ಕರಾವಳಿಯಲ್ಲಿ ಹೀಗಿದೆ ಪರಿಸ್ಥಿತಿ

ಲೇಖನಗಳು - 0 Comment
Issue Date :

 

-ವಿಠ್ಠಲದಾಸ ಕಾಮತ್

ರಾಜ್ಯದಲ್ಲಿ  ವಿಧಾನಸಭಾ ಚುನಾವಣಾ ಸಮರ ಸಿದ್ಧತೆ ಶುರುವಾಗುತ್ತಿದ್ದಂತೆಯೇ  ಹಿಂದುತ್ವದ ಪ್ರಬಲ ನೆಲೆಯಾಗಿರುವ ಕರಾವಳಿ ಮತ್ತು ಕೊಡಗು ಜಿಲ್ಲೆಯಲ್ಲಿ ಮತ್ತೆ  ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಜಿದ್ದಾಜಿದ್ದಿಗೆ ಅಂಕಣ ಹದಗೊಳ್ಳತೊಡಗಿದೆ.  ಗೆಲುವಿಗಾಗಿ ಈ ಎರಡು ಪ್ರಮುಖ ಪಕ್ಷಗಳ ಮಧ್ಯೆ ಹಣಾಹಣಿ ನಡೆಯುವ ಚಿತ್ರಣ ಲಭ್ಯವಾಗುತ್ತಿದ್ದು,  2013 ರಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಬಿಜೆಪಿ ಈ ಬಾರಿ ಫಿನಿಕ್ಸ್ ಪಕ್ಷಿಯಂತೆ ಚಿಮ್ಮಿ ನಿಲ್ಲಬಹುದು ಎಂಬ ಲೆಕ್ಕ ನಡೆದಿದೆ.

ಇನ್ನೊಂದೆಡೆ ತನ್ನ ಗೆಲುವಿನ ಸಾಧನೆಯನ್ನು ಕೈ ಚೆಲ್ಲಲು ಸಿದ್ಧವಿಲ್ಲದ ಕಾಂಗ್ರೆಸ್ ಸಹ, ಜಾತಿ, ಮತಗಳ ಸಮೀಕರಣದ ಲೆಕ್ಕಾಚಾರದಲ್ಲಿ ಮುಳುಗಿದ್ದು, ಬಿಜೆಪಿಯ ಕನಸನ್ನು ಭಂಗ ಮಾಡಲು ಕಸರತ್ತು ಆರಂಭ ಮಾಡಿದೆ.

 ಹಿಂದುಗಳ ಸರಣಿ ಕೊಲೆ, ವಿದ್ರೋಹಿ ಶಕ್ತಿಗಳ ಸಕ್ರೀಯತೆಯಂತಹ ವಿಷಯಗಳೇ ಈ ಬಾರಿ ಚುನಾವಣೆಯಲ್ಲಿ ಪ್ರಮುಖ ಪರಿಣಾಮ ಬೀರುವ ಸಂಗತಿಗಳು. ನಿಷ್ಕ್ರೀಯ ಸರ್ಕಾರದ ವಿರುದ್ಧ  ದ.ಕ,, ಉಡುಪಿ, ಉ.ಕ. ಮತ್ತು ಕೊಡಗು ಜಿಲ್ಲೆಗಳಲ್ಲಿ ಆಗುತ್ತಿರುವ ಹಿಂದೂಗಳ ಧೃವೀಕರಣ ಕಾಂಗ್ರೆಸ್ಸಿಗೆ ನಡುಕ ತಂದಿರುವುದು ಖರೆ.

ಕೈ ಪ್ರಾಬಲ್ಯ

 2013 ರ ವಿಧಾನ ಸಭಾ ಚುನಾವಣೆಯಲ್ಲಿ ದ.ಕ,, ಉಡುಪಿ, ಉ.ಕ. ಮತ್ತು ಕೊಡಗು ಜಿಲ್ಲೆಗಳ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನಿರೀಕ್ಷಿತ ಎಂಬಂತೆ ದೊಡ್ಡ ಮಟ್ಟದ ಸಾಧನೆ ತೋರಿಸಿತ್ತು. ಈ ಜಿಲ್ಲೆಗಳ 21 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 15 ರಲ್ಲಿ ಗೆದ್ದು ಸದ್ದು ಮಾಡಿದರೆ, ಬಿಜೆಪಿ ಕೇವಲ ಐದು ಕ್ಷೇತ್ರಗಳಿಗೆ ತೃಪ್ತಿಪಟ್ಟಿತ್ತು. ಒಂದು ಕ್ಷೇತ್ರ ಬಿಜೆಪಿಯಿಂದ ಹೊರ ಬಂದಿದ್ದ ಪಕ್ಷೇತರನ ಪಾಲಾಗಿತ್ತು.

 ಹಿಂದುತ್ವದ ಗಟ್ಟಿ ನೆಲೆಯಾಗಿರುವ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ ದಕ್ಕಿದ್ದು ಕೇವಲ ಒಂದೊಂದೇ ಸ್ಥಾನ. ಇದಕ್ಕೆ ಯಡಿಯೂರಪ್ಪನವರು ಬಿಜೆಪಿಯಿಂದ ಹೊರ ಬಂದು ಕೆಜೆಪಿ ಸ್ಥಾಪಿಸಿ ಕಣಕ್ಕೆ ಇಳಿದಿದ್ದು ಮತ್ತು ಬಿಜೆಪಿಯ ಆಂತರಿಕ ಗೊಂದಲ ಪ್ರಮುಖ ಕಾರಣ.   ಇದರ ಜೊತೆಗೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಅಧಿಕಾರವಧಿಯ ಗೊಂದಲದಿಂದ ಜನತೆ ಬೇಸತ್ತಿದ್ದರು. ಹೀಗಾಗಿ ಬಿಜೆಪಿಯ ಭದ್ರ ನೆಲೆಯಾದ ದ.ಕ,, ಉಡುಪಿ ಉತ್ತರ ಕನ್ನಡದಲ್ಲಿ ಕಮಲ ಪಾಳೆಯಕ್ಕೆ ದೊಡ್ಡ ಮಟ್ಟದ ಸೋಲು ಎದುರಾಗಿತ್ತು.

 ಆದರೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲ ಜಿಲ್ಲೆಗಳ ರಾಜಕೀಯ ಸ್ಥಿತಿ ಬದಲಾಗಿ ಹೋಯಿತು. ಮೋದಿ ಅಲೆಯ ಹೊಡೆತಕ್ಕೆ ಕೊಚ್ಚಿ ಹೋದ ಕೈ ಪಾಳೆಯ ಇಲ್ಲಿ ಸೋಲು ಕಾಣುವಂತಾಯಿತು. ಈ ಜಿಲ್ಲೆಗಳ ವ್ಯಾಪ್ತಿಗೆ ಬರುವ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪಸಿಂಹ,  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ, ದ.ಕ.ದಲ್ಲಿ ನಳಿನಕುಮಾರ ಕಟಿಲ್, ಉ.ಕ.ದಲ್ಲಿ ಅನಂತಕುಮಾರ್ ಹೆಗಡೆ ಗೆದ್ದು, ಬಿಜೆಪಿ ವಿಜಯದುಂಧುಬಿ ಬಾರಿಸಿತು.

 ತದನಂತರದಲ್ಲಿ ಇಲ್ಲೆಲ್ಲ  ಹಲವು ಕಾರಣಗಳಿಂದ ಹಿಂದೂಗಳ ಧೃವೀಕರಣ ಆಗುತ್ತಿದ್ದು, 2018 ರ ಚುನಾವಣೆಯಲ್ಲಿ ಇದು ಬಿಜೆಪಿಗೆ ಲಾಭ ತರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗ ಬಂದಿರುವ ಹಲವು ಸಮೀಕ್ಷೆಗಳು ಸಹ ಈ 4 ಜಿಲ್ಲೆಗಳಲ್ಲಿ  ಕೇಸರಿ ಪಡೆ ನಗಾರಿ ಬಾರಿಸುವ ಸೂಚನೆ ನೀಡಿವೆ.

 ದ.ಕ ಜಿಲ್ಲೆಯಲ್ಲಿ ಒಟ್ಟಾರೆ 8 ಕ್ಷೇತ್ರಗಳಿದ್ದು, ಪ್ರಸಕ್ತ ಕಾಂಗ್ರೆಸ್ ಏಳು ಮತ್ತು ಬಿಜೆಪಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುತ್ತಿದೆ. ಬೆಳ್ತಂಗಡಿಯಲ್ಲಿ ಕೆ. ವಸಂತ ಬಂಗೇರಾ, ಮಂಗಳೂರಿನಲ್ಲಿ ಯು.ಟಿ ಖಾದರ್, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆ.ಆರ್.ಲೋಬೋ, ಮಂಗಳೂರು ಉತ್ತರ ಕ್ಷೇತ್ರದಲ್ಲಿ  ಬಿ.ಎ. ಮೋಯಿದ್ದೀನ್, ಮೂಡಬಿದರೆಯಲ್ಲಿ ಕೆ. ಅಭಯಚಂದ್ರ ಜೈನ್, ಪುತ್ತೂರಿನಲ್ಲಿ ಶಕುಂತಲಾ ಶೆಟ್ಟಿ, ಬಂಟ್ವಾಳದಲ್ಲಿ ರಮಾನಾಥ ರೈ ಇವರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದು ಮೀಸಲು ಕ್ಷೇತ್ರ ಸುಳ್ಯದಲ್ಲಿ ಬಿಜೆಪಿಯ ಅಂಗಾರ್, ಎಸ್ ಗೆದ್ದಿದ್ದಾರೆ.  ಇಲ್ಲಿಂದ ರಮಾನಾಥ ರೈ ಮತ್ತು ಯು.ಟಿ ಖಾದರ್ ಮಂತ್ರಿಗಳಾಗಿದ್ದಾರೆ.

 ಆದರೆ ಈಗ ಐದು ವರ್ಷಗಳಲ್ಲಿ ಈ ಜಿಲ್ಲೆಯ ರಾಜಕೀಯ ಸಮೀಕರಣ ಬಹಳಷ್ಟು ಬದಲಾಗಿದೆ. ಬಿಜೆಪಿ ತನ್ನ ತಪ್ಪಿನಿಂದ ಪಾಠ ಕಲಿತಿದೆ. ಕೆಜೆಪಿ, ಬಿಜೆಪಿ ಒಂದಾಗಿವೆ. ಅತ್ತ ಕಾಂಗ್ರೆಸ್ಸಿನಲ್ಲಿ ಎಲ್ಲವೂ ನೆಟ್ಟಗಿಲ್ಲ. ಇಲ್ಲಿಯ ಪ್ರಮುಖ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಅವರು ರೈ ಅವರ ಮೇಲೆ ಮುನಿಸಿಕೊಂಡು ತಟಸ್ಥರಾಗಿದ್ದು, ಅವರ ಬೆಂಬಲಿಗರು ಬಿಜೆಪಿಯತ್ತ ಹೆಜ್ಜೆ ಇರಿಸಿದ್ದಾರೆ.  ಪೂಜಾರಿಯ ಆಪ್ತ  ಬಿಲ್ಲವ ಸಮಾಜದ ಪ್ರಮುಖ ಹರಿಕೃಷ್ಣ ಬಂಟ್ವಾಳ ಬಿಜೆಪಿಗೆ ಬಂದಿದ್ದಾರೆ. ರಮಾನಾಥ ರೈ ಮತ್ತು ಖಾದರ್ ಅವರ ಖದರಿಗೆ ಕೈ ಒಳಗೆ ಅಸಮಾಧಾನದ ಗುಸುಗುಸು ಎದ್ದಿದೆ.

 ಇನ್ನು ದ.ಕ. ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿರುವುದು ಅಮಾಯಕ ಹಿಂದೂಗಳ ಹತ್ಯೆ.  ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ಬಂದ ನಂತರದಲ್ಲಿ ದ.ಕ ಜಿಲ್ಲೆಯಲ್ಲಿ ಪ್ರಶಾಂತ ಪೂಜಾರಿ, ಶರತ ಮಡಿವಾಳ ಮತ್ತು ದೀಪಕರಾವ್ ಹತ್ಯೆ ನಡೆದಿದೆ. ಈ ಕೊಲೆಗಳಲ್ಲಿ ಪಿ.ಎಫ್.ಐ ಕೈವಾಡ ಇರುವ ಆರೋಪ ಮಾಡಿರುವ ಬಿಜೆಪಿ, ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ರೋಹಿ ಕೃತ್ಯಗಳ ಬಗ್ಗೆ ಎನ್.ಐ.ಎ. ತನಿಖೆಗೆ ಒತ್ತಾಯಿಸಿ ದನಿ ಎತ್ತಿದೆ. ಇದು ದ.ಕ. ಜಿಲ್ಲೆಯ ಹಿಂದೂ ಮತದಾರರ ಮೇಲೆ ಗಾಢ ಪ್ರಭಾವ ಬೀರಿದೆ. ಹಿಂದೂ ಮತಗಳ ಧೃವೀಕರಣಕ್ಕೆ ಈ ಅಮಾಯಕ ಹತ್ಯೆಗಳು ಕಾರಣವಾಗಿವೆ.

 ಅತ್ತ ಮುಸ್ಲಿಂ ಸಂಘಟನೆಯಲ್ಲೂ ಬಿರುಕು ಕಾಣಿಸಿದ್ದು, ನಟೋರಿಯಸ್ ಇಲ್ಯಾಸ್ ಹತ್ಯೆಯು ಮಂತ್ರಿ ಖಾದರ್ ಅವರನ್ನು ತಲ್ಲಣಗೊಳಿಸಿದೆ. ಒಂದು ಗುಂಪು ಖಾದರ್ ಮೇಲೆ ಮುನಿಸಿಕೊಂಡಿದೆ.

ಕಲ್ಲಡ್ಕ ಶಾಲೆಯ ಮಧ್ಯಾಹ್ನದ ಊಟಕ್ಕೆ ಸಚಿವ  ರಮಾನಾಥ ರೈ ದೇವಸ್ಥಾನದ ಅಕ್ಕಿ ನಿಲ್ಲುವಂತೆ ಮಾಡಿರುವ ವಿವಾದವೂ ಹಿಂದೂಗಳ ಜೊತೆಗೆ ಬಡ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಒಟ್ಟಾರೆ ಈ ಎಲ್ಲ ವಿದ್ಯಮಾನಗಳ ಲಾಭ ಎತ್ತಿ ಬಿಜೆಪಿ ಈ ಬಾರಿ ತನ್ನ ಸ್ಥಿತಿ ಉತ್ತಮಗೊಳಿಸಿಕೊಳ್ಳುವ ಲೆಕ್ಕ ಆರಂಭ ಮಾಡಿದೆ.

 ಅತ್ತ ಕಾಂಗ್ರೆಸ್ ಜಿಲ್ಲೆಯಲ್ಲಿ ಇರುವ ಮುಸಲ್ಮಾನ ಮತ್ತು ಕ್ರೈಸ್ತ ಸಮುದಾಯಗಳ ಶೇ. 38ರಷ್ಟು ಓಟುಗಳನ್ನು ಒಗ್ಗೂಡಿಸಿ ಮತ್ತೆ ಹೆಚ್ಚಿನ ಸ್ಥಾನ ಗೆಲ್ಲುವ ಪ್ರಯತ್ನ ನಡೆಸಿದೆ.

 ಉಡುಪಿ ಜಿಲ್ಲೆಯಲ್ಲೂ  ಬಿಜೆಪಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದು ಒಂದೇ ಸ್ಥಾನವನ್ನು. ಈ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ  ಬೈಂದೂರಿನಲ್ಲಿ ಕೆ. ಗೋಪಾಲ ಪೂಜಾರಿ, ಉಡುಪಿಯಲ್ಲಿ ಪ್ರಮೋದ್ ಮಧ್ವರಾಜಾ, ಕಾಪುವಿನಲ್ಲಿ ವಿನಯಕುಮಾರ ಸೊರಕೆ ಈ ಮೂವರು ಕಾಂಗ್ರೆಸ್ಸಿನಿಂದ ಗೆದ್ದಿದ್ದರು. ಕುಂದಾಪುರದಿಂದ ಬಿಜೆಪಿಯಿಂದ ಹೊರ ಬಂದು ಪಕ್ಷೇತರರಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆದ್ದಿದ್ದರು.  ಕಾರ್ಕಳದಿಂದ ಬಿಜೆಪಿಯ ಸುನಿಲಕುಮಾರ್ ಒಬ್ಬರೇ ಗೆದ್ದಿದ್ದು.

 ಈ ಬಾರಿ ಬಿಜೆಪಿಗೆ ಈ ಜಿಲ್ಲೆಯಲ್ಲಿ ಹೆಚ್ಚು ಬಲ ಸಿಕ್ಕಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತೆ ಬಿಜೆಪಿಗೆ ಬಂದಿದ್ದು, ಅವರು ಮತ್ತೆ ಗೆಲ್ಲುವ ಮಾತು ಕೇಳಿ ಬಂದಿದೆ. ಅದೇ ರೀತಿ ಕಾಂಗ್ರೆಸ್ ನಾಯಕ, ಮಾಜಿ ಸಾಂಸದ ಜಯಪ್ರಕಾಶ ಹೆಗ್ಡೆ ಸಹ ಈಗ ಬಿಜೆಪಿ ತೆಕ್ಕೆಯಲ್ಲಿದ್ದಾರೆ. ಜೊತೆಗೆ ಇನ್ನಷ್ಟು ಕೈ ನಾಯಕರು ಕಮಲಪಾಳೆಯಕ್ಕೆ ಬರುವ ಸೂಚನೆ ಲಭ್ಯವಾಗಿದೆ. ಇದು ಬಿಜೆಪಿಯ ಶಕ್ತಿ ವೃದ್ಧಿಸಲಿದೆ.

 ಇನ್ನು ಕಾಂಗ್ರೆಸ್ ಸಹ ಇಲ್ಲಿ ತನ್ನದೇ ಆದ ನಡೆ ಇಡುತ್ತಿದ್ದು ಅಲ್ಪಸಂಖ್ಯಾತರ ಓಟುಗಳ ಕ್ರೋಢೀಕರಣದ ಜೊತೆಗೆ ಮೃದು ಹಿಂದುತ್ವ ಪ್ರತಿಪಾದನೆಗೆ ಮುಂದಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಉಡುಪಿ ಮಠಕ್ಕೆ ಕರೆ ತರುವ ತಂತ್ರ ಆರಂಭವಾಗಿದೆ. ಇದು ಎಷ್ಟರಮಟ್ಟಿಗೆ ಲಾಭ ತರಲಿದೆ ನೋಡಬೇಕು. ಜೊತೆಗೆ ಮೀನುಗಾರರನ್ನು ಸೆಳೆಯುವ ಪ್ರಯತ್ನವೂ ಆಗುತ್ತಿದೆ.

 ಉತ್ತರ ಕನ್ನಡ ಜಿಲ್ಲೆಯಲ್ಲೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಕಳಪೆ ಅನ್ನಬೇಕು. ಈ ಪಕ್ಷದಿಂದ ಗೆದ್ದಿದ್ದು ಶಿರಸಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ. ಇನ್ನು ಕಾಂಗ್ರೆಸ್ಸಿನಿಂದ ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆ, ಕುಮಟಾದಿಂದ ಶಾರದಾ ಮೋಹನಶೆಟ್ಟಿ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್ ಗೆದ್ದಿದ್ದು, ಕಾರವಾರದಿಂದ ಸತೀಶ ಸೈಲ್, ಭಟ್ಕಳದಿಂದ ಮಂಕಾಳ ವೈದ್ಯ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದರು. ಹೀಗಾಗಿ ಐದು ಸ್ಥಾನಗಳು ಕೈ ಪಕ್ಷಕ್ಕೆ ದಕ್ಕಿತ್ತು.

 ಜೆಡಿಎಸ್ ಹಿಂದಿದ್ದ ಎರಡು ಸ್ಥಾನಗಳನ್ನು ಕಳೆದುಕೊಂಡಿತ್ತು.  ಈ ಬಾರಿ ರಾಜಕೀಯ ಸಮೀಕರಣ ಬದಲಾಗಿದೆ. ಕಾಂಗ್ರೆಸ್ಸಿನಲ್ಲಿ ಎಲ್ಲವೂ ನೆಟ್ಟಗಿಲ್ಲ. ದೇಶಪಾಂಡೆ ನಾಯಕತ್ವದ ವಿರುದ್ಧ ಹೆಬ್ಬಾರ್, ಸೈಲ್, ವೈದ್ಯ, ಶಾರದಾ ಶೆಟ್ಟಿ ಆಗಾಗ ಸೆಡ್ಡು ಹೊಡೆಯುತ್ತಲೇ ಬಂದಿದ್ದು, ಇದು ಹಳಿಯಾಳ ಹುಲಿಯ ಅಸಮಾಧಾನಕ್ಕೆ ಕಾರಣವಂತೂ ಆಗಿದೆ. ಹೀಗಾಗಿ ಅವರ ಲೆಕ್ಕಾಚಾರದ ಮೇಲೆ ಕೈ ಗೆಲುವು ನಿಂತಿದೆ.

 ಇನ್ನು ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಬಹಳ ದೊಡ್ಡ ಬದಲಾವಣೆ ಆಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಹಲವು ಪ್ರಮುಖ ನಾಯಕರು ಟಿಕೆಟ್ ಮೇಲೆ ಕಣ್ಣಿಟ್ಟು ಬಿಜೆಪಿಗೆ ಬಂದಿದ್ದಾರೆ. ಯಲ್ಲಾಪುರದ ಪ್ರಮೋದ ಹೆಗಡೆ, ಕಾರವಾರದ ನಾಗರಾಜ ನಾಯಕ, ಕುಮಟಾದಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ, ಯಶೋಧರ ನಾಯ್ಕ, ಮುಂಡಗೋಡದಲ್ಲಿ ಎಲ್.ಟಿ. ಪಾಟೀಲ್, ಭಟ್ಕಳದಲ್ಲಿ ಮಾಜಿ ಶಾಸಕ ಜೆ.ಡಿ. ನಾಯ್ಕ, ಸುನಿಲ ನಾಯ್ಕ, ಈಶ್ವರ ನಾಯ್ಕ, ಹಳಿಯಾಳದಲ್ಲಿ ಮಾಜಿ ಶಾಸಕ ಸುನಿಲ ಹೆಗಡೆ ಹೀಗೆ ಹಲವು ಘಟಾನುಘಟಿಗಳು ಬಿಜೆಪಿಗೆ ಬಂದಿದ್ದಾರೆ. ಬಹುತೇಕರ ಕಣ್ಣು ಟಿಕೆಟ್ ಮೇಲಿದೆ. ಟಿಕೆಟ್ ಘೋಷಣೆಯಾದ ಮೇಲೆ ಭಿನ್ನಮತ ಸೃಷ್ಟಿಯಾದರೆ ಈ ನಾಯಕರ ಆಗಮನ ಬಿಜೆಪಿಗೆ ತೊಡಕಾಗಬಹುದು, ಇಲ್ಲದಿದ್ದರೆ ಇದು ಶಕ್ತಿಯಾಗಬಹುದು. ಇನ್ನು ಹೊನ್ನಾವರದ ಪರೇಶ ಮೇಸ್ತ ಕೊಲೆ ಮತ್ತು ತದ ನಂತರದ ವಿದ್ಯಮಾನದ ಲಾಭ ಬಿಜೆಪಿಗೆ ಆಗಲಿದೆ.

 ಜೆಡಿಎಸ್ ಒಂದು ಕಡೆ ಶಕ್ತಿ ಕಳೆದುಕೊಂಡರೂ ಇನ್ನೊಂದೆಡೆ ಈ ಪಕ್ಷಕ್ಕೂ ಬಲ ಬಂದಿದೆ. ಕಾರವಾರ ಕ್ಷೇತ್ರದಲ್ಲಿ ಬಿಜೆಪಿಯ ಆನಂದ ಅಸ್ನೋಟಿಕರ್ ಸೇರ್ಪಡೆ ಈ ಪಕ್ಷಕ್ಕೆ ಬಲ ತಂದಿದೆ. ಅದೇ ರೀತಿ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರವೀಂದ್ರ ನಾಯ್ಕ ಅವರ ಸೇರ್ಪಡೆ ಜೆಡಿಎಸ್‌ಗೆ ಲಾಭ ತರಬಲ್ಲುದು.

ಕೊಡಗು ಜಿಲ್ಲೆ   

 ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಮಡಿಕೇರಿ ಕ್ಷೇತ್ರದಲ್ಲಿ  ಅಪ್ಪಚ್ಚುರಂಜನ, ವಿರಾಜಪೇಟೆ ಕ್ಷೇತ್ರದಲ್ಲಿ ಕೆ.ಜಿ. ಭೋಪಯ್ಯ ಗೆದ್ದಿದ್ದಾರೆ. ಕಾಂಗ್ರೆಸ್ ಸರ್ಕಾರದ ಟಿಪ್ಪೂ ಜಯಂತಿ ಆಚರಣೆಯ ನಿರ್ಧಾರ ಇಲ್ಲಿ ಬಿಜೆಪಿಗೆ ಇನ್ನಷ್ಟು ಶಕ್ತಿ ತಂದಿರುವುದು ನಿಜವಾದರೂ, ಪಕ್ಷದ ಒಳ ಅತೃಪ್ತಿಯನ್ನು ಅದು ಶಮನಮಾಡಬೇಕಿದೆ. ಇನ್ನು ಜೆಡಿಎಸ್‌ನಲ್ಲೂ ಎಲ್ಲವೂ ನೆಟ್ಟಗಿಲ್ಲ. ಆದರೂ ಇದು ಮಡಿಕೇರಿ ಕ್ಷೇತದ್ರಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಬಲ್ಲದು. ಇನ್ನು ಕಾಂಗ್ರೆಸ್ ಸ್ಥಿತಿ ಉತ್ತಮವಂತೂ ಆಗಿಲ್ಲ. ಅದು ಅಭ್ಯರ್ಥಿ ಆಯ್ಕೆಯ ಮೇಲೆ ನಿಂತಿದೆ.  ವಿರಾಜಪೇಟೆಯಲ್ಲಿ  ಬಿಜೆಪಿಗೆ ಸೋಲುಣಿಸುವ ಲೆಕ್ಕದಲ್ಲಿ  ಇದೆಯಾದರೂ ಅದು ಎಷ್ಟರಮಟ್ಟಿಗೆ ಯಶ ಆದೀತು ಹೇಳಲಾಗದು. ಬಿಜೆಪಿ ಎರಡೂ ಕಡೆ ಪ್ರಬಲವಾಗಿದ್ದರೂ  ಗೆಲುವಿಗೆ ಕಳೆದ ಸಲಕ್ಕಿಂತ ಹೆಚ್ಚು ಶ್ರಮ ಹಾಕಬೇಕು ಎನ್ನುವುದು ಸತ್ಯ.

 

   

Leave a Reply