ಕಳ್ಳ, ಹುಚ್ಚ ಎಂದು ಜರಿದವರ ಮುಂದೆ ಹೀರೋ ಆಗಿ ನಿಂತ ಯುವಕ ಇದು ಅರೆಕಾ ಟೀ ಕಂಡುಹಿಡಿದವನ ಕಥೆ

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ.

ಗ್ರಹಚಾರವೆನ್ನುವುದು ಯಾರಿಗೆ ಯಾವ ಸಮಯಕ್ಕೆ ಹೇಗೆ ಬರುವುದು ಎಂದು ಯಾರಿಗೂ ತಿಳಿಯದು. ಆದರೆ ಅದಕ್ಕೆ ಅಂಜದೆ ಮುನ್ನಡೆದರೆ ಮಾತ್ರ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಿ ಇನ್ನೊಬ್ಬರಿಗೆ ಮಾದರಿಯಾಗುವುದಕ್ಕೆ ಸಾಧ್ಯ. ಇಂತಹ ಕೆಟ್ಟ ಗ್ರಹಚಾರಗಳು ಎಲ್ಲರ ಬದುಕಿನಲ್ಲೂ ಬಂದು ಹೋಗಿರುತ್ತವೆ. ಅಂತಹ ಗ್ರಹಚಾರವನ್ನೂ ಕೆಲವರು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿ ಏನಾದರೂ ಸಾಧಿಸುತ್ತಾರೆ. ಅಂತಹ ಸಾಧಕರಲ್ಲಿ ನಮ್ಮ ಕರ್ನಾಟಕದ ನಿವೇದನ ನಿಂಡಿ ಕೂಡ ಒಬ್ವರು.

23.10.1987ರಲ್ಲಿ ನಾಗರಾಜ್ ಮತ್ತು ಸುಮತಿಯವರ ಎರಡನೇ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯಲ್ಲಿ ಜನಿಸಿದವರು ನಿವೇದನ ನಿಂಡಿ. ಇವರ ತಂದೆಯವರ ಬಳಿ ಒಂದು ಖಾಸಗಿ ಬಸ್ ಇದ್ದುದರಿಂದ ಇವರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಇವರ ತಂದೆ ಊರಿನಲ್ಲಿ ಬೇರೆಯವರಿಗೂ ಸಹಾಯಮಾಡುತ್ತಾ ಎಲ್ಲೆಡೆ ಗೌರವ ಗಳಿಸಿದ್ದರು. ಹೀಗಿರುವಾಗ ನಿವೇದನರವರು 5ನೇ ತರಗತಿಯಲ್ಲಿ ಓದುತ್ತಿರುವ ಸಮಯದಲ್ಲಿ ಒಂದು ಜಾಗದ ವಿಷಯಕ್ಕಾಗಿ ಇವರ ತಂದೆಯ ಕೊಲೆಯಾಯಿತು. ನಂತರ ಇವರ ಸುಂದರವಾದ ಸಂಸಾರ ಅನೇಕ ಕಷ್ಟಗಳಿಗೆ ಗುರಿಯಾಗಿ ನಲುಗಿಹೋಯಿತು. ಇವರ ತಂದೆಯ ಸಂಬಂಧಿಕರು ಹಾಗೂ ಸ್ನೇಹಿತರು ಮನೆಗೆ ಬಂದು ಇವರ ತಾಯಿಯನ್ನು ನಿಮ್ಮ ಯಜಮಾನರು ನಮಗೆ 50000 ಕೊಡಬೇಕು, 30000 ಬಾಕಿ ಕೊಡಬೇಕು ಎಂದು ಪೀಡಿಸಲು ಶುರುಮಾಡಿದರು. ಆಗ ಸುಮತಿಯವರು ಬೇರೆ ದಾರಿಕಾಣದೆ ಹಣಕ್ಕಾಗಿ ಗೌರವವನ್ನು ಕಳೆದುಕೊಳ್ಳಬಾರದೆಂದು ತಮ್ಮ ಬಳಿ ಇದ್ದ ಬಸ್ ಹಾಗೂ ಎಲ್ಲಾ ಒಡವೆಗಳನ್ನು ಮಾರಾಟಮಾಡಿ ಸುಳ್ಳು ಹೇಳಿದ ಸಂಬಂಧಿಕರಿಗೆ ಹಾಗೂ ಗಂಡನ ಸ್ನೇಹಿತರಿಗೆ ಹಣವನ್ನು ನೀಡಿದರು. ಇಷ್ಟಾದರೂ ಅವರುಗಳ ಕಿರುಕುಳಗಳು ಕಡಿಮೆಯಾಗಲಿಲ್ಲ.

ಇವರ ಮುಂದಿನ ಜೀವನಕ್ಕೆ ಇದ್ದ ಆಸ್ತಿ ಎಂದರೆ ಒಂದು ಮನೆ. ಒಂದೂವರೆ ಎಕರೆ ಭೂಮಿ. ಆ ಭೂಮಿಯಲ್ಲಿ ಒಂದು ವರ್ಷದ ಸಣ್ಣಸಣ್ಣ ಅಡಕೆ ಗಿಡ ಮತ್ತು 50 ತೆಂಗಿನಮರಗಳು ಹಾಗೂ ಒಂದು ಟೈಲರಿಂಗ್ ಮಿಷನ್. ಸುಮತಿಯವರು ತನ್ನ ಎರಡು ಮಕ್ಕಳನ್ನು ಓದಿಸಲು ಟೈಲರಿಂಗ್‌ಅನ್ನು ಶುರುಮಾಡಿದರು. ಹೊಟ್ಟೆಗಿದ್ದರೆ ಬಟ್ಟೆಗಿರಲಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿರಲಿಲ್ಲ ಎನ್ನುವ ಪರಿಸ್ಥಿತಿಯಾಗಿತ್ತು. ಪ್ರತಿನಿತ್ಯ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಸಮಸ್ಯೆಉಂಟಾದರೂ ಯಾರ ಮುಂದೆಯೂ ಕೈಚಾಚದೆ ಕಷ್ಟವನ್ನು ನುಂಗಿ ಬದುಕಿದರು.

ಇವರ ಬಡತನವನ್ನು ನೋಡಿದ ಊರಿನ ಜನರು, ಸಂಬಂಧಿಕರು ಯಾರೂ ಇವರಿಗೆ ಬೆಲೆ ಕೊಡುತ್ತಿರಲಿಲ್ಲ. ಊರಿನ ಎಲ್ಲಾ ಹಬ್ಬ ಹರಿದಿನಗಳಿಂದಲೂ ಇವರನ್ನು ಹೊರಗಿಡಲಾಯಿತು. ನಿವೇದನ ಚಿಕ್ಕವಯಸ್ಸಿನಲ್ಲಿ ಸ್ವಲ್ಪ ಹುಡುಗಾಟದಿಂದ ಇದ್ದುದರಿಂದ ಊರಿನ ಜನ, ಸಂಬಂಧಿಕರೆಲ್ಲರೂ ಈ ಹುಡುಗ ಮುಂದೆ ಕಳ್ಳನಾಗುತ್ತಾನೆ ಎಂದು ಜರಿಯುತ್ತಿದ್ದರು. ಯಾರ ಕೈಲಾದರೂ ಮೊಬೈಲ್ ನೋಡಿ ನನಗೂ ತೋರಿಸಿ ಎಂದು ಕೇಳಿದರೆ, ಹೋಗೋ ತಗೋಳೊಕ್ಕೆ ಯೋಗ್ಯತೆ ಇಲ್ಲಾಂದ್ರೂ ಮೊಬೈಲ್ ನೋಡ್ತಾನಂತೆ ಎಂದು ಅಣಕಿಸುತ್ತಿದ್ದರು. ಮನೆಯ ಮುಂದೆ ಯಾರ‌್ದಾದ್ರೂ ಬೈಕ್ ನಿಂತಿದ್ದರೆ, ಆಸೆ-ಕುತೂಹಲದಿಂದ ಬೈಕ್‌ಹತ್ತಿರ ಹೋಗಿ ಮುಟ್ತಾ ಇದ್ರೆ ಅವನನ್ನು ನಾಯಿಯಂತೆ ಅಲ್ಲಿಂದ ಓಡಿಸಿದ ಉದಾಹರಣೆಗಳು ಇವೆ. ಸ್ನೇಹಿತರು ಕೂಡ ಇವನನ್ನು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಆದರೂ ನಿವೇದನ ಇವೆಲ್ಲವನ್ನೂ ನಕಾರಾತ್ಮಕವಾಗಿ ತೆಗೆದುಕೊಳ್ಳದೆ ಸಕಾರಾತ್ಮಕವಾಗಿ ತೆಗೆದುಕೊಂಡು ಆಲೋಚಿಸುತ್ತಿದ್ದನು. ಬೇರೆ ಹುಡುಗರು ಮೊಬೈಲ್ ತೋರಿಸಿ ಅಂದ್ರೆ ಅವರ ಕೈಗೆ ಕೊಡ್ತಾರೆ, ಬೈಕ್ ಮೇಲೆ ಹತ್ತಿದ್ರೂನೂ ಏನೂ ಮಾಡೋಲ್ಲ , ನನ್ನನ್ನು ಮಾತ್ರ ಏಕೆ ಹೀಗೆ ಮಾಡುತ್ತಾರೆ, ನಾನು ಬಡವ ಅಂತಲೇ? ನಾನೂ ಇವರೆದುರು ಶ್ರೀಮಂತನಾಗಿ ತಲೆ ಎತ್ತಿ ನಿಲ್ಲಬೇಕು ಎಂದುಕೊಂಡನು.

ಬೆಳಿಗ್ಗೆ 4ಗಂಟೆಗೆ ಎದ್ದು ತಾಯಿ ಹೊಲಿಯುತ್ತಿದ್ದ ಬಟ್ಟೆಗೆ ಹುಕ್ಸ್ ಹಾಕಿ, ಅಮ್ಮ-ಅಣ್ಣನ ಜೊತೆ ಜಮೀನಿಗೆ ಹೋಗಿ ಬಾವಿಯಿಂದ ನೀರನ್ನು ಸೇದಿ ಎಲ್ಲಾ ಗಿಡಗಳಿಗೆ ನೀರನ್ನು ಹಾಕಿ, ಮನೆಗೆ ಬಂದು ಊಟ ಇದ್ದರೆ ತಿಂದು ಶಾಲೆಗೆ ಹೋಗುತ್ತಿದ್ದರು. ಹೀಗೆ ಮಂಡಗದ್ದೆಯಲ್ಲಿ 2ನೇ ಪಿಯುಸಿಯವರೆಗೆ ಓದಿ ಫಾರ್ಮಸಿ ಓದಲು ಶಿವಮೊಗ್ಗದ ಕಾಲೇಜಿಗೆ ಸೇರಿದರು. 2ನೇ ವರ್ಷದ ಪದವಿಯಲ್ಲಿರಬೇಕಾದರೆ ಸಣ್ಣಸಣ್ಣ ಕೆಲಸಗಳನ್ನು ಮಾಡಿ ಅಲ್ಪಸ್ವಲ್ಪ ಗಳಿಸಿ ಮನೆಯ ಕಷ್ಟಕ್ಕೆ ನೆರವಾಗುತ್ತಿದ್ದರು. ಜನರ ನಿರಂತರ ಅವಮಾನದಿಂದ ಬೇಸತ್ತಿದ್ದ ಇವರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ನಾಟಿಔಷಧಿಗಳ ಕುರಿತು ಸಂಶೋಧನೆ ಮಾಡಲು ಶುರುಮಾಡಿದರು. ಸಂಸ್ಕೃತಿಯ ಹಿಂದೆ ವಿಜ್ಞಾನವಿದೆ ಎಂದು ವಿಷಯ ಪ್ರಸ್ತುತಪಡಿಸಿ ಕಾಲೇಜಿನಲ್ಲಿ ಪ್ರಶಂಸೆಗೆ ಪಾತ್ರರಾದರು. ನಾಲ್ಕು ವರ್ಷದ ಫಾರ್ಮಸಿಯನ್ನು ಮುಗಿಸಿದ ನಿವೇದನರವರು ಹೆಚ್ಚಿನ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಗೆ ಹೋಗಲು ಕೆನರಾಬ್ಯಾಂಕ್‌ನಲ್ಲಿ ಸಾಲ ಕೇಳಿದಾಗ ಅವರು ಕೊಡಲು ಒಪ್ಪಿದರಾದರೂ, ಮುಂದೆ ಊರಿನವರ ಚಾಡಿಮಾತುಗಳನ್ನು ಕೇಳಿ ಸಾಲ ಕೊಡಲಿಲ್ಲ. ಮುಂದೆ ನಿವೇದನರವರಿಗೆ ಬೇರೆ ದಾರಿಕಾಣದೆ ಶಿವಮೊಗ್ಗದಲ್ಲಿರುವ ಎಸ್‌ಬಿಐ ಬ್ಯಾಂಕ್‌ನವರನ್ನು ಕೇಳಿಕೊಂಡಾಗ ಅವರು ಇವರಿಗೆ ಸಾಲ ಕೊಟ್ಟು 2009ರಲ್ಲಿ ಆಸ್ಟ್ರೇಲಿಯಾಕ್ಕೆ ಕಳುಹಿಸಿದರು. ಇಲ್ಲಿಂದ ನಿವೇದನರ ಬದುಕು ಬದಲಾಯಿತು. ಆಸ್ಟ್ರೇಲಿಯಾದಲ್ಲಿ ಒಂದು ವರ್ಷದ ಕೋರ್ಸನ್ನು ಮುಗಿಸಿದ ಬಳಿಕ ಇವರಿಗೆ ಅಲ್ಲಿಯೇ ಬಿಸಿನೆಸ್ ಡೆವಲಪ್‌ಮೆಂಟ್ ಕೆಲಸ ಸಿಕ್ಕಿತು. ಈ ಕೆಲಸದ ನಿಮಿತ್ತ ನ್ಯೂಜಿಲ್ಯಾಂಡ್, ಬ್ಯಾಂಕಾಕ್, ಹಾಕಾಂಗ್, ದುಬೈ ಮುಂತಾದ ದೇಶಗಳಲ್ಲಿ ಎರಡೂವರೆ ವರ್ಷ ಕೆಲಸಮಾಡಿ, ಅವಮಾನಿಸಿದವರ ಮುಂದೆ ತಲೆಎತ್ತಿ ಇನ್ನೂ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ತನ್ನೂರಿಗೇ ವಾಪಸ್ಸಾದರು.

2013ರಲ್ಲಿ ಮಿಸ್ಟಿಕ್ ಅರೋಮ್ಯಾಟಿಕ್ಸ್ ಎಂಬ ನ್ಯಾಚುರಲ್ ಪರ್ಫ್ಯೂಮ್ ಕಂಪನಿಯನ್ನು ಮಂಡಗದ್ದೆಯಲ್ಲಿ ಶುರುಮಾಡಿದರು. ಇಲ್ಲಿ ಲೆಮನ್ ಆಯಿಲ್, ರೋಸ್ ಆಯಿಲ್‌ಅನ್ನು ಕೆಮಿಕಲ್ ಮುಕ್ತವಾಗಿ ತಯಾರಿಸುತ್ತಿದ್ದರು. ಆದರೆ ಇದು ವಿಫಲವಾಯಿತು. ಇತ್ತ ಊರಿನ ಜನ ಮತ್ತೆ ಆಡಿಕೊಳ್ಳಲು ಶುರುಮಾಡಿದರು. ನಿವೇದನ ಇದಕ್ಕೆಲ್ಲ ಅಂಜದೆ ತಾವು ತಯಾರಿಸುತ್ತಿದ್ದ ಆಯಿಲ್ ಪರ್ಫ್ಯೂಮ್‌ನಿಂದ ಕ್ಯಾಂಡಲ್‌ಗಳನ್ನು ತಯಾರಿಸಲು ಶುರುಮಾಡಿದರು ಆದರೆ ಇದು ಸಫಲ ಆಗದೆ ಅಪಾರ ನಷ್ಟವನ್ನು ಅನುಭವಿಸಬೇಕಾಯಿತು. ಮತ್ತೆ ಛಲಬಿಡದೆ ಬಾತ್‌ರೂಮ್ ಫ್ರೆಶ್‌ನರ್ ಮತ್ತು ಕಾರ್‌ಫ್ರೆಶ್‌ನರ್‌ಗಳನ್ನು ತಯಾರಿಸಲು ಶುರುಮಾಡಿದರು. ಆದರೆ ಇದೂ ಕೂಡ ಕೈಹತ್ತಲಿಲ್ಲ.

ನಿವೇದನರವರು ಯಾವ ಸಮಯದಲ್ಲಿ ಬಾತ್‌ರೂಮ್ ಫ್ರೆಶ್‌ನರ್ ಹಾಗೂ ಕಾರ್‌ಫ್ರೆಶ್‌ನರ್‌ಗಳನ್ನು ಉತ್ಪಾದಿಸಲು ಆರಂಭಿಸಿದರೋ ಆಗ ದೊಡ್ಡ ದೊಡ್ಡವರನ್ನು ಭೇಟಿಮಾಡಲು ಹೋಗುತ್ತಿದ್ದರು. ಹೋದಂತಹ ಸಮಯದಲ್ಲಿ ಅವರಿಗೆ ತಮ್ಮ ವಿಸಿಟಿಂಗ್ ಕಾರ್ಡ್‌ಗಳನ್ನು ಕೊಟ್ಟಾಗ ಅವರು ಅದನ್ನು ಪೊಟ್ಟಣ ಕಟ್ಟಿ ಆಟವಾಡುತ್ತಾ ಮಾತನಾಡುತ್ತಿದ್ದರು. ಇದರಿಂದ ಬೇಸರಗೊಂಡ ನಿವೇದನರವರು ಮತ್ತೊಂದು ಉಪಾಯಮಾಡಿ ಪರ್ಫ್ಯೂಮ್ ವಿಸಿಟಿಂಗ್ ಕಾರ್ಡ್‌ಗಳನ್ನು ಮಾಡಲು ಆರಂಭಿಸಿದರು. ಪರ್ಫ್ಯೂಮ್ ವಿಸಿಟಿಂಗ್ ಕಾರ್ಡ್‌ನ ವಿಶೇಷತೆಯೇನೆಂದರೆ ಎರಡು ವರ್ಷದವರೆಗೆ ಸುಗಂಧವನ್ನು ನೀಡುತ್ತಿರುತ್ತದೆ.

ನಿವೇದನರವರು ಯಾರಿಗಾದರೂ ತಮ್ಮ ವಿಸಿಟಿಂಗ್ ಕಾರ್ಡ್ ನೀಡಿದಾಗ ಅವರು ಕೇಳುತ್ತಿದ್ದ ಒಂದು ಪ್ರಶ್ನೆಯೆಂದರೆ : ಈ ವಿಸಿಟಿಂಗ್ ಕಾರ್ಡ್ ಎಲ್ಲಿ ಮಾಡಿಸಿದ್ದು, ಮತ್ತು ನನಗೂ ನಮ್ಮ ಕಂಪೆನಿಗೂ ಇಂತ ವಿಸಿಟಿಂಗ್ ಕಾರ್ಡ್ ಹಾಗೂ ಬ್ರೋಷರ್‌ಗಳನ್ನು ಮಾಡಿಕೊಡಿ ಎಂದು. ಹೀಗೆ ಹೋದಲ್ಲೆಲ್ಲಾ ಜನರು ಇವರ ನ್ಯಾಷನಲ್ ಪರ್ಫ್ಯೂಮ್‌ನ ಸುಗಂಧಕ್ಕೆ ತಲೆಬಾಗಿದರು ಮತ್ತು ಫ್ರೆಶ್‌ನರ್‌ಗಳಿಗೂ ತುಂಬಾ ಬೇಡಿಕೆ ಶುರುವಾಯಿತು. ಈಗ ನಿವೇದನರವರು ಹೋಂಡಾ, ಟಾಟಾ, ಟೊಯಾಟೋ ಇನ್ನೂ ಮುಂತಾದ ಕಾರ್ ಕಂಪನಿಗಳಿಗೆ ಅವರದ್ದೇ ಹೆಸರನ್ನು ಹಾಕಿ ಕೆಮಿಕಲ್ ಫ್ರಿ ಏರ್‌ಫ್ರೆಶ್‌ನರ್‌ಅನ್ನು ಒದಗಿಸುತ್ತಿದ್ದಾರೆ. ಇದರ ಜೊತೆಗೆ ಪರ್ಫ್ಯೂಮ್ ವಿಸಿಟಿಂಗ್ ಕಾರ್ಡ್‌ಗೂ ಬಹಳ ಬೇಡಿಕೆ ಬಂತು. ಇಂದು ಇವರಲ್ಲಿ ವಿಸಿಟಿಂಗ್ ಕಾರ್ಡ್, ಬ್ರೋಷರ್ ಮಾಡಿಸಿಕೊಳ್ಳಬೇಕೆಂದರೆ ಕನಿಷ್ಠ 3ತಿಂಗಳಾದರೂ ಕಾಯಬೇಕು ಎಂಬಂತಾಗಿದೆ.

ಇದರ ಮಧ್ಯದಲ್ಲಿಯೇ, ಅಂದರೆ 2015ರಲ್ಲಿ ನಿವೇದನ ಅವರು ಬಹಳಷ್ಟು ಸಂಶೋಧನೆ ಮಾಡಿ ಅಡಕೆ ಚಹಾವನ್ನು ಕಂಡುಹಿಡಿದರು. ಆರೋಗ್ಯಕ್ಕೆ ಒಳ್ಳೆಯದೆಂಬ ಪ್ರಚಾರವನ್ನು ಶುರುಮಾಡಿದರು. ಆದರೆ ಇವರ ಮಾತನ್ನು ಕೇಳಿದ ಜನ ನಿವೇದನ ಒಬ್ಬ ಹುಚ್ಚ,, ತಲೆತಿರುಕ ಎಂದೆಲ್ಲ ಮಾತನಾಡಲು ಆರಂಭಿಸಿದರು. ಏಕೆಂದರೆ ಆಗ ಸುಪ್ರೀಂಕೋರ್ಟ್‌ನಲ್ಲಿ ಅಡಕೆ ವಿಷ, ಹಾನಿಕಾರಕ ಅದನ್ನು ನಿಷೇಧಿಸಬೇಕೆಂಬ ವಾದವೊಂದು ನಡೆಯುತ್ತಿತ್ತು. ಆದರೆ ನಿವೇದನ ಅದು ವಿಷವಲ್ಲ, ಅಮೃತವೆಂದು ಸಾಧಿಸಿ ತೋರಿಸಿದರು. ಮೊದಮೊದಲು ಹಾಸ್ಯಾಸ್ಪದಕ್ಕೆ ಗುರಿಯಾಯಿತಾದರೂ ಇಂದು ಅದೇ ಅಡಕೆ ಚಹಾ ‘ಅರೆಕಾ ಟೀ’ ಎಂಬ ಹೆಸರಿನಲ್ಲಿ ಹತ್ತಾರು ದೇಶಗಳಲ್ಲಿ ಮಾರಾಟವಾಗುತ್ತಿದೆ. ಇಂದು ವಿಶ್ವದಲ್ಲೇ ಅರೆಕಾ ಟೀ ವರ್ಲ್ಡ್ ಮಾರ್ಕ್ ಆಗಿ ಬೆಳೆದು ನಿಂತಿದೆ.

ಒಟ್ಟಿನಲ್ಲಿ ಇಚ್ಛಾಶಕ್ತಿ, ಕ್ರಿಯಾಶಕ್ತಿ ಇದ್ದರೆ ಎಂತಹವರಾದರೂ ಏನನ್ನಾದರೂ ಸಾಧಿಸಬಹುದೆಂಬ ಮಾತನ್ನು ನಿವೇದನರವರು ಸತ್ಯವಾಗಿಸಿದ್ದಾರೆ. ಇಂತಹ ಯಶಸ್ವಿ ಉದ್ಯಮಿಗೆ ನಮ್ಮದೊಂದು ಸಲಾಮ್ ಇರಲಿ.

   

Leave a Reply