ಕರ್ಮಯೋಗಿ ಅಪ್ಪಾಸಾಹೇಬ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 15.11.2014

ಸುಮಾರು 20 ವರ್ಷಗಳ ಮುಂಚೆ ನನಗೆ ಶ್ರೀ ಅಪ್ಪಾಸಾಹೇಬರ ಮೊಟ್ಟಮೊದಲ ಪರಿಚಯವಾಯಿತು. ಒಬ್ಬ ಬುದ್ಧಿಶಾಲಿ ವಕೀಲರೆಂದು ನಾವು ಅವರನ್ನು ಕಾಣುತ್ತಿದ್ದೆವು. ಬರಬರುತ್ತ ಅನೇಕ ಕಾರಣಗಳಿಂದ ಪರಿಚಯ ಹೆಚ್ಚುತ್ತಾ ಹೋಯಿತು. ಮತ್ತು ತೀರ ಹತ್ತಿರದಿಂದ ಅವರ ಜೀವನವನ್ನು ನಿರೀಕ್ಷಿಸುವ ಅವಕಾಶ ನನಗೆ ಲಭಿಸಿತು. ವಕೀಲ ಜಿಗಜಿನ್ನಿ, ಸಂಘಚಾಲಕ ಜಿಗಜಿನ್ನಿ, ಹೀಗೇ ಏರಿಕೆಯ ಕ್ರಮದಿಂದ ಒಂದಕ್ಕಿಂತ ಇನ್ನೊಂದು ಕ್ಷೇತ್ರದಲ್ಲಿ ಅವರ ಜೀವನ ಚರಿತ್ರೆಯು ಹೆಚ್ಚು ಅಭ್ಯಾಸ ಮಾಡುವಂತಹುದಾಗಿಯೂ ಆದರಣೀಯವಾಗಿಯೂ ತೋರುತ್ತದೆ.

ವಕೀಲ ಜಿಗಜಿನ್ನಿ

ಶ್ರೀ ಅಪ್ಪಾಸಾಹೇಬರು ಬೆಳಗಾಂವಿ, ಶಹಾಪೂರ, ಹಿರೆ ಕುರುಂದವಾಡ ಮತ್ತು ಕಿರೆ ಕುರುಂದವಾಡಗಳ ನ್ಯಾಯಾಲಯಗಳಲ್ಲಿ ವಕೀಲಿ ನಡೆಸುತ್ತಿದ್ದರು. ಈ ವೃತ್ತಿಯಲ್ಲಿ ಅವರು ಅಲ್ಪಾವಧಿಯಲ್ಲಿಯೇ ಹೆಸರುವಾಸಿಯಾದರು. ವಕೀಲ ವೃತ್ತಿಯಲ್ಲಿ ಅವರದೇ ಒಂದು ವಿಶಿಷ್ಟ ರೀತಿಯಾಗಿತ್ತು. ಅವರು ಬರೆಯುವುದು ಬಹಳ ಸಂಕ್ಷಿಪ್ತವಾಗಿ, ಆದರೆ ಸರಿಯಾದ ವಿಷಯಗಳನ್ನೇ ನಮೂದಿಸುತ್ತಿದ್ದರು. ಭಾಷಣವೂ ಮಿತವಾದದ್ದು, ಆದರೆ ಮಾರ್ಮಿಕವಾಗಿರುತ್ತಿತ್ತು. ಅದರಿಂದ ನ್ಯಾಯಾಲಯದಲ್ಲಿ ಸಂತಸದ ವಾತಾವರಣವನ್ನುಂಟುಮಾಡುತ್ತಿದ್ದರು. ಪ್ರತಿಸ್ಪರ್ಧಿಯನ್ನು ಜಯಿಸುವ ರಾಮಬಾಣವೆಂದರೆ ಅವರ ವಿನೋದಪೂರ್ಣ ನಗೆ. ನ್ಯಾಯಾಲಯದಲ್ಲಿ ಪ್ರತಿಸ್ಪರ್ಧಿಯಾಗಿ ಅವರ ವಿರುದ್ಧ ನಿಲ್ಲಬೇಕಾಗಿ ಬಂದಾಗ ನಮಗೆ ಅವರ ಈ ಮುಗುಳ್ನಗೆಯಿಂದಲೇ ಭಯವಾಗುತ್ತಿತ್ತು. ಅವರು ನಗುನಗುತ್ತ ವಿನೋದವಾಗಿ ಯಾವುದೊಂದು ತರ್ಕದ ಪ್ರತಿಪಾದನೆ ನಡೆಸಿದರೆಂದರೆ ಪ್ರತಿಸ್ಪರ್ಧಿಯು ಉರುಳಿದನೆಂದೇ ತಿಳಿಯಬೇಕು.
ಕೆಲವು ವಕೀಲರಿಗೆ ಟಿಪ್ಪಣಿಗಳಿಲ್ಲದೆ ಮೊಕದ್ದಮೆಗಳನ್ನು ನಡೆಸಲಿಕ್ಕಾಗುವುದೇ ಇಲ್ಲ. ಆದರೆ ಅಪ್ಪಾಸಾಹೇಬರ ಟಿಪ್ಪಣಿಗಳೆಲ್ಲ ಅವರ ತಲೆಯಲ್ಲೇ ಇರುತ್ತಿದ್ದವು. ಕಾಗದದ ಮೇಲೆ ಬರೆಯುವುದು ತೀರ ಕಡಿಮೆ. ಅವರ ಅರ್ಜಿಗಳಾದರೂ ಬಹಳ ಚಿಕ್ಕವಾಗಿರುತ್ತಿದ್ದವು. ಬಹುತರವಾಗಿ ಒಂದೆರಡು ವಾಕ್ಯಗಳಲ್ಲೇ ಮುಗಿಸುತ್ತಿದ್ದರು. ಅಕ್ಷರವೂ ಸಣ್ಣದು. ಅವರ ಸೂಕ್ಷ್ಮಬುದ್ಧಿಯ ಪ್ರತೀಕವೇನೋ ! ಅವರ ದೃಷ್ಟಿ ಎಲ್ಲವನ್ನೂ ಸೂಕ್ಷ್ಮವಾಗಿ ನಿರೀಕ್ಷಿಸುತ್ತಿತ್ತು. ಬಾರ್‌ರೂಮಿನಲ್ಲಿ ಗೆಳೆಯರೊಡನೆ ಕೂತಾಗ ಅವರು ರಾಜಕೀಯ ವ್ಯಕ್ತಿಗಳ ಗುಣದೋಷಗಳ ಸೂಕ್ಷ್ಮ ವಿವೇಚನೆ ಮಾಡುತ್ತಿದ್ದರು. ಮತ್ತು ವಿಶೇಷ ಸಂದರ್ಭದಲ್ಲಿ ಯಾವ ವ್ಯಕ್ತಿ ಹೇಗೆ ವರ್ತಿಸುವುದೆಂಬುದನ್ನು ತರ್ಕದಿಂದ ಮೊದಲೇ ಹೇಳುತ್ತಿದ್ದರು. ಅವರ ಅಂದಾಜು ಸರಿಯಾದದ್ದನ್ನೂ ನಾವು ಅನೇಕ ಬಾರಿ ಕಂಡುಕೊಂಡಿದ್ದೇವೆ.

ಗೃಹಸ್ಥಾಶ್ರಮ ಜಿಗಜಿನ್ನಿ
ಶ್ರೀ ಅಪ್ಪಾಸಾಹೇಬರ ಗೃಹಸ್ಥಾಶ್ರಮವು ಅವರ ಜೀವನದ ಒಂದು ಉಜ್ವಲ ಅಂಗವಾಗಿದೆ. ಸಿರಿಸರಸತಿಗಳ ಯಥಾಪ್ರಮಾಣ ಸಮನ್ವಯ, ಶ್ರೀ ಸಂತತಿಯ ಸಾಹಚರ್ಯ, ಮನೆಯವರಲ್ಲಿಯ ಐಕ್ಯ ಮತ್ತು ಸಾರ್ವಜನಿಕ ಮೊದಲಾದ ದುರ್ಲಭ ಗುಣಗಳಿಂದ ಕೂಡಿದ ಅವರ ಮನೆಯೆಂದರೆ ಒಂದು ಹೃದಯಂಗಮ ನೋಟವಾಗಿದೆ. ಯಸ್ಮಿನ್ ಜೀವತಿ ಜೀವಂತಿ ಬಹವಃ ಸೋ ಜೀವತಿ(ಯಾರ ಜೀವನದಿಂದ ಬಹುಮಂದಿ ಜೀವಿಸುತ್ತಾರೋ ಅವನೇ ನಿಜವಾದ ಜೀವನ ನಡೆಸುತ್ತಾನೆ) ಎಂಬಂತೆ ಅಪ್ಪಾಸಾಹೇಬರ ಬಾಳ್ವೆ ಸಾರ್ಥಕವಾಯಿತು. ಮನೆಗೆ ಬಂದ ಯಾರನ್ನೂ ಅವರು ಬರಿಗೈಯಲ್ಲಿ ವಾಪಸ್ಸು ಕಳಿಸಲಿಲ್ಲ. ಅವರ ಮನೆಯ ಆತಿಥ್ಯವನ್ನು ಸ್ವೀಕರಿಸಿದವರ ಲೆಕ್ಕವೇ ಇಲ್ಲ. ಈ ಎಲ್ಲಾ ಕೆಲಸಗಳಲ್ಲಿ ಅವರಿಗೆ ಅವರ ಪತ್ನಿಯ ಸಹಾಯ ಸದಾ ದೊರೆಯುತ್ತಲೇ ಇತ್ತು. ಅಷ್ಟೇ ಅಲ್ಲ ಆ ಮಹಾಮಹಿಮಳಿಂದಲೇ ಅವರಿಗೆ ಇದೆಲ್ಲ ಸಾಧ್ಯವಾಯಿತೆಂದು ಹೇಳಿದರೆ ತಪ್ಪಿಲ್ಲ.

 (ಸಶೇಷ)

 

   

Leave a Reply