ಕಾಡಿನಲ್ಲಿ ಶಿಬಿರದ ತಯಾರಿ ಹೇಗೆ?

ಕ್ರೀಡೆ - 0 Comment
Issue Date : 04.07.2015

ಹಿಂದಿನ ವಾರದ ಅಂಕಣದಲ್ಲಿ ನಗರದ ಟ್ರಾಫಿಕ್ ಮಧ್ಯೆ ಮಕ್ಕಳು ಯಾವ ರೀತಿ ವ್ಯವಹರಿಸಬೇಕು ಎಂಬುದನ್ನು ತಿಳಿಸಿಕೊಡಲು ಪ್ರಯತ್ನ ಮಾಡಲಾಗಿದೆ. ಇನ್ನು ಯಾವುದೇ ವಾಹನ ಶಬ್ದವಿಲ್ಲದ ಕಾಡಿನಲ್ಲಿ ಶಿಬಿರಗಳನ್ನು ಏರ್ಪಡಿಸುವ ರೀತಿ ಮತ್ತು ಅಲ್ಲಿ ಯಾವ ರೀತಿಯ ಆಟಗಳನ್ನು ಆಡಬಹುದು ಎಂಬುದನ್ನು ಅರಿತುಕೊಳ್ಳೋಣ.
ಮೊದಲ ಹಂತದಲ್ಲಿ ಅರಣ್ಯಗಳಲ್ಲಿ ಶಿಬಿರಗಳ ತಯಾರಿ ಹೇಗಿರಬೇಕು, ಅಲ್ಲಿ ನಮ್ಮ ಚಟುವಟಿಕೆಗಳು ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತೀ ಮುಖ್ಯ. ಪ್ರಾಚೀನ ಮಾನವನ ಸರಳ ಜೀವನ ರೀತಿಗಳೇ ಇಂದಿನ ಕಾಡಿನ ಶಿಬಿರದ ಜೀವನಕ್ಕೆ ತಳಹದಿ. ಬಿಸಿಲು, ಮಳೆ, ಗಾಳಿ ಹಾಗೂ ಚಳಿಯಿಂದ ರಕ್ಷಣೆ ಪಡೆಯುವಂಥ ಡೇರೆ, ಸರಳ ಸಾಮಗ್ರಿಗಳಿಂದಲೇ ಹಿತವಾದ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳುವುದು, ಬೆಂಕಿ ಮಾಡುವ ರೀತಿ, ಆಹಾರ ಪದಾರ್ಥಗಳ ಸಂರಕ್ಷಣೆ, ಬಹಿರ್ದೆಸೆ ಸ್ಥಳದ ನೈರ್ಮಲ್ಯ, ಚಾಕು ಕೊಡಲಿಗಳ ಉಪಯೋಗ – ಇವೆಲ್ಲ ಡೇರೆ ಹಾಕುವ ಕಾಲದಲ್ಲಿ ಗಣನೆಗೆ ಬರುವ ಅಂಶಗಳು.
ಶಿಬಿರ ಜೀವನಕ್ಕಾಗಿ ಮನೆ ಬಿಟ್ಟು ಹೊರಡುವಾಗ ಪ್ರಯಾಣಿಕನ ಗಂಟು ಹಗುರವಾಗಿರಬೇಕು, ಆದರೆ ಶಿಬಿರ ಜೀವನ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಒಗೆದ ಶುಭ್ರ ಬಟ್ಟೆಗಳು, ಸೂಕ್ತವಾದ ಒಂದು ಮಳೆಕೋಟು, ಸ್ವೆಟರ್, ಕರವಸ್ತ್ರಗಳು, ಸುಲಭವಾಗಿ ಸವೆಯದ ಪಾದರಕ್ಷೆಗಳು, ಈಜುಡುಗೆ, ತಟ್ಟೆ, ಬೋಗುಣಿ, ನೀರು ಮೊಗೆಯಲು ಒಂದು ಪಾತ್ರೆ, ಚಾಕು, ಚಮಚ, ಅವಶ್ಯವಿದ್ದರೆ ಸಣ್ಣ ಬಕೀಟು ಇತ್ಯಾದಿ ಸಾಮಗ್ರಿಗಳಿರಬೇಕು. ಸಾಬೂನು ಮುಂತಾದ ಸಾಮಾನುಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರಬೇಕು.
ಯಾವ ಬಗೆಯ ಡೇರೆ ಹೂಡಬೇಕು ಎಂಬುದನ್ನು ಅವಲಂಬಿಸಿ ಡೇರೆಯ ಸಾಮಾನುಗಳಿರಬೇಕು. ಚೀಲದಲ್ಲಿ ಎಲ್ಲವನ್ನು ಹಾಕಿದ ಮೇಲೆ ಅದರ ಹೊರಮೈ ತೀರ ಏರುಪೇರಾಗಿದ್ದರೆ ಹೊರುವವರ ಬೆನ್ನಿಗೆ ಚುಚ್ಚುತ್ತದೆ. ಬೆನ್ನಿಗೆ ಒತ್ತದಂತೆ ಬೆನ್ನಿನ ಕಡೆಗೆ ಮೆತ್ತಗಾಗುವಂತೆ ಬಟ್ಟೆಗಳನ್ನು ಸರಿಯಾಗಿಡಬೇಕು.
ಶಿಬಿರಕ್ಕೆ ಸ್ಥಳದ ಆಯ್ಕೆಯೂ ಬಹು ಮುಖ್ಯ. ಜಾಗವು ಸಮತಟ್ಟಾಗಿರಬೇಕು. ನೀರಿನ ವಸತಿ ಹತ್ತಿರವಿದ್ದು ಬೆಂಕಿ ಮಾಡಲು ಮರ ಅಥವಾ ಒಣಗಿದ ರೆಂಬೆ ಕೊಂಬೆಗಳು ಸುಲಭವಾಗಿ ಸಿಗುವಂತಿರಬೇಕು.
ಹಾಸಿಗೆಯ ಸಾಮಾನುಗಳನ್ನು ನೆಲ ತಾಗಿರದಂತೆ ಹಗಲು ಹೊತ್ತು ದಿಮ್ಮಿಗಳ ಮೇಲಿಡುವುದು, ಕವಲೊಡೆದ ಕೊಂಬೆಗಳ ಮೇಲೆ ಸಾಮಾನುಗಳನ್ನು ತೂಗುಹಾಕುವುದು – ಹೀಗೆ ಸಾಕಷ್ಟು ಸಲಕರಣೆಗಳನ್ನು ಶಿಬಿರ ತಾಣದಲ್ಲಿಯೇ ದೊರೆಯುವ ಸಹಜ ಸಾಮಗ್ರಿಗಳಿಂದ ರೂಢಿಸಿಕೊಳ್ಳಬಹುದು.
ಸರಳ ಒಲೆಯೊಂದನ್ನು ಅಲ್ಲಿ ಕಟ್ಟಿಕೊಳ್ಳ ಬೇಕು. ಅಲ್ಲೇ ಸಿಗುವ ಮರದ ಚಕ್ಕೆ, ಕಡ್ಡಿಗಳನ್ನು ಒಲೆಗೆ ಉಪಯೋಗಿಸಬೇಕು.
ಶೌಚ ಪ್ರದೇಶಕ್ಕಾಗಿ ಒಂದೆಡೆ ಗುಣಿ ತೋಡಿ, ಉಪಯೋಗಿಸಿದಾಗಲೆಲ್ಲ ಅದಕ್ಕೆ ಮಣ್ಣು ಹಾಕಿ ಮುಚ್ಚಬೇಕು.
ಪ್ರಥಮ ಚಿಕಿತ್ಸೆಯ ಡಬ್ಬಿ, ಬೆಂಕಿ ಕಡ್ಡಿ, ಟಾರ್ಚು, ಸೂಜಿದಾರ, ನಕ್ಷೆ, ದಿನಚರಿ ಪುಸ್ತಕ ಮುಂತಾದ ಉಪಯುಕ್ತ ಸಾಮಗ್ರಿಗಳನ್ನು ತೆಗದುಕೊಂಡು ಹೋಗಬೇಕು.
ಇದರ ಜೊತೆಯಲ್ಲಿ ಶಿಬಿರ ನಡೆಸಲು ಅಗತ್ಯವಿದ್ದಲ್ಲಿ ಸರ್ಕಾರಿ ಇಲಾಖೆಗಳ ಅನುಮತಿಯನ್ನು ಪಡೆಯಬೇಕು. ಅಲ್ಲಿರುವ ಕಾಡು ಪ್ರಾಣಿಗಳ ವಿವರಗಳು ನಮ್ಮಲ್ಲಿರುವುದು ಒಳ್ಳೆಯದು.
ಮುಕ್ತ ವಾತಾವರಣದ ಅನುಭವ, ಉಲ್ಲಸಿತ ಸನ್ನಿವೇಶಗಳಿಂದ ಶಿಬಿರದ ಜೀವನವು ಹೊಸ ವಿಷಯಗಳನ್ನು ಕಲಿಯುವುದಕ್ಕೆ ಸಹಕಾರಿ. ಈ ರೀತಿಯ ಶಿಬಿರಗಳು ಸ್ವಾವಲಂಬನೆ, ಸಹ ಜೀವನಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಡುತ್ತದೆ. ಶಿಬಿರದ ಪ್ರಮುಖರು ತಿಳಿಸಿದ ಶಿಬಿರದ ನಿಯಮಗಳನ್ನು ಯಾವುದೇ ವಿನಾಯಿತಿ ಇಲ್ಲದೆ ಪಾಲಿಸಬೇಕು. ಈ ರೀತಿಯ ಶಿಬಿರಗಳಲ್ಲಿ ಹಲವು ರೀತಿಯ ಆಟಗಳನ್ನು ನಾವು ಯೋಜಿಸಬಹುದು. ಮುಂದಿನ ವಾರದಲ್ಲಿ ಈ ರೀತಿಯ ಶಿಬಿರಗಳಲ್ಲಿ ಆಡುವ ಆಟಗಳ ಪರಿಚಯ ಮಾಡಿಕೊಳ್ಳೋಣ.

– ಶಿ.ನಾ. ಚಂದ್ರಶೇಖರ್‍

   

Leave a Reply