ಕಷ್ಟ ಬಂದಿತು-ಕೆಲಸ ಹೋಯಿತು

ಚಂದ್ರಶೇಖರ ಭಂಡಾರಿ - 0 Comment
Issue Date : 23.04.2016

-ಚಂದ್ರಶೇಖರ ಭಂಡಾರಿ

ಸಾಧುರಾಮ್ ಅವರ ಈ ಹಗರಣದಿಂದಾಗಿ ಪೊಲೀಸರು ತುಂಬ ಎಚ್ಚೆತ್ತುಕೊಂಡರು. ಅಮೀನಾಬಾದ್ ಪಾರ್ಕ್‌ನಲ್ಲಿ ಸತ್ಯಾಗ್ರಹ ನೋಡಲು ಯಾರೂ ಸೇರುವಂತಿಲ್ಲ ಎಂಬ ಜಾಹಿರಾತನ್ನು ಅವರು ಪ್ರಕಟಿಸಿದರು. ಸುತ್ತಮುತ್ತ ಪ್ರದೇಶದಲ್ಲೂ ಯಾರೂ ಗುಂಪುಗೂಡುವಂತಿಲ್ಲ ಎಂದು ಈ ಜಾಹಿರಾತಿನಲ್ಲಿ ತಿಳಿಸಲಾಯಿತು. ಪಾರ್ಕ್‌ನ ನಾಲ್ಕೂ ದಿಕ್ಕುಗಳಲ್ಲಿ ಬೇಲಿಯಂತೂ ಇದ್ದೇ ಇತ್ತು. ಮೂರನೇ ದಿನದ ಸತ್ಯಾಗ್ರಹದ ಸಂದರ್ಭದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆ ದಿನ ಸತ್ಯಾಗ್ರಹದ ನೇತೃತ್ವ ವಹಿಸಲಿದ್ದವರು, ಲಖ್ನೋದ ಗೋಮತಿ ಪಾರ್ಕ್ ಪ್ರದೇಶದ ಉಸ್ತುವಾರಿ ಪ್ರಚಾರಕರಾಗಿದ್ದ ಶ್ರೀ ಶಿವಪ್ರಸಾದ ಅವರು. (ಮುಂದೆ ದಿಲ್ಲಿಯಲ್ಲಿನ ಸಂಘ ಕಾರ್ಯಾಲಯದ ಪ್ರಮುಖರಾಗಿ ಹೊಣೆ ನಿರ್ವಹಿಸುತ್ತಿದ್ದವರು) ಪೊಲೀಸರು ಮಾಡಿದ್ದ ಬಂದೋ
ಬಸ್ತ್‌ನಿಂದಾಗಿ ದಾರಿ ಹುಡುಕುವುದು ಹೇಗೆ ಎಂಬ ಬಗ್ಗೆ ಪ್ರಮುಖ ಕಾರ್ಯಕರ್ತರಲ್ಲಿ ವಿಚಾರ ವಿನಿಮಯ ನಡೆಯಿತು. ಮೊದಲು ಬಂದಿದ್ದ ಸಲಹೆಯೆಂದರೆ ಸತ್ಯಾಗ್ರಹ ಸ್ಥಾನ ಬದಲಿಸೋಣ ಎಂದು. ಆದರೆ ಪೊಲೀಸರು ಬಂದೋಬಸ್ತ್ ಏನೇ ಮಾಡಿರಲಿ, ಜನರಂತೂ ಸತ್ಯಾಗ್ರಹ ನೋಡಲು ಅಮೀನಾಬಾದ್ ಪಾರ್ಕ್‌ಗೆ ಬಂದೇ ಬರುತ್ತಾರೆ. ಅಲ್ಲಿ ಸತ್ಯಾಗ್ರಹ ನಡೆಯದೇ ಹೋದಲ್ಲಿ ಜನರಿಗೆ ಸಂಘದ ಮೇಲಿನ ಭರವಸೆ ಕಳೆದು ಹೋಗುತ್ತದೆ. ಅದಕ್ಕಾಗಿ ಶತಾಯ ಗತಾಯ ಸತ್ಯಾಗ್ರಹ ಮಾಡುವುದು ಅಲ್ಲೇ ಎಂದು ಅಂತಿಮವಾಗಿ ನಿರ್ಧರಿಸಲಾಯಿತು.
ಆ ದಿನ ಪ್ರಾತಃಕಾಲ ಶ್ರೀ ಶಿವಪ್ರಸಾದ ಮತ್ತು ಅವರ ಸಹಕಾರಿಯಾಗಿ ಸತ್ಯಾಗ್ರಹದ ನಾಯಕತ್ವ ವಹಿಸಲಿದ್ದ ಶ್ರೀ ಬಲದೀಪ ಚಂದ್ ಅವರು ಸರ್ವೇಕ್ಷಣೆಗಾಗಿ ಪಾರ್ಕ್‌ಗೆ ಹೋದರು. ಅಲ್ಲೊಂದು ಕಡೆ ಪಂಜಾಬ್ ಮತ್ತು ಸಿಂಧ್‌ದಿಂದ ಬಂದಿದ್ದ ನಿರಾಶ್ರಿತರ ಡೇರೆಗಳಿದ್ದವು. ಅಲ್ಲಿಂದ ಪಾರ್ಕ್ ಒಳಗೆ ನುಸುಳಲು ಅವಕಾಶವಿರುವುದು ಅವರಿಗೆ ಗೋಚರಿಸಿತು. ಸರಿ, ಆ ದಿನದ ತಂಡದಲ್ಲಿ ಸತ್ಯಾಗ್ರಹಿಗಳಾಗಬೇಕಾದ 45ಮಂದಿಗೆ ಈ ಬಗ್ಗೆ ಸೂಚನೆ ಹೋಯಿತು: ‘‘ಹೇಗಾದರೂ ಮಾಡಿ ನೆಗೆದು, ಐದು ಘಂಟೆಗೆ ಮೊದಲು ಪ್ರತ್ಯೇಕ ಪ್ರತ್ಯೇಕವಾಗಿ ಪಾರ್ಕ್ ಒಳಗೆ ಸೇರಿಬಿಡಿ. ಸರಿಯಾಗಿ ಐದು ಘಂಟೆಗೆ ಸೀಟಿ ಕೇಳಿಸುತ್ತದೆ. ಆಗ ಒಟ್ಟು ಬಂದು ಸೇರಿ’’.
ಪೊಲೀಸರ ಘೋಷಣೆಯ ಕಾರಣದಿಂದಾಗಿ ಅಂದು ಜನರು ಸಹ ಅತಿ ಕುತೂಹಲದಿಂದಲೇ ಪಾರ್ಕ್ ಒಳಗೆ ಸೇರಿ ಅಲ್ಲಲ್ಲಿ ಗುಂಪುಕೂಡಿ ಸಮಯಕ್ಕಾಗಿ ಕಾಯುತ್ತಿದ್ದರು. ಸಂಜೆ ಐದು ಘಂಟೆಗೆ ಸತ್ಯಾಗ್ರಹ ಎಂಬ ಮಾಹಿತಿಯಂತೂ ಮೊದಲೇ ಬಹಿರಂಗವಾಗಿತ್ತು. ಪೊಲೀಸರು ಮೈಯೆಲ್ಲಾ ಕಣ್ಣಾಗಿ ಕಾವಲು ನಡೆಸುತ್ತಿದ್ದರು. ಪಾರ್ಕ್ ನಲ್ಲಿದ್ದವರೆಲ್ಲರದೂ ಕಣ್ಣುಗಳು ಗಡಿಯಾರದ ಮುಳ್ಳುಗಳ ಮೇಲೆ. ಐದು ಘಂಟೆಗೆ ಒಂದು ನಿಮಿಷವಿರುವಾಗ ಶಿವಪ್ರಸಾದ ಡೇರೆಗಳ ಹಿಂದೆ ತಲಪಿ ಅಲ್ಲಿ ಇಲ್ಲಿ ನುಸುಳುತ್ತ ಮೈದಾನ ತಲುಪಿದರು. ಕೇಂದ್ರ ಪ್ರದೇಶಕ್ಕೆ ತಲುಪಿದಂತೆಯೇ ಅವರು ಜೋರಾಗಿ ಸೀಟಿ ಬಾರಿಸಿದುದು ಕೇಳಿಸಿತು. ಆ ಕೂಡಲೇ ಪೊಲೀಸರು ಅವರಿದ್ದಲ್ಲಿ ಓಡೋಡಿ ಬಂದರು. ಈ ಗಡಿಬಿಡಿಯಲ್ಲಿ ಸತ್ಯಾಗ್ರಹಿಗಳೂ ಅಲ್ಲಲ್ಲಿಂದ ತೊಪತೊಪನೆ ನೆಗೆದು ಹಾರಿ ಅಲ್ಲಿಗೆ ತಲುಪಿದರು. ಪ್ರಾರ್ಥನೆ ಆರಂಭವಾಗಿಯೇ ಬಿಟ್ಟಿತು. ಆದರೆ ಪೊಲೀಸರೂ ಬಿಡಲಿಲ್ಲ. ಎಲ್ಲರನ್ನೂ ದಬ್ಬಿ ವಾಹನದೊಳಗೆ ತುಂಬಿದರು. ವಾಹನ ಠಾಣೆ ಕಡೆ ಓಡಿತು. ಜನರ ಕಣ್ಣೆದುರೇ ಇದೆಲ್ಲಾ ನಡೆಯಿತು. ಒಟ್ಟಿನಲ್ಲಿ ಪೊಲೀಸರ ಬಿಗಿ
ಬಂದೋಬಸ್ತ್‌ನಲ್ಲೂ ಯೋಜನೆಯಂತೆ, ಮೊದಲೇ ಘೋಷಿಸಿದಂತೆ ಸತ್ಯಾಗ್ರಹ ನಡೆಯಿತು. ಇದನ್ನು ಕಂಡ ಜನರ ಉತ್ಸಾಹ ಉಕ್ಕಿ ಹರಿದು ಅವರಿಂದ ಘೋಷಣೆಗಳು ಮೊಳಗಿದವು. ಮುಂದೆ ಹಲವು ದಿನಗಳವರೆಗೆ ನಗರದಲ್ಲೆಲ್ಲ ಜನರ ಚರ್ಚೆಗೆ ಅದೇ ಗ್ರಾಸ.
ಉದಾರ ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಸರ್ವಸಾಮಾನ್ಯವಾಗಿ ಪೊಲೀಸರ ವ್ಯವಹಾರ ಸಭ್ಯ ಮತ್ತು ಶಾಂತರೀತಿಯದೇ ಆಗಿತ್ತು. ಒಂದೆರಡು ಅತ್ಯಾಚಾರದ ಉದಾಹರಣೆಗಳು ನಡೆದಿರುವುದಾಗಿ ವರದಿಯಾಗಿರುವುದು ಮುಂಬಯಿ ವಿಭಾಗದಲ್ಲಿ ಮಾತ್ರ. ಅಲ್ಲಿ ಮಧು ಓಕ್ ಎಂಬ ಓರ್ವ ಸ್ವಯಂಸೇವಕನಿಗೆ ಕರಪತ್ರಗಳನ್ನು ಹಂಚಿದುದಕ್ಕಾಗಿ ಠಾಣೆಗೆ ಒಯ್ದು ಚೆನ್ನಾಗಿ ಥಳಿಸಲಾಗಿತ್ತು. ಅದೇ ರೀತಿಯಲ್ಲಿ ಏನೂ ಫಾಟಕ್ ಎಂಬೋರ್ವನಿಗೆ ಅದೇ ಕಾರಣಕ್ಕಾಗಿ ವಿದ್ಯುತ್ ಶಾಕ್ ಶಿಕ್ಷೆ ವಿಧಿಸಲಾಗಿತ್ತು. ಠಾಣೆಯಲ್ಲಿ ಚೆನ್ನಾಗಿ ಏಟು ತಿಂದ ಇನ್ನೋರ್ವನು ಗಂಗಾರಾಮ್ ಸಲ್ವಲಕರ್ ಎಂಬವನು. ಆದರೆ ಎಲ್ಲ ಪ್ರಸಂಗಗಳಲ್ಲೂ ಸ್ವಯಂಸೇವಕರನ್ನು ಮಾನಸಿಕವಾಗಿ ದುರ್ಬಲಗೊಳಿಸುವುದರಲ್ಲಿ ಪೊಲೀಸರು ಅಸಫಲರಾಗಿದ್ದುದೂ ಅಷ್ಟೇ ನಿಜ.
ಅಷ್ಟಾದರೂ ಮಹಾರಾಷ್ಟ್ರದಲ್ಲಿನ ಈ ಕೆಲವು ಉದಾಹರಣೆಗಳು ಕೇವಲ ಅಪವಾದ ಮಾತ್ರ ಎನ್ನಬಹುದು. ಸತ್ಯಾಗ್ರಹಿಗಳ ಸಾಹಸ, ಉತ್ಸಾಹ ಮತ್ತು ಅನುಶಾಸನದಿಂದ ಪೊಲೀಸರೂ ಪ್ರಭಾವಿತರಾಗಿದ್ದುದು ರಹಸ್ಯವೇನಲ್ಲ. ಹೀಗಾಗಿ ಅವರ ನಡೆವಳಿಕೆಯೂ ಶಿಷ್ಟಾಚಾರಕ್ಕೆ ಅತೀತವಾಗಿರಲಿಲ್ಲ.
ಮಹಾರಾಷ್ಟ್ರ ಮತ್ತು ವಿದರ್ಭದಲ್ಲಿ ಆಗಿರುವ ಅತ್ಯಾಚಾರಗಳು ಬಹಿರಂಗವಾಗಿ ಆದಂತಹವು ಅಲ್ಲ. ಠಾಣೆಯೊಳಗೆ ಅಥವಾ ಸೆರೆಮನೆಗಳ ನಾಲ್ಕು ಗೋಡೆಗಳ ನಡುವೆ ಮಾತ್ರ ಒಂದಿಷ್ಟು ಅತ್ಯಾಚಾರಗಳು ಆಗಿವೆ. ವಿದರ್ಭದ ಅಕೋಲಾ, ಯವತಮಾಳ ಮೊದಲಾದ ಜಿಲ್ಲೆಗಳಲ್ಲಿ ಕೆಲವೇ ಕೆಲವು ಅತಿರೇಕದ ಘಟನೆಗಳಾಗಿರುವುದಿದೆ. ಅಕೋಲಾ ಜಿಲ್ಲೆಯ ಅಕೋಟ್ ಎಂಬಲ್ಲಿನ ಸುಧಾಕರ ದೇಕಾತೆ ಎಂಬೋರ್ವ ಬಾಲ ಸ್ವಯಂಸೇವಕನಿಗೆ ಕರಪತ್ರ ಹಂಚಿದ ಅಪರಾಧಕ್ಕಾಗಿ ಠಾಣೆಯಲ್ಲಿ ಹೊಡೆಯಲಾಗಿತ್ತು. ಅವನ ಬಾಯಿ ಬಿಡಿಸಲು ಇನ್ನೂ ಅನೇಕ ರೀತಿಯಲ್ಲಿ ಹಿಂಸಿಸಿದುದೂ ಇದೆ.
ಬರಾರ್ ಪ್ರಾಂತದ ಸಂಘಚಾಲಕ ಶ್ರೀ ಬಾಪೂಸಾಹೇಬ ಸೋಹನಿ ಅವರ ಧರ್ಮಪತ್ನಿ ಶ್ರೀಮತಿ ಕಮಲಾಬಾಯಿಯವರನ್ನು ತನ್ನ ಪತಿಯ ಅನುಪಸ್ಥಿತಿಯಲ್ಲಿ ಅವರೇ ಸತ್ಯಾಗ್ರಹದ ಸಂಚಾಲನೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.
ಒಂದು ಹೃದಯಸ್ಪರ್ಶಿ ಸತ್ಯಾಗ್ರಹ
ತಮ್ಮ ಧ್ಯೇಯಮಾರ್ಗದಲ್ಲಿ ಎರಗಿ ಬಂದ ಸಂಕಟದ ವಿರುದ್ಧ ಹೋರಾಟಕ್ಕಿಳಿದಿದ್ದ ಸ್ವಯಂಸೇವಕರು ಹಲವು ವಿಧದ ಕಷ್ಟನಷ್ಟ ಎದುರಿಸಬೇಕಾಯಿತು. ಅನೇಕರು ತಮ್ಮ ಖಾಯಂ ನೌಕರಿ ಕಳೆದುಕೊಂಡು ಸತ್ಯಾಗ್ರಹಕ್ಕೆ ಧುಮುಕಿದುದೂ ಉಂಟು. ಅಂತಹರಲ್ಲಿ ಒಬ್ಬರು ವಾಶಿಮ್ ಜಿಲ್ಲೆಯ ಪುಸದ್ ಎಂಬ ಊರಿನ ನಾನಾ ಪಾಟೀಲ ಅವರು. ಆ ದಿನಗಳಲ್ಲಿ ಅವರು ಕೋಷಟ್‌ವಾರ್ ಮಾಧ್ಯಮಿಕ ವಿದ್ಯಾಲಯದಲ್ಲಿ ಖಾಯಂ ಶಿಕ್ಷಕರಾಗಿದ್ದವರು. ಪುಸದ್ ತಾಲೂಕಿನ ಕಾರ್ಯವಾಹರಾಗಿದ್ದವರು ಅವರು. ಮೊದಲ ದಿನವೇ 16 ಮಂದಿಯ ತಂಡದ ನೇತೃತ್ವವಹಿಸಿ ಅವರು ಸತ್ಯಾಗ್ರಹ ನಡೆಸುವುದು ನಿರ್ಧಾರಿತವಾಗಿತ್ತು. ಅದರಿಂದಾಗಿ ತನ್ನ ನೌಕರಿ ಕಳೆದುಕೊಂಡು ಪರಿವಾರವೆಲ್ಲ ಬೀದಿಪಾಲಾಗುವುದು ಖಚಿತವೆಂಬ ಅರಿವು ಅವರಿಗಿತ್ತು. ಆದರೂ ತನ್ನ ನಿರ್ಧಾರದಲ್ಲಿ ಅವರು ಮೀನಮೇಷ ಎಣಿಸಲಿಲ್ಲ. ತನ್ನ ನಿರ್ಧಾರದ ಬಗ್ಗೆ ಅವರು ಮೇಲಾಧಿಕಾರಿಗೆ ಪತ್ರ ಬರೆದು ತಿಳಿಸಿದರು. ಅದರಂತೆ ಡಿಸೆಂಬರ್ 23ರಂದು ನಿಗದಿಯಾದ ದಿನ ಸತ್ಯಾಗ್ರಹ ನಡೆಸಿ ಬಂಧನಕ್ಕೊಳಗಾದರು.
ಮೂರು ದಿನಗಳ ಕಾಲ ತಾಲೂಕು ಕಚೇರಿಯ ಒಂದು ಕೊಠಡಿಯಲ್ಲಿ ಅವರನ್ನು ತೀವ್ರ ನಿಗಾದಲ್ಲಿರಿಸಿ ನಂತರ ಯವತಮಾಳದ ಸೆರೆಮನೆಗೆ ಸೇರಿಸಲಾಯಿತು. ನಾಲ್ಕನೆಯ ದಿನ ಅವರ ಮೇಲಾಧಿಕಾರಿ ಮತ್ತು ನ್ಯಾಯಾಧೀಶರು ಸ್ವತಃ ಸೆರೆಮನೆಗೆ ಬಂದರು. ಅವರ ಮುಂದೆ ಪಾಟೀಲ ಅವರ ತಂಡದ ಎಲ್ಲ 16 ಸತ್ಯಾಗ್ರಹಿಗಳನ್ನೂ ಹಾಜರುಪಡಿಸಲಾಯಿತು. ಎಲ್ಲರೂ ತಮ್ಮ ಅಪರಾಧ ಒಪ್ಪಿಕೊಂಡರು. ಹೀಗಾಗಿ ಎಲ್ಲರಿಗೂ ಮೂರು ತಿಂಗಳ ಸಶ್ರಮ ಸೆರೆಮನೆವಾಸ ಹಾಗೂ 50 ರೂ.ಗಳ ಜುಲ್ಮಾನೆಯ ಶಿಕ್ಷೆ ವಿಧಿಸಲಾಯಿತು. ನ್ಯಾಯಾಧೀಶರ ಜತೆ ಅವರ ಪುತ್ರನೂ ಬಂದಿದ್ದ. ಅವನಿಗಾಗ ವಯಸ್ಸು 14 ವರ್ಷ. ಪಾಟೀಲ ಅವರ ವಿದ್ಯಾರ್ಥಿಯಾಗಿದ್ದ. ತನ್ನ ಗುರುಗಳಿಗೆ ವಿಧಿಸಲಾದ ಶಿಕ್ಷೆಯ ಬಗ್ಗೆ ಕೇಳಿ ಅವನ ಕಣ್ಣುಗಳು ಮಂಜಾದವು. ಅವನು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಅವನು ತನ್ನ ಗುರುವಿಗೆ ಕಾಲು ಮುಟ್ಟಿ ನಮಸ್ಕರಿಸಿದ. ನ್ಯಾಯಧೀಶರಿಗೂ ಕಣ್ಣೀರು ತಡೆದು ಹಿಡಿಯುವುದು ಸಾಧ್ಯವಾಗಲಿಲ್ಲ. ಅವರು ಪಾಟೀಲರ ಬಳಿ ‘‘ದಯವಿಟ್ಟು ಕ್ಷಮಿಸಿ, ನಾನು ನನ್ನ ಕರ್ತವ್ಯ ಪಾಲಿಸಿದೆ. ಅನ್ಯ ವಿಧಿಯಿಲ್ಲ’’ ಎಂದರು. ನ್ಯಾಯಾಲಯದಲ್ಲಿ ಕರುಣೆಯ, ನಿಶ್ಯಬ್ದ ಗಂಭೀರತೆ ಆವರಿಸಿತು. ಸೆರೆಮನೆಗಳಲ್ಲಿ ಅವರಿಗೆ ಕಲ್ಲು ಒಡೆಯುವ ಕೆಲಸ ನೀಡಲಾಗಿತ್ತು. ವಿದ್ಯಾಲಯದಲ್ಲಿನ ನೌಕರಿಯಿಂದ ಅಮಾನತ್ತು ಮಾಡಿರುವುದಾಗಿ ಪತ್ರವೂ ಬಂತು. ಅವರನ್ನು ಯವತಮಾಳದಿಂದ ಮುಂದೆ ಜಬಲಪುರದ ಸೆರೆಮನೆಗೆ ಕಳುಹಿಸಲಾಯಿತು. ದಾರಿಯಲ್ಲಿ 4-5 ಗುಪ್ತಚರ ಪೊಲೀಸರು ಅವರನ್ನು ಕಂಡು ‘‘ಕ್ಷಮೆ ಕೇಳಿರಲ್ಲ, ಇಲ್ಲವಾದಲ್ಲಿ ನಿಮ್ಮ ನೌಕರಿ ಪೂರಾ ಕಳೆದುಕೊಳ್ಳುವಿರಿ’’ ಎಂದು ವಿನಯಪೂರ್ವಕವಾಗಿ ಎಚ್ಚರಿಸಿದರು. ಆದರೆ ಪಾಟೀಲರು ಯಾವುದಕ್ಕೂ ಸೊಪ್ಪುಹಾಕಲಿಲ್ಲ. ಜಬಲಪುರದ ಸೆರೆಮನೆಗೆ ಅವರು ಪ್ರವೇಶಿಸುವಾಗ, ಅಲ್ಲಿ ಅವರಿಗೆ ತನ್ನಂತೆಯೇ ನೌಕರಿಯನ್ನು ಬಿಟ್ಟು ಸತ್ಯಾಗ್ರಹ ಮಾಡಿ ಸೆರೆಮನೆ ಸೇರಿದ ಶ್ರೀ ಕೆಕೋಟೆಯವರು ಸ್ವಾಗತಿಸಿದರು. ವಿಶೇಷವೇನೆಂದರೆ ಅವರು ಸ್ವತಃ ಅದೇ ಸೆರೆಮನೆಯ ಉಪ ಅಧಿಕಾರಿಯಾಗಿದ್ದವರು. ಈಗ ಅವರೇ ಅಲ್ಲಿ ಕೈದಿಯಾಗಿದ್ದುದು ವಿಧಿಯ ವೈಚಿತ್ರ್ಯ. ಅವರು ಚಂದ್ರಪುರ ಜಿಲ್ಲೆಯ ವರೋರಾದ ಸ್ವಯಂಸೇವಕರು. ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಕಾರಣ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
ಹೀಗೂ ಒಂದು ಸತ್ಯಾಗ್ರಹ
ಮನೋಹರ ಖೋಲಕುಟೆ ಓರ್ವ ಉತ್ತಮ ಸಂಗೀತಜ್ಞರು. ಅವರು ನಾಗಪುರ ಆಕಾಶವಾಣಿಯಲ್ಲಿ ನಿರೂಪಕರೂ ಆಗಿದ್ದವರು. ಅವರು ಸತ್ಯಾಗ್ರಹ ನಡೆಸಿದುದು ಪೂರಾ ಒಬ್ಬಂಟಿಯಾಗಿ, ಜತೆಯಾಗಿ ಯಾರೂ ಇರಲಿಲ್ಲ. ಅವರ ಸತ್ಯಾಗ್ರಹವೂ ಪೂರಾ ವಿನೂತನ. ‘ತಂಡ’ದಲ್ಲಿ ಇದ್ದವರು ಅವರು ಒಬ್ಬರೇ ಆದರೂ ಅವರ ಧ್ವನಿ, ಪ್ರಭಾವ, ಬಹು ‘ದೂರ’ಗಾಮಿಯಾಗಿ ಪರಿಣಾಮ ಬೀರುವಂತಹುದಾಯಿತು. ನಡೆದ ಕತೆ ಹೀಗೆ:
ಅವರ ಸತ್ಯಾಗ್ರಹಕ್ಕಾಗಿ ನಿಗದಿತವಾಗಿದ್ದ ದಿನ ಅವರು ರೂಢಿಯಂತೆ ದಿನದ ತಮ್ಮ ಪಾಳಿಯ ಸಮಯದಲ್ಲಿ ಕೆಲಸಕ್ಕೆ ಹಾಜರಾದರು. ಅವರು ಸತ್ಯಾಗ್ರಹ ಮಾಡಲಿದ್ದ ವಿಷಯ ಅವರ ಮೇಲಾಧಿಕಾರಿಗಳಿಗಾಗಲಿ, ಇತರ ಸಹೋದ್ಯೋಗಿಗಳಿಗಾಗಲಿ ಗೊತ್ತಿರಲಿಲ್ಲ. ಅಂದಿನ ಕಾರ್ಯಕ್ರಮದ ನಿರೂಪಣೆ ಮಾಡಬೇಕಾದಾಗ ಅವರು ಅದನ್ನು ಬಿಟ್ಟು ಆಕಾಶವಾಣಿಯಲ್ಲಿ ಸ್ವಂತದ ಭಾಷಣವನ್ನೇ ಮಾಡಿದರು. ಅದರಲ್ಲಿ ‘‘ಸಂಘದ ಸತ್ಯಾಗ್ರಹವು ಅಗತ್ಯವಾಗಿ ಆಗಬೇಕಾದುದು ಮತ್ತು ನ್ಯಾಯೋಚಿತವೂ ಆದುದು. ಸರಕಾರ ಅನ್ಯಾಯವೆಸಗುತ್ತಿದೆ. ಸಂಘವು ಪೂರಾ ನಿರಪರಾಧಿ’’ ಇತ್ಯಾದಿ ಹೇಳಿದರು. ಹೀಗಾಗಿ ಆಗ ಆಕಾಶವಾಣಿಯ ನಾಗಪುರ ಕೇಂದ್ರವನ್ನು ಟ್ಯೂನ್ ಮಾಡಿದವರಿಗೆಲ್ಲಾ ಸಂಘದ ಸತ್ಯಾಗ್ರಹ ಸಂಬಂಧಿತ ಭಾಷಣವೇ ಕೇಳಲು ಸಿಕ್ಕಿತು.
ಖೋಲಕುಟೆ ಆ ಕೂಡಲೇ ಬಂಧನಕ್ಕೊಳಗಾದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವೇನಿಲ್ಲವಲ್ಲ.
ಜುಲ್ಮಾನೆ ವಸೂಲಿಗಾಗಿ ಮುಟ್ಟುಗೋಲು, ತಲಾಶ್
ಕೇವಲ ಸ್ವಯಂಸೇವಕರನ್ನಷ್ಟೆ ಅಲ್ಲ , ಸಂಘದ ಬಗ್ಗೆ ಸಹಾನುಭೂತಿಯುಳ್ಳ ನಾಗರಿಕರಲ್ಲೂ ಭೀತಿ ಉಂಟುಮಾಡುವ ಸಲುವಾಗಿ ಕೆಲವು ಕಡೆಗಳಲ್ಲಿ ಪೊಲೀಸರು ತಾವಾಗಿಯೇ, ಇನ್ನೂ ಕೆಲವೆಡೆ ಕಾಂಗ್ರೆಸಿಗರ ಒತ್ತಡಕ್ಕೊಳಗಾಗಿ ಕಾನೂನು ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ನಿರಪರಾಧಿ ನಾಗರಿಕರ ಮೇಲೆ ಮನಬಂದಂತೆ ಆರೋಪ ಹೊರಿಸಿ ಅವರ ಮನೆಗಳಲ್ಲಿ ಶೋಧ, ಮನೆಗಳಲ್ಲಿ ಪುರುಷರಿಲ್ಲದಿದ್ದಾಗ ಹಗಲೆಂದಿಲ್ಲ, ರಾತ್ರಿಯೆಂದಿಲ್ಲ ತಮಗೆ ಇಷ್ಟ ಬಂದಾಗ ಬಂದು ಮನೆಯ ಝಡ್ತಿಗಾಗಿ ಬಂದಿರುವುದಾಗಿ ಮಹಿಳೆಯರಿಗೆ ಹೆದರಿಸಿ, ಅವರನ್ನು ಮತ್ತು ಸಣ್ಣ ಸಣ್ಣ ಮಕ್ಕಳನ್ನು ಹೊರಹಾಕಿ ಮನೆಗೆ ಬೀಗಮುದ್ರೆ ಹಾಕುವುದು, ಲಂಗುಲಗಾಮಿಲ್ಲದೆ ಆರೋಪ ಹೊರಿಸಿ ಸುರಕ್ಷಾ ಕಾನೂನಿನನ್ವಯ ಬಂಧಿಸಿ ಸೆರೆಮನೆಗಳಿಗೆ ತಳ್ಳುವುದು, ಮುಗ್ಧ ಗ್ರಾಮೀಣ ಜನರಿಗೆ ಅರ್ಥರಹಿತ ಬೆದರಿಕೆಯೊಡ್ಡಿ ಕಿರುಕುಳ ಕೊಡುವುದು, ಮತ್ತು ಜುಲ್ಮಾನೆ ಬದಲಿಗೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಂದಲೂ ಬಲಾತ್ಕಾರವಾಗಿ ಜುಲ್ಮಾನೆಯನ್ನೂ ವಸೂಲು ಮಾಡುವುದು ಇತ್ಯಾದಿ ಎಲ್ಲ ಕಾನೂನು ವಿರುದ್ಧವಾಗಿಯೇ ಪೊಲೀಸರು ಆ ದಿನಗಳಲ್ಲಿ ಮಾಡುತ್ತಿದ್ದ ಕೆಲಸಗಳು. ಕೆಲವು ಕಡೆಗಳಲ್ಲಿ ಜುಲ್ಮಾನೆ ವಸೂಲು ಮಾಡಲು ಮುಟ್ಟುಗೋಲು ಹಾಕಿರುವ ಪ್ರಸಂಗಗಳಂತೂ ಥೇಟ್ ನಾದಿರ್‌ಶಾಹಿ ದಿನಗಳನ್ನು ನೆನಪಿಸುವಂತಹವು. ದೇಶದಲ್ಲಿ ಕುರುಡು ರಾಜ ಕಿವುಡು ಆಡಳಿತ ಇದೆಯೇನೋ ಎಂಬಂತಿದ್ದವು ಆ ದಿನಗಳು. ಗೂಂಡಾಗಿರಿ ಮೂಲಕ ಪೊಲೀಸರೇ ಸಂಪಾದನೆಯ ದಾರಿಮಾಡಿಕೊಂಡಿದ್ದರು. ಅನೇಕ ಕಾಂಗ್ರೆಸ್ಸಿಗರ ಜೇಬುಗಳನ್ನೂ ಅವರು ತುಂಬುತ್ತಿದ್ದುದು ಸುಳ್ಳಲ್ಲ.

   

Leave a Reply