನಿರ್ಮಾಣದಲ್ಲಿ ಕನ್ಯಾಸಂಸ್ಕಾರದ ಪಾತ್ರ ಮಹತ್ವಪೂರ್ಣ ಹಾಗೂ ಸರ್ವಾದರಣೀಯವಾಗಿದೆ.

 ಸಂಸ್ಕಾರ ಕಾರ್ಯಕ್ರಮದಲ್ಲೂ ವಿವಾದವೇಕೆ ?

 ಸಹಸ್ರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಯ ಮೇಲೆ ನಾನಾಮುಖಗಳಿಂದ ಧಾಳಿಯನ್ನು ಕಂಡ ಈ ದೇಶಕ್ಕೆ ಹೆಣ್ಣುಮಕ್ಕಳಿಗೆ ಸಂಸ್ಕಾರವನ್ನು ನೀಡಬೇಕೆಂದು ಸತ್ಸಂಕಲ್ಪದಿಂದ ಹೊರಟಾಗ ವಿರೋಧ ವ್ಯಕ್ತವಾದುದು ಆಶ್ಚರ್ಯವೇನಲ್ಲ. ಶಾಸ್ತ್ರೀಯವಾಗಿ ಈ ಕಾರ್ಯಕ್ರಮದಲ್ಲಿ ಯಾವುದೇ ದೋಷಗಳಿಲ್ಲದಿದ್ದರೂ ಬಲಾತ್ಕಾರವಾಗಿ ದೋಷಗಳನ್ನು ಎಳೆತಂದು ಕೂರಿಸಲು ಪ್ರಯತ್ನಿಸುವ ವಿಚಾರವೂ ನಿರೀಕ್ಷಿತವೇ ಆಗಿದೆ. ಸನಾತನ ಸಂಸ್ಕೃತಿಯ ಮೇಲೆ ಆದಷ್ಟು ದಾಳಿ ಇನ್ನಾವುದರ ಮೇಲೂ ಆಗಿಲ್ಲವೆಂಬುದು ಸುಸ್ಪಷ್ಟ. ಪರಗುಣಪರಮಾಣೂನ್ ಪರ್ವತೀಕೃತ್ಯನಿತ್ಯಂ ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ ಎಂಬ ಸುಭಾಷಿತದಂತೆ ಇನ್ನೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನು ಹೇಳುವ ಜನರು ಲೋಕದಲ್ಲಿ ಅತಿ ಕಡಿಮೆಯೇ ಲಭಿಸುತ್ತಾರೆ. ಒಳ್ಳೆಯ ಕಾರ್ಯವನ್ನು ನೋಡಿದಾಗಲೂ ಕೆಟ್ಟ ಯೋಚನೆ ಬರುವುದು ಸಂಸ್ಕಾರದ ಕೊರತೆಯಲ್ಲವೇ ? ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಮ್ ಲೋಕಾಃ ಸಮಸ್ತಾಃ ಸುಖಿನೋ ಭವಂತು  ಎಂದು ಬಯಸುವ ನಮ್ಮ ದೇಶದ ಮಲೆಮಹಾದೇಶ್ವರ ಬೆಟ್ಟದಲ್ಲಿ ಕಟುಕರ ಪಾಲಾಗುತ್ತಿದ್ದ 1019 ಗೋವುಗಳನ್ನು ದೇಶೀಗೋವಿನ ರಕ್ಷಣೆಗಾಗಿ ಇಷ್ಟೊಂದು ಹೋರಾಟ ನಡೆಸುತ್ತಿರುವ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಖರೀದಿಸಿ ಸಾಕುತ್ತಿರುವ ವಿಚಾರವನ್ನು ಹೇಳಿದವರೆಷ್ಟು ಜನ? ಕೇಳಿದವರೆಷ್ಟು ಜನ? ಗೋವಿಗಾಗಿ ಅಭಯಾಕ್ಷರ ಯೋಜನೆಯಲ್ಲಿ ಪಾಲ್ಗೊಂಡ ದೇಶಪ್ರೇಮಿಗಳೆಷ್ಟು ಜನ ? ಎಂಬುದಾಗಿ ಪ್ರಶ್ನಿಸುತ್ತಾ ಹೋದಾಗ ಕನ್ಯಾಸಂಸ್ಕಾರದ ವಿವಾದದ ಮೂಲ ದೊರೆಯಬಹುದೇನೋ ! ವಿವಾದದ ಹೊಗೆಯೆಬ್ಬಿಸಿದ ನಾಲಿಗೆಗೆ ಇಂಥಹ ಮಹತ್ಕಾರ್ಯವನ್ನು ಹೇಳುವಷ್ಟೂ ಶಕ್ತಿಯಿಲ್ಲದಾಯಿತೇ? ಅಥವಾ ಕೊನೆಯಲ್ಲಿ ಪ್ರಶ್ನಿಸಬೇಕಾದುದು ಸತ್ಕಾರ್ಯಗಳಿಗೆ ವಿಘ್ನವುಂಟುಮಾಡುವುದು ಭಾರತೀಯ ಸಂಸ್ಕೃತಿಯೇ ?

   

Leave a Reply